ಅಂತೂ ನಮ್ಮ ಹೊಸ ಮನೆಗೆ ಒಂದು ಹಕ್ಕಿ ಗೂಡು ಬಂತು ! ಇರುವೆಗಳು ಇಲ್ಲಿ
ಇರುತ್ತಾವೋ, ಹಕ್ಕಿಗಳು ಎಲ್ಲಿ ಗಲಾಟೆ ಮಾಡುತ್ತಿರುತ್ತವೋ, ಪ್ರಾಣಿಗಳು ಎಲ್ಲಿ
ದಾಟಾಡುತ್ತಿರುತ್ತವೋ ಆ ಜಾಗ ಬದುಕಲು ಯೋಗ್ಯವಾಗಿದೆ ಎಂದರ್ಥವಂತೆ. ನಾವು ನಮ್ಮ ಮನೆಯಂಗಳದಲ್ಲಿ
ಆರ್ಗಾನಿಕ್ ತರಕಾರಿಗಳನ್ನು, ಹಣ್ಣಿನ ಮರಗಳನ್ನು, ಹೂವಿನ ಗಿಡಗಳನ್ನು ಬೆಳೆಸಿರುವೆನು. ಯಾವಾಗಲೂ
ತರ ತರದ ಹಕ್ಕಿಗಳು ಇದ್ದೇಇರುತ್ತವೆ. ಆದರೆ ನಮ್ಮ ಮನೆಗೆ ಬೇಕ್ಕುಗಳೂ ಆಗಾಗ ಭೇಟಿ
ಕೊಡುವುದರಿಂದಲೋ ಏನೋ ಯಾವ ಹಕ್ಕಿಯೂ ಇದುವರೆಗೆ ಗೂಡುಕಟ್ಟುವ ಧೈರ್ಯ ಮಾಡಿರಲ್ಲಿಲ್ಲ.
ಒಂದು ಕೆಲಸವಿಲ್ಲದ ಮಧ್ಯಾನ್ಹ, ಹೊರಗಿನ ಮರವನ್ನು ದಿಟ್ಟಿಸುತ್ತಾ ಕುಳಿತಿದ್ದಾಗ, ಒಂದು
ಪಿಕಳಾರ ಆ ಮರದ ಒಳಗೆ ಹೂಕ್ಕಿದ್ದನ್ನು ಕಂಡೆ. ಅದರ ಹಿಂದೆ ಮತ್ತೊಂದು ಚಿಲಿಪಿಲಿ ಗುಟ್ಟುತ್ತಾ
ತಿರುಗಾಡುತ್ತಿತ್ತು. ಎಲಾ ಇವುಗಳ ! ಗೂಡುಕಟ್ಟಲು ನೋಡುತ್ತಾ ಇರಬೇಕು ಎಂದುಕೊಂಡೆ. ಅದು ನಮ್ಮ
ಬೇಸ್ಮೆಂಟ್ ಗಾರ್ಡನಲ್ಲಿ, ಹಾಗಾಗಿ ಅವಕ್ಕೆ ಯಾವುದರ ಉಪಟಳವೂ ಇರುವುದಿಲ್ಲ. ಅಂತೂ ಒಳ್ಳೆಯ
ಜಾಗವನ್ನೇ ಹುಡುಕಿದ್ದವು.
ನಂತರ ನಾನು ಬಹುಶಃ ಎರಡು ವಾರಗಳವರೆಗೆ ಆ ಕಡೆಗೆ ತಲೆಯೇ ಹಾಕಲಿಲ್ಲ. ಆದರೆ ಈಎರಡು ಹಕ್ಕಿಗಳು
ಹೋಗಿ ಬಂದು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಒಂದು ದಿನ ನಾನು ಅಲ್ಲಿನ ಹುಲ್ಲನ್ನು
ಕ್ಲೀನ್ ಮಾಡಿಸಬೇಕೆಂದು ಅಲ್ಲಿ ನೋಡಲು ಹೋದಾಗ ಈ ಹಕ್ಕಿಗಳು ಪುರ್ರ್ ಅಂತ ಹಾರಿದವು. ಆಗ ಅ
ಮರದಲ್ಲಿದ್ದ ಹಕ್ಕಿ ಗೂಡನ್ನು ಸರಿಯಾಗಿ ಪರೀಕ್ಷಿಸಿದೆ. ಅಲ್ಲಿ ಮೂರು ಮರಿಗಳು ಬೆಚ್ಚಗೆ
ಮಲಗಿದ್ದವು.
ಆದರೆ ಎಲ್ಲಿಂದಲೋ ಒಂದು ತೊಂದರೆ ಇಲ್ಲೂ ವಕ್ಕರಿಸಿತು. ಮೇಲೆಲ್ಲೋ ತಿರುಗಾಡುತ್ತಿದ್ದ ಒಂದು
ಓತಿಕ್ಯಾತ ಒಳಗೆ ಬಿತ್ತು. ಅದಕ್ಕೆ ಆ ಎತ್ತರದ ಗೋಡೆಯನ್ನು ಹತ್ತಲೊಂತು ಸಾಧ್ಯವಿರಲ್ಲಿಲ್ಲ.
ಇನ್ನು ಅಲ್ಲಿ ತಿನ್ನಲೇನೂ ಇರಲಿಲ್ಲ (ನನ್ನ ಪ್ರಕಾರ).
ಈಗ ಅದು ಈ ಎಳೆ ಮಾರಿಗಳನ್ನೇ ತಿನ್ನಲ್ಲು ಪ್ರಯತ್ನಿಸಿದರೆ ಏನಪ್ಪಾ ಎಂದು ಯೋಚಿಸಿ, ತಂದೆ
ತಾಯಿ ಬರುವುದರೊಳಗೆ ಅದನ್ನು ಸಾಯಿಸಿಬಿಡುವುದು ಎಂದೆಣಿಸಿದೆ. ನಾನು ಅದರ ಕಡೆ ನೋಡಿದ್ದೇ ಕ್ಷಣ,
ಅದು ನನ್ನ ಮನವನ್ನು ತಿಳಿದವರಂತೆ, ಕ್ಷಣಮಾತ್ರದಲ್ಲಿ ಮಂಗಳ ಮಾಯ ! ಇನ್ನು ಇದನ್ನು ಹೀಗೆ ಬಿಡಕೂಡದೆಂದು, ಆ ಹಕ್ಕಿಮರಿಗಳು ನನ್ನ
ಜವಾಬ್ದಾರಿಯಾದವು. ಇನ್ನೆರಡು ದಿನ ನನಗೆ ಆ ಓತಿಕ್ಯಾತ ಕಾಣಲಿಲ್ಲ. ಮೂರನೇ ದಿನ ಅದು ನನ್ನ
ಕಣ್ಣಿಗೆ ಬಿತ್ತು. ಮೊದಲಿಗಿಂತ ದಷ್ಟ ಪುಷ್ಟವಾದಂತೆ ಕಂಡಿತು. ಅಯ್ಯೋ, ನನ್ನ ಹಕ್ಕಿಮರಿಗಳಿಗೆ
ಏನಾಯಿತೋ, ಅವು ಮೂರೂ ಇದ್ದಾವೋ, ಹೇಗೆ ? ಆದರೆ ಅದಕ್ಕೆ ಮೊದಲು, ಈ ಓತಿಕ್ಯಾತದ ಫೋಟೊ ತೆಗಯುವ,
ಎಂದೆಣಿಸಿ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡು ಈ ಫೋಟೊ ತೆಗೆದ ಕ್ಷಣ ಅದು ಮತ್ತೆ ಮಾಯ !
ಮೂರು ಮರಿಗಳೇನೋ ಇದ್ದವು, ಆದರೆ ಅವನ್ನು
ಗುರುತಿಸಲಾರದಂತೆ ಬದಲಾಗಿದ್ದವು. ಕೇವಲ ಐದು ದಿನಗಳಲ್ಲಿ ಅದ್ಬುತವಾದ ಬದಲಾವಣೆಯಾಗಿತ್ತು. ಇನ್ನು
ಈ ಓತಿಕ್ಯಾತ ಏನೂ ಮಾಡಲಾರದು ಎಂದುಕೊಂಡೆ.
ಈ ಮರಿಗಳು ಬಹಳ ಬೇಗ ಬೆಳೆಯುತ್ತವೆ ! ಅವುಗಳು ಗೂಡು ಬಿಡಲು ಬಹಳ ದಿನಗಳಿಲ್ಲ ಎಂದುಕೊಂಡು,
ಮೂರು ದಿನ ಬಿಟ್ಟು ನೋಡಿದರೆ, ನಾನು ಅಂದುಕೊಂಡಂತೆ, ಗೂಡು ಖಾಲಿ !
ಅರೆ, ಒಂದೂ ಇಲ್ವಲ್ಲ ! ಅದು ಹೇಗೆ ನನ್ನ ಕಣ್ಣು ತಪ್ಪಿಸಿ ಹಾರಿ ಹೋಗಿವೆ ? ಅವು ಮೊದಲು
ಹಾರಲು ಕಲಿಯಬೇಕಲ್ಲವೇ, ಇಲ್ಲೇ ಇಲ್ಲೋ ಇರಬೇಕು ಎಂದು ಹುಡಿಕಿದೆ. ಅಗೋ ಅಲ್ಲಿ ಕೆಳಗೊಂದು
ಬಿದ್ದಿತ್ತು. ಇನ್ನೊಂದು, ಕೆಳಗಿನ ಕೊಂಬೆಗೆ ಹಾರಿ ಕುಳಿತಿತು. ಇದು ಬಹಳ ಜಾಣ ಮರಿ ಇರಬೇಕು, ಬಲು
ಬೇಗ ಹಾರಲು ಕಲಿತಿದೆ ಎಂದುಕೊಂಡೆ.
ಒಂದು ನಿಮಿಷ, ಮೂರು ಹಕ್ಕಿಗಳಿರಬೇಕಲ್ಲ, ಇನ್ನೊಂದು ಎಲ್ಲಿ ? ಆ ಓತಿಕ್ಯಾತ ಏನಾದರೂ ....
ಅಲ್ಲೇ ಆ ಓತಿಕ್ಯಾತ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿತ್ತು. ಈ ಸಲ ಅದು ಮಾಯವಾಗಲಿಲ್ಲ.
ಬಹುಶಃ ಅದಕ್ಕೆ ನನಗೆ ಮೋಸಮಾಡುವುದು ಬಹಳ ಸುಲಭವೆಂದು ತಿಳಿದುಹೋದಂತಿತ್ತು. ಓಕೆ, ನಿನ್ನನು
ಆಮೇಲೆನೋಡಿಕೊಳ್ಳುತ್ತೇನೆ, ಈಗ ಆ ಮೂರನೆಯ ಹಕ್ಕಿಮರಿ ಎಲ್ಲಿ ಎಂದುನೋಡಲು ಮುಂದಾದೆ. ಆದರೆ
ಅದಕ್ಕೆ ಮೊದಲೇ ಅಲ್ಲಿಗೆ ತಂದೆ ತಾಯಿಗಳು ಬಂದವು. ನನ್ನನ್ನು ನೋಡಿ ವಿಚಿತ್ರವಾಗಿ
ಕಿರುಚಲಾರಂಭಿಸಿದವು. ಬಹುಶಃ ತಮ್ಮ ಕೆಟ್ಟ ಭಾಷೆಯಲ್ಲಿ “ತೊಲಗು ಇಲ್ಲಿಂದ” ಎಂದು ಬೈದವೇನೋ.
ನಾನು ಮೌನವಾಗಿ ವಿಧೇಯತೆಯಿಂದ ಮನೆಯೊಳಗೆ ಬಂದೆ. ಅ ಎರಡು
ಹಕ್ಕಿಗಳು ನನ್ನ ಕಿಟಕಿಯ ಹತ್ತಿರ ಬಂದು “ಬದ್ಮಾಶ್, ಅಲ್ಲೇ ಇರು, ಇನ್ನೊಂದು ಸಲ ಬಂದರೆ ಸರಿ
ಹೋಗುವುದಿಲ್ಲ” ಎಂದು ಹೇಳಿ ಹೋದವು. ನಾನು ಕಿಟಕಿಯಿಂದಲೇ ನೋಡುತ್ತಿದ್ದೆ. ಚಿಕ್ಕ ಮರಿಯ ಅಣ್ಣ,
ತಂಗಿಯನ್ನು ಸಮಾಧಾನಗೊಳಿಸಲು ಕೆಳಗೆ ಬಂದು ಅದೊರೊಟ್ಟಿಗೆ ಕುಳಿತುಕೊಂಡಿತು. ನಾನು ಒಳಗೆ
ಬಂದಿಯಾದ್ದುದ್ದರಿಂದ, ದೂರದಿಂದಲೇ ಫೋಟೊ ತೆಗೆಯಬೇಕಾಯ್ತು.
ಅವುಗಳ ಅಮ್ಮ ಮತ್ತೆ ಕಿಟಕಿಯ ಬಳಿಗೆ ಬಂದು “ನಾನು ಆಗಲೇ ಎಚ್ಚರಿಕೆ ಕೊಟ್ಟಿದ್ದೇನೆ, ನೀನು
ನಮ್ಮನ್ನು ಸುಮ್ಮನೆ ಬಿಟ್ಟುಬಿಡು” ಎಂದು
ಒದರಿತು.
ಆಯ್ತಪ್ಪ, ನಾನು ನೀನು ಹೋಗುವುದನ್ನೇ ಕಾದಿದ್ದು ಅನಂತರ ನೋಡುತ್ತೇನೆ ಅಷ್ಟೇ ಅಂದುಕೊಂಡೆ.
ನಾನು ಸಮಯ ನೋಡಿ ಹೊರ ಹೋದ ತಕ್ಷಣ, ಒಂದು ಮರಿ ಒಂದಡಿ ಹಾರಿ ಗೋಡೆಯ ಪಕ್ಕ ಕುಳಿತುಕೊಂಡಿತು.
ಅಗೋ, ಅಲ್ಲಿ ಮೂರನೆಯ ಮರಿ! ಅದಕ್ಕೆ ಬಹಳ ಭಯ ಇರುವಂತಿದೆ. ಅದು ಗೂಡಿನ ಪಕ್ಕದಲ್ಲಿಯೇ ಕುಳಿತಿದೆ
“ಗುಮ್ಮ”.
ಅಯ್ಯಮ್ಮ, ನಾನು ಜಾಸೂಸಿ ಕೆಲಸ ಮಾಡುತ್ತಿರಬೇಕಾದರೆ ಈ ಎರಡು ತಂದೆ, ತಾಯಿ ಬಂದವು.
ಅವುಗಳಿಗೆ ನನ್ನಮೇಲೆ ನಖಶಿಖಾ ಅಂತ ಸಿಟ್ಟು ಬಂತು. “ನೀನು ನಮ್ಮ ಮರಿಗಳಿಗೆ ಹೆದರಿಕೆಯನ್ನು
ತುಂಬುತ್ತಿತ್ತಿದ್ದೀಯ. ಅವುಗಳನ್ನು ಒಂದು ಕಡೆ ನಾವು ಕೂರಿಸಿದರೆ, ನೀನು ಅವು ಹರಡಿಹೋಗುವಂತೆ
ಮಾಡುತ್ತಿದ್ದೀಯ. ಸುಮ್ಮನೆ ಮನೆಯೊಳಗೆ ಹೋಗಿ ಅಲ್ಲೇ ಇದ್ದರೆ ಸರಿ, ಹುಷಾರ್ “ ಎಂದವು. ಅವು ನಾನು
ಮನೆಯೊಳಗೆ ಹೋಗುವವರೆಗೂ ನನ್ನ ಹಿಂದೆ ಬಂದು, ಕಿಟಕಿಯಿಂದ ನಂಗೆ ಬೆದರಿಕೆ ಇಟ್ಟವು. ಅಂದು ಮದರ್ಸ್
ಡೇ, ಹಾಗಾಗಿ ಹ್ಯಾಪಿ ಮದರ್ಸ್ ಡೇ ಹೇಳಿ ಒಳಬಂದೆ.
ಸರಿ, ನಾನು ಮನೆಯೊಳಗಿಂದ ಮರಿಗಳನ್ನು ನೋಡುತ್ತಾ ನಿಂತಿದ್ದಾಗ, ಒಂದು ವಿಚಾರ
ಜ್ಞಾನೋದಯವಾಯಿತು. ಆ ಓತಿಕ್ಯಾತ ನನ್ನನು ನೋಡಿ ಯಾಕೆ “ಕ್ಯಾರೇ” ಅನ್ನಲ್ಲಿಲ್ಲ ಅಂತ ! ನನಗಿಂತ
ಮಿಗಿಲಾಗಿ ಅದಕ್ಕೆ ಹಕ್ಕಿ ಮರಿಗಳ ಭಯ ! ಈ
ಹಕ್ಕಿಮರಿಗಳು ಅಲ್ಲೆಲ್ಲಾ ಹಾರಾಡಲು ಪ್ರಯತ್ನಿಸುತ್ತಾ ನಿಯಂತ್ರಣವಿಲ್ಲದೆ ಪುಟಿದಾಡುತ್ತಿದ್ದವು.
ಮೂರುಕಡೆ ೧೨ ಅಡಿ ಎತ್ತರದ ಗೋಡೆ ಇನ್ನೋದು ಕಡೆ ೨೪ ಅಡಿಗಿಂತ ಎತ್ತರದ ಮನೆ, ಮನೆಯೊಳಗೆ ಈ
ಪುಣ್ಯಾತ್ಗಿತ್ತಿ, ಅವೆಲ್ಲಿ ಹೋಗಲು ಸಾಧ್ಯ ? ಒಂದು ಜಾಣ ಮರಿ, ತುಂಬಾ ಪ್ರಯತ್ನಿಸುತ್ತಿದ್ದ
ಒಂದು ತ್ವರಿತ ವಿಧ್ಯಾರ್ಥಿ, ಕುಡಿದವರಂತೆ ಓಲಾಡುತ್ತಾ, ಆ ಓತಿಕ್ಯಾತಡ ಹತ್ತಿರ ಹೋಗಿ ಬಿದ್ದಿತು.
ತಕ್ಷಣ ಸುಮ್ಮನೆ ನೋಡುತ್ತಿದ್ದ ತಂದೆ ತಾಯಿ, ಹಾರಿ ಓತಿಕ್ಯಾತದ ಹತ್ತಿರ ಕಿರುಚಾಡಿ, “ನಿನ್ನ ಕುಲ
ನಶಿಸಿ ಹೋಗ, ನಮ್ಮ ಮಕ್ಕಳ ದಾರಿಗೆ ಅಡ್ಡ ಬರುತ್ತೀಯ ?” ಎಂದು ಬೈದು, ಅದಕ್ಕೆ ಕುಕ್ಕಿ, ಆ
ಓತಿಕ್ಯಾತ ಸತ್ತೆನೋ ಕೆಟ್ಟೆನೋ ಅಂತ ಮತ್ತೆ ಮಾಯವಾಯಿತು.
ಈ ಮರಿಗಳಿಗೆ ಈಗ ಜಾಸ್ತಿ ಹಸಿವು. ಹಾಗಾಗಿ ಹಕ್ಕಿಗಳು ಸದಾಕಾಲವೂ
ಅವುಗಳಿಗೆ ಗುಟುಕು ತಂದು ತಂದು ಗಂಟಲಿಗೆ ತುರುಕುತ್ತಿದ್ದವು. ಅವು ಎಷ್ಟು ಬಿಡುವಿಲ್ಲದೆ ದುಡಿಯುತ್ತಿದ್ದುವೆಂದರೆ,
ನಾನು ಅಲ್ಲೆಲ್ಲಾ ಓಡಾಡಿದರೆ ಅವಕ್ಕೆ ತೊದರೆಯಾಗುತಿರಲಿಲ್ಲ, ಬಹುಶಃ ನಾನು ಅವುಗಳ ಜೀವನದ ಒಂದು
ಭಾಗವಾಗಿ ಬಿಟ್ಟಿದ್ದೆ, ಎಷ್ಟರ ಮಟ್ಟಿಗೆಯಂದರೆ, ನಾನು ಒಂದು ಮರಿ ಜೊತೆ ಸೇಲ್ಫಿ
ತೆಗೆದುಕೊಂಳ್ಳಲು ನಿರ್ಧರಿಸಿದೆ ! ಹಕ್ಕಿಗಳ ಕೂಗಾಟ ತಾರಕಕ್ಕೇರಿತು, ಹೀಗೆ ಹಾಗೆ ಹಾರಾಡಿದವು,
ಆದರೆ ನಾನು ಯಾವುದಕ್ಕೂ ಬಗ್ಗಲಿಲ್ಲ. ಅವು ನಂತರ, ಇವಳು ಆಗ ಈಗ ಪ್ರತ್ಯಕ್ಷ ವಾಗುತ್ತಾಳೆ ಮತ್ತೆ
ಮಾಯವಾಗುತ್ತಾಳೆ, ಇವಳು ಬರೀ ಫೋಟೊ ತೆಗೆಯುತ್ತಾ ಇರುತ್ತಾಳೆ, ಅದರಿಂದಾಗಿ ನಮ್ಮ ಜೀವನ
ಯಾವರೀತಿಯಾಗಿಯೂ ಬದಲಾಗಿಲ್ಲ ಅಂದುಕೊಂಡು ಬಿಟ್ಟುಬಿಟ್ಟವು.
ನನ್ನ ಸೆಲ್ಫಿ ಮುಗಿದಮೇಲೆ, ಅಮ್ಮ ಹಕ್ಕಿಯು ಎಲ್ಲಾ
ಮರಿಗಳನ್ನು, ಗುಟುಕು ಕೊಡಲು ಸುಲಭವಾಗಲೆಂದು ಒಂದೆಡೆ ಕಲೆಹಾಕಲು ಶುರುಮಾಡಿತು. ಅದೇನು ಮಾಡಿತು
ಗೊತ್ತೆ ? ಕಿಟಕಿಯ ಬಳಿ ಇದ್ದ ಈ ಮರಿಯ ಹತ್ತಿರ ಬಂದು, ಏನೋ ಕಚಪಿಚ ಎಂದಿತು. ತಕ್ಷಣ ಹಕ್ಕಿಮರಿ
ಇತರ ಮರಿಗಳೆಡೆಗೆ ಹಾರಿತು. ಆದರೆ ಅದು ವೇಗವನ್ನು, ಕ್ರಮಿಸಬೇಕಾದ ದೂರವನ್ನು
ನಿಯಂತ್ರಿಸುವುದನ್ನು ಇನ್ನೂ ಕಲಿತಿರಲಿಲ್ಲ, ಹಾಗಾಗಿ ಅದು ನಾನು, ಇತರ ಮರಿಗಳು, ಮರ, ತಂದೆ ತಾಯಿ
ಎಲ್ಲರನ್ನೂ ಹಾದು ಗೋಡೆಗೆ ಬಡಿದು, ಒಡಹುಟ್ಟಿದವರ ಹತ್ತಿರ ಬಿತ್ತು, ಅಲ್ಲಿ ಅವರೆಲ್ಲಾ
ಸೇರಿಕೊಂಡು ಭೋಜನ ಮಾಡಿದರು.
ಮರುದಿನ ನಾನು ಒಂದು
ಪರಿಚಿತವಾದ ಶಬ್ದ ಕೇಳಿಸಿಕೊಂಡೆ. ನನ್ನ ಕೆಲಸದವಳು, ಭಾರತಿಗೆ, ಬೇಸ್ಮೆಂಟ್ ಶುಚಿಮಾಡಬಾರದೆಂದು
ಸೂಚನೆ ಕೊಟ್ಟಿದ್ದೆ ಆದರೆ ಅವಳು ಎಲ್ಲಾ ಬಾಗಿಲು ತೆಗೆದು ನೀರು ಹಾಕಿ ತೊಳೆಯುತ್ತಿರುವಂತಿದೆ !
ಓಡಿದೆ, ದೇವರೇ, ಮರಿಗಳಿಗೆ ಏನೂ ಆಗದೆ ಇರಲಪ್ಪ ಎಂದುಕೊಂಡೆ. ಭಾರತಿ “ಅಯ್ಯೋ, ಇಲ್ಲೆಲ್ಲಾ ಈ
ಹಕ್ಕಿಗಳು ಗಲೀಜು ಮಾಡಿವೆ, ಹೀಗೆ ಬಿಟ್ಟರೆ ಮುಂದೆ ಇದನ್ನು ಕ್ಲೀನ್ ಮಾಡಲು ಆಗುವುದಿಲ್ಲ”
ಎಂದಳು. ನಾನು ಅವಳಿಗೆ ಮುದುಡಿಕೊಂಡಿದ್ದ ಎರಡು ಮರಿಗಳನ್ನು ತೋರಿಸಿದೆ. ಅವು ಹಾರಿ ಹೋಗುವವರೆಗೂ
ಇಲ್ಲಿ ಕ್ಲೀನ್ ಮಾಡಬಾರದೆಂದು, ಇಲ್ಲಿಗೆ ಬರಲೇಬಾರದೆಂದು ಹೇಳಿದೆ. ಆದರೆ ಆಗಲೇ ಒಂದು ಮರಿ ಖೋಣೆಯ
ಒಳಗೆ ಬಂದಿತ್ತು. ಅದು ಹತಾಶೆಯಿಂದ ತೊಳಲಾಡುತ್ತಾ ಕಿಟಕಿಯಿಂದ ಆಚೆ ನೋಡುತ್ತಿತ್ತು. ಕಿಟಕಿಯ ಆಚೆ
ಬದಿ ಅದರ ಅಮ್ಮ ಅದಕ್ಕೆ ಸಮಾಧಾನ ಹೇಳಿ ಧೈರ್ಯ ತುಂಬುತ್ತಿತ್ತು. ನನಗೆ ಇದು ತೊಂದರೆಯ ಮುನ್ಸೂಚನೆ
ಎಂದು ತೋರಿತು. ಮನುಷ್ಯ ಹಕ್ಕಿಗಳನ್ನು ಎಂದೂ ಮುಟ್ಟಬಾರದು, ಅವುಗಳ ಗುಡುಗಳನ್ನೂ ಪದೇಪದೇ
ನೋಡಬಾರದು ಎಂದು ನಮ್ಮ ತಂದೆ ಹೇಳಿದ ಮಾತುಗಳು ನನ್ನ ಮನಸ್ಸಿಗೆ ಬಂತು. ಆದರೇನು ಮಾಡುವುದು ?
ಅಲ್ಲದೆ, ಊರಿನ ಹಕ್ಕಿಗಳು ಇದಕ್ಕೂ ಅಡ್ಜಸ್ಟ್ ಮಾಡಿಕೊಡಿರಬಹುದೇನೋ ? ನಾನು ಆ ಮರಿಯನ್ನು ನಯವಾಗಿ
ಎತ್ತಿ ಹೊರಗೆ ಹುಲ್ಲಿನ ಮೇಲೆ ಬಿಟ್ಟೆ. ಅದರ ಹೃದಯ ಜೋರಾಗಿ ಬಡಿಯುತ್ತಿತು, ಅದು ಬಹಳ
ಬಿಸಿಯಾಗಿತ್ತು. ಅದರ ತಂದೆ ತಾಯಿಗಳು ರೋಚ್ಚಿಗೆದ್ದವು, ವಿದ್ರಾವಕವಾಗಿ ಅರಚುತ್ತಿದ್ದವು.
ನಾನು ಅದನ್ನು ಹುಲ್ಲಿನ ಮೇಲೆ ಬಿಟ್ಟಮೇಲೆ ನೋಡಿದರೆ ಅಲ್ಲಿ ಬರೆ ಎರಡೆ ಹಕ್ಕಿಮರಿಗಳಿವೆ !
ಯಾವ ಮಾಯದಲ್ಲೋ ಒಂದು ಮರಿ ನನ್ನ ಕಣ್ಣು ತಪ್ಪಿಸಿ ೧೨ ಅಡಿ ಎತ್ತರದ ಗೋಡೆಯನ್ನು ಹಾರಿ ಹೊರಕ್ಕೆ
ಹೋಗಿದೆ ! ನಾನು ೧೨ ಅಡಿ ಆಳದಿಂದ ಆಕಾಶವನ್ನು ದಿಟ್ಟಿಸುತ್ತಾ ಇರಬೇಕಾದರೆ, ಇನ್ನೊಂದು ಮರಿ
ದಿಟ್ಟ ಹೆಜ್ಜೆ ಇಟ್ಟು ಹಾರಿ ಗ್ರೌಂಡ್ ಫ್ಲೋರ್ ಚಡ್ಜದ ಮೇಲೆ ಕುಳಿತಿತು. ತಂದೆ, ತಾಯಿಗಳಿಗೆ
ಎಲ್ಲಿಲ್ಲದ ಸಂತಸ, ಅದನ್ನು ಕೊಂಡಾಡಿ ಜಿಗ್ ನೃತ್ಯ ಮಾಡುತ್ತಿದ್ದವು.
ತರುವಾಯ ಇನ್ನೊಂದು ಜಿಗಿತಕ್ಕೆ ವಿಸ್ತಾರವಾದ
ಪ್ರಪಂಚಕ್ಕೆ ನಿಲ್ಲದೆ ಹಾರಿತು ! ಅದರ ತಂದೆ ತಾಯಿಗಳು ಅದನ್ನು ಹಿಂಬಾಲಿಸಿದವು, ನಾನು ಅಷ್ಟೇ.
ನಾವು ಮನೆಯ ಎದುರಿನ ರಸ್ತೆಯನ್ನು ದಾಟಿ ಆಚೆ ಇದ್ದ ಸಪೋಟ ಗಿಡದ ಹತ್ತಿರ ಬಂದೆವು. ಈ ಮರಿ ಈಗ
ಧೈರ್ಯದಿಂದ ಎಲ್ಲಾ ಕಡೆ ಹಾರುತ್ತಿತ್ತು, ಬೇಕಾದ ಕೊಂಬೆಯ ಮೇಲೆ ಕುಳಿತುಕೊಳ್ಳುತ್ತಿತ್ತು,
ಚಿಲಿಪಿಲಿ ಗುಟ್ಟುತ್ತಿತ್ತು. ಅದರ ಪೋಷಕರು ಮಾತ್ರ ಅದರೊಟ್ಟಿಗೆ ಇದ್ದರು, ನನಗೆ, ”ನಡಿ ಆಚೆ,
ನಡಿ ಆಚೆ” ಎಂದು ಗದರುತ್ತಿದ್ದವು.
ನಾನು ಕೊನೆಯ ಮರಿಯನ್ನು
ನೋಡಲು ಹಿಂತಿರುಗಿ ಬಂದೆ. ಅದು ನಾನು ಎಲ್ಲಿ ಅದನ್ನು ಬಿಟ್ಟಿದ್ದೆನೋ, ಅಲ್ಲೇ ದುಃಖದಲ್ಲಿ
ಕುಳಿತಿತ್ತು. ನಾನು ಅದಕ್ಕೇನಾದರೂ ಆಗಿದೆಯಾ ಎಂದು ನೋಡಲು “ಹಾರು ಹಾರು, ಇಲ್ಲದಿದ್ದಲ್ಲಿ ನೀನು
ಓತಿಕ್ಯಾತ ಮತ್ತು ನನ್ನೊಟ್ಟಿಗೆ ಇಲ್ಲೇ ಇರಬೇಕಾಗುತ್ತದೆ” ಎಂದು ಹಾರಿಸಿದೆ. ಅದು ಕುಪ್ಪಳಿಸಿದಾಗ
ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಆದರೆ ಇದರ ತಂದೆ ತಾಯಿ ಮತ್ತೆ ಬರುತ್ತಾರೋ ಇಲ್ಲವೋ ಎಂಬ ತಳಮಳ
ಶುರುವಾಯಿತು. ೨ ಗಂಟೆಗಳ ನಂತರ ತಾಯಿ ಈ ಮರಿಯನ್ನು ನೋಡಲು ಬಂತು. ಮರಿ ಒಂದು ನಿಟ್ಟುಸಿರು
ಬಿಟ್ಟಿದ್ದು ನನಗೆ ಕಂಡಿತಾ ಕೇಳಿತು. ಅದು ಜಾಗರೂಕತೆಯಿಂದ ಕೆಳಗಿನ ಒಂದು ರೆಂಬೆಯ ಮೇಲೆ
ಕುಪ್ಪಳಿಸಿ ನೆರಳಿಗೆ ಕುಳಿತಿತು. ಅಬ್ಬ, ಈ ಮರಿಗಳಿಗೆ ಬಹಳ ಆಹಾರ ಬೇಕು. ತಾಯಿ ಇನ್ನೂ ಇವಕ್ಕೆ
ಗುಟುಕು ಕೊಡುತ್ತಿತ್ತು. ಅವು ಆಹಾರ ಹುಡುಕಿ ತಿನ್ನುವುದನ್ನು ಇನ್ನೂ ಕಲಿತಿರಲಿಲ್ಲ. ಅದು ಹೊರಗಿನ
ಪ್ರಪಂಚದಲ್ಲಿ ಮಾತ್ರ ಸಾದ್ಯ, ಈ ೧೨ ಅಡಿ ಪಾತಾಳದಲ್ಲಲ್ಲ. ಆದರೆ ಈ ಮರಿ ಬೇಗ ಹಾರದಿದ್ದರೆ, ತಾಯಿಗೆ
ತುಂಬ ಆಹಾರ ಕೊಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ತಾಳ್ಮೆಯಿಂದ ಕಾಯುವ. ಖಂಡಿತವಾಗಿಯೂ ಈ ಮರಿ
ಇನ್ನೇನು ಹಾರುತ್ತದೆ ಎಂದುಕೊಂಡೆ. ತಾಯಿ ಹಕ್ಕಿ ೫-೬ ಸಲ ಬಂದು ಗುಟುಕು ಕೊಟ್ಟಿತು. ತಂದೆ
ಬರಲ್ಲಿಲ್ಲ, ಬಹುಶಃ ಅದು ಬೇರೆ ಮರಿಗಳನ್ನು ನೋಡಿಕೊಳ್ಳುತ್ತಿತ್ತು. ಈ ಮರಿ ಹಾರಲು
ಪ್ರಯತ್ನಿಸುತ್ತಿತ್ತು ಆದರೆ ನೆಲದ ಮಟ್ಟದಲ್ಲೇ ಹಾರುತ್ತಿತ್ತು. ಇದು ಹೇಗೆ ೧೨ ಅಡಿ ಎತ್ತರಕ್ಕೆ
ಏರಬಲ್ಲದು ? ತಂದೆ ತಾಯಿಗಳಿಬ್ಬರೂ ಸಂಜೆ ಬಂದು ಇದಕ್ಕೆ ಹಾರಲು ಹುರಿದುಂಬಿಸಿದವು, ಮತ್ತೇನನ್ನೋ
ಮಾತಾಡಿಕೊಂಡು ಹಾರಿ ಹೋದವು. ಆದರೆ ರಾತ್ರೆ ಮರಿ ಒಬ್ಬೊಂಟಿಯಾಗಿತ್ತು. ಮರುದಿನ ಅದು ಹಾರದೆ
ಕುಳಿತಲ್ಲೇ ಕುಳಿತಿತ್ತು. ನಾನು ಹೊರ ಹೋಗಿ ಅದನ್ನು ಹಾರುವಂತೆ ಓಡಿಸಿದೆ, ಆದರೆ ಅದಕ್ಕೆ
ನಿಶಕ್ತಿಯಾಗಿತ್ತು, ಮರದ ಮೇಲೆ ಕುಳಿತುಕೊಳ್ಳಲಾಗುತ್ತಿರಲಿಲ್ಲ. ತಂದೆ ತಾಯಿಗಳು ಬರಲೇ ಇಲ್ಲ,
ಅಂದು ಭಾರೀ ಮಳೆ, ಅದು ಮಳೆಯಲ್ಲೇ ನೆನೆಯುತ್ತಾ ಕುಳಿತ್ತಿತ್ತು. ಮರುದಿನ ಬೆಳಗ್ಗೆ ನೋಡಿದರೆ ಈ
ಪುಟ್ಟ ಮರಿ ಸತ್ತುಬಿದ್ದಿತ್ತು.
Survival of the fittest. ಸೃಷ್ಟಿ
ಜೀವ ಜಂತುಗಳನ್ನು ಆರಿಸಿಕೊಳ್ಳುತ್ತದೆ. ಅವು ಸರಿಯಾಗಿ ಇಲ್ಲದಿದ್ದರೆ ಅವು ಬದುಕಲು ಸಾಧ್ಯವಿಲ್ಲ.
ನಂತರ ಆ ಹಕ್ಕಿಗಳನ್ನಾಗಲಿ, ಅವುಗಳ ಮರಿಗಳನ್ನಾಗಲಿ ನಾನು ಕಾಣಲಿಲ್ಲ. ಭಾರತಿ ಚೆನ್ನಾಗಿ ತೊಳೆದು
ಕ್ಲೀನ್ ಮಾಡಿದಳು. ನಾನು ಆ ಗೂಡನ್ನು ಕಿತ್ತು ತೆಗೆದೆ, ಮುಂದಿನ ವರ್ಷಕ್ಕೆ, ಮತ್ತೆರಡು
ಹಕ್ಕಿಗಳಿಗೆ ರೆಡಿ ಮಾಡಿದೆ. ಎರಡು ವಾರ ಕಳೆದ ಮೇಲೆ ಅನಿರೀಕ್ಷಿತವಾಗಿ ಎರಡು ಪಿಕಳಾರಗಳು
ನೇರವಾಗಿ ಹಿಂದೆ ಗೂಡಿದ್ದಲ್ಲಿ ಬಂದು ಎರಡು ನಿಮಿಷ ಕೂತು ಮತ್ತೆ ಹಾರಿ ಹೋದವು ! ಅವು ಬೆಳೆದ
ನಮ್ಮ ಮರಿಗಳೇ ? ಗೊತ್ತಿಲ್ಲ...