ಮೊದಲೆರಡು ದಿನಗಳು (ಮೇ ೩, ೨೦೦೮, ಮೇ ೪, ೨೦೦೮)
ಬೆಂಗಳೂರು - ಕಟ್ಮಂಡು(1000ಮೀ/3280 ಅಡಿ)
ಅಂತೂ ಮೇ ೩ ಬಂದೇ ಬಿಟ್ಟಿತು.ನಮಗೆ ಕೆಏಮ್ಎ ಕೊಟ್ಟ ಚಾರಣಿಗರ ಚೀಲದಲ್ಲಿ ಎಲ್ಲಾ ತುರುಕಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟೇ ಬಿಟ್ಟೆವು. ನಾವು ಡೆಲ್ಲಿ ತಲುಪಿದಾಗ ೧೦ ಗಂಟೆ, ಉರಿಬಿಸಿಲು. ಅಲ್ಲಿಂದ ನೇರವಾಗಿ ಅಂತರ ರಾಷ್ರ್ಟೀಯ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನ ಹತ್ತಿದೆವು. ೨:೪೫ ಗಂಟೆಯಲ್ಲಿ ನಾವು ಕಟ್ಮಂಡುವಿನಲ್ಲಿ ಇದ್ದೆವು. ಅಲ್ಲಿ ಹಿಮಾಲಯನ್ ಅಡ್ವೆನ್ಚರ್ (himalayan adventure company) ಕಂಪನಿಯವರು ನಮಗಾಗಿ ಬಸ್ಸು ತಂದು ಕಾಯುತ್ತಾ ಇದ್ದರು. ಅಲ್ಲಿಂದ ನೇರವಾಗಿ ನಾವು ತಮೇಲ್ ಎಂಬ ಜಾಗಕ್ಕೆ ಹೋದೆವು. ಆಲ್ಲಿ ’ಜೆಡ್ ಸ್ಟ್ರೀಟ್’ ನಲ್ಲಿನ ನಮ್ಮ ಹೋಟೆಲ್ ’ಲಿಲ್ಲಿ’ ತಲುಪಿದೆವು. ತಮೇಲ್ ನಲ್ಲಿ ನಿಮಗೆ ಎಲ್ಲೆಲ್ಲೂ ಪರ್ವತಾರೋಹಿಗಳು, ಚಾರಣ ಮತ್ತು ಪರ್ವತಾರೋಹಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ನೆನಪಿನ ಕಾಣಿಕೆಗಳನ್ನು ಮಾರುವ ಅಂಗಡಿಗಳು ಹಾಗೂ ಲೈವ್ ಮ್ಯುಜಿಕ್ (live music) ಬಾರ್ ಗಳು ಮಾತ್ರಾ ಕಾಣಸಿಗುತ್ತವೆ. ನಾವು ಅಲ್ಲಿಂದ ಲುಕ್ಲ ಎಂಬ ಜಾಗಕ್ಕೆ ಒಂದು ದಿನ ಬಿಟ್ಟು ಅಂದರೆ, ಮೇ ೫ ರಂದು ಹೋಗುವವರಿದ್ದೆವು. ಹಾಗಾಗಿ ಎಲ್ಲರೂ ತಾವು ಏನೇನು ವಸ್ತುಗಳನ್ನು ಮರೆತಿದ್ದರೋ, ತಂದಿರಲ್ಲಿಲ್ಲವೋ ಅವುಗಳನ್ನು ಕೊಳ್ಳುವುದರಲ್ಲಿ ಅಥವಾ ಪ್ರವಾಸ ಮುಗಿದ ನಂತರ ಹಿಂತಿರುಗಿ ಹೋಗುವಾಗ ಎನೇನು ಉಡುಗೊರೆಗಳನ್ನು ಕೊಳ್ಳಬಹುದೆಂದು ನೋಡಿಕೊಳ್ಳುವುದರಲ್ಲಿ ಮತ್ತು ಚೌಕಾಸಿ ಮಾಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ರೂಢಿ ಮಾಡಿಕೊಳ್ಳುವುದರಲ್ಲಿ ಸಮಯ ಕಳೆದೆವು. ಮರುದಿನ ಎಲ್ಲರ ಬೇಡಿಕೆಯಂತೆ ನಾವು ಬಸ್ಸಿನಲ್ಲಿ ಪಶುಪತಿನಾಥ ದೇವಸ್ಥಾನವನ್ನು ನೋಡಲು ಹೋದೆವು. ಅಲ್ಲಿಯ ಶವ ಸುಡುವ ದೃಶ್ಯ ಹಾಗು ಅಲ್ಲಿಯ ಪೂಜಾರಿಗಳು ಜನರಿಂದ ಭಕ್ತಿಯ ನೆವದಲ್ಲಿ ದುಡ್ಡು ಹೆರೆಯುವ ಕೌಶಲ್ಯ ನೋಡಿ, ಸಾಕಪ್ಪಾ ಇದೆಲ್ಲಾ ನಾವು ಎಂದು ನಮ್ಮ ಟ್ರೆಕ್ ಶುರುಮಾಡುತ್ತೇವೋ ಅನ್ನಿಸಲು ಶುರುವಾಯಿತು. ಬಹುಷಃ ಇಡೀ ಕಟ್ಮಂಡುವಿನಲ್ಲಿ ಜಾಸ್ತಿ ಇರುವುದು ಋಷಿಗಳು ಮಾತ್ರ. ನಾವು ’ಅಮರ ಚಿತ್ರ ಕಥೆ’ ಗಳಲ್ಲಿ ನೋಡಿರುವಂತಹ ಕಾವೀಧಾರಿಗಳು. ಅವರಿಗೆ ದುಡ್ಡು ಕೊಟ್ಟರೆ ಫೊಟೊ ತೆಗೆಯಲು ಅವಕಾಶ ಕೊಡುತ್ತಾರೆ.
ಅಲ್ಲಿಯ ಸಜೀವ ದೇವತೆಗಳನ್ನೂ (living godess) ನೋಡಲು ಹೋದೆವು ಆದರೆ ಅವರ ಮನೆಯನ್ನು ಮಾತ್ರ ನೋಡಲು ಸಾಧ್ಯವಿದೆ. ಆಲ್ಲಿಯ ರಾಜನಿಗೆ ಮಾತ್ರ ಅವರನ್ನು ನೋಡಲು ಮತ್ತು ಮಾತಾಡಿಸಲು ಅನುಮತಿ ಇದೆ. ಆದರೆ ಬಹುಷಃ ದುಡ್ಡು ಕೊಟ್ಟರೆ ಯಾರುಬೇಕಾದರೂ ನೋಡಬಹುದೇನೋ. ನಾವು ಸ್ವಯಂಭುನಾಥ ಸ್ತೂಪವನ್ನೂ ನೋಡಿದೆವು. ಈದ್ದಿದ್ದರಲ್ಲಿ ಇಲ್ಲಿ ಸ್ವಲ್ಪ ಶಾಂತ ವಾತಾವರಣ ಇತ್ತು. ಆಗ ಇನ್ನೂ ಜ್ನಾನೇಂದ್ರ ರಾಜ ಇದ್ದ ದಿನಗಳು. ಆಗತಾನೆ ಮಾವೊಗಳ ಆಡಳಿತ ಬಂದಿತ್ತು. ಎಲ್ಲೆಲ್ಲೂ ಮಿಶ್ರ ಪ್ರತಿಕ್ರಿಯೆ ಇತ್ತು. ಆದರೆ ಜನರು ಈ ಆಡಳಿತಕ್ಕೆ ಒಲವು ತೋರಿಸುತ್ತಿದ್ದರು. ಅದು ಪರ್ವತಾರೋಹಿಗಳಿಗೆ ಮತ್ತು ಚಾರಣಿಗರಿಗೆ ಒಳ್ಳೆಯ ಹವಾಮಾನದ ದಿನಗಳು. ಆಗ ಈಗ ಮಳೆಬರುತ್ತಿತ್ತು. ಹೀಗೇ ಮಳೆ ಬಂದರೆ ನಮ್ಮ ಕಾರ್ಯಕ್ರಮದ ಗತಿ ಹೇಗಿರುವುದಪ್ಪಾ ಅಂದು ಕೊಳ್ಳುತ್ತಿದ್ದೆವು. ೬೫ ವರ್ಷಗಳ ನಂತರ ಹೋದ ವರ್ಷ ಕಟ್ಮಂಡುವಿನಲ್ಲಿ ಹಿಮ ಬಿತ್ತಂತೆ, ನಮ್ಮ ದಾರಿಯಲ್ಲೂ ಹಿಮ ಬೀಳಲೆಂದು ನಮಗೆಲ್ಲಾ ಒಳಗೊಳಗೇ ಆಸೆ! ನಮಗೆ, ಹಿಂದಿನ ರಾತ್ರಿ, ನಮ್ಮ ಮುಂಬರುವ ದಿನಗಳು ಹೇಗೆ ಇರುತ್ತವೆಂದು, ಹಾಗು ನಮ್ಮ ಆಚಾರ ವಿಚಾರಗಳು ಹೇಗೆ ಇರಬೇಕು, ಇದರೊಟ್ಟಿಗೆ ’ಆಲ್ಟಿಟ್ಯುಡ್ ಸಿಕ್ನೆಸ್’ಗೆ ಏನು ಮಾಡಲಾಗುತ್ತದೆ ಎಂದೂ ಹೇಳಿದರು. ನಮ್ಮಲ್ಲಿ ಯಾರಿಗಾದರೂ ಇಷ್ಟವಿದ್ದಲ್ಲಿ ೫೦೦೦ ರೂ ಗಳಿಗೆ ಜೀವವಿಮೆ ತೆಗೆದುಕೊಳ್ಳಬಹುದೆಂದು, ಅದರಲ್ಲಿ ಅವಶ್ಯವಿದ್ದಲ್ಲಿ ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಅನುಕೂಲವೂ ಒಳಗೊಂಡಿರುವುದೆಂದು ತಿಳಿಸಿದರು. ನಾವೆಲ್ಲಾ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆಗಿನ ಸ್ಥಿತಿಯಲ್ಲಿ ನಾವೆಲ್ಲಾ ಅಚೀವರ್ಸ್. ೫೦೦೦/- ರೂಗಳು ಬಹಳ ಜಾಸ್ತಿಯಾದಂತೆಯೂ, ಅದು ಹೇಗೂ ಉಪಯೋಗಕ್ಕೆ ಬರುವುದಿಲ್ಲವಾದ್ದರಿಂದ ಯಾರೂ ತೆಗೆದುಕೊಳ್ಳುವ ವಿವೇಚನೆಯನ್ನೇ ಮಾಡಲಿಲ್ಲ. ನಂತರದ ದಿನಗಳಲ್ಲಿ ಯೋಚಿಸಿದಾಗ ನಾವೆಂಥಾ ಅವಿವೇಕಿಗಳು ಎಂದೆನಿಸದೆ ಇರಲಿಲ್ಲ.
Sunday, November 16, 2008
Subscribe to:
Post Comments (Atom)
8 comments:
ಮೊದಲೆರಡು ದಿನಗಳನ್ನು ಓದಿದೆ. ಸಾಧುಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಾ.ಕಳೆದ ವಾರಾಂತ್ಯದಲ್ಲಿ ತೇಜಸ್ವಿಯವರ 'ರುದ್ರಪ್ರಯಾಗದ ನರಭಕ್ಷಕ' ಓದಿದೆ. ಈ ಮೊದಲೇ ಓದಿದ್ದರೂ ಕೇವಲ ಎರಡು ದಿನಗಳ ಕೆಲವೇ ಗಂಟೆಗಳಲ್ಲಿ ಓದಿಸಿಕೊಂಡಿತು. ಅದರಲ್ಲಿ ರುದ್ರಪ್ರಯಾಗದ ಒಬ್ಬ ಸಾಧುವಿನ ವಿಚಾರ ಬರುತ್ತದೆ. ಉತ್ತರ ಭಾರತದ ಬಹುತೇಕ ಸಾಧುಗಳು ಹುಂಬರೂ, ಹಣದಾಹಿಗಳೂ ಆಗಿರುತ್ತಾರೆ. ನಮಗೊಮ್ಮೆ ಹರಿದ್ವಾರದಲ್ಲಿ ಅವರ ಹಣದಾಸೆಯ ಅನುಭವವಾಗಿದ್ದುಂಟು. ಮುಂದಿನ ಬರಹವನ್ನು ನಿರಿಕ್ಷಿಸುತ್ತಾ, ಶುಭಕೋರುತ್ತೇನೆ.
ಚಿತ್ರಗಳು ತುಂಬಾ ಚೆನ್ನಾಗಿ ಬಂದಿವೆ! ಅಂತೂ ಮುಂದಿನ ಪಯಣ ನೋಡಲು ಕಾದಿರುವೆ
ನಿಮ್ಮಂತಹ ಸಾಫ್ಟ್ ವೇರ್ ಗಳು ೫೦೦೦ ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡಿದ್ದು ಆಸ್ಚರ್ಯ ಉಂಟುಮಾಡಿತು.
ನಿಮ್ಮ ಬ್ಲಾಗ್ ಬಗ್ಗೆ ಅವಧಿಯಲ್ಲಿ ತಿಳಿಯಿತು.ತುಂಬಾ ಚೆನ್ನಾಗಿದೆ.ಹೊಟ್ಟೆಕಿಚ್ಚೂ ಆಯಿತು.ಹಿಮಾಲಯಕ್ಕೆ ಹೋಗುವ ಕನಸು ಇನ್ನೂ ಕಾಣುತ್ತಲೇ ಇರುವವ ನಾನು.ಸಾಧುಗಳು ಮಾಡೆಲ್ ಗಳ ಥರ ಹಣ ಪಡೆದು ಫೋಟೋ ತೆಗೆಸಿಕೊಳ್ಳುವರಲ್ಲಾ, ನನ್ನಂಥ ಕ್ಯಾಮೆರಾ ಹಿಡಿದು ಲಾಟರಿ ಹೊಡೆಯೋರಿಗೆ ಫೋಸೇ ಕೊಡಲ್ಲಾ ಅನ್ಸುತ್ತೆ!! ನನ್ನ ಬ್ಲಾಗ್ ವಿಳಾಸ http://dgmalliphotos.blogspot.com
ಒಮ್ಮೆ ಭೇಟಿ ಕೊಡಿ.
ವಂದನೆಗಳು,
ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ
ನಿಮ್ಮ ಬ್ಲಾಗ್ ಬಗ್ಗೆ ಅವಧಿಯಲ್ಲಿ ತಿಳಿಯಿತು.ತುಂಬಾ ಚೆನ್ನಾಗಿದೆ.ಹೊಟ್ಟೆಕಿಚ್ಚೂ ಆಯಿತು.ಹಿಮಾಲಯಕ್ಕೆ ಹೋಗುವ ಕನಸು ಇನ್ನೂ ಕಾಣುತ್ತಲೇ ಇರುವವ ನಾನು.ಸಾಧುಗಳು ಮಾಡೆಲ್ ಗಳ ಥರ ಹಣ ಪಡೆದು ಫೋಟೋ ತೆಗೆಸಿಕೊಳ್ಳುವರಲ್ಲಾ, ನನ್ನಂಥ ಕ್ಯಾಮೆರಾ ಹಿಡಿದು ಲಾಟರಿ ಹೊಡೆಯೋರಿಗೆ ಫೋಸೇ ಕೊಡಲ್ಲಾ ಅನ್ಸುತ್ತೆ!! ನನ್ನ ಬ್ಲಾಗ್ ವಿಳಾಸ http://dgmalliphotos.blogspot.com
ಒಮ್ಮೆ ಭೇಟಿ ಕೊಡಿ.
ವಂದನೆಗಳು,
ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ
ಚಿತ್ರಗಳು ಚೆನ್ನಾಗಿವೆ, ಶಿರ್ಷಿಕೆ ಕೂಡ..
KMA ಅವ್ರೇ ರಕ್-ಸ್ಯಾಕ್ ಕೊಡ್ತಾರಾ?
before and after picture tumba chenaagi edhey.
Veena narasasetty
ಒಳ್ಳೆಯ ಬರಹ. ನಾನು ಈ ಬಾರಿಯ ಬೇಸಿಗೆಯಲ್ಲಿ ಹಿಮಾಲಯ ಹೋಗುವ ಪ್ಲಾನ್ ಮಾಡುತ್ತಿದ್ದೇನೆ. ನಿಮ್ಮ ಪ್ರವಾಸದ ಅನುಭವಗಳು ಓದಲು ಕುಶಿ ಕೊಡುತ್ತಿವೆ.
Post a Comment