ನಾಲ್ಕನೇ ದಿನ (ಮೇ ೬, ೨೦೦೮)
ಫಕ್ದಿಂಗ್ (2652mt/8698ft) - ನಾಮ್ ಚೆ ಬಜಾರ್ (3489mt/11443ft)
ನಾನು ಈ ಮೊದಲೇ ಮಾಡಬೇಕಾಗಿದ್ದ ಕಾರ್ಯ ಇದು. ಇಲ್ಲಿ ನಾವು ನಡೆದು ಹೋದ ದಾರಿಯ ನಕ್ಷೆ ಕೊಟ್ಟಿರುವೆ. ಅದರಲ್ಲಿ ಕೆಂಪು ದಾರಿ ಹಾಗು ಮನೆಗಳೆಲ್ಲಾ ನಾವು ಹೋದ ದಾರಿ ಮತ್ತು ಉಳಿದುಕೊಂಡ ಲಾಡ್ಜ್ ಗಳು. ಹಸಿರವು ನಾವು ಬರುವಾಗ ಉಳಿದುಕೊಂಡವು.
ಫಕ್ದಿಂಗ್ ಅಲ್ಲಿ, ಈಗಾಗಲೇ ನಮಗೆ ಥಂಡಿ ಹತ್ತಲು ಶುರುವಾಗಿತ್ತು. ಹಾಗಾಗಿ ನಮಗೆ ಸರಿಯಾಗಿ ನಿದ್ದೆಹತ್ತಲಿಲ್ಲ. ನಾವು ಇದ್ದ ಮೊದಲ ಲಾಡ್ಜಲ್ಲಿ ಕೆಳಗೆ ೧೦ ಮೇಲೆ ೧೦ ಕೊಠಡಿಗಳಿದ್ದು, ಪ್ರತಿಯೊಂದರಲ್ಲೂ ಎರಡು ಮಂಚಗಳಿದ್ದವು. ಹಾಸಿಗೆಗಳ ಮೇಲೆ ಕಂಬಳಿಗಳಿದ್ದವು. ಆದರೆ ಆ ಥಂಡಿಯಲ್ಲಿ, ನಾವು ಎರಡೆರಡು ಬೆಚ್ಚನೆಯ ಪ್ಯಾಂಟುಗಳನ್ನು ಹಾಕಿದ್ದರೂ ಕಟಕಟ ಹಲ್ಲು ಕಡಿಯುವ ಹಾಗೆ ಆಗುತ್ತಿತ್ತು. ಇಲ್ಲೆಲ್ಲಾ ಬಹಳ ವಿಚಿತ್ರವಾದ ಕಕ್ಕಸ್ಸುಗಳು ! ಅವುಗಳ ಬಗ್ಗೆ ಇಷ್ಟೆ ಹೇಳಿ ಬಿಟ್ಟರೆ ಸಾಲದು, ಆದರೆ ಮುಂದೆ ಸರಿಯಾದ ಸಮಯದಲ್ಲಿ ವಿವರಿಸುವೆ. ಇಡೀ ಹೋಟಲು ಮರದ ತೆಳ್ಳನೆಯ ಹಲಗೆಗಳಲ್ಲಿ ಕಟ್ಟಿದ್ದುದ್ದರಿಂದ ಕೊನೆಯ ಕೊಠಡಿಯಲ್ಲಿ ಕೂಗಿದರೆ ನಮಗೆ ಕೇಳುತ್ತಿತ್ತು. ಹಾಗಾಗಿ ನಾವು ಮಲಗಿಕೊಂಡೆ ಅಕ್ಕಪಕ್ಕದವರಿಗೆ ಕೂಗಿ ಬೆಳಿಗ್ಗೆ ನಮಗೂ ಏಳಿಸುವಂತೆ ಆಜ್ಞೆ ಕೊಟ್ಟೆವು. ರಾತ್ರೆ ಇಡಿ ಪ್ರತಿಯೊಬ್ಬರೂ ಹೊರಳುವುದೂ ಕೇಳುತ್ತಿತ್ತು. ಮರುದಿನ ಏಳಲು ನಾವೇ ಮೊದಲಿನವರು. ಜ್ಞಾನಿ, ತಕ್ಷಣ ಹೋಗಿ ವಸುಮತಿಯವರಿಗೆ ಕೂಗಿ ಏಳಿಸಿ, ನಾವು ಎದ್ದಿರುವ ವಿಷವನ್ನು ತಿಳಿಸಿ, ಅವರಿಂದ ಅಷ್ಟು ಮುಂಚೆ ಕೂಗಿದ್ದಕ್ಕೆ ಬೈಸಿಕೊಂಡು, ಸಾರ್ತಕವಾಯಿತೆಂಬ ಪ್ರಸನ್ನತೆಯಿಂದ ಹೊರನಡೆದ. ನಾವೆಲ್ಲಾ ಓಟ್ಸ್ ಗಂಜಿ ತಿಂದಾದ ನಂತರ, ವಸುಮತಿ ನಮಗೆ ಅವತ್ತಿನ ದಿನಚರಿಯನ್ನು ತಿಳಿಸಿದರು. "ಇಂದು ನೀವು ಹತ್ತು ಸಾವಿರ ಅಡಿಗಳನ್ನು ದಾಟಲಿದ್ದೀರ. ಹತ್ತು ಸಾವಿರ ಅಡಿಗಳನ್ನು ಮೀರಿ ಮಿಕ್ಕೆಲ್ಲಾ ಹೈ ಆಲ್ಟಿಟ್ಯುಡ್. ಎಲ್ಲರಿಗಾಗುವ ನಿದಾನವಾದ ಹೆಜ್ಜೆಯಲ್ಲಿ ನಾವು ನಡೆಯುತ್ತೇವೆ. ಯಾರಿಗೇ ಯಾವುದೇತರದ ಅನುಭವವಾದರೂ ನನಗೆ ಹೇಳಬೇಕು. ತಲೆನೋವು, ವಾಂತಿ, ತಲೆ ತಿರುಗುವುದು, ಸುಸ್ತು ಹೀಗೆ." ನಾವೆಲ್ಲಾ, ಅಂತೂ ನಿಜವಾದ ಟ್ರಿಕ್ಕಿಂಗ್ ಶುರುವಾಯಿತೆಂಬ ಸಂತೋಷದಲ್ಲಿ ಆಯಿತೆಂದು ತಲೆ ಆಡಿಸಿದೆವು. ಆದರೆ ಅವರವರ ಸಮಸ್ಯೆ ಅವರವರಿಗೇ ಗೊತ್ತಿತ್ತು. ಒಬ್ಬರಿಗೆ ಶೂ ಸರಿ ಇಲ್ಲದಿದ್ದರೆ, ಇನ್ನೊಬ್ಬರಿಗೆ ಈ ೮-೧೦ ಕೆಜಿ ಚೀಲ ಹೊತ್ತು ನಡೆಯುವುದಕ್ಕಾಗುತ್ತದೆಯೇ ಎಂಬ ಶಂಕೆ. ಪ್ರಿಯಳ ಮುಖ ಚಿಂತೆಕಟ್ಟಿತ್ತು, ಅವಳು "ಅದು ಹೇಗೆ ನನ್ನ ಚೀಲ ಇಷ್ಟು ಭಾರ ಆಗುತ್ತಿದೆ, ನೀನೇನಾದರೂ ನಿನ್ನ ವಸ್ತುಗಳನ್ನು, ನನಗೆ ತಿಳಿಯದಂತೆ ನನ್ನ ಚೀಲಕ್ಕೆ ತುಂಬುತ್ತಿದ್ದೀಯ ?" ಎಂದು ಕೇಳುತ್ತಿದ್ದಳು. ನಾನು ಆಗ ಈಗ ನಿಂತು ದೂರವನ್ನು ದಿಟ್ಟಿಸಿ ನನಗೆ ನಾನೆ ಏನಾದರೂ ಆಗುತ್ತಿದೆಯಾ ಎಂದು ಪರೀಕ್ಷಿಸಿಕೊಳ್ಳುತ್ತಿದ್ದೆ. ಬೆರೆಯೆಲ್ಲಾ ಕಟ್ಟುಮಸ್ತಾದ ವಿದೇಶೀಯರು ಪೋರ್ಟರುಗಳನ್ನು ಕರೆದುಕೊಂಡಿರುವುದು ನೋಡಿ ಏನೋ ಭಯ ಮತ್ತು ಅಸಮಾಧಾನ ಆದರೂ ಏನೋ ಒಂದು ’ನನಗೇನೂ ಬೇಕಾಗಿಲ್ಲ’ ಎಂಬ ಹಂಗು. ಹೀಗೆ ನಾವು ಸುಮಾರು ದೂರ ನೆಡೆಯುತ್ತಾ ಹೋದೆವು.
ದಾರಿಯಲ್ಲಿ ನಮಗೆ ಹಿಂತಿರುಗಿ ಬರುತ್ತಿದ್ದ ಬಹಳ ಜನ ಸಿಕ್ಕರು. ಎಲ್ಲರೂ ಬಹಳ ಬಸವಳಿದಿದ್ದಂತೆ ಕಂಡರು. ಒಬ್ಬಳೇ ಒಂಟಿ ಹುಡುಗಿ, ಭಾರತೀಯಳು, ಒಂದು ಸಣ್ಣ ಚೀಲ ಹಾಗು ಸ್ಕೀ ಕೋಲು ಹಿಡಿದು ಹಿಂತಿರುಗಿ ನಡೆದು ಬರುತ್ತಿದ್ದಳು. ಅವಳು ಮೂಲತಹ ಡೆಲ್ಲಿಯವಳಂತೆ, ಆದರೆ ಅಮೇರಿಕನ್ನರ ಉಚ್ಚಾರಣೆ, ವಿಶ್ವಸಂಸ್ಥೆಯಲ್ಲಿ ಕೆಲಸ. ವಿಶ್ವಸಂಸ್ಥೆಯು ನಾಮ್ಚೆ ಬಜಾರಿನ ಒಂದು ಹೋಟೆಲಿನಲ್ಲಿ ಮೀಟಿಂಗ್ ಇಟ್ಟಿತ್ತಂತೆ, ಅದಕ್ಕಾಗಿ ಮೂರುಜನರ ಗುಂಪು (ಇತರರು ಕಾಣಲಿಲ್ಲ) ಫಕ್ದಿಂಗ್ ಇಂದ ಬೆಳಿಗ್ಗೆ ಹೊರಟು ನಾಮ್ಚೆಯಲ್ಲಿ ಮೀಟಿಂಗ್ ಮಾಡಿ ಈಗ ಹಿಂತಿರುಗಿ ಫಕ್ದಿಂಗ್ ಗೆ ಹೋಗುತ್ತಿರುವಳಂತೆ. ಅಲ್ಲಿಯ ಹೋಟೆಲಿನಿಂದ ಮೌಂಟ್ ಎವೆರೆಸ್ಟ್ ಸ್ಪಷ್ಟವಾಗಿ ಗೋಚರಿಸಿತಂತೆ. ನಾವು ಅವಳನ್ನು, ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದೆವು. ಅವಳು ಭಾರತೀಯಳೇ (ವಿದೇಶಿಯಳಲ್ಲ !), ಭಲೇ ಏಕಾಂಗಿ ಹುಡುಗಿ ! ಇಲ್ಲೂ ಮೀಟಿಂಗ್ ಮಾಡಿ, ಎವೆರೆಸ್ಟ್ ಪರ್ವತ ನೋಡಿ, ಹೋದ ದಿನವೇ ಹಿಂತಿರುಗಿ ಬರಬಹುದೇ ? ಹಾಗಾದರೆ ನಮಗೂ ನಾಮ್ಚೆ ಬಜಾರ್ ಗೆ ಹತ್ತಬಹುದೆಂಬ ಮನಸ್ಸು ಉಕ್ಕಿಬಂತು. ನಾವು ಅಲ್ಲಿಯ ಒಬ್ಬ ಶೆರ್ಪಾನನ್ನು ನಮ್ಮ ಗೈಡಾಗಿ ಕರೆದುಕೊಡಿದ್ದೆವು. ಅವನ ಹೆಸರು ಖಾಜಿ (ಚಿತ್ರದಲ್ಲಿ ಇರುವವನು). ಅವನು ಅನಾಯಸವಾಗಿ ಹಿಂದೆ ಮುಂದೆ ಓಡಾಡಿಕೊಡಿದ್ದ. ವಸುಮತಿಯವರ ಮಾತಿನಲ್ಲಿ ಹೇಳುವುದಾದರೆ, ವಸುಮತಿಯವರಿಗೆ ದಾರಿ ಮರೆತು ಹೋದಾಗ ಮಾತ್ರ ಅವನು ದಾರಿ ತೋರಿಸಲು ಹಾಗು, ಅವರದೇ ಭಾಷೆಯಲ್ಲಿ ಚೌಕಾಶಿ ಮಾಡಿ ಹೋಟೆಲುಗಳಲ್ಲಿ ದುಡ್ಡು ಇಳಿಸಲು ಅವನನ್ನು ಕರೆದುಕೊಡಿದ್ದೆವು. ಲುಕ್ಲಾ ಇಂದ ಎವೆರೆಸ್ಟ್ ತಳದವರೆಗೂ ಹಾಗೂ ಅಲ್ಲೇ ಸುತ್ತಮುತ್ತ ಇರುವ ಇತರ ಪರ್ವತಗಳ ಬಳಿಗೂ, ಪಾಸ್ ಗಳ ಬಳಿಗೂ, ಚಾರಣಿಗರಿಗಾಗಿ ಉದ್ದಕ್ಕೂ ಕಾಲುದಾರಿಗಳಿದ್ದು, ಸಣ್ಣ ಊರುಗಳ ಹತ್ತಿರ ಹಲಗೆಗಳಿಂದ ಕಟ್ಟಿರುವ ಮೂಲಸವಲತ್ತುಗಳಿರುವ ಲಾಡ್ಜ್ ಗಳಿವೆ. ಇವೆಲ್ಲಾ ಎಡ್ಮಂಡ್ ಹಿಲರಿಯ ಪರಿಶ್ರಮ. ಪ್ರತೀ ಹೋಟಲಿನಲ್ಲೂ ಅವರ ಬಗ್ಗೆ ಮತ್ತು ಅವರ ಮಹತ್ಕಾರ್ಯಗಳ ಪಟ್ಟಿ ಹಾಕಿರುತ್ತಿದ್ದರು.
ಜೊರ್ಸಾಲೆ ಏಂಬ ಕಡೆ ಒಂದು ಚೆಕ್ ಪೋಸ್ಟ್ ಇದೆ. ಅಲ್ಲಿಂದ ಮುಂದಕ್ಕೆ ಸಾಗರ್ ಮಾತಾ (ಎಲ್ಲಾ ಪರ್ವತಗಳ ತಾಯಿ) ರಾಷ್ಟೀಯ ಉದ್ಯಾನವನ ಶುರುವಾಗುತ್ತದೆ. ಇಡೀ ಹಿಮಾಲಯ ಇದೊರೊಳಗೆ ಬರುತ್ತದೆ. ಅಲ್ಲಿ ನಮ್ಮ ಚೀಲಗಳನ್ನು ಪೂರ್ತಿ ತೆಗೆಸಿ ತಪಾಸಣೆ ಮಾಡಿದರು. ಆಗ ಮೇ ೧೪ ಹತ್ತಿರವಾಗುತ್ತಿದ್ದುದ್ದರಿಂದ ಒಲೊಂಪಿಕ್ಸ್ ಜ್ವಾಲೆ ಮೌಂಟ್ ಎವೆರೆಸ್ಟ್ ತುದಿ ಮುಟ್ಟಿಸುವ ಯೋಜನೆ ಚೈನಾಗೆ ಇತ್ತು. ಇದೆ ಸಮಯದಲ್ಲಿ ಟಿಬೆಟ್ಟಿನವರು ಮಾಡುತ್ತಿದ್ದ ಚಳುವಳಿಗೆ ಪೂರಕವಾಗಿ ಏನಾದರೂ ಇದ್ದಲ್ಲಿ ಅದನ್ನು ಮುಟ್ಟುಗೋಲು ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದರು. [ಮೇ ಮಧ್ಯಭಾಗದಲ್ಲೇ ಬಹಳಷ್ಟು ಯಶಸ್ವಿ ಎವೆರೆಸ್ಟ್ ಶಿಖರ ಯಾತ್ರೆ ನಡೆದಿರುವುದು. ಮೇ ೧೪ ಟಿಬೆಟ್ಟಿಯನ್ನರ ಪ್ರಕಾರ ಚೊಮೊಲುಂಗ್ಮ (ಮೌಂಟ್ ಎವೆರೆಸ್ಟ್ ಶಿಖರ) ತುದಿ ಮುಟ್ಟಲು ಬಹಳ ಒಳ್ಳೆಯ ದೈವದತ್ತವಾದ ದಿನ. ವೈಜ್ಞಾನಿಕವಾಗಿ ನೋಡುವುದಾದರೆ ಏಪ್ರಿಲ್-ಮೇ ಸಮಯದಲ್ಲಿ, ಇಲ್ಲಿನ ಹವಾ ಪರ್ವತಾರೋಹಿಗಳಿಗೆ ಬಹಳ ಅನುಕೂಲಕರವಾಗಿರುತ್ತದೆ. ಎವೆರೆಸ್ಟ್ ತುದಿ ಹತ್ತುವವರು, ರಾತ್ರೆ ಸುಮಾರು ೧೦ ಗಂಟೆಗೆ ಹೊರಟು ಬೆಳಗಿನ ಜಾವ ೪ರ ಹಾಗೆ ಶಿಖರದ ತುದಿ ತಲುಪಿ, ಮರುದಿನದ ಮಧ್ಯಾನದ ಹೊತ್ತಿಗೆ ನಾಲ್ಕನೇ ಬೇಸ್ ಕ್ಯಾಂಪ್ ಇಳಿದುಬಿಡಬೇಕು ಬೇಕು.ಇಲ್ಲದಿದ್ದಲ್ಲಿ, ಅವರು ಪ್ರಾಣ ಕಳದುಕೊಂಡ ಹಾಗೆಯೇ.] ಅಲ್ಲಿ ಸುಮಾರಾಗಿ ಅರ್ಧ ಗಂಟೆ ಕಳೆಯಿತು. ನಾವೀಗಾಗಲೇ ಈ ಹೋಟಲುಗಳಲ್ಲಿ ದೊರೆಯುವ ತಿಂಡಿ ಊಟಗಳಿಂದ ಬೇಸತ್ತಿದ್ದೆವು. ಹದಿನೆಂಟು ದಿನಗಳ ನಮ್ಮ ಕಾರ್ಯಕ್ರಮದಲ್ಲಿ ನಮ್ಮ ಗುಂಪಿನಲ್ಲಿ ಜಾಸ್ತಿ ಕೇಳಸಿಗುತ್ತಿದ್ದುದು, ನಾವು ಹಿಂತಿರುಗಿ ಹೋಗುವಾಗ ಡೆಲ್ಲಿಯಲ್ಲಿ ಎನೆಲ್ಲಾ ತಿನ್ನುತ್ತೇವೆಂದು, ಬೆಂಗಳೂರಿನ್ನಲ್ಲಿ ಯಾವ ಯಾವ ಗಲ್ಲಿಯಲ್ಲಿ ಎಂತೆಂತಾ ರುಚಿಗಳು ನಮಗಾಗಿ ಕಾದಿವೆಯೆಂದು ! ನಮ್ಮ ಗುಂಪಿನಲ್ಲಿದ್ದ ದಂತವೈದ್ಯೆ ದೀಪಿಕ ಮೆಲ್ಲಮೆಲ್ಲಗೆ ದೇಪ್ಲಗಳನ್ನು ಹೊರತೆಗೆದಳು. ಅವಳ ಅಡುಗೆಯವನ ಹತ್ತಿರ ಮಾಡಿಸಿಕೊಂಡು ಬಂದಿದ್ದಳು. ಒಂದು ಕ್ಷಣ ಕಂಡ ಅದು ಇನ್ನೊಂದು ಕ್ಷಣದಲ್ಲಿ ಮಂಗಳ ಮಾಯ. ಎಲ್ಲಾ ಅವಳ ಅಡುಗೆಯವನ್ನು ಹೊಗಳಿದ್ದೇ ಹೊಗಳಿದ್ದು. ಇನ್ನೇನು ವಿಸ್ಮಯಗಳನ್ನು ಅವನು ಮಾಡಬಲ್ಲವನಾಗಿದ್ದಾನೆಂದು ತಿಳಿದುಕೊಂಡು, ಅವನ ವಿಳಾಸವನ್ನು ತಪ್ಪದೆ ನಮಗೆ ತಲುಪಿಸಬೇಕೆಂದು ಕೋರಿಕೊಂಡೆವು. ನಂತರ ಜೊರ್ಸಾಲೆ ಊರಿನೊಳಗೆ ವಸುಮತಿಯವರು ನೂಡಲ್ಸ್ ಸೂಪನ್ನು ಕೊಡಿಸಿದರು [ಚಿತ್ರದಲ್ಲಿ ಜೊರ್ಸಾಲೆ ಬ್ರೇಕ್]. ಈ ರೀತಿ ಯಾವಾಗಲು ಮಧ್ಯದಲ್ಲಿ ಒಂದು ಅರ್ಧ ಗಂಟೆಯ ಪುಟ್ಟ ವಿರಾಮ ಇದ್ದು ಬಿಸಿ ನಿಂಬೆ ಜ್ಯೂಸ್ ಅಥವಾ ಬಿಸಿ ಚಾಕಲೇಟು ಹಾಲು ಅಥವಾ ಸರಿಯಾಗಿ ಬೆಳ್ಳುಳ್ಳಿ ಹಾಕಿದ ನೂಡಲ್ಸ್ ಸೂಪು ಕುಡಿಯುತ್ತಿದ್ದೆವು. ಇನ್ನೂ ಜಾಸ್ತಿ ತಿನ್ನಲು ಬಯಸಿದಲ್ಲಿ, ’ಅದು ನಿಮ್ಮ ಇಷ್ಟ, ನಿಮ್ಮ ಹಣ, ಅದರ ಜವಾಬ್ದಾರಿ ನನ್ನದಲ್ಲ’ ಎಂದು ಮೊದಲೆ ವಸುಮತಿಯವರು ಹೇಳಿದ್ದರು. [ಹೋದ ಬ್ಲಾಗಿಗೆ ಒಬ್ಬೊರು, ’ನಿಮ್ಮಂತಹ ಸಾಫ್ಟ್ ವೇರ್ ಗಳು ೫೦೦೦ ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡಿದ್ದು ಆಸ್ಚರ್ಯ ಉಂಟುಮಾಡಿತು’ ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ಮಿತವಾಗಿ ಹಣ ತೆಗೆದುಕೊಂಡು ಹೋಗಿದ್ದೆವು, ಅದರಲ್ಲಿ, ನಮಗೆ ಬೇಕಾದ್ದನ್ನು ತಿನ್ನಲು, ಕೆಲವು ಅವಶ್ಯವಾದ ಬಟ್ಟೆಗಳನ್ನು ಕೊಳ್ಳಲು ಹಾಗು ನೆನಪಿನ ಕಾಣಿಕೆಗಳಿಗಾಗಿ ಮತ್ತು ಮುಖ್ಯವಾಗಿ, ಮೇಲೆ ಹೋದಂತೆ, ಕಷ್ಟವಾದಲ್ಲಿ ಪೋರ್ಟರ್ ಗಳಿಗಾಗಿ ಉಳಿಸಿಕೊಳ್ಳಬೇಕಿತ್ತು. ಅಲ್ಲದೆ, ಜೀವವಿಮೆ ಗಟ್ಟಿ ಜೀವಿಗಳಿಗೇಕೆ ? ಎಂಬ ಹುಂಬ ಭಾವನೆ !]
ಪ್ರಿಯಳಿಗೆ ಈರುಳ್ಳಿ ಬೆಳ್ಳುಳ್ಳಿ ಅಲೆರ್ಜಿ. ಅವಳು ಯಾವಾಗಲು ಹೊಟಲೊಳಗೆ ಹೋಗಿ ಅವುಗಳಿಲ್ಲದೆ ತನಗೆ ಮಾಡಲು ಹೇಳುತ್ತಿದ್ದಳು. ಅವರು ತಬ್ಬಿಬಾಗಿ, ಹಾಗಾದರೆ ಮಸಾಲೆ ಏನು ಹಾಕಬೇಕೆಂದು ಯೋಚಿಸಿತ್ತಿದ್ದರು. ಬೆಳ್ಳಿಳ್ಳಿ ’ಆಲ್ಟಿಟ್ಯುಡ್ ಸಿಕ್ನೆಸ್’ ಗೆ ಬಹಳ ಒಳ್ಳೆಯದಂತೆ. ಇದೂ ಒಂದು ಅವಳ ಚಿಂತೆಯಾಗಿತ್ತು ! ಹೀಗೆ ಜೊರ್ಸಾಲೆಯಲ್ಲಿ ಬಿಡುವು ತೆಗೆದುಕೊಂಡಾಗ, ಜ್ಞಾನಿ, ನಮ್ಮ ಗುಂಪಿನಲ್ಲಿದ್ದ ೬೨ ವರ್ಷ ವಯಸ್ಸಿನ ಶೀಲಾ ಕ್ಯಾಸ್ಟಿಲಿನೊ ಅವರನ್ನು ಮಾತಾಡಿಸುತ್ತಿದ್ದ. ’೧೭ ವರ್ಷಗಳ ಹಿಂದೆ ನಮ್ಮ ತರಗತಿಯಲ್ಲಿ ಆನಂದ್ ಕ್ಯಾಸ್ಟಿಲಿನೊ ಅಂತ ಒಬ್ಬ ಇದ್ದ. ಆದರೆ ಅಡ್ರೆಸ್ಸ್ ಇಲ್ಲದಂತೆ ಮಾಯವಾದ, ನಿಮ್ಮ ಹೆಸರು ಕೇಳಿದಾಗಲಷ್ಟೆ ಅವನ ನೆನಪು’ ಎಂದು ಹೇಳಿದ ತಕ್ಷಣ, ’ಅಯ್ಯೊ, ಅವನು ನನ್ನ ಮಗ’ ಅಂತ ಈ ತಾಯಿ.
ನಮ್ಮ ದಾರಿಯುದ್ದಕ್ಕೂ ಕೋಸಿ ನದಿಯನ್ನು ದಾಟಲು ಹಾಕಿದ್ದ ತೂಗು ಸೇತುವೆಗಳು, ಚಾರ್ಟನ್ (chortans) ಎಂದು ಕರೆಯಲ್ಪಡುವ ಕಲ್ಲಿನ ಸಮಾಧಿಗಳು ಸಿಕ್ಕವು. ಈ ನಮಾಧಿಗಳು ನೋಡಲು ಲಗೋರಿ ಆಟಕ್ಕೆ ಜೋಡಿಸುವ ಕಲ್ಲಿನ ಗುಡ್ಡೆಗಳಂತೆ ಕಾಣುತ್ತವೆ. ಎಲ್ಲಾ ರೀತಿಯ ಆಕಾರ, ಗಾತ್ರದಲ್ಲಿ ಇರುತ್ತವೆ. ಚಾರ್ಟನ್ನುಗಳು, ಸ್ತೂಪಗಳು ಹಾಗು, ನಿಮ್ಮದಾರಿಯಲ್ಲಿ ಅಡ್ಡಬರುವ ಯಾವುದೇ ರೀತಿಯ ಗುಡ್ಡೆಗಳನ್ನು (ಅವುಗಳಲ್ಲಿ, ಎಷ್ಟೋ ರೀತಿಯವಿದ್ದು, ಏನೆಂದು ಗೊತ್ತು ಮಾಡುವುದು ಕಷ್ಟವೇ ಸರಿ, ಹಾಗಾಗಿ) ಯಾವಾಗಲು ಟಿಬೆಟ್ಟಿಯನ್ನರ ಸಂಪ್ರದಾಯದಂತೆ ಪ್ರದಕ್ಷಿಣೆಯಾಗಿಯೇ (clockwise) ದಾಟಿ ಹೋಗಬೇಕು. ನಾಮ್ಚೆ ಬಜಾರನ್ನು ತಲುಪುವಷ್ಟರಲ್ಲಿ ಇದು ನಮ್ಮ ಕಾಲುಗಳಿಗೆ, ನಮ್ಮಲ್ಲಿರುವ ಸರ್ಕಲ್ ಸುತ್ತುವ ಕಾನೂನಿನಂತೆ ಅಭ್ಯಾಸವಾಗಿ ಹೋಯಿತು.
Friday, December 5, 2008
Subscribe to:
Post Comments (Atom)
4 comments:
ನಿಮ್ಮ ನುಡಿಗಳಲ್ಲಿ ತೇಜಸ್ವಿಯವರನ್ನು ಕಾಣುತ್ತಿದ್ದೇನೆ.ನಿಮ್ಮ ಬರಹ ಹೀಗೆ ಸೊಗಸಾಗಿ ಮೂಡಿಬರುತ್ತಿರಲಿ
ಅಶೋಕ ಉಚ್ಚಂಗಿ
ಮೈಸೂರು.
http://mysoremallige01.blogspot.com/
ತಪ್ಪಾಗಿ ತಿಳಿಯಬೇಡಿ. ನಮ್ಮ ಇಲ್ಲಿನ ಚಳಿಯಲ್ಲೇ ಟಾಯ್ಲೆಟ್ ಹೋದರೆ ಪ್ರಾಣಕ್ಕೆ ಬಂದಿರುತ್ತೆ. ಇನ್ನು ಮೈನಸ್ ಡಿಗ್ರಿಯಲ್ಲಿ...!? ಈ ವಿಷಯದಲ್ಲಿ ನನಗೆ ಮೊದಲಿಂದಲೂ ಡೌಟಿದೆ. ನಿಮ್ಮ ಲೇಖನದೊಂದಿಗೇ ನಮಗೂ ಚಾರಣ ಮಾಡುತ್ತಿರುವ ಅನುಭವವಾಗ್ತಿದೆ.
"ನಾನು ಈ ಮೊದಲೇ ಮಾಡಬೇಕಾಗಿದ್ದ ಕಾರ್ಯ ಇದು." ಲೇಖನ ಆರಂಭದಲ್ಲೇ ಬಂದ ಈ ಪುಟ್ಟ ವಾಕ್ಯ ಅತ್ಯಂತ ಸಾರ್ಥಕವೂ ಪರಿಣಾಮಕರಿಯೂ ಆಗಿಬಂದಿದೆ. ಕೆಳಗೆ ಮ್ಯಾಪ್ ಕೂಡಾ ಇದೆ!. ಈ ವಾಕ್ಯ ಓದಿದ ತಕ್ಷಣ ನೆನಪಾದುದು ತೇಜಸ್ವಿಯವರ ಗದ್ಯಶೈಲಿ! ನೆನ್ನೆಯಷ್ಟೇ ನಾನು ತಿಂದುಬಂದ ನಿಮ್ಮ ತೋಟ ನಿರುತ್ತರದ ಕಿತ್ತಲೇ ಹಣ್ಣಿನಷ್ಟೇ ಈ ಲೇಖನ ಚೆನ್ನಾಗಿದೆ. ಥ್ಯಾಂಕ್ಸ್...
ಲೇಖನದ ಮೊದಲ ವಾಕ್ಯವೇ ಗಮನ ಸೆಳೆಯುತ್ತದೆ. ಕೆಳಗಡೆಯೇ ಮ್ಯಾಪ್ ಇರುವುದರಿಂದ ಅರ್ಥಪೂರ್ಣವೂ ಸಾರ್ಥಕವೂ ಆದ ವಾಕ್ಯವಾಗಿ ಬಂದಿದೆ. ಪೋಟೋಗಳು ಪೂರಕವಾಗಿವೆ. ಒಟ್ಟಾರೆ ಲೇಖನ ನಾವು ಮೊನ್ನೆಯಷ್ಟೇ ತಿಂದು ಬಂದ ನಿರುತ್ತರದ ಕಿತ್ತಲೆ ಹಣ್ಣಿನಂತೆ ಸವಿಯಾಗಿದೆ.
Post a Comment