ಕಟ್ಮಂಡು(1000 ಮೀ/3280 ಅಡಿ) - ಲುಕ್ಲ (2800 ಮೀ / 9184 ಅಡಿ) - ಫಕ್ದಿಂಗ್ (2652 ಮೀ / 8698 ಅಡಿ)
ನಮ್ಮ ಲೀಡರ್ ವಸುಮತಿ. ಅವರ ಬಗ್ಗೆ ಬರೆಯದೆ ಇರುವುದು ಅನ್ಯಾಯ. ನಮ್ಮ ಗುಂಪಿನಲ್ಲಿ ಅವರ ಮಗಳು ಸ್ಮಿತ, ಮಗ ಶರತ್ ಮತ್ತು ಅವರ ಸೋದರನ ಮಗಳು ತನ್ವಿ, ಮೂರೂ ಜನರಿದ್ದರು. ಎಲ್ಲರೂ ಮಜಾ ಮಾಡುವವರು ಹಾಗೂ ಒಳ್ಳೆಯ ಜನರು. ಆದರೆ ವಸುಮತಿಯವರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಇದರಿಂದಾಗಿಯೇ ಅವರಿಗೆ ತುಂಬ ಹಗೆಗಳು. ಸೈನ್ಯದಲ್ಲಿದ್ದ ಅವರ ಗಂಡ ಹೇಳುವಂತೆ ’ನನಗೇ ಒಂದೊಂದು ಸಲ, ನಾನಲ್ಲ ಇವಳೇ ಸೈನ್ಯದಲ್ಲಿ ಇದ್ದಿದ್ದು ಅನ್ನಿಸುತ್ತದೆ’ ಎಂಬಂತಹ ಶಿಸ್ತಿನ ಸಿಪಾಯಿ. ಇದರಿಂದ ಬಹಳ ಸಲ ಗುಂಪಿನಲ್ಲಿ ಕಸಿವಿಸಿ ನಡೆಯುತ್ತಿತ್ತು. ಆದರೆ, ಅಂತಹದವರೊಬ್ಬರಿದ್ದರೆ, ಈ ರೀತಿಯ ಒಂದು ಟ್ರೆಕ್ ಸುಲಭಸಾಧ್ಯ. ವಸುಮತಿಯವರು ನಮಗೆ ಸಮಯಪಾಲನೆ ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತಿದ್ದರು. ಯಾರಾದರೂ ತಡ ಮಾಡಿದರೆ ನಾನು ಅವರನ್ನು ಹಿಂತಿರುಗಿ ಕಳುಹಿಸುತ್ತೇನೆ ಎಂದೇ ಹೇಳುತ್ತಿದ್ದರು. ಆವರು ಹೀಗೆ ಹೇಳಿದಾಗಲೆಲ್ಲಾ, ’ಅದು ನನಗಲ್ಲ’ ಎಂದೇ ಎಣಿಸುತ್ತಿದ್ದೆ.
ಕೆಲವು ಸಲ, ನಾವು ಅಂದು ಕೋಳ್ಳುವುದೇ ಒಂದು ನಡೆಯುವುದೇ ಒಂದು. ನಾನು ಯಾವುದೇಕಾರಣಕ್ಕೂ ಗುಂಪಿನಲ್ಲಿ ಪ್ರಸಿದ್ದಳಾಗಬಾರದೆಂದು ನಿರ್ಧರಿಸಿದ್ದರೆ, ಅಲ್ಲಿ ಮೊದಲ ದಿನವೇ ಖುಖ್ಯಾತಿಗೊಳಗಾದೆವು. ನಾವೆಲ್ಲಾ ನಮ್ಮ ಹೆಚ್ಚಾದ ಸಾಮಾನುಗಳನ್ನು ಹೋಟಲ್ ಲಿಲ್ಲಿಯಲ್ಲೇ ಬಿಟ್ಟು ಬರಬಹುದೆಂದು ವಸುಮತಿಯವರು ಹೇಳಿದ್ದರು. ಜ್ಞಾನಿ ಯಾವುದೋ ಕಾರಣಕ್ಕೆ ಹಿಂದಿನ ರಾತ್ರೆ ಬ್ಯಾಗ್ ತುಂಬಿಕೊಳ್ಳದೆ ಬೆಳಿಗ್ಗೆ ತುಂಬಿಕೊಳ್ಳಲು ಶುರುಮಾಡಿದ. ನಮ್ಮ ಲಿಲ್ಲಿಯವನು ಬಿಸಿ ನೀರು ಬೆಳಿಗ್ಗೆ ಬರುತ್ತದೆ ಎಂದು ಬೇರೆ ಹೇಳಿದ್ದ. ನಾವು ಇನ್ನೂ ನಾಗರೀಕ ಜಗತ್ತಿನಲ್ಲೇ ಇದ್ದುದ್ದರಿಂದ, ಜ್ಞಾನಿ ಬಿಸಿನೀರು ಬರುತ್ತೆ ಅಂತ ಹೇಳಿದಮೇಲೆ ಬರಲೇಬೇಕು, ಮಾಡೇ ಹೋಗುವ ಎಂದು ತಡೆದ. ಅಲ್ಲದೆ ನಮ್ಮ ಹತ್ತಿರ ಗಡಿಯಾರ ಬೇರೆ ಇರಲ್ಲಿಲ್ಲ. ಹಾಗಾಗಿ ಬೇರೆಯವರು ನಮ್ಮನ್ನು ಕರೆದು ಹೋದಮೇಲೆ ’ಕೇವಲ ಹತ್ತು ನಿಮಿಷವಾಗಿರಬಹುದಷ್ಟೆ, ಅವರು ಕಾಯುತ್ತಾರೆ’ ಅಂತ ಅವನು ತಯ್ಯಾರಾಗುತ್ತಲೇ ಇದ್ದ. ನಮಗೆ ಹಿಮಾಲಯದ ಹವಾಮಾನದ ರೀತಿ ನೀತಿಯಾಗಲಿ ಅದನ್ನನುಸರಿಸಿ ಹಾರುವ ವಿಮಾನದ ವೇಳಾಪಟ್ಟಿಯ ಅರಿವಾಗಲೀ ಇರಲ್ಲಿಲ್ಲ. ಹಾಗಾಗಿ ನಾವು ಎಲ್ಲಾ ಮುಗಿಸಿ ಬಸ್ಸಿಗೆ ಹೋದಾಗ ೧೫ ರಿಂದ ೨೦ ನಿಮಿಷ ತಡವಾಗಿರಬಹುದು. ಅಶೋಕನನ್ನು ಬಿಟ್ಟು, ಎಲ್ಲರೂ ಬಸ್ಸು ಹತ್ತಿ ಕುಳಿತಾಗಿತ್ತು. ಆಗಲೇ ಸ್ಕ್ವಡ್ರನ್ ಲೀಡರ್ ವಸುಮತಿಯವರು ಹಾರಾಡುತ್ತಿದ್ದರು. ಮೊದಲೇ ನಮ್ಮ ಬಗ್ಗೆ ಕೂಗಾಡಿ ತಾಲೀಮು ನಡೆಸಿದ್ದರು. ನಾವು ಕಂಡ ಕ್ಷಣ ಅವರ ರಂಗಾಯಣ ಶುರುವಾಯಿತು.
"ಕೋಣೆಯಲ್ಲಿ ಏನು ಮಾಡುತ್ತಾ ಇದ್ದಿರಿ ? ಬೇಗ ಮಲಗಿ ಬೇಗ ಏಳಬೇಕು. ನಿಮ್ಮಿಂದಾಗಿ ಲುಕ್ಲಾಗೆ ಹೋಗುವ ವಿಮಾನ ತಪ್ಪಿದರೆ ಸುಮ್ಮನೆ ಬಿಡುವುದಿಲ್ಲ" ಎಂದರು. "We are very sorry for this" ಅಂತ ಜ್ಞಾನಿ ಉಸುರಿದ. ನಾನು ಏನೂ ಹೇಳದೆ ಅವರನ್ನೇ ನೋಡುತ್ತಿದ್ದೆ. ನನ್ನದೇನೂ ತಪ್ಪಿರಲಿಲ್ಲವಲ್ಲ, ತಡ ಮಾಡಿದ್ದು ಜ್ಞಾನಿ ತಾನೆ, ಅಂತ ನಾನು. ಇನ್ನೊಂದು ಏನು ಅರ್ಥವಾಗಲಿಲ್ಲವೆಂದರೆ, ಅಷ್ಟು ತಡವಾಗುತ್ತಿದ್ದರೆ ಯಾರೂ ಯಾಕೆ ಬಂದು ಕರೆಯಲಿಲ್ಲ? ಪ್ರಿಯ ಹೋಗಿ ಕರೆಯುತ್ತೇನೆ ಎಂದು ಹೇಳಿದಾಗ, ”ಆಮಲೆ ನಿನ್ನನ್ನು ಕರೆಯಲು ಜನ ಕಳಿಸಬೇಕಷ್ಟೆ, ಹಾಗಾಗಿ ಇಲ್ಲೇ ಕುಳಿತಿರು. ಅವರು ಬರಲಿ, ಸರಿಯಾಗಿ ಶಾಸ್ತಿ ಮಾಡುತ್ತೇನೆ” ಅಂತ ಹೇಳಿದರಂತೆ. ನಾನು ಏನೂ ಹೇಳದೆ ಇದ್ದುದ್ದರಿಂದ ಅವರ ಸಿಟ್ಟು ಇನ್ನೂ ಏರಿತು. "ನೋಡು ಹೇಗೆ ಸುಮ್ಮನೆ regret ಇಲ್ಲದೆ ಕುಳಿತಿದ್ದೀಯ. You should be crying when i'm telling you all this." ಅಂದರು. ಅದಕ್ಕೂ ಸುಮ್ಮನೆ ಇದ್ದೆ. ಇದರ ಮಧ್ಯೆ ತಡವಾಗಿ ಬಂದ ಅಶೋಕನಿಗೆ ಯಾವ ಬಯ್ಗುಳವೂ ಬೀಳಲಿಲ್ಲ. ನಮಗೆ "ಕೋಣೆಯಲ್ಲೇನು ಜಗಳ ಕಾಯುತ್ತಾ ಇದ್ದಿರ ?’ ಅಂತ ಬಯ್ದಾಗ ಹಿಂದೆ ಕೂತಿದ್ದ ಜನ ಕಿಸಿ ಕಿಸಿ ಅಂತ ನಗುತ್ತಾ ಇದ್ದರು. "ಹ್ಞು ಹ್ಞು ನಗ್ರಿ ಮಕ್ಳಾ.. ನಿಮ್ಮ ಸರದಿಯೂ ಬರುತ್ತದೆ" ಎಂದುಕೊಂಡೆ. ಆದರೆ, ಇನ್ನು ಮುಂದಕ್ಕೆ ನನ್ನಿಂದ ಮಾತ್ರ ಯಾವುದೇ ರೀತಿಯಿಂದ ತಡವಾಗಬಾರದೆಂದು ಯೋಚಿಸಿದೆ, ಹಾಗೆ ಮಾಡಿದೆ ಕೂಡ. ನಂತರದ ದಿನಗಳಲ್ಲಿ ಅಶೋಕ್ ಮತ್ತು ನರೇಶ್ ಬಹಳ ಸಲ ತಡಮಾಡಿದರು. ಆದರೆ ಮೇಡಮ್ ಕೂಗಾಡಿ ಕೂಗಾಡಿ ಸಾಕಾಗಿದ್ದುದ್ದರಿಂದ, ಸಿಟ್ಟು ಈ ರೀತಿ ಮೇಲೇರುತ್ತಲಿರಲಿಲ್ಲ. ಇಂದು ಮೊದಲ ದಿನವಾದ್ದರಿಂದ, ನಮ್ಮನ್ನು ಗುರಿಯಾಗಿ ಇಟ್ಟುಕೊಂಡು, ಬೇರೆಯವರಿಗೆ- ವಸುಮತಿಯವರೊಡನೆ, ತಡಮಾಡಿ ಆಟವಾಡಿದರೆ ಈ ರೀತಿ ಪರಿತಪಿಸಬೇಕಾಗುತ್ತದೆಂದು ಪಾಠ ಕಲಿಸಲು ಇಷ್ಟೆಲ್ಲಾಮಾಡಿದರಂತೆ.
ಕಟ್ಮಂಡು ಇಂದ ಬುದ್ಧ ಏರ್ ಎಂಬ ವಿಮಾನದಲ್ಲಿ ಹೊರಟೆವು. ನಾವು ೧೩ ಜನ ಒಂದು ವಿಮಾನದಲ್ಲಿ ಹಾಗು ಉಳಿದ ೮ ಜನ ಇನ್ನೊಂದು ವಿಮಾನದಲ್ಲಿ ಕುಳಿತೆವು. ನಾವು ಯಾವುದನ್ನೂ ಮಿಸ್ ಮಾಡಬಾರದೆಂದು, ವಿಮಾನದ ಸಣ್ಣ ಕಿಟಕಿಗೆ ಮುಖಅಂಟಿಸಿಕೊಂಡು, ಎವರೆಸ್ಟ್ ಯಾವ ದಿಕ್ಕಿನಲ್ಲಿ ಬರುತ್ತದೆಂದು ಕೇಳಿಕೊಂಡು ಆ ಕಡೆ ನೋಡುತ್ತಾ ಕುಳಿತಿದ್ದೆವು. ದಾರಿಯಲ್ಲಿ,”ಇದ್ಯಾಕೆ ಮೋಡ ಈ ರೀತಿ ಹೊಳೆಯುತ್ತಿದೆ’ ಅಂತ ಅಂದುಕೊಳ್ಳುತ್ತಾ ಇದ್ದೆ, ಆದರೆ ಅದು ಹಿಮಾವೃತ ಪರ್ವತ ಅಂತ ತಿಳಿದಾಗ, ಅಂತೂ ಇಂತಹದೊಂದು ಕಡೆ ಬಂದೆನಲ್ಲಾ ಅಂತ ಉಸಿರು ಬಿಟ್ಟೆ. ನಮಗೆನೂ ಎವರೆಸ್ಟ್ ಕಾಣಸಿಗಲಿಲ್ಲ.
ಲುಕ್ಲಾ ಒಂದು ತುಂಬ ಸಣ್ಣೂರು. ಅಲ್ಲಿ ಬೆಟ್ಟದ ತುದಿಯಲ್ಲಿ ಒಂದು ಸಣ್ಣ ವಿಮಾನ ನಿಲ್ದಾಣವಿದೆ. ಪ್ರಪಂಚದಲ್ಲೇ ಅತೀ ಎತ್ತರದಲ್ಲಿರುವ ವಿಮಾನ ನಿಲ್ದಾಣ ಇದು. ನಾಲ್ಕು ಚಿಕ್ಕ ವಿಮಾನಗಳು ಇಲ್ಲಿ ನಿಲ್ಲುವ ಅನುಕೂಲ ಇದೆ.ಇಲ್ಲಿ ಬೆಟ್ಟದ ಅಂಚಿನವರೆಗೂ ಓಡುವ ಬಹಳ ಕಿರಿದಾದ (೨೦ ಮೀ ಅಗಲ ಇದ್ದು, ಅಂಚಿನಲ್ಲಿ ೭೦೦ ಮೀ ವರೆಗೆ ಬೆಟ್ಟದ ಇಳಿಜಾರಿರುವ) ರನ್ವೆ ಇದೆ. ಹೋಗುವವರು ಮತ್ತು ಬರುವವರು ಎಷ್ಟು ಜನ ಇದ್ದಾರೆ ಅಂತ ನೋಡಿಕೊಂಡು, ಬೆಳಿಗ್ಗೆ ಮಾತ್ರ ವಿಮಾನಗಳನ್ನು ಹಾರಿಸುತ್ತಾರೆ. ಅಲ್ಲಿ ಪೈಲೆಟ್ ಕಿಟಕಿಯಿಂದ ಹೊರ ನೋಡಿಕೊಂಡೆ ವಿಮಾನ ಹಾರಿಸಬೇಕು, ಬೇರೆ ಯಂತ್ರಗಳು ಪರ್ವತಗಳ ನಡುವೆ ಕೆಲಸ ಮಾಡುವುದಿಲ್ಲವಂತೆ. ಹೀಗಾಗಿ ಸ್ವಲ್ಪ ಮೋಡ ಮುಚ್ಚಿದರೂ ವಿಮಾನ ಹಾರಾಟ ರದ್ದು ಮಾಡುತ್ತಾರೆ. ನಾವು ಲುಕ್ಲಾ ತಲುಪಿದಾಗ ಅಲ್ಲಿ, ಹಿಂತಿರುಗಿ ಹೋಗುವ ಕೆಲವು ಪರ್ವತಾರೋಹಿಗಳನ್ನು ಬಿಟ್ಟರೆ ಬರೀ ಪೋರ್ಟರುಗಳೇ ಎಲ್ಲೆಲ್ಲೂ. ಅಲ್ಲಿ ನಾವು ನಮ್ಮ ಕೆಲವು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಅಲ್ಲಿಂದ ’ಫಕ್ದಿಂಗ್’ ಎಂಬ ಜಾಗಕ್ಕೆ ನಡೆಯಲು ಶುರುಮಾಡಿದೆವು. ೩ ಘಂಟೆ ಕಾಲ ನಡೆದೆವು .ಅದು ಬಹಳ ಸುಲಭವಾದ ಇಳಿಜಾರು ದಾರಿ. ಎರಡು ತೂಗು ಸೇತುವೆಗಳನ್ನು ದಾಟಿದೆವು. ಮೊದಲನೆಯದನ್ನು ನೋಡಿದಾಗ, ಎಲ್ಲರೂ ಫೊಟೊ ತೆಗೆದದ್ದೇ ತೆಗೆದದ್ದು. ನಂತರದ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಇಂತಹ ತೂಗು ಸೇತುವೆಗಳನ್ನು ದಾಟಿದೆವು. ಅವು ಎಷ್ಟು ಸುಂದರವಾಗಿದ್ದುವೆಂದರೆ ಅವುಗಳ ಫೋಟೊಗಳನ್ನು ತೆಗೆಯುವುದು ಮಾತ್ರಾ ಕಡಿಮೆಯಾಗಲೇ ಇಲ್ಲ.
ನಮ್ಮ ಟ್ರೆಕ್ ಶುರುವಾದಾಗ ವಸುಮತಿಯವರು ಗುಂಪಿನಲ್ಲಿ ತುಂಬಾ ಶಿಸ್ತನ್ನು ಕಾಪಾಡಿದ್ದರು. ನಮ್ಮ ಸಾಲಿನಲ್ಲಿ, ಮುಂದೆ ವಸುಮತಿಯವರು, ಅವರ ಹಿಂದೆ ತುಂಬಾ ನಿಧಾನವಾಗಿ ಬರುವವರು, ನಂತರ ಸ್ವಲ್ಪ ಅಭ್ಯಾಸ ಇರುವವರು, ಕೊನೆಯಲ್ಲಿ ನಿಪುಣರು. ಬಹುಪಾಲು ಹುಡುಗಿಯರೆಲ್ಲ ಸಾಲಿನ ಮುಂದೇ ಇದ್ದರು. ನಂತರ ಜ್ಞಾನಿ, ಲಖನ್, ಸಂದೀಪ್ ಮತ್ತಿತರು. ಕೊನೆಯಲ್ಲಿ ಉಳಿದೆಲ್ಲ ತಾಕತ್ತಿದ್ದ ಹುಡುಗರು ಮತ್ತು ಸ್ಮಿತಾ. ನಾವು ಕೆಲವರು ಒಂದೊಂದು ಸ್ಕಿ ಕೋಲುಗಳನ್ನು ಹಿಡಿತಕ್ಕಾಗಿ ಹಿಡಿದು ನಡೆಯುತ್ತಿದ್ದೆವು. ಇವುಗಳು ನಮಗೆ ಕೊನೆಯವರೆಗೂ ಸಾಹಾಯಕ್ಕೆ ಬಂದವು. ನಮ್ಮ ದಾರಿ ದೂದ್ ಕೋಸಿ ನದಿ ಪಕ್ಕದಲ್ಲೇ ಹೋಗುತ್ತಿತ್ತು. ಇದು ನೋಡಲು ಬಿಳಿ ಬಿಳಿಯಾಗಿ ನೊರೆನೊರೆಯಾಗಿದ್ದ ಒಂದು ದೊಡ್ಡ ಹಳ್ಳ, ಕೆಲವು ಕಡೆ ಸಣ್ಣ ನದಿ ಎಂದು ಹೇಳಬಹುದು. ಕೊನೆಯವರೆಗೂ ನಾವು ದೂದ್ ಕೋಸಿಯೊಡನೆಯೇ ನಡೆಯುತ್ತಿದ್ದೆವು. ಅದು ಪರ್ವತಗಳ ಮಧ್ಯೆ ಸುತ್ತಿ, ತಿರುಗಿ, ಬಳಸಿ ಮುಂದೆ ಹೋಗುವಂತೆ ನಾವೂ ಹೋಗುತ್ತಿದ್ದೆವು.
ಫಕ್ದಿಂಗ್ (2652 ಮೀ/8698 ಅಡಿ) ತಲುಪಿದಾಗ ೨:೦೦ ಗಂಟೆ. ನಾವು ಊಟ ಮಾಡಿದಾಗ ೩:೦೦ ಗಂಟೆ. ದಿನವೂ ನಾವು ಇದೇ ರೀತಿಯಾಗಿ ೩:೦೦ ಗಂಟೆಯೊಳಗೆ ನಮ್ಮ ಟ್ರೆಕ್ ಮುಗಿಸುತ್ತಿದ್ದೆವು. ಯಾಕೆಂದರೆ ಹಿಮಾಲಯದಲ್ಲಿ ಮಧ್ಯಾನದಷ್ಟೊತ್ತಿಗೆ ವಾತಾವರಣ ಹದಗೆಡುತ್ತದೆ. ಮಂಜು ಕವಿಯುತ್ತದೆ. ನಾವು ತೊಟ್ಟ ಬಟ್ಟೆಗಳೆಲ್ಲವೂ ಬೆವರು ಹಾಗೂ ಥಂಡಿಯಿಂದ ಒದ್ದೆಯಾಗಿರುತ್ತಿದ್ದವು. ಟ್ರೆಕ್ ಮುಗಿದ ತಕ್ಷಣ ನಾವು ಮಮ್ಮೆಲ್ಲ ಬಟ್ಟೆಗಳನ್ನೂ ಬದಲಾಯಿಸಿಕೊಳ್ಳುತ್ತಿದ್ದೆವು. ಹೀಗೆ ಮಾಡದಿದ್ದರೆ ಮುಂದೆ ಕಾಲು, ಮಂಡಿ ಹಾಗೂ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಎಂದು ವಸುಮತಿಯವರು ಹೇಳುತ್ತಿದ್ದರು. ನಂತರ ನಾವೆಲ್ಲಾ ಇಸ್ಪೀಟ್ ಮತ್ತಿತರ ಕುಳಿತು ಆಡುವ ಆಟಗಳಲ್ಲಿ ತೊಡಗಿಕೊಂಡೆವು. ಕೆಲವರು ಹತ್ತಿರದಲ್ಲಿದ್ದ ಕೋಸಿ ನದಿಗೆ ಕಟ್ಟಿದ್ದ ಸೇತುವೆಯ ಹತ್ತಿರ ಹೋಗಿ ಬಂದರು. "ಟ್ರೆಕ್ ಆದ ಮೇಲೆ ಸುಸ್ತಾಗಿದೆ ಅಂತ ಹಾಸಿಗೆ ಕಂಡ ತಕ್ಷಣ ಬಿದ್ದುಕೋಬೇಡಿ. ನಿದ್ದೆಯನ್ನು ಮಾಡದೆ ಹೊರಗಿನ ಹವಾಗೆ ಮೈ, ಕೈ, ಕಿವಿ ಒಡ್ಡುವುದರಿಂದ ’ಆಲ್ಟಿಟ್ಯುಡ್ ಸಿಕ್ನೆಸ್’ ಕಡೆಮೆ ಮಾಡಬಹುದು" ಎಂದು ವಸುಮತಿಯವರು ನಮಗೆ ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ ನಮಗೆ ಎಷ್ಟೇ ಸಾಕಾಗಿದ್ದರೂ ಮಲಗುತ್ತಾ ಇದ್ದದು ರಾತ್ರಿ ೮ ರಿಂದ ೯ರ ಒಳಗೆ. ಮಲಗುವ ಮೊದಲು, ಬೆಳಿಗ್ಗೆ ಏಳುವುದು, ತಿಂಡಿ ತಿನ್ನುವುದು ಹಾಗು ಹೋರಡುವುದನ್ನು ನಿರ್ಧರಿಸಲಾಗುತ್ತಿತ್ತು. ೫-೬-೭ ಅಥವಾ ೬-೭-೮. ಇದಕ್ಕಿಂತ ತಡವಾಗಿ ಎಂದೂ ಹೊರಟಿದ್ದಿಲ್ಲ. ಮುಂದಿನ ನಮ್ಮ ಪಯಣ ನಾಮ್ಚೆ ಬಜಾರ್ ಕಡೆಗೆ.
7 comments:
ತುಂಬಾ ಆಸಕ್ತಿ ಪೂರ್ಣವಾಗಿದೆ.. ಲೇಖನ , ಫೋಟೊ ಎರಡೂ ಒಂದಕ್ಕೊಂದು ಪೂರಕ. ...
Thank you..
ನೀವು ಹಿಮಾಲಯದ ತಪ್ಪಲಿನಲ್ಲಿ ನಡೆದುದಕ್ಕಿಂತ ವೇಗವಾದ ಬರವಣಿಗೆ ನಿಮ್ಮದಾಗಿರುವಂತೆ ಕಾಣುತ್ತದೆ!!! ನಿಧಾನವಾಗಿ ಇನ್ನಷ್ಟು ವಿವರಗಳೊಮದಿಗೆ ಬರೆಯಿರಿ. ಕೆಲವು ಪದಗಳು ಹೆಚ್ಚಿನ ವಿವರಣೆ ಬೇಡುತ್ತವೆ ಎಂಬುದು ನನ್ನ ಅಭಿಪ್ರಾಯ. ಉದಾ;ಆಲ್ಟಿಟ್ಯುಡ್ ಸಿಕ್ನೆಸ್.
ಒಟ್ಟಾರೆ ಲೇಖನ ಸರಣಿ ಖುಷಿ ಕೊಡುತ್ತಿದೆ. ಅಭಿನಂದನೆಗಳು.
ನಿಮ್ಮ ಈ ಲೇಖನದ ಬರವಣಿಗೆ ಸಾಕಷ್ಟು ಮಾಗಿದೆ. ಅದರೊಂದಿಗೆ ಇಲ್ಲಿರುವ ಚಿತ್ರಗಳು ಸೊಗಸಾಗಿವೆ. ತೂಗುಸೇತುವೆಯ ಫೋಟೊವನ್ನು maximum sizeನಲ್ಲಿ ನೋಡಿದಾಗ ಮೈ ಝುಮ್ ಎಂದಿತು.
ನೀವು ತುಂಬಾ ನಿಧಾನ ಕಣ್ರೀ. ಓದೋಕೆ ಕಾಯ್ತಿರ್ತೀವಿ. ಇಷ್ಟು ಲೇಟಾ ಮಾಡೋದು
ನಿಮ್ಮಪ್ರವಾಸ ಕಥನ ಓದಿ ನಾನು ಅಂಗಡಿ ಬಿಟ್ಟು ಪ್ರವಾಸ ಕೈಕೊಂಡರೆ ನೀವೇ ಹೊಣೆ ನೋಡಿ ..
ಫೋಟೋ ..ಬರಹ ..ಚೆಂದ ಅನಿಸಿದವು.
its cool
its cool
Post a Comment