ನಾಮ್ ಚೆ ಬಜಾರ್ (3489mt/11443ft) - ಎವೆರೆಸ್ಟ್ ವ್ಯೂ ಹೊಟೆಲ್ (3860m/12660ft)
ಜ್ಞಾನಿ ಮತ್ತು ಸಂದೀಪ್ ಇಬ್ಬರೂ ಬೆಳಿಗ್ಗೆ ಎದ್ದಾಗ ಸರಿಹೋಗಿದ್ದರು. ಆದರೆ ವಸುಮತಿಯವರ ಅನುಜ್ಞೆಯಂತೆ ಅವರು ಗುಂಪಿನಲ್ಲಿ ಎಲ್ಲರಿಗಿಂತ ಮುಂದೆ, ವಸುಮತಿಯವರ ಹಿಂದೆಯೇ ಇದ್ದರು. ಈ ಎಲ್ಲದರ ಮಧ್ಯೆ, ಅಶೋಕ್ (ಆತ ಒಬ್ಬ ಟ್ರಾವಲ್ ಎಜೆಂಟ್) ತುಂಬಾ ಸುಸ್ತಾಗಿದ್ದ. ಅವನು ತುಂಬಾ ತೆಳ್ಳಗಿದ್ದು, ಬಹಳ ಸ್ಟಾಮಿನ ಇದ್ದರೂ ಯಾಕೋ ಸುಸ್ತಾಗಿದ್ದ. ನಂದಿನಿಗೆ ತಲೆ ನೋವು ಜಾಸ್ತಿಯಾಗಿತ್ತು. ಮೋಹನ್ ತುಂಬಾ ಒಳ್ಳೆಯ ಒಂದು ಕ್ಯಾಮೆರಾ ತಂದಿದ್ದ. ಆದರಲ್ಲಿ ಸಿಕ್ಕಸಿಕ್ಕಲ್ಲೆಲ್ಲಾ ನಿಂತು ಫೊಟೊ ತೆಗೆಯುತ್ತಿದ್ದ. ಇದರ ದೆಸೆಯಿಂದಾಗಿ ಸ್ವಲ್ಪ ಜಾಸ್ತಿನೇ ಹಿಂದೆ ಬೀಳುತ್ತಿದ್ದ. ನಮ್ಮ ಕೆಲವರನ್ನು ಬಿಟ್ಟರೆ ಮೆಕ್ಕವರೆಲ್ಲಾ ಹೈ ಆಲ್ಟಿಟ್ಯುಡ್ ಟ್ರೆಕ್ಕಿಂಗ್ ಅನುಭವ ಇದ್ದವರು. ಈ ಮೋಹನ್ ಹೋದ ವರ್ಷವಷ್ಟೆ ಗಂಗೋತ್ರಿಗೆ ಹೋಗಿದ್ದನಂತೆ. ಅವನು ಯಾಕೊ ಆಗ ಈಗ ಕೆಮ್ಮುತ್ತಲೂ ಇದ್ದ. ಏನಾದರು ಒಂದು ಚೂರು ಕಂಡರೂ ಕೇಳಿದರೂ ವಸುಮತಿಯವರು, ಸ್ವಲ್ಪ ಜಾಸ್ತಿಯೇ ವಿಚರಿಸಿಕೊಳ್ಳುತ್ತಿದ್ದರು. ನಾವು ಅಲ್ಲಿಯೇ ಹತ್ತಿರದಲ್ಲಿದ್ದ ಜಪಾನೀಯರ ಒಂದು ಹೋಟೆಲು - ’ಎವೆರೆಸ್ಟ್ ವ್ಯೂ ಹೊಟೆಲ್’ ಗೆ ಅಕ್ಲಿಮಟೈಸೇಶನ್ ಹೋದೆವು. ಇಂದು ಕೇವಲ ಅಕ್ಲಿಮಟೈಸೇಶನ್ ದಿನವಾದ್ದರಿಂದ ಎಲ್ಲರೂ ಬಹಳ ಗೆಲುವಾಗಿದ್ದರು. ಇದು ಪರೀಕ್ಷೆಯ ಮಧ್ಯೆ ರಜ ಬಂದಂತೆ. ಜ್ಞಾನಿ ಮತ್ತು ಸಂದೀಪ್ ಅಂತೂ ಹಿಂದಿನ ದಿನದ ಘಟನೆಗಳನ್ನು ಸಂಪೂರ್ಣವಾಗಿ ಮರೆತು ಮತ್ತೆ ಅಚೀವರ್ಸ್ ಆಗಿದ್ದರು! ಬೆಂಬಿಡದ ಭೂತದಂತಿದ್ದ ಬೆನ್ನಮೇಲಿನ ಭಾರವಾದ ಚೀಲವಿಲ್ಲದ್ದಿದ್ದುದ್ದರಿಂದ ಎಲ್ಲರೂ ಲಘು ಬಗೆಯಾಗಿ ಬೇಗ ಬೇಗನೆ ಜೋಕುಗಳನ್ನು ಹೇಳಿಕೊಳ್ಳುತ್ತಾ ಒಬ್ಬರ ಮೇಲೆ ಇನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ
ಮೇಲೆ ಹತ್ತುತ್ತಿದ್ದರಿಂದ ಆಯಾಸ ಕಾಣಲಿಲ್ಲ. ಆ ಹೋಟೆಲು, ನಾಮ್ ಚೆ ಬಜಾರ್ ಹಿಂದೆ ಒಂದು ಸಣ್ಣ ಬೆಟ್ಟದ ತುದಿಯಲ್ಲಿದೆ. ಅಲ್ಲಿಂದ ಅಮ್ಮ-ಡಬ್ಲಮ್ ಮತ್ತು ಮೌಂಟೆವೆರೆಸ್ಟ್ ತುದಿಗಳು ಕಾಣಿಸುವುದರಿಂದ ಜಪಾನಿಯರು ಹೋಟಲನ್ನು ಅಲ್ಲಿ ಕಟ್ಟಿ ಅದಕ್ಕೊಂದು ಹೆಲಿಪ್ಯಾಡ್ ಒದಗಿಸಿದ್ದಾರೆ. ಜಪಾನಿಯರು ಈ ಪ್ರಪಂಚದಲ್ಲೇ ಹೆಚ್ಹಿನ ಪರ್ಯಟನೆ ಮಾಡುವವರಂತೆ. ಪ್ರಪಂಚದ ಯಾವ ಜಾಗಕ್ಕೆ ಹೋದರೂ ಒಬ್ಬ ಜಪಾನಿ ಅಲ್ಲೆಲ್ಲೋ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಿರುವುದನ್ನು ನೀವು ಕಾಣಬಹುದು. ಇಲ್ಲೂ ಇಬ್ಬರು ಹೆಂಗಸರು ನಮ್ಮ ನೋಡಿ ನಗುತ್ತಾ ಬೆನ್ನು ಬಗ್ಗಿಸುತ್ತಾ ನಮ್ಮ ಕೈಯಲ್ಲಿ
ಕ್ಯಾಮರ ಕೊಟ್ಟು ತೆಗೆಯಲು ಹೇಳಿದರು. ಜಪಾನಿಯರು, ನೇರವಾಗಿ ಇಲ್ಲಿಗೆ ಹೆಲಿಕಾಪ್ಟರ್ ಅಲ್ಲಿ ಬಂದಿಳಿದು, ಮೌಂಟೆವೆರೆಸ್ಟ್ ಒಡನೆ ಫೋಟೊ ತೆಗೆಸಿಕೊಂಡು ಅಲ್ಲಿಂದ ಹಿಂತಿರುಗುತ್ತಾರಂತೆ ! ಆಗ ಸುಮಾರಾಗಿ ೧೦ ಗಂಟೆ ಇರಬಹುದು. ಮೋಡ ಮುಚ್ಚಿತ್ತು. ನಮಗೆ ಅಲ್ಲಿಂದ ನಮ್ಮ ಮುಂದಿನ ಗುರಿ ತೆಂಗ್ ಬೋ ಚೆ ಕಾಣಿಸಿತೇ ವಿನಃ, ಇನ್ನೇನೂ ಕಾಣಲಿಲ್ಲ. ಹಿಮಾಲಯದಲ್ಲಿ ಹೀಗೆಯೇ. ಸುಮಾರಾಗಿ ೧೦ ರಿಂದ ಮೇಲೆ ಮೋಡ ಮುಚ್ಚಿ ಮುಂದೇನೂ ಕಾಣುವುದುಲ್ಲ. ಆದ್ದರಿಂದಲೇ ನಾವು ಬೆಳಿಗ್ಗೆ ಬೇಗನೆ ಹೊರಟು ಮಧ್ಯಾನದೊಳಗೆ ಗುರಿ ಸೇರಿಬಿಡುತ್ತಿದ್ದೆವು. ಪರ್ವತಾರೋಹಿಗಳು ಮೌಂಟ್ ಎವೆರೆಸ್ಟ್ ತುದಿಮುಟ್ಟಲು ಸುಮಾರು ರಾತ್ರಿ ಹತ್ತು ಗಂಟೆಗೆ ಹೊರಡುತ್ತಾರಂತೆ, ಬೆಳಗಿನ ಜಾವದಲ್ಲಿ ತುದಿ ಮುಟ್ಟಿ ಮಧ್ಯಾನದೊಳಗೆ ಬೇಗನೆ ಕೊನೆಯ ಬೇಸ್ ಕ್ಯಾಂಪಿಗೆ ಬಂದು ಬಿಡುತ್ತಾರಂತೆ. ಹೀಗಿ ಮಾಡದೆ ತಡಮಾಡಿದ ಎಷ್ಟೋ ಪರ್ವತಾರೋಹಿಗಳು ಹವಾಮಾನದ ವೈಪರೀತ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ನಾವು ಎವೆರೆಸ್ಟ್ ವ್ಯೂ ಹೊಟೆಲಲ್ಲಿ ನಿಂಬೆ ಹಣ್ಣಿನ ಬಿಸಿ ಪಾನಕ ಕುಡಿದು, ಸಿಕ್ಕ ಸಿಕ್ಕಸಿಕ್ಕಲ್ಲೆಲ್ಲಾ ಫೊಟೊ ಹೋಡೆದು, ಅಲ್ಲಿ ಇಟ್ಟಿದ್ದ ಇಡೀ ಸಾಗರ ಮಾತಾ ರಾಷ್ಟೀಯ ಉದ್ಯಾನವನದ ಮಾಡಲನ್ನೂ ಫೊಟೊ ತೆಗೆದು, ಅದರಲ್ಲಿದ್ದ ಎಲ್ಲಾ ಪರ್ವತಗಳ ಹೆಸರುಗಳನ್ನು ಉರುಹಚ್ಚಿ (ಮುಂದೆ ಅವುಗಳನ್ನು ಗುರುತಿಸಲು ಬೇಕಾಗುತ್ತಲ್ಲ!) ಹಿಂತಿರುಗಿ ಹೊರಡುವಾಗ ಸುಮಾರಾಗಿ ಮಧ್ಯಾನ ೧ ಗಂಟೆಯಾಗಿತ್ತು.
ದೂರದಲ್ಲಿ ತೆಂಗ್ ಬೋಚೆ, ಅದೇ ದಿಕ್ಕಿನಲ್ಲಿ ಎವರೆಸ್ಟ್ ಕಾಣುವುದು
ನಾವು ಹಿಂತಿರುಗಿ ಬಂದ ಮೇಲೆ, ವಸುಮತಿಯವರು ಒಬ್ಬೊಬ್ಬರನ್ನೇ ವಿಚಾರಿಸಿಕೊಂಡರು. ಅಶೋಕ ಅಕ್ಲಿಮಟೈಸೇಶನ್ ಗೆ ಬಂದಿರಲ್ಲಿಲ್ಲ. ಅವನ ಪ್ರಕಾರ ಅವನಿಗೆ ನಿದ್ದೆ ಇಲ್ಲದೆ ತಲೆ ನೋವಾಗುತ್ತಿದ್ದುದ್ದರಿಂದ, ಅರ್ಧ ದಿನ ನಿದ್ದೆ ಮಾಡಿದರೆ ಎಲ್ಲಾ ಸರಿಯಾಗುತ್ತದೆಂದು ಮಲಗಿಕೊಡಿದ್ದ. ವಸುಮತಿಯವರು ಅವನಿಗೆ ಆಲ್ಟಿಟ್ಯುಡ್ ಸಿಕ್ನೆಸ್ ಬಂದಿದೆಯೆಂದು ಒಪ್ಪಿಸಲು ಹರಸಾಹಸ ಮಾಡುತ್ತಿದ್ದರು. ಅವರ ಕೋಣೆಯಲ್ಲಿ ಅವನನ್ನು ಕೂಡಿಹಾಕಿ, ವಸುಮತಿ ಮತ್ತು ಸ್ಮಿತ ಅವನ ಎಲ್ಲಾ ನಾಡಿಗಳನ್ನು ಒತ್ತಿ ಅವು ಸರಿಯಾಗಿ ಬಡಿದುಕೊಳ್ಳುತ್ತಿವೆಯೆ ಎಂದು ಪರೀಕ್ಷಿಸಿದರು. ಇತರ ಕೆಲವು ವ್ಯಾಯಾಮಗಳನ್ನು ಮಾಡಿಸಿ, ಕೊನೆಗೂ ಅವನು ಪ್ರಯಾಣವನ್ನು ಮುಂದುವರಿಸಬಹುದೆಂದು ಘೋಷಿಸಿ ಕಳುಹಿಸಿದರು. ನಾವೆಲ್ಲಾ ಮಧ್ಯಾನದ ಊಟ ಮಾಡಿ, ನಮಗೆ ಬೇಕಾದ ಸಾಮಾನುಗಳನ್ನು ಕೋಳ್ಳಲು ಹೊರಟೆವು. ನಾಮ್ ಚೆಯಲ್ಲಿ ಬಹಳ ಅಂಗಡಿಗಳಿವೆ. ಪ್ರತಿ ಶನಿವಾರ ಅಲ್ಲಿ ಸಂತೆ ! ಇಲ್ಲಿ ಯುರೋಪಿಯನ್ ಜನ ಬಹಳ ಬರುವುದರಿಂದಲೋ ಎನೋ, ಬಹಳ ಬೇಕರಿಗಳಿದ್ದು, ಪಿಜಾಗಳು, ಕೇಕುಗಳು ಮತ್ತು ಬಾಯಿ ನೀರೂರುವ ಇನ್ನೂ ಏನೇನೋಗಳು ಅಲ್ಲಿ ಇದ್ದವು. ಸುಮಾರಾಗಿ ಮಿಕ್ಕೆಲ್ಲಾ ಅಂಗಡಿಗಳಲ್ಲಿ ಬರೀ ಪರ್ವತಾರೋಹಿಗಳಿಗೆ ಬೇಕಾದ ಸಾಮಾನುಗಳು ದೊರೆಯುತ್ತವ. ಅವು ಒರಿಜಿನಲ್ ಅಲ್ಲದಿದ್ದರೂ ಮೇಡ್ ಇನ್ ಚೈನಾದು. ಒಳ್ಳೆಯ ಗುಣಮಟ್ಟದವು ಹಾಗು ಕಡೆಮೆ ಬೆಲೆ ಕೂಡ. ಟ್ರೆಕ್ಕಿಂಗ್ ಹೋಗುವವರಿಗೆ ನನ್ನ ಕಿವಿಮಾತೇನೆಂದರೆ, ಟ್ರೆಕ್ಕಿಂಗೆ ಬೇಕಾದ ಎಲ್ಲಾ ಸಾಮಾನು ಸರಂಜಾಮುಗಳನ್ನು ಇಲ್ಲಿ ಅಥವಾ ಖಟ್ಮಂಡುವಿನಲ್ಲಿ ಕೋಳ್ಳುವುದೇ ಒಳ್ಳೆಯದು. ಬೆಂಗಳೂರಿನಲ್ಲಿ ಇಲ್ಲಿಗಿಂತ ೬ ಪಟ್ಟು ದುಬಾರಿ! ಜ್ಞಾನಿ ಮಂಡಿಗೆ, ಪಾದದ ಮಣಿಕಟ್ಟಿಗೆ, ಎಲ್ಲಾಕಡೆಗೂ ಪ್ಯಾಡ್ ಕೊಂಡ. ಬಹುಪಾಲು ಎಲ್ಲರಿಗೂ ಲಫೂಮ ಶೂಗಳು ತೊಂದರೆ ಕೊಡುತ್ತಿದ್ದವು. ತಡೆಯಲಾರದೆ ಕೆಲವರು ಬೇರೆ ಶೂ ಕೊಂಡರು. ಇಲ್ಲಿ ಇಂಟರ್ ನೆಟ್ ಬಹಳ ಚೀಪು. ನಾವು 11443 ಅಡಿ ಎತ್ತರದಿಂದ ಎಲ್ಲರಿಗೂ ಈ-ಮೇಲ್ ಕಳಿಹಿಸಿದೆವು, ಫೋನ್ ಮಾಡಿದೆವು. ಅಮ್ಮ ಒಂತೂ ”ಎಲ್ಲಾರೂ ಹುಷಾರಾಗಿದ್ದೀರ ಅಲ್ಲವೇ ? ಮನೆಯೊಲ್ಲೊಂದು ಮಗು ಬಿಟ್ಟು ಹೋಗಿದ್ದೀಯ ಎಂದು ನೆನಪಿರಲಿ" ಎಂದು ಅಲ್ಲೂ ಹಿತವಚನ ಕೊಡಲು ಶುರುಮಾಡಿದರು. ದೇವರಿಗೆ ಎಲ್ಲಾಕಡೆಗೆ ಒಂದೇ ಸಮಯದಲ್ಲಿ ಇರಲು ಸಾಧ್ಯವಾಗುವುದಿಲ್ಲವೆಂದು, ತಾಯಂದಿರನ್ನು ಇಟ್ಟಿದ್ದಾನಂತೆ! ನನಗೇನಾದರೂ ಆದ್ದಲ್ಲಿ, ನನ್ನ ’ದುರಾದೃಷ್ಟ’ಕ್ಕೆ ಅಮ್ಮ ಹೇಳಿದ್ದನ್ನು ಹೇಳಿ ಓಡಿಸುತ್ತೇನೆ ಎಂದು ಕೊಂಡೆ.
ಅಂದು ಒಬ್ಬಳು ಜರ್ಮನ್ ಹೆಂಗಸಿಗೆ ಅಲ್ಲಿನ ಲೋಕಲ್ ಹುಡುಗರಿಬ್ಬರು ರೇಪ್ ಮಾಡಿದ್ದರಂತೆ, ಅವಳ ಬಾಯ್ ಫ್ರೆಂಡ್ ಅಂಗಡಿಯಲ್ಲಿ ಏನೋ ತರಲು ಹೋಗಿದ್ದಾಗ ಇದು ನಡೆಯಿತಂತೆ. ಅಲ್ಲಿಯ ಜನ ಬಹಳ ಒಳ್ಳೆಯವರು. ಈ ರೀತಿಯ ಯಾವುದೇ ಕಹಿ ಘಟನೆಗಳು ಬಹಳ ಅಪರೂಪ. ನಾವು ಹಿಂತಿರುಗಿಬರುವಾಗ ಜ್ಞಾನಿ ಅಲ್ಲಿ ಕಂಡ ಸೈನಿಕನನ್ನು ಅಪರಾಧಿಗಳನ್ನು ಹಿಡಿಯಲಾಯ್ತ ? ಎಂದು ಕೇಳಿದ. ಅವರು ಸಿಕ್ಕಿಹಾಕಿಕೊಡರೆಂದು, ಹಾಗು ಅವರಿಗೆ ೧೭ ವರ್ಷಗಳ ಖಾರಾಗೃಹ ಶಿಕ್ಷೆ ವಿಧಿಸಲಾಗಿದೆ. "ಮುಂದೆ ಬರುವ ಟ್ರೆಕ್ಕರ್ ಗಳು ಭಯ ಬೀಳಬಾರದೆಂದು ಹೀಗೆ ಮಾಡಲಾಗಿದೆ, ಅದರೆ ಅವರದ್ದೇನೂ ತಪ್ಪಿರಲಿಲ್ಲ, ಆ ಹುಡುಗಿ ಸುಮ್ಮನೆ... " ಅಂತ ಗೊಣಗಿಕೊಂಡ. ಈ ಘಟನೆಯಿಂದ ವಸುಮತಿಯವರು, ಇನ್ನು ಮುಂದಿನ ದಿನಗಳಲ್ಲಿ ಪ್ರತೀ ಹುಡುಗಿಯೂ ಕೊನೆಯ ಪಕ್ಷ ಒಬ್ಬ ಹುಡುಗನೊಡನೆಯಾದರು ಬರಬೇಕೆಂದು ಆಜ್ಞೆ ಹೊರಡಿಸಿದರು. ಸಂಜೆ ನಂದಿನಿಗೆ ಎಷ್ಟು ತಲೆನೋವಾಗುತ್ತಿತ್ತೆಂದರೆ, ಅವಳೂ ಹಾಗು ಅಶೋಕ್ ಚೇತರಿಸಿಕೊಳ್ಳದಿದ್ದಲ್ಲಿ, ಅವರನ್ನು ಹಿಂದೆ ಬಿಟ್ಟು ನಾವು ಮುಂದೆ ಹೋಗುವುದೆಂದು ವಸುಮತಿಯವರು ನಿರ್ಧರಿಸಿದರು.
ಮೇಲೆ ಮೇಲೆ ಹೋದಂತೆ ಥಂಡಿಯಿಂದ ರಾತ್ರಿಗಳು ಬಹಳ ಅಸಹನೀಯವಾಗಿರಲು ಪ್ರಾರಂಭವಾಗಿದ್ದವು. ಅಲ್ಲಿ ಯಾವ ಹೋಟಲಿನಲ್ಲೂ ಹೀಟರುಗಳು ಇರಲಿಲ್ಲ. ಅಲ್ಲಿ ಬುಕಾರಿ ಎಂಬ ಒಂದು ರೀತಿಯ ಒಲೆಯನ್ನು ಇದ್ದಲಿನಿಂದ ಹಚ್ಚಿಸಿಡುತ್ತಿದ್ದರು. ಅದರ ಮೇಲೆ ಬಿಸಿ ನೀರಿನ ಕೆಟಲು ಇತ್ತಿರುತ್ತಿದ್ದರು. ಅದರಲ್ಲಿ ಯಾವಾಗಲೂ ಬಿಸಿ ನೀರು ಇರುತ್ತಿತ್ತು. ಇದು ಇಡೀ ಕೋಣೆಯನ್ನು ಬೆಚ್ಚಗಿಡುತ್ತಿತ್ತು. ನಾವು ಯಾವಾಗಲು ಬುಕಾರಿಯ ಸುತ್ತ ಕುಳಿತು ಊಟ ಮಾಡಿ ಆಟ ಆಡುತ್ತಿರುತ್ತಿದ್ದೆವು. ಮೇಲೆ ಮೇಲೆ ಹೋದಂತೆ ನಾವು ಬಿಸಿ ನೀರನ್ನು ಸಹ ಹಣ ಕೊಟ್ಟು ಕೊಳ್ಳಬೇಕು. ಥಂಡಿ ನೀರೊಂತು ಕುಡಿಯಲಸಾಧ್ಯ. ಅಲ್ಲಿ ಎಲ್ಲ ಸಾಮಾನುಗಳನ್ನೂ ಬೆನ್ನ ಮೇಲೆ ಹೊತ್ತು ತರಬೇಕಾದ್ದುದ್ದರಿಂದ ಗ್ಯಾಸ್ ಬಹಳ ದುಬಾರಿ. ನಾಮ್ ಚೆವರೆಗೆ ಮಾತ್ರ ವಿದ್ಯುಚ್ಚಕ್ತಿ ಇದೆ. ಹಾಗಾಗಿ ಮೇಲೆ ಮೇಲೆ ಹೋದಂತೆ, ಗ್ಯಾಸನ್ನು ಬರಿ ಊಟಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾಮ್ ಚೆಯಲ್ಲಿ ಗ್ಯಾಸ್ ಗೀಜರಿಂದ ಬೆಸಿಮಾಡಿದ್ದ ನೀರಿನ ಸ್ನಾನ ಸಾಧ್ಯವಿತ್ತು. ಒಂದು ಸ್ನಾನಕ್ಕೆ ೨೦೦ ನೇಪಾಲಿ ರುಪಾಯಿಗಳು. ಆದರೆ ಈ ಥಂಡಿಯಲ್ಲಿ ನಮಗೆ ಯಾರಿಗೂ ಬಟ್ಟೆ ಬಿಚ್ಚುವ ಉತ್ಸಾಹ ಇರಲಿಲ್ಲ. ನಾಮ್ ಚೆ ಇಂದ ಮುಂದಕ್ಕೆ ಸ್ನಾನದ ಮನೆಗಳೇ ಇರಲಿಲ್ಲ! ನಾವು ಕಟ್ಮಂಡು ಬಿಟ್ಟ ಮೇಲೆ ಸ್ನಾನವೇ ಮಾಡಿರಲಿಲ್ಲ. ನಾಳೆ ತೆಂಗ್ ಬೋಚೆಗೆ ಹೊರಡುವವರಿದ್ದೆವು. ಎಂದಿನಂತೆ ೫-೬-೭ ಎಂದು ಸಿರ್ಧರಿಸಿ ಥಂಡಿಯನ್ನು ಶಪಿಸುತ್ತಾ ಮಲಗಲು ತೆರಳಿದೆವು.
6 comments:
ತುಂಬಾ ಕಾಯಿಸಿಬಿಟ್ರಿ.ಕಡೆಗೂ ಬರೆದ್ರಲ್ಲ!ಈ ಬಾರಿ ಚಿತ್ರಗಳೇ ಇಲ್ಲ.ಸ್ವಲ್ಪ ನಿರಾಶೆ ಆಯಿತು.
ದೇವರಿಗೆ ಎಲ್ಲಾಕಡೆಗೆ ಒಂದೇ ಸಮಯದಲ್ಲಿ ಇರಲು ಸಾಧ್ಯವಾಗುವುದಿಲ್ಲವೆಂದು, ತಾಯಂದಿರನ್ನು ಇಟ್ಟಿದ್ದಾನಂತೆ! ನನಗೇನಾದರೂ ಆದ್ದಲ್ಲಿ, ನನ್ನ ’ದುರಾದೃಷ್ಟ’ಕ್ಕೆ ಅಮ್ಮ ಹೇಳಿದ್ದನ್ನು ಹೇಳಿ ಓಡಿಸುತ್ತೇನೆ ಎಂದು ಕೊಂಡೆ.(ಇದೇನೆಂದು ಅರ್ಥವಾಗಲಿಲ್ಲ.)
ಧನ್ಯವಾದ
ಅಶೋಕ ಉಚ್ಚಂಗಿ
http://mysoremallige01.blogspot.com/
ಕ್ಷಮಿಸಿ..ಚಿತ್ರಗಳಿವೆ.ನಾನು ಓದುವ ಭರದಲ್ಲಿ ಚಿತ್ರಗಳು ಓಪನ್ ಆಗಲಿಲ್ಲ ಪಾಪ!
ಅಶೋಕ ಉಚ್ಚಂಗಿ.
ಮೇಡಂ ನಿಮಗೆ ಮತ್ತು ನಿಮ್ಮ ಮನೆಯವರೆಲ್ಲರಿಗೂ, ಶ್ರೀಮತಿ ರಾಜೇಶ್ವರಿಯವರಿಗೂ ಹೊಸ ವರ್ಷದ ಶುಭಾಶಯಗಳು. ಲೇಖನ ಚೆನ್ನಾಗಿದೆ. ಶಾಪಿಂಗ್ ಬಗೆಗಿನ ಕಿವಿಮಾತುಗಳು ಬೆಂಗಳೂರಿನ ಅಂಗಡಿಯವರನ್ನು ಬೆಚ್ಚಿಬೀಳಿಸದಿರಲಿ! ದೇವರಿಗೆ ಎಲ್ಲಾಕಡೆಗೆ ಒಂದೇ ಸಮಯದಲ್ಲಿ ಇರಲು ಸಾಧ್ಯವಾಗುವುದಿಲ್ಲವೆಂದು, ತಾಯಂದಿರನ್ನು ಇಟ್ಟಿದ್ದಾನಂತೆ! ಈ ಮಾತು ಎಷ್ಟೊಂದು ಸತ್ಯ. ಧನ್ಯವಾದಗಳು.
ಹೊಸ ವರ್ಷದ ಶುಭಾಶಯಗಳು.
ಈಶಾನ್ಯೆ ಅವರೇ, ನಿಮ್ಮ ಲೇಖನ ಬಹಳ ಚೆನ್ನಾಗಿ ಬರುತ್ತಿದೆ. ನಾನಂತೂ ಪ್ರತಿ ದಿನ ಹೊಸ ಲೇಖನಕ್ಕಾಗಿ ಕಾಯ್ತಾ ಇರ್ತೀನಿ. ಇಷ್ಟು ಓದಿದ ಮೇಲೆ, Everest base camp trip ಅನ್ನ ನನ್ನ bucket list ನಲ್ಲಿ ಹಾಕಿಕೊಂಡಿದೀನಿ. ಧನ್ಯವಾದಗಳು.
odi santoshavayitu. purti illavalla kathana?
ಈಗಿನ ಜಪಾನ್ ಅನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
ಆದಷ್ಟು ಬೇಗ ಜಪಾನ್ ಚೇತರಿಸಿಕೊಂಡು ಮೇಲೆದ್ದು ಬರಲಿ ಎಂದು ಹಾರೈಸೋಣ
Post a Comment