Saturday, December 27, 2008

ಜಪಾನಿಯರ ಎವೆರೆಸ್ಟ್ ವ್ಯೂ ಹೊಟೆಲ್

ಐದನೇ ದಿನ (ಮೇ ೭, ೨೦೦೮)
ನಾಮ್ ಚೆ ಬಜಾರ್ (3489mt/11443ft) - ಎವೆರೆಸ್ಟ್ ವ್ಯೂ ಹೊಟೆಲ್ (3860m/12660ft)

ಜ್ಞಾನಿ ಮತ್ತು ಸಂದೀಪ್ ಇಬ್ಬರೂ ಬೆಳಿಗ್ಗೆ ಎದ್ದಾಗ ಸರಿಹೋಗಿದ್ದರು. ಆದರೆ ವಸುಮತಿಯವರ ಅನುಜ್ಞೆಯಂತೆ ಅವರು ಗುಂಪಿನಲ್ಲಿ ಎಲ್ಲರಿಗಿಂತ ಮುಂದೆ, ವಸುಮತಿಯವರ ಹಿಂದೆಯೇ ಇದ್ದರು. ಈ ಎಲ್ಲದರ ಮಧ್ಯೆ, ಅಶೋಕ್ (ಆತ ಒಬ್ಬ ಟ್ರಾವಲ್ ಎಜೆಂಟ್) ತುಂಬಾ ಸುಸ್ತಾಗಿದ್ದ. ಅವನು ತುಂಬಾ ತೆಳ್ಳಗಿದ್ದು, ಬಹಳ ಸ್ಟಾಮಿನ ಇದ್ದರೂ ಯಾಕೋ ಸುಸ್ತಾಗಿದ್ದ. ನಂದಿನಿಗೆ ತಲೆ ನೋವು ಜಾಸ್ತಿಯಾಗಿತ್ತು. ಮೋಹನ್ ತುಂಬಾ ಒಳ್ಳೆಯ ಒಂದು ಕ್ಯಾಮೆರಾ ತಂದಿದ್ದ. ಆದರಲ್ಲಿ ಸಿಕ್ಕಸಿಕ್ಕಲ್ಲೆಲ್ಲಾ ನಿಂತು ಫೊಟೊ ತೆಗೆಯುತ್ತಿದ್ದ. ಇದರ ದೆಸೆಯಿಂದಾಗಿ ಸ್ವಲ್ಪ ಜಾಸ್ತಿನೇ ಹಿಂದೆ ಬೀಳುತ್ತಿದ್ದ. ನಮ್ಮ ಕೆಲವರನ್ನು ಬಿಟ್ಟರೆ ಮೆಕ್ಕವರೆಲ್ಲಾ ಹೈ ಆಲ್ಟಿಟ್ಯುಡ್ ಟ್ರೆಕ್ಕಿಂಗ್ ಅನುಭವ ಇದ್ದವರು. ಈ ಮೋಹನ್ ಹೋದ ವರ್ಷವಷ್ಟೆ ಗಂಗೋತ್ರಿಗೆ ಹೋಗಿದ್ದನಂತೆ. ಅವನು ಯಾಕೊ ಆಗ ಈಗ ಕೆಮ್ಮುತ್ತಲೂ ಇದ್ದ. ಏನಾದರು ಒಂದು ಚೂರು ಕಂಡರೂ ಕೇಳಿದರೂ ವಸುಮತಿಯವರು, ಸ್ವಲ್ಪ ಜಾಸ್ತಿಯೇ ವಿಚರಿಸಿಕೊಳ್ಳುತ್ತಿದ್ದರು. ನಾವು ಅಲ್ಲಿಯೇ ಹತ್ತಿರದಲ್ಲಿದ್ದ ಜಪಾನೀಯರ ಒಂದು ಹೋಟೆಲು - ’ಎವೆರೆಸ್ಟ್ ವ್ಯೂ ಹೊಟೆಲ್’ ಗೆ ಅಕ್ಲಿಮಟೈಸೇಶನ್ ಹೋದೆವು. ಇಂದು ಕೇವಲ ಅಕ್ಲಿಮಟೈಸೇಶನ್ ದಿನವಾದ್ದರಿಂದ ಎಲ್ಲರೂ ಬಹಳ ಗೆಲುವಾಗಿದ್ದರು. ಇದು ಪರೀಕ್ಷೆಯ ಮಧ್ಯೆ ರಜ ಬಂದಂತೆ. ಜ್ಞಾನಿ ಮತ್ತು ಸಂದೀಪ್ ಅಂತೂ ಹಿಂದಿನ ದಿನದ ಘಟನೆಗಳನ್ನು ಸಂಪೂರ್ಣವಾಗಿ ಮರೆತು ಮತ್ತೆ ಅಚೀವರ್ಸ್ ಆಗಿದ್ದರು! ಬೆಂಬಿಡದ ಭೂತದಂತಿದ್ದ ಬೆನ್ನಮೇಲಿನ ಭಾರವಾದ ಚೀಲವಿಲ್ಲದ್ದಿದ್ದುದ್ದರಿಂದ ಎಲ್ಲರೂ ಲಘು ಬಗೆಯಾಗಿ ಬೇಗ ಬೇಗನೆ ಜೋಕುಗಳನ್ನು ಹೇಳಿಕೊಳ್ಳುತ್ತಾ ಒಬ್ಬರ ಮೇಲೆ ಇನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ

ಎವೆರೆಸ್ಟ್ ವ್ಯೂ ಹೊಟೆಲ್ ಗೆ ಹೋಗುವ ದಾರಿ

ಮೇಲೆ ಹತ್ತುತ್ತಿದ್ದರಿಂದ ಆಯಾಸ ಕಾಣಲಿಲ್ಲ. ಆ ಹೋಟೆಲು, ನಾಮ್ ಚೆ ಬಜಾರ್ ಹಿಂದೆ ಒಂದು ಸಣ್ಣ ಬೆಟ್ಟದ ತುದಿಯಲ್ಲಿದೆ. ಅಲ್ಲಿಂದ ಅಮ್ಮ-ಡಬ್ಲಮ್ ಮತ್ತು ಮೌಂಟೆವೆರೆಸ್ಟ್ ತುದಿಗಳು ಕಾಣಿಸುವುದರಿಂದ ಜಪಾನಿಯರು ಹೋಟಲನ್ನು ಅಲ್ಲಿ ಕಟ್ಟಿ ಅದಕ್ಕೊಂದು ಹೆಲಿಪ್ಯಾಡ್ ಒದಗಿಸಿದ್ದಾರೆ. ಜಪಾನಿಯರು ಈ ಪ್ರಪಂಚದಲ್ಲೇ ಹೆಚ್ಹಿನ ಪರ್ಯಟನೆ ಮಾಡುವವರಂತೆ. ಪ್ರಪಂಚದ ಯಾವ ಜಾಗಕ್ಕೆ ಹೋದರೂ ಒಬ್ಬ ಜಪಾನಿ ಅಲ್ಲೆಲ್ಲೋ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಿರುವುದನ್ನು ನೀವು ಕಾಣಬಹುದು. ಇಲ್ಲೂ ಇಬ್ಬರು ಹೆಂಗಸರು ನಮ್ಮ ನೋಡಿ ನಗುತ್ತಾ ಬೆನ್ನು ಬಗ್ಗಿಸುತ್ತಾ ನಮ್ಮ ಕೈಯಲ್ಲಿ
ಪ್ರಿಯ, ದೀಪಿಕಾ (ದಂತವೈದ್ಯೆ) ಹಾಗು ನಾನು ಎವೆರೆಸ್ಟ್ ವ್ಯೂ ಹೋಟೆಲಲ್ಲಿ

ಕ್ಯಾಮರ ಕೊಟ್ಟು ತೆಗೆಯಲು ಹೇಳಿದರು. ಜಪಾನಿಯರು, ನೇರವಾಗಿ ಇಲ್ಲಿಗೆ ಹೆಲಿಕಾಪ್ಟರ್ ಅಲ್ಲಿ ಬಂದಿಳಿದು, ಮೌಂಟೆವೆರೆಸ್ಟ್ ಒಡನೆ ಫೋಟೊ ತೆಗೆಸಿಕೊಂಡು ಅಲ್ಲಿಂದ ಹಿಂತಿರುಗುತ್ತಾರಂತೆ ! ಆಗ ಸುಮಾರಾಗಿ ೧೦ ಗಂಟೆ ಇರಬಹುದು. ಮೋಡ ಮುಚ್ಚಿತ್ತು. ನಮಗೆ ಅಲ್ಲಿಂದ ನಮ್ಮ ಮುಂದಿನ ಗುರಿ ತೆಂಗ್ ಬೋ ಚೆ ಕಾಣಿಸಿತೇ ವಿನಃ, ಇನ್ನೇನೂ ಕಾಣಲಿಲ್ಲ. ಹಿಮಾಲಯದಲ್ಲಿ ಹೀಗೆಯೇ. ಸುಮಾರಾಗಿ ೧೦ ರಿಂದ ಮೇಲೆ ಮೋಡ ಮುಚ್ಚಿ ಮುಂದೇನೂ ಕಾಣುವುದುಲ್ಲ. ಆದ್ದರಿಂದಲೇ ನಾವು ಬೆಳಿಗ್ಗೆ ಬೇಗನೆ ಹೊರಟು ಮಧ್ಯಾನದೊಳಗೆ ಗುರಿ ಸೇರಿಬಿಡುತ್ತಿದ್ದೆವು. ಪರ್ವತಾರೋಹಿಗಳು ಮೌಂಟ್ ಎವೆರೆಸ್ಟ್ ತುದಿಮುಟ್ಟಲು ಸುಮಾರು ರಾತ್ರಿ ಹತ್ತು ಗಂಟೆಗೆ ಹೊರಡುತ್ತಾರಂತೆ, ಬೆಳಗಿನ ಜಾವದಲ್ಲಿ ತುದಿ ಮುಟ್ಟಿ ಮಧ್ಯಾನದೊಳಗೆ ಬೇಗನೆ ಕೊನೆಯ ಬೇಸ್ ಕ್ಯಾಂಪಿಗೆ ಬಂದು ಬಿಡುತ್ತಾರಂತೆ. ಹೀಗಿ ಮಾಡದೆ ತಡಮಾಡಿದ ಎಷ್ಟೋ ಪರ್ವತಾರೋಹಿಗಳು ಹವಾಮಾನದ ವೈಪರೀತ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ನಾವು ಎವೆರೆಸ್ಟ್ ವ್ಯೂ ಹೊಟೆಲಲ್ಲಿ ನಿಂಬೆ ಹಣ್ಣಿನ ಬಿಸಿ ಪಾನಕ ಕುಡಿದು, ಸಿಕ್ಕ ಸಿಕ್ಕಸಿಕ್ಕಲ್ಲೆಲ್ಲಾ ಫೊಟೊ ಹೋಡೆದು, ಅಲ್ಲಿ ಇಟ್ಟಿದ್ದ ಇಡೀ ಸಾಗರ ಮಾತಾ ರಾಷ್ಟೀಯ ಉದ್ಯಾನವನದ ಮಾಡಲನ್ನೂ ಫೊಟೊ ತೆಗೆದು, ಅದರಲ್ಲಿದ್ದ ಎಲ್ಲಾ ಪರ್ವತಗಳ ಹೆಸರುಗಳನ್ನು ಉರುಹಚ್ಚಿ (ಮುಂದೆ ಅವುಗಳನ್ನು ಗುರುತಿಸಲು ಬೇಕಾಗುತ್ತಲ್ಲ!) ಹಿಂತಿರುಗಿ ಹೊರಡುವಾಗ ಸುಮಾರಾಗಿ ಮಧ್ಯಾನ ೧ ಗಂಟೆಯಾಗಿತ್ತು.

ದೂರದಲ್ಲಿ ತೆಂಗ್ ಬೋಚೆ, ಅದೇ ದಿಕ್ಕಿನಲ್ಲಿ ಎವರೆಸ್ಟ್ ಕಾಣುವುದು

ನಾವು ಹಿಂತಿರುಗಿ ಬಂದ ಮೇಲೆ, ವಸುಮತಿಯವರು ಒಬ್ಬೊಬ್ಬರನ್ನೇ ವಿಚಾರಿಸಿಕೊಂಡರು. ಅಶೋಕ ಅಕ್ಲಿಮಟೈಸೇಶನ್ ಗೆ ಬಂದಿರಲ್ಲಿಲ್ಲ. ಅವನ ಪ್ರಕಾರ ಅವನಿಗೆ ನಿದ್ದೆ ಇಲ್ಲದೆ ತಲೆ ನೋವಾಗುತ್ತಿದ್ದುದ್ದರಿಂದ, ಅರ್ಧ ದಿನ ನಿದ್ದೆ ಮಾಡಿದರೆ ಎಲ್ಲಾ ಸರಿಯಾಗುತ್ತದೆಂದು ಮಲಗಿಕೊಡಿದ್ದ. ವಸುಮತಿಯವರು ಅವನಿಗೆ ಆಲ್ಟಿಟ್ಯುಡ್ ಸಿಕ್ನೆಸ್ ಬಂದಿದೆಯೆಂದು ಒಪ್ಪಿಸಲು ಹರಸಾಹಸ ಮಾಡುತ್ತಿದ್ದರು. ಅವರ ಕೋಣೆಯಲ್ಲಿ ಅವನನ್ನು ಕೂಡಿಹಾಕಿ, ವಸುಮತಿ ಮತ್ತು ಸ್ಮಿತ ಅವನ ಎಲ್ಲಾ ನಾಡಿಗಳನ್ನು ಒತ್ತಿ ಅವು ಸರಿಯಾಗಿ ಬಡಿದುಕೊಳ್ಳುತ್ತಿವೆಯೆ ಎಂದು ಪರೀಕ್ಷಿಸಿದರು. ಇತರ ಕೆಲವು ವ್ಯಾಯಾಮಗಳನ್ನು ಮಾಡಿಸಿ, ಕೊನೆಗೂ ಅವನು ಪ್ರಯಾಣವನ್ನು ಮುಂದುವರಿಸಬಹುದೆಂದು ಘೋಷಿಸಿ ಕಳುಹಿಸಿದರು. ನಾವೆಲ್ಲಾ ಮಧ್ಯಾನದ ಊಟ ಮಾಡಿ, ನಮಗೆ ಬೇಕಾದ ಸಾಮಾನುಗಳನ್ನು ಕೋಳ್ಳಲು ಹೊರಟೆವು. ನಾಮ್ ಚೆಯಲ್ಲಿ ಬಹಳ ಅಂಗಡಿಗಳಿವೆ. ಪ್ರತಿ ಶನಿವಾರ ಅಲ್ಲಿ ಸಂತೆ ! ಇಲ್ಲಿ ಯುರೋಪಿಯನ್ ಜನ ಬಹಳ ಬರುವುದರಿಂದಲೋ ಎನೋ, ಬಹಳ ಬೇಕರಿಗಳಿದ್ದು, ಪಿಜಾಗಳು, ಕೇಕುಗಳು ಮತ್ತು ಬಾಯಿ ನೀರೂರುವ ಇನ್ನೂ ಏನೇನೋಗಳು ಅಲ್ಲಿ ಇದ್ದವು. ಸುಮಾರಾಗಿ ಮಿಕ್ಕೆಲ್ಲಾ ಅಂಗಡಿಗಳಲ್ಲಿ ಬರೀ ಪರ್ವತಾರೋಹಿಗಳಿಗೆ ಬೇಕಾದ ಸಾಮಾನುಗಳು ದೊರೆಯುತ್ತವ. ಅವು ಒರಿಜಿನಲ್ ಅಲ್ಲದಿದ್ದರೂ ಮೇಡ್ ಇನ್ ಚೈನಾದು. ಒಳ್ಳೆಯ ಗುಣಮಟ್ಟದವು ಹಾಗು ಕಡೆಮೆ ಬೆಲೆ ಕೂಡ. ಟ್ರೆಕ್ಕಿಂಗ್ ಹೋಗುವವರಿಗೆ ನನ್ನ ಕಿವಿಮಾತೇನೆಂದರೆ, ಟ್ರೆಕ್ಕಿಂಗೆ ಬೇಕಾದ ಎಲ್ಲಾ ಸಾಮಾನು ಸರಂಜಾಮುಗಳನ್ನು ಇಲ್ಲಿ ಅಥವಾ ಖಟ್ಮಂಡುವಿನಲ್ಲಿ ಕೋಳ್ಳುವುದೇ ಒಳ್ಳೆಯದು. ಬೆಂಗಳೂರಿನಲ್ಲಿ ಇಲ್ಲಿಗಿಂತ ೬ ಪಟ್ಟು ದುಬಾರಿ! ಜ್ಞಾನಿ ಮಂಡಿಗೆ, ಪಾದದ ಮಣಿಕಟ್ಟಿಗೆ, ಎಲ್ಲಾಕಡೆಗೂ ಪ್ಯಾಡ್ ಕೊಂಡ. ಬಹುಪಾಲು ಎಲ್ಲರಿಗೂ ಲಫೂಮ ಶೂಗಳು ತೊಂದರೆ ಕೊಡುತ್ತಿದ್ದವು. ತಡೆಯಲಾರದೆ ಕೆಲವರು ಬೇರೆ ಶೂ ಕೊಂಡರು. ಇಲ್ಲಿ ಇಂಟರ್ ನೆಟ್ ಬಹಳ ಚೀಪು. ನಾವು 11443 ಅಡಿ ಎತ್ತರದಿಂದ ಎಲ್ಲರಿಗೂ ಈ-ಮೇಲ್ ಕಳಿಹಿಸಿದೆವು, ಫೋನ್ ಮಾಡಿದೆವು. ಅಮ್ಮ ಒಂತೂ ”ಎಲ್ಲಾರೂ ಹುಷಾರಾಗಿದ್ದೀರ ಅಲ್ಲವೇ ? ಮನೆಯೊಲ್ಲೊಂದು ಮಗು ಬಿಟ್ಟು ಹೋಗಿದ್ದೀಯ ಎಂದು ನೆನಪಿರಲಿ" ಎಂದು ಅಲ್ಲೂ ಹಿತವಚನ ಕೊಡಲು ಶುರುಮಾಡಿದರು. ದೇವರಿಗೆ ಎಲ್ಲಾಕಡೆಗೆ ಒಂದೇ ಸಮಯದಲ್ಲಿ ಇರಲು ಸಾಧ್ಯವಾಗುವುದಿಲ್ಲವೆಂದು, ತಾಯಂದಿರನ್ನು ಇಟ್ಟಿದ್ದಾನಂತೆ! ನನಗೇನಾದರೂ ಆದ್ದಲ್ಲಿ, ನನ್ನ ’ದುರಾದೃಷ್ಟ’ಕ್ಕೆ ಅಮ್ಮ ಹೇಳಿದ್ದನ್ನು ಹೇಳಿ ಓಡಿಸುತ್ತೇನೆ ಎಂದು ಕೊಂಡೆ.

ಅಂದು ಒಬ್ಬಳು ಜರ್ಮನ್ ಹೆಂಗಸಿಗೆ ಅಲ್ಲಿನ ಲೋಕಲ್ ಹುಡುಗರಿಬ್ಬರು ರೇಪ್ ಮಾಡಿದ್ದರಂತೆ, ಅವಳ ಬಾಯ್ ಫ್ರೆಂಡ್ ಅಂಗಡಿಯಲ್ಲಿ ಏನೋ ತರಲು ಹೋಗಿದ್ದಾಗ ಇದು ನಡೆಯಿತಂತೆ. ಅಲ್ಲಿಯ ಜನ ಬಹಳ ಒಳ್ಳೆಯವರು. ಈ ರೀತಿಯ ಯಾವುದೇ ಕಹಿ ಘಟನೆಗಳು ಬಹಳ ಅಪರೂಪ. ನಾವು ಹಿಂತಿರುಗಿಬರುವಾಗ ಜ್ಞಾನಿ ಅಲ್ಲಿ ಕಂಡ ಸೈನಿಕನನ್ನು ಅಪರಾಧಿಗಳನ್ನು ಹಿಡಿಯಲಾಯ್ತ ? ಎಂದು ಕೇಳಿದ. ಅವರು ಸಿಕ್ಕಿಹಾಕಿಕೊಡರೆಂದು, ಹಾಗು ಅವರಿಗೆ ೧೭ ವರ್ಷಗಳ ಖಾರಾಗೃಹ ಶಿಕ್ಷೆ ವಿಧಿಸಲಾಗಿದೆ. "ಮುಂದೆ ಬರುವ ಟ್ರೆಕ್ಕರ್ ಗಳು ಭಯ ಬೀಳಬಾರದೆಂದು ಹೀಗೆ ಮಾಡಲಾಗಿದೆ, ಅದರೆ ಅವರದ್ದೇನೂ ತಪ್ಪಿರಲಿಲ್ಲ, ಆ ಹುಡುಗಿ ಸುಮ್ಮನೆ... " ಅಂತ ಗೊಣಗಿಕೊಂಡ. ಈ ಘಟನೆಯಿಂದ ವಸುಮತಿಯವರು, ಇನ್ನು ಮುಂದಿನ ದಿನಗಳಲ್ಲಿ ಪ್ರತೀ ಹುಡುಗಿಯೂ ಕೊನೆಯ ಪಕ್ಷ ಒಬ್ಬ ಹುಡುಗನೊಡನೆಯಾದರು ಬರಬೇಕೆಂದು ಆಜ್ಞೆ ಹೊರಡಿಸಿದರು. ಸಂಜೆ ನಂದಿನಿಗೆ ಎಷ್ಟು ತಲೆನೋವಾಗುತ್ತಿತ್ತೆಂದರೆ, ಅವಳೂ ಹಾಗು ಅಶೋಕ್ ಚೇತರಿಸಿಕೊಳ್ಳದಿದ್ದಲ್ಲಿ, ಅವರನ್ನು ಹಿಂದೆ ಬಿಟ್ಟು ನಾವು ಮುಂದೆ ಹೋಗುವುದೆಂದು ವಸುಮತಿಯವರು ನಿರ್ಧರಿಸಿದರು.

ಮೇಲೆ ಮೇಲೆ ಹೋದಂತೆ ಥಂಡಿಯಿಂದ ರಾತ್ರಿಗಳು ಬಹಳ ಅಸಹನೀಯವಾಗಿರಲು ಪ್ರಾರಂಭವಾಗಿದ್ದವು. ಅಲ್ಲಿ ಯಾವ ಹೋಟಲಿನಲ್ಲೂ ಹೀಟರುಗಳು ಇರಲಿಲ್ಲ. ಅಲ್ಲಿ ಬುಕಾರಿ ಎಂಬ ಒಂದು ರೀತಿಯ ಒಲೆಯನ್ನು ಇದ್ದಲಿನಿಂದ ಹಚ್ಚಿಸಿಡುತ್ತಿದ್ದರು. ಅದರ ಮೇಲೆ ಬಿಸಿ ನೀರಿನ ಕೆಟಲು ಇತ್ತಿರುತ್ತಿದ್ದರು. ಅದರಲ್ಲಿ ಯಾವಾಗಲೂ ಬಿಸಿ ನೀರು ಇರುತ್ತಿತ್ತು. ಇದು ಇಡೀ ಕೋಣೆಯನ್ನು ಬೆಚ್ಚಗಿಡುತ್ತಿತ್ತು. ನಾವು ಯಾವಾಗಲು ಬುಕಾರಿಯ ಸುತ್ತ ಕುಳಿತು ಊಟ ಮಾಡಿ ಆಟ ಆಡುತ್ತಿರುತ್ತಿದ್ದೆವು. ಮೇಲೆ ಮೇಲೆ ಹೋದಂತೆ ನಾವು ಬಿಸಿ ನೀರನ್ನು ಸಹ ಹಣ ಕೊಟ್ಟು ಕೊಳ್ಳಬೇಕು. ಥಂಡಿ ನೀರೊಂತು ಕುಡಿಯಲಸಾಧ್ಯ. ಅಲ್ಲಿ ಎಲ್ಲ ಸಾಮಾನುಗಳನ್ನೂ ಬೆನ್ನ ಮೇಲೆ ಹೊತ್ತು ತರಬೇಕಾದ್ದುದ್ದರಿಂದ ಗ್ಯಾಸ್ ಬಹಳ ದುಬಾರಿ. ನಾಮ್ ಚೆವರೆಗೆ ಮಾತ್ರ ವಿದ್ಯುಚ್ಚಕ್ತಿ ಇದೆ. ಹಾಗಾಗಿ ಮೇಲೆ ಮೇಲೆ ಹೋದಂತೆ, ಗ್ಯಾಸನ್ನು ಬರಿ ಊಟಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾಮ್ ಚೆಯಲ್ಲಿ ಗ್ಯಾಸ್ ಗೀಜರಿಂದ ಬೆಸಿಮಾಡಿದ್ದ ನೀರಿನ ಸ್ನಾನ ಸಾಧ್ಯವಿತ್ತು. ಒಂದು ಸ್ನಾನಕ್ಕೆ ೨೦೦ ನೇಪಾಲಿ ರುಪಾಯಿಗಳು. ಆದರೆ ಈ ಥಂಡಿಯಲ್ಲಿ ನಮಗೆ ಯಾರಿಗೂ ಬಟ್ಟೆ ಬಿಚ್ಚುವ ಉತ್ಸಾಹ ಇರಲಿಲ್ಲ. ನಾಮ್ ಚೆ ಇಂದ ಮುಂದಕ್ಕೆ ಸ್ನಾನದ ಮನೆಗಳೇ ಇರಲಿಲ್ಲ! ನಾವು ಕಟ್ಮಂಡು ಬಿಟ್ಟ ಮೇಲೆ ಸ್ನಾನವೇ ಮಾಡಿರಲಿಲ್ಲ. ನಾಳೆ ತೆಂಗ್ ಬೋಚೆಗೆ ಹೊರಡುವವರಿದ್ದೆವು. ಎಂದಿನಂತೆ ೫-೬-೭ ಎಂದು ಸಿರ್ಧರಿಸಿ ಥಂಡಿಯನ್ನು ಶಪಿಸುತ್ತಾ ಮಲಗಲು ತೆರಳಿದೆವು.

Friday, December 12, 2008

ನಾಲ್ಕನೇ ದಿನ - ನಾಮ್ ಚೆ ಹತ್ತಿರ ಹೈ ಆಲ್ಟಿಟ್ಯುಡ್ ಪ್ರವೇಶ

ನಾಲ್ಕನೇ ದಿನ (ಮೇ ೬, ೨೦೦೮)
ಫಕ್ದಿಂಗ್ (2652mt/8698ft) - ನಾಮ್ ಚೆ ಬಜಾರ್ (3489mt/11443ft)

ಈಗಾಗಲೇ ನಮ್ಮ ಗುಂಪು ಚದುರಿಹೋಗಿತ್ತು. ವಸುಮತಿಯವರು ಎಷ್ಟೋ ಮುಂದೆ ಹೋಗಿದ್ದರು. ನಾನು ಜ್ಞಾನಿಯ ಜೊತೆ ಬರುತ್ತಾ ಇದ್ದೆ. ಅವನಿಗೆ ತಾನು ವ್ಯಾಯಾಮ ಮಾಡಿಲ್ಲ ಎನಾಗುತ್ತೋ ಅಂತ ದಿಗಿಲು ಶುರುವಾಗಿತ್ತು. ಆದರೆ ಅದು ಈ ರೀತಿ ಯೋಚಿಸುವ ಸಮಯವಲ್ಲ. ನಾನು ಅವನಿಗೆ ಹೇಗೆ ಕಾಲುಗಳನ್ನು ಇಡಬೇಕು, ಹೇಗೆ ಲಯಬದ್ಧವಾಗಿ ಉಸಿರಾಡಬೇಕು ಅಂತ ಹೇಳಿಕೊಡುವಷ್ಟರಲ್ಲಿ ನಾಮ್ ಚೆ ಬಜಾರ್ ಹತ್ತಿರದ ಕೊನೆಯ ತೂಗು ಸೇತುವೆ ಬಂತು. ಅದು ಸುಮಾರು ಎಂಟು ಅಂತಸ್ತಿನ ಕಟ್ಟಡದಷ್ಟು ಎತ್ತರದಲ್ಲಿದ್ದ ಸೇತುವೆ. ಅದನ್ನು ’ಹಿಲರಿ ಸಸ್ಪೆನ್ಶನ್ ಬ್ರಿಡ್ಜ್’ ಅಂತ ಕರೆಯುತ್ತಾರೆ. ಅದರ ಮೇಲೆ ಇರುವೆಗಳಂತೆ ಪ್ರಿಯ ಹಾಗು ವಸುಮತಿಯವರ ಗುಂಪು ದಾಟುವುದನ್ನು ದೂರದಿಂದ ಕಂಡೆವು. ಅದರ ಹತ್ತಿರ ಹೋಗಲು ಒಂದು ಕಡಿದಾದ ಗುಡ್ಡ ಹತ್ತಬೇಕಿತ್ತು. ಅದರ ಎತ್ತರ ನೋಡೇ ಜ್ಞಾನಿ ಹಿಂದೆ ಬಿದ್ದಿದ್ದ ಕೊನೆಯ ಗುಂಪಿನೊಡನೆ ತಾನು ಬರುವುದಾಗಿ, ಅಲ್ಲಿಯವರೆಗೆ ಅಲ್ಲೇ ಕಲ್ಲಿನ ಮೇಲೆ ಕುಳಿತುಕೊಂಡು ಸುಧಾರಿಸಿಕೊಳ್ಳುವುದಾಗಿ ಹೇಳಿದ. ಅದು ನಿಜವಾಗಿಯೂ ಎರಡು ಪರ್ವತಗಳ ನಡುವೆ ನೇತುಹಾಗಿದ್ದ ತೂಗು ಸೇತುವೆ. ಒಂದು ಗುಡ್ಡದ ತುದಿಯಿಂದ ಇನ್ನೊಂದು ಬೆಟ್ಟದ ಮಧ್ಯಕ್ಕೆ ಕೋಸಿ ನದಿಗೆ ಕಟ್ಟಿದ್ದ ಸುಮಾರು ೫೦ ಮೀಟರ್ ಉದ್ದದ ಸೇತುವೆ. ಅದನ್ನು ದಾಟಿದ ತಕ್ಷಣ ಮೇಲಕ್ಕೆ ಕಡಿದಾದ ದಾರಿ ಹತ್ತಬೇಕು. ನಾನು ಸೇತುವೆಯ ಬಲಗಡೆಯ ಗುಡ್ಡ ಹತ್ತಲು ಶುರುಮಾಡಿದೆ. ನೆಡೆಯುವುದು ನಿಧಾನವಾಗಲು ಶುರುವಾಯಿತು. ನಂತರ ಶರತ್ ಹಾಗು ತನ್ವಿ ಸಿಕ್ಕರು. ತನ್ವಿ ಮುಂದೆ ನಡೆಯಲಾರದೆ ಹೆಜ್ಜೆ ಹೆಜ್ಜೆಗೂ ಪರದಾಡುತ್ತಿದ್ದಳು. ಅವಳ ಶೂ ಸಹ ತೊಂದರೆ ಕೊಡುತ್ತಿತ್ತು. ಬಹಳ ಸುಸ್ತಾದಂತೆ ಕಾಣುತ್ತಿದ್ದಳು.

ಶರತ್ ಹಾಗು ತನ್ವಿ, ಹಿಂದೆ ದೂರದಲ್ಲಿ ಹಿಲರಿ ಸಸ್ಪೆನ್ಶನ್ ಬ್ರಿಡ್ಜ್

ನಾನು ಅವರನ್ನು ದಾಟಿ ಸೇತುವೆ ದಾಟಲು ಶುರುಮಾಡಿದಾಗ ಒಬ್ಬೊಂಟಿಯಾದೆ. ಒಬ್ಬೊಂಟಿಯಾಗಿ ಇಂತ ಸಮಯದಲ್ಲಿ ಎಂದೂ ನಡೆಯಬಾರದು. ಯಾರಾದರು ಪ್ರೊತ್ಸಾಹಕ್ಕೆ ಇದ್ದರೆ ಬಚಾವ್. ಸೇತುವೆ ದಾಟಿದ ಮೇಲೆ ವಿಮಲ್ ಹಾಗು ಸೆಂತಿಲ್ ಸಿಕ್ಕರು. ಅವರು ನನಗೆ ಟ್ಯಾಂಗ್ (Tang) ಅನ್ನು ನೀರಿನೊಡನೆ ಬೆರೆಸಿಕೊಂಡು ಹತ್ತು ಹೆಜ್ಜೆಗೆ ಒಂದುಸಲ ಒಂದು ಗುಟುಕು ಕುಡಿಯಲು ಸಲಹಿದರು. ಈ ಇಬ್ಬರಿಗೆ ಬಹಳ ಸ್ಟ್ಯಾಮಿನಾ. ಅವರೂ ಮುಂದೆ ನಡೆದು ಸ್ವಲ್ಪ ಹೊತ್ತಿನಲ್ಲಿ ಮಾಯವಾದರು. ನಾನು ಸ್ವಲ್ಪ ದೂರ ಹೋದ ನಂತರ ಖಾಜಿ ಸಿಕ್ಕಿದ. ಅವನು ನನ್ನ ಜೊತೆ ಮಾತಾಡುತ್ತಾ ಹತ್ತಲು ಶುರುಮಾಡಿದ.

ಹಿಲರಿ ಸಸ್ಪೆನ್ಶನ್ ಬ್ರಿಡ್ಜ್ ಹತ್ತಿರದಿಂದ

ಅವನು ಕೇವಲ ೨೦ ವರ್ಷದವನು. ಅವನಿಗೆ ೨೪ ವರ್ಷವಾದಾಗ ಮೌಂಟ್ ಎವೆರೆಸ್ಟ್ ಹತ್ತಲು ಹೋಗುತ್ತಾನಂತೆ. ಅಲ್ಲಿಯ ಎಲ್ಲಾ ಶರ್ಪಾ ಜನರಿಗೆ ಮೌಂಟ್ ಎವೆರೆಸ್ಟ್ ಹತ್ತುವುದೊಂದೆ ಕನಸು ಹಾಗು ಸಾಧನೆಯ ಗುರಿ. ಈ ಸಲ ೫೦ನೇ ವರ್ಷದ ವಾರ್ಷಿಕೋತ್ಸವದ ಪರ್ಯಂತ ಎವೆರೆಸ್ಟ್ ಬೇಸ್ ಕ್ಯಾಂಪಿನಿಂದ ನಾಮ್ ಚೆ ವರೆಗೆ (೫೨ ಕಿಮಿ) ಮ್ಯಾರಥಾನ್ ಇಟ್ಟಿದ್ದಾರಂತೆ. ಜಗತ್ತಿನ ಎಲ್ಲಾಕಡೆಯಿಂದ ಜನ ಓಡಲು ಬರುತ್ತಿದ್ದಾರಂತೆ. ಅದರಲ್ಲಿ ಅವನೂ ಪಾಲ್ಗೊಳ್ಳುತ್ತಿರುವವನೆಂದು ಹೇಳಿದ. ಎಲ್ಲರಿಗೂ ಹುಚ್ಚು ಹಿಡಿದಿದೆ ಅನ್ನಿಸಿತು. ನಂತರ ನಾನು ತುಂಬಾ ನಿಧಾನವಾಗಿ ನಡೆಯುತ್ತಿದ್ದೇನೆಂದು ಹೇಳಿ ಅವನು ಮುಂದೆ ಹೊರಟು ಹೋದ. ಮತ್ತೆ ನಾನು ಒಂಟಿ.

ಪೋರ್ಟರುಗಳ ಬುಟ್ಟಿಗಳು

ಅಲ್ಲಿ ಬರಿ ಪೋರ್ಟರುಗಳು. ಬಾಗಿಲುಗಳು, ಮಾಂಸ, ಊಟದ ಪದಾರ್ಥಗಳು, ಮರದ ಹಲಗೆಗಳು ಇತರೆ ಸಾಮಾನುಗಳನ್ನು ಬೆನ್ನ ಮೇಲೆ ಹೊತ್ತು ಹೋಗುತ್ತಿದ್ದರು. ಆವರು ೪೦ ರಿಂದ ೬೦ ಕೆಜಿ ಹೊರಬಲ್ಲರು. ಅವರೂ ಸಹ ಮೂರು ನಿಮಿಷಕ್ಕೊಮ್ಮೆ ನಿಂತು ಸುಧಾರಿಸಿ ಕೊಳ್ಳುತ್ತಿದ್ದರು. ಇನ್ನೂ ಸ್ವಲ್ಪ ಮೇಲೆ ಹತ್ತಿದ ನಂತರ ನನಗೆ ಒಂದು ಹೆಜ್ಜೆ ಇಟ್ಟರೆ ಸುಧಾರಿಸಿ ಕೊಳ್ಳುವಂತಾಗುತ್ತಿತ್ತು. ಆಗ ಯಾರೊ ಅಮೆರಿಕನ್ ಮುದುಕ ದಂಪತಿಗಳು ನನ್ನ ಹಿಂದೆ ಬರುತ್ತಿದ್ದುದ್ದು ಕಾಣಿಸಿತು. ಹೆಂಡತಿ ಎರಡು ಹೆಜ್ಜೆಗೊಮ್ಮೆ ನಿಂತು ವಾಂತಿ ಮಾಡುತ್ತಿದ್ದಳು. ಅವಳ ಗಂಡ ಹಾಗು ಪೋರ್ಟರ್, ಅವಳಿಗಾಗಿ ನಿಲ್ಲುವುದು, ಅವಳು ವ್ಯಾಕ್ ವ್ಯಾಕ್ ಮಾಡುವುದು, ಅವರು ಅವಳಿಗೆ ನೀರು ಕೊಡುವುದು ನಂತರ ಮತ್ತೈದು ಹೆಜ್ಜೆ ಮುಂದುವರಿಯುವುದು. ಹೀಗೆ ಮುಂದುವರಿಯ್ತ್ತಿದ್ದರು. ಅವರು ನನ್ನ ಹತ್ತಿರ ಬಂದಾಗ, ಅವಳು ನಕ್ಕು, "Altitude sickness, we have crossed 10,000ft you see, drink lots of water and walk for few steps, take deep breadth and walk" ಅಂತ ಹೇಳಿ ಮುಂದೆ ಹೋದಳು. "ಇದ್ಯಾವ ಶನಿ ವಕ್ಕರಿಸಿತಪ್ಪಾ !" ಎಂದು, ನಾನು ಅವಳು ಹೇಳಿದಂತೆ ಮಾಡುತ್ತಾ ಮುಂದುವರಿದೆ. ನನಗೆ ಇನ್ನು ಮುಂದುವರಿಯಲು ಸಾಧ್ಯವೇ ಇಲ್ಲ ಅನ್ನಿಸಲು ಶುರುವಾಯಿತು. ಬೆವರೇನೂ ಇಳಿಯುತ್ತಿರಲಿಲ್ಲ, ಆದರೆ ನೆಡೆಯಲು ಶಕ್ತಿಯೇ ಇಲ್ಲವೆನಿಸಲು ಶುರುವಾಯಿತು. ಇದು ಮೇಲೆ ಮೇಲೆ ಹೋದಂತೆ, ಆಮ್ಲಜನಕ ರಕ್ತದಲ್ಲಿ ಕಡಿಮೆಯಾಗಲು ಶುರುವಾಗುತ್ತದೆ, ಆದ್ದರಿಂದ ಈ ರೀತಿ ಎಂದು ನಂತದ ತಿಳಿಯಿತು. ಪರ್ವತಾರೋಹಿಗಳು ವಯಾಗ್ರ ಮಾತ್ರೆಗಳನ್ನೂ ತೆಗೆದುಕೊಳ್ಳುತ್ತಾರಂತೆ! (ಇದರ ಸತ್ಯಾಸತ್ಯೆಯ ಮೇಲೆ ಸ್ವಲ್ಪ ಅನುಮಾನ ಇದೆ). ವಯಾಗ್ರ ಮಾತ್ರೆಗಳು ರಕ್ತ ನಾಳಗಳನ್ನು ಅಗಲಿಸಿ ಜಾಸ್ತಿ ಆಮ್ಲಜನಕ ದೇಹದಲ್ಲಿ ಓಡಾದುವಂತೆ ಮಾಡುವುದರಿಂದ ಎತ್ತರದ ಆಲ್ಟಿಟ್ಯುಡಿನಲ್ಲೂ ಸಮುದ್ರ ಮಟ್ಟದಲ್ಲಿದ್ದಂತೆ ಶಕ್ತಿ ಹಾಗು ತ್ರಾಣ ಬರುತ್ತದಂತೆ.

ಜ್ಞಾನಿ ಬರುವವರೆಗೂ ಹೇಗೋ ನಡೆಯುವುದೆಂದು ನಂತರ ಏನು ಮಾಡುವುದೆಂದು ತೀರ್ಮಾನಿಸುವುದೆಂದುಕೊಂಡೆ. ಒಂದು ಹೆಜ್ಜೆ ಇಡುವುದು, ಎರಡು ನಿಮಿಷ ನಿಲ್ಲುವುದು, ಮಾಡುತ್ತಾ ಮುಂದುವರಿಯುತ್ತಿದ್ದೆ. ಆಗ ಮುಂದಿನಿಂದ ಎಬ್ಬ ಪುಣ್ಯಾತ್ಮ ಬಂದ. ಆತನ ಹೆಸರು ಭಂಡಾರಿ. ಹಿಂದಿ ಮಾತನಾಡುತ್ತಿದ್ದರು. ಅಲ್ಲಿಯ ಸೈನ್ಯದಲ್ಲಿ ಇರುವ ಒಬ್ಬನೇ ಹಿಂದುಸ್ಥಾನಿಯಂತೆ. ಭಂಡಾರಿ ಎಂದು ಯಾರನ್ನೇ ಕೇಳಿದರೂ ತೋರಿಸುತ್ತಾರಂತೆ. (ಆದರೆ ನಂತರ ಕೇಳಿದಾಗ ಯಾರಿಗೂ ಗೊತ್ತಿರಲ್ಲಿಲ್ಲ !). ಆತ, ನಾನು ಕಷ್ಟಕರವಾದ ದಾರಿಯನ್ನು ಪೂರ್ತಿಯಾಗಿ ಮುಗಿಸಿದ್ದೇನೆಂದು, ಇನ್ನು ಕೆವಲ ಸುಲಭವಾದ ದಾರಿ, ಸ್ವಲ್ಪ ದೂರ ಮಾತ್ರ ಇರುವುದೆಂದು ಹೇಳಿದರು. ಎಲ್ಲಿಂದಲೋ ಜೀವ ಬಂತು. ಮುಂದೆ ಒಂದು ತಿರುವಿನಲ್ಲಿ ನಾಮ್ ಚೆ ಬಜಾರಿನ ಮನೆಗಳು ಚುಕ್ಕೆ ಚುಕ್ಕೆಯಾಗಿ ಕಂಡಾಗ, ನಿಂತು ಫೊಟೊ ತೆಗೆದುಕೊಂಡು ನಾಮ್ ಚೆ ಕಂಡಿದ್ದು ಖಾತರಿ ಮಾಡಿಕೊಂಡೆ. ಅದು ನಾನು ಬೆಂಗಳೂರಿನಲ್ಲಿ, ಫೋಟೊನಲ್ಲಿ ನೋಡಿದ್ದ ನಾಮ್ಚೆ ಬಜಾರೇ ಆಗಿತ್ತು! ಕೆಂಪು ಮತ್ತು ನೀಲಿ ಹೆಂಚುಗಳಿದ್ದ ಸಣ್ಣ ಮನೆಗಳು ಬೆಟ್ಟದುದ್ದಕ್ಕೂ ಕಾಣುತ್ತಿದ್ದವು.

ತಿರುವಿನಲ್ಲಿ ಕಂಡ ನಾಮ್ ಚೆ ಬಜಾರ್

’ಹಿಮಾಲಯ ಪರ್ವತ, ಸಾಕಪ್ಪಾ ನಿನ್ನ ಸಹವಾಸ’ ಎಂದು ಮೊದಲ ಸಲ ಅಂದುಕೊಂಡೆ (ಮುಂದೆ ಇದನ್ನು ಲೆಕ್ಕವಿಲ್ಲದಷ್ಟುಸಲ ಅಂದುಕೊಂಡಿರುವೆ !). ಅಲ್ಲಿಂದ ನಾನು ನಮ್ಮ ’ಹಿಮಾಲಯನ್ ಲಾಡ್ಜ್’ ಸೇರಲು ಇನ್ನೂ ಒಂದು ಗಂಟೆ ಬೇಕಾಯಿತು. ಅಲ್ಲಿ ಎಲ್ಲಾ ಖೊಠಡಿಗಳೂ ಐಸ್ ಕೋಲ್ಡ್. ಬಿಸಿ ನಿಂಬೆ ಶರಭತ್ತು ಕುಡಿದಾಗಲೇ ಸಮಾಧಾನ, ಸ್ವಲ್ಪ ಶಕ್ತಿ ಬಂತು.ಎಲ್ಲರಿಗೂ ಬಿಸಿ ಅನ್ನ ಹಾಗು ದಾಲ್, ಅದರ ಜೊತೆಗೆ ಅದೆಂಥದೋ ಸೊಪ್ಪಿನ ಪಲ್ಯ ಊಟಕ್ಕೆ.

ಜ್ಞಾನಿ ಮತ್ತೆ ಕೆಲವರು ಇನ್ನೂ ಬಂದಿರಲಿಲ್ಲ, ನನಗೆ ಸ್ವಲ್ಪ ಯೋಚನೆಯಾಗಲು ಶುರುವಾಯ್ತು. ಒಂದು ಗಂಟೆಯ ನಂತರ ನಮ್ಮ ಗುಂಪಿನಲ್ಲಿದ್ದ ಒಬ್ಬ ವೈದ್ಯ ಡಾ.ಮಂಜುನಾಥ್ ಬಂದರು, ಅವರು ನಮಗೆ ಹೇಳಿದ್ದು - "ಜ್ಞಾನಿ ಮತ್ತು ಸಂದೀಪರಿಗೆ ಮೇಲೆ ಬರಲಾಗುತ್ತಿಲ್ಲ, ಇನ್ನೂ ಬಹಳ ದೂರದಲ್ಲಿದ್ದಾರೆ. ಜ್ಞಾನಿಗೆ ಮಂಡಿನೋವಾಗಿದೆ, ಎರಡು ಹೆಜ್ಜೆಗೆ ನಿಲ್ಲುತ್ತಾಯಿದ್ದಾನೆ. ಸಂದೀಪನಿಗೆ ತುಂಬಾ ಸುಸ್ತಾಗಿದೆ." ಆಗ ವಸುಮತಿ ಅವರ ಮಗಳೊಡನೆ (ಡೆಪ್ಯುಟಿ ಲೀಡರ್) ಮಾತಾಡಿ, ಖಾಜಿಗೆ ಅವರ ಚೀಲಗಳನ್ನು ಹೊತ್ತು ತರಲು ಹೇಳಿದರು. ನಂತರ ನನ್ನ ಕಡೆ ತಿರುಗಿ "ಎನು ಮಾಡುತ್ತೀಯಮ್ಮ ಈಗ ? ನಾಳೆ ಹಿಂದೆ ಹೋಗುತ್ತೀರ ?" ಅಂತ ಕೇಳಿದರು. ನನ್ನ ಹೃದಯವೇ ಹೊರಬಂತು. ’ಅಯ್ಯೊ ಗ್ರಹಚಾರವೆ, ಸಂಕಷ್ಟವನ್ನು ಹೇಗೆ ಬಗೆಹರಿಸಬಹುದು ?’ ಎಂದು ನನ್ನ ಮನಸ್ಸು ನನಗೆ ಎಲ್ಲಾಬಗೆಯ ಐಡಿಯ ಕೊಡಲು ಶುರುಮಾಡಿತು. ಇಲ್ಲೆಲ್ಲಾ ಎಂಥಾ ಸೌಲಭ್ಯವಿತ್ತೆಂದರೆ ಜ್ಞಾನಿ ಸುಲಭವಾಗಿ ನಿಭಾಯಿಸಿಕೊಳ್ಳಬಲ್ಲ, ಅಲ್ಲದೆ, ಅವನೇನು ಸಾಯುತ್ತಿಲ್ಲವಲ್ಲ, ನಾನು ಈ ಒಂದು ಅವಕಾಶಕ್ಕಾಗಿ ನನ್ನ ಅರ್ಧ ಜೀವನ ಪೂರ್ತೀ ಕಾದಿದ್ದನ್ನು ನೋಡಿರುವ ಜ್ಞಾನಿ ಬಹುಶಃ ಎಂದಿಗೂ ಆ ರೀತಿ ಮಾಡಲು ಬಿಡುವುದಿಲ್ಲ ! ಆದರೆ ಅದನ್ನೆಲ್ಲಾ ಹೇಳದೆ "ಅವರೆಲ್ಲಾ ಬರಲಿ, ಆನಂತರ ನೋಡೋಣ" ಎಂದೆ. ಅವರಿಬ್ಬರೂ ಇನ್ನೆರಡು ಗಂಟೆ ತಡವಾಗಿ ಬಂದು ತಲುಪಿದಾಗ ೪ ಘಂಟೆ. ಕೂರಲೂ ಆಗುದಷ್ಟು ಸುಸ್ತಾಗಿದ್ದರು. ಜ್ಞಾನಿ ಹೇಳಿದ, ’ಎಲ್ಲರೂ ಮುಂದೆ ಹೋದನಂತರ ಇಬ್ಬರೂ ಈಗೇನು ಮಾಡುವುದಪ್ಪಾ ಹೇಗೆ ಮುಂದೆ ಹೆಜ್ಜೆ ಹಾಕುವುದು ಎಂದು ಯೋಚಿಸುತ್ತಿರುವಾಗ, ಜ್ಞಾನಿ, ಇದು ತನ್ನ ಕಟ್ಟಕಡೆಯ ಟ್ರೆಕ್ ಆದರೂ ಸರಿ, ನಾನು ಮಾತ್ರ ಹಿಂದೆ ಹೋಗಲಾರೆ, ಬರಿ ಮನಶ್ಶಕ್ತಿಯಿಂದಲೇ ಹೇಗಾದರು ಮಾಡಿ ಮುಂದುವರಿಯುತ್ತೇನೆ, ಅಂದು ಕೊಂಡನಂತೆ. ನಂತರ ಅಲ್ಲಿ ಹೋಗುತ್ತಿದ್ದ ಯಾವ ಪೋರ್ಟರನ್ನು ಕೇಳಿದರೂ ’ನಮಗೆ ತುಂಬಾ ಬಾರ ಈಗಾಗಲೇ ಆಗಿದೆ, ನಿಮ್ಮ ಚೀಲ ತೆಗೆದು ಕೊಳ್ಳಲಾಗುವುದಿಲ್ಲ’ ಎಂದರಂತೆ. ನಂತರ ಒಬ್ಬನೆ ಒಬ್ಬ ಬಾಗಿಲು ತೆಗೆದುಕೊಂಡು ಹೋಗುತ್ತಿದ್ದವನು ೨೦೦ ಭಾರತೀಯ ರುಪಾಯಿಗಳಿಗೆ ಬರಲು ಒಪ್ಪಿಕೊಂಡನಂತೆ. ಆದರೂ ಸಂದೀಪ್ ಚೀಲ ಕೊಡಲು ಒಪ್ಪಲ್ಲಿಲ್ಲ. ತಾನೇ ಹೊತ್ತುಕೊಂಡು ನಡೆದು ಬರುವುದಾಗಿ ಹೇಳಿ (Not carrying the bag is against the spirit of trekking !) ನಂತರ ನಿಧಾನವಾಗಿ ಇಬ್ಬರೂ ಬಂದರಂತೆ. ಅಂದು ರಾತ್ರಿ ಮಲಗುವವರೆಗೂ, ಜ್ನ್ಯಾನಿ ತಾನು ಕೇವಲ ದೃಢವಾದ ನಿಲುವಿನಿಂದಲೇ ಮೇಲೆಬಂದುದ್ದಾಗಿಯೂ, ಇಲ್ಲದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಹೇಳುತ್ತಾ ಇದ್ದಾಗ, ಮುಂದೇನಪ್ಪಾ ಗತಿ ಕಾದಿದೆ ಎಂದು ಚಿಂತಿಸುವಂತಾಯಿತು. ನಾವು ಬೆಂಗಳೂರಿನಿಂದ ಹೊರಡುವ ಮೊದಲು, ವಸುಮತಿಯವರೊಡನೆ ಮಾತನಾಡುತ್ತಿರುವಾಗ ನಾನು ಅವರನ್ನು "ಈ ಹೈ ಆಲ್ಟಿಟ್ಯುಡ್ ಟ್ರೆಕ್ಕನ್ನು ಏನಕ್ಕೆ ಹೋಲಿಸಿ ಹೇಳಬಹುದು ? ಕುಮಾರಪರ್ವತದ ಆರೋಹಣಕ್ಕಾ?" ಎಂದು ಕೇಳಿದ್ದಕ್ಕೆ ಅವರು "ಇದು ಕುಮಾರಪರ್ವತದಕ್ಕಿಂತ ನೂರು ಪಟ್ಟು ಕಷ್ಟ, ನೀವು ಸುಮ್ಮನೆ ವ್ಯಾಯಾಮ ಮಾಡುತ್ತಾ, ನಿಮ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳುತ್ತಿರಿ, ತುದಿ ಮುಟ್ಟಿಸುವುದು ನನ್ನ ಕರ್ತವ್ಯ" ಎಂದಿದ್ದು ನೆನಪಿಗೆ ಬಂತು. ಇದು ನಮ್ಮ ಕಥೆ. ಬೆರೆಯವರ ಕಥೆ ಇನ್ನು ಏನೆನೋ, ಅವು ನಮಗೆ ನಿಧಾನವಾಗಿ ದಿನಕಳೆದಂತೆ ತಿಳಿಯಲು ಶುರುವಾಯಿತು. ನಾಳೆ ಹೈ ಆಲ್ಟಿಟ್ಯುಡ್ ಅಕ್ಲಿಮಟೈಸೇಶನ್ (acclimatization.). ಅಂದರೆ ಇದ್ದ ಎತ್ತರದ ಜಾಗದಿಂದ ಅಲ್ಲೆ ಸ್ವಲ್ಪ ಹತ್ತಿರದ ಇನ್ನೂ ಎತ್ತರದ ಜಾಗಕ್ಕೆ ಹೊಗಿ ಬರುವುದರಿಂದ ಹವೆ ಮತ್ತು ಎತ್ತರಕ್ಕೆ ದೇಹ ಒಗ್ಗಿಕೊಳ್ಳುವುದು.

Friday, December 5, 2008

ನಾಲ್ಕನೇ ದಿನ - ನಾಮ್ ಚೆ ಕಡೆಗೆ

ನಾಲ್ಕನೇ ದಿನ (ಮೇ ೬, ೨೦೦೮)
ಫಕ್ದಿಂಗ್ (2652mt/8698ft) - ನಾಮ್ ಚೆ ಬಜಾರ್ (3489mt/11443ft)
ನಾನು ಈ ಮೊದಲೇ ಮಾಡಬೇಕಾಗಿದ್ದ ಕಾರ್ಯ ಇದು. ಇಲ್ಲಿ ನಾವು ನಡೆದು ಹೋದ ದಾರಿಯ ನಕ್ಷೆ ಕೊಟ್ಟಿರುವೆ. ಅದರಲ್ಲಿ ಕೆಂಪು ದಾರಿ ಹಾಗು ಮನೆಗಳೆಲ್ಲಾ ನಾವು ಹೋದ ದಾರಿ ಮತ್ತು ಉಳಿದುಕೊಂಡ ಲಾಡ್ಜ್ ಗಳು. ಹಸಿರವು ನಾವು ಬರುವಾಗ ಉಳಿದುಕೊಂಡವು.

ಫಕ್ದಿಂಗ್ ಅಲ್ಲಿ, ಈಗಾಗಲೇ ನಮಗೆ ಥಂಡಿ ಹತ್ತಲು ಶುರುವಾಗಿತ್ತು. ಹಾಗಾಗಿ ನಮಗೆ ಸರಿಯಾಗಿ ನಿದ್ದೆಹತ್ತಲಿಲ್ಲ. ನಾವು ಇದ್ದ ಮೊದಲ ಲಾಡ್ಜಲ್ಲಿ ಕೆಳಗೆ ೧೦ ಮೇಲೆ ೧೦ ಕೊಠಡಿಗಳಿದ್ದು, ಪ್ರತಿಯೊಂದರಲ್ಲೂ ಎರಡು ಮಂಚಗಳಿದ್ದವು. ಹಾಸಿಗೆಗಳ ಮೇಲೆ ಕಂಬಳಿಗಳಿದ್ದವು. ಆದರೆ ಆ ಥಂಡಿಯಲ್ಲಿ, ನಾವು ಎರಡೆರಡು ಬೆಚ್ಚನೆಯ ಪ್ಯಾಂಟುಗಳನ್ನು ಹಾಕಿದ್ದರೂ ಕಟಕಟ ಹಲ್ಲು ಕಡಿಯುವ ಹಾಗೆ ಆಗುತ್ತಿತ್ತು. ಇಲ್ಲೆಲ್ಲಾ ಬಹಳ ವಿಚಿತ್ರವಾದ ಕಕ್ಕಸ್ಸುಗಳು ! ಅವುಗಳ ಬಗ್ಗೆ ಇಷ್ಟೆ ಹೇಳಿ ಬಿಟ್ಟರೆ ಸಾಲದು, ಆದರೆ ಮುಂದೆ ಸರಿಯಾದ ಸಮಯದಲ್ಲಿ ವಿವರಿಸುವೆ. ಇಡೀ ಹೋಟಲು ಮರದ ತೆಳ್ಳನೆಯ ಹಲಗೆಗಳಲ್ಲಿ ಕಟ್ಟಿದ್ದುದ್ದರಿಂದ ಕೊನೆಯ ಕೊಠಡಿಯಲ್ಲಿ ಕೂಗಿದರೆ ನಮಗೆ ಕೇಳುತ್ತಿತ್ತು. ಹಾಗಾಗಿ ನಾವು ಮಲಗಿಕೊಂಡೆ ಅಕ್ಕಪಕ್ಕದವರಿಗೆ ಕೂಗಿ ಬೆಳಿಗ್ಗೆ ನಮಗೂ ಏಳಿಸುವಂತೆ ಆಜ್ಞೆ ಕೊಟ್ಟೆವು. ರಾತ್ರೆ ಇಡಿ ಪ್ರತಿಯೊಬ್ಬರೂ ಹೊರಳುವುದೂ ಕೇಳುತ್ತಿತ್ತು. ಮರುದಿನ ಏಳಲು ನಾವೇ ಮೊದಲಿನವರು. ಜ್ಞಾನಿ, ತಕ್ಷಣ ಹೋಗಿ ವಸುಮತಿಯವರಿಗೆ ಕೂಗಿ ಏಳಿಸಿ, ನಾವು ಎದ್ದಿರು ವಿಷವನ್ನು ತಿಳಿಸಿ, ಅವರಿಂದ ಅಷ್ಟು ಮುಂಚೆ ಕೂಗಿದ್ದಕ್ಕೆ ಬೈಸಿಕೊಂಡು, ಸಾರ್ತಕವಾಯಿತೆಂಬ ಪ್ರಸನ್ನತೆಯಿಂದ ಹೊರನಡೆದ. ನಾವೆಲ್ಲಾ ಓಟ್ಸ್ ಗಂಜಿ ತಿಂದಾದ ನಂತರ, ವಸುಮತಿ ನಮಗೆ ಅವತ್ತಿನ ದಿನಚರಿಯನ್ನು ತಿಳಿಸಿದರು. "ಇಂದು ನೀವು ಹತ್ತು ಸಾವಿರ ಅಡಿಗಳನ್ನು ದಾಟಲಿದ್ದೀರ. ಹತ್ತು ಸಾವಿರ ಅಡಿಗಳನ್ನು ಮೀರಿ ಮಿಕ್ಕೆಲ್ಲಾ ಹೈ ಆಲ್ಟಿಟ್ಯುಡ್. ಎಲ್ಲರಿಗಾಗುವ ನಿದಾನವಾದ ಹೆಜ್ಜೆಯಲ್ಲಿ ನಾವು ನಡೆಯುತ್ತೇವೆ. ಯಾರಿಗೇ ಯಾವುದೇತರದ ಅನುಭವವಾದರೂ ನನಗೆ ಹೇಳಬೇಕು. ತಲೆನೋವು, ವಾಂತಿ, ತಲೆ ತಿರುಗುವುದು, ಸುಸ್ತು ಹೀಗೆ." ನಾವೆಲ್ಲಾ, ಅಂತೂ ನಿಜವಾದ ಟ್ರಿಕ್ಕಿಂಗ್ ಶುರುವಾಯಿತೆಂಬ ಸಂತೋಷದಲ್ಲಿ ಆಯಿತೆಂದು ತಲೆ ಆಡಿಸಿದೆವು. ಆದರೆ ಅವರವರ ಸಮಸ್ಯೆ ಅವರವರಿಗೇ ಗೊತ್ತಿತ್ತು. ಒಬ್ಬರಿಗೆ ಶೂ ಸರಿ ಇಲ್ಲದಿದ್ದರೆ, ಇನ್ನೊಬ್ಬರಿಗೆ ಈ ೮-೧೦ ಕೆಜಿ ಚೀಲ ಹೊತ್ತು ನಡೆಯುವುದಕ್ಕಾಗುತ್ತದೆಯೇ ಎಂಬ ಶಂಕೆ. ಪ್ರಿಯಳ ಮುಖ ಚಿಂತೆಕಟ್ಟಿತ್ತು, ಅವಳು "ಅದು ಹೇಗೆ ನನ್ನ ಚೀಲ ಇಷ್ಟು ಭಾರ ಆಗುತ್ತಿದೆ, ನೀನೇನಾದರೂ ನಿನ್ನ ವಸ್ತುಗಳನ್ನು, ನನಗೆ ತಿಳಿಯದಂತೆ ನನ್ನ ಚೀಲಕ್ಕೆ ತುಂಬುತ್ತಿದ್ದೀಯ ?" ಎಂದು ಕೇಳುತ್ತಿದ್ದಳು. ನಾನು ಆಗ ಈಗ ನಿಂತು ದೂರವನ್ನು ದಿಟ್ಟಿಸಿ ನನಗೆ ನಾನೆ ಏನಾದರೂ ಆಗುತ್ತಿದೆಯಾ ಎಂದು ಪರೀಕ್ಷಿಸಿಕೊಳ್ಳುತ್ತಿದ್ದೆ. ಬೆರೆಯೆಲ್ಲಾ ಕಟ್ಟುಮಸ್ತಾದ ವಿದೇಶೀಯರು ಪೋರ್ಟರುಗಳನ್ನು ಕರೆದುಕೊಂಡಿರುವುದು ನೋಡಿ ಏನೋ ಭಯ ಮತ್ತು ಅಸಮಾಧಾನ ಆದರೂ ಏನೋ ಒಂದು ’ನನಗೇನೂ ಬೇಕಾಗಿಲ್ಲ’ ಎಂಬ ಹಂಗು. ಹೀಗೆ ನಾವು ಸುಮಾರು ದೂರ ನೆಡೆಯುತ್ತಾ ಹೋದೆವು.

ದಾರಿಯಲ್ಲಿ ನಮಗೆ ಹಿಂತಿರುಗಿ ಬರುತ್ತಿದ್ದ ಬಹಳ ಜನ ಸಿಕ್ಕರು. ಎಲ್ಲರೂ ಬಹಳ ಬಸವಳಿದಿದ್ದಂತೆ ಕಂಡರು. ಒಬ್ಬಳೇ ಒಂಟಿ ಹುಡುಗಿ, ಭಾರತೀಯಳು, ಒಂದು ಸಣ್ಣ ಚೀಲ ಹಾಗು ಸ್ಕೀ ಕೋಲು ಹಿಡಿದು ಹಿಂತಿರುಗಿ ನಡೆದು ಬರುತ್ತಿದ್ದಳು. ಅವಳು ಮೂಲತಹ ಡೆಲ್ಲಿಯವಳಂತೆ, ಆದರೆ ಅಮೇರಿಕನ್ನರ ಉಚ್ಚಾರಣೆ, ವಿಶ್ವಸಂಸ್ಥೆಯಲ್ಲಿ ಕೆಲಸ. ವಿಶ್ವಸಂಸ್ಥೆಯು ನಾಮ್ಚೆ ಬಜಾರಿನ ಒಂದು ಹೋಟೆಲಿನಲ್ಲಿ ಮೀಟಿಂಗ್ ಇಟ್ಟಿತ್ತಂತೆ, ಅದಕ್ಕಾಗಿ ಮೂರುಜನರ ಗುಂಪು (ಇತರರು ಕಾಣಲಿಲ್ಲ) ಫಕ್ದಿಂಗ್ ಇಂದ ಬೆಳಿಗ್ಗೆ ಹೊರಟು ನಾಮ್ಚೆಯಲ್ಲಿ ಮೀಟಿಂಗ್ ಮಾಡಿ ಈಗ ಹಿಂತಿರುಗಿ ಫಕ್ದಿಂಗ್ ಗೆ ಹೋಗುತ್ತಿರುವಳಂತೆ. ಅಲ್ಲಿಯ ಹೋಟೆಲಿನಿಂ ಮೌಂಟ್ ಎವೆರೆಸ್ಟ್ ಸ್ಪಷ್ಟವಾಗಿ ಗೋಚರಿಸಿತಂತೆ. ನಾವು ಅವಳನ್ನು, ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದೆವು. ಅವಳು ಭಾರತೀಯಳೇ (ವಿದೇಶಿಯಳಲ್ಲ !), ಭಲೇ ಏಕಾಂಗಿ ಹುಡುಗಿ ! ಇಲ್ಲೂ ಮೀಟಿಂಗ್ ಮಾಡಿ, ಎವೆರೆಸ್ಟ್ ಪರ್ವತ ನೋಡಿ, ಹೋದ ದಿನವೇ ಹಿಂತಿರುಗಿ ಬರಬಹುದೇ ? ಹಾಗಾದರೆ ನಮಗೂ ನಾಮ್ಚೆ ಬಜಾರ್ ಗೆ ಹತ್ತಬಹುದೆಂಬ ಮನಸ್ಸು ಉಕ್ಕಿಬಂತು. ನಾವು ಅಲ್ಲಿಯ ಒಬ್ಬ ಶೆರ್ಪಾನನ್ನು ನಮ್ಮ ಗೈಡಾಗಿ ಕರೆದುಕೊಡಿದ್ದೆವು. ಅವನ ಹೆಸರು ಖಾಜಿ (ಚಿತ್ರದಲ್ಲಿ ಇರುವವನು). ಅವನು ಅನಾಯಸವಾಗಿ ಹಿಂದೆ ಮುಂದೆ ಓಡಾಡಿಕೊಡಿದ್ದ. ವಸುಮತಿಯವರ ಮಾತಿನಲ್ಲಿ ಹೇಳುವುದಾದರೆ, ವಸುಮತಿಯವರಿಗೆ ದಾರಿ ಮರೆತು ಹೋದಾಗ ಮಾತ್ರ ಅವನು ದಾರಿ ತೋರಿಸಲು ಹಾಗು, ಅವರದೇ ಭಾಷೆಯಲ್ಲಿ ಚೌಕಾಶಿ ಮಾಡಿ ಹೋಟೆಲುಗಳಲ್ಲಿ ದುಡ್ಡು ಇಳಿಸಲು ಅವನನ್ನು ಕರೆದುಕೊಡಿದ್ದೆವು. ಲುಕ್ಲಾ ಇಂದ ಎವೆರೆಸ್ಟ್ ತಳದವರೆಗೂ ಹಾಗೂ ಅಲ್ಲೇ ಸುತ್ತಮುತ್ತ ಇರುವ ಇತರ ಪರ್ವತಗಳ ಬಳಿಗೂ, ಪಾಸ್ ಗಳ ಬಳಿಗೂ, ಚಾರಣಿಗರಿಗಾಗಿ ಉದ್ದಕ್ಕೂ ಕಾಲುದಾರಿಗಳಿದ್ದು, ಸಣ್ಣ ಊರುಗಳ ಹತ್ತಿರ ಹಲಗೆಗಳಿಂದ ಕಟ್ಟಿರುವ ಮೂಲಸವಲತ್ತುಗಳಿರುವ ಲಾಡ್ಜ್ ಗಳಿವೆ. ಇವೆಲ್ಲಾ ಎಡ್ಮಂಡ್ ಹಿಲರಿಯ ಪರಿಶ್ರಮ. ಪ್ರತೀ ಹೋಟಲಿನಲ್ಲೂ ಅವರ ಬಗ್ಗೆ ಮತ್ತು ಅವರ ಮಹತ್ಕಾರ್ಯಗಳ ಪಟ್ಟಿ ಹಾಕಿರುತ್ತಿದ್ದರು.

ಜೊರ್ಸಾಲೆ ಏಂಬ ಕಡೆ ಒಂದು ಚೆಕ್ ಪೋಸ್ಟ್ ಇದೆ. ಅಲ್ಲಿಂದ ಮುಂದಕ್ಕೆ ಸಾಗರ್ ಮಾತಾ (ಎಲ್ಲಾ ಪರ್ವತಗಳ ತಾಯಿ) ರಾಷ್ಟೀಯ ಉದ್ಯಾನವನ ಶುರುವಾಗುತ್ತದೆ. ಇಡೀ ಹಿಮಾಲಯ ಇದೊರೊಳಗೆ ಬರುತ್ತದೆ. ಅಲ್ಲಿ ನಮ್ಮ ಚೀಲಗಳನ್ನು ಪೂರ್ತಿ ತೆಗೆಸಿ ತಪಾಸಣೆ ಮಾಡಿದರು. ಆಗ ಮೇ ೧೪ ಹತ್ತಿರವಾಗುತ್ತಿದ್ದುದ್ದರಿಂದ ಒಲೊಂಪಿಕ್ಸ್ ಜ್ವಾಲೆ ಮೌಂಟ್ ಎವೆರೆಸ್ಟ್ ತುದಿ ಮುಟ್ಟಿಸುವ ಯೋಜನೆ ಚೈನಾಗೆ ಇತ್ತು. ಇದೆ ಸಮಯದಲ್ಲಿ ಟಿಬೆಟ್ಟಿನವರು ಮಾಡುತ್ತಿದ್ದ ಚಳುವಳಿಗೆ ಪೂರಕವಾಗಿ ಏನಾದರೂ ಇದ್ದಲ್ಲಿ ಅದನ್ನು ಮುಟ್ಟುಗೋಲು ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದರು. [ಮೇ ಮಧ್ಯಭಾಗದಲ್ಲೇ ಬಹಳಷ್ಟು ಯಶಸ್ವಿ ಎವೆರೆಸ್ಟ್ ಶಿಖರ ಯಾತ್ರೆ ನಡೆದಿರುವುದು. ಮೇ ೧೪ ಟಿಬೆಟ್ಟಿಯನ್ನರ ಪ್ರಕಾರ ಚೊಮೊಲುಂಗ್ಮ (ಮೌಂಟ್ ಎವೆರೆಸ್ಟ್ ಶಿಖರ) ತುದಿ ಮುಟ್ಟಲು ಬಹಳ ಒಳ್ಳೆಯ ದೈವದತ್ತವಾದ ದಿನ. ವೈಜ್ಞಾನಿಕವಾಗಿ ನೋಡುವುದಾದರೆ ಏಪ್ರಿಲ್-ಮೇ ಸಮಯದಲ್ಲಿ, ಇಲ್ಲಿನ ಹವಾ ಪರ್ವತಾರೋಹಿಗಳಿಗೆ ಬಹಳ ಅನುಕೂಲಕರವಾಗಿರುತ್ತದೆ. ಎವೆರೆಸ್ಟ್ ತುದಿ ಹತ್ತುವವರು, ರಾತ್ರೆ ಸುಮಾರು ೧೦ ಗಂಟೆಗೆ ಹೊರಟು ಬೆಳಗಿನ ಜಾವ ೪ರ ಹಾಗೆ ಶಿಖರದ ತುದಿ ತಲುಪಿ, ಮರುದಿನದ ಮಧ್ಯಾನದ ಹೊತ್ತಿಗೆ ನಾಲ್ಕನೇ ಬೇಸ್ ಕ್ಯಾಂಪ್ ಇಳಿದುಬಿಡಬೇಕು ಬೇಕು.ಇಲ್ಲದಿದ್ದಲ್ಲಿ, ಅವರು ಪ್ರಾಣ ಕಳದುಕೊಂಡ ಹಾಗೆಯೇ.] ಅಲ್ಲಿ ಸುಮಾರಾಗಿ ಅರ್ಧ ಗಂಟೆ ಕಳೆಯಿತು. ನಾವೀಗಾಗಲೇ ಈ ಹೋಟಲುಗಳಲ್ಲಿ ದೊರೆಯುವ ತಿಂಡಿ ಊಟಗಳಿಂದ ಬೇಸತ್ತಿದ್ದೆವು. ಹದಿನೆಂಟು ದಿನಗಳ ನಮ್ಮ ಕಾರ್ಯಕ್ರಮದಲ್ಲಿ ನಮ್ಮ ಗುಂಪಿನಲ್ಲಿ ಜಾಸ್ತಿ ಕೇಳಸಿಗುತ್ತಿದ್ದುದು, ನಾವು ಹಿಂತಿರುಗಿ ಹೋಗುವಾ ಡೆಲ್ಲಿಯಲ್ಲಿ ಎನೆಲ್ಲಾ ತಿನ್ನುತ್ತೇವೆಂದು, ಬೆಂಗಳೂರಿನ್ನಲ್ಲಿ ಯಾವ ಯಾವ ಗಲ್ಲಿಯಲ್ಲಿ ಎಂತೆಂತಾ ರುಚಿಗಳು ನಮಗಾಗಿ ಕಾದಿವೆಯೆಂದು ! ನಮ್ಮ ಗುಂಪಿನಲ್ಲಿದ್ದ ದಂತವೈದ್ಯೆ ದೀಪಿಕ ಮೆಲ್ಲಮೆಲ್ಲಗೆ ದೇಪ್ಲಗಳನ್ನು ಹೊರತೆಗೆದಳು. ಅವಳ ಅಡುಗೆಯವನ ಹತ್ತಿರ ಮಾಡಿಸಿಕೊಂಡು ಬಂದಿದ್ದಳು. ಒಂದು ಕ್ಷಣ ಕಂಡ ಅದು ಇನ್ನೊಂದು ಕ್ಷಣದಲ್ಲಿ ಮಂಗಳ ಮಾಯ. ಎಲ್ಲಾ ಅವಳ ಅಡುಗೆಯವನ್ನು ಹೊಗಳಿದ್ದೇ ಹೊಗಳಿದ್ದು. ಇನ್ನೇನು ವಿಸ್ಮಯಗಳನ್ನು ಅವನು ಮಾಡಬಲ್ಲವನಾಗಿದ್ದಾನೆಂದು ತಿಳಿದುಕೊಂಡು, ಅವನ ವಿಳಾಸವನ್ನು ತಪ್ಪದೆ ನಮಗೆ ತಲುಪಿಸಬೇಕೆಂದು ಕೋರಿಕೊಂಡೆವು. ನಂತರ ಜೊರ್ಸಾಲೆ ಊರಿನೊಳಗೆ ವಸುಮತಿಯವರು ನೂಡಲ್ಸ್ ಸೂಪನ್ನು ಕೊಡಿಸಿದರು [ಚಿತ್ರದಲ್ಲಿ ಜೊರ್ಸಾಲೆ ಬ್ರೇಕ್]. ಈ ರೀತಿ ಯಾವಾಗಲು ಮಧ್ಯದಲ್ಲಿ ಒಂದು ಅರ್ಧ ಗಂಟೆಯ ಪುಟ್ಟ ವಿರಾಮ ಇದ್ದು ಬಿಸಿ ನಿಂಬೆ ಜ್ಯೂಸ್ ಅಥವಾ ಬಿಸಿ ಚಾಕಲೇಟು ಹಾಲು ಅಥವಾ ಸರಿಯಾಗಿ ಬೆಳ್ಳುಳ್ಳಿ ಹಾಕಿದ ನೂಡಲ್ಸ್ ಸೂಪು ಕುಡಿಯುತ್ತಿದ್ದೆವು. ಇನ್ನೂ ಜಾಸ್ತಿ ತಿನ್ನಲು ಬಯಸಿದಲ್ಲಿ, ’ಅದು ನಿಮ್ಮ ಇಷ್ಟ, ನಿಮ್ಮ ಹಣ, ಅದರ ಜವಾಬ್ದಾರಿ ನನ್ನದಲ್ಲ’ ಎಂದು ಮೊದಲೆ ವಸುಮತಿಯವರು ಹೇಳಿದ್ದರು. [ಹೋದ ಬ್ಲಾಗಿಗೆ ಒಬ್ಬೊರು, ’ನಿಮ್ಮಂತಹ ಸಾಫ್ಟ್ ವೇರ್ ಗಳು ೫೦೦೦ ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡಿದ್ದು ಆಸ್ಚರ್ಯ ಉಂಟುಮಾಡಿತು’ ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ಮಿತವಾಗಿ ಹಣ ತೆಗೆದುಕೊಂಡು ಹೋಗಿದ್ದೆವು, ಅದರಲ್ಲಿ, ನಮಗೆ ಬೇಕಾದ್ದನ್ನು ತಿನ್ನಲು, ಕೆಲವು ಅವಶ್ಯವಾದ ಬಟ್ಟೆಗಳನ್ನು ಕೊಳ್ಳಲು ಹಾಗು ನೆನಪಿನ ಕಾಣಿಕೆಗಳಿಗಾಗಿ ಮತ್ತು ಮುಖ್ಯವಾಗಿ, ಮೇಲೆ ಹೋದಂತೆ, ಕಷ್ಟವಾದಲ್ಲಿ ಪೋರ್ಟರ್ ಗಳಿಗಾಗಿ ಉಳಿಸಿಕೊಳ್ಳಬೇಕಿತ್ತು. ಅಲ್ಲದೆ, ಜೀವವಿಮೆ ಗಟ್ಟಿ ಜೀವಿಗಳಿಗೇಕೆ ? ಎಂಬ ಹುಂಬ ಭಾವನೆ !]

ಪ್ರಿಯಳಿಗೆ ಈರುಳ್ಳಿ ಬೆಳ್ಳುಳ್ಳಿ ಅಲೆರ್ಜಿ. ಅವಳು ಯಾವಾಗಲು ಹೊಟಲೊಳಗೆ ಹೋಗಿ ಅವುಗಳಿಲ್ಲದೆ ತನಗೆ ಮಾಡಲು ಹೇಳುತ್ತಿದ್ದಳು. ಅವರು ತಬ್ಬಿಬಾಗಿ, ಹಾಗಾದರೆ ಮಸಾಲೆ ಏನು ಹಾಕಬೇಕೆಂದು ಯೋಚಿಸಿತ್ತಿದ್ದರು. ಬೆಳ್ಳಿಳ್ಳಿ ’ಆಲ್ಟಿಟ್ಯುಡ್ ಸಿಕ್ನೆಸ್’ ಗೆ ಬಹಳ ಒಳ್ಳೆಯದಂತೆ. ಇದೂ ಒಂದು ಅವಳ ಚಿಂತೆಯಾಗಿತ್ತು ! ಹೀಗೆ ಜೊರ್ಸಾಲೆಯಲ್ಲಿ ಬಿಡುವು ತೆಗೆದುಕೊಂಡಾಗ, ಜ್ಞಾನಿ, ನಮ್ಮ ಗುಂಪಿನಲ್ಲಿದ್ದ ೬೨ ವರ್ಷ ವಯಸ್ಸಿನ ಶೀಲಾ ಕ್ಯಾಸ್ಟಿಲಿನೊ ಅವರನ್ನು ಮಾತಾಡಿಸುತ್ತಿದ್ದ. ’೧೭ ವರ್ಷಗಳ ಹಿಂದೆ ನಮ್ಮ ತರಗತಿಯಲ್ಲಿ ಆನಂದ್ ಕ್ಯಾಸ್ಟಿಲಿನೊ ಅಂತ ಒಬ್ಬ ಇದ್ದ. ಆದರೆ ಅಡ್ರೆಸ್ಸ್ ಇಲ್ಲದಂತೆ ಮಾಯವಾದ, ನಿಮ್ಮ ಹೆಸರು ಕೇಳಿದಾಗಲಷ್ಟೆ ಅವನ ನೆನಪು’ ಎಂದು ಹೇಳಿದ ತಕ್ಷಣ, ’ಅಯ್ಯೊ, ಅವನು ನನ್ನ ಮಗ’ ಅಂತ ಈ ತಾಯಿ.

ನಮ್ಮ ದಾರಿಯುದ್ದಕ್ಕೂ ಕೋಸಿ ನದಿಯನ್ನು ದಾಟಲು ಹಾಕಿದ್ದ ತೂಗು ಸೇತುವೆಗಳು, ಚಾರ್ಟನ್ (chortans) ಎಂದು ಕರೆಯಲ್ಪಡುವ ಕಲ್ಲಿನ ಸಮಾಧಿಗಳು ಸಿಕ್ಕವು. ಈ ನಮಾಧಿಗಳು ನೋಡಲು ಲಗೋರಿ ಆಟಕ್ಕೆ ಜೋಡಿಸುವ ಕಲ್ಲಿನ ಗುಡ್ಡೆಗಳಂತೆ ಕಾಣುತ್ತವೆ. ಎಲ್ಲಾ ರೀತಿಯ ಆಕಾರ, ಗಾತ್ರದಲ್ಲಿ ಇರುತ್ತವೆ. ಚಾರ್ಟನ್ನುಗಳು, ಸ್ತೂಪಗಳು ಹಾಗು, ನಿಮ್ಮದಾರಿಯಲ್ಲಿ ಅಡ್ಡಬರುವ ಯಾವುದೇ ರೀತಿಯ ಗುಡ್ಡೆಗಳನ್ನು (ಅವುಗಳಲ್ಲಿ, ಎಷ್ಟೋ ರೀತಿಯವಿದ್ದು, ಏನೆಂದು ಗೊತ್ತು ಮಾಡುವುದು ಕಷ್ಟವೇ ಸರಿ, ಹಾಗಾಗಿ) ಯಾವಾಗಲು ಟಿಬೆಟ್ಟಿಯನ್ನರ ಸಂಪ್ರದಾಯದಂತೆ ಪ್ರದಕ್ಷಿಣೆಯಾಗಿಯೇ (clockwise) ದಾಟಿ ಹೋಗಬೇಕು. ನಾಮ್ಚೆ ಬಜಾರನ್ನು ತಲುಪುವಷ್ಟರಲ್ಲಿ ಇದು ನಮ್ಮ ಕಾಲುಗಳಿಗೆ, ನಮ್ಮಲ್ಲಿರುವ ಸರ್ಕಲ್ ಸುತ್ತುವ ಕಾನೂನಿನಂತೆ ಅಭ್ಯಾಸವಾಗಿ ಹೋಯಿತು.