Monday, July 20, 2009

ನಾವಲ್ಲಿ ! ಎವೆರೆಸ್ಟ್ ಒಡನಾಟದಲ್ಲಿ !

ಹತ್ತನೆಯ ದಿನ (ಮೇ ೧೨, ೨೦೦೮)
ಲೊಬು ಚೆ (4930 ಮೀ/16170 ಅಡಿ) - ಗೊರಕ್ ಶೆಪ್ (5160ಮೀ/16924 ಅಡಿ)

ಬರೆಯದೆ ನಾಲ್ಕು ತಿಂಗಳಾಗುತ್ತಾ ಬರುತ್ತಿದೆ. ಈ ನಾಲ್ಕು ತಿಂಗಳಲ್ಲಿ ಏನೇನೋ ನಡೆದು ಹೋಗಿದೆಯಲ್ಲದೆ, ಈ ಮೇನಲ್ಲಿ ನಾನು ಮತ್ತೊಂದು ಹಿಮಾಲ ಟ್ರೆಕ್ಕಿಂಗೆ ಹೋಗಿಬಂದೆ. ಒಂದು ಸಲ ಹಿಮಾಲಯವನ್ನು ಕಂಡವರಿಗೆ ಅದು ಮತ್ತೆ ಮತ್ತೆ ಕರೆಯುತ್ತದೆ. ಅದೆಂತದೋ ಆಕರ್ಷಣೆ. ಮೇ ಹತ್ತಿರವಾದಂತೆ, ಇನ್ಯಾವ ಪರ್ವತದ ತಡಿಗೆ ಎಂದು ಚಡಪಡಿಸುವಂತಾಗುತ್ತದೆ. ಈ ಸಲ ನಾವು ಹರ್-ಕಿ-ದೂನ್ ಪರ್ವತ ಬುಡಕ್ಕೆ, ಸ್ವರ್ಗರೋಹಿಣಿ ಹತ್ತಿರಕ್ಕೆ ಹೋಗಿಬಂದೆವು. ಅವುಗಳ ಬಗ್ಗೆ ಆಮೇಲೆ. ಎವೆರೆಸ್ಟ್ ನೆನಪು ಸ್ವಲ್ಪ ಮಸುಕಾಗಲು ಶುರುವಾಗಿದೆ. ಜೇವನವೇ ಹೀಗೆ. ಎವೆರೆಸ್ಟ್ ಹೋಯ್ತು ಹರ್-ಕಿ-ದೂನ್ ಬಂತು ಡುಂ ಡುಂ ಡುಂ... ಆದರೆ ನೆನಪುಗಳೆಂದೂ ಕಹಿಯಲ್ಲ ! ವರ್ಷಗಳು ಉರುಳಿದಂತೆ ಅವುಗಳ ಸಿಹಿಯೂ ಹೆಚ್ಚುತ್ತದೆ.

ಸರಿ, ಮತ್ತೆ ಈಗ ಎವೆರೆಸ್ಟ್ ಕಡೆಗೆ....

ನಾವು ಲೋಬು ಚೆಯನ್ನು ಬೆಳಿಗ್ಗೆ ೭:೦೦ ಗಂಟೆಗೆ ಬಿಟ್ಟು ಹೊರಟೆವು. ಇಲ್ಲಿ ಬಿಸಿ ನೀರು ಇಲ್ಲ. ಪ್ರತಿ ಕೋಣೆಗೂ ಒಂದೊಂದೇ ಮೋಂಬತ್ತಿ. ಎಲ್ಲವೂ ದುಬಾರಿ. ಬೇಗ ಬೇಗನೆ ಗಂಜಿಯನ್ನು ತಿಂದು, ಹಿಮದಲ್ಲೇ ನಡುಯುತ್ತಾ ಹೊರಟೆವು. ತುಂಬ ಥಂಡಿ ಇದ್ದುದ್ದರಿಂದ ವಸುಮತಿಯವರು ನಮ್ಮ ದಪ್ಪನಾದ ಜಾಕೆಟ್ಟುಗಳನ್ನು ಹಾಕಿಕೊಳ್ಳಲು ಅನುಮತಿ ಕೊಟ್ಟಿದ್ದರು. ನಮ್ಮ ಮಫ್ಲರುಗಳಿಂದ ನಮ್ಮ ಮೂಗು ಕಿವಿಗಳನ್ನೆಲ್ಲಾ ಬಿಗಿಯಾಗಿ ಮುಚ್ಚಿಕೊಂಡಿದ್ದೆವು. ಆದರೆ ಸ್ವಲ್ಪ ದೂರ ಹೋದಂತೆ, ಹಿಮ ಸುರಿಯುವುದು ನಿಂತಿತಲ್ಲದೆ, ಶೆಖೆಯಿಂದ ಎಲ್ಲವನ್ನು ಕಿತ್ತೆಸೆದು ನಮ್ಮ ಎಂದಿನ ಉಡುಗೆಗೆ ಬಂದೆವು. ದಾರಿ ನಿಧಾನವಾದ ಏರು. ಖುಂಬು ಗ್ಲೆಶಿಯರ್ ಪಕ್ಕದಲ್ಲೇ ನಡೆದೆವು. ಒಂದು ಮನಸ್ಸು ’ನನಗೇನಾದರು ಆಗುತ್ತಿದೆಯೇನು” ಅಂತ ಗುಮಾನಿ ಪಡುತ್ತಿದ್ದರೆ, ಇನ್ನೊಂದು ’ಇದೆಲ್ಲ ನಿನ್ನ ಭ್ರಮೆ ಅಷ್ಟೆ” ಅನ್ನುತ್ತಿತ್ತು. ಒಂದು ತಿರುವಿನಲ್ಲಿ ದೂರದ ಎವೆರೆಸ್ಟ್ ಬೇಸ್ ಕ್ಯಾಂಪಿನ ಹಳದಿ, ಕೆಂಪು ಗುಡಾರಗಳು ಕಂಡವು. ಗೊರಕ್ ಶೆಪ್ ತೀರಹತ್ತಿರದಲ್ಲಿದ್ದಾಗ, ಒಂದು ಇಳಿಜಾರನ್ನು ಇಳಿಯಬೇಕು. ಅಲ್ಲಿ, ನಂದಿನಿಯವರು "ಈಶಾ, are you okey ?" ಎಂದ ಹಾಗಾಯಿತು. ’ಅರೆ, ಇದೇನಿದು, ತಲೆಯೊಳಗೆ ಧ್ವನಿಗಳೂ ಕೇಳಲು ಶುರುವಾಗಿದೆಯಲ್ಲ” ಅಂದು ಕೊಳ್ಳುತ್ತಾ ಅವರೆಡೆಗೆ ನೋಡಿದೆ. ಸಧ್ಯಕ್ಕೆ ಅವರು ನಿಜವಾಗಿಯೂ ಕೇಳಿದ್ದರು. ನಾನು ಸ್ವಲ್ಪ ಕುಡಿದವರಂತೆ ನೆಡೆಯುತ್ತಿದ್ದನೆಂದೂ, ಹಾಗಾಗಿ ಏನು ಸಮಾಚಾರವೆಂದು ಕೇಳಿದ್ದರು. ನನಗೂ ನನ್ನ ಸುತ್ತ ಇದ್ದ ಪರ್ವತಗಳು ಅಲುಗಿದ್ದಂತೆ ಆಗಿದ್ದು ನಿಜ. ಸರಿ, ಇನ್ನು ಇವಕ್ಕೆಲ್ಲಾ ಸಮಯವಿಲ್ಲ, ಗುರಿ ಮುಟ್ಟುವವರೆಗೂ ಬಾಯಿ ಮುಚ್ಚಿಕೊಂಡು ಸರಿಯಿರುವುದು ವಾಸಿ ಅಂದುಕೊಂಡೆ.

ಅಂತೂ ಹತ್ತಿರದಲ್ಲಿ ಗೋರಕ್ ಶೆಪ್

ನಾವು ೧:೩೦ ಮಧ್ಯಾನಕ್ಕೆ ಗೊರಕ್ ಶೆಪ್ ತಲುಪಿದೆವು. ಅದು ಬಹಳ ಸುಂದರವಾದ ಲಾಡ್ಜ್. ಆದರಲ್ಲಿ ಬಹಳ ಕೋಣೆಗಳಿದ್ದವು. ಬಹಳ ಜನ ವಿದೇಶಿಯರಿದ್ದರು. ಇಬ್ಬಿಬ್ಬರಿಗೆ ಒಂದರಂತೆ ಕೋಣೆಗಳನ್ನು ಕೊಟ್ಟರು. ನಮಗೆ ಕೇವಲ ಒಂದು ಗಂಟೆಗಳ ಕಾಲ ಬಿಡುವು ಇತ್ತು. ನಾವು ಹುರಿದ ಆಲೂಗೆಡ್ಡೆಗಳನ್ನು, ಚೌಮೆನ್ ಹಾಗು ಹಾಟ್ ಚಾಕೊಲೇಟ್ ಕುಡಿದು ಇಬಿಸಿ ಕಡೆಗೆ ಹೊರಟೆವು. ವಸುಮತಿಯವರು ಯಾಕೊ ಬಹಳ ಅವಸರದಲ್ಲಿ ಇದ್ದುದ್ದಲ್ಲದೆ ವ್ಯಾಕುಲಗೊಂಡಿದ್ದರು. ಮಾತುಮಾತಿಗೆ ಸಿಡುಕುತ್ತಿದ್ದರು. ಇಂತಹ ಸಮಯದಲ್ಲಿ ಲೀಡರ್ ಗಳಿಗೆ ಹೇಗಾಗುತ್ತದೆಯೊ ನನಗೆ ಗೊತ್ತಿಲ್ಲ. ಆದರೆ ಇಂತಹ ಸಮಯದಲ್ಲೇ ಲೀಡರ್ ಗಳ ಸಾಮರ್ಥ್ಯ ಕಾಣಿಸಿಕೊಳ್ಳುವುದು. ವಸುಮತಿಯವರಿಗೆ ಎಲ್ಲರ ಮೇಲೆ ಸಿಟ್ಟಾಗಿತ್ತು. ನಾನು, ಜ್ಞಾನಿ ಹಾಗು ದೀಪಿಕಾ ಬಿಟ್ಟರೆ ಬೇರೆ ಯಾರೂ ಇನ್ನೂ ವಸುಮತಿಯವರ ಸಾಲಿನಲ್ಲಿ ಹಾಜರಿರಲಿಲ್ಲ. ಲಾಡ್ಜ್ ಪಕ್ಕದಲ್ಲೇ ಇದ್ದ ಎರಡು ಫುಟ್ ಬಾಲ್ ಮೈದಾನದಷ್ಟು ಅಗಲವಾದ ಜಾಗನ್ನು ದಾಟಿ ಕಾಲಾಪತ್ತರ್ ಪರ್ವತದ ಪಕ್ಕದಿಂದ ಹಾದು ಮುಂದೆ ಹೋಗಬೇಕಿತ್ತು. ನಾವು ನಮ್ಮ ಚೀಲಗಳನ್ನು ಲಾಡ್ಜಿನಲ್ಲೇ ಬಿಟ್ಟು ಬರಿ ಕೈಯಲ್ಲಿ ಹೊರಟಿದ್ದೆವು. ನಮ್ಮ ಗೈಡ್ ಖಾಜಿ ನಮ್ಮ ಜೊತೆ ಇರಲ್ಲಿಲ್ಲ. ಅವನು ಮೋಹನನ್ನು ಕ್ಷೇಮವಾಗಿ ಕೆಳಗಿಳಿಸಲು ಹೋಗಿದ್ದ.ಹಾಗಾಗಿ ವಸುಮತಿಯವರೇ ತಮಗೆ ತಿಳಿದ ಮಟ್ಟಿಗಿನ ದಾರಿಯಲ್ಲಿ ನಮ್ಮ ಪೋರ್ಟರ್ ಗಳ ಸಹಾಯದಿಂದ ಮುಂದುವರಿಯುತ್ತಿದ್ದರು.

ಬೇಸ್ ಕ್ಯಾಂಪ್ ದಾರಿ
ಬೇಸ್ ಕ್ಯಾಂಪ್ ದಾರಿ
ಬೇಸ್ ಕ್ಯಾಂಪ್ ದಾರಿ

ಅಲ್ಲಿಂದ ಬೇಸ್ ಕ್ಯಾಂಪ್ ವರೆಗೂ ಬರಿ ಕಲ್ಲುಬಂಡೆಗಳ ದಾರಿ, ಎಲ್ಲಿ ಹೋಗಬೇಕೆಂದೇ ತಿಳಿಯುವುದಿಲ್ಲ. ನಾವು ಬೇಗನೆ, ಸಂಜೆಯಾಗುವುದರೊಳಗೆ ಹಿಂತಿರುಗಬೇಕಿತ್ತು. ನಮ್ಮ ಟಾರ್ಚ್ ಗಳನ್ನೂ ತೆಗೆದುಕೊಂಡಿದ್ದೆವು. ಹಿಮ ಬಿದ್ದರೊಂತೂ ಇದ್ದ ದಾರಿಯೂ ಕಾಣದೆ ಕೆಲಸ ಕೆಟ್ಟಂತೆಯೇ. ಎಲ್ಲರೂ ಬೇಗ ಬೇಗನೆ ನೆಡೆಯುತ್ತಿದ್ದರು. ಜ್ಞಾನಿಗೆ ಮಧ್ಯದಲ್ಲಿ ಬಹಳ ಬಳಲಿಕೆಯಾಗಿ, ನಾವು ಒಂದು ಚಿಕ್ಕ ಬಿಡುವು ತೆಗೆದುಕೊಳ್ಳಬಹುದೇ ಎಂದು ವಸುಮತಿಯವರನ್ನು ಕೇಳಿದ. ಆಗ ವಸುಮತಿಯವರು, ಕೂಗಾಡಿ, ಸಾಲಿನಲ್ಲಿ ಯಾರು ಸ್ವಲ್ಪ ಜಾಸ್ತಿನೇ ಸುಸ್ತಾಗಿದ್ದರೋ ಅವರನ್ನೆಲ್ಲಾ ಒಂದು ಪ್ರತ್ಯೇಕವಾದ ಸಾಲಿನಲ್ಲಿ ಹಾಕಿ, ’ನನಗೆ ಸಾಧ್ಯವಾದಷ್ಟು ಜನರನ್ನು ಇಬಿಸಿ ತಲುಪಿಸಬೇಕಾಗಿರುವುದು ನನ್ನ ಕರ್ತವ್ಯ. ಆದ್ದರಿಂದ ನಿಮಗೆ ಆದರೆ ಬರುತ್ತಾಯಿರಿ. ಈಲ್ಲದಿದ್ದಲ್ಲಿ, ಎಂತಿದ್ದರೂ ನಾವು ಉಳಿದವರು ಇದೇ ದಾರಿಯಲ್ಲಿ ಹಿಂತಿರುಗಿ ಬರಬೇಕು, ಆಗ ನಮ್ಮೊಡನೆ ನೀವು ಹಿಂತಿರುಗ ಬಹುದು’ ಎಂದರು. ಈ ವಿಶಿಷ್ಟವಾದ ಸಾಲಿನಲ್ಲಿ ಜ್ಞಾನಿ, ಲಖನ್, ಶೀಲಾ ಮತ್ತೆ ಕೆಲವರಿದ್ದರು. ಇದರಿಂದಾಗಿ ಎಲ್ಲರಿಗೂ ಬಹಳ ಬೇಜಾರಾಯಿತು. ಇಲ್ಲಿಯವರೆಗೂ ಎಲ್ಲರೂ ಒಂದೇ ಗುಂಪಿನವರಾಗಿದ್ದೆವು. ಈಗ ಒಂದು Achievers ಮತ್ತೊಂದು Failures ತರಹದ ಗುಂಪುಗಳನ್ನು ಪ್ರಾರಂಭಿಸಿದಂತಾಯಿತು. ಇಷ್ಟಾಗಿ ಇದು ಕೇವಲ ಇಬಿಸಿ ಟ್ರೆಕ್ ಅಷ್ಟೆ, ನಾವೇನೂ ಎವೆರೆಸ್ಟ್ ಪರ್ವತ ಹತ್ತುತ್ತಿಲ್ಲವಲ್ಲ. ಯಾರೂ ಏನೂ ಮಾತನಾಡಲಿಲ್ಲ. ಹಾಗೆ ಮುಂದುವರೆದೆವು. ದಾರಿಯಲ್ಲಿ ನಮಗೆ ಇಬಿಸಿಗೆ ಹೋಗಿ ಹಿಂತಿರುಗಿ ಬರುತ್ತಿದ್ದ ಕೆಲವು ಗುಂಪುಗಳು ಸಿಕ್ಕವು. ಅವರೆಲ್ಲಾ, ಕ್ಯಾಂಪಿನಲ್ಲಿ ಒಂದು ಬೇಕರಿಯ ಟೆಂಟ್ ಇದೆಯೆಂದು ಅದರಲ್ಲಿ ಸೊಗಸಾದ ಸೇಬಿನ ಪೈಗಳು ಸಿಗುತ್ತವೆಂದೂ, ನಾವು ಅವುಗಳನ್ನು ರುಚಿ ನೋಡದೆ ಹಿಂತಿರುಗಬಾರದೆಂದು ಹೇಳಿದರು.

ಇಬಿಸಿಯಲ್ಲಿ ಬೇಕರಿ !

ಖುಂಬು ಗ್ಲೇಶಿಯರ್

ಈಗ ನಾವು ಗಟ್ಟಿಯಾದ ಖುಂಬು ಗ್ಲೇಶಿಯರ್ ಮೇಲೇ ನಡೆಯುತಿದ್ದೆವು. ಅದರ ಮೇಲೆ ದೊಡ್ಡದಾದ ಕಲ್ಲು ಬಂಡೆಗಳು ಬಿದ್ದಿದ್ದುದ್ದರಿಂದ ಹಾಗೆ ಅನ್ನಿಸುತ್ತಿರಲಿಲ್ಲ. ಆಗ ಈಗ, ದೂರದಲ್ಲೆಲ್ಲೋ ಗುಡು ಗುಡು ಗುಡುಗು, ಹಾಗು ಠಳಾರ್ ಅಂತ ಶಬ್ದ. ಅದು ಗ್ಲೇಶಿಯರ್ ಐಸ್ ಒಡೆಯುವ ಶಬ್ದವೆಂದು ವಸುಮತಿಯವರು ಹೇಳಿದರು. ನಾವು ಅಲ್ಲಿ ಇಂಡಿಯನ್ ಆರ್ಮಿ ಅವರ ಟೆಂಟಿಗೆ ಹೋಗುವವರಿದ್ದೆವು. ಇಂಡಿಯನ್ ಆರ್ಮಿಯ ಒಂದು ಗುಂಪು ಎವೆರೆಸ್ಟ್ ಹತ್ತಲು ಪ್ರಯತ್ನಿಸುತ್ತಿದ್ದರು. ಅವರ ನಾಯಕರು ವಸುಮತಿಯವರ ಕುಟುಂಬದ ಸ್ನೇಹಿತರು. ಹೀಗೆ ನಾವು ನಡೆಯುತ್ತಿರಬೇಕಾದರೆ (ನಾನು ವಸುಮತಿಯವರ ಸಾಲಿನಲ್ಲಿ ಮುಂದಿಂದ ಮೂರನೆಯವಳಾಗಿದ್ದೆ), ಯಾರೋ ಸರಸರನೆ ಒಂದೇ ಕ್ಷಣದಲ್ಲಿ ನಮ್ಮನ್ನು ಹಾದು ಹೋದರು. ಅದು ಜ್ಞಾನಿ ! ವಸುಮತಿಯವರು ’ನಿಲ್ಲು’ ಎಂದು ಹೇಳಿದ್ದುದ್ದನ್ನೂ ಅವನು ಕೇಳಿಸಿಕೊಳ್ಳದೆ ಕ್ಷಣ ಮಾತ್ರದಲ್ಲಿ ಮಾಯವಾದ. ನನ್ನ ಮುಖದಲ್ಲಿ ಒಂದು ಸಣ್ಣ ನಗೆ. ಇನ್ನೂ ಸ್ವಲ್ಪ ಸಮಯದಲ್ಲಿ ನಾವು ಬೇಸ್ ಕ್ಯಾಂಪ್ ತಲುಪಿದೆವು.

ಇಬಿಸಿಯ ಮೊದಲ ನೋಟ

ಇದೇ ಇಬಿಸಿ
ಅಡ್ವಾನ್ಸ್ ಬೇಸ್ ಕ್ಯಾಂಪಿಗೆ ಖುಂಬು ಗ್ಲೇಶಿಯರ್ ದಾಟುವ ದಾರಿ

ಎಲ್ಲರಲ್ಲೂ ಉತ್ಸಾಹ ತುಂಳುಕುತ್ತಿತ್ತು. ಸಂದೀಪನ ಮುಖದಲ್ಲಿ ಕಣ್ಣೀರು. ಅದೊಂದು ಮಹದಾನಂದ. ನಾನು ಪ್ರಿಯ ಒಟ್ಟಿಗೆ ಒಂದು ಫೋಟೋ ತೆಗೆಸಿಕೊಂದೆವು, ಅಂತೂ ಇಲ್ಲಿಗೂ ಬಂದೆವು. ಎವೆರೆಸ್ಟ್ ನಮ್ಮ ಜೀವನದಲ್ಲಿ ಬರುತ್ತದೆಂದು ನೆನಸಿರಲಿಲ್ಲ. ವಸುಮತಿಯವರು, ಅವರ ಕುಟುಂಬದೊಡನೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ’ಈಗ ನಮ್ಮ ಆರ್ಮಿ ಟೆಂಟ್ ಹುಡುಕಬೇಕಲ್ಲ” ಅಂತ ವಸುಮತಿಯವರು ಹೇಳಿಕೊಳ್ಳುತ್ತಿದ್ದರು. ನಾನು ’ಅಯ್ಯೊ, ಈಗ ಜ್ಞಾನಿಯನ್ನು ಹುಡುಕಬೇಕಲ್ಲ’ ಎಂದು ಕೊಂಡೆ. ಅವನನ್ನು ಹುಡುಕಲು ಕಂಡಿತವಾಗಿಯೂ ವಸುಮತಿಯವರ ಸಹಾಯ ನಿರೀಕ್ಷಿಸುವಂತಿರಲಿಲ್ಲ. ನಾವು ಬೇಗ ಹೊರಡುವರಿದ್ದು, ಸಂಜೆಯಾದರೆ ಇವನನ್ನು ಎಲ್ಲಿ ಹುಡುಕುವುದು ? ಅಯ್ಯೊ, ರಾಮ. ಅಲ್ಲೆಲಾ ಬರೀ ಪರ್ವತಾರೋಹಿಗಳ ಟೆಂಟುಗಳು. ಬೇರೆ ಬೇರೆ ದೇಶದವರದು. ಬಹು ಪಾಲು ಸೈನ್ಯದವರದ್ದು. ಅಲ್ಲಿ ನಾವು ಎಲ್ಲರೂ ಹೇಳಿದ್ದ ಬೇಕರಿಯನ್ನು ನೋಡಿದೆವು. ಆದರೆ ನಾವು ಬೇಗನೆ ಹಿಂತಿರುಗಿ ಹೋಗಬೇಕಾಗಿದ್ದುದ್ದರಿಂದ ಪೈ ರುಚಿಯನ್ನು ನೋಡುವುದಕ್ಕೆ ಸಮಯವಿರಲಿಲ್ಲ. ನಾವು ಇಂಡಿಯನ್ ಆರ್ಮಿ ಟೆಂಟನ್ನು ಕಂಡುಹಿಡಿದು, ಅದರೊಳಗೆ ಇಣುಕಿದರೆ, ಅಲ್ಲಿ ಜ್ಞಾನಿ ಕಮಾಂಡರ್ ರಾಹುಲ್ ಮಹಾಜನ್ ಅವರೊಡನೆ ಟೀ ಕುಡಿಯುತ್ತಾ ಮಾತಾಡುತ್ತಿದಾನೆ! ವಸುಮತಿಯವರಿಗೆ ಸ್ವಲ್ಪ ಕಸಿವಿಸಿಯಾದಂತೆ ಕಾಣಿಸಿತು. ಜ್ಞಾನಿ ವಸುಮತಿಯವರನ್ನು ಮಹಾಜನ್ ಅವರಿಗೆ ಪರಿಚಯಿಸಿ ಹೊರನಡೆದ.

ಇಂಡಿಯನ್ ಆರ್ಮಿ ಟೆಂಟ್


ವಸುಮತಿಯವರ ಕುಟುಂಬದ ಸ್ನೇಹಿತರು (ಕಮಾಂಡರ್) ಅಲ್ಲಿ ಇರಲಿಲ್ಲ. ಅವರು ಎವೆರೆಸ್ಟ್ ಮೇಲಿನ ನಾಲ್ಕನೇ ಕ್ಯಾಂಪಿನಲ್ಲಿ ಇದ್ದಾರೆಂದು, ಇಂದೋ ನಾಳೆಯೋ ಎವೆರೆಸ್ಟ್ ತುದಿ ತಲುಪಲಿದ್ದಾರೆಂದು ಮಹಾಜನ್ ಅವರು ಹೇಳಿದರು. ನಮಗೆ ಇಂಡಿಯನ್ ಆರ್ಮಿ ಟೀಮಿನವರು ಆದರದಿಂದ ಅವರ ದೊಡ್ಡದಾದ ಊಟದ ಟೆಂಟಿನಲ್ಲಿ ಟೀ, ಬಿಸ್ಕೆಟ್ಟುಗಳು ಮತ್ತಿತರ ತಿನಿಸುಗಳನ್ನು ಕೊಟ್ಟರು. ಅಲ್ಲಿ ಒಂದು ಟಿವಿ ಸಹ ಇತ್ತು ! ಪರ್ವತಾ ರೋಹಿಗಳು ಯಾವ ಜಾಗದಿಂದ ಪರ್ವತ ಹತ್ತಲು ಶುರು ಮಾಡುತ್ತಾರೆಂದು ತೋರಿಸಿದರು. ಆಗ ಮೋಡ ಕವಿದ್ದಿದ್ದುದ್ದರಿಂದ ನಮಗೆ ಅಪಾಯಕಾರಿಯಾದ ಖುಂಬು ಗ್ಲೇಶಿಯರ್ (ಪರ್ವತದಿಂದ ಹಿಮ ಪ್ರಪಾತವಾಗಿ ಗ್ಲೇಶಿಯರ್ ಶುರುವಾಗುವ ಜಾಗ) ಬಿಟ್ಟು ಬೇರೇನೂ ಕಾಣಲಿಲ್ಲ. ಅದನ್ನೇ ಫೋಟೋ ತೆಗೆದುಕೊಂಡೆವು. ಅಲ್ಲಿ ಶರ್ಪಾ ಜನರು ಹಿಮವನ್ನು ಗಟ್ಟಿ ಮಾಡಿ ದಾರಿ ಕಟ್ಟುತ್ತಾರಂತೆ. ಅದಕ್ಕೆ ಟೋಲ್ ಕಟ್ಟಿ ಅಡ್ವಾನ್ಸ್ ಬೇಸ್ ಕ್ಯಾಂಪಿಗೆ ಪರ್ವತಾರೋಹಿಗಳು ಹೋಗುತ್ತಾರಂತೆ. ಹೀಗೆ ಅಲ್ಲೂ ದುಡ್ಡು ಮಾಡುವ ಅವಕಾಶಗಳಿವೆ. ಅಲ್ಲೊಂದು ಅರ್ಧ ಬಿದ್ದು ಹೋಗಿದ್ದ ಹೆಲಿಕಾಪ್ಟರ್ ಇತ್ತು. ಅಲ್ಲಿ ಸರಿಯಾಗಿ ಗಾಳಿ ಇಲ್ಲದಿರುವುದರಿಂದ ಹೆಲಿಕಾಪ್ಟರ್ ಗಳಿಗೆ ಹಾರಲು ಕಷ್ಟ. ಅಲ್ಲಿಂದ ನಾವು ನಾಲ್ಕು ಗಂಟೆಗೆ ಹೊರಡಲು ಶುರುಮಾಡಿದೆವು.

ಇಬಿಸಿ ದಾರಿ

ಇಬಿಸಿ ದಾರಿ

ಹಿಂತಿರುಗಿ ಬರುವಾಗ ದಾರಿ ಸಾಗುತ್ತಲೇ ಇಲ್ಲ ! ಎಷ್ಟು ನಡೆದರೂ ನಮ್ಮ ಲಾಡ್ಜ್ ಕಾಣಿಸುತ್ತಿಲ್ಲ. ಅರೆ ಹೋಗುತ್ತಾ ಇದೆಲ್ಲಾ ದಾಟಿದೆವಾ ? ಎಂದು ಕೊಳ್ಳುವ ಹಾಗೆ ಆಯಿತು. ದಾರಿಯ ಮದ್ಯದಲ್ಲಿ ನಮಗೆ ಖಾಜಿ ಸಿಕ್ಕ. ಅವನು ಮೋಹನನನ್ನು ಸುರಕ್ಷಿತವಾಗಿ ಖಟ್ಮಂಡುವಿಗೆ ತಲುಪಿಸಲಾಯಿತು ಎಂದು ಹೇಳಿದ. ಅವನನ್ನು ಒಂದೊಂದೇ ಕ್ಯಾಂಪ್ ಕೆಳಗಿಳಿಸಲಾಯಿತೆಂದು, ಆದರೆ ಅವನಿಗೆ ಗುಣವಾಗುತ್ತಿರಲಿಲ್ಲವಾದ್ದರಿಂದ, ಫೆರಿಚೆಯಲ್ಲಿ ಹೆಲಿಕಾಪ್ಟರಿನಲ್ಲಿ ಖಟ್ಮಂಡುಗೆ ಆಸ್ಪತ್ರೆಗೆ ದಾಖಲು ಮಾಡಲು ಕಳುಹಿಸಲಾಯಿತೆಂದ. ನಾವು ಗೊರಕ್ ಶೆಪ್ ತಲುಪಿದಾಗ ಕತ್ತಲೆಯಾಗಿತ್ತು. ಒಟ್ಟಿನಲ್ಲಿ ೭ ಗಂಟೆಗಳ ಕಾಲ ಟ್ರೆಕ್ ಮಾಡಿದ್ದೆವು ಅಲ್ಲದೆ ಎಲ್ಲರೂ ಇಬಿಸಿ ತಲುಪಿ ಸುರಕ್ಷಿತವಾಗಿ ಹಿಂತಿರುಗಿದ್ದೆವು.

ಹಿಂತಿರುಗಿ ಬರುವಾಗ ಕಂಡ ಇಬಿಸಿ

ನಾವೆಲ್ಲಾ, ೨ ಕಾಲ್ಚೀಲಗಳು, ಥರ್ಮಲ್ ಬೆಚ್ಚನೆಯ ಪ್ಯಾಂಟುಗಳು, ಎರಡೆರಡು ಜಾಕೆಟ್ಟುಗಳು, ಟೋಪಿ, ಮಫ್ಲರ್ ಮುಂತಾದುವುಗಳನ್ನೆಲ್ಲಾ ಹಾಕಿಕೊಂಡು ಊಟಕ್ಕೆ ಕುಳಿತುಕೊಂಡೆವು. ಉಷ್ಣತೆ ೧೫ ಡಿಗ್ರಿಗಿಂತ ಕೆಳಗಿದ್ದು, ಇನ್ನೂ ಕೆಳಗೆ ಹೋಗುತ್ತಿತ್ತು. ಎಲ್ಲರಿಗೂ ಬಹಳ ಸುಸ್ತಾಗಿತ್ತು ಆದರೂ ಬಹಳ ಸಂತೋಷದಲ್ಲಿದ್ದೆವು. ನಾಳೆ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕಾಲಾಪತ್ತರ್ ಗೆ ಹೋಗಬೇಕಿತ್ತು. ವಸುಮತಿಯವರು ’ಯಾರೆಲ್ಲಾ ಹೋಗುವವರಿದ್ದೀರ’ ಎಂದು ಕೇಳಿದಾಗ ಕೇವಲ ೧೦ ಜನ ಹೊರಡಲು ತಯಾರಿದ್ದರು. ನಾನು, ಸೆಂತಿಲ್, ಸ್ವಪ್ನ, ಸಂದೀಪ್, ನಂದಿನಿ, ನಂದು, ನರೇಶ್, ಡಾ.ಮಾಂಜ, ರೋಶಿನ್, ಪ್ರಿಯ ಮತ್ತು ಲಖನ್. ಮಿಕ್ಕವರೆಲ್ಲಾ ಬಹಳ ಸುಸ್ತಾಗಿದ್ದುದ್ದರಿಂದ ತಾವು ಮಲಗಿ ಸುಧಾರಿಸಿಕೊಳ್ಳುವುದಾಗಿ ಯೋಚಿಸಿದ್ದರು. ಅಲ್ಲದೆ, ಕಾಲಾಪತ್ತರ್ ನಂತರ ಅದೇದಿನ ನಾವು ಹಿಂತಿರುಗಿ ಹೊರಡುವವರಿದ್ದೆವು. ಯಾರಿಗೂ ಸರಿಯಾಗಿ ಹೊದಿಯಲು ಕಂಬಳಿ ಇಲ್ಲದೆ ಪರದಾಟಕ್ಕೆ ಇಟ್ಟುಕೊಂಡಿತು. ಆ ಚಳಿಯಲ್ಲಿ ನಿದ್ದೆಯೇ ಬರುತ್ತಿಲ್ಲ. ಕಿಟಕಿಯಿಂದ ಹೊರಗೆ ಆಕಾಶ ಕಾಣಿಸುತ್ತಿತ್ತು. ಸ್ಪಷ್ಟವಾದ ಆಕಾಶದಲ್ಲಿ ನಕ್ಷತ್ರಗಳು ಮಿನುಗುತಿದ್ದವು. ಓ ಈ ರೀತಿಯೇ ಇದ್ದರೆ ನಾವು ಕಾಲಾಪತ್ತರ್ ಗೆ ಹೋಗುವುದು ನಿಶ್ಚಿತ. ಇದ್ದಕ್ಕಿದ್ದ ಹಾಗೆ ’ಯಾಕಾದರೂ ವಾತಾವರಣ ಚೆನ್ನಾಗಿಯ್ದೆಯೋ, ಇಲ್ಲದ್ದಿದ್ದಲ್ಲಿ ಆ ನೆಪದಿಂದಾಗಿಯಾದರೂ ಹೋಗದೆ ಇರಬಹುದಿತ್ತಲ್ಲವೇ’ ಅಂದುಕೊಂಡೆ. ಆದರೆ ’ಇದೊಂದೇ ಚಾನ್ಸ್, ಆದ್ದರಿಂದ ಅವಕಾಶವನ್ನು ಬಿಡಬಾರದು’ ಎಂದು ಮನ್ನಸ್ಸು ಮಾಡಿ ಮಲಗಲು ಪ್ರಯತ್ನಿಸಿದೆ.