Saturday, December 27, 2008

ಜಪಾನಿಯರ ಎವೆರೆಸ್ಟ್ ವ್ಯೂ ಹೊಟೆಲ್

ಐದನೇ ದಿನ (ಮೇ ೭, ೨೦೦೮)
ನಾಮ್ ಚೆ ಬಜಾರ್ (3489mt/11443ft) - ಎವೆರೆಸ್ಟ್ ವ್ಯೂ ಹೊಟೆಲ್ (3860m/12660ft)

ಜ್ಞಾನಿ ಮತ್ತು ಸಂದೀಪ್ ಇಬ್ಬರೂ ಬೆಳಿಗ್ಗೆ ಎದ್ದಾಗ ಸರಿಹೋಗಿದ್ದರು. ಆದರೆ ವಸುಮತಿಯವರ ಅನುಜ್ಞೆಯಂತೆ ಅವರು ಗುಂಪಿನಲ್ಲಿ ಎಲ್ಲರಿಗಿಂತ ಮುಂದೆ, ವಸುಮತಿಯವರ ಹಿಂದೆಯೇ ಇದ್ದರು. ಈ ಎಲ್ಲದರ ಮಧ್ಯೆ, ಅಶೋಕ್ (ಆತ ಒಬ್ಬ ಟ್ರಾವಲ್ ಎಜೆಂಟ್) ತುಂಬಾ ಸುಸ್ತಾಗಿದ್ದ. ಅವನು ತುಂಬಾ ತೆಳ್ಳಗಿದ್ದು, ಬಹಳ ಸ್ಟಾಮಿನ ಇದ್ದರೂ ಯಾಕೋ ಸುಸ್ತಾಗಿದ್ದ. ನಂದಿನಿಗೆ ತಲೆ ನೋವು ಜಾಸ್ತಿಯಾಗಿತ್ತು. ಮೋಹನ್ ತುಂಬಾ ಒಳ್ಳೆಯ ಒಂದು ಕ್ಯಾಮೆರಾ ತಂದಿದ್ದ. ಆದರಲ್ಲಿ ಸಿಕ್ಕಸಿಕ್ಕಲ್ಲೆಲ್ಲಾ ನಿಂತು ಫೊಟೊ ತೆಗೆಯುತ್ತಿದ್ದ. ಇದರ ದೆಸೆಯಿಂದಾಗಿ ಸ್ವಲ್ಪ ಜಾಸ್ತಿನೇ ಹಿಂದೆ ಬೀಳುತ್ತಿದ್ದ. ನಮ್ಮ ಕೆಲವರನ್ನು ಬಿಟ್ಟರೆ ಮೆಕ್ಕವರೆಲ್ಲಾ ಹೈ ಆಲ್ಟಿಟ್ಯುಡ್ ಟ್ರೆಕ್ಕಿಂಗ್ ಅನುಭವ ಇದ್ದವರು. ಈ ಮೋಹನ್ ಹೋದ ವರ್ಷವಷ್ಟೆ ಗಂಗೋತ್ರಿಗೆ ಹೋಗಿದ್ದನಂತೆ. ಅವನು ಯಾಕೊ ಆಗ ಈಗ ಕೆಮ್ಮುತ್ತಲೂ ಇದ್ದ. ಏನಾದರು ಒಂದು ಚೂರು ಕಂಡರೂ ಕೇಳಿದರೂ ವಸುಮತಿಯವರು, ಸ್ವಲ್ಪ ಜಾಸ್ತಿಯೇ ವಿಚರಿಸಿಕೊಳ್ಳುತ್ತಿದ್ದರು. ನಾವು ಅಲ್ಲಿಯೇ ಹತ್ತಿರದಲ್ಲಿದ್ದ ಜಪಾನೀಯರ ಒಂದು ಹೋಟೆಲು - ’ಎವೆರೆಸ್ಟ್ ವ್ಯೂ ಹೊಟೆಲ್’ ಗೆ ಅಕ್ಲಿಮಟೈಸೇಶನ್ ಹೋದೆವು. ಇಂದು ಕೇವಲ ಅಕ್ಲಿಮಟೈಸೇಶನ್ ದಿನವಾದ್ದರಿಂದ ಎಲ್ಲರೂ ಬಹಳ ಗೆಲುವಾಗಿದ್ದರು. ಇದು ಪರೀಕ್ಷೆಯ ಮಧ್ಯೆ ರಜ ಬಂದಂತೆ. ಜ್ಞಾನಿ ಮತ್ತು ಸಂದೀಪ್ ಅಂತೂ ಹಿಂದಿನ ದಿನದ ಘಟನೆಗಳನ್ನು ಸಂಪೂರ್ಣವಾಗಿ ಮರೆತು ಮತ್ತೆ ಅಚೀವರ್ಸ್ ಆಗಿದ್ದರು! ಬೆಂಬಿಡದ ಭೂತದಂತಿದ್ದ ಬೆನ್ನಮೇಲಿನ ಭಾರವಾದ ಚೀಲವಿಲ್ಲದ್ದಿದ್ದುದ್ದರಿಂದ ಎಲ್ಲರೂ ಲಘು ಬಗೆಯಾಗಿ ಬೇಗ ಬೇಗನೆ ಜೋಕುಗಳನ್ನು ಹೇಳಿಕೊಳ್ಳುತ್ತಾ ಒಬ್ಬರ ಮೇಲೆ ಇನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ

ಎವೆರೆಸ್ಟ್ ವ್ಯೂ ಹೊಟೆಲ್ ಗೆ ಹೋಗುವ ದಾರಿ

ಮೇಲೆ ಹತ್ತುತ್ತಿದ್ದರಿಂದ ಆಯಾಸ ಕಾಣಲಿಲ್ಲ. ಆ ಹೋಟೆಲು, ನಾಮ್ ಚೆ ಬಜಾರ್ ಹಿಂದೆ ಒಂದು ಸಣ್ಣ ಬೆಟ್ಟದ ತುದಿಯಲ್ಲಿದೆ. ಅಲ್ಲಿಂದ ಅಮ್ಮ-ಡಬ್ಲಮ್ ಮತ್ತು ಮೌಂಟೆವೆರೆಸ್ಟ್ ತುದಿಗಳು ಕಾಣಿಸುವುದರಿಂದ ಜಪಾನಿಯರು ಹೋಟಲನ್ನು ಅಲ್ಲಿ ಕಟ್ಟಿ ಅದಕ್ಕೊಂದು ಹೆಲಿಪ್ಯಾಡ್ ಒದಗಿಸಿದ್ದಾರೆ. ಜಪಾನಿಯರು ಈ ಪ್ರಪಂಚದಲ್ಲೇ ಹೆಚ್ಹಿನ ಪರ್ಯಟನೆ ಮಾಡುವವರಂತೆ. ಪ್ರಪಂಚದ ಯಾವ ಜಾಗಕ್ಕೆ ಹೋದರೂ ಒಬ್ಬ ಜಪಾನಿ ಅಲ್ಲೆಲ್ಲೋ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಿರುವುದನ್ನು ನೀವು ಕಾಣಬಹುದು. ಇಲ್ಲೂ ಇಬ್ಬರು ಹೆಂಗಸರು ನಮ್ಮ ನೋಡಿ ನಗುತ್ತಾ ಬೆನ್ನು ಬಗ್ಗಿಸುತ್ತಾ ನಮ್ಮ ಕೈಯಲ್ಲಿ
ಪ್ರಿಯ, ದೀಪಿಕಾ (ದಂತವೈದ್ಯೆ) ಹಾಗು ನಾನು ಎವೆರೆಸ್ಟ್ ವ್ಯೂ ಹೋಟೆಲಲ್ಲಿ

ಕ್ಯಾಮರ ಕೊಟ್ಟು ತೆಗೆಯಲು ಹೇಳಿದರು. ಜಪಾನಿಯರು, ನೇರವಾಗಿ ಇಲ್ಲಿಗೆ ಹೆಲಿಕಾಪ್ಟರ್ ಅಲ್ಲಿ ಬಂದಿಳಿದು, ಮೌಂಟೆವೆರೆಸ್ಟ್ ಒಡನೆ ಫೋಟೊ ತೆಗೆಸಿಕೊಂಡು ಅಲ್ಲಿಂದ ಹಿಂತಿರುಗುತ್ತಾರಂತೆ ! ಆಗ ಸುಮಾರಾಗಿ ೧೦ ಗಂಟೆ ಇರಬಹುದು. ಮೋಡ ಮುಚ್ಚಿತ್ತು. ನಮಗೆ ಅಲ್ಲಿಂದ ನಮ್ಮ ಮುಂದಿನ ಗುರಿ ತೆಂಗ್ ಬೋ ಚೆ ಕಾಣಿಸಿತೇ ವಿನಃ, ಇನ್ನೇನೂ ಕಾಣಲಿಲ್ಲ. ಹಿಮಾಲಯದಲ್ಲಿ ಹೀಗೆಯೇ. ಸುಮಾರಾಗಿ ೧೦ ರಿಂದ ಮೇಲೆ ಮೋಡ ಮುಚ್ಚಿ ಮುಂದೇನೂ ಕಾಣುವುದುಲ್ಲ. ಆದ್ದರಿಂದಲೇ ನಾವು ಬೆಳಿಗ್ಗೆ ಬೇಗನೆ ಹೊರಟು ಮಧ್ಯಾನದೊಳಗೆ ಗುರಿ ಸೇರಿಬಿಡುತ್ತಿದ್ದೆವು. ಪರ್ವತಾರೋಹಿಗಳು ಮೌಂಟ್ ಎವೆರೆಸ್ಟ್ ತುದಿಮುಟ್ಟಲು ಸುಮಾರು ರಾತ್ರಿ ಹತ್ತು ಗಂಟೆಗೆ ಹೊರಡುತ್ತಾರಂತೆ, ಬೆಳಗಿನ ಜಾವದಲ್ಲಿ ತುದಿ ಮುಟ್ಟಿ ಮಧ್ಯಾನದೊಳಗೆ ಬೇಗನೆ ಕೊನೆಯ ಬೇಸ್ ಕ್ಯಾಂಪಿಗೆ ಬಂದು ಬಿಡುತ್ತಾರಂತೆ. ಹೀಗಿ ಮಾಡದೆ ತಡಮಾಡಿದ ಎಷ್ಟೋ ಪರ್ವತಾರೋಹಿಗಳು ಹವಾಮಾನದ ವೈಪರೀತ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ನಾವು ಎವೆರೆಸ್ಟ್ ವ್ಯೂ ಹೊಟೆಲಲ್ಲಿ ನಿಂಬೆ ಹಣ್ಣಿನ ಬಿಸಿ ಪಾನಕ ಕುಡಿದು, ಸಿಕ್ಕ ಸಿಕ್ಕಸಿಕ್ಕಲ್ಲೆಲ್ಲಾ ಫೊಟೊ ಹೋಡೆದು, ಅಲ್ಲಿ ಇಟ್ಟಿದ್ದ ಇಡೀ ಸಾಗರ ಮಾತಾ ರಾಷ್ಟೀಯ ಉದ್ಯಾನವನದ ಮಾಡಲನ್ನೂ ಫೊಟೊ ತೆಗೆದು, ಅದರಲ್ಲಿದ್ದ ಎಲ್ಲಾ ಪರ್ವತಗಳ ಹೆಸರುಗಳನ್ನು ಉರುಹಚ್ಚಿ (ಮುಂದೆ ಅವುಗಳನ್ನು ಗುರುತಿಸಲು ಬೇಕಾಗುತ್ತಲ್ಲ!) ಹಿಂತಿರುಗಿ ಹೊರಡುವಾಗ ಸುಮಾರಾಗಿ ಮಧ್ಯಾನ ೧ ಗಂಟೆಯಾಗಿತ್ತು.

ದೂರದಲ್ಲಿ ತೆಂಗ್ ಬೋಚೆ, ಅದೇ ದಿಕ್ಕಿನಲ್ಲಿ ಎವರೆಸ್ಟ್ ಕಾಣುವುದು

ನಾವು ಹಿಂತಿರುಗಿ ಬಂದ ಮೇಲೆ, ವಸುಮತಿಯವರು ಒಬ್ಬೊಬ್ಬರನ್ನೇ ವಿಚಾರಿಸಿಕೊಂಡರು. ಅಶೋಕ ಅಕ್ಲಿಮಟೈಸೇಶನ್ ಗೆ ಬಂದಿರಲ್ಲಿಲ್ಲ. ಅವನ ಪ್ರಕಾರ ಅವನಿಗೆ ನಿದ್ದೆ ಇಲ್ಲದೆ ತಲೆ ನೋವಾಗುತ್ತಿದ್ದುದ್ದರಿಂದ, ಅರ್ಧ ದಿನ ನಿದ್ದೆ ಮಾಡಿದರೆ ಎಲ್ಲಾ ಸರಿಯಾಗುತ್ತದೆಂದು ಮಲಗಿಕೊಡಿದ್ದ. ವಸುಮತಿಯವರು ಅವನಿಗೆ ಆಲ್ಟಿಟ್ಯುಡ್ ಸಿಕ್ನೆಸ್ ಬಂದಿದೆಯೆಂದು ಒಪ್ಪಿಸಲು ಹರಸಾಹಸ ಮಾಡುತ್ತಿದ್ದರು. ಅವರ ಕೋಣೆಯಲ್ಲಿ ಅವನನ್ನು ಕೂಡಿಹಾಕಿ, ವಸುಮತಿ ಮತ್ತು ಸ್ಮಿತ ಅವನ ಎಲ್ಲಾ ನಾಡಿಗಳನ್ನು ಒತ್ತಿ ಅವು ಸರಿಯಾಗಿ ಬಡಿದುಕೊಳ್ಳುತ್ತಿವೆಯೆ ಎಂದು ಪರೀಕ್ಷಿಸಿದರು. ಇತರ ಕೆಲವು ವ್ಯಾಯಾಮಗಳನ್ನು ಮಾಡಿಸಿ, ಕೊನೆಗೂ ಅವನು ಪ್ರಯಾಣವನ್ನು ಮುಂದುವರಿಸಬಹುದೆಂದು ಘೋಷಿಸಿ ಕಳುಹಿಸಿದರು. ನಾವೆಲ್ಲಾ ಮಧ್ಯಾನದ ಊಟ ಮಾಡಿ, ನಮಗೆ ಬೇಕಾದ ಸಾಮಾನುಗಳನ್ನು ಕೋಳ್ಳಲು ಹೊರಟೆವು. ನಾಮ್ ಚೆಯಲ್ಲಿ ಬಹಳ ಅಂಗಡಿಗಳಿವೆ. ಪ್ರತಿ ಶನಿವಾರ ಅಲ್ಲಿ ಸಂತೆ ! ಇಲ್ಲಿ ಯುರೋಪಿಯನ್ ಜನ ಬಹಳ ಬರುವುದರಿಂದಲೋ ಎನೋ, ಬಹಳ ಬೇಕರಿಗಳಿದ್ದು, ಪಿಜಾಗಳು, ಕೇಕುಗಳು ಮತ್ತು ಬಾಯಿ ನೀರೂರುವ ಇನ್ನೂ ಏನೇನೋಗಳು ಅಲ್ಲಿ ಇದ್ದವು. ಸುಮಾರಾಗಿ ಮಿಕ್ಕೆಲ್ಲಾ ಅಂಗಡಿಗಳಲ್ಲಿ ಬರೀ ಪರ್ವತಾರೋಹಿಗಳಿಗೆ ಬೇಕಾದ ಸಾಮಾನುಗಳು ದೊರೆಯುತ್ತವ. ಅವು ಒರಿಜಿನಲ್ ಅಲ್ಲದಿದ್ದರೂ ಮೇಡ್ ಇನ್ ಚೈನಾದು. ಒಳ್ಳೆಯ ಗುಣಮಟ್ಟದವು ಹಾಗು ಕಡೆಮೆ ಬೆಲೆ ಕೂಡ. ಟ್ರೆಕ್ಕಿಂಗ್ ಹೋಗುವವರಿಗೆ ನನ್ನ ಕಿವಿಮಾತೇನೆಂದರೆ, ಟ್ರೆಕ್ಕಿಂಗೆ ಬೇಕಾದ ಎಲ್ಲಾ ಸಾಮಾನು ಸರಂಜಾಮುಗಳನ್ನು ಇಲ್ಲಿ ಅಥವಾ ಖಟ್ಮಂಡುವಿನಲ್ಲಿ ಕೋಳ್ಳುವುದೇ ಒಳ್ಳೆಯದು. ಬೆಂಗಳೂರಿನಲ್ಲಿ ಇಲ್ಲಿಗಿಂತ ೬ ಪಟ್ಟು ದುಬಾರಿ! ಜ್ಞಾನಿ ಮಂಡಿಗೆ, ಪಾದದ ಮಣಿಕಟ್ಟಿಗೆ, ಎಲ್ಲಾಕಡೆಗೂ ಪ್ಯಾಡ್ ಕೊಂಡ. ಬಹುಪಾಲು ಎಲ್ಲರಿಗೂ ಲಫೂಮ ಶೂಗಳು ತೊಂದರೆ ಕೊಡುತ್ತಿದ್ದವು. ತಡೆಯಲಾರದೆ ಕೆಲವರು ಬೇರೆ ಶೂ ಕೊಂಡರು. ಇಲ್ಲಿ ಇಂಟರ್ ನೆಟ್ ಬಹಳ ಚೀಪು. ನಾವು 11443 ಅಡಿ ಎತ್ತರದಿಂದ ಎಲ್ಲರಿಗೂ ಈ-ಮೇಲ್ ಕಳಿಹಿಸಿದೆವು, ಫೋನ್ ಮಾಡಿದೆವು. ಅಮ್ಮ ಒಂತೂ ”ಎಲ್ಲಾರೂ ಹುಷಾರಾಗಿದ್ದೀರ ಅಲ್ಲವೇ ? ಮನೆಯೊಲ್ಲೊಂದು ಮಗು ಬಿಟ್ಟು ಹೋಗಿದ್ದೀಯ ಎಂದು ನೆನಪಿರಲಿ" ಎಂದು ಅಲ್ಲೂ ಹಿತವಚನ ಕೊಡಲು ಶುರುಮಾಡಿದರು. ದೇವರಿಗೆ ಎಲ್ಲಾಕಡೆಗೆ ಒಂದೇ ಸಮಯದಲ್ಲಿ ಇರಲು ಸಾಧ್ಯವಾಗುವುದಿಲ್ಲವೆಂದು, ತಾಯಂದಿರನ್ನು ಇಟ್ಟಿದ್ದಾನಂತೆ! ನನಗೇನಾದರೂ ಆದ್ದಲ್ಲಿ, ನನ್ನ ’ದುರಾದೃಷ್ಟ’ಕ್ಕೆ ಅಮ್ಮ ಹೇಳಿದ್ದನ್ನು ಹೇಳಿ ಓಡಿಸುತ್ತೇನೆ ಎಂದು ಕೊಂಡೆ.

ಅಂದು ಒಬ್ಬಳು ಜರ್ಮನ್ ಹೆಂಗಸಿಗೆ ಅಲ್ಲಿನ ಲೋಕಲ್ ಹುಡುಗರಿಬ್ಬರು ರೇಪ್ ಮಾಡಿದ್ದರಂತೆ, ಅವಳ ಬಾಯ್ ಫ್ರೆಂಡ್ ಅಂಗಡಿಯಲ್ಲಿ ಏನೋ ತರಲು ಹೋಗಿದ್ದಾಗ ಇದು ನಡೆಯಿತಂತೆ. ಅಲ್ಲಿಯ ಜನ ಬಹಳ ಒಳ್ಳೆಯವರು. ಈ ರೀತಿಯ ಯಾವುದೇ ಕಹಿ ಘಟನೆಗಳು ಬಹಳ ಅಪರೂಪ. ನಾವು ಹಿಂತಿರುಗಿಬರುವಾಗ ಜ್ಞಾನಿ ಅಲ್ಲಿ ಕಂಡ ಸೈನಿಕನನ್ನು ಅಪರಾಧಿಗಳನ್ನು ಹಿಡಿಯಲಾಯ್ತ ? ಎಂದು ಕೇಳಿದ. ಅವರು ಸಿಕ್ಕಿಹಾಕಿಕೊಡರೆಂದು, ಹಾಗು ಅವರಿಗೆ ೧೭ ವರ್ಷಗಳ ಖಾರಾಗೃಹ ಶಿಕ್ಷೆ ವಿಧಿಸಲಾಗಿದೆ. "ಮುಂದೆ ಬರುವ ಟ್ರೆಕ್ಕರ್ ಗಳು ಭಯ ಬೀಳಬಾರದೆಂದು ಹೀಗೆ ಮಾಡಲಾಗಿದೆ, ಅದರೆ ಅವರದ್ದೇನೂ ತಪ್ಪಿರಲಿಲ್ಲ, ಆ ಹುಡುಗಿ ಸುಮ್ಮನೆ... " ಅಂತ ಗೊಣಗಿಕೊಂಡ. ಈ ಘಟನೆಯಿಂದ ವಸುಮತಿಯವರು, ಇನ್ನು ಮುಂದಿನ ದಿನಗಳಲ್ಲಿ ಪ್ರತೀ ಹುಡುಗಿಯೂ ಕೊನೆಯ ಪಕ್ಷ ಒಬ್ಬ ಹುಡುಗನೊಡನೆಯಾದರು ಬರಬೇಕೆಂದು ಆಜ್ಞೆ ಹೊರಡಿಸಿದರು. ಸಂಜೆ ನಂದಿನಿಗೆ ಎಷ್ಟು ತಲೆನೋವಾಗುತ್ತಿತ್ತೆಂದರೆ, ಅವಳೂ ಹಾಗು ಅಶೋಕ್ ಚೇತರಿಸಿಕೊಳ್ಳದಿದ್ದಲ್ಲಿ, ಅವರನ್ನು ಹಿಂದೆ ಬಿಟ್ಟು ನಾವು ಮುಂದೆ ಹೋಗುವುದೆಂದು ವಸುಮತಿಯವರು ನಿರ್ಧರಿಸಿದರು.

ಮೇಲೆ ಮೇಲೆ ಹೋದಂತೆ ಥಂಡಿಯಿಂದ ರಾತ್ರಿಗಳು ಬಹಳ ಅಸಹನೀಯವಾಗಿರಲು ಪ್ರಾರಂಭವಾಗಿದ್ದವು. ಅಲ್ಲಿ ಯಾವ ಹೋಟಲಿನಲ್ಲೂ ಹೀಟರುಗಳು ಇರಲಿಲ್ಲ. ಅಲ್ಲಿ ಬುಕಾರಿ ಎಂಬ ಒಂದು ರೀತಿಯ ಒಲೆಯನ್ನು ಇದ್ದಲಿನಿಂದ ಹಚ್ಚಿಸಿಡುತ್ತಿದ್ದರು. ಅದರ ಮೇಲೆ ಬಿಸಿ ನೀರಿನ ಕೆಟಲು ಇತ್ತಿರುತ್ತಿದ್ದರು. ಅದರಲ್ಲಿ ಯಾವಾಗಲೂ ಬಿಸಿ ನೀರು ಇರುತ್ತಿತ್ತು. ಇದು ಇಡೀ ಕೋಣೆಯನ್ನು ಬೆಚ್ಚಗಿಡುತ್ತಿತ್ತು. ನಾವು ಯಾವಾಗಲು ಬುಕಾರಿಯ ಸುತ್ತ ಕುಳಿತು ಊಟ ಮಾಡಿ ಆಟ ಆಡುತ್ತಿರುತ್ತಿದ್ದೆವು. ಮೇಲೆ ಮೇಲೆ ಹೋದಂತೆ ನಾವು ಬಿಸಿ ನೀರನ್ನು ಸಹ ಹಣ ಕೊಟ್ಟು ಕೊಳ್ಳಬೇಕು. ಥಂಡಿ ನೀರೊಂತು ಕುಡಿಯಲಸಾಧ್ಯ. ಅಲ್ಲಿ ಎಲ್ಲ ಸಾಮಾನುಗಳನ್ನೂ ಬೆನ್ನ ಮೇಲೆ ಹೊತ್ತು ತರಬೇಕಾದ್ದುದ್ದರಿಂದ ಗ್ಯಾಸ್ ಬಹಳ ದುಬಾರಿ. ನಾಮ್ ಚೆವರೆಗೆ ಮಾತ್ರ ವಿದ್ಯುಚ್ಚಕ್ತಿ ಇದೆ. ಹಾಗಾಗಿ ಮೇಲೆ ಮೇಲೆ ಹೋದಂತೆ, ಗ್ಯಾಸನ್ನು ಬರಿ ಊಟಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾಮ್ ಚೆಯಲ್ಲಿ ಗ್ಯಾಸ್ ಗೀಜರಿಂದ ಬೆಸಿಮಾಡಿದ್ದ ನೀರಿನ ಸ್ನಾನ ಸಾಧ್ಯವಿತ್ತು. ಒಂದು ಸ್ನಾನಕ್ಕೆ ೨೦೦ ನೇಪಾಲಿ ರುಪಾಯಿಗಳು. ಆದರೆ ಈ ಥಂಡಿಯಲ್ಲಿ ನಮಗೆ ಯಾರಿಗೂ ಬಟ್ಟೆ ಬಿಚ್ಚುವ ಉತ್ಸಾಹ ಇರಲಿಲ್ಲ. ನಾಮ್ ಚೆ ಇಂದ ಮುಂದಕ್ಕೆ ಸ್ನಾನದ ಮನೆಗಳೇ ಇರಲಿಲ್ಲ! ನಾವು ಕಟ್ಮಂಡು ಬಿಟ್ಟ ಮೇಲೆ ಸ್ನಾನವೇ ಮಾಡಿರಲಿಲ್ಲ. ನಾಳೆ ತೆಂಗ್ ಬೋಚೆಗೆ ಹೊರಡುವವರಿದ್ದೆವು. ಎಂದಿನಂತೆ ೫-೬-೭ ಎಂದು ಸಿರ್ಧರಿಸಿ ಥಂಡಿಯನ್ನು ಶಪಿಸುತ್ತಾ ಮಲಗಲು ತೆರಳಿದೆವು.

Friday, December 12, 2008

ನಾಲ್ಕನೇ ದಿನ - ನಾಮ್ ಚೆ ಹತ್ತಿರ ಹೈ ಆಲ್ಟಿಟ್ಯುಡ್ ಪ್ರವೇಶ

ನಾಲ್ಕನೇ ದಿನ (ಮೇ ೬, ೨೦೦೮)
ಫಕ್ದಿಂಗ್ (2652mt/8698ft) - ನಾಮ್ ಚೆ ಬಜಾರ್ (3489mt/11443ft)

ಈಗಾಗಲೇ ನಮ್ಮ ಗುಂಪು ಚದುರಿಹೋಗಿತ್ತು. ವಸುಮತಿಯವರು ಎಷ್ಟೋ ಮುಂದೆ ಹೋಗಿದ್ದರು. ನಾನು ಜ್ಞಾನಿಯ ಜೊತೆ ಬರುತ್ತಾ ಇದ್ದೆ. ಅವನಿಗೆ ತಾನು ವ್ಯಾಯಾಮ ಮಾಡಿಲ್ಲ ಎನಾಗುತ್ತೋ ಅಂತ ದಿಗಿಲು ಶುರುವಾಗಿತ್ತು. ಆದರೆ ಅದು ಈ ರೀತಿ ಯೋಚಿಸುವ ಸಮಯವಲ್ಲ. ನಾನು ಅವನಿಗೆ ಹೇಗೆ ಕಾಲುಗಳನ್ನು ಇಡಬೇಕು, ಹೇಗೆ ಲಯಬದ್ಧವಾಗಿ ಉಸಿರಾಡಬೇಕು ಅಂತ ಹೇಳಿಕೊಡುವಷ್ಟರಲ್ಲಿ ನಾಮ್ ಚೆ ಬಜಾರ್ ಹತ್ತಿರದ ಕೊನೆಯ ತೂಗು ಸೇತುವೆ ಬಂತು. ಅದು ಸುಮಾರು ಎಂಟು ಅಂತಸ್ತಿನ ಕಟ್ಟಡದಷ್ಟು ಎತ್ತರದಲ್ಲಿದ್ದ ಸೇತುವೆ. ಅದನ್ನು ’ಹಿಲರಿ ಸಸ್ಪೆನ್ಶನ್ ಬ್ರಿಡ್ಜ್’ ಅಂತ ಕರೆಯುತ್ತಾರೆ. ಅದರ ಮೇಲೆ ಇರುವೆಗಳಂತೆ ಪ್ರಿಯ ಹಾಗು ವಸುಮತಿಯವರ ಗುಂಪು ದಾಟುವುದನ್ನು ದೂರದಿಂದ ಕಂಡೆವು. ಅದರ ಹತ್ತಿರ ಹೋಗಲು ಒಂದು ಕಡಿದಾದ ಗುಡ್ಡ ಹತ್ತಬೇಕಿತ್ತು. ಅದರ ಎತ್ತರ ನೋಡೇ ಜ್ಞಾನಿ ಹಿಂದೆ ಬಿದ್ದಿದ್ದ ಕೊನೆಯ ಗುಂಪಿನೊಡನೆ ತಾನು ಬರುವುದಾಗಿ, ಅಲ್ಲಿಯವರೆಗೆ ಅಲ್ಲೇ ಕಲ್ಲಿನ ಮೇಲೆ ಕುಳಿತುಕೊಂಡು ಸುಧಾರಿಸಿಕೊಳ್ಳುವುದಾಗಿ ಹೇಳಿದ. ಅದು ನಿಜವಾಗಿಯೂ ಎರಡು ಪರ್ವತಗಳ ನಡುವೆ ನೇತುಹಾಗಿದ್ದ ತೂಗು ಸೇತುವೆ. ಒಂದು ಗುಡ್ಡದ ತುದಿಯಿಂದ ಇನ್ನೊಂದು ಬೆಟ್ಟದ ಮಧ್ಯಕ್ಕೆ ಕೋಸಿ ನದಿಗೆ ಕಟ್ಟಿದ್ದ ಸುಮಾರು ೫೦ ಮೀಟರ್ ಉದ್ದದ ಸೇತುವೆ. ಅದನ್ನು ದಾಟಿದ ತಕ್ಷಣ ಮೇಲಕ್ಕೆ ಕಡಿದಾದ ದಾರಿ ಹತ್ತಬೇಕು. ನಾನು ಸೇತುವೆಯ ಬಲಗಡೆಯ ಗುಡ್ಡ ಹತ್ತಲು ಶುರುಮಾಡಿದೆ. ನೆಡೆಯುವುದು ನಿಧಾನವಾಗಲು ಶುರುವಾಯಿತು. ನಂತರ ಶರತ್ ಹಾಗು ತನ್ವಿ ಸಿಕ್ಕರು. ತನ್ವಿ ಮುಂದೆ ನಡೆಯಲಾರದೆ ಹೆಜ್ಜೆ ಹೆಜ್ಜೆಗೂ ಪರದಾಡುತ್ತಿದ್ದಳು. ಅವಳ ಶೂ ಸಹ ತೊಂದರೆ ಕೊಡುತ್ತಿತ್ತು. ಬಹಳ ಸುಸ್ತಾದಂತೆ ಕಾಣುತ್ತಿದ್ದಳು.

ಶರತ್ ಹಾಗು ತನ್ವಿ, ಹಿಂದೆ ದೂರದಲ್ಲಿ ಹಿಲರಿ ಸಸ್ಪೆನ್ಶನ್ ಬ್ರಿಡ್ಜ್

ನಾನು ಅವರನ್ನು ದಾಟಿ ಸೇತುವೆ ದಾಟಲು ಶುರುಮಾಡಿದಾಗ ಒಬ್ಬೊಂಟಿಯಾದೆ. ಒಬ್ಬೊಂಟಿಯಾಗಿ ಇಂತ ಸಮಯದಲ್ಲಿ ಎಂದೂ ನಡೆಯಬಾರದು. ಯಾರಾದರು ಪ್ರೊತ್ಸಾಹಕ್ಕೆ ಇದ್ದರೆ ಬಚಾವ್. ಸೇತುವೆ ದಾಟಿದ ಮೇಲೆ ವಿಮಲ್ ಹಾಗು ಸೆಂತಿಲ್ ಸಿಕ್ಕರು. ಅವರು ನನಗೆ ಟ್ಯಾಂಗ್ (Tang) ಅನ್ನು ನೀರಿನೊಡನೆ ಬೆರೆಸಿಕೊಂಡು ಹತ್ತು ಹೆಜ್ಜೆಗೆ ಒಂದುಸಲ ಒಂದು ಗುಟುಕು ಕುಡಿಯಲು ಸಲಹಿದರು. ಈ ಇಬ್ಬರಿಗೆ ಬಹಳ ಸ್ಟ್ಯಾಮಿನಾ. ಅವರೂ ಮುಂದೆ ನಡೆದು ಸ್ವಲ್ಪ ಹೊತ್ತಿನಲ್ಲಿ ಮಾಯವಾದರು. ನಾನು ಸ್ವಲ್ಪ ದೂರ ಹೋದ ನಂತರ ಖಾಜಿ ಸಿಕ್ಕಿದ. ಅವನು ನನ್ನ ಜೊತೆ ಮಾತಾಡುತ್ತಾ ಹತ್ತಲು ಶುರುಮಾಡಿದ.

ಹಿಲರಿ ಸಸ್ಪೆನ್ಶನ್ ಬ್ರಿಡ್ಜ್ ಹತ್ತಿರದಿಂದ

ಅವನು ಕೇವಲ ೨೦ ವರ್ಷದವನು. ಅವನಿಗೆ ೨೪ ವರ್ಷವಾದಾಗ ಮೌಂಟ್ ಎವೆರೆಸ್ಟ್ ಹತ್ತಲು ಹೋಗುತ್ತಾನಂತೆ. ಅಲ್ಲಿಯ ಎಲ್ಲಾ ಶರ್ಪಾ ಜನರಿಗೆ ಮೌಂಟ್ ಎವೆರೆಸ್ಟ್ ಹತ್ತುವುದೊಂದೆ ಕನಸು ಹಾಗು ಸಾಧನೆಯ ಗುರಿ. ಈ ಸಲ ೫೦ನೇ ವರ್ಷದ ವಾರ್ಷಿಕೋತ್ಸವದ ಪರ್ಯಂತ ಎವೆರೆಸ್ಟ್ ಬೇಸ್ ಕ್ಯಾಂಪಿನಿಂದ ನಾಮ್ ಚೆ ವರೆಗೆ (೫೨ ಕಿಮಿ) ಮ್ಯಾರಥಾನ್ ಇಟ್ಟಿದ್ದಾರಂತೆ. ಜಗತ್ತಿನ ಎಲ್ಲಾಕಡೆಯಿಂದ ಜನ ಓಡಲು ಬರುತ್ತಿದ್ದಾರಂತೆ. ಅದರಲ್ಲಿ ಅವನೂ ಪಾಲ್ಗೊಳ್ಳುತ್ತಿರುವವನೆಂದು ಹೇಳಿದ. ಎಲ್ಲರಿಗೂ ಹುಚ್ಚು ಹಿಡಿದಿದೆ ಅನ್ನಿಸಿತು. ನಂತರ ನಾನು ತುಂಬಾ ನಿಧಾನವಾಗಿ ನಡೆಯುತ್ತಿದ್ದೇನೆಂದು ಹೇಳಿ ಅವನು ಮುಂದೆ ಹೊರಟು ಹೋದ. ಮತ್ತೆ ನಾನು ಒಂಟಿ.

ಪೋರ್ಟರುಗಳ ಬುಟ್ಟಿಗಳು

ಅಲ್ಲಿ ಬರಿ ಪೋರ್ಟರುಗಳು. ಬಾಗಿಲುಗಳು, ಮಾಂಸ, ಊಟದ ಪದಾರ್ಥಗಳು, ಮರದ ಹಲಗೆಗಳು ಇತರೆ ಸಾಮಾನುಗಳನ್ನು ಬೆನ್ನ ಮೇಲೆ ಹೊತ್ತು ಹೋಗುತ್ತಿದ್ದರು. ಆವರು ೪೦ ರಿಂದ ೬೦ ಕೆಜಿ ಹೊರಬಲ್ಲರು. ಅವರೂ ಸಹ ಮೂರು ನಿಮಿಷಕ್ಕೊಮ್ಮೆ ನಿಂತು ಸುಧಾರಿಸಿ ಕೊಳ್ಳುತ್ತಿದ್ದರು. ಇನ್ನೂ ಸ್ವಲ್ಪ ಮೇಲೆ ಹತ್ತಿದ ನಂತರ ನನಗೆ ಒಂದು ಹೆಜ್ಜೆ ಇಟ್ಟರೆ ಸುಧಾರಿಸಿ ಕೊಳ್ಳುವಂತಾಗುತ್ತಿತ್ತು. ಆಗ ಯಾರೊ ಅಮೆರಿಕನ್ ಮುದುಕ ದಂಪತಿಗಳು ನನ್ನ ಹಿಂದೆ ಬರುತ್ತಿದ್ದುದ್ದು ಕಾಣಿಸಿತು. ಹೆಂಡತಿ ಎರಡು ಹೆಜ್ಜೆಗೊಮ್ಮೆ ನಿಂತು ವಾಂತಿ ಮಾಡುತ್ತಿದ್ದಳು. ಅವಳ ಗಂಡ ಹಾಗು ಪೋರ್ಟರ್, ಅವಳಿಗಾಗಿ ನಿಲ್ಲುವುದು, ಅವಳು ವ್ಯಾಕ್ ವ್ಯಾಕ್ ಮಾಡುವುದು, ಅವರು ಅವಳಿಗೆ ನೀರು ಕೊಡುವುದು ನಂತರ ಮತ್ತೈದು ಹೆಜ್ಜೆ ಮುಂದುವರಿಯುವುದು. ಹೀಗೆ ಮುಂದುವರಿಯ್ತ್ತಿದ್ದರು. ಅವರು ನನ್ನ ಹತ್ತಿರ ಬಂದಾಗ, ಅವಳು ನಕ್ಕು, "Altitude sickness, we have crossed 10,000ft you see, drink lots of water and walk for few steps, take deep breadth and walk" ಅಂತ ಹೇಳಿ ಮುಂದೆ ಹೋದಳು. "ಇದ್ಯಾವ ಶನಿ ವಕ್ಕರಿಸಿತಪ್ಪಾ !" ಎಂದು, ನಾನು ಅವಳು ಹೇಳಿದಂತೆ ಮಾಡುತ್ತಾ ಮುಂದುವರಿದೆ. ನನಗೆ ಇನ್ನು ಮುಂದುವರಿಯಲು ಸಾಧ್ಯವೇ ಇಲ್ಲ ಅನ್ನಿಸಲು ಶುರುವಾಯಿತು. ಬೆವರೇನೂ ಇಳಿಯುತ್ತಿರಲಿಲ್ಲ, ಆದರೆ ನೆಡೆಯಲು ಶಕ್ತಿಯೇ ಇಲ್ಲವೆನಿಸಲು ಶುರುವಾಯಿತು. ಇದು ಮೇಲೆ ಮೇಲೆ ಹೋದಂತೆ, ಆಮ್ಲಜನಕ ರಕ್ತದಲ್ಲಿ ಕಡಿಮೆಯಾಗಲು ಶುರುವಾಗುತ್ತದೆ, ಆದ್ದರಿಂದ ಈ ರೀತಿ ಎಂದು ನಂತದ ತಿಳಿಯಿತು. ಪರ್ವತಾರೋಹಿಗಳು ವಯಾಗ್ರ ಮಾತ್ರೆಗಳನ್ನೂ ತೆಗೆದುಕೊಳ್ಳುತ್ತಾರಂತೆ! (ಇದರ ಸತ್ಯಾಸತ್ಯೆಯ ಮೇಲೆ ಸ್ವಲ್ಪ ಅನುಮಾನ ಇದೆ). ವಯಾಗ್ರ ಮಾತ್ರೆಗಳು ರಕ್ತ ನಾಳಗಳನ್ನು ಅಗಲಿಸಿ ಜಾಸ್ತಿ ಆಮ್ಲಜನಕ ದೇಹದಲ್ಲಿ ಓಡಾದುವಂತೆ ಮಾಡುವುದರಿಂದ ಎತ್ತರದ ಆಲ್ಟಿಟ್ಯುಡಿನಲ್ಲೂ ಸಮುದ್ರ ಮಟ್ಟದಲ್ಲಿದ್ದಂತೆ ಶಕ್ತಿ ಹಾಗು ತ್ರಾಣ ಬರುತ್ತದಂತೆ.

ಜ್ಞಾನಿ ಬರುವವರೆಗೂ ಹೇಗೋ ನಡೆಯುವುದೆಂದು ನಂತರ ಏನು ಮಾಡುವುದೆಂದು ತೀರ್ಮಾನಿಸುವುದೆಂದುಕೊಂಡೆ. ಒಂದು ಹೆಜ್ಜೆ ಇಡುವುದು, ಎರಡು ನಿಮಿಷ ನಿಲ್ಲುವುದು, ಮಾಡುತ್ತಾ ಮುಂದುವರಿಯುತ್ತಿದ್ದೆ. ಆಗ ಮುಂದಿನಿಂದ ಎಬ್ಬ ಪುಣ್ಯಾತ್ಮ ಬಂದ. ಆತನ ಹೆಸರು ಭಂಡಾರಿ. ಹಿಂದಿ ಮಾತನಾಡುತ್ತಿದ್ದರು. ಅಲ್ಲಿಯ ಸೈನ್ಯದಲ್ಲಿ ಇರುವ ಒಬ್ಬನೇ ಹಿಂದುಸ್ಥಾನಿಯಂತೆ. ಭಂಡಾರಿ ಎಂದು ಯಾರನ್ನೇ ಕೇಳಿದರೂ ತೋರಿಸುತ್ತಾರಂತೆ. (ಆದರೆ ನಂತರ ಕೇಳಿದಾಗ ಯಾರಿಗೂ ಗೊತ್ತಿರಲ್ಲಿಲ್ಲ !). ಆತ, ನಾನು ಕಷ್ಟಕರವಾದ ದಾರಿಯನ್ನು ಪೂರ್ತಿಯಾಗಿ ಮುಗಿಸಿದ್ದೇನೆಂದು, ಇನ್ನು ಕೆವಲ ಸುಲಭವಾದ ದಾರಿ, ಸ್ವಲ್ಪ ದೂರ ಮಾತ್ರ ಇರುವುದೆಂದು ಹೇಳಿದರು. ಎಲ್ಲಿಂದಲೋ ಜೀವ ಬಂತು. ಮುಂದೆ ಒಂದು ತಿರುವಿನಲ್ಲಿ ನಾಮ್ ಚೆ ಬಜಾರಿನ ಮನೆಗಳು ಚುಕ್ಕೆ ಚುಕ್ಕೆಯಾಗಿ ಕಂಡಾಗ, ನಿಂತು ಫೊಟೊ ತೆಗೆದುಕೊಂಡು ನಾಮ್ ಚೆ ಕಂಡಿದ್ದು ಖಾತರಿ ಮಾಡಿಕೊಂಡೆ. ಅದು ನಾನು ಬೆಂಗಳೂರಿನಲ್ಲಿ, ಫೋಟೊನಲ್ಲಿ ನೋಡಿದ್ದ ನಾಮ್ಚೆ ಬಜಾರೇ ಆಗಿತ್ತು! ಕೆಂಪು ಮತ್ತು ನೀಲಿ ಹೆಂಚುಗಳಿದ್ದ ಸಣ್ಣ ಮನೆಗಳು ಬೆಟ್ಟದುದ್ದಕ್ಕೂ ಕಾಣುತ್ತಿದ್ದವು.

ತಿರುವಿನಲ್ಲಿ ಕಂಡ ನಾಮ್ ಚೆ ಬಜಾರ್

’ಹಿಮಾಲಯ ಪರ್ವತ, ಸಾಕಪ್ಪಾ ನಿನ್ನ ಸಹವಾಸ’ ಎಂದು ಮೊದಲ ಸಲ ಅಂದುಕೊಂಡೆ (ಮುಂದೆ ಇದನ್ನು ಲೆಕ್ಕವಿಲ್ಲದಷ್ಟುಸಲ ಅಂದುಕೊಂಡಿರುವೆ !). ಅಲ್ಲಿಂದ ನಾನು ನಮ್ಮ ’ಹಿಮಾಲಯನ್ ಲಾಡ್ಜ್’ ಸೇರಲು ಇನ್ನೂ ಒಂದು ಗಂಟೆ ಬೇಕಾಯಿತು. ಅಲ್ಲಿ ಎಲ್ಲಾ ಖೊಠಡಿಗಳೂ ಐಸ್ ಕೋಲ್ಡ್. ಬಿಸಿ ನಿಂಬೆ ಶರಭತ್ತು ಕುಡಿದಾಗಲೇ ಸಮಾಧಾನ, ಸ್ವಲ್ಪ ಶಕ್ತಿ ಬಂತು.ಎಲ್ಲರಿಗೂ ಬಿಸಿ ಅನ್ನ ಹಾಗು ದಾಲ್, ಅದರ ಜೊತೆಗೆ ಅದೆಂಥದೋ ಸೊಪ್ಪಿನ ಪಲ್ಯ ಊಟಕ್ಕೆ.

ಜ್ಞಾನಿ ಮತ್ತೆ ಕೆಲವರು ಇನ್ನೂ ಬಂದಿರಲಿಲ್ಲ, ನನಗೆ ಸ್ವಲ್ಪ ಯೋಚನೆಯಾಗಲು ಶುರುವಾಯ್ತು. ಒಂದು ಗಂಟೆಯ ನಂತರ ನಮ್ಮ ಗುಂಪಿನಲ್ಲಿದ್ದ ಒಬ್ಬ ವೈದ್ಯ ಡಾ.ಮಂಜುನಾಥ್ ಬಂದರು, ಅವರು ನಮಗೆ ಹೇಳಿದ್ದು - "ಜ್ಞಾನಿ ಮತ್ತು ಸಂದೀಪರಿಗೆ ಮೇಲೆ ಬರಲಾಗುತ್ತಿಲ್ಲ, ಇನ್ನೂ ಬಹಳ ದೂರದಲ್ಲಿದ್ದಾರೆ. ಜ್ಞಾನಿಗೆ ಮಂಡಿನೋವಾಗಿದೆ, ಎರಡು ಹೆಜ್ಜೆಗೆ ನಿಲ್ಲುತ್ತಾಯಿದ್ದಾನೆ. ಸಂದೀಪನಿಗೆ ತುಂಬಾ ಸುಸ್ತಾಗಿದೆ." ಆಗ ವಸುಮತಿ ಅವರ ಮಗಳೊಡನೆ (ಡೆಪ್ಯುಟಿ ಲೀಡರ್) ಮಾತಾಡಿ, ಖಾಜಿಗೆ ಅವರ ಚೀಲಗಳನ್ನು ಹೊತ್ತು ತರಲು ಹೇಳಿದರು. ನಂತರ ನನ್ನ ಕಡೆ ತಿರುಗಿ "ಎನು ಮಾಡುತ್ತೀಯಮ್ಮ ಈಗ ? ನಾಳೆ ಹಿಂದೆ ಹೋಗುತ್ತೀರ ?" ಅಂತ ಕೇಳಿದರು. ನನ್ನ ಹೃದಯವೇ ಹೊರಬಂತು. ’ಅಯ್ಯೊ ಗ್ರಹಚಾರವೆ, ಸಂಕಷ್ಟವನ್ನು ಹೇಗೆ ಬಗೆಹರಿಸಬಹುದು ?’ ಎಂದು ನನ್ನ ಮನಸ್ಸು ನನಗೆ ಎಲ್ಲಾಬಗೆಯ ಐಡಿಯ ಕೊಡಲು ಶುರುಮಾಡಿತು. ಇಲ್ಲೆಲ್ಲಾ ಎಂಥಾ ಸೌಲಭ್ಯವಿತ್ತೆಂದರೆ ಜ್ಞಾನಿ ಸುಲಭವಾಗಿ ನಿಭಾಯಿಸಿಕೊಳ್ಳಬಲ್ಲ, ಅಲ್ಲದೆ, ಅವನೇನು ಸಾಯುತ್ತಿಲ್ಲವಲ್ಲ, ನಾನು ಈ ಒಂದು ಅವಕಾಶಕ್ಕಾಗಿ ನನ್ನ ಅರ್ಧ ಜೀವನ ಪೂರ್ತೀ ಕಾದಿದ್ದನ್ನು ನೋಡಿರುವ ಜ್ಞಾನಿ ಬಹುಶಃ ಎಂದಿಗೂ ಆ ರೀತಿ ಮಾಡಲು ಬಿಡುವುದಿಲ್ಲ ! ಆದರೆ ಅದನ್ನೆಲ್ಲಾ ಹೇಳದೆ "ಅವರೆಲ್ಲಾ ಬರಲಿ, ಆನಂತರ ನೋಡೋಣ" ಎಂದೆ. ಅವರಿಬ್ಬರೂ ಇನ್ನೆರಡು ಗಂಟೆ ತಡವಾಗಿ ಬಂದು ತಲುಪಿದಾಗ ೪ ಘಂಟೆ. ಕೂರಲೂ ಆಗುದಷ್ಟು ಸುಸ್ತಾಗಿದ್ದರು. ಜ್ಞಾನಿ ಹೇಳಿದ, ’ಎಲ್ಲರೂ ಮುಂದೆ ಹೋದನಂತರ ಇಬ್ಬರೂ ಈಗೇನು ಮಾಡುವುದಪ್ಪಾ ಹೇಗೆ ಮುಂದೆ ಹೆಜ್ಜೆ ಹಾಕುವುದು ಎಂದು ಯೋಚಿಸುತ್ತಿರುವಾಗ, ಜ್ಞಾನಿ, ಇದು ತನ್ನ ಕಟ್ಟಕಡೆಯ ಟ್ರೆಕ್ ಆದರೂ ಸರಿ, ನಾನು ಮಾತ್ರ ಹಿಂದೆ ಹೋಗಲಾರೆ, ಬರಿ ಮನಶ್ಶಕ್ತಿಯಿಂದಲೇ ಹೇಗಾದರು ಮಾಡಿ ಮುಂದುವರಿಯುತ್ತೇನೆ, ಅಂದು ಕೊಂಡನಂತೆ. ನಂತರ ಅಲ್ಲಿ ಹೋಗುತ್ತಿದ್ದ ಯಾವ ಪೋರ್ಟರನ್ನು ಕೇಳಿದರೂ ’ನಮಗೆ ತುಂಬಾ ಬಾರ ಈಗಾಗಲೇ ಆಗಿದೆ, ನಿಮ್ಮ ಚೀಲ ತೆಗೆದು ಕೊಳ್ಳಲಾಗುವುದಿಲ್ಲ’ ಎಂದರಂತೆ. ನಂತರ ಒಬ್ಬನೆ ಒಬ್ಬ ಬಾಗಿಲು ತೆಗೆದುಕೊಂಡು ಹೋಗುತ್ತಿದ್ದವನು ೨೦೦ ಭಾರತೀಯ ರುಪಾಯಿಗಳಿಗೆ ಬರಲು ಒಪ್ಪಿಕೊಂಡನಂತೆ. ಆದರೂ ಸಂದೀಪ್ ಚೀಲ ಕೊಡಲು ಒಪ್ಪಲ್ಲಿಲ್ಲ. ತಾನೇ ಹೊತ್ತುಕೊಂಡು ನಡೆದು ಬರುವುದಾಗಿ ಹೇಳಿ (Not carrying the bag is against the spirit of trekking !) ನಂತರ ನಿಧಾನವಾಗಿ ಇಬ್ಬರೂ ಬಂದರಂತೆ. ಅಂದು ರಾತ್ರಿ ಮಲಗುವವರೆಗೂ, ಜ್ನ್ಯಾನಿ ತಾನು ಕೇವಲ ದೃಢವಾದ ನಿಲುವಿನಿಂದಲೇ ಮೇಲೆಬಂದುದ್ದಾಗಿಯೂ, ಇಲ್ಲದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಹೇಳುತ್ತಾ ಇದ್ದಾಗ, ಮುಂದೇನಪ್ಪಾ ಗತಿ ಕಾದಿದೆ ಎಂದು ಚಿಂತಿಸುವಂತಾಯಿತು. ನಾವು ಬೆಂಗಳೂರಿನಿಂದ ಹೊರಡುವ ಮೊದಲು, ವಸುಮತಿಯವರೊಡನೆ ಮಾತನಾಡುತ್ತಿರುವಾಗ ನಾನು ಅವರನ್ನು "ಈ ಹೈ ಆಲ್ಟಿಟ್ಯುಡ್ ಟ್ರೆಕ್ಕನ್ನು ಏನಕ್ಕೆ ಹೋಲಿಸಿ ಹೇಳಬಹುದು ? ಕುಮಾರಪರ್ವತದ ಆರೋಹಣಕ್ಕಾ?" ಎಂದು ಕೇಳಿದ್ದಕ್ಕೆ ಅವರು "ಇದು ಕುಮಾರಪರ್ವತದಕ್ಕಿಂತ ನೂರು ಪಟ್ಟು ಕಷ್ಟ, ನೀವು ಸುಮ್ಮನೆ ವ್ಯಾಯಾಮ ಮಾಡುತ್ತಾ, ನಿಮ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳುತ್ತಿರಿ, ತುದಿ ಮುಟ್ಟಿಸುವುದು ನನ್ನ ಕರ್ತವ್ಯ" ಎಂದಿದ್ದು ನೆನಪಿಗೆ ಬಂತು. ಇದು ನಮ್ಮ ಕಥೆ. ಬೆರೆಯವರ ಕಥೆ ಇನ್ನು ಏನೆನೋ, ಅವು ನಮಗೆ ನಿಧಾನವಾಗಿ ದಿನಕಳೆದಂತೆ ತಿಳಿಯಲು ಶುರುವಾಯಿತು. ನಾಳೆ ಹೈ ಆಲ್ಟಿಟ್ಯುಡ್ ಅಕ್ಲಿಮಟೈಸೇಶನ್ (acclimatization.). ಅಂದರೆ ಇದ್ದ ಎತ್ತರದ ಜಾಗದಿಂದ ಅಲ್ಲೆ ಸ್ವಲ್ಪ ಹತ್ತಿರದ ಇನ್ನೂ ಎತ್ತರದ ಜಾಗಕ್ಕೆ ಹೊಗಿ ಬರುವುದರಿಂದ ಹವೆ ಮತ್ತು ಎತ್ತರಕ್ಕೆ ದೇಹ ಒಗ್ಗಿಕೊಳ್ಳುವುದು.

Friday, December 5, 2008

ನಾಲ್ಕನೇ ದಿನ - ನಾಮ್ ಚೆ ಕಡೆಗೆ

ನಾಲ್ಕನೇ ದಿನ (ಮೇ ೬, ೨೦೦೮)
ಫಕ್ದಿಂಗ್ (2652mt/8698ft) - ನಾಮ್ ಚೆ ಬಜಾರ್ (3489mt/11443ft)
ನಾನು ಈ ಮೊದಲೇ ಮಾಡಬೇಕಾಗಿದ್ದ ಕಾರ್ಯ ಇದು. ಇಲ್ಲಿ ನಾವು ನಡೆದು ಹೋದ ದಾರಿಯ ನಕ್ಷೆ ಕೊಟ್ಟಿರುವೆ. ಅದರಲ್ಲಿ ಕೆಂಪು ದಾರಿ ಹಾಗು ಮನೆಗಳೆಲ್ಲಾ ನಾವು ಹೋದ ದಾರಿ ಮತ್ತು ಉಳಿದುಕೊಂಡ ಲಾಡ್ಜ್ ಗಳು. ಹಸಿರವು ನಾವು ಬರುವಾಗ ಉಳಿದುಕೊಂಡವು.

ಫಕ್ದಿಂಗ್ ಅಲ್ಲಿ, ಈಗಾಗಲೇ ನಮಗೆ ಥಂಡಿ ಹತ್ತಲು ಶುರುವಾಗಿತ್ತು. ಹಾಗಾಗಿ ನಮಗೆ ಸರಿಯಾಗಿ ನಿದ್ದೆಹತ್ತಲಿಲ್ಲ. ನಾವು ಇದ್ದ ಮೊದಲ ಲಾಡ್ಜಲ್ಲಿ ಕೆಳಗೆ ೧೦ ಮೇಲೆ ೧೦ ಕೊಠಡಿಗಳಿದ್ದು, ಪ್ರತಿಯೊಂದರಲ್ಲೂ ಎರಡು ಮಂಚಗಳಿದ್ದವು. ಹಾಸಿಗೆಗಳ ಮೇಲೆ ಕಂಬಳಿಗಳಿದ್ದವು. ಆದರೆ ಆ ಥಂಡಿಯಲ್ಲಿ, ನಾವು ಎರಡೆರಡು ಬೆಚ್ಚನೆಯ ಪ್ಯಾಂಟುಗಳನ್ನು ಹಾಕಿದ್ದರೂ ಕಟಕಟ ಹಲ್ಲು ಕಡಿಯುವ ಹಾಗೆ ಆಗುತ್ತಿತ್ತು. ಇಲ್ಲೆಲ್ಲಾ ಬಹಳ ವಿಚಿತ್ರವಾದ ಕಕ್ಕಸ್ಸುಗಳು ! ಅವುಗಳ ಬಗ್ಗೆ ಇಷ್ಟೆ ಹೇಳಿ ಬಿಟ್ಟರೆ ಸಾಲದು, ಆದರೆ ಮುಂದೆ ಸರಿಯಾದ ಸಮಯದಲ್ಲಿ ವಿವರಿಸುವೆ. ಇಡೀ ಹೋಟಲು ಮರದ ತೆಳ್ಳನೆಯ ಹಲಗೆಗಳಲ್ಲಿ ಕಟ್ಟಿದ್ದುದ್ದರಿಂದ ಕೊನೆಯ ಕೊಠಡಿಯಲ್ಲಿ ಕೂಗಿದರೆ ನಮಗೆ ಕೇಳುತ್ತಿತ್ತು. ಹಾಗಾಗಿ ನಾವು ಮಲಗಿಕೊಂಡೆ ಅಕ್ಕಪಕ್ಕದವರಿಗೆ ಕೂಗಿ ಬೆಳಿಗ್ಗೆ ನಮಗೂ ಏಳಿಸುವಂತೆ ಆಜ್ಞೆ ಕೊಟ್ಟೆವು. ರಾತ್ರೆ ಇಡಿ ಪ್ರತಿಯೊಬ್ಬರೂ ಹೊರಳುವುದೂ ಕೇಳುತ್ತಿತ್ತು. ಮರುದಿನ ಏಳಲು ನಾವೇ ಮೊದಲಿನವರು. ಜ್ಞಾನಿ, ತಕ್ಷಣ ಹೋಗಿ ವಸುಮತಿಯವರಿಗೆ ಕೂಗಿ ಏಳಿಸಿ, ನಾವು ಎದ್ದಿರು ವಿಷವನ್ನು ತಿಳಿಸಿ, ಅವರಿಂದ ಅಷ್ಟು ಮುಂಚೆ ಕೂಗಿದ್ದಕ್ಕೆ ಬೈಸಿಕೊಂಡು, ಸಾರ್ತಕವಾಯಿತೆಂಬ ಪ್ರಸನ್ನತೆಯಿಂದ ಹೊರನಡೆದ. ನಾವೆಲ್ಲಾ ಓಟ್ಸ್ ಗಂಜಿ ತಿಂದಾದ ನಂತರ, ವಸುಮತಿ ನಮಗೆ ಅವತ್ತಿನ ದಿನಚರಿಯನ್ನು ತಿಳಿಸಿದರು. "ಇಂದು ನೀವು ಹತ್ತು ಸಾವಿರ ಅಡಿಗಳನ್ನು ದಾಟಲಿದ್ದೀರ. ಹತ್ತು ಸಾವಿರ ಅಡಿಗಳನ್ನು ಮೀರಿ ಮಿಕ್ಕೆಲ್ಲಾ ಹೈ ಆಲ್ಟಿಟ್ಯುಡ್. ಎಲ್ಲರಿಗಾಗುವ ನಿದಾನವಾದ ಹೆಜ್ಜೆಯಲ್ಲಿ ನಾವು ನಡೆಯುತ್ತೇವೆ. ಯಾರಿಗೇ ಯಾವುದೇತರದ ಅನುಭವವಾದರೂ ನನಗೆ ಹೇಳಬೇಕು. ತಲೆನೋವು, ವಾಂತಿ, ತಲೆ ತಿರುಗುವುದು, ಸುಸ್ತು ಹೀಗೆ." ನಾವೆಲ್ಲಾ, ಅಂತೂ ನಿಜವಾದ ಟ್ರಿಕ್ಕಿಂಗ್ ಶುರುವಾಯಿತೆಂಬ ಸಂತೋಷದಲ್ಲಿ ಆಯಿತೆಂದು ತಲೆ ಆಡಿಸಿದೆವು. ಆದರೆ ಅವರವರ ಸಮಸ್ಯೆ ಅವರವರಿಗೇ ಗೊತ್ತಿತ್ತು. ಒಬ್ಬರಿಗೆ ಶೂ ಸರಿ ಇಲ್ಲದಿದ್ದರೆ, ಇನ್ನೊಬ್ಬರಿಗೆ ಈ ೮-೧೦ ಕೆಜಿ ಚೀಲ ಹೊತ್ತು ನಡೆಯುವುದಕ್ಕಾಗುತ್ತದೆಯೇ ಎಂಬ ಶಂಕೆ. ಪ್ರಿಯಳ ಮುಖ ಚಿಂತೆಕಟ್ಟಿತ್ತು, ಅವಳು "ಅದು ಹೇಗೆ ನನ್ನ ಚೀಲ ಇಷ್ಟು ಭಾರ ಆಗುತ್ತಿದೆ, ನೀನೇನಾದರೂ ನಿನ್ನ ವಸ್ತುಗಳನ್ನು, ನನಗೆ ತಿಳಿಯದಂತೆ ನನ್ನ ಚೀಲಕ್ಕೆ ತುಂಬುತ್ತಿದ್ದೀಯ ?" ಎಂದು ಕೇಳುತ್ತಿದ್ದಳು. ನಾನು ಆಗ ಈಗ ನಿಂತು ದೂರವನ್ನು ದಿಟ್ಟಿಸಿ ನನಗೆ ನಾನೆ ಏನಾದರೂ ಆಗುತ್ತಿದೆಯಾ ಎಂದು ಪರೀಕ್ಷಿಸಿಕೊಳ್ಳುತ್ತಿದ್ದೆ. ಬೆರೆಯೆಲ್ಲಾ ಕಟ್ಟುಮಸ್ತಾದ ವಿದೇಶೀಯರು ಪೋರ್ಟರುಗಳನ್ನು ಕರೆದುಕೊಂಡಿರುವುದು ನೋಡಿ ಏನೋ ಭಯ ಮತ್ತು ಅಸಮಾಧಾನ ಆದರೂ ಏನೋ ಒಂದು ’ನನಗೇನೂ ಬೇಕಾಗಿಲ್ಲ’ ಎಂಬ ಹಂಗು. ಹೀಗೆ ನಾವು ಸುಮಾರು ದೂರ ನೆಡೆಯುತ್ತಾ ಹೋದೆವು.

ದಾರಿಯಲ್ಲಿ ನಮಗೆ ಹಿಂತಿರುಗಿ ಬರುತ್ತಿದ್ದ ಬಹಳ ಜನ ಸಿಕ್ಕರು. ಎಲ್ಲರೂ ಬಹಳ ಬಸವಳಿದಿದ್ದಂತೆ ಕಂಡರು. ಒಬ್ಬಳೇ ಒಂಟಿ ಹುಡುಗಿ, ಭಾರತೀಯಳು, ಒಂದು ಸಣ್ಣ ಚೀಲ ಹಾಗು ಸ್ಕೀ ಕೋಲು ಹಿಡಿದು ಹಿಂತಿರುಗಿ ನಡೆದು ಬರುತ್ತಿದ್ದಳು. ಅವಳು ಮೂಲತಹ ಡೆಲ್ಲಿಯವಳಂತೆ, ಆದರೆ ಅಮೇರಿಕನ್ನರ ಉಚ್ಚಾರಣೆ, ವಿಶ್ವಸಂಸ್ಥೆಯಲ್ಲಿ ಕೆಲಸ. ವಿಶ್ವಸಂಸ್ಥೆಯು ನಾಮ್ಚೆ ಬಜಾರಿನ ಒಂದು ಹೋಟೆಲಿನಲ್ಲಿ ಮೀಟಿಂಗ್ ಇಟ್ಟಿತ್ತಂತೆ, ಅದಕ್ಕಾಗಿ ಮೂರುಜನರ ಗುಂಪು (ಇತರರು ಕಾಣಲಿಲ್ಲ) ಫಕ್ದಿಂಗ್ ಇಂದ ಬೆಳಿಗ್ಗೆ ಹೊರಟು ನಾಮ್ಚೆಯಲ್ಲಿ ಮೀಟಿಂಗ್ ಮಾಡಿ ಈಗ ಹಿಂತಿರುಗಿ ಫಕ್ದಿಂಗ್ ಗೆ ಹೋಗುತ್ತಿರುವಳಂತೆ. ಅಲ್ಲಿಯ ಹೋಟೆಲಿನಿಂ ಮೌಂಟ್ ಎವೆರೆಸ್ಟ್ ಸ್ಪಷ್ಟವಾಗಿ ಗೋಚರಿಸಿತಂತೆ. ನಾವು ಅವಳನ್ನು, ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದೆವು. ಅವಳು ಭಾರತೀಯಳೇ (ವಿದೇಶಿಯಳಲ್ಲ !), ಭಲೇ ಏಕಾಂಗಿ ಹುಡುಗಿ ! ಇಲ್ಲೂ ಮೀಟಿಂಗ್ ಮಾಡಿ, ಎವೆರೆಸ್ಟ್ ಪರ್ವತ ನೋಡಿ, ಹೋದ ದಿನವೇ ಹಿಂತಿರುಗಿ ಬರಬಹುದೇ ? ಹಾಗಾದರೆ ನಮಗೂ ನಾಮ್ಚೆ ಬಜಾರ್ ಗೆ ಹತ್ತಬಹುದೆಂಬ ಮನಸ್ಸು ಉಕ್ಕಿಬಂತು. ನಾವು ಅಲ್ಲಿಯ ಒಬ್ಬ ಶೆರ್ಪಾನನ್ನು ನಮ್ಮ ಗೈಡಾಗಿ ಕರೆದುಕೊಡಿದ್ದೆವು. ಅವನ ಹೆಸರು ಖಾಜಿ (ಚಿತ್ರದಲ್ಲಿ ಇರುವವನು). ಅವನು ಅನಾಯಸವಾಗಿ ಹಿಂದೆ ಮುಂದೆ ಓಡಾಡಿಕೊಡಿದ್ದ. ವಸುಮತಿಯವರ ಮಾತಿನಲ್ಲಿ ಹೇಳುವುದಾದರೆ, ವಸುಮತಿಯವರಿಗೆ ದಾರಿ ಮರೆತು ಹೋದಾಗ ಮಾತ್ರ ಅವನು ದಾರಿ ತೋರಿಸಲು ಹಾಗು, ಅವರದೇ ಭಾಷೆಯಲ್ಲಿ ಚೌಕಾಶಿ ಮಾಡಿ ಹೋಟೆಲುಗಳಲ್ಲಿ ದುಡ್ಡು ಇಳಿಸಲು ಅವನನ್ನು ಕರೆದುಕೊಡಿದ್ದೆವು. ಲುಕ್ಲಾ ಇಂದ ಎವೆರೆಸ್ಟ್ ತಳದವರೆಗೂ ಹಾಗೂ ಅಲ್ಲೇ ಸುತ್ತಮುತ್ತ ಇರುವ ಇತರ ಪರ್ವತಗಳ ಬಳಿಗೂ, ಪಾಸ್ ಗಳ ಬಳಿಗೂ, ಚಾರಣಿಗರಿಗಾಗಿ ಉದ್ದಕ್ಕೂ ಕಾಲುದಾರಿಗಳಿದ್ದು, ಸಣ್ಣ ಊರುಗಳ ಹತ್ತಿರ ಹಲಗೆಗಳಿಂದ ಕಟ್ಟಿರುವ ಮೂಲಸವಲತ್ತುಗಳಿರುವ ಲಾಡ್ಜ್ ಗಳಿವೆ. ಇವೆಲ್ಲಾ ಎಡ್ಮಂಡ್ ಹಿಲರಿಯ ಪರಿಶ್ರಮ. ಪ್ರತೀ ಹೋಟಲಿನಲ್ಲೂ ಅವರ ಬಗ್ಗೆ ಮತ್ತು ಅವರ ಮಹತ್ಕಾರ್ಯಗಳ ಪಟ್ಟಿ ಹಾಕಿರುತ್ತಿದ್ದರು.

ಜೊರ್ಸಾಲೆ ಏಂಬ ಕಡೆ ಒಂದು ಚೆಕ್ ಪೋಸ್ಟ್ ಇದೆ. ಅಲ್ಲಿಂದ ಮುಂದಕ್ಕೆ ಸಾಗರ್ ಮಾತಾ (ಎಲ್ಲಾ ಪರ್ವತಗಳ ತಾಯಿ) ರಾಷ್ಟೀಯ ಉದ್ಯಾನವನ ಶುರುವಾಗುತ್ತದೆ. ಇಡೀ ಹಿಮಾಲಯ ಇದೊರೊಳಗೆ ಬರುತ್ತದೆ. ಅಲ್ಲಿ ನಮ್ಮ ಚೀಲಗಳನ್ನು ಪೂರ್ತಿ ತೆಗೆಸಿ ತಪಾಸಣೆ ಮಾಡಿದರು. ಆಗ ಮೇ ೧೪ ಹತ್ತಿರವಾಗುತ್ತಿದ್ದುದ್ದರಿಂದ ಒಲೊಂಪಿಕ್ಸ್ ಜ್ವಾಲೆ ಮೌಂಟ್ ಎವೆರೆಸ್ಟ್ ತುದಿ ಮುಟ್ಟಿಸುವ ಯೋಜನೆ ಚೈನಾಗೆ ಇತ್ತು. ಇದೆ ಸಮಯದಲ್ಲಿ ಟಿಬೆಟ್ಟಿನವರು ಮಾಡುತ್ತಿದ್ದ ಚಳುವಳಿಗೆ ಪೂರಕವಾಗಿ ಏನಾದರೂ ಇದ್ದಲ್ಲಿ ಅದನ್ನು ಮುಟ್ಟುಗೋಲು ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದರು. [ಮೇ ಮಧ್ಯಭಾಗದಲ್ಲೇ ಬಹಳಷ್ಟು ಯಶಸ್ವಿ ಎವೆರೆಸ್ಟ್ ಶಿಖರ ಯಾತ್ರೆ ನಡೆದಿರುವುದು. ಮೇ ೧೪ ಟಿಬೆಟ್ಟಿಯನ್ನರ ಪ್ರಕಾರ ಚೊಮೊಲುಂಗ್ಮ (ಮೌಂಟ್ ಎವೆರೆಸ್ಟ್ ಶಿಖರ) ತುದಿ ಮುಟ್ಟಲು ಬಹಳ ಒಳ್ಳೆಯ ದೈವದತ್ತವಾದ ದಿನ. ವೈಜ್ಞಾನಿಕವಾಗಿ ನೋಡುವುದಾದರೆ ಏಪ್ರಿಲ್-ಮೇ ಸಮಯದಲ್ಲಿ, ಇಲ್ಲಿನ ಹವಾ ಪರ್ವತಾರೋಹಿಗಳಿಗೆ ಬಹಳ ಅನುಕೂಲಕರವಾಗಿರುತ್ತದೆ. ಎವೆರೆಸ್ಟ್ ತುದಿ ಹತ್ತುವವರು, ರಾತ್ರೆ ಸುಮಾರು ೧೦ ಗಂಟೆಗೆ ಹೊರಟು ಬೆಳಗಿನ ಜಾವ ೪ರ ಹಾಗೆ ಶಿಖರದ ತುದಿ ತಲುಪಿ, ಮರುದಿನದ ಮಧ್ಯಾನದ ಹೊತ್ತಿಗೆ ನಾಲ್ಕನೇ ಬೇಸ್ ಕ್ಯಾಂಪ್ ಇಳಿದುಬಿಡಬೇಕು ಬೇಕು.ಇಲ್ಲದಿದ್ದಲ್ಲಿ, ಅವರು ಪ್ರಾಣ ಕಳದುಕೊಂಡ ಹಾಗೆಯೇ.] ಅಲ್ಲಿ ಸುಮಾರಾಗಿ ಅರ್ಧ ಗಂಟೆ ಕಳೆಯಿತು. ನಾವೀಗಾಗಲೇ ಈ ಹೋಟಲುಗಳಲ್ಲಿ ದೊರೆಯುವ ತಿಂಡಿ ಊಟಗಳಿಂದ ಬೇಸತ್ತಿದ್ದೆವು. ಹದಿನೆಂಟು ದಿನಗಳ ನಮ್ಮ ಕಾರ್ಯಕ್ರಮದಲ್ಲಿ ನಮ್ಮ ಗುಂಪಿನಲ್ಲಿ ಜಾಸ್ತಿ ಕೇಳಸಿಗುತ್ತಿದ್ದುದು, ನಾವು ಹಿಂತಿರುಗಿ ಹೋಗುವಾ ಡೆಲ್ಲಿಯಲ್ಲಿ ಎನೆಲ್ಲಾ ತಿನ್ನುತ್ತೇವೆಂದು, ಬೆಂಗಳೂರಿನ್ನಲ್ಲಿ ಯಾವ ಯಾವ ಗಲ್ಲಿಯಲ್ಲಿ ಎಂತೆಂತಾ ರುಚಿಗಳು ನಮಗಾಗಿ ಕಾದಿವೆಯೆಂದು ! ನಮ್ಮ ಗುಂಪಿನಲ್ಲಿದ್ದ ದಂತವೈದ್ಯೆ ದೀಪಿಕ ಮೆಲ್ಲಮೆಲ್ಲಗೆ ದೇಪ್ಲಗಳನ್ನು ಹೊರತೆಗೆದಳು. ಅವಳ ಅಡುಗೆಯವನ ಹತ್ತಿರ ಮಾಡಿಸಿಕೊಂಡು ಬಂದಿದ್ದಳು. ಒಂದು ಕ್ಷಣ ಕಂಡ ಅದು ಇನ್ನೊಂದು ಕ್ಷಣದಲ್ಲಿ ಮಂಗಳ ಮಾಯ. ಎಲ್ಲಾ ಅವಳ ಅಡುಗೆಯವನ್ನು ಹೊಗಳಿದ್ದೇ ಹೊಗಳಿದ್ದು. ಇನ್ನೇನು ವಿಸ್ಮಯಗಳನ್ನು ಅವನು ಮಾಡಬಲ್ಲವನಾಗಿದ್ದಾನೆಂದು ತಿಳಿದುಕೊಂಡು, ಅವನ ವಿಳಾಸವನ್ನು ತಪ್ಪದೆ ನಮಗೆ ತಲುಪಿಸಬೇಕೆಂದು ಕೋರಿಕೊಂಡೆವು. ನಂತರ ಜೊರ್ಸಾಲೆ ಊರಿನೊಳಗೆ ವಸುಮತಿಯವರು ನೂಡಲ್ಸ್ ಸೂಪನ್ನು ಕೊಡಿಸಿದರು [ಚಿತ್ರದಲ್ಲಿ ಜೊರ್ಸಾಲೆ ಬ್ರೇಕ್]. ಈ ರೀತಿ ಯಾವಾಗಲು ಮಧ್ಯದಲ್ಲಿ ಒಂದು ಅರ್ಧ ಗಂಟೆಯ ಪುಟ್ಟ ವಿರಾಮ ಇದ್ದು ಬಿಸಿ ನಿಂಬೆ ಜ್ಯೂಸ್ ಅಥವಾ ಬಿಸಿ ಚಾಕಲೇಟು ಹಾಲು ಅಥವಾ ಸರಿಯಾಗಿ ಬೆಳ್ಳುಳ್ಳಿ ಹಾಕಿದ ನೂಡಲ್ಸ್ ಸೂಪು ಕುಡಿಯುತ್ತಿದ್ದೆವು. ಇನ್ನೂ ಜಾಸ್ತಿ ತಿನ್ನಲು ಬಯಸಿದಲ್ಲಿ, ’ಅದು ನಿಮ್ಮ ಇಷ್ಟ, ನಿಮ್ಮ ಹಣ, ಅದರ ಜವಾಬ್ದಾರಿ ನನ್ನದಲ್ಲ’ ಎಂದು ಮೊದಲೆ ವಸುಮತಿಯವರು ಹೇಳಿದ್ದರು. [ಹೋದ ಬ್ಲಾಗಿಗೆ ಒಬ್ಬೊರು, ’ನಿಮ್ಮಂತಹ ಸಾಫ್ಟ್ ವೇರ್ ಗಳು ೫೦೦೦ ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡಿದ್ದು ಆಸ್ಚರ್ಯ ಉಂಟುಮಾಡಿತು’ ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ಮಿತವಾಗಿ ಹಣ ತೆಗೆದುಕೊಂಡು ಹೋಗಿದ್ದೆವು, ಅದರಲ್ಲಿ, ನಮಗೆ ಬೇಕಾದ್ದನ್ನು ತಿನ್ನಲು, ಕೆಲವು ಅವಶ್ಯವಾದ ಬಟ್ಟೆಗಳನ್ನು ಕೊಳ್ಳಲು ಹಾಗು ನೆನಪಿನ ಕಾಣಿಕೆಗಳಿಗಾಗಿ ಮತ್ತು ಮುಖ್ಯವಾಗಿ, ಮೇಲೆ ಹೋದಂತೆ, ಕಷ್ಟವಾದಲ್ಲಿ ಪೋರ್ಟರ್ ಗಳಿಗಾಗಿ ಉಳಿಸಿಕೊಳ್ಳಬೇಕಿತ್ತು. ಅಲ್ಲದೆ, ಜೀವವಿಮೆ ಗಟ್ಟಿ ಜೀವಿಗಳಿಗೇಕೆ ? ಎಂಬ ಹುಂಬ ಭಾವನೆ !]

ಪ್ರಿಯಳಿಗೆ ಈರುಳ್ಳಿ ಬೆಳ್ಳುಳ್ಳಿ ಅಲೆರ್ಜಿ. ಅವಳು ಯಾವಾಗಲು ಹೊಟಲೊಳಗೆ ಹೋಗಿ ಅವುಗಳಿಲ್ಲದೆ ತನಗೆ ಮಾಡಲು ಹೇಳುತ್ತಿದ್ದಳು. ಅವರು ತಬ್ಬಿಬಾಗಿ, ಹಾಗಾದರೆ ಮಸಾಲೆ ಏನು ಹಾಕಬೇಕೆಂದು ಯೋಚಿಸಿತ್ತಿದ್ದರು. ಬೆಳ್ಳಿಳ್ಳಿ ’ಆಲ್ಟಿಟ್ಯುಡ್ ಸಿಕ್ನೆಸ್’ ಗೆ ಬಹಳ ಒಳ್ಳೆಯದಂತೆ. ಇದೂ ಒಂದು ಅವಳ ಚಿಂತೆಯಾಗಿತ್ತು ! ಹೀಗೆ ಜೊರ್ಸಾಲೆಯಲ್ಲಿ ಬಿಡುವು ತೆಗೆದುಕೊಂಡಾಗ, ಜ್ಞಾನಿ, ನಮ್ಮ ಗುಂಪಿನಲ್ಲಿದ್ದ ೬೨ ವರ್ಷ ವಯಸ್ಸಿನ ಶೀಲಾ ಕ್ಯಾಸ್ಟಿಲಿನೊ ಅವರನ್ನು ಮಾತಾಡಿಸುತ್ತಿದ್ದ. ’೧೭ ವರ್ಷಗಳ ಹಿಂದೆ ನಮ್ಮ ತರಗತಿಯಲ್ಲಿ ಆನಂದ್ ಕ್ಯಾಸ್ಟಿಲಿನೊ ಅಂತ ಒಬ್ಬ ಇದ್ದ. ಆದರೆ ಅಡ್ರೆಸ್ಸ್ ಇಲ್ಲದಂತೆ ಮಾಯವಾದ, ನಿಮ್ಮ ಹೆಸರು ಕೇಳಿದಾಗಲಷ್ಟೆ ಅವನ ನೆನಪು’ ಎಂದು ಹೇಳಿದ ತಕ್ಷಣ, ’ಅಯ್ಯೊ, ಅವನು ನನ್ನ ಮಗ’ ಅಂತ ಈ ತಾಯಿ.

ನಮ್ಮ ದಾರಿಯುದ್ದಕ್ಕೂ ಕೋಸಿ ನದಿಯನ್ನು ದಾಟಲು ಹಾಕಿದ್ದ ತೂಗು ಸೇತುವೆಗಳು, ಚಾರ್ಟನ್ (chortans) ಎಂದು ಕರೆಯಲ್ಪಡುವ ಕಲ್ಲಿನ ಸಮಾಧಿಗಳು ಸಿಕ್ಕವು. ಈ ನಮಾಧಿಗಳು ನೋಡಲು ಲಗೋರಿ ಆಟಕ್ಕೆ ಜೋಡಿಸುವ ಕಲ್ಲಿನ ಗುಡ್ಡೆಗಳಂತೆ ಕಾಣುತ್ತವೆ. ಎಲ್ಲಾ ರೀತಿಯ ಆಕಾರ, ಗಾತ್ರದಲ್ಲಿ ಇರುತ್ತವೆ. ಚಾರ್ಟನ್ನುಗಳು, ಸ್ತೂಪಗಳು ಹಾಗು, ನಿಮ್ಮದಾರಿಯಲ್ಲಿ ಅಡ್ಡಬರುವ ಯಾವುದೇ ರೀತಿಯ ಗುಡ್ಡೆಗಳನ್ನು (ಅವುಗಳಲ್ಲಿ, ಎಷ್ಟೋ ರೀತಿಯವಿದ್ದು, ಏನೆಂದು ಗೊತ್ತು ಮಾಡುವುದು ಕಷ್ಟವೇ ಸರಿ, ಹಾಗಾಗಿ) ಯಾವಾಗಲು ಟಿಬೆಟ್ಟಿಯನ್ನರ ಸಂಪ್ರದಾಯದಂತೆ ಪ್ರದಕ್ಷಿಣೆಯಾಗಿಯೇ (clockwise) ದಾಟಿ ಹೋಗಬೇಕು. ನಾಮ್ಚೆ ಬಜಾರನ್ನು ತಲುಪುವಷ್ಟರಲ್ಲಿ ಇದು ನಮ್ಮ ಕಾಲುಗಳಿಗೆ, ನಮ್ಮಲ್ಲಿರುವ ಸರ್ಕಲ್ ಸುತ್ತುವ ಕಾನೂನಿನಂತೆ ಅಭ್ಯಾಸವಾಗಿ ಹೋಯಿತು.

Sunday, November 23, 2008

ಮೂರನೆಯ ದಿನ - ಫಕ್ದಿಂಗ್ ವರೆಗೆ

ಮೂರನೆಯ ದಿನ (ಮೇ , ೨೦೦೮)
ಕಟ್ಮಂಡು(1000 ಮೀ/3280 ಅಡಿ) - ಲುಕ್ಲ (2800 ಮೀ / 9184 ಅಡಿ) - ಫಕ್ದಿಂಗ್ (2652 ಮೀ / 8698 ಅಡಿ)

ನಮ್ಮ ಲೀಡರ್ ವಸುಮತಿ. ಅವರ ಬಗ್ಗೆ ಬರೆಯದೆ ಇರುವುದು ಅನ್ಯಾಯ. ನಮ್ಮ ಗುಂಪಿನಲ್ಲಿ ಅವರ ಮಗಳು ಸ್ಮಿತ, ಮಗ ಶರತ್ ಮತ್ತು ಅವರ ಸೋದರನ ಮಗಳು ತನ್ವಿ, ಮೂರೂ ಜನರಿದ್ದರು. ಎಲ್ಲರೂ ಮಜಾ ಮಾಡುವವರು ಹಾಗೂ ಒಳ್ಳೆಯ ಜನರು. ಆದರೆ ವಸುಮತಿಯವರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಇದರಿಂದಾಗಿಯೇ ಅವರಿಗೆ ತುಂಬ ಹಗೆಗಳು. ಸೈನ್ಯದಲ್ಲಿದ್ದ ಅವರ ಗಂಡ ಹೇಳುವಂತೆ ’ನನಗೇ ಒಂದೊಂದು ಸಲ, ನಾನಲ್ಲ ಇವಳೇ ಸೈನ್ಯದಲ್ಲಿ ಇದ್ದಿದ್ದು ಅನ್ನಿಸುತ್ತದೆ’ ಎಂಬಂತಹ ಶಿಸ್ತಿನ ಸಿಪಾಯಿ. ಇದರಿಂದ ಬಹಳ ಸಲ ಗುಂಪಿನಲ್ಲಿ ಕಸಿವಿಸಿ ನಡೆಯುತ್ತಿತ್ತು. ಆದರೆ, ಅಂತಹದವರೊಬ್ಬರಿದ್ದರೆ, ಈ ರೀತಿ ಒಂದು ಟ್ರೆಕ್ ಸುಲಭಸಾಧ್ಯ. ವಸುಮತಿಯವರು ನಮಗೆ ಸಮಯಪಾಲನೆ ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತಿದ್ದರು. ಯಾರಾದರೂ ತಡ ಮಾಡಿದರೆ ನಾನು ಅವರನ್ನು ಹಿಂತಿರುಗಿ ಕಳುಹಿಸುತ್ತೇನೆ ಎಂದೇ ಹೇಳುತ್ತಿದ್ದರು. ಆವರು ಹೀಗೆ ಹೇಳಿದಾಗಲೆಲ್ಲಾ, ’ಅದು ನನಗಲ್ಲ’ ಎಂದೇ ಎಣಿಸುತ್ತಿದ್ದೆ.

ಕೆಲವು ಸಲ, ನಾವು ಅಂದು ಕೋಳ್ಳುವುದೇ ಒಂದು ನಡೆಯುವುದೇ ಒಂದು. ನಾನು ಯಾವುದೇಕಾರಣಕ್ಕೂ ಗುಂಪಿನಲ್ಲಿ ಪ್ರಸಿದ್ದಳಾಗಬಾರದೆಂದು ನಿರ್ಧರಿಸಿದ್ದರೆ, ಅಲ್ಲಿ ಮೊದಲ ದಿನವೇ ಖುಖ್ಯಾತಿಗೊಳಗಾದೆವು. ನಾವೆಲ್ಲಾ ನಮ್ಮ ಹೆಚ್ಚಾದ ಸಾಮಾನುಗಳನ್ನು ಹೋಟಲ್ ಲಿಲ್ಲಿಯಲ್ಲೇ ಬಿಟ್ಟು ಬರಬಹುದೆಂದು ವಸುಮತಿಯವರು ಹೇಳಿದ್ದರು. ಜ್ಞಾನಿ ಯಾವುದೋ ಕಾರಣಕ್ಕೆ ಹಿಂದಿನ ರಾತ್ರೆ ಬ್ಯಾಗ್ ತುಂಬಿಕೊಳ್ಳದೆ ಬೆಳಿಗ್ಗೆ ತುಂಬಿಕೊಳ್ಳಲು ಶುರುಮಾಡಿದ. ನಮ್ಮ ಲಿಲ್ಲಿಯವನು ಬಿಸಿ ನೀರು ಬೆಳಿಗ್ಗೆ ಬರುತ್ತದೆ ಎಂದು ಬೇರೆ ಹೇಳಿದ್ದ. ನಾವು ಇನ್ನೂ ನಾಗರೀಕ ಜಗತ್ತಿನಲ್ಲೇ ಇದ್ದುದ್ದರಿಂದ, ಜ್ಞಾನಿ ಬಿಸಿನೀರು ಬರುತ್ತೆ ಅಂತ ಹೇಳಿದಮೇಲೆ ಬರಲೇಬೇಕು, ಮಾಡೇ ಹೋಗುವ ಎಂದು ತಡೆದ. ಅಲ್ಲದೆ ನಮ್ಮ ಹತ್ತಿರ ಗಡಿಯಾರ ಬೇರೆ ಇರಲ್ಲಿಲ್ಲ. ಹಾಗಾಗಿ ಬೇರೆಯವರು ನಮ್ಮನ್ನು ಕರೆದು ಹೋದಮೇಲೆ ’ಕೇವಲ ಹತ್ತು ನಿಮಿಷವಾಗಿರಬಹುದಷ್ಟೆ, ಅವರು ಕಾಯುತ್ತಾರೆ’ ಅಂತ ಅವನು ತಯ್ಯಾರಾಗುತ್ತಲೇ ಇದ್ದ. ನಮಗೆ ಹಿಮಾಲಯದ ಹವಾಮಾನದ ರೀತಿ ನೀತಿಯಾಗಲಿ ಅದನ್ನನುಸರಿಸಿ ಹಾರುವ ವಿಮಾನದ ವೇಳಾಪಟ್ಟಿಯ ಅರಿವಾಗಲೀ ಇರಲ್ಲಿಲ್ಲ. ಹಾಗಾಗಿ ನಾವು ಎಲ್ಲಾ ಮುಗಿಸಿ ಬಸ್ಸಿಗೆ ಹೋದಾಗ ೧೫ ರಿಂದ ೨೦ ನಿಮಿಷ ತಡವಾಗಿರಬಹುದು. ಅಶೋಕನನ್ನು ಬಿಟ್ಟು, ಎಲ್ಲರೂ ಬಸ್ಸು ಹತ್ತಿ ಕುಳಿತಾಗಿತ್ತು. ಆಗಲೇ ಸ್ಕ್ವಡ್ರನ್ ಲೀಡರ್ ವಸುಮತಿಯವರು ಹಾರಾಡುತ್ತಿದ್ದರು. ಮೊದಲೇ ನಮ್ಮ ಬಗ್ಗೆ ಕೂಗಾಡಿ ತಾಲೀಮು ನಡೆಸಿದ್ದರು. ನಾವು ಕಂಡ ಕ್ಷಣ ಅವರ ರಂಗಾಯಣ ಶುರುವಾಯಿತು.

ವಿಮಾನ ಮತ್ತು ನಮ್ಮ ಗುಂಪು

"ಕೋಣೆಯಲ್ಲಿ ಏನು ಮಾಡುತ್ತಾ ಇದ್ದಿರಿ ? ಬೇಗ ಮಲಗಿ ಬೇಗ ಏಳಬೇಕು. ನಿಮ್ಮಿಂದಾಗಿ ಲುಕ್ಲಾಗೆ ಹೋಗುವ ವಿಮಾನ ತಪ್ಪಿದರೆ ಸುಮ್ಮನೆ ಬಿಡುವುದಿಲ್ಲ" ಎಂದರು. "We are very sorry for this" ಅಂತ ಜ್ಞಾನಿ ಉಸುರಿದ. ನಾನು ಏನೂ ಹೇಳದೆ ಅವರನ್ನೇ ನೋಡುತ್ತಿದ್ದೆ. ನನ್ನದೇನೂ ತಪ್ಪಿರಲಿಲ್ಲವಲ್ಲ, ತಡ ಮಾಡಿದ್ದು ಜ್ಞಾನಿ ತಾನೆ, ಅಂತ ನಾನು. ಇನ್ನೊಂದು ಏನು ಅರ್ಥವಾಗಲಿಲ್ಲವೆಂದರೆ, ಅಷ್ಟು ತಡವಾಗುತ್ತಿದ್ದರೆ ಯಾರೂ ಯಾಕೆ ಬಂದು ಕರೆಯಲಿಲ್ಲ? ಪ್ರಿಯ ಹೋಗಿ ಕರೆಯುತ್ತೇನೆ ಎಂದು ಹೇಳಿದಾಗ, ”ಆಮಲೆ ನಿನ್ನನ್ನು ಕರೆಯಲು ಜನ ಕಳಿಸಬೇಕಷ್ಟೆ, ಹಾಗಾಗಿ ಇಲ್ಲೇ ಕುಳಿತಿರು. ಅವರು ಬರಲಿ, ಸರಿಯಾಗಿ ಶಾಸ್ತಿ ಮಾಡುತ್ತೇನೆ” ಅಂತ ಹೇಳಿದರಂತೆ. ನಾನು ಏನೂ ಹೇಳದೆ ಇದ್ದುದ್ದರಿಂದ ಅವರ ಸಿಟ್ಟು ಇನ್ನೂ ಏರಿತು. "ನೋಡು ಹೇಗೆ ಸುಮ್ಮನೆ regret ಇಲ್ಲದೆ ಕುಳಿತಿದ್ದೀಯ. You should be crying when i'm telling you all this." ಅಂದರು. ಅದಕ್ಕೂ ಸುಮ್ಮನೆ ಇದ್ದೆ. ಇದರ ಮಧ್ಯೆ ತಡವಾಗಿ ಬಂದ ಅಶೋಕನಿಗೆ ಯಾವ ಬಯ್ಗುಳವೂ ಬೀಳಲಿಲ್ಲ. ನಮಗೆ "ಕೋಣೆಯಲ್ಲೇನು ಜಗಳ ಕಾಯುತ್ತಾ ಇದ್ದಿರ ?’ ಅಂತ ಬಯ್ದಾಗ ಹಿಂದೆ ಕೂತಿದ್ದ ಜನ ಕಿಸಿ ಕಿಸಿ ಅಂತ ನಗುತ್ತಾ ಇದ್ದರು. "ಹ್ಞು ಹ್ಞು ನಗ್ರಿ ಮಕ್ಳಾ.. ನಿಮ್ಮ ಸರದಿಯೂ ಬರುತ್ತದೆ" ಎಂದುಕೊಂಡೆ. ಆದರೆ, ಇನ್ನು ಮುಂದಕ್ಕೆ ನನ್ನಿಂದ ಮಾತ್ರ ಯಾವುದೇ ರೀತಿಯಿಂದ ತಡವಾಗಬಾರದೆಂದು ಯೋಚಿಸಿದೆ, ಹಾಗೆ ಮಾಡಿದೆ ಕೂಡ. ನಂತರದ ದಿನಗಳಲ್ಲಿ ಅಶೋಕ್ ಮತ್ತು ನರೇಶ್ ಬಹಳ ಸಲ ತಡಮಾಡಿದರು. ಆದರೆ ಮೇಡಮ್ ಕೂಗಾಡಿ ಕೂಗಾಡಿ ಸಾಕಾಗಿದ್ದುದ್ದರಿಂದ, ಸಿಟ್ಟು ಈ ರೀತಿ ಮೇಲೇರುತ್ತಲಿರಲಿಲ್ಲ. ಇಂದು ಮೊದಲ ದಿನವಾದ್ದರಿಂದ, ನಮ್ಮನ್ನು ಗುರಿಯಾಗಿ ಇಟ್ಟುಕೊಂಡು, ಬೇರೆಯವರಿಗೆ- ವಸುಮತಿಯವರೊಡನೆ, ತಡಮಾಡಿ ಆಟವಾಡಿದರೆ ಈ ರೀತಿ ಪರಿತಪಿಸಬೇಕಾಗುತ್ತದೆಂದು ಪಾಠ ಕಲಿಸಲು ಇಷ್ಟೆಲ್ಲಾಮಾಡಿದರಂತೆ.

ಕಟ್ಮಂಡು ಇಂದ ಬುದ್ಧ ಏರ್ ಎಂಬ ವಿಮಾನದಲ್ಲಿ ಹೊರಟೆವು. ನಾವು ೧೩ ಜನ ಒಂದು ವಿಮಾನದಲ್ಲಿ ಹಾಗು ಉಳಿದ ೮ ಜನ ಇನ್ನೊಂದು ವಿಮಾನದಲ್ಲಿ ಕುಳಿತೆವು. ನಾವು ಯಾವುದನ್ನೂ ಮಿಸ್ ಮಾಡಬಾರದೆಂದು, ವಿಮಾನದ ಸಣ್ಣ ಕಿಟಕಿಗೆ ಮುಖ

ಹೊಳೆಯುವ ಹಿಮಾವೃತ ಶಿಖರಗಳು
ಅಂಟಿಸಿಕೊಂಡು, ಎವರೆಸ್ಟ್ ಯಾವ ದಿಕ್ಕಿನಲ್ಲಿ ಬರುತ್ತದೆಂದು ಕೇಳಿಕೊಂಡು ಆ ಕಡೆ ನೋಡುತ್ತಾ ಕುಳಿತಿದ್ದೆವು. ದಾರಿಯಲ್ಲಿ,”ಇದ್ಯಾಕೆ ಮೋಡ ಈ ರೀತಿ ಹೊಳೆಯುತ್ತಿದೆ’ ಅಂತ ಅಂದುಕೊಳ್ಳುತ್ತಾ ಇದ್ದೆ, ಆದರೆ ಅದು ಹಿಮಾವೃತ ಪರ್ವತ ಅಂತ ತಿಳಿದಾಗ, ಅಂತೂ ಇಂತಹದೊಂದು ಕಡೆ ಬಂದೆನಲ್ಲಾ ಅಂತ ಉಸಿರು ಬಿಟ್ಟೆ. ನಮಗೆನೂ ಎವರೆಸ್ಟ್ ಕಾಣಸಿಗಲಿಲ್ಲ.

ಲುಕ್ಲಾ ಒಂದು ತುಂಬ ಸಣ್ಣೂರು. ಅಲ್ಲಿ ಬೆಟ್ಟದ ತುದಿಯಲ್ಲಿ ಒಂದು ಸಣ್ಣ ವಿಮಾನ ನಿಲ್ದಾಣವಿದೆ. ಪ್ರಪಂಚದಲ್ಲೇ ಅತೀ ಎತ್ತರದಲ್ಲಿರುವ ವಿಮಾನ ನಿಲ್ದಾಣ ಇದು. ನಾಲ್ಕು ಚಿಕ್ಕ ವಿಮಾನಗಳು ಇಲ್ಲಿ ನಿಲ್ಲುವ ಅನುಕೂಲ ಇದೆ.

ಲುಕ್ಲ ವಿಮಾನ ನಿಲ್ದಾಣ
ಇಲ್ಲಿ ಬೆಟ್ಟದ ಅಂಚಿನವರೆಗೂ ಓಡುವ ಬಹಳ ಕಿರಿದಾದ (೨೦ ಮೀ ಅಗಲ ಇದ್ದು, ಅಂಚಿನಲ್ಲಿ ೭೦೦ ಮೀ ವರೆಗೆ ಬೆಟ್ಟದ ಇಳಿಜಾರಿರುವ) ರನ್ವೆ ಇದೆ. ಹೋಗುವವರು ಮತ್ತು ಬರುವವರು ಎಷ್ಟು ಜನ ಇದ್ದಾರೆ ಅಂತ ನೋಡಿಕೊಂಡು, ಬೆಳಿಗ್ಗೆ ಮಾತ್ರ ವಿಮಾನಗಳನ್ನು ಹಾರಿಸುತ್ತಾರೆ. ಅಲ್ಲಿ ಪೈಲೆಟ್ ಕಿಟಕಿಯಿಂದ ಹೊರ ನೋಡಿಕೊಂಡೆ ವಿಮಾನ ಹಾರಿಸಬೇಕು, ಬೇರೆ ಯಂತ್ರಗಳು ಪರ್ವತಗಳ ನಡುವೆ ಕೆಲಸ ಮಾಡುವುದಿಲ್ಲವಂತೆ. ಹೀಗಾಗಿ ಸ್ವಲ್ಪ ಮೋಡ ಮುಚ್ಚಿದರೂ ವಿಮಾನ ಹಾರಾಟ ರದ್ದು ಮಾಡುತ್ತಾರೆ. ನಾವು ಲುಕ್ಲಾ ತಲುಪಿದಾಗ ಅಲ್ಲಿ, ಹಿಂತಿರುಗಿ ಹೋಗುವ ಕೆಲವು ಪರ್ವತಾರೋಹಿಗಳನ್ನು ಬಿಟ್ಟರೆ ಬರೀ ಪೋರ್ಟರುಗಳೇ ಎಲ್ಲೆಲ್ಲೂ. ಅಲ್ಲಿ ನಾವು ನಮ್ಮ ಕೆಲವು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಅಲ್ಲಿಂದ ’ಫಕ್ದಿಂಗ್’ ಎಂಬ ಜಾಗಕ್ಕೆ ನಡೆಯಲು ಶುರುಮಾಡಿದೆವು. ೩ ಘಂಟೆ ಕಾಲ ನಡೆದೆವು .ಅದು ಬಹಳ ಸುಲಭವಾದ ಇಳಿಜಾರು ದಾರಿ. ಎರಡು ತೂಗು ಸೇತುವೆಗಳನ್ನು ದಾಟಿದೆವು. ಮೊದಲನೆಯದನ್ನು ನೋಡಿದಾಗ, ಎಲ್ಲರೂ ಫೊಟೊ ತೆಗೆದದ್ದೇ ತೆಗೆದದ್ದು. ನಂತರದ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಇಂತಹ ತೂಗು ಸೇತುವೆಗಳನ್ನು ದಾಟಿದೆವು. ಅವು ಎಷ್ಟು ಸುಂದರವಾಗಿದ್ದುವೆಂದರೆ ಅವುಗಳ ಫೋಟೊಗಳನ್ನು ತೆಗೆಯುವುದು ಮಾತ್ರಾ ಕಡಿಮೆಯಾಗಲೇ ಇಲ್ಲ.

ಮೊದಲ ತೂಗು ಸೇತುವೆ
ನಮ್ಮ ಟ್ರೆಕ್ ಶುರುವಾದಾಗ ವಸುಮತಿಯವರು ಗುಂಪಿನಲ್ಲಿ ತುಂಬಾ ಶಿಸ್ತನ್ನು ಕಾಪಾಡಿದ್ದರು. ನಮ್ಮ ಸಾಲಿನಲ್ಲಿ, ಮುಂದೆ ವಸುಮತಿಯವರು, ಅವರ ಹಿಂದೆ ತುಂಬಾ ನಿಧಾನವಾಗಿ ಬರುವವರು, ನಂತರ ಸ್ವಲ್ಪ ಅಭ್ಯಾಸ ಇರುವವರು, ಕೊನೆಯಲ್ಲಿ ನಿಪುಣರು. ಬಹುಪಾಲು ಹುಡುಗಿಯರೆಲ್ಲ ಸಾಲಿನ ಮುಂದೇ ಇದ್ದರು. ನಂತರ ಜ್ಞಾನಿ, ಲಖನ್, ಸಂದೀಪ್ ಮತ್ತಿತರು. ಕೊನೆಯಲ್ಲಿ ಉಳಿದೆಲ್ಲ ತಾಕತ್ತಿದ್ದ ಹುಡುಗರು ಮತ್ತು ಸ್ಮಿತಾ. ನಾವು ಕೆಲವರು ಒಂದೊಂದು ಸ್ಕಿ ಕೋಲುಗಳನ್ನು ಹಿಡಿತಕ್ಕಾಗಿ ಹಿಡಿದು ನಡೆಯುತ್ತಿದ್ದೆವು. ಇವುಗಳು ನಮಗೆ ಕೊನೆಯವರೆಗೂ ಸಾಹಾಯಕ್ಕೆ ಬಂದವು. ನಮ್ಮ ದಾರಿ ದೂದ್ ಕೋಸಿ ನದಿ ಪಕ್ಕದಲ್ಲೇ ಹೋಗುತ್ತಿತ್ತು. ಇದು ನೋಡಲು ಬಿಳಿ ಬಿಳಿಯಾಗಿ ನೊರೆನೊರೆಯಾಗಿದ್ದ ಒಂದು ದೊಡ್ಡ ಹಳ್ಳ, ಕೆಲವು ಕಡೆ ಸಣ್ಣ ನದಿ ಎಂದು ಹೇಳಬಹುದು. ಕೊನೆಯವರೆಗೂ ನಾವು ದೂದ್ ಕೋಸಿಯೊಡನೆಯೇ ನಡೆಯುತ್ತಿದ್ದೆವು. ಅದು ಪರ್ವತಗಳ ಮಧ್ಯೆ ಸುತ್ತಿ, ತಿರುಗಿ, ಬಳಸಿ ಮುಂದೆ ಹೋಗುವಂತೆ ನಾವೂ ಹೋಗುತ್ತಿದ್ದೆವು.

ಫಕ್ದಿಂಗ್ (2652 ಮೀ/8698 ಅಡಿ) ತಲುಪಿದಾಗ ೨:೦೦ ಗಂಟೆ. ನಾವು ಊಟ ಮಾಡಿದಾಗ ೩:೦೦ ಗಂಟೆ. ದಿನವೂ ನಾವು ಇದೇ ರೀತಿಯಾಗಿ ೩:೦೦ ಗಂಟೆಯೊಳಗೆ ನಮ್ಮ ಟ್ರೆಕ್ ಮುಗಿಸುತ್ತಿದ್ದೆವು. ಯಾಕೆಂದರೆ ಹಿಮಾಲಯದಲ್ಲಿ ಮಧ್ಯಾನದಷ್ಟೊತ್ತಿಗೆ ವಾತಾವರಣ ಹದಗೆಡುತ್ತದೆ. ಮಂಜು ಕವಿಯುತ್ತದೆ. ನಾವು ತೊಟ್ಟ ಬಟ್ಟೆಗಳೆಲ್ಲವೂ ಬೆವರು ಹಾಗೂ ಥಂಡಿಯಿಂದ ಒದ್ದೆಯಾಗಿರುತ್ತಿದ್ದವು. ಟ್ರೆಕ್ ಮುಗಿದ ತಕ್ಷಣ ನಾವು ಮಮ್ಮೆಲ್ಲ ಬಟ್ಟೆಗಳನ್ನೂ ಬದಲಾಯಿಸಿಕೊಳ್ಳುತ್ತಿದ್ದೆವು. ಹೀಗೆ ಮಾಡದಿದ್ದರೆ ಮುಂದೆ ಕಾಲು, ಮಂಡಿ ಹಾಗೂ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಎಂದು ವಸುಮತಿಯವರು ಹೇಳುತ್ತಿದ್ದರು. ನಂತರ ನಾವೆಲ್ಲಾ ಇಸ್ಪೀಟ್ ಮತ್ತಿತರ ಕುಳಿತು ಆಡುವ ಆಟಗಳಲ್ಲಿ ತೊಡಗಿಕೊಂಡೆವು. ಕೆಲವರು ಹತ್ತಿರದಲ್ಲಿದ್ದ ಕೋಸಿ ನದಿಗೆ ಕಟ್ಟಿದ್ದ ಸೇತುವೆಯ ಹತ್ತಿರ ಹೋಗಿ ಬಂದರು. "ಟ್ರೆಕ್ ಆದ ಮೇಲೆ ಸುಸ್ತಾಗಿದೆ ಅಂತ ಹಾಸಿಗೆ ಕಂಡ ತಕ್ಷಣ ಬಿದ್ದುಕೋಬೇಡಿ. ನಿದ್ದೆಯನ್ನು ಮಾಡದೆ ಹೊರಗಿನ ಹವಾಗೆ ಮೈ, ಕೈ, ಕಿವಿ ಒಡ್ಡುವುದರಿಂದ ’ಆಲ್ಟಿಟ್ಯುಡ್ ಸಿಕ್ನೆಸ್’ ಕಡೆಮೆ ಮಾಡಬಹುದು" ಎಂದು ವಸುಮತಿಯವರು ನಮಗೆ ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ ನಮಗೆ ಎಷ್ಟೇ ಸಾಕಾಗಿದ್ದರೂ ಮಲಗುತ್ತಾ ಇದ್ದದು ರಾತ್ರಿ ೮ ರಿಂದ ೯ರ ಒಳಗೆ. ಮಲಗುವ ಮೊದಲು, ಬೆಳಿಗ್ಗೆ ಏಳುವುದು, ತಿಂಡಿ ತಿನ್ನುವುದು ಹಾಗು ಹೋರಡುವುದನ್ನು ನಿರ್ಧರಿಸಲಾಗುತ್ತಿತ್ತು. ೫-೬-೭ ಅಥವಾ ೬-೭-೮. ಇದಕ್ಕಿಂತ ತಡವಾಗಿ ಎಂದೂ ಹೊರಟಿದ್ದಿಲ್ಲ. ಮುಂದಿನ ನಮ್ಮ ಪಯಣ ನಾಮ್ಚೆ ಬಜಾರ್ ಕಡೆಗೆ.

Sunday, November 16, 2008

ಮೊದಲೆರಡು ದಿನಗಳು

ಮೊದಲೆರಡು ದಿನಗಳು (ಮೇ ೩, ೨೦೦೮, ಮೇ ೪, ೨೦೦೮)
ಬೆಂಗಳೂರು - ಕಟ್ಮಂಡು(1000ಮೀ/3280 ಅಡಿ)

ಅಂತೂ ಮೇ ೩ ಬಂದೇ ಬಿಟ್ಟಿತು.ನಮಗೆ ಕೆಏಮ್ಎ ಕೊಟ್ಟ ಚಾರಣಿಗರ ಚೀಲದಲ್ಲಿ ಎಲ್ಲಾ ತುರುಕಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟೇ ಬಿಟ್ಟೆವು. ನಾವು ಡೆಲ್ಲಿ ತಲುಪಿದಾಗ ೧೦ ಗಂಟೆ, ಉರಿಬಿಸಿಲು. ಅಲ್ಲಿಂದ ನೇರವಾಗಿ ಅಂತರ ರಾಷ್ರ್ಟೀಯ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನ ಹತ್ತಿದೆವು. ೨:೪೫ ಗಂಟೆಯಲ್ಲಿ ನಾವು ಕಟ್ಮಂಡುವಿನಲ್ಲಿ ಇದ್ದೆವು. ಅಲ್ಲಿ ಹಿಮಾಲಯನ್ ಅಡ್ವೆನ್ಚರ್ (himalayan adventure company) ಕಂಪನಿಯವರು ನಮಗಾಗಿ ಬಸ್ಸು ತಂದು ಕಾಯುತ್ತಾ ಇದ್ದರು. ಅಲ್ಲಿಂದ ನೇರವಾಗಿ ನಾವು ತಮೇಲ್ ಎಂಬ ಜಾಗಕ್ಕೆ ಹೋದೆವು. ಆಲ್ಲಿ ’ಜೆಡ್ ಸ್ಟ್ರೀಟ್’ ನಲ್ಲಿನ ನಮ್ಮ ಹೋಟೆಲ್ ’ಲಿಲ್ಲಿ’ ತಲುಪಿದೆವು. ತಮೇಲ್ ನಲ್ಲಿ ನಿಮಗೆ ಎಲ್ಲೆಲ್ಲೂ ಪರ್ವತಾರೋಹಿಗಳು, ಚಾರಣ ಮತ್ತು ಪರ್ವತಾರೋಹಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ನೆನಪಿನ ಕಾಣಿಕೆಗಳನ್ನು ಮಾರುವ ಅಂಗಡಿಗಳು ಹಾಗೂ ಲೈವ್ ಮ್ಯುಜಿಕ್ (live music) ಬಾರ್ ಗಳು ಮಾತ್ರಾ ಕಾಣಸಿಗುತ್ತವೆ. ನಾವು ಅಲ್ಲಿಂದ ಲುಕ್ಲ ಎಂಬ ಜಾಗಕ್ಕೆ ಒಂದು ದಿನ ಬಿಟ್ಟು ಅಂದರೆ, ಮೇ ೫ ರಂದು ಹೋಗುವವರಿದ್ದೆವು. ಹಾಗಾಗಿ ಎಲ್ಲರೂ ತಾವು ಏನೇನು ವಸ್ತುಗಳನ್ನು ಮರೆತಿದ್ದರೋ, ತಂದಿರಲ್ಲಿಲ್ಲವೋ ಅವುಗಳನ್ನು ಕೊಳ್ಳುವುದರಲ್ಲಿ ಅಥವಾ ಪ್ರವಾಸ ಮುಗಿದ ನಂತರ ಹಿಂತಿರುಗಿ ಹೋಗುವಾಗ ಎನೇನು ಉಡುಗೊರೆಗಳನ್ನು ಕೊಳ್ಳಬಹುದೆಂದು ನೋಡಿಕೊಳ್ಳುವುದರಲ್ಲಿ ಮತ್ತು ಚೌಕಾಸಿ ಮಾಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ರೂಢಿ ಮಾಡಿಕೊಳ್ಳುವುದರಲ್ಲಿ ಸಮಯ ಕಳೆದೆವು. ಮರುದಿನ ಎಲ್ಲರ ಬೇಡಿಕೆಯಂತೆ ನಾವು ಬಸ್ಸಿನಲ್ಲಿ ಪಶುಪತಿನಾಥ ದೇವಸ್ಥಾನವನ್ನು ನೋಡಲು ಹೋದೆವು. ಅಲ್ಲಿಯ ಶವ ಸುಡುವ ದೃಶ್ಯ ಹಾಗು ಅಲ್ಲಿಯ ಪೂಜಾರಿಗಳು ಜನರಿಂದ ಭಕ್ತಿಯ ನೆವದಲ್ಲಿ ದುಡ್ಡು ಹೆರೆಯುವ ಕೌಶಲ್ಯ ನೋಡಿ, ಸಾಕಪ್ಪಾ ಇದೆಲ್ಲಾ ನಾವು ಎಂದು ನಮ್ಮ ಟ್ರೆಕ್ ಶುರುಮಾಡುತ್ತೇವೋ ಅನ್ನಿಸಲು ಶುರುವಾಯಿತು. ಬಹುಷಃ ಇಡೀ ಕಟ್ಮಂಡುವಿನಲ್ಲಿ ಜಾಸ್ತಿ ಇರುವುದು ಋಷಿಗಳು ಮಾತ್ರ. ನಾವು ’ಅಮರ ಚಿತ್ರ ಕಥೆ’ ಗಳಲ್ಲಿ ನೋಡಿರುವಂತಹ ಕಾವೀಧಾರಿಗಳು. ಅವರಿಗೆ ದುಡ್ಡು ಕೊಟ್ಟರೆ ಫೊಟೊ ತೆಗೆಯಲು ಅವಕಾಶ ಕೊಡುತ್ತಾರೆ.

ಕ್ಯಾಮರ ಕಂಡಾಕ್ಷಣ

ಹಣ ಕಂಡಾಕ್ಷಣ

ಅಲ್ಲಿಯ ಸಜೀವ ದೇವತೆಗಳನ್ನೂ (living godess) ನೋಡಲು ಹೋದೆವು ಆದರೆ ಅವರ ಮನೆಯನ್ನು ಮಾತ್ರ ನೋಡಲು ಸಾಧ್ಯವಿದೆ. ಆಲ್ಲಿಯ ರಾಜನಿಗೆ ಮಾತ್ರ ಅವರನ್ನು ನೋಡಲು ಮತ್ತು ಮಾತಾಡಿಸಲು ಅನುಮತಿ ಇದೆ. ಆದರೆ ಬಹುಷಃ ದುಡ್ಡು ಕೊಟ್ಟರೆ ಯಾರುಬೇಕಾದರೂ ನೋಡಬಹುದೇನೋ. ನಾವು ಸ್ವಯಂಭುನಾಥ ಸ್ತೂಪವನ್ನೂ ನೋಡಿದೆವು. ಈದ್ದಿದ್ದರಲ್ಲಿ ಇಲ್ಲಿ ಸ್ವಲ್ಪ ಶಾಂತ ವಾತಾವರಣ ಇತ್ತು. ಆಗ ಇನ್ನೂ ಜ್ನಾನೇಂದ್ರ ರಾಜ ಇದ್ದ ದಿನಗಳು. ಆಗತಾನೆ ಮಾವೊಗಳ ಆಡಳಿತ ಬಂದಿತ್ತು. ಎಲ್ಲೆಲ್ಲೂ ಮಿಶ್ರ ಪ್ರತಿಕ್ರಿಯೆ ಇತ್ತು. ಆದರೆ ಜನರು ಈ ಆಡಳಿತಕ್ಕೆ ಒಲವು ತೋರಿಸುತ್ತಿದ್ದರು. ಅದು ಪರ್ವತಾರೋಹಿಗಳಿಗೆ ಮತ್ತು ಚಾರಣಿಗರಿಗೆ ಒಳ್ಳೆಯ ಹವಾಮಾನದ ದಿನಗಳು. ಆಗ ಈಗ ಮಳೆಬರುತ್ತಿತ್ತು. ಹೀಗೇ ಮಳೆ ಬಂದರೆ ನಮ್ಮ ಕಾರ್ಯಕ್ರಮದ ಗತಿ ಹೇಗಿರುವುದಪ್ಪಾ ಅಂದು ಕೊಳ್ಳುತ್ತಿದ್ದೆವು. ೬೫ ವರ್ಷಗಳ ನಂತರ ಹೋದ ವರ್ಷ ಕಟ್ಮಂಡುವಿನಲ್ಲಿ ಹಿಮ ಬಿತ್ತಂತೆ, ನಮ್ಮ ದಾರಿಯಲ್ಲೂ ಹಿಮ ಬೀಳಲೆಂದು ನಮಗೆಲ್ಲಾ ಒಳಗೊಳಗೇ ಆಸೆ! ನಮಗೆ, ಹಿಂದಿನ ರಾತ್ರಿ, ನಮ್ಮ ಮುಂಬರುವ ದಿನಗಳು ಹೇಗೆ ಇರುತ್ತವೆಂದು, ಹಾಗು ನಮ್ಮ ಆಚಾರ ವಿಚಾರಗಳು ಹೇಗೆ ಇರಬೇಕು, ಇದರೊಟ್ಟಿಗೆ ’ಆಲ್ಟಿಟ್ಯುಡ್ ಸಿಕ್ನೆಸ್’ಗೆ ಏನು ಮಾಡಲಾಗುತ್ತದೆ ಎಂದೂ ಹೇಳಿದರು. ನಮ್ಮಲ್ಲಿ ಯಾರಿಗಾದರೂ ಇಷ್ಟವಿದ್ದಲ್ಲಿ ೫೦೦೦ ರೂ ಗಳಿಗೆ ಜೀವವಿಮೆ ತೆಗೆದುಕೊಳ್ಳಬಹುದೆಂದು, ಅದರಲ್ಲಿ ಅವಶ್ಯವಿದ್ದಲ್ಲಿ ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಅನುಕೂಲವೂ ಒಳಗೊಂಡಿರುವುದೆಂದು ತಿಳಿಸಿದರು. ನಾವೆಲ್ಲಾ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆಗಿನ ಸ್ಥಿತಿಯಲ್ಲಿ ನಾವೆಲ್ಲಾ ಅಚೀವರ್ಸ್. ೫೦೦೦/- ರೂಗಳು ಬಹಳ ಜಾಸ್ತಿಯಾದಂತೆಯೂ, ಅದು ಹೇಗೂ ಉಪಯೋಗಕ್ಕೆ ಬರುವುದಿಲ್ಲವಾದ್ದರಿಂದ ಯಾರೂ ತೆಗೆದುಕೊಳ್ಳುವ ವಿವೇಚನೆಯನ್ನೇ ಮಾಡಲಿಲ್ಲ. ನಂತರದ ದಿನಗಳಲ್ಲಿ ಯೋಚಿಸಿದಾಗ ನಾವೆಂಥಾ ಅವಿವೇಕಿಗಳು ಎಂದೆನಿಸದೆ ಇರಲಿಲ್ಲ.

Saturday, November 1, 2008

ರಿಂಗ್ ರೋಡಿನಲ್ಲಿ ಪೂರ್ವಸಿದ್ಧತೆ

ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್, ಸುಮಾರು ೧೨೦ಕಿಮೀ ಗಳಿಗಿಂತ (ಅಲ್ಲಿ ಹಲವು ದಾರಿಗಳಿವೆ. ನಾವು ಹೋದ ದಾರಿಯಲ್ಲಿ ೧೨೦ಕಿಮೀ ಆಗುವುದು) ಜಾಸ್ತಿಯಿರುವ ಕಾಲ್ನಡಿಗೆಯಲ್ಲಿ ಹೋಗಿ ಬರಬಹುದಾದಂತಹದ ಒಂದು ಸುತ್ತಾಟ. ಆದರೆ ಉದ್ದಕ್ಕೂ ಸಿಗುವ ಹಿಮಾಲಯದ ಪರ್ವತಗಳು, ಬೆಟ್ಟ ಗುಡ್ಡಗಳೊಡನೆಯ ಒಡನಾಟ ಹಾಗೂ ಅನುಭವ, ಇದನ್ನು ನಿರ್ವಿವಾದವಾಗಿ, ಪ್ರಪಂಚದಲ್ಲಿನ ಪ್ರಖ್ಯಾತ ಟ್ರೆಕ್ ಗಳಲ್ಲಿ ಒಂದನ್ನಾಗಿ ಮಾಡಿದೆ. ಯೋಚಿಸಲಸಾಧ್ಯವಾದಷ್ಟು ಸುಂದರವಾದ ಪರ್ವತಗಳ ದ್ರುಶ್ಯಗಳನ್ನು ನೋಡುವ ಜೀವನದಲ್ಲಿನ ಒಂದು ಮಹತ್ತರವಾದ ಸದಾವಕಾಶ ಇದು. ಈ ಟ್ರೆಕ್ ಬಹಳ ಸುಲಭವಾದದ್ದೇನಲ್ಲ. ಕೊನೆಯನ್ನು ತಲುಪಲು ಶ್ರಮ, ಏಕಾಗ್ರತೆ ಮತ್ತು ಛಲ ಬೇಕು. ಕೆಲವು ಜಾಗಗಳಲ್ಲಿ ನಾವು ನಮ್ಮ ಎಲ್ಲೆ ಮೀರಿ ಪ್ರಯತ್ನ ಪಡಬೇಕಾಗುತ್ತದೆ. ಖುಂಬು ಗ್ಲೇಷಿಯರ್ (ನೀರ್ಗಲ್ಲಿನ ನದಿ) ಸುತ್ತಮುತ್ತಲಿನ ದಾರಿಯಲ್ಲಿ ಕೆಲವೆಡೆ ಬಹಳ ಕಡಿದಾದ ದಾರಿಗಳಿದ್ದು, ಕೇವಲ ಶಕ್ತಿಯೊಂದಲ್ಲದೆ, ಮನಸ್ಸು ದೃಢವಾಗಿದ್ದರೆ ಮಾತ್ರ ಮುಂದುವರಿಯಲು ಸಾಧ್ಯ. ಇದಲ್ಲದೆ, ೧೦,೦೦೦ ಅಡಿಗಳನ್ನು ದಾಟಿದನಂತರ ಒಬ್ಬೊಬ್ಬರಿಗೆ ಒಂದೊಂದು ಅನುಭವ ಆಗಲು ಶುರುವಾಗುತ್ತದೆ. ಆದು ’ಹೈ ಆಲ್ಟಿಟ್ಯುಡ್ ಸಿಕ್ನೆಸ್’ ನ ಮಹಿಮೆ. ಇದು ಯಾಕೆ ಆಗುತ್ತದೆ? ಹೇಗೆ ಆಗುತ್ತದೆ? ಇನ್ನೂ ಅರಿಯದ ವಿಷಯ. ಅದಕ್ಕಾಗಿ ಅಲ್ಲಲ್ಲಿ ಅನ್ವೇಷಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೆಲವರಿಗೆ ಮೇಲಿಂದ ಮೇಲೆ ವಾಂತಿಯಾಗುತ್ತದೆ. ತಲೆ ತಿರುಗಲು ಶುರುವಾಗುತ್ತದೆ. ಕಾಲಿಡಲು ನೆಲ ನೋಡಿದರೆ, ನೆಲ ಅಲುಗಿದಂತೆ ತೋರುತ್ತದೆ. ಪರ್ವತಗಳು ಸ್ಥಳಾಂತರಗೊಂಡಂತೆ ಕಾಣುತ್ತವೆ. ಎರಡು ಹೆಜ್ಜೆಯಿಟ್ಟರೆ ಸುಸ್ತಾಗುತ್ತದೆ. ಶ್ವಾಸಕೋಶದಲ್ಲಿ ನೀರು ತುಂಬಿ ಏದುಸಿರು ಹಾಗು ಕೆಮ್ಮು ಬರಬಹುದು. ಜ್ವರ ಬರಬಹುದು. ಸಾಯಲೂಬಹುದು. ಈ ತರಹ ಶುರುವಾದೊಡನೆ ಅವರನ್ನು ಸ್ವಲ್ಪ ಕೆಳಗಿನ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಹಾಗೂ ಗುಣವಾಗದಿದ್ದರೆ, ಅವರನ್ನು ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಸೌಲಭ್ಯವೂ ಇದೆ. ಈ ’ಹೈ ಆಲ್ಟಿಟ್ಯುಡ್ ಸಿಕ್ನೆಸ್’ ಯಾರಿಬೇಕಾದರೂ ಬರಬಹುದು. ನೀವು ಎಷ್ಟೇ ಪರ್ವತಗಳನ್ನು ಹತ್ತಿರಬಹುದು, ಇದೇ ದಾರಿಯಲ್ಲಿ ಬಹಳಷ್ಟು ಸಾರಿ ಯಾವುದೇ ತೊಂದರೆ ಇಲ್ಲದೆ ಓಡಾಡಿರಬಹುದು. ಯಾರಿಗೆ ಯಾವ ಸಮಯದಲ್ಲಿ ಇದು ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಲ ಅಲ್ಲೇ ಹುಟ್ಟಿ ಬೆಳೆದು ಬದುಕುತ್ತಿರುವ ಶರ್ಪಾಗಳಿಗೇ ಇದು ಆಗಬಹುದು. ಇವೆಲ್ಲದರಿಂದಾಗಿ, ಯಾರು ಸಾಹಸಪ್ರಿಯರೋ ಅವರಿಗೆ ಈ ದಾರಿಯೊಂದು ಸ್ವರ್ಗ.

ಕೆಏಮ್ಎ ನಮ್ಮೆಲ್ಲರನ್ನೂ ಒಂದೆರಡು ಸಲ ಗುಂಪುಗೂಡಿಸಿ, ಎಲ್ಲರಿಗೂ ಪರಿಚಯಿಸಿ ಹಾಗೂ ಎಲ್ಲರಿಗೂ ವ್ಯಾಯಾಮದ ಮಹತ್ವವನ್ನು ವಿವರಿಸಿದರು. ಗುಂಪಿನಲ್ಲಿ, ಹದಿನಾರು ವರ್ಷದಿಂದ ಹಿಡಿದು ಅರವತ್ತೆರಡು ವರ್ಷದವರೆಗಿನವರೂ ಇದ್ದರು. ಮುಕ್ಕಾಲು ಜನರು ಸಾಫ್ಟ್ವೇರ್ ಜನರೇ, ಮಿಕ್ಕವರಲ್ಲಿ ಕಾಲೇಜ್ ಹುಡುಗರು, ವೈದ್ಯರೂ, ದಂತವೈದ್ಯರೂ, ನೃತ್ಯ ಉಪಾಧ್ಯಾಯರೂ, ಟ್ರಾವಲ್ ಎಜೆಂಟರೂ ಇದ್ದರು. ಎಲ್ಲಿ ಸಾಫ್ಟ್ ವೇರ್ ಜನರಿರುತ್ತಾರೋ ಅಲ್ಲಿ ಪೂರ್ತೀ ಗುಂಪುಗೂಡಿಸಲು ಕೊನೆಯ ದಿನದವರೆಗೂ ಸಾಧ್ಯವಾಗುವುದಿಲ್ಲ. ನನಗೂ ಎಲ್ಲರ ಪರಿಚಯ ಕೇವಲ ಪಟ್ಟಿಯನ್ನು ನೋಡಿ ಆಯಿತೇ ವಿನಹ, ಎಲ್ಲರನ್ನೂ ನೋಡಿದ್ದು ಹೊರಡುವ ದಿನ ವಿಮಾನ ನಿಲ್ದಾಣದಲ್ಲೇ.

ಇನ್ನು ಕೇವಲ ಹದಿನೈದೇ ದಿನಗಳಿತ್ತು. ನಾನೇನೋ ಬಹಳ ಸೀರಿಯಸ್ ಆಗೇ ಜಿಮ್ ಗೆ ಹೋಗುವುದು, ಬಸ್ಸಿಗೆ ನೆಡೆದೇ ಹೋಗುವುದೂ, ದಿನಾಗಲೂ ಲಾಪ್ ಟಾಪ್ ಭಾರ ಹೊತ್ತು ಮನೆಗೆ ಬರುವುದು ಮಾಡುತ್ತಾ ಇದ್ದೆ. ಪ್ರತೀ ಶನಿವಾರವೂ ನಾವು ನಮ್ಮ ಹೊಸ ಲಫೂಮ ಶೂ ಗಳನ್ನು ಪಳಗಿಸಲು ಭಾರವಾದ ಟ್ರೆಕ್ಕಿಂಗ್ ಚೀಲಗಳನ್ನು ಹೊತ್ತು ರಿಂಗ್ ರೋಡಿನ ಫುಟ್ ಪಾತಿನ ಮೇಲೆ ೧೦ರಿಂದ ೧೫ಕಿಮೀ ಬಿರ ಬಿರನೆ ಓಡಾಡುತ್ತಿದ್ದೆವು. (ಜನ ನಮ್ಮನ್ನು ಹುಚ್ಚು ಹಿಡಿದ ದೇಸಿಗಳೆಂದು ಭಾವಿಸಿದ್ದರೇನೋ!) ಇದರಿಂದ ವ್ಯಾಯಾಮ, ಮನಃಶಕ್ತಿ ಹಾಗು ಹತ್ತುವೆನೆಂಬ ಭರವಸೆ ಬಂತೆಂದು ಹೇಳಬಹುದು. ಎಲ್ಲರಲ್ಲಿ ತೀರ ಕಡಿಮೆ ಕಸರತ್ತು ಮಾಡಿದ್ದು ಎಂದರೆ ಜ್ಞಾನಿಯೇ. ಕೊನೆಪಕ್ಷ ಅವನು ಹಾಗೆ ಹೇಳಿಕೊಳ್ಳುತ್ತಿದ್ದ. ಅವನು ಒಂದು ವಾರ ಯೋಗಾ ತರಗತಿಗಳಿಗೆ ಹೋಗುವುದು, ರಿಂಗ್ ರೋಡಿನ ಹುಚ್ಚಾಟ ಬೆಟ್ಟರೆ ಬೇರೇನೂ ಮಾಡಲಿಲ್ಲ. ಆಗ ಮಾಡುತ್ತೇನೆ, ಈಗ ಮಾಡುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಅಂತ ಮಾತ್ರ ಹೇಳುತ್ತಲೇ ಇದ್ದ. ಎವೆರೆಸ್ಟ್ ಹತ್ತಿರ ಹೋದಾಗಲೇ ಬುದ್ಧಿ ಬರುತ್ತದೆ ಅಂದುಕೊಂಡು ಸುಮ್ಮನಾದೆ. ನಾವು ಹದಿನೆಂಟು ದಿನಗಳಿಗೆ ಬೇಕಾದ ಸಾಮಾನುಗಳನ್ನೂ, ಬಟ್ಟೆಗಳನ್ನೂ ಪಟ್ಟಿ ಮಾಡಿದ್ದೇ ಮಾಡಿದ್ದು, ತಜ್ಞರ ಅಭಿಪ್ರಾಯಗಳನ್ನು ಕೇಳಿದ್ದೇ ಕೇಳಿದ್ದು. ಆದರೆ ಮುಕ್ಕಾಲು ಬಟ್ಟೆಗಳನ್ನು ಕಟ್ಮಂಡುವಿನಲ್ಲಿ ಕೊಂಡಿದ್ದಿದ್ದರೆ ಖರ್ಚು ಕಡಿಮೆ ಆಗುತಿದ್ದುದ್ದಲ್ಲದೇ, ಯೋಗ್ಯವಾಗಿಯೂ ಇರುತ್ತಿದ್ದವೆಂದು ನಂತರ ಹೊಳೆಯಿತು.

Monday, October 27, 2008

ಹತ್ತು ಹಲವು ಹುಚ್ಚುಗಳಲ್ಲಿ ಒಂದು

ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್
ಇದು ಮೇ ೨೦೦೮ರಲ್ಲಿ ಕೈಗೊಂಡ ೧೮ ದಿನಗಳ ಕಾಲ್ನಡಿಗೆ ಪ್ರವಾಸ. ಎಂದೂ ಮರೆಯಲಾಗದ ಅನುಭವಗಳಲ್ಲಿ ಒಂದು. ಕೆಲವು ಅನುಭವಗಳನ್ನು ಮಾತಿನಲ್ಲಿ ವಿವರಿಸಲಸಾಧ್ಯ ಅಥವಾ ಅಂತಹದೇ ಅನುಭವ ಓದುವವರಿಗೆ ಸಿಗುವಂತಾಗಲು ತುಂಬಾ ಬರೆಯಬೇಕಾಗುತ್ತೇನೊ, ಅಂತೂ ಅಮ್ಮ ನನ್ನ ಹಿಂದೆ ಬಿದ್ದು, ತಾನು ಓದುವ ಆಸೆಯಲ್ಲಿ ಇದನ್ನು ಬರೆಯಲು ಪ್ರೊತ್ಸಾಹಿಸಿದರು. ಆದರೂ ಇದನ್ನು ಬರೆದು ಮುಗಿಸಲು ಸಮಯ ಬೇಕು. ಈ ಬಿಸಿಲಿನಲ್ಲಿ ಕುಳಿತುಕೊಂಡು ಆ ಥಂಡಿಯನ್ನು ಅನುಭವಿಸಿಕೊಂಡು ಬರೆಯುವುದು ಕಷ್ಟವೇ ಸರಿ.

ನಾನು ಪ್ರಿಯ ಮಾತನಾಡುತ್ತಿದ್ದ ಬಹುತೇಕ ವಿಷಯಗಳಲ್ಲಿ, ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪು ಕೂಡ ಒಂದು. ಒಂದಲ್ಲಾ ಒದು ದಿನ ಅಲ್ಲಿಗೆ ಹೋಗೇ ಹೋಗುತ್ತೇವೆ ಎಂಬ ಹುಚ್ಚು ಹಿಡಿದಿತ್ತು. ಮೌಂಟ್ ಎವೆರೆಸ್ಟ್ ಹತ್ತಲು ಈಗ ವಯಸ್ಸಲ್ಲ, ಆದರೆ ಅಲ್ಲಿಯವರೆಗೂ ನಡೆದು, ಒಂದುಸಲ, ಮೂರ್ಚೆ ಹೋಗುವಷ್ಟು ಸುಂದರವಾದ ದೃಷ್ಯವನ್ನು ನೋಡಬೇಕೆಂಬುದು ನ್ನನ್ನಾಸೆಯಾಗಿತ್ತು. ನಾನು ಒಂದು ಸಣ್ಣ ಪುಸ್ತಕದಲ್ಲಿ ನನ್ನಾಸೆಗಳನ್ನೆಲ್ಲಾ ಬರೆಯುತ್ತಿದ್ದೆ. ಅವು ನೆರವೇರಿದಂತೆ ಅವುಗಳನ್ನು ಹೊಡೆದು ಹಾಕುತ್ತಿದ್ದೆ. ಈ ಆಸೆಗಳು ಹೇಗೆ ಯಾವಾಗ ನೆರವೇರುತ್ತವೆ ಎಂದು ಹೇಳಲಾಗುವುದಿಲ್ಲ. ಹೀಗೆ ಇರುವಾಗ ಒಂದು ದಿನ, ಎಲ್ಲಿಂದಲೋ ಪ್ರಿಯಳ ಫೋನ್. ಕರ್ನಾಟಕ ಮೌಂಟನೇರಿಂಗ್ ಕ್ಲಬ್ ಅಸ್ಸೋಸ್ಸಿಯೇಷನ್ (ಕೆ ಏಮ್ ಎ)ನವರು ಎಷ್ಟೋ ವರ್ಷಗಳ ನಂತರ ಬೇಸ್ ಕ್ಯಾಂಪಿಗೆ ಹೊರಟಿದ್ದಾರೆ, ಕೇವಲ ಕೆಲವೇ ಜನರಿಗೆ ಜಾಗ ಇದೆಯಂತೆ, ಬರುವ ಹಾಗಿದ್ದರೆ ಇನ್ನೆರಡು ದಿನಗಳಲ್ಲಿ ದುಡ್ಡು ಕೊಡಬೇಕಂತೆ. ನಾನು ಹೋಗುತ್ತಾ ಇದ್ದೇನೆ. ಈಗಲೇ ಅರ್ಧ ಕೊಟ್ಟಿದ್ದೇನೆ. ನಿನಗೆ ಯೋಚಿಸಲು ಎರಡು ದಿನ ಸಮಯವಿದೆ. ಎಂದು ಹೇಳಿ ಫೊನ್ ಇಟ್ಟಳು. ಅಯ್ಯೋ, ಇವಳು ಯಾಕಾದರೂ ಫೊನ್ ಮಾಡಿದಳೋ. ಹೋಗಲು ಬಹಳ ಆಸೆ, ಆದರೆ ಅಷ್ಟೊಂದು ದುಡ್ಡು ಕೊಡಬೇಕು. ಅಲ್ಲದೆ, ನನ್ನ ಬಾಸ್ ಮುಖ ನೆನೆಸಿಕೊಂಡು ರಜ ಕೇಳುವ ನನ್ನ ಪಾಡು ಯೋಚಿಸಿಕೊಂಡು, ಏನಪ್ಪಾ ಮಾಡುವುದು. ನನ್ನ ಪಾಡು ಯಾವಾಗಲೂ ಹೇಗೇಕೆ ? ಎಂದು ಯೋಚಿಸುವಂತಾಯಿತು. ಜೀವನದಲ್ಲಿನ ಇದೊಂದೇ ಅವಕಾಶವೂ, ಈ ಕ್ಶುಲ್ಲಕ ಕಾರಣಗಳಿಂದಾಗಿ ದೂರ ಸರಿಯುವಂತೆ ಕಾಣಲು ಶುರುವಾಯಿತು. ಬಹಳ ಬೇಜಾರಿನಿಂದ, ನಾನು ಜ್ನಾನಿಗೆ ಫೊನ್ ಮಾಡಿ ಹೀಗೆ ಹೀಗೆ ನಡೆಯಿತು ಅಂತ ಹೇಳಿದೆ. ಆಗ ಅವನು "ನಾನೂ ಬರಬಹುದೇ ಅಂತ ಪ್ರಿಯಳಿಗೆ ಕೇಳಲು ಹೇಳು. ಅಲ್ಲದೆ, ನಿನ್ನ ಬಾಸ್ ಗೆ ಒಂದು ಮೇಲ್ ಕಳುಹಿಸಿ, ಉತ್ತರಕ್ಕೆ ತಡೆದು, ನಾಳೆಹೋಗಿ ಮಾತನಾಡು. Dont assume". ಅಂತೆಲ್ಲ ಹೇಳಿದ. ಪ್ರಿಯಳಿಗೆ ಫೋನ್ ಮಾಡಿ ವಿಚರಿಸಲು ಹೇಳಿದೆ. ಅವಳು ಅಲ್ಲೇ ಇದ್ದುದ್ದರಿಂದ, ಅವಳು ನನಗೆ ಫೋನ್ ನಲ್ಲೇ ಇರಲು ಹೇಳಿ ಅವರ ಹತ್ತಿರ ವಿಚಾರಿಸಿದಳು. ಅವರು "ಅಯ್ಯೊ, ಇದೇನು ನಿನ್ನ ಬಾಲ ಬಹಳ ಬೇಗ ಬೆಳೆಯುತ್ತಿದೆಯಲ್ಲ ? ಈಗಾಗಲೆ ದೊಂಬಿಯಾಗಿದೆ, ಇನ್ನು ಮದುವೆ ದಿಬ್ಬಣವೇ ಸರಿ. ಆದರೆ since your fate is very good, ಆಗಬಹುದು ಆದರೆ ನನಗೆ ಅರ್ಧ ಹಣ ನಾಳೆಯೇ ಬೇಕು. ನಾನು ನೇಪಾಲ್ ಸರ್ಕಾರಕ್ಕೆ ಪರ್ಮಿಷನ್ ಗಾಗಿ ನಾಳೆ ಹೆಸರಿನ ಪಟ್ಟಿ ಕಳಿಸುತ್ತಿದ್ದೇನೆ. ಈಗಾಗಲೇ ಇಪ್ಪತ್ತು ಜನ ಆಗಿದ್ದಾರೆ, ಇನ್ನು ಯಾರನ್ನೂ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದು ಕೇಳಿಸಿತು.

ಸರಿ, ಅಲ್ಲಿಗೆ ಮೌಂಟ್ ಎವೆರೆಸ್ಟ್ ಒಂದು ಅಡಿ ಹತ್ತಿರವಾದಂತಾಯಿತು. ಆದರೆ, ನನ್ನ ಬಾಸ್, ಕಣ್ಣ ಮುಂದೆ ಬಂದಾಗ, ’ಇದು ಕೇವಲ ಒಂದು ಆಸೆ, ಆಸೆಯೇ ದುಃಖಕ್ಕೆ ಮೂಲ ಆದ್ದರಿಂದ ಮಾಡುವುದನ್ನು ಮಾಡೋಣ ಆದರೆ ಮುಕ್ಕಾಲು ಪಾಲು ಮೌಂಟ್ ಎವೆರೆಸ್ಟ್ ದೂರದಲ್ಲೇ ಉಳಿಯಬಹುದು’ ಅಂದುಕೊಡೆ. ಇದೆಲ್ಲ ನಡೆದದ್ದು ಕೇವಲ ಹತ್ತೇನಿಮಿಷದಲ್ಲಿ. ನಾನು ಬಾಸ್ ಗೆ ಮೇಲ್ ಕಳುಹಿಸಿ ಮನೆಗೆ ಹೋದೆ. ಮರುದಿನ ಕೆ ಏಮ್ ಎ ಗೆ ಹೋಗಿ ಹಣವನ್ನೂ ಕೊಟ್ಟು ಬಂದೆ. ಎರಡು ದಿನ ಕಳೆದರೂ ನನ್ನ ಬಾಸ್ ಇಂದ ಉತ್ತರವಿಲ್ಲ, ಅವರು ಆಫೀಸಿನಲ್ಲೂ ಕಾಣಲಿಲ್ಲ. ಬಹುಶ ರಜದಲ್ಲಿದ್ದರು ಅನ್ನಿಸುತ್ತದೆ. ಒಳ್ಳೆಯದೇ ಆಯಿತು ಅಂದುಕೊಂಡೆ. ಈ ಮನುಷ್ಯನ ಹತ್ತಿರ ಮುಖಾಮುಖಿ ರಜದ ಬಗ್ಗೆ ಮಾತಾಡುವುದು ಅಪರಾಧಿ ಭಾವನೆ ಬರಿಸುತ್ತಿತ್ತು. ಬಹಳ ವಿಚಿತ್ರವೆಂದರೆ ನಮ್ಮ ಆಫೀಸ್ ನಲ್ಲಿ ರಜಕ್ಕೆ ಅನುಮತಿ ಇಲ್ಲದಿದ್ದಾಗ ಮಾತ್ರ ಉತ್ತರ ಬರುತ್ತದೆ. ಹಾಗಾಗಿ ಅದು ರಜಕ್ಕೆ ಅನುಮತಿ ಎಂದೇ ಎಣಿಸಿ ಸುಮ್ಮನಾದೆ. ಅಲ್ಲಿಗೆ ನನ್ನ ಹದಿನೆಂಟು ದಿನಗಳ ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್ ಖಚಿತವಾಯಿತು.

Thursday, October 2, 2008

No Parking

ನಾನು ಲೋಟಸ್ ಇಂದ ಹೊರಗೆ ಬಂದಾಗ ಎಂಟುವರೆ ರಾತ್ರಿಯಾಗಿತ್ತು. ಬೇಗ ಮನೆಗೆ ಹೋಗಬೇಕೆಂಬ ಆತುರದಲ್ಲಿ ಸ್ಕೂಟರ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದರೆ, ಜಾಗ ಖಾಲಿ ! ಆಯ್ಯೊ ರಾಮ, ಎಲ್ಲಿ ಹೋಗಲು ಸಾಧ್ಯ ? ಹಿಂದೆ ತಿರುಗಿ ನೋಡಿದರೆ, No Parking ಬೋರ್ಡು. ಹೀಗೋ ಗ್ರಹಚಾರ, ಸರಿ, ಅಲ್ಲೆ ನಿಂತಿದ್ದ ಇಸ್ತ್ರಿ ಗಾಡಿಯವನನ್ನು ಕೇಳಿದೆ, ಅವನು "ಗಾಡಿನಾ? ಆದು ಜೀವನ್ ಭಿಮಾ ನಗರ ಪೋಲೀಸ್ಟೇಷನ್‌ಗೆ ಹೋಗುತ್ತೆ." ಅಂದ. ಸರಿ, ಜ್ಜಾನಿ ಆಫೀಸ್ ಪೋಲೀಸ್ಟೇಷನ್ ಹತ್ತಿರವೇ ಇರುವುದರಿಂದ ಅವನಿ ಅಲ್ಲಿಗೆ ಸ್ವಲ್ಪ ಹೋಗಿ ನನ್ನ ಸ್ಕೂಟರ್ ಎನಾದರು ಕಣುತ್ತ ನೋಡು ಅಂತ ಹೇಳಿದೆ. ಆವನು, ಅದು ಅಲ್ಲೇ ನಿಂತಿದೆಯೆಂದು, ನಾನು ಈಗಲಿಂದ ಈಗಲೇ ಬಂದು ಮುನ್ನೂರು ರೂಗಳನ್ನು ಪಾವತಿಸಿ ಬಿಡಿಸಿಕೊಳ್ಳಬೇಕೆಂದು, ಇಲ್ಲದಿದ್ದರೆ, ಇನ್ನರ್ಧ ಗಂಟೆಯಲ್ಲಿ ಪೋಲೀಸ್ಟೇಷನ್ ಬಾಗಿಲು ಹಾಕುತ್ತರೆಂದು ಹೇಳಿದ. ಇದ್ಯಾವ ಕಷ್ಟ ವಕ್ಕರಿಸಿತು, ಎಂಟುವರೆ ರಾತ್ರಿಯಲ್ಲೂ ಪೋಲೀಸ್ ಇಷ್ಟೊಂದು ಕೆಲಸ ಮಾಡಿದರೆ ಹೇಗೆ ? ಒಂದು ಆಟೋಹಿಡಿದು ಹೋಗುವುದು ಅಂತ ಅಂದುಕೋಡರೆ ಯಾವ ಆಟೊನೂ ಬರಲಿಲ್ಲ. ಎಲ್ಲಾ ದೂರದಿಂದಲೇ, ಆಮೆ, ಚಿಪ್ಪಿಂದ ತಲೆ ಹೊರ ಹಾಕುವಂತೆ ಆಟೋಯಿಂದ ತಲೆ ಹೊರಹಾಕಿ 'ಎಲ್ಲಿಗೆ’ ಎಂಬಂತೆ ನೋಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಆಟೋ ವಿರುದ್ಧದ್ದಿಕ್ಕಿನಲ್ಲೇ ಹೋಗುತ್ತಿತ್ತು. ಆದರೆ ನನ್ನ ಉತ್ತರದಿಂದ ಅದು ಈಗ ತಿರುಗಿ ಬಿಡುತ್ತದೆ ಎಂದು ತಿಳಿದು ಜೋರಾಗಿ "ಜೆ ಬಿ ನಗರ್ ಪೋಲೀಸ್ಟೇಷನ್" ಅಂತ ಕೂಗು ಹಾಕಿದರೆ, ಯಾವುದೋ ಮಾಯದಲ್ಲಿ, ಆಮೆ ತಲೆ ಚಿಪ್ಪಿನಲ್ಲಿ ಮಾಯವಾಗಿ, ಸುತ್ತಮುತ್ತಿನವರು ಇದ್ಯಾಕೆ ಈ ಹೆಂಗಸು ಈ ತರ ಮೇಲಿಂದ ಮೇಲೆ ಕಿರುಚಿಕೊತಾ ಇದೆ ಅಂತ ನೋಡುವಂತಾಗುತ್ತಿತ್ತು.

ಅಂತೂ ನಡೆದೇ ಹೋದೆ. ಅಲ್ಲೇ ಹೊರಗೆ ನನ್ನ ಸ್ಕೂಟರ್ ನಿಂತಿತ್ತು. ಆದರ ನಂಬರ್ ಸರಿಯಾಗಿ ನೋಡಿಕೊಂಡು ಒಳನಡೆದೆ. ಇಲ್ಲದಿದ್ದಲ್ಲಿ ಅದಕ್ಕೆ ಮತ್ತೆರಡು ಮಾತು ಕೇಳಬೇಕಾಗುತ್ತದೆಂದು. ಒಳಗೆ ಒಂದು ಕ್ಯು. ಆದರೆ ಕ್ಯುನಲ್ಲಿ ಯಾವ ಲೇಡೀಸೂ ಇರಲ್ಲಿಲ್ಲ. ಹಾಗಾಗಿ ಎಲ್ಲರೂ ಗೌರವಯುತವಾಗಿ "ನೀವು ಮುಂದೆ ನಡೆಯಿರಿ ಮೇಡಮ್" ಅಂತ ಕಳುಹಿಸಿಕೊಟ್ಟರು. ಆಲ್ಲಿ ಒಬ್ಬ ಎರಡೆರಡು ದೊಡ್ಡ ಪುಸ್ತಕಗಳ ತುಂಬಾ ನನ್ನಂತಾ ಇನ್ನೊಂದು ಪ್ರಾಣಿಯ ಡೀಟೇಲ್ಸ್ ಬರಿತಾಇದ್ದ. ಆಗಲೇ ಕೊನೆಗೆ ಬಂದಿತ್ತು ಅಂತ ಕಾಣಿಸುತ್ತದೆ,

"ಆರ್ ಟಿ ಓ?"
"ರಾಜಸ್ಥಾನ್."
"ರಾಜಸ್ಥಾನ್ ?"
"ರಾಜಸ್ಥಾನ್."
"ಎಲ್ಲೆಲ್ಲಿಂದೋ ಬಂದು ಎಲ್ಲೆಲ್ಲೋ ಪಾರ್ಕ್ ಮಾಡ್ತಾರೆ !" ಅಂತ ಪೋಲೀಸ್ ಗೊಣಗಿದ. ಅಷ್ಟರಲ್ಲಿ, ಒಬ್ಬರು ದೊಡ್ಡ ಪೋಲೀಸಿನವರು, ಡ್ರೆಸ್ಸ್ ನಲ್ಲಿ ಇರುವವರು. ಹೋರಬಂದರು. "ಏನಪ್ಪ, ಇನ್ನೂ ಬರಿತಾನೆ ಇದ್ದೀಯ? ಗುಂಡಗೆ ಬರಿಬೇಕು ಅಂತಾ ಇದ್ದರೆ ದಿನಮುಗಿದರೂ ಆಗಲ್ಲ, ಬೆಗಬೇಗ ಬರಿ. ಲೇಡೀಸೆಲ್ಲಾ ಇದ್ದಾರೆ, ದೂರದೂರಕ್ಕೆಲ್ಲಾ ಹೋಗಬೇಕಿರುತ್ತೆ, ಲೇಟಾಗಿ ಮನೆಗೆ ಹೋಗಿ, ಪೋಲೀಸ್ಟೇಷನ್‌ಗೆ ಹೋಗಿದ್ದೆ ಅಂತ ಹೇಳಕ್ಕಾಗುತ್ತಾ? ಬೇಗ ಬರಿ." ಅಂತ ಹೇಳಿದ. ತಕ್ಷಣ ನನ್ನ ಬಲಗಡೆಯಲ್ಲಿ ನಿಂತಿದ್ದ ಹುಡುಗ, ಮೊಬೈಲಲ್ಲಿ ಏನೋ ಮೆಸ್ಸೇಜ್ ನೋಡುತ್ತಾಯಿದ್ದವನು, ತಲೆ ಎತ್ತದೆ, "ನಾನು ಒಂದುವರೆ ಗಂಟೆಯಿಂದ ಕಾಯುತ್ತಾ ಇದ್ದೀನಿ." ಅಂತ ಗುಟುರು ಹಾಕಿದ. "ಒಂದುವರೆ ಗಂಟೆಯಿಂದನಾ? ನಾವು ಗಾಡಿ ತಂದಿರುವುದೇ ಅರ್ಧ ಗಂಟೆ ಹಿಂದೆ? ಒಂದುವರೆ ಗಂಟೆಯಿಂದ ಇಲ್ಲೇನು ಮಾಡ್ತಾ ಇದ್ದೀರ?" ಅಂದ ಬರೆಯುತ್ತ ಇದ್ದಾತ. "ಹುಂ, ಕೊಡಿ ಮೇಡಂ, ನಿಮ್ಮ ಡಿಎಲ್ಲು." ಎಂದ. ನನ್ನ ಡಿಎಲ್ಲೋ, ಪೂರ್ತೀ ಜೀರ್ಣವಾಗಿ ಹೋದಂತಿತ್ತು. "ಏನು ಮೇಡಂ, ಇದು ನೀವಾ ? ನೀವೇ ಆಗಿದ್ದರೆ ಎಲ್ಲಿ ಇದನ್ನು ಓದಿಹೇಳಿ" ಅಂತ ನನಗೇ ವಾಪಸ್ಸು ಕೊಟ್ಟ. ನಾನು, ಅಯ್ಯೋ ಪರಮಾತ್ಮಾ, ಇದೊಂದು ಟೆಸ್ಟ್ ಪಾಸ್ ಮಾಡಿಸು, ನನ್ನ ಆರನೇ ಇಂದ್ರಿಯ ಇದನ್ನು ಓದಬೇಕಷ್ಟೇ ಅಂತ ಕಣ್ಣಗಲಿಸಿ, ಅಂತೂ ಡಿಎಲ್ ನಂಬರ್ ಓದಿದೆ. "ಹುಂ, ಹೆಸರು?", "ಗಾಡಿ ನಂಬರ್?", "ಆರ್ ಟಿ ಓ?". ಆರ್ ಟಿ ಒ, ಕೇಳಿದ ತಕ್ಷಣ ಕೊನೆಬಂತು ಅಂತ ಭಾವಿಸಿದೆ.

ಇಷ್ಟರಲ್ಲಿ, ನನ್ನ ಎಡಗಡೆ ಇದ್ದ ಪುಣ್ಯಾತ್ಮ, ಆಗ ಈಗ "ಸಾರ್...ಸಾರ್, ಮಂತ್ ಎಂಡು ಸಾರ್, ಮುನ್ನೂರಿಲ್ಲ, ನೂರುಮಾಡಿಕೊಳ್ಳಿ." ಅಂತ ಭಕ್ತಿಯಿಂದ ದುಂಬಾಲುಬೀಳುತ್ತಿದ್ದ. ಅದಕ್ಕೆ ಬರಿಯುತ್ತಿದ್ದವನು "ಮಂತ್ ಎಂಡ್ ಯಾಕ್ರೀ ಅಲ್ಲಿ ಪಾರ್ಕ್ ಮಾಡಕ್ಕೆ ಹೋದ್ರಿ ? ಲಾಸ್ಟ್ ಮಂತ್ ನೂರು ರೂಪಾಯಿ ಇತ್ತು, ಈಗ ರೇಟೆಲ್ಲಾ ಜಾಸ್ತಿಯಾಗಿದೆ. ಇದು ನಾನು ತೊಗೊತಾ ಇರೋ ದುಡ್ಡಲ್ಲ, ಸರ್ಕಾರ ಫಿಕ್ಸ್ ಮಾಡಿರೋದು. ಕೊಡಬೇಕಾಗುತ್ತೆ." "ಹುಂ, ಮೇಡಂ, ಆರ್ ಟಿ ಒ ಯಾವುದು ಹೇಳಿ "ಅಂದ. "ಚಿಕ್ಕಮಗಳೂರು." ಆವನು ಬರೆಯುವುದನ್ನು ನಿಲ್ಲಿಸಿ, "ಚಿಕ್ಕಮಗಳೂರ? ಅಲ್ಲೆಲ್ಲಿ?" ಅಂದ. "ಮೂಡಿಗೆರೆ" ಅಂದೆ. ಆಷ್ಟರಲ್ಲಿ ದೊಡ್ಡಸಾಹೆಬ್ರು "ಸಾಕು ಸಾಕು ಮಾತು, ಬೇಗ ಬರೆದು ಮನೆಗೆ ಕಳಿಸು" ಅಂತ ಕೂಗಿದರು. ಆಷ್ಟರಲ್ಲಿ ಇನ್ನೊಬ್ಬ ಡ್ರೆಸ್ಸಲ್ಲಿಇಲ್ಲದ ಸಹಚರ "ಅಯ್ಯೊ, ಇನ್ನೂ ಮುಗಿದಿಲ್ಲವ? ನಾನು ಬೇಗ ಬೇಗ ಬರಿತೀನಿ, ಇಬ್ಬರೂ ಬೇಗ ಮುಗಿಸೋಣ" ಅಂತ ಪುಸ್ತಕ ತೆಗೆದುಕೊಂಡ. ಎಡಗಡೆ ನಿಂತಿದ್ದ ಮೊಬೈಲ್ ಮಹಾಷಯ ಮುನ್ನೂರು ರೂಗಳನ್ನು ಅವನೆಡೆಗೆ ದೂಕಿದ. "ಏಲ್ಲಿ ಪಾರ್ಕ್ ಮಾಡಿದ್ದಿರಿ?" ಅಂದ. "ನೀವೆ ಗಾಡಿ ತಂದಿದ್ದು, ನಿಮಗೇ ಗೊತ್ತಿಲ್ಲವ?" ಅಂದ ಈತ. "ಎರಡು ಮೂರು ರಸ್ತೆಗಳಿಂದ ತಂದಿದ್ದೀವೆ. ಬೇಗ ಮುಗಿಯ ಬೇಕು ಅಂದ್ರೆ, ಬೇಗ ಹೇಳಿ" ಅಂದ. "ಸಿಎಮ್‌ಹೆಚ್ ರಸ್ತೆ, ಸಿಟಿ ಬ್ಯಾಂಕ್ ಎದುರಿಗೆ. ಅಲ್ಲಿ ಪಾರ್ಕಿಂಗ್ ಅಂತ ಬರೆದಿತ್ತು, ಆದ್ರೆ ಬ್ಯಾಂಕ್ ಒಳಗೇ ತೆದುಕೊಂಡು ಹೋಗಿ ಪಾರ್ಕ್ ಮಾಡಬೇಕು ಅಂತ ನಮಗೇನು ಗೊತ್ತಿತ್ತು !" ಅಂತ ಈತ ಪೋಲೀಸ್‌ಗೇ ಹೇಳಿದ. ಅದಕ್ಕೆ ಪೋಲೀಸ್, ಪೆನ್ನು ಕೆಳಗಿಟ್ಟು, ”ಸಿಎಮ್‌ಹೆಚ್ ರಸ್ತೆಲಿ, ಇದ್ದಿದ್ದ ಸಿಟಿ ಬ್ಯಾಂಕ್ ಒಡೆದುಕಾಕಿದ್ದಾರಲ್ಲ ? ಎಲ್ಲಿ ನಿಲ್ಲಿಸಿದ್ರಿ ? ಇನ್ಫರ್ಮೇಷನ್ ಕರೆಕ್ಟಾಗಿರ್ಬೇಕು" ಅಂದ. "ಅದ್ಯಾವುದೋ ಒಂದು ಸುಡುಗಾಡು ರೋಡು, ಯಾವುದಪ್ಪಾ ? ಉಂ..." ಅಂದ. "1೦೦ ಫೀಟ್ ರೋಡಲ್ಲೇನೊ ಒಂದು ಸಿಟಿ ಬ್ಯಾಂಕ್ ಇದೆ" ಅಂದೆ. ಅದಕ್ಕೆ ಪೋಲೀಸ್ "ಯಾಕ್ ಮೇಡಂ, ನೀವು ಅಲ್ಲಿ ಸಿಕ್ಕಿಹಾಕಿಕೊಂಡಂತಿದೆ?" ಅಂದ. ಆಗ ಮತ್ತೆ ದೊಡ್ಡಸಾಹೆಬ್ರು "ಆಯ್ತಾ ಮೇಡಮ್, ಆದ್ರೆ ಇಲ್ಲಿಂದ ಜಾಗ ಖಾಲಿ ಮಾಡಿ, ಕ್ಯೂನಾದ್ರು ಕಡಿಮೆ ಆಗ್ಲಿ" ಅಂದರು. ನಾನು ಅಲ್ಲಿಂದ ಹೊರಡುತ್ತಿದ್ದಂತೆ, "ಎನ್ರಿ, ನೀವು ನನ್ನನು ನೋಡಿಕೊಂಡು ಮಾತಾಡಿ, ಮೊಬೈಲಿಗೇ ಮಾತಾಡುವಹಾಗಿದ್ದರೆ, ಅದನ್ನೂ ಕಿತ್ತಿಟ್ಟುಕೊಂಡು ಆರುನೂರು ಹಾಕಿಬಿಡುತ್ತೇನೆ ಅಷ್ಟೆ. ಸರಿಯಾಗಿ ಎಲ್ಲಿ ನಿಲ್ಲಿಸಿದ್ದಿರಿ ಹೇಳಿ" ಎಂದೂ, ಸಾರ್, ಸಾರೆಂಬ ಕ್ಷೀಣ ಸ್ವರವೂ ಕೇಳುತ್ತಾ ಇತ್ತು.

Wednesday, October 1, 2008

At last.. touché Esha !

Jeeva Jaala (ಜೀವ ಜಾಲ) in Kannada means – web of life ! and indeed that’s what this blog is going to contain – about everything under the sun, about everything which interests people, about everything which I would love to write..

There are so many blogs created by people, even in my very own language, Kannada. I think writing is the most loved interest of mankind. The other day, in the bus I heard two people talking –

“Oh, I wish I had enough time to write”

“You should make time”

“But there is no use just writing and none to read those, I’m no big writer that any magazine publish it, not even unknown dailies”

“Why don’t you blog it. You don’t have to be under anybody’s mercy to reach readers!”

“Oh, yes, but do you think that’s a good idea ?”

“Then why do you think the whole world is making their own private world so public ? Every Tom, Dick and Harry love writing and these blogs come so handy that they are like – you are there and you are not there.. you are there for those who are interested and not there for others”

So I was thinking – there are so many people who are thinking the same ! The result is this blog. I’m intending to post English as well as Kannada collections here. Hope we all enjoy these.