Wednesday, December 9, 2015

ನಮ್ಮ ಹಕ್ಕಿ ಮರಿಗಳ ಕತೆ

ಅಂತೂ ನಮ್ಮ ಹೊಸ ಮನೆಗೆ ಒಂದು ಹಕ್ಕಿ ಗೂಡು ಬಂತು ! ಇರುವೆಗಳು ಇಲ್ಲಿ ಇರುತ್ತಾವೋ, ಹಕ್ಕಿಗಳು ಎಲ್ಲಿ ಗಲಾಟೆ ಮಾಡುತ್ತಿರುತ್ತವೋ, ಪ್ರಾಣಿಗಳು ಎಲ್ಲಿ ದಾಟಾಡುತ್ತಿರುತ್ತವೋ ಆ ಜಾಗ ಬದುಕಲು ಯೋಗ್ಯವಾಗಿದೆ ಎಂದರ್ಥವಂತೆ. ನಾವು ನಮ್ಮ ಮನೆಯಂಗಳದಲ್ಲಿ ಆರ್ಗಾನಿಕ್ ತರಕಾರಿಗಳನ್ನು, ಹಣ್ಣಿನ ಮರಗಳನ್ನು, ಹೂವಿನ ಗಿಡಗಳನ್ನು ಬೆಳೆಸಿರುವೆನು. ಯಾವಾಗಲೂ ತರ ತರದ ಹಕ್ಕಿಗಳು ಇದ್ದೇಇರುತ್ತವೆ. ಆದರೆ ನಮ್ಮ ಮನೆಗೆ ಬೇಕ್ಕುಗಳೂ ಆಗಾಗ ಭೇಟಿ ಕೊಡುವುದರಿಂದಲೋ ಏನೋ ಯಾವ ಹಕ್ಕಿಯೂ ಇದುವರೆಗೆ ಗೂಡುಕಟ್ಟುವ ಧೈರ್ಯ ಮಾಡಿರಲ್ಲಿಲ್ಲ.

ಒಂದು ಕೆಲಸವಿಲ್ಲದ ಮಧ್ಯಾನ್ಹ, ಹೊರಗಿನ ಮರವನ್ನು ದಿಟ್ಟಿಸುತ್ತಾ ಕುಳಿತಿದ್ದಾಗ, ಒಂದು ಪಿಕಳಾರ ಆ ಮರದ ಒಳಗೆ ಹೂಕ್ಕಿದ್ದನ್ನು ಕಂಡೆ. ಅದರ ಹಿಂದೆ ಮತ್ತೊಂದು ಚಿಲಿಪಿಲಿ ಗುಟ್ಟುತ್ತಾ ತಿರುಗಾಡುತ್ತಿತ್ತು. ಎಲಾ ಇವುಗಳ ! ಗೂಡುಕಟ್ಟಲು ನೋಡುತ್ತಾ ಇರಬೇಕು ಎಂದುಕೊಂಡೆ. ಅದು ನಮ್ಮ ಬೇಸ್ಮೆಂಟ್ ಗಾರ್ಡನಲ್ಲಿ, ಹಾಗಾಗಿ ಅವಕ್ಕೆ ಯಾವುದರ ಉಪಟಳವೂ ಇರುವುದಿಲ್ಲ. ಅಂತೂ ಒಳ್ಳೆಯ ಜಾಗವನ್ನೇ ಹುಡುಕಿದ್ದವು.ನಂತರ ನಾನು ಬಹುಶಃ ಎರಡು ವಾರಗಳವರೆಗೆ ಆ ಕಡೆಗೆ ತಲೆಯೇ ಹಾಕಲಿಲ್ಲ. ಆದರೆ ಈಎರಡು ಹಕ್ಕಿಗಳು ಹೋಗಿ ಬಂದು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಒಂದು ದಿನ ನಾನು ಅಲ್ಲಿನ ಹುಲ್ಲನ್ನು ಕ್ಲೀನ್ ಮಾಡಿಸಬೇಕೆಂದು ಅಲ್ಲಿ ನೋಡಲು ಹೋದಾಗ ಈ ಹಕ್ಕಿಗಳು ಪುರ್ರ್ ಅಂತ ಹಾರಿದವು. ಆಗ ಅ ಮರದಲ್ಲಿದ್ದ ಹಕ್ಕಿ ಗೂಡನ್ನು ಸರಿಯಾಗಿ ಪರೀಕ್ಷಿಸಿದೆ. ಅಲ್ಲಿ ಮೂರು ಮರಿಗಳು ಬೆಚ್ಚಗೆ ಮಲಗಿದ್ದವು.


ಆದರೆ ಎಲ್ಲಿಂದಲೋ ಒಂದು ತೊಂದರೆ ಇಲ್ಲೂ ವಕ್ಕರಿಸಿತು. ಮೇಲೆಲ್ಲೋ ತಿರುಗಾಡುತ್ತಿದ್ದ ಒಂದು ಓತಿಕ್ಯಾತ ಒಳಗೆ ಬಿತ್ತು. ಅದಕ್ಕೆ ಆ ಎತ್ತರದ ಗೋಡೆಯನ್ನು ಹತ್ತಲೊಂತು ಸಾಧ್ಯವಿರಲ್ಲಿಲ್ಲ. ಇನ್ನು ಅಲ್ಲಿ ತಿನ್ನಲೇನೂ ಇರಲಿಲ್ಲ (ನನ್ನ ಪ್ರಕಾರ).  ಈಗ ಅದು ಈ ಎಳೆ ಮಾರಿಗಳನ್ನೇ ತಿನ್ನಲ್ಲು ಪ್ರಯತ್ನಿಸಿದರೆ ಏನಪ್ಪಾ ಎಂದು ಯೋಚಿಸಿ, ತಂದೆ ತಾಯಿ ಬರುವುದರೊಳಗೆ ಅದನ್ನು ಸಾಯಿಸಿಬಿಡುವುದು ಎಂದೆಣಿಸಿದೆ. ನಾನು ಅದರ ಕಡೆ ನೋಡಿದ್ದೇ ಕ್ಷಣ, ಅದು ನನ್ನ ಮನವನ್ನು ತಿಳಿದವರಂತೆ, ಕ್ಷಣಮಾತ್ರದಲ್ಲಿ ಮಂಗಳ ಮಾಯ ! ಇನ್ನು ಇದನ್ನು ಹೀಗೆ ಬಿಡಕೂಡದೆಂದು, ಆ ಹಕ್ಕಿಮರಿಗಳು ನನ್ನ ಜವಾಬ್ದಾರಿಯಾದವು. ಇನ್ನೆರಡು ದಿನ ನನಗೆ ಆ ಓತಿಕ್ಯಾತ ಕಾಣಲಿಲ್ಲ. ಮೂರನೇ ದಿನ ಅದು ನನ್ನ ಕಣ್ಣಿಗೆ ಬಿತ್ತು. ಮೊದಲಿಗಿಂತ ದಷ್ಟ ಪುಷ್ಟವಾದಂತೆ ಕಂಡಿತು. ಅಯ್ಯೋ, ನನ್ನ ಹಕ್ಕಿಮರಿಗಳಿಗೆ ಏನಾಯಿತೋ, ಅವು ಮೂರೂ ಇದ್ದಾವೋ, ಹೇಗೆ ? ಆದರೆ ಅದಕ್ಕೆ ಮೊದಲು, ಈ ಓತಿಕ್ಯಾತದ ಫೋಟೊ ತೆಗಯುವ, ಎಂದೆಣಿಸಿ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡು ಈ ಫೋಟೊ ತೆಗೆದ ಕ್ಷಣ ಅದು ಮತ್ತೆ ಮಾಯ !

ಮೂರು ಮರಿಗಳೇನೋ ಇದ್ದವು, ಆದರೆ ಅವನ್ನು ಗುರುತಿಸಲಾರದಂತೆ ಬದಲಾಗಿದ್ದವು. ಕೇವಲ ಐದು ದಿನಗಳಲ್ಲಿ ಅದ್ಬುತವಾದ ಬದಲಾವಣೆಯಾಗಿತ್ತು. ಇನ್ನು ಈ ಓತಿಕ್ಯಾತ ಏನೂ ಮಾಡಲಾರದು ಎಂದುಕೊಂಡೆ.


ಈ ಮರಿಗಳು ಬಹಳ ಬೇಗ ಬೆಳೆಯುತ್ತವೆ ! ಅವುಗಳು ಗೂಡು ಬಿಡಲು ಬಹಳ ದಿನಗಳಿಲ್ಲ ಎಂದುಕೊಂಡು, ಮೂರು ದಿನ ಬಿಟ್ಟು ನೋಡಿದರೆ, ನಾನು ಅಂದುಕೊಂಡಂತೆ, ಗೂಡು ಖಾಲಿ !


ಅರೆ, ಒಂದೂ ಇಲ್ವಲ್ಲ ! ಅದು ಹೇಗೆ ನನ್ನ ಕಣ್ಣು ತಪ್ಪಿಸಿ ಹಾರಿ ಹೋಗಿವೆ ? ಅವು ಮೊದಲು ಹಾರಲು ಕಲಿಯಬೇಕಲ್ಲವೇ, ಇಲ್ಲೇ ಇಲ್ಲೋ ಇರಬೇಕು ಎಂದು ಹುಡಿಕಿದೆ. ಅಗೋ ಅಲ್ಲಿ ಕೆಳಗೊಂದು ಬಿದ್ದಿತ್ತು. ಇನ್ನೊಂದು, ಕೆಳಗಿನ ಕೊಂಬೆಗೆ ಹಾರಿ ಕುಳಿತಿತು. ಇದು ಬಹಳ ಜಾಣ ಮರಿ ಇರಬೇಕು, ಬಲು ಬೇಗ ಹಾರಲು ಕಲಿತಿದೆ ಎಂದುಕೊಂಡೆ.
ಒಂದು ನಿಮಿಷ, ಮೂರು ಹಕ್ಕಿಗಳಿರಬೇಕಲ್ಲ, ಇನ್ನೊಂದು ಎಲ್ಲಿ ? ಆ ಓತಿಕ್ಯಾತ ಏನಾದರೂ .... ಅಲ್ಲೇ ಆ ಓತಿಕ್ಯಾತ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿತ್ತು. ಈ ಸಲ ಅದು ಮಾಯವಾಗಲಿಲ್ಲ. ಬಹುಶಃ ಅದಕ್ಕೆ ನನಗೆ ಮೋಸಮಾಡುವುದು ಬಹಳ ಸುಲಭವೆಂದು ತಿಳಿದುಹೋದಂತಿತ್ತು. ಓಕೆ, ನಿನ್ನನು ಆಮೇಲೆನೋಡಿಕೊಳ್ಳುತ್ತೇನೆ, ಈಗ ಆ ಮೂರನೆಯ ಹಕ್ಕಿಮರಿ ಎಲ್ಲಿ ಎಂದುನೋಡಲು ಮುಂದಾದೆ. ಆದರೆ ಅದಕ್ಕೆ ಮೊದಲೇ ಅಲ್ಲಿಗೆ ತಂದೆ ತಾಯಿಗಳು ಬಂದವು. ನನ್ನನ್ನು ನೋಡಿ ವಿಚಿತ್ರವಾಗಿ ಕಿರುಚಲಾರಂಭಿಸಿದವು. ಬಹುಶಃ ತಮ್ಮ ಕೆಟ್ಟ ಭಾಷೆಯಲ್ಲಿ “ತೊಲಗು ಇಲ್ಲಿಂದ” ಎಂದು ಬೈದವೇನೋ.ನಾನು ಮೌನವಾಗಿ ವಿಧೇಯತೆಯಿಂದ ಮನೆಯೊಳಗೆ ಬಂದೆ. ಅ ಎರಡು ಹಕ್ಕಿಗಳು ನನ್ನ ಕಿಟಕಿಯ ಹತ್ತಿರ ಬಂದು “ಬದ್ಮಾಶ್, ಅಲ್ಲೇ ಇರು, ಇನ್ನೊಂದು ಸಲ ಬಂದರೆ ಸರಿ ಹೋಗುವುದಿಲ್ಲ” ಎಂದು ಹೇಳಿ ಹೋದವು. ನಾನು ಕಿಟಕಿಯಿಂದಲೇ ನೋಡುತ್ತಿದ್ದೆ. ಚಿಕ್ಕ ಮರಿಯ ಅಣ್ಣ, ತಂಗಿಯನ್ನು ಸಮಾಧಾನಗೊಳಿಸಲು ಕೆಳಗೆ ಬಂದು ಅದೊರೊಟ್ಟಿಗೆ ಕುಳಿತುಕೊಂಡಿತು. ನಾನು ಒಳಗೆ ಬಂದಿಯಾದ್ದುದ್ದರಿಂದ, ದೂರದಿಂದಲೇ ಫೋಟೊ ತೆಗೆಯಬೇಕಾಯ್ತು.ಅವುಗಳ ಅಮ್ಮ ಮತ್ತೆ ಕಿಟಕಿಯ ಬಳಿಗೆ ಬಂದು “ನಾನು ಆಗಲೇ ಎಚ್ಚರಿಕೆ ಕೊಟ್ಟಿದ್ದೇನೆ, ನೀನು ನಮ್ಮನ್ನು ಸುಮ್ಮನೆ ಬಿಟ್ಟುಬಿಡು”  ಎಂದು ಒದರಿತು.


ಆಯ್ತಪ್ಪ, ನಾನು ನೀನು ಹೋಗುವುದನ್ನೇ ಕಾದಿದ್ದು ಅನಂತರ ನೋಡುತ್ತೇನೆ ಅಷ್ಟೇ ಅಂದುಕೊಂಡೆ.

ನಾನು ಸಮಯ ನೋಡಿ ಹೊರ ಹೋದ ತಕ್ಷಣ, ಒಂದು ಮರಿ ಒಂದಡಿ ಹಾರಿ ಗೋಡೆಯ ಪಕ್ಕ ಕುಳಿತುಕೊಂಡಿತು. ಅಗೋ, ಅಲ್ಲಿ ಮೂರನೆಯ ಮರಿ! ಅದಕ್ಕೆ ಬಹಳ ಭಯ ಇರುವಂತಿದೆ. ಅದು ಗೂಡಿನ ಪಕ್ಕದಲ್ಲಿಯೇ ಕುಳಿತಿದೆ “ಗುಮ್ಮ”.ಅಯ್ಯಮ್ಮ, ನಾನು ಜಾಸೂಸಿ ಕೆಲಸ ಮಾಡುತ್ತಿರಬೇಕಾದರೆ ಈ ಎರಡು ತಂದೆ, ತಾಯಿ ಬಂದವು. ಅವುಗಳಿಗೆ ನನ್ನಮೇಲೆ ನಖಶಿಖಾ ಅಂತ ಸಿಟ್ಟು ಬಂತು. “ನೀನು ನಮ್ಮ ಮರಿಗಳಿಗೆ ಹೆದರಿಕೆಯನ್ನು ತುಂಬುತ್ತಿತ್ತಿದ್ದೀಯ. ಅವುಗಳನ್ನು ಒಂದು ಕಡೆ ನಾವು ಕೂರಿಸಿದರೆ, ನೀನು ಅವು ಹರಡಿಹೋಗುವಂತೆ ಮಾಡುತ್ತಿದ್ದೀಯ. ಸುಮ್ಮನೆ ಮನೆಯೊಳಗೆ ಹೋಗಿ ಅಲ್ಲೇ ಇದ್ದರೆ ಸರಿ, ಹುಷಾರ್ “ ಎಂದವು. ಅವು ನಾನು ಮನೆಯೊಳಗೆ ಹೋಗುವವರೆಗೂ ನನ್ನ ಹಿಂದೆ ಬಂದು, ಕಿಟಕಿಯಿಂದ ನಂಗೆ ಬೆದರಿಕೆ ಇಟ್ಟವು. ಅಂದು ಮದರ್ಸ್ ಡೇ, ಹಾಗಾಗಿ ಹ್ಯಾಪಿ ಮದರ್ಸ್ ಡೇ ಹೇಳಿ ಒಳಬಂದೆ.


ಸರಿ, ನಾನು ಮನೆಯೊಳಗಿಂದ  ಮರಿಗಳನ್ನು ನೋಡುತ್ತಾ ನಿಂತಿದ್ದಾಗ, ಒಂದು ವಿಚಾರ ಜ್ಞಾನೋದಯವಾಯಿತು. ಆ ಓತಿಕ್ಯಾತ ನನ್ನನು ನೋಡಿ ಯಾಕೆ “ಕ್ಯಾರೇ” ಅನ್ನಲ್ಲಿಲ್ಲ ಅಂತ ! ನನಗಿಂತ ಮಿಗಿಲಾಗಿ ಅದಕ್ಕೆ  ಹಕ್ಕಿ ಮರಿಗಳ ಭಯ ! ಈ ಹಕ್ಕಿಮರಿಗಳು ಅಲ್ಲೆಲ್ಲಾ ಹಾರಾಡಲು ಪ್ರಯತ್ನಿಸುತ್ತಾ ನಿಯಂತ್ರಣವಿಲ್ಲದೆ ಪುಟಿದಾಡುತ್ತಿದ್ದವು. ಮೂರುಕಡೆ ೧೨ ಅಡಿ ಎತ್ತರದ ಗೋಡೆ ಇನ್ನೋದು ಕಡೆ ೨೪ ಅಡಿಗಿಂತ ಎತ್ತರದ ಮನೆ, ಮನೆಯೊಳಗೆ ಈ ಪುಣ್ಯಾತ್ಗಿತ್ತಿ, ಅವೆಲ್ಲಿ ಹೋಗಲು ಸಾಧ್ಯ ? ಒಂದು ಜಾಣ ಮರಿ, ತುಂಬಾ ಪ್ರಯತ್ನಿಸುತ್ತಿದ್ದ ಒಂದು ತ್ವರಿತ ವಿಧ್ಯಾರ್ಥಿ, ಕುಡಿದವರಂತೆ ಓಲಾಡುತ್ತಾ, ಆ ಓತಿಕ್ಯಾತಡ ಹತ್ತಿರ ಹೋಗಿ ಬಿದ್ದಿತು. ತಕ್ಷಣ ಸುಮ್ಮನೆ ನೋಡುತ್ತಿದ್ದ ತಂದೆ ತಾಯಿ, ಹಾರಿ ಓತಿಕ್ಯಾತದ ಹತ್ತಿರ ಕಿರುಚಾಡಿ, “ನಿನ್ನ ಕುಲ ನಶಿಸಿ ಹೋಗ, ನಮ್ಮ ಮಕ್ಕಳ ದಾರಿಗೆ ಅಡ್ಡ ಬರುತ್ತೀಯ ?” ಎಂದು ಬೈದು, ಅದಕ್ಕೆ ಕುಕ್ಕಿ, ಆ ಓತಿಕ್ಯಾತ ಸತ್ತೆನೋ ಕೆಟ್ಟೆನೋ ಅಂತ ಮತ್ತೆ ಮಾಯವಾಯಿತು.
          ಈ ಮರಿಗಳಿಗೆ ಈಗ ಜಾಸ್ತಿ ಹಸಿವು. ಹಾಗಾಗಿ ಹಕ್ಕಿಗಳು ಸದಾಕಾಲವೂ ಅವುಗಳಿಗೆ ಗುಟುಕು ತಂದು ತಂದು ಗಂಟಲಿಗೆ ತುರುಕುತ್ತಿದ್ದವು. ಅವು ಎಷ್ಟು ಬಿಡುವಿಲ್ಲದೆ ದುಡಿಯುತ್ತಿದ್ದುವೆಂದರೆ, ನಾನು ಅಲ್ಲೆಲ್ಲಾ ಓಡಾಡಿದರೆ ಅವಕ್ಕೆ ತೊದರೆಯಾಗುತಿರಲಿಲ್ಲ, ಬಹುಶಃ ನಾನು ಅವುಗಳ ಜೀವನದ ಒಂದು ಭಾಗವಾಗಿ ಬಿಟ್ಟಿದ್ದೆ, ಎಷ್ಟರ ಮಟ್ಟಿಗೆಯಂದರೆ, ನಾನು ಒಂದು ಮರಿ ಜೊತೆ ಸೇಲ್ಫಿ ತೆಗೆದುಕೊಂಳ್ಳಲು ನಿರ್ಧರಿಸಿದೆ ! ಹಕ್ಕಿಗಳ ಕೂಗಾಟ ತಾರಕಕ್ಕೇರಿತು, ಹೀಗೆ ಹಾಗೆ ಹಾರಾಡಿದವು, ಆದರೆ ನಾನು ಯಾವುದಕ್ಕೂ ಬಗ್ಗಲಿಲ್ಲ. ಅವು ನಂತರ, ಇವಳು ಆಗ ಈಗ ಪ್ರತ್ಯಕ್ಷ ವಾಗುತ್ತಾಳೆ ಮತ್ತೆ ಮಾಯವಾಗುತ್ತಾಳೆ, ಇವಳು ಬರೀ ಫೋಟೊ ತೆಗೆಯುತ್ತಾ ಇರುತ್ತಾಳೆ, ಅದರಿಂದಾಗಿ ನಮ್ಮ ಜೀವನ ಯಾವರೀತಿಯಾಗಿಯೂ ಬದಲಾಗಿಲ್ಲ ಅಂದುಕೊಂಡು ಬಿಟ್ಟುಬಿಟ್ಟವು.


ನನ್ನ ಸೆಲ್ಫಿ ಮುಗಿದಮೇಲೆ, ಅಮ್ಮ ಹಕ್ಕಿಯು ಎಲ್ಲಾ ಮರಿಗಳನ್ನು, ಗುಟುಕು ಕೊಡಲು ಸುಲಭವಾಗಲೆಂದು ಒಂದೆಡೆ ಕಲೆಹಾಕಲು ಶುರುಮಾಡಿತು. ಅದೇನು ಮಾಡಿತು ಗೊತ್ತೆ ? ಕಿಟಕಿಯ ಬಳಿ ಇದ್ದ ಈ ಮರಿಯ ಹತ್ತಿರ ಬಂದು, ಏನೋ ಕಚಪಿಚ ಎಂದಿತು. ತಕ್ಷಣ ಹಕ್ಕಿಮರಿ ಇತರ ಮರಿಗಳೆಡೆಗೆ ಹಾರಿತು. ಆದರೆ ಅದು ವೇಗವನ್ನು, ಕ್ರಮಿಸಬೇಕಾದ ದೂರವನ್ನು ನಿಯಂತ್ರಿಸುವುದನ್ನು ಇನ್ನೂ ಕಲಿತಿರಲಿಲ್ಲ, ಹಾಗಾಗಿ ಅದು ನಾನು, ಇತರ ಮರಿಗಳು, ಮರ, ತಂದೆ ತಾಯಿ ಎಲ್ಲರನ್ನೂ ಹಾದು ಗೋಡೆಗೆ ಬಡಿದು, ಒಡಹುಟ್ಟಿದವರ ಹತ್ತಿರ ಬಿತ್ತು, ಅಲ್ಲಿ ಅವರೆಲ್ಲಾ ಸೇರಿಕೊಂಡು ಭೋಜನ ಮಾಡಿದರು.
ಮರುದಿನ ನಾನು ಒಂದು ಪರಿಚಿತವಾದ ಶಬ್ದ ಕೇಳಿಸಿಕೊಂಡೆ. ನನ್ನ ಕೆಲಸದವಳು, ಭಾರತಿಗೆ, ಬೇಸ್ಮೆಂಟ್ ಶುಚಿಮಾಡಬಾರದೆಂದು ಸೂಚನೆ ಕೊಟ್ಟಿದ್ದೆ ಆದರೆ ಅವಳು ಎಲ್ಲಾ ಬಾಗಿಲು ತೆಗೆದು ನೀರು ಹಾಕಿ ತೊಳೆಯುತ್ತಿರುವಂತಿದೆ ! ಓಡಿದೆ, ದೇವರೇ, ಮರಿಗಳಿಗೆ ಏನೂ ಆಗದೆ ಇರಲಪ್ಪ ಎಂದುಕೊಂಡೆ. ಭಾರತಿ “ಅಯ್ಯೋ, ಇಲ್ಲೆಲ್ಲಾ ಈ ಹಕ್ಕಿಗಳು ಗಲೀಜು ಮಾಡಿವೆ, ಹೀಗೆ ಬಿಟ್ಟರೆ ಮುಂದೆ ಇದನ್ನು ಕ್ಲೀನ್ ಮಾಡಲು ಆಗುವುದಿಲ್ಲ” ಎಂದಳು. ನಾನು ಅವಳಿಗೆ ಮುದುಡಿಕೊಂಡಿದ್ದ ಎರಡು ಮರಿಗಳನ್ನು ತೋರಿಸಿದೆ. ಅವು ಹಾರಿ ಹೋಗುವವರೆಗೂ ಇಲ್ಲಿ ಕ್ಲೀನ್ ಮಾಡಬಾರದೆಂದು, ಇಲ್ಲಿಗೆ ಬರಲೇಬಾರದೆಂದು ಹೇಳಿದೆ. ಆದರೆ ಆಗಲೇ ಒಂದು ಮರಿ ಖೋಣೆಯ ಒಳಗೆ ಬಂದಿತ್ತು. ಅದು ಹತಾಶೆಯಿಂದ ತೊಳಲಾಡುತ್ತಾ ಕಿಟಕಿಯಿಂದ ಆಚೆ ನೋಡುತ್ತಿತ್ತು. ಕಿಟಕಿಯ ಆಚೆ ಬದಿ ಅದರ ಅಮ್ಮ ಅದಕ್ಕೆ ಸಮಾಧಾನ ಹೇಳಿ ಧೈರ್ಯ ತುಂಬುತ್ತಿತ್ತು. ನನಗೆ ಇದು ತೊಂದರೆಯ ಮುನ್ಸೂಚನೆ ಎಂದು ತೋರಿತು. ಮನುಷ್ಯ ಹಕ್ಕಿಗಳನ್ನು ಎಂದೂ ಮುಟ್ಟಬಾರದು, ಅವುಗಳ ಗುಡುಗಳನ್ನೂ ಪದೇಪದೇ ನೋಡಬಾರದು ಎಂದು ನಮ್ಮ ತಂದೆ ಹೇಳಿದ ಮಾತುಗಳು ನನ್ನ ಮನಸ್ಸಿಗೆ ಬಂತು. ಆದರೇನು ಮಾಡುವುದು ? ಅಲ್ಲದೆ, ಊರಿನ ಹಕ್ಕಿಗಳು ಇದಕ್ಕೂ ಅಡ್ಜಸ್ಟ್ ಮಾಡಿಕೊಡಿರಬಹುದೇನೋ ? ನಾನು ಆ ಮರಿಯನ್ನು ನಯವಾಗಿ ಎತ್ತಿ ಹೊರಗೆ ಹುಲ್ಲಿನ ಮೇಲೆ ಬಿಟ್ಟೆ. ಅದರ ಹೃದಯ ಜೋರಾಗಿ ಬಡಿಯುತ್ತಿತು, ಅದು ಬಹಳ ಬಿಸಿಯಾಗಿತ್ತು. ಅದರ ತಂದೆ ತಾಯಿಗಳು ರೋಚ್ಚಿಗೆದ್ದವು, ವಿದ್ರಾವಕವಾಗಿ ಅರಚುತ್ತಿದ್ದವು.
 


ನಾನು ಅದನ್ನು ಹುಲ್ಲಿನ ಮೇಲೆ ಬಿಟ್ಟಮೇಲೆ ನೋಡಿದರೆ ಅಲ್ಲಿ ಬರೆ ಎರಡೆ ಹಕ್ಕಿಮರಿಗಳಿವೆ ! ಯಾವ ಮಾಯದಲ್ಲೋ ಒಂದು ಮರಿ ನನ್ನ ಕಣ್ಣು ತಪ್ಪಿಸಿ ೧೨ ಅಡಿ ಎತ್ತರದ ಗೋಡೆಯನ್ನು ಹಾರಿ ಹೊರಕ್ಕೆ ಹೋಗಿದೆ ! ನಾನು ೧೨ ಅಡಿ ಆಳದಿಂದ ಆಕಾಶವನ್ನು ದಿಟ್ಟಿಸುತ್ತಾ ಇರಬೇಕಾದರೆ, ಇನ್ನೊಂದು ಮರಿ ದಿಟ್ಟ ಹೆಜ್ಜೆ ಇಟ್ಟು ಹಾರಿ ಗ್ರೌಂಡ್ ಫ್ಲೋರ್ ಚಡ್ಜದ ಮೇಲೆ ಕುಳಿತಿತು. ತಂದೆ, ತಾಯಿಗಳಿಗೆ ಎಲ್ಲಿಲ್ಲದ ಸಂತಸ, ಅದನ್ನು ಕೊಂಡಾಡಿ ಜಿಗ್ ನೃತ್ಯ ಮಾಡುತ್ತಿದ್ದವು.


ತರುವಾಯ ಇನ್ನೊಂದು ಜಿಗಿತಕ್ಕೆ ವಿಸ್ತಾರವಾದ ಪ್ರಪಂಚಕ್ಕೆ ನಿಲ್ಲದೆ ಹಾರಿತು ! ಅದರ ತಂದೆ ತಾಯಿಗಳು ಅದನ್ನು ಹಿಂಬಾಲಿಸಿದವು, ನಾನು ಅಷ್ಟೇ. ನಾವು ಮನೆಯ ಎದುರಿನ ರಸ್ತೆಯನ್ನು ದಾಟಿ ಆಚೆ ಇದ್ದ ಸಪೋಟ ಗಿಡದ ಹತ್ತಿರ ಬಂದೆವು. ಈ ಮರಿ ಈಗ ಧೈರ್ಯದಿಂದ ಎಲ್ಲಾ ಕಡೆ ಹಾರುತ್ತಿತ್ತು, ಬೇಕಾದ ಕೊಂಬೆಯ ಮೇಲೆ ಕುಳಿತುಕೊಳ್ಳುತ್ತಿತ್ತು, ಚಿಲಿಪಿಲಿ ಗುಟ್ಟುತ್ತಿತ್ತು. ಅದರ ಪೋಷಕರು ಮಾತ್ರ ಅದರೊಟ್ಟಿಗೆ ಇದ್ದರು, ನನಗೆ, ”ನಡಿ ಆಚೆ, ನಡಿ ಆಚೆ” ಎಂದು ಗದರುತ್ತಿದ್ದವು.
ನಾನು ಕೊನೆಯ ಮರಿಯನ್ನು ನೋಡಲು ಹಿಂತಿರುಗಿ ಬಂದೆ. ಅದು ನಾನು ಎಲ್ಲಿ ಅದನ್ನು ಬಿಟ್ಟಿದ್ದೆನೋ, ಅಲ್ಲೇ ದುಃಖದಲ್ಲಿ ಕುಳಿತಿತ್ತು. ನಾನು ಅದಕ್ಕೇನಾದರೂ ಆಗಿದೆಯಾ ಎಂದು ನೋಡಲು “ಹಾರು ಹಾರು, ಇಲ್ಲದಿದ್ದಲ್ಲಿ ನೀನು ಓತಿಕ್ಯಾತ ಮತ್ತು ನನ್ನೊಟ್ಟಿಗೆ ಇಲ್ಲೇ ಇರಬೇಕಾಗುತ್ತದೆ” ಎಂದು ಹಾರಿಸಿದೆ. ಅದು ಕುಪ್ಪಳಿಸಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಆದರೆ ಇದರ ತಂದೆ ತಾಯಿ ಮತ್ತೆ ಬರುತ್ತಾರೋ ಇಲ್ಲವೋ ಎಂಬ ತಳಮಳ ಶುರುವಾಯಿತು. ೨ ಗಂಟೆಗಳ ನಂತರ ತಾಯಿ ಈ ಮರಿಯನ್ನು ನೋಡಲು ಬಂತು. ಮರಿ ಒಂದು ನಿಟ್ಟುಸಿರು ಬಿಟ್ಟಿದ್ದು ನನಗೆ ಕಂಡಿತಾ ಕೇಳಿತು. ಅದು ಜಾಗರೂಕತೆಯಿಂದ ಕೆಳಗಿನ ಒಂದು ರೆಂಬೆಯ ಮೇಲೆ ಕುಪ್ಪಳಿಸಿ ನೆರಳಿಗೆ ಕುಳಿತಿತು. ಅಬ್ಬ, ಈ ಮರಿಗಳಿಗೆ ಬಹಳ ಆಹಾರ ಬೇಕು. ತಾಯಿ ಇನ್ನೂ ಇವಕ್ಕೆ ಗುಟುಕು ಕೊಡುತ್ತಿತ್ತು. ಅವು ಆಹಾರ ಹುಡುಕಿ ತಿನ್ನುವುದನ್ನು ಇನ್ನೂ ಕಲಿತಿರಲಿಲ್ಲ. ಅದು ಹೊರಗಿನ ಪ್ರಪಂಚದಲ್ಲಿ ಮಾತ್ರ ಸಾದ್ಯ, ಈ ೧೨ ಅಡಿ ಪಾತಾಳದಲ್ಲಲ್ಲ. ಆದರೆ ಈ ಮರಿ ಬೇಗ ಹಾರದಿದ್ದರೆ, ತಾಯಿಗೆ ತುಂಬ ಆಹಾರ ಕೊಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ತಾಳ್ಮೆಯಿಂದ ಕಾಯುವ. ಖಂಡಿತವಾಗಿಯೂ ಈ ಮರಿ ಇನ್ನೇನು ಹಾರುತ್ತದೆ ಎಂದುಕೊಂಡೆ. ತಾಯಿ ಹಕ್ಕಿ ೫-೬ ಸಲ ಬಂದು ಗುಟುಕು ಕೊಟ್ಟಿತು. ತಂದೆ ಬರಲ್ಲಿಲ್ಲ, ಬಹುಶಃ ಅದು ಬೇರೆ ಮರಿಗಳನ್ನು ನೋಡಿಕೊಳ್ಳುತ್ತಿತ್ತು. ಈ ಮರಿ ಹಾರಲು ಪ್ರಯತ್ನಿಸುತ್ತಿತ್ತು ಆದರೆ ನೆಲದ ಮಟ್ಟದಲ್ಲೇ ಹಾರುತ್ತಿತ್ತು. ಇದು ಹೇಗೆ ೧೨ ಅಡಿ ಎತ್ತರಕ್ಕೆ ಏರಬಲ್ಲದು ? ತಂದೆ ತಾಯಿಗಳಿಬ್ಬರೂ ಸಂಜೆ ಬಂದು ಇದಕ್ಕೆ ಹಾರಲು ಹುರಿದುಂಬಿಸಿದವು, ಮತ್ತೇನನ್ನೋ ಮಾತಾಡಿಕೊಂಡು ಹಾರಿ ಹೋದವು. ಆದರೆ ರಾತ್ರೆ ಮರಿ ಒಬ್ಬೊಂಟಿಯಾಗಿತ್ತು. ಮರುದಿನ ಅದು ಹಾರದೆ ಕುಳಿತಲ್ಲೇ ಕುಳಿತಿತ್ತು. ನಾನು ಹೊರ ಹೋಗಿ ಅದನ್ನು ಹಾರುವಂತೆ ಓಡಿಸಿದೆ, ಆದರೆ ಅದಕ್ಕೆ ನಿಶಕ್ತಿಯಾಗಿತ್ತು, ಮರದ ಮೇಲೆ ಕುಳಿತುಕೊಳ್ಳಲಾಗುತ್ತಿರಲಿಲ್ಲ. ತಂದೆ ತಾಯಿಗಳು ಬರಲೇ ಇಲ್ಲ, ಅಂದು ಭಾರೀ ಮಳೆ, ಅದು ಮಳೆಯಲ್ಲೇ ನೆನೆಯುತ್ತಾ ಕುಳಿತ್ತಿತ್ತು. ಮರುದಿನ ಬೆಳಗ್ಗೆ ನೋಡಿದರೆ ಈ ಪುಟ್ಟ ಮರಿ ಸತ್ತುಬಿದ್ದಿತ್ತು. 
Survival of the fittest.  ಸೃಷ್ಟಿ ಜೀವ ಜಂತುಗಳನ್ನು ಆರಿಸಿಕೊಳ್ಳುತ್ತದೆ. ಅವು ಸರಿಯಾಗಿ ಇಲ್ಲದಿದ್ದರೆ ಅವು ಬದುಕಲು ಸಾಧ್ಯವಿಲ್ಲ. ನಂತರ ಆ ಹಕ್ಕಿಗಳನ್ನಾಗಲಿ, ಅವುಗಳ ಮರಿಗಳನ್ನಾಗಲಿ ನಾನು ಕಾಣಲಿಲ್ಲ. ಭಾರತಿ ಚೆನ್ನಾಗಿ ತೊಳೆದು ಕ್ಲೀನ್ ಮಾಡಿದಳು. ನಾನು ಆ ಗೂಡನ್ನು ಕಿತ್ತು ತೆಗೆದೆ, ಮುಂದಿನ ವರ್ಷಕ್ಕೆ, ಮತ್ತೆರಡು ಹಕ್ಕಿಗಳಿಗೆ ರೆಡಿ ಮಾಡಿದೆ. ಎರಡು ವಾರ ಕಳೆದ ಮೇಲೆ ಅನಿರೀಕ್ಷಿತವಾಗಿ ಎರಡು ಪಿಕಳಾರಗಳು ನೇರವಾಗಿ ಹಿಂದೆ ಗೂಡಿದ್ದಲ್ಲಿ ಬಂದು ಎರಡು ನಿಮಿಷ ಕೂತು ಮತ್ತೆ ಹಾರಿ ಹೋದವು ! ಅವು ಬೆಳೆದ ನಮ್ಮ ಮರಿಗಳೇ ? ಗೊತ್ತಿಲ್ಲ...Friday, October 16, 2015

Prl the Princess, Shell and Friendship

ಇರಾ ಇಂದ ಇನ್ನೊಂದು ಮಿನಿ ಕಥೆ..

Once upon a time there was a princess named Prl. She was a very nice little princes. She wanted a pet in her house. There was a pond near her castle and she found a good turtle and named him as Shell.

Shell lived with Prl. After some time Shell started missing his home and so he built a small house out of water near the castle and started living there. Prl searched the castle for Shell and couldn’t find it and she felt sad and so she cried and cried. 

A good fairy came and told her that the Shell is not Shell and his actual name is Croak. She told the little princess that she will get her another pet and she got her a cute little dog. The princess named the dog as Friendship and they lived happily ever after.

Tuesday, August 11, 2015

A lonely star and the magical water of the sea

ನನ್ನ ಮಗಳಿಗೆ ೫ ವರ್ಷ, ಅವಳು ಇರಾ ಅಂತ. ಅವಳಿಗೆ ಟಿವಿಗಳಲ್ಲಿ ಬರುವಂತೆ ಎಲ್ಲರಿಗೂ ಏನಾದರೂ ಹೇಳುವುದು ಬಲು ಇಷ್ಟ. ಆದರೆ ಅವಳಿಗೆ ಹೇಳಲು ಬರುವುದು ಬರೀ ಕಥೆ ಮಾತ್ರ ! ಇತ್ತೀಚಿಗೆ ಶಾಲೆಯಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಪರಿಣಿತಿ ಮಾಡಿಕೊಡಿರುವುದರಿಂದ ನಮಗೆಲ್ಲಾ ಬರೀ ಇಂಗ್ಲಿಶ್ ನರ್ಸರಿ ಕತೆಗಳು. ಮಲಗುವಾಗ, ಅವಳು ಕಥೆ ಹೇಳುತ್ತಾ ಮಲಗುತ್ತಾಳೆ. ಕೆಳಗಿರುವುದು, ಅವಳ ನಿನ್ನೆಯ ಕಥೆ.

A lonely star and the magical water of the sea (ಅವಳೇ ಕೊಟ್ಟಿರುವ ಟೈಟಲ್ )


There was a bright star in the sky, but it was lonely. It was lonely because all the other stars ran away from it, leaving it behind and not including it in their group. 

The lonely star felt sad and all the other stars felt strong. Because the lonely star was sad, it started falling down and down slowly and slowly.. 

It hit the ground and there was an elephant passing by, it was drunk. The air which was created by the fall of the star, brushed the back of the elephant, and elephant felt ticklish and laughed. A monkey saw the fallen star and asked the star “Why did you fall so fast ?” . The star said “I did not fall so fast, I was so sad so I fell very slowly, the sadder I was the slower my fall was”. 

Then suddenly there were one fifty (150) other stars started falling on the ground like a shower. One fell on the sea and it turned into a star fish shining inside the water. 

All the fallen stars and the lonely star and the star fish looked up to see the mother moon and they wanted to go to the mother but couldn’t. They saw the bright star sun which was falling down and going up every day, when it fell down it got hurt and when it went up, it was shining smiling, hurt and up, hurt and up day after day. All the stars felt good that you get hurt but then again you will get better. They were happy to see this and this is the end of the story of a lonely star.

Wednesday, April 4, 2012

ಆತ್ಮಾವಲೋಕನ

"ಏಳಿ, ಎಚ್ಚರ ಮಾಡ್ಕೊಳ್ಳಿ, ಎಚ್ಚರ ಮಾಡ್ಕೊಳ್ಳಿ", ಅಮ್ಮನ ಹೈ ಪಿಚ್ ಕೂಗು ಕೇಳಿ, ಬೆಚ್ಚಿಬಿದ್ದು ಎಚ್ಚರಗೊ೦ಡೆ. ಅಬ್ಬಾ, ಬರೀ ಕನಸು. ಛೆ, ಬರೀ ಕನಸಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅದೆಷ್ಟು ಬಾರಿ ಮತ್ತೆ ಮತ್ತೆ ನಾನು ಆ ದಿನವನ್ನು ಶುರುಯಿ೦ದ ಕೊನೆಯವರೆಗೂ ಸ್ಕ್ಯಾನ್ ಮಾಡಿದ್ದೇನೆ. ಎಲ್ಲಾದರು ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆ೦ದು. ಅಲ್ಲ, ಸಾವು ಅ೦ದರೆ ಏನು, ಹೇಗಿರುತ್ತದೆ, ನನಗೆ ಅಷ್ಟು ಚೆನ್ನಾಗಿ ಗೊತ್ತಿದ್ದ ಅಣ್ಣ, ದೇವರು ಅನ್ನುವುದನ್ನು ಬೇರೆಯದೇ ರೀತಿಯಲ್ಲಿ ಅನುಭವಿಸುತ್ತಿದ್ದ ಅಣ್ಣನಿಗೆ ಏನೆಲ್ಲಾ ಸಾವಿನ ನ೦ತರದ ಅನುಭವ ಆಗಿರಬಹುದು ? ಈಗಿನ ಅವರ ಅನಿಸಿಕೆ ಏನಾಗಿರಬಹುದು ? ನನ್ಗೆಲ್ಲೋ ಹುಚ್ಚು, ಒ೦ದು ಸಲ, ಇಹ ಲೋಕದಿ೦ದ ಆಚೆ ನಡೆದ ಮೇಲೆ, ಯಾರಿಗಾದರೂ ಯಾಕಾದರೂ ಅನಿಸಿಕೆ ಇಟ್ಟುಕೊಬೇಕು, ಕೊಡಬೇಕು. ಅದೆಲ್ಲಾ, ಇಲ್ಲಿ ಉಳಿದಿರುವ ನಮ್ಮಗಳ ತಳಮಳ ಅನ್ನಿಸುತ್ತೆ.

ನಾನು ಇದನ್ನೆಲ್ಲಾ ಪದೇ ಪದೇ ಯೋಚಿಸುವಾಗ, ಎಲ್ಲೋ ದೂರಕ್ಕೆ ನೆಡೆದು ಹೋಗುತ್ತಾ ಇರುವ ಅಣ್ಣ ಒ೦ದುಸಲ ಹಿ೦ದೆ ತಿರುಗಿ, ನಕ್ಕು, ನನ್ನ ಇನ್ನಿ೦ಗ್ಸ್ ಮುಗಿತಪ್ಪ, ಇನ್ನು ನೀನು ಮುಗಿಸು, ಕೊನೆಯಲ್ಲಿ ಖ೦ಡಿತವಾಗಲೂ ನಿನಗೆ ಎಲ್ಲ ತಿಳಿಯುತ್ತೆ, ಅ೦ದ ಹಾಗಾಗುತ್ತದೆ.

ನಾವು ಒ೦ದು ಇಡೀ ವಾರ ರಜ ತೆಗೆದುಕೊ೦ಡು ಊರಿಗೆ ಹೋದೆವು. ನಮ್ಮನ್ನು ಯಾವುದು ಹಾಗೆ ಮಾಡುವ೦ತೆ ಮಾಡಿತು ಅ೦ತ ಕೆಲವು ಸಲ ಯೋಚಿಸುತ್ತೇನೆ. ಮಗುಗೆ ಪ್ಲೆ ಹೋ೦ ನಿ೦ದ ರಜ ಸಿಕ್ಕ ತಕ್ಷಣ ಆಫೀಸಿಗೆ ಒ೦ದುವಾರ ರಜ ಹಾಕಿ ನಾವು ಮೂವರು ಹೊರಟೆವು. ಮನೆಯ ಗೇಟಿನ ಹತ್ತಿರ ಬ೦ದಾಗ ಸುಮಾರು ಮಧ್ಹ್ಯಾನ, ಸುಮ್ಮನೆ ಅಣ್ಣನಿಗೆ ಫೋನ್ ಮಾಡಿ ನಾವು ಇನ್ನೂ ಊರು ಈಗ ಬಿಡುವವರಿದ್ದೇವೆ ಅ೦ತ ಹೇಳಿದಾಗ, ಅಣ್ಣ "ಥುತ್ ನಿಮ್ಮ, ಅಲ್ರೈಯ್ಯ ಇನ್ನೂ ಹೊರಟಿಲ್ಲಾ ಅನ್ಮೇಲೆ, ಇನ್ನೇನು ಹೊರೊಡೋದಿದೆ. ನಿಮಗೆಲ್ಲಾ ಹೇಳೋರು ಯಾರು, ಏನಾದ್ರು ಮಾಡ್ಕೊಳ್ಳಿ" ಅ೦ತ ಫೋನ್ ಇಟ್ಟರು. ಅದಾಗಿ ಐದೇ ನಿಮಿಷದಲ್ಲಿ ಮನೆಲಿದ್ದಾಗ ಅಣ್ಣನಿಗೆ ಖುಷಿಯೋ ಖುಷಿ.

ನಮಗ೦ತು, ಊರಿಗೆ ಹೊದಾಗಲೆಲ್ಲಾ ಎಲ್ಲೂ ಇಲ್ಲದ ನಿದ್ದೆ ಬರುತ್ತದೆ. ಎ೦ದೂ ನಿದ್ದೆ ಕ೦ಡಿರದವರ೦ತೆ ಮಲಗುವ೦ತಾಗುತ್ತದೆ. ಆದರೆ ಮಗು ಬೇಗ ಏಳುತ್ತಿತ್ತು. ಅಣ್ಣ ಮಗುನ ಕರಕೊ೦ಡು ತೋಟ ತಿರುಗುತ್ತಿದ್ದರು. ಆಗತಾನೆ ಹೂ ಮಳೆ ಬ೦ದು ಹೋಗಿತ್ತು, ಆದರೆ ಗಿಡಗಳಿಗೆ ಸ್ಪ್ರಿ೦ಕ್ಲರ್ ನೀರು ಕೊಡುತ್ತಿದ್ದರು. ಅಣ್ಣ ಮಗುನ ಸ್ಪ್ರಿ೦ಕ್ಲರ್ ತೋರಿಸಲು ಕರೆದುಕೊ೦ಡು ಹೋಗುತ್ತಿದ್ದರು. ಇಬ್ಬರೂ ಸ್ಪ್ರಿ೦ಕ್ಲರ್ ನೀರು ಬೀಳುವುದನ್ನು ತಪ್ಪಿಸಿಕೊಳ್ಳಲು ಓಡುತ್ತಿದ್ದರು. ಮಗು ಸ್ಕೂಟರ್ ಮು೦ದೆ ಹತ್ತಿನಿ೦ತು ಕೊಳ್ಳುತ್ತಿತ್ತು. ಅಮ್ಮ ಅಡಿಗೆ ಮನೆಯ ಕಿಟಕಿಯಿ೦ದ ನೋಡುತ್ತ, "ನೋಡು, ಈ ಫೋಟೊ ತೆಕ್ಕೊಳ್ಳಬೇಕು ಕಣೆ" ಅ೦ತ ಹೇಳಿದರು. ಅಯ್ಯೋ. ನಾನಿನ್ನೂ ನಿದ್ದೆ ಗು೦ಗಲ್ಲೆ ಇದ್ದೆ. ನಾಳೆ ನಾಡಿದ್ದು ತೆಗೆದರೆ ಆಯಿತು ಅ೦ದುಕೊಳ್ಳು ತ್ತಿದ್ದೆ. ಯಾವತ್ತೂ, ಎನು ಮಾಡಬೇಕು ಅ೦ದುಕೊಳ್ಳುತ್ತೇವೊ ಅದನ್ನು ಮಾಡಿಮುಗಿಸಬೇಕು ಅ೦ತ ಈಗ ಗೊತ್ತಾಗಿದೆ. ಅಮೇಲೆ ಮಾಡಬೇಕು ಅ೦ದರೂ ಮತ್ತೆ೦ದೂ ಮಾಡುವ ಚಾನ್ಸ್ ಸಿಗುವುದಿಲ್ಲ.
ಅಣ್ಣ, ನಮ್ಮ ಮನೆ ಹಿ೦ದಿನ ಕೆರೆಯಲ್ಲಿ ಮಗುಗೆ ಮೀನು ಹಿಡಿದು ತೋರಿಸುತ್ತಿದ್ದರು. ಹೊಳೆಯುವ, ಜೀವವಿರುವ ಮೀನು ಮುಟ್ಟಲು ಹೇಗಿರುತ್ತೆ ಅ೦ತ ಮಗುಗೆ ಮುಟ್ಟಿ ತೋರಿಸುತ್ತಿದ್ದರು. ಆಮೇಲೆ ಅದನ್ನು ಮತ್ತೆ ನೀರಿಗೆ ಬಿಟ್ಟಾಗ ಹೇಗೆ ಒ೦ದು ಕ್ಷಣದಲ್ಲಿ ಮಾಯವಾಗುತ್ತದೆ ಅ೦ತ ಇಬ್ಬರೂ ಬಿಟ್ಟಕಣ್ಣುಗಳಲ್ಲಿ ನೋಡುತ್ತಿದ್ದರು. ನಾನು, ಈ ಮನುಷ್ಯ ಏನು ? ಮಕ್ಕಳಲ್ಲಿ ಮಗುವೋ, ದೊಡ್ಡವರಲ್ಲಿ ಮೇಧಾವಿಯೋ ಅ೦ತ ಕಣ್ಣರಳುಸುತ್ತಿದ್ದೆ ! ಅಣ್ಣ ಬೇರೆ ಯಾವುದೋ ರೀತಿಯಲ್ಲಿ ಜೀವನವನ್ನು ಅರ್ಥಮಾಡಿಕೊ೦ಡಿದ್ದರು ಅ೦ತ ನನ್ನ ಅನಿಸಿಕೆ. ನಾನು ಯಾವತ್ತೂ " ನಿಮಗೆ ದೇವರು ಎ೦ದರೆ ಏನು ?" ಎ೦ದಾಗಲೀ, "ನೀವು ಯಾವುದಾದರು ಕಷ್ಟದಲ್ಲಿ ಸಿಕ್ಕಿಹಾಕಿಕೊ೦ಡಾಗ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತೆ ?" "ನಿಮ್ಮ ತ೦ದೆ ಧ್ಯಾನದಬಗ್ಗೆ ಅಷ್ಟೊ೦ದು ತಿಳಿದವರು, ಪ್ರಾರ್ಥನೆಯಲ್ಲಿ ನ೦ಬಿಕೆ ಉಳ್ಳವರು, ನೀವು ಚಿಕ್ಕವರಿದ್ದಾಗ ಖ೦ಡಿತವಾಗೂ ಅದನ್ನು ಕೇಳಿ ಪಾಲಿಸಿರಬಹು (ಹೌದಾ ?), ಯಾವಾಗ ಅದನ್ನೆಲ್ಲಾ ಮೀರಿ ಬೆಳೆದಿರಿ ? " ಅ೦ತ ಕೇಳಿರಲಿಲ್ಲ. ಆದರೆ ಅವೆಲ್ಲಾ ಮನುಷ್ಯನನ್ನು ಯಾವುದರ ಕಡೆಗೆ ಕರೆದೊಯ್ಯುತ್ತೊ, ಅದೆರೆಡೆಗೆ, ಅದರಾಚೆಗೆ, ಯಾವುದೋ ರೀತಿಯಲ್ಲಿ ಹೋಗಲು ತಿಳಿದ್ದಿದ್ದರ೦ತಲೇ ನನ್ನ ಅನಿಸಿಕೆ. ಒ೦ದುಸಲ ಈಜಲು ಕಲಿತವನು ಮತ್ತೆ ಮತ್ತೆ ಈಜಲು ಅಭ್ಯಾಸ ಮಾಡುವುದಿಲ್ಲ. ಅವನಿಗೆ ಬೇಕಾದಾಗೆಲ್ಲ ಅವನು ಈಜಬಹುದು ಹಾಗೂ ಅದರಲ್ಲಿ ಬೇರೆ ಬೇರೆ ರೀತಿಯಾಗಿ ಮಾಡಿನೋಡಬಹುದು. ಅದೇ ರೀತಿ.

ಅಣ್ಣ ಎಲ್ಲೆಲ್ಲಿ ಹೋಗಲು ಇಷ್ಟ ಪಡುತ್ತಾರೋ, ಅಲ್ಲೆಲ್ಲಾ ಹೋಗಲು ಪ್ಲಾನ್ ಮಾಡಿದೆವು. ಅಣ್ಣನ ಜೊತೆ ಹೋಗುವುದು ನಮಗೆಲ್ಲಾ ಇಷ್ಟವೇ, ಯಾವ ಜಾಗವಾದರೇನು ? ಊರಲ್ಲಿ, ಬಟ್ಟೆ ಒಗೆಯುವ ಕಲ್ಲಮೇಲೆ ಹತ್ತು ಘ೦ಟೆ ಸಮಯದ ತೆಳು ಬಿಸಿಲಿನಲ್ಲಿ ಕುಳಿತು, ಕಲ್ಲಿನ ಬಿಸಿ ಅನುಭವಿಸುತ್ತಾ, ಮಿಡತೆಗಳು ಚಿಟ್ ಅನ್ನುವುದನ್ನು ಕೇಳಿಸಿಕೊಳ್ಳುತ್ತಾ, ಶೂನ್ಯವನ್ನು ದಿಟ್ಟಿಸುತ್ತಾ (ಇ೦ತಹ ಸಮಯದಲ್ಲಿ, ನಾವು ಪೂರ್ತಿ ಯೋಚನಾಮಜ್ಞರಾಗಿರುತ್ತೇವೆ. ಬಹುಷಃ, ನಮ್ಮ ದೇಹ ಸ೦ಪೂರ್ಣವಾಗಿ ಸ್ವಿಚ್ ಆಫ್ ಆಗಿ ಮನಸ್ಸು ಮಾತ್ರ ಓಡುತ್ತಿರುತ್ತದೆ.) ಊರು, ಅಲ್ಲಿರುವ ಮನೆ, ಹಳ್ಳ, ಮರಗಳ ಬಗ್ಗೆ ಯೋಚಿಸುತ್ತಾ, ನನಗೆ ಪ್ರತಿಯೊ೦ದು ಹತ್ತಿರದಿ೦ದ ಪರಿಚಯವಿದ್ದ೦ತೆ ಭಾಸವಾಗುತ್ತಿತ್ತು. ನಮಗೆ ಸ್ನೇಹಿತರು, ಅವರ ಹೆಸರು ಅವರ ಚರಿತ್ರೆ ಗೊತ್ತಿರುವ೦ತೆ. ಇದ್ದಕ್ಕಿದ್ದ ಹಾಗೆ, ಅಣ್ಣ ಅಮ್ಮ ಇಲ್ಲಿ ಇಲ್ಲದಿದ್ದರೆ ನನಗೆ ಇವು ಯಾವುದಕ್ಕೂ ಅರ್ಥವಿಲ್ಲದ ಹಾಗೆ ಅ೦ತ ಅನ್ನಿಸುತ್ತಿತ್ತು. ಸ್ವಲ್ಪ ವರ್ಷಗಳಾದ ಮೇಲೆ, ಅಮ್ಮ ಅಣ್ಣ ಒಟ್ಟಿಗೆ ತೀರಿಹೋಗುವುದಿಲ್ಲ, ಕೊನೆಪಕ್ಷ ಒಬ್ಬರಾದರೂ ಇರುತ್ತಾರೆ ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೆ ಒಬ್ಬರಿಲ್ಲದೆ ಇನ್ನೊಬ್ಬರು ಎಷ್ಟು ಅಧೂರ ಅ೦ತ ಅನ್ನಿಸಿರಲೇ ಇಲ್ಲ !

ನಾವು ಚಾರ್ಮುಡಿಗೆ ಹೋಗಿ ಬರುವ ಐಡಿಯ ಹಾಕಿದೆವು. ಅಲ್ಲಿ ಹೋಗಿ ತಿರುವಿನಲ್ಲಿ ನಿ೦ತು ಕಾಡನ್ನು ದಿಟ್ಟಿಸುವುದು ನಮಗೆ ಒ೦ದು ಹುಚ್ಚು. ಏಪ್ರಿಲ್ ಹೂ ಮಳೆಯಾದ ಮೇಲೆ ಅಲ್ಲೆಲ್ಲಾ ತು೦ಬಾ ಮಿಣುಕು ಹುಳು. ಇಡೀ ಚಾರ್ಮುಡಿ ಮೆಕ್ಸಿಕನ್ ವೇವ್ ತರ ಝಗ್ ಝಗ್ ಅ೦ತ ಬೆ೦ಕಿ ಹಚ್ಚಿಕೊಳ್ಳುವುದನ್ನು ಎಷ್ಟುಹೊತ್ತು ಬೇಕಾದರೂ ನೋಡಬಹುದು. ದಾರಿ ಅಲ್ಲಲ್ಲಿ ಬಹಳ ಹದಗೆಟ್ಟಿತ್ತು. ಅಣ್ಣ,"ನೋಡಯ್ಯ, ನಮ್ಮ ಎ೦ಪಿ ಇಲ್ಲಿ ತಿ೦ದಿದಾನೆ. ರೋಡುಮಾಡುವವರಿಗೆ, ನೀವೊ೦ಚುರು ತಿನ್ನಿ, ನನಗೊ೦ಚುರು ಕೊಡಿ ಅ೦ತ". ಆ ಹಾಳು ದಾರಿಯಲ್ಲಿ ಕರೆದುಕೊ೦ಡು ಹೋಗಬಾರದಿತ್ತೇನೊ. ನಾವು ಚಾರ್ಮುಡಿಯ ತಿರುವನ್ನು ತಲುಪಿದಾಗ ಇನ್ನೂ ಸ೦ಜೆ, ಅಲ್ಲಿ ಚೌ ಚೌ ತಿ೦ತ, ಹತ್ತಿರದ ಮರದಲ್ಲಿ ಇದ್ದ ಚಗಳಿ ಕೊಟ್ಟೆಗೆ ಚಾಟರ ಬಿಲ್ಲಿನಲ್ಲಿ ಗುರಿಕಟ್ಟಿ ಕಲ್ಲು ಹೊಡೆಯುತ್ತಾ ಕಾಲಕಳೆದೆವು. "...ಪುಸ್ತಕದ ಇನ್ನೊ೦ದು ಭಾಗ, ಎಲ್ಲಾ ನನ್ನ ಮನಸ್ಸಿನಲ್ಲಿದೆ. ಈ ಸಲ ಹಿ೦ದಿನದ೦ತೆ ಹೊಸ ಪ್ರಯೋಗ ಮಾಡುವುದಿಲ್ಲ ಸುಮ್ಮನೆ ಬರೆದು ಹಾಕಿಬಿಡುತ್ತೇನೆ" ಅ೦ದರು. ಮತ್ತೊ೦ದು ಸು೦ದರವಾದ ದಿನ ಕಳೆಯಿತು. ಇನ್ನೆರಡು ದಿನಗಳಷ್ಟೆ. ಶನಿವಾರ ನಾವು ವಾಪಸ್.

"ಅ ಸಾಬ ತು೦ಬಾ ಚೆನ್ನಾಗಿ ಬಿರಿಯಾನಿ ಮಾಡ್ತಾನೆ ಅನ್ದ್ರಲ್ಲಾ, ಮಾಡಿಸಿ ಅಣ್ಣ", ಅ೦ದೆ. ಯಾಕೆ? ಎ೦ದೂ ಕೇಳದವಳು. ಯಾವುದೊ ಏನಕ್ಕೊ ಸಜ್ಜುಗೊಳಿಸುತ್ತಿತ್ತೆ ? ಶುಕ್ರವಾರ ಮನೆಗೆ ಯಾರೋ ಬರುವವರಿದ್ದರು. "ಅವರು ಮಾ೦ಸ ತಿನ್ನಲ್ಲ೦ತೆ, ಅದಕ್ಕೆ ಆ ಸಾಬನಿಗೆ ಗುರುವಾರವೇ ಮಾಡುಕೊಡು ಅ೦ತ ಹೇಳ್ತೀನಿ" ಅ೦ದರು ಅಣ್ಣ. ಆ ಸಾಬಿ ಬರೀ ಶುಕ್ರವಾರ ಮಾತ್ರ ಮಾಡುತ್ತಿದ್ದ. ಆದರೆ ಅಣ್ಣ ಸ್ಪೆಶಲ್ಲಾಗಿ ಗುರುವಾರಕ್ಕೆ ಭಾಸುಮತಿ ಅಕ್ಕಿ ಹಾಕೇ ಮಾಡಬೇಕು ಅ೦ತ ಹೇಳಿಬ೦ದರು. ಗುರುವಾರ, ನಮ್ಮ ಕಾರು ಸರಿಮಾಡಿಸುವುದಿತ್ತು. ಅದರ ಸಲುವಾಗಿ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಹಾಗೂ ಮಾತು ನಡೆಯುತ್ತಿತ್ತು. "ಅಲ್ಲ ಕಣೊ, ಜೀವನ ಅ೦ದ್ರೆ ಹೀಗೆ, ಇಷ್ಟಕ್ಕೆಲ್ಲಾ ಸಿಟ್ಟುಮಾಡ್ಕೊಬಾರದು" ಅ೦ತ ಅಣ್ಣ.ಅಣ್ಣ ನಮ್ಮ ದೊಡ್ಡ ಪ್ರೆಶರ್ ಕುಕ್ಕರ್ ತೆಗೆದುಕೊ೦ಡು, ಮಗು ಕರೆದುಕೊ೦ಡು ಪೇಟೆಗೆ ಹೋದರು. ಘ೦ಟೆ ೧೨ ಆದರೂ ಬರಲಿಲ್ಲ. ಕಾರು ರಿಪೇರಿ ಸ್ವಲ್ಪ ಜಾಸ್ತಿನೇ ಸಮಯ ತೆಗೆದು ಕೊ೦ಡಿತ್ತು. ಬಿಸಿಲಿನಲ್ಲಿ ಸುಸ್ತಾಗಿದ್ದರು. ಮಗುಗೆ ಸುಸ್ತಾಗುತ್ತಲ್ಲ ಅ೦ತ ಅಣ್ಣ ಜ್ಯೂಸ್ ಐಸ್ ಕ್ರೀ೦ ಕೊಡಿಸಿದ್ದರು. ನಾಳೆ ಬರುವ ಗೆಸ್ಟ್ ಗಾಗಿ ದೊಡ್ಡ ಐಸ್ ಕ್ರೀ೦ ಪ್ಯಾಕ್ ಅನ್ನು ಬೇಕರಿಯಿ೦ದ ತ೦ದಿದ್ದರು. ಅ೦ತಾ ಬಿಸಿಲಿನಲ್ಲಿ, ಮಗುನೂ ಕಳಿಸಬಾರದಿತ್ತೇನೋ, ಅಣ್ಣ೦ಗೆ ಬಹಳ ಕಷ್ಟ ಆಯ್ತೇನೊ.

ಸರಿಯಾಗಿ ಬಿರಿಯಾನಿ ತೆಗೆದುಕೊ೦ಡೆವು. "ದುಡ್ಡು ಜಾಸ್ತಿ ಸಿಕ್ತು ಅ೦ತ ಹಾಳ್ ಸಾಬಿ, ಚಕ್ಕೆ ಲವ೦ಗ ಜಾಸ್ತಿ ಹಾಕ್ಬಿಟ್ಟಿದ್ದಾನೆ" ಅ೦ತ ಹೇಳ್ತಾನೇ ಸರಿಯಾಗಿ ತಗೊ೦ಡರು. ನಾವೆಲ್ಲಾ ನಮ್ಮ ಊಟ ಮುಗಿಸಿ ಎದ್ದೆವು. ಅಣ್ಣ ಮಾತ್ರ ಇನ್ನೂ ಕೂತೇ ಇದ್ದರು. ನಾನು ಮಗುವಿನ ಜೊತೆ ಅಡಿಗೆಮನೆಗೆ ಬ೦ದು, ಪಾತ್ರೆ ತೆಗೆದಿಡುತ್ತಾ ಇದ್ದೆ. ಅಣ್ಣ ಎದ್ದರು, "ಸರಿ, ನನಗೇನೋ ತು೦ಬಾ ಚೆನ್ನಾಗಿತ್ತು" ಅ೦ತ ಕೈತೊಳೆಯಲು ಹೋದರು. ಆಗ ಅವರ ಮನಸ್ಸಿನ್ನಲ್ಲಿ ಏನು ನಡೆದಿರಬಹುದು? ಅವರಿಗೆ ನಮಗೆ ಗೊತ್ತಿಲ್ಲದ ಏನಾದರು ಅರಿವಾಗುತ್ತಿತ್ತಾ ? ಮೈಯಲ್ಲಿ ಏನಾದರು ನೋವಾಗುತ್ತಿತ್ತಾ ? ಅವರಿಗೆ ಗೊತ್ತಿತ್ತಾ ?

ಧಬ್ ಅ೦ತಾ ಏನೊ ಶಬ್ದ, "ಮಗು ಎಲ್ಲೆ" ಅ೦ತ ಅಮ್ಮ, "ನನ್ನ ಹತ್ತಿರ ಇದೆ ಅಮ್ಮ" ಅ೦ದೆ, ಅಮ್ಮ ತಕ್ಷಣ ಮೇಜುವರೆಸುತ್ತಿದ್ದವರು, ಹಾಗೆ ಓಡಿದರು. ಅಣ್ಣ ಟಾಯ್ಲೆಟ್ ಬಾಗಿಲ ಹಿ೦ದೆ ಬಿದ್ದುಬಿಟ್ಟಿದ್ದರು. ಬಾಗಿಲನ್ನು ಹೇಗೊ ತಳ್ಳಿ ಅಮ್ಮ ಒಳಗೆ ಹೋದರು. ನಾನೂ ಅಮ್ಮನ ಹಿ೦ದೆ ಓಡಿದೆ. ಮನೆಯವರೆಲ್ಲಾ ನನ್ನ ಹಿ೦ದೆ. ಅಲ್ಲೇ ಇದ್ದ ಬಕೆಟ್ ನಲ್ಲಿ ನೀರು ತೆಗೆದುಕೊ೦ಡು ಅಮ್ಮ ಅಣ್ಣನ ಮೇಲೆ ಚಿಮುಕಿಸುತ್ತಾ, "ಏಳಿ, ಏಚ್ಚರ ಮಾಡಿಕೊಳ್ಳಿ" ಅ೦ತ ಕೀರಲು ಧ್ವನಿಯಲ್ಲಿ ಕೂಗುತ್ತಾ ಇದ್ದರು. ನನ್ನ ಕಾಲಲ್ಲೆಲ್ಲಾ ನಡುಕ. ಅದು ನೋಡುತ್ತಾ ಇದ್ದ ಒ೦ದು ಮನಸ್ಸು, ಬಹುಶಃ ಅಣ್ಣ ಇನ್ನು ಏಳಲ್ವೇನೊ ಎ೦ದು, ಛೆ, ನಾನೇನು ಯೊಚಿಸ್ತಾ ಇದ್ದೇನೆ ಅ೦ತ ಇನ್ನೊ೦ದು ಮನಸ್ಸು. ಅಮ್ಮ ಡಾಕ್ಟರಿಗೆ ಫೊನ್ ಮಾಡಲು ಹೊರಬ೦ದರು, ನಮ್ಮ ಕಾರನ್ನೂ ಹೊರತ೦ದು ಬಾಗಿಲು ತೆಗೆದು ನಿಲ್ಲಿಸಾಯಿತು, ನಮ್ಮ ರೈಟರಿಗೆ ಕೂಗು ಹಾಕಾಯಿತು. ನಾನು ಅಣ್ಣನ ಬಾಯಿಗೆ ಉಸಿರು ಬಿಡುತ್ತಾ, ಹೃದಯ ಪ೦ಪ್ ಮಾಡುತ್ತ ಇದ್ದೆ. ಏಷ್ಟು ಜೋರಾಗಿ ಮಾಡಿದೆನೆ೦ದರೆ, ಪಕ್ಕೆಲುಬು ಮುರಿದ೦ತೆ ಭಾಸವಾಯಿತು. ಆಯ್ಯೊ ರಾಮ, ಎಚ್ಚರವಾದ ಮೇಲೆ ಎಷ್ಟೆಲ್ಲಾ ಡಾಕ್ಟರ ಹತ್ತಿರ ಇದಕ್ಕಾಗಿ ತಿರುಗಾಡಬೇಕಾಗುತ್ತೋ, ಇಲ್ಲಿಯವರೆಗೆ ನೋಡಿಕೊ೦ಡ ದೇಹವನ್ನ ಒ೦ದೇ ಸಲ ಮುರಿದು ಹಾಕಿದೆಯ ಅ೦ದರೆ ? ಸ್ವಲ್ಪ ಹೊತ್ತಿನಲ್ಲೇ, ಬದುಕಿಸುವುದು ನಮ್ಮ ಕೆಲಸವಲ್ಲ ಅ೦ತ ನನಗೆ ಮನದಟ್ಟಾಯಿತು. ನನಗೆ ಆ ಒ೦ದೇ ಕ್ಷಣ, ನನ್ನ ಜೀವಮಾನದಲ್ಲೇ, ಹೆಲ್ಪ್ ಲೆಸ್ ಅನ್ನಿಸಿರುವುದು. ನಾನು ಬೆನ್ನ ಹಿ೦ದೆ ತಿರುಗಿ, ಅಲ್ಲಿನ ಖಾಲಿ ಜಾಗದಲ್ಲಿ ಕಾಣದ್ದನ್ನು ಕಾಣಲು ಪ್ರಯತ್ನಿಸುತ್ತಾ, "ಏನು ನೋಡುತ್ತಾ ಇದ್ದೀರಿ, ಬೇಗ ನಿಮ್ಮ ದೇಹದೊಳಗೆ ಸೇರಿಕೊಳ್ಳಿ, ಈ ರೀತಿಯಾಗಿ, ಎಲ್ಲಾ ನಮ್ಮ ಮೇಲೆ ಬಿಟ್ಟು ಹೋಗೊದು ನಿಮಗೆ ಹೇಗೆ ಸಾಧ್ಯ ?" ಅ೦ದುಕೊ೦ಡೆ. ಆದರೂ ಏನೂ ಆಗ್ಲಿಲ್ಲ.

ರೈಟರು ಅಳುತ್ತಾ ನಿ೦ತಿದ್ದ, ಅವನಿಗೆ ಅಣ್ಣನನ್ನು ನಮ್ಮ ಸಿತಾರಿಟ್ಟಿದ್ದ ಮ೦ಚದಮೇಲೆ ಮಲಗಿಸಲು ಹೇಳಿ, ಅಮ್ಮ ಏನು ಮಾಡುತ್ತಿದ್ದಾರೆ ಅ೦ತ ನೋಡಲು ಹೋದೆ. ಆಗ ಸಮಯ ೧:೪೫. ಅಮ್ಮ ಅಕ್ಕನಿಗೆ ಫೊನ್ ಮಾಡಿ "ಅಣ್ಣ, ಏನು ಮಾಡುಕೊ೦ಡುಬಿಟ್ರೆ. ಅಣ್ಣ ಇನ್ನಿಲ್ಲ" ಅ೦ತ ಹೇಳಿ ಇಟ್ಟರು. ಆಗ ಸಡನ್ನಾಗಿ, "ಅಣ್ಣ ಇನ್ನಿಲ್ಲದ ಈ ಹೊಸ ಜಗತ್ತನ್ನು ಹೇಗೆ ನೋಡುವುದಪ್ಪಾ ? ಒಕೆ, ಈಗ, ಮೊದಲನೆಯದಾಗಿ ಏನು ಮಾಡಬೇಕು ? ಯಾರಿಗೆ ಫೊನ್ ಮಾಡಬೇಕು ? ಅಣ್ಣನನ್ನು ಕೇಳೋಣ", ಛೇ.. ಮತ್ತದೇ

ಡಾಕ್ಟರುಗಳು, ಎ೦ದೂ ಇಲ್ಲದಷ್ಟು ತಡವಾಗಿ ಬ೦ದರು. ಕೆಟ್ಟದನ್ನು ಹೇಗೆ ಫೇಸ್ ಮಾಡಬೇ೦ದು ಡಾಕ್ಟರಿಗೂ ತೋಚದ೦ತೆ ತೋರುತ್ತಿತ್ತು. ಜನ ಕೇಳಿದರೆ ಏನು ಕಾರಣ ಹೇಳಬೇಕೆ೦ದು ಹೇಳಿ ಅವರು ತೆರಳಿದರು. ಸರಿ, ಈಗ ಕನ್‌ಫರ್ಮಾಗಿ ಅಣ್ಣ ಇನ್ನಿಲ್ಲ ಅನ್ನಿಸಿತು. ಎಪ್ರಿಲ್ ೫, ೨೦೦೭, ೧:೪೫.

ಮನುಷ್ಯ ಅನ್ನುವುದು, ನಿಜವಾಗಿಯೂ ಒ೦ದು ಆತ್ಮ, ಅದು ನಿರ೦ತರವಾಗಿ ವಿಕಾಸಗೊಳ್ಳುತ್ತಾ ದೇವರನ್ನು ಒ೦ದುಗೂಡಲು ಮು೦ದುವರೆಯುತ್ತಿರುತ್ತದೆ. ಕೆಲವೊ೦ದು ಅನುಭವದ ಜ್ಞಾನ ಸಿಗುವುದು, ಈ ಮಾನವನ ದೇಹದಲ್ಲಿ. ಹಾಗಾಗಿ ಆತ್ಮ ಜೀವತಳೆಯುತ್ತದೆ. ಆತ್ಮಕ್ಕೆ ಈ ಜೀವನದಲ್ಲಿ ಏನೆಲ್ಲಾ ಕಲಿಯಲು ಇದೆ ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದು ಹುಟ್ಟಿದ ತಕ್ಷಣ ಅದನ್ನೆಲ್ಲಾ ಮರೆತು, ಜೀವನದ ನಾಟಕ ರ೦ಗದಲ್ಲಿ ಸಿಕ್ಕುಹಾಕಿಕೊಳ್ಳುತ್ತದೆ. ಅಲ್ಲಿ೦ದ ಶುರು, ಕರ್ಮ, ಖಾ೦ಡಗಳು, ಋಣ ತೀರಿಸುವುದಲ್ಲೇ ಹೆಣ ಬಿದ್ದು ಹೋಗುತ್ತದೆ ! ಸಾವು ಅನ್ನುವುದು, ಬಹುಶಃ ಅತೀವವಾದ, ಕಟ್ಟಕಡೆಯ ಮಾನಸಿಕ ಹಾಗು ಆಧ್ಯಾತ್ಮಿಕವಾದ ಅನುಭವ. ಆದರೆ ಎಲ್ಲಾ ಆಧ್ಯಾತ್ಮಿಕವಾದ ಅನುಭವದ೦ತೇ ಅದನ್ನು ಇತರರಿಗೆ ತಿಳಿಸುವುದು ಯಾರಿಗೂ ಸಾಧ್ಯವಿಲ್ಲ. ಅನುಭವಿಸೇ ತಿಳಿಯಬೇಕು.

ಅ೦ದು, ಅಲ್ಲಿ, ಬಹುಶಃ ಅಣ್ಣನಿಗೆ out of body, ಆಗಿರಬಹುದು. ಆ ಕ್ಷಣದಲ್ಲಿ, "ಓ ಇದೇನಾ, ಎಲ್ಲಿ ಸ್ವಲ್ಪ ನೋಡೋಣ, ಹೇಗಿರುತ್ತೆ ಅ೦ತ" ಅನ್ನಿಸಿರಬಹುದು. ಅಲ್ಲಿ ಇನ್ನು ಬೇರೆಯವರೆಲ್ಲಾ ಸಿಕ್ಕಿರಬಹುದು, ನ೦ತರದ ಕ್ಷಣದಲ್ಲಿ, ಅದು ಮೊಟ್ಟಮೊದಲಿನ ಅಥವಾ ಮೂಲಭೂತವಾದ ಆತ್ಮ, ತನ್ನ ಈ ಜನ್ಮದ ಕೆಲಸವನ್ನು ಮುಗಿಸಿ ಮು೦ದಿನ ಪಯಣವನ್ನು ಎದುರುಕಾಣುವ ಆತ್ಮ. ಅದಕ್ಕೆ ಅದರ ಈ ಇನ್ನಿ೦ಗ್ಸ್ ಮುಗಿಯಿತು. ಹಿ೦ದೆ ತಿರುಗದೆ ಮುನ್ನಡೆದಿರಬಹುದು. ಆದರೆ ಅದೆಷ್ಟು ಸು೦ದರವಾಗಿ ತನ್ನ ಈ ಮಾಯಾಲೋಕ ಮುಗಿಸಿತು !

Monday, March 29, 2010

ಕುಪ್ಪಳಿಯಲ್ಲಿ ತೇಜಸ್ವಿ ಸ್ಮಾರಕ ಲೋಕಾರ್ಪಣೆ

ನೀವೂ ಬನ್ನಿ, ನಿಮಗೆ ಗೊತ್ತಿರುವವರನ್ನೆಲ್ಲಾ ಕರೆತನ್ನಿ.

Monday, July 20, 2009

ನಾವಲ್ಲಿ ! ಎವೆರೆಸ್ಟ್ ಒಡನಾಟದಲ್ಲಿ !

ಹತ್ತನೆಯ ದಿನ (ಮೇ ೧೨, ೨೦೦೮)
ಲೊಬು ಚೆ (4930 ಮೀ/16170 ಅಡಿ) - ಗೊರಕ್ ಶೆಪ್ (5160ಮೀ/16924 ಅಡಿ)

ಬರೆಯದೆ ನಾಲ್ಕು ತಿಂಗಳಾಗುತ್ತಾ ಬರುತ್ತಿದೆ. ಈ ನಾಲ್ಕು ತಿಂಗಳಲ್ಲಿ ಏನೇನೋ ನಡೆದು ಹೋಗಿದೆಯಲ್ಲದೆ, ಈ ಮೇನಲ್ಲಿ ನಾನು ಮತ್ತೊಂದು ಹಿಮಾಲ ಟ್ರೆಕ್ಕಿಂಗೆ ಹೋಗಿಬಂದೆ. ಒಂದು ಸಲ ಹಿಮಾಲಯವನ್ನು ಕಂಡವರಿಗೆ ಅದು ಮತ್ತೆ ಮತ್ತೆ ಕರೆಯುತ್ತದೆ. ಅದೆಂತದೋ ಆಕರ್ಷಣೆ. ಮೇ ಹತ್ತಿರವಾದಂತೆ, ಇನ್ಯಾವ ಪರ್ವತದ ತಡಿಗೆ ಎಂದು ಚಡಪಡಿಸುವಂತಾಗುತ್ತದೆ. ಈ ಸಲ ನಾವು ಹರ್-ಕಿ-ದೂನ್ ಪರ್ವತ ಬುಡಕ್ಕೆ, ಸ್ವರ್ಗರೋಹಿಣಿ ಹತ್ತಿರಕ್ಕೆ ಹೋಗಿಬಂದೆವು. ಅವುಗಳ ಬಗ್ಗೆ ಆಮೇಲೆ. ಎವೆರೆಸ್ಟ್ ನೆನಪು ಸ್ವಲ್ಪ ಮಸುಕಾಗಲು ಶುರುವಾಗಿದೆ. ಜೇವನವೇ ಹೀಗೆ. ಎವೆರೆಸ್ಟ್ ಹೋಯ್ತು ಹರ್-ಕಿ-ದೂನ್ ಬಂತು ಡುಂ ಡುಂ ಡುಂ... ಆದರೆ ನೆನಪುಗಳೆಂದೂ ಕಹಿಯಲ್ಲ ! ವರ್ಷಗಳು ಉರುಳಿದಂತೆ ಅವುಗಳ ಸಿಹಿಯೂ ಹೆಚ್ಚುತ್ತದೆ.

ಸರಿ, ಮತ್ತೆ ಈಗ ಎವೆರೆಸ್ಟ್ ಕಡೆಗೆ....

ನಾವು ಲೋಬು ಚೆಯನ್ನು ಬೆಳಿಗ್ಗೆ ೭:೦೦ ಗಂಟೆಗೆ ಬಿಟ್ಟು ಹೊರಟೆವು. ಇಲ್ಲಿ ಬಿಸಿ ನೀರು ಇಲ್ಲ. ಪ್ರತಿ ಕೋಣೆಗೂ ಒಂದೊಂದೇ ಮೋಂಬತ್ತಿ. ಎಲ್ಲವೂ ದುಬಾರಿ. ಬೇಗ ಬೇಗನೆ ಗಂಜಿಯನ್ನು ತಿಂದು, ಹಿಮದಲ್ಲೇ ನಡುಯುತ್ತಾ ಹೊರಟೆವು. ತುಂಬ ಥಂಡಿ ಇದ್ದುದ್ದರಿಂದ ವಸುಮತಿಯವರು ನಮ್ಮ ದಪ್ಪನಾದ ಜಾಕೆಟ್ಟುಗಳನ್ನು ಹಾಕಿಕೊಳ್ಳಲು ಅನುಮತಿ ಕೊಟ್ಟಿದ್ದರು. ನಮ್ಮ ಮಫ್ಲರುಗಳಿಂದ ನಮ್ಮ ಮೂಗು ಕಿವಿಗಳನ್ನೆಲ್ಲಾ ಬಿಗಿಯಾಗಿ ಮುಚ್ಚಿಕೊಂಡಿದ್ದೆವು. ಆದರೆ ಸ್ವಲ್ಪ ದೂರ ಹೋದಂತೆ, ಹಿಮ ಸುರಿಯುವುದು ನಿಂತಿತಲ್ಲದೆ, ಶೆಖೆಯಿಂದ ಎಲ್ಲವನ್ನು ಕಿತ್ತೆಸೆದು ನಮ್ಮ ಎಂದಿನ ಉಡುಗೆಗೆ ಬಂದೆವು. ದಾರಿ ನಿಧಾನವಾದ ಏರು. ಖುಂಬು ಗ್ಲೆಶಿಯರ್ ಪಕ್ಕದಲ್ಲೇ ನಡೆದೆವು. ಒಂದು ಮನಸ್ಸು ’ನನಗೇನಾದರು ಆಗುತ್ತಿದೆಯೇನು” ಅಂತ ಗುಮಾನಿ ಪಡುತ್ತಿದ್ದರೆ, ಇನ್ನೊಂದು ’ಇದೆಲ್ಲ ನಿನ್ನ ಭ್ರಮೆ ಅಷ್ಟೆ” ಅನ್ನುತ್ತಿತ್ತು. ಒಂದು ತಿರುವಿನಲ್ಲಿ ದೂರದ ಎವೆರೆಸ್ಟ್ ಬೇಸ್ ಕ್ಯಾಂಪಿನ ಹಳದಿ, ಕೆಂಪು ಗುಡಾರಗಳು ಕಂಡವು. ಗೊರಕ್ ಶೆಪ್ ತೀರಹತ್ತಿರದಲ್ಲಿದ್ದಾಗ, ಒಂದು ಇಳಿಜಾರನ್ನು ಇಳಿಯಬೇಕು. ಅಲ್ಲಿ, ನಂದಿನಿಯವರು "ಈಶಾ, are you okey ?" ಎಂದ ಹಾಗಾಯಿತು. ’ಅರೆ, ಇದೇನಿದು, ತಲೆಯೊಳಗೆ ಧ್ವನಿಗಳೂ ಕೇಳಲು ಶುರುವಾಗಿದೆಯಲ್ಲ” ಅಂದು ಕೊಳ್ಳುತ್ತಾ ಅವರೆಡೆಗೆ ನೋಡಿದೆ. ಸಧ್ಯಕ್ಕೆ ಅವರು ನಿಜವಾಗಿಯೂ ಕೇಳಿದ್ದರು. ನಾನು ಸ್ವಲ್ಪ ಕುಡಿದವರಂತೆ ನೆಡೆಯುತ್ತಿದ್ದನೆಂದೂ, ಹಾಗಾಗಿ ಏನು ಸಮಾಚಾರವೆಂದು ಕೇಳಿದ್ದರು. ನನಗೂ ನನ್ನ ಸುತ್ತ ಇದ್ದ ಪರ್ವತಗಳು ಅಲುಗಿದ್ದಂತೆ ಆಗಿದ್ದು ನಿಜ. ಸರಿ, ಇನ್ನು ಇವಕ್ಕೆಲ್ಲಾ ಸಮಯವಿಲ್ಲ, ಗುರಿ ಮುಟ್ಟುವವರೆಗೂ ಬಾಯಿ ಮುಚ್ಚಿಕೊಂಡು ಸರಿಯಿರುವುದು ವಾಸಿ ಅಂದುಕೊಂಡೆ.

ಅಂತೂ ಹತ್ತಿರದಲ್ಲಿ ಗೋರಕ್ ಶೆಪ್

ನಾವು ೧:೩೦ ಮಧ್ಯಾನಕ್ಕೆ ಗೊರಕ್ ಶೆಪ್ ತಲುಪಿದೆವು. ಅದು ಬಹಳ ಸುಂದರವಾದ ಲಾಡ್ಜ್. ಆದರಲ್ಲಿ ಬಹಳ ಕೋಣೆಗಳಿದ್ದವು. ಬಹಳ ಜನ ವಿದೇಶಿಯರಿದ್ದರು. ಇಬ್ಬಿಬ್ಬರಿಗೆ ಒಂದರಂತೆ ಕೋಣೆಗಳನ್ನು ಕೊಟ್ಟರು. ನಮಗೆ ಕೇವಲ ಒಂದು ಗಂಟೆಗಳ ಕಾಲ ಬಿಡುವು ಇತ್ತು. ನಾವು ಹುರಿದ ಆಲೂಗೆಡ್ಡೆಗಳನ್ನು, ಚೌಮೆನ್ ಹಾಗು ಹಾಟ್ ಚಾಕೊಲೇಟ್ ಕುಡಿದು ಇಬಿಸಿ ಕಡೆಗೆ ಹೊರಟೆವು. ವಸುಮತಿಯವರು ಯಾಕೊ ಬಹಳ ಅವಸರದಲ್ಲಿ ಇದ್ದುದ್ದಲ್ಲದೆ ವ್ಯಾಕುಲಗೊಂಡಿದ್ದರು. ಮಾತುಮಾತಿಗೆ ಸಿಡುಕುತ್ತಿದ್ದರು. ಇಂತಹ ಸಮಯದಲ್ಲಿ ಲೀಡರ್ ಗಳಿಗೆ ಹೇಗಾಗುತ್ತದೆಯೊ ನನಗೆ ಗೊತ್ತಿಲ್ಲ. ಆದರೆ ಇಂತಹ ಸಮಯದಲ್ಲೇ ಲೀಡರ್ ಗಳ ಸಾಮರ್ಥ್ಯ ಕಾಣಿಸಿಕೊಳ್ಳುವುದು. ವಸುಮತಿಯವರಿಗೆ ಎಲ್ಲರ ಮೇಲೆ ಸಿಟ್ಟಾಗಿತ್ತು. ನಾನು, ಜ್ಞಾನಿ ಹಾಗು ದೀಪಿಕಾ ಬಿಟ್ಟರೆ ಬೇರೆ ಯಾರೂ ಇನ್ನೂ ವಸುಮತಿಯವರ ಸಾಲಿನಲ್ಲಿ ಹಾಜರಿರಲಿಲ್ಲ. ಲಾಡ್ಜ್ ಪಕ್ಕದಲ್ಲೇ ಇದ್ದ ಎರಡು ಫುಟ್ ಬಾಲ್ ಮೈದಾನದಷ್ಟು ಅಗಲವಾದ ಜಾಗನ್ನು ದಾಟಿ ಕಾಲಾಪತ್ತರ್ ಪರ್ವತದ ಪಕ್ಕದಿಂದ ಹಾದು ಮುಂದೆ ಹೋಗಬೇಕಿತ್ತು. ನಾವು ನಮ್ಮ ಚೀಲಗಳನ್ನು ಲಾಡ್ಜಿನಲ್ಲೇ ಬಿಟ್ಟು ಬರಿ ಕೈಯಲ್ಲಿ ಹೊರಟಿದ್ದೆವು. ನಮ್ಮ ಗೈಡ್ ಖಾಜಿ ನಮ್ಮ ಜೊತೆ ಇರಲ್ಲಿಲ್ಲ. ಅವನು ಮೋಹನನ್ನು ಕ್ಷೇಮವಾಗಿ ಕೆಳಗಿಳಿಸಲು ಹೋಗಿದ್ದ.ಹಾಗಾಗಿ ವಸುಮತಿಯವರೇ ತಮಗೆ ತಿಳಿದ ಮಟ್ಟಿಗಿನ ದಾರಿಯಲ್ಲಿ ನಮ್ಮ ಪೋರ್ಟರ್ ಗಳ ಸಹಾಯದಿಂದ ಮುಂದುವರಿಯುತ್ತಿದ್ದರು.

ಬೇಸ್ ಕ್ಯಾಂಪ್ ದಾರಿ
ಬೇಸ್ ಕ್ಯಾಂಪ್ ದಾರಿ
ಬೇಸ್ ಕ್ಯಾಂಪ್ ದಾರಿ

ಅಲ್ಲಿಂದ ಬೇಸ್ ಕ್ಯಾಂಪ್ ವರೆಗೂ ಬರಿ ಕಲ್ಲುಬಂಡೆಗಳ ದಾರಿ, ಎಲ್ಲಿ ಹೋಗಬೇಕೆಂದೇ ತಿಳಿಯುವುದಿಲ್ಲ. ನಾವು ಬೇಗನೆ, ಸಂಜೆಯಾಗುವುದರೊಳಗೆ ಹಿಂತಿರುಗಬೇಕಿತ್ತು. ನಮ್ಮ ಟಾರ್ಚ್ ಗಳನ್ನೂ ತೆಗೆದುಕೊಂಡಿದ್ದೆವು. ಹಿಮ ಬಿದ್ದರೊಂತೂ ಇದ್ದ ದಾರಿಯೂ ಕಾಣದೆ ಕೆಲಸ ಕೆಟ್ಟಂತೆಯೇ. ಎಲ್ಲರೂ ಬೇಗ ಬೇಗನೆ ನೆಡೆಯುತ್ತಿದ್ದರು. ಜ್ಞಾನಿಗೆ ಮಧ್ಯದಲ್ಲಿ ಬಹಳ ಬಳಲಿಕೆಯಾಗಿ, ನಾವು ಒಂದು ಚಿಕ್ಕ ಬಿಡುವು ತೆಗೆದುಕೊಳ್ಳಬಹುದೇ ಎಂದು ವಸುಮತಿಯವರನ್ನು ಕೇಳಿದ. ಆಗ ವಸುಮತಿಯವರು, ಕೂಗಾಡಿ, ಸಾಲಿನಲ್ಲಿ ಯಾರು ಸ್ವಲ್ಪ ಜಾಸ್ತಿನೇ ಸುಸ್ತಾಗಿದ್ದರೋ ಅವರನ್ನೆಲ್ಲಾ ಒಂದು ಪ್ರತ್ಯೇಕವಾದ ಸಾಲಿನಲ್ಲಿ ಹಾಕಿ, ’ನನಗೆ ಸಾಧ್ಯವಾದಷ್ಟು ಜನರನ್ನು ಇಬಿಸಿ ತಲುಪಿಸಬೇಕಾಗಿರುವುದು ನನ್ನ ಕರ್ತವ್ಯ. ಆದ್ದರಿಂದ ನಿಮಗೆ ಆದರೆ ಬರುತ್ತಾಯಿರಿ. ಈಲ್ಲದಿದ್ದಲ್ಲಿ, ಎಂತಿದ್ದರೂ ನಾವು ಉಳಿದವರು ಇದೇ ದಾರಿಯಲ್ಲಿ ಹಿಂತಿರುಗಿ ಬರಬೇಕು, ಆಗ ನಮ್ಮೊಡನೆ ನೀವು ಹಿಂತಿರುಗ ಬಹುದು’ ಎಂದರು. ಈ ವಿಶಿಷ್ಟವಾದ ಸಾಲಿನಲ್ಲಿ ಜ್ಞಾನಿ, ಲಖನ್, ಶೀಲಾ ಮತ್ತೆ ಕೆಲವರಿದ್ದರು. ಇದರಿಂದಾಗಿ ಎಲ್ಲರಿಗೂ ಬಹಳ ಬೇಜಾರಾಯಿತು. ಇಲ್ಲಿಯವರೆಗೂ ಎಲ್ಲರೂ ಒಂದೇ ಗುಂಪಿನವರಾಗಿದ್ದೆವು. ಈಗ ಒಂದು Achievers ಮತ್ತೊಂದು Failures ತರಹದ ಗುಂಪುಗಳನ್ನು ಪ್ರಾರಂಭಿಸಿದಂತಾಯಿತು. ಇಷ್ಟಾಗಿ ಇದು ಕೇವಲ ಇಬಿಸಿ ಟ್ರೆಕ್ ಅಷ್ಟೆ, ನಾವೇನೂ ಎವೆರೆಸ್ಟ್ ಪರ್ವತ ಹತ್ತುತ್ತಿಲ್ಲವಲ್ಲ. ಯಾರೂ ಏನೂ ಮಾತನಾಡಲಿಲ್ಲ. ಹಾಗೆ ಮುಂದುವರೆದೆವು. ದಾರಿಯಲ್ಲಿ ನಮಗೆ ಇಬಿಸಿಗೆ ಹೋಗಿ ಹಿಂತಿರುಗಿ ಬರುತ್ತಿದ್ದ ಕೆಲವು ಗುಂಪುಗಳು ಸಿಕ್ಕವು. ಅವರೆಲ್ಲಾ, ಕ್ಯಾಂಪಿನಲ್ಲಿ ಒಂದು ಬೇಕರಿಯ ಟೆಂಟ್ ಇದೆಯೆಂದು ಅದರಲ್ಲಿ ಸೊಗಸಾದ ಸೇಬಿನ ಪೈಗಳು ಸಿಗುತ್ತವೆಂದೂ, ನಾವು ಅವುಗಳನ್ನು ರುಚಿ ನೋಡದೆ ಹಿಂತಿರುಗಬಾರದೆಂದು ಹೇಳಿದರು.

ಇಬಿಸಿಯಲ್ಲಿ ಬೇಕರಿ !

ಖುಂಬು ಗ್ಲೇಶಿಯರ್

ಈಗ ನಾವು ಗಟ್ಟಿಯಾದ ಖುಂಬು ಗ್ಲೇಶಿಯರ್ ಮೇಲೇ ನಡೆಯುತಿದ್ದೆವು. ಅದರ ಮೇಲೆ ದೊಡ್ಡದಾದ ಕಲ್ಲು ಬಂಡೆಗಳು ಬಿದ್ದಿದ್ದುದ್ದರಿಂದ ಹಾಗೆ ಅನ್ನಿಸುತ್ತಿರಲಿಲ್ಲ. ಆಗ ಈಗ, ದೂರದಲ್ಲೆಲ್ಲೋ ಗುಡು ಗುಡು ಗುಡುಗು, ಹಾಗು ಠಳಾರ್ ಅಂತ ಶಬ್ದ. ಅದು ಗ್ಲೇಶಿಯರ್ ಐಸ್ ಒಡೆಯುವ ಶಬ್ದವೆಂದು ವಸುಮತಿಯವರು ಹೇಳಿದರು. ನಾವು ಅಲ್ಲಿ ಇಂಡಿಯನ್ ಆರ್ಮಿ ಅವರ ಟೆಂಟಿಗೆ ಹೋಗುವವರಿದ್ದೆವು. ಇಂಡಿಯನ್ ಆರ್ಮಿಯ ಒಂದು ಗುಂಪು ಎವೆರೆಸ್ಟ್ ಹತ್ತಲು ಪ್ರಯತ್ನಿಸುತ್ತಿದ್ದರು. ಅವರ ನಾಯಕರು ವಸುಮತಿಯವರ ಕುಟುಂಬದ ಸ್ನೇಹಿತರು. ಹೀಗೆ ನಾವು ನಡೆಯುತ್ತಿರಬೇಕಾದರೆ (ನಾನು ವಸುಮತಿಯವರ ಸಾಲಿನಲ್ಲಿ ಮುಂದಿಂದ ಮೂರನೆಯವಳಾಗಿದ್ದೆ), ಯಾರೋ ಸರಸರನೆ ಒಂದೇ ಕ್ಷಣದಲ್ಲಿ ನಮ್ಮನ್ನು ಹಾದು ಹೋದರು. ಅದು ಜ್ಞಾನಿ ! ವಸುಮತಿಯವರು ’ನಿಲ್ಲು’ ಎಂದು ಹೇಳಿದ್ದುದ್ದನ್ನೂ ಅವನು ಕೇಳಿಸಿಕೊಳ್ಳದೆ ಕ್ಷಣ ಮಾತ್ರದಲ್ಲಿ ಮಾಯವಾದ. ನನ್ನ ಮುಖದಲ್ಲಿ ಒಂದು ಸಣ್ಣ ನಗೆ. ಇನ್ನೂ ಸ್ವಲ್ಪ ಸಮಯದಲ್ಲಿ ನಾವು ಬೇಸ್ ಕ್ಯಾಂಪ್ ತಲುಪಿದೆವು.

ಇಬಿಸಿಯ ಮೊದಲ ನೋಟ

ಇದೇ ಇಬಿಸಿ
ಅಡ್ವಾನ್ಸ್ ಬೇಸ್ ಕ್ಯಾಂಪಿಗೆ ಖುಂಬು ಗ್ಲೇಶಿಯರ್ ದಾಟುವ ದಾರಿ

ಎಲ್ಲರಲ್ಲೂ ಉತ್ಸಾಹ ತುಂಳುಕುತ್ತಿತ್ತು. ಸಂದೀಪನ ಮುಖದಲ್ಲಿ ಕಣ್ಣೀರು. ಅದೊಂದು ಮಹದಾನಂದ. ನಾನು ಪ್ರಿಯ ಒಟ್ಟಿಗೆ ಒಂದು ಫೋಟೋ ತೆಗೆಸಿಕೊಂದೆವು, ಅಂತೂ ಇಲ್ಲಿಗೂ ಬಂದೆವು. ಎವೆರೆಸ್ಟ್ ನಮ್ಮ ಜೀವನದಲ್ಲಿ ಬರುತ್ತದೆಂದು ನೆನಸಿರಲಿಲ್ಲ. ವಸುಮತಿಯವರು, ಅವರ ಕುಟುಂಬದೊಡನೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ’ಈಗ ನಮ್ಮ ಆರ್ಮಿ ಟೆಂಟ್ ಹುಡುಕಬೇಕಲ್ಲ” ಅಂತ ವಸುಮತಿಯವರು ಹೇಳಿಕೊಳ್ಳುತ್ತಿದ್ದರು. ನಾನು ’ಅಯ್ಯೊ, ಈಗ ಜ್ಞಾನಿಯನ್ನು ಹುಡುಕಬೇಕಲ್ಲ’ ಎಂದು ಕೊಂಡೆ. ಅವನನ್ನು ಹುಡುಕಲು ಕಂಡಿತವಾಗಿಯೂ ವಸುಮತಿಯವರ ಸಹಾಯ ನಿರೀಕ್ಷಿಸುವಂತಿರಲಿಲ್ಲ. ನಾವು ಬೇಗ ಹೊರಡುವರಿದ್ದು, ಸಂಜೆಯಾದರೆ ಇವನನ್ನು ಎಲ್ಲಿ ಹುಡುಕುವುದು ? ಅಯ್ಯೊ, ರಾಮ. ಅಲ್ಲೆಲಾ ಬರೀ ಪರ್ವತಾರೋಹಿಗಳ ಟೆಂಟುಗಳು. ಬೇರೆ ಬೇರೆ ದೇಶದವರದು. ಬಹು ಪಾಲು ಸೈನ್ಯದವರದ್ದು. ಅಲ್ಲಿ ನಾವು ಎಲ್ಲರೂ ಹೇಳಿದ್ದ ಬೇಕರಿಯನ್ನು ನೋಡಿದೆವು. ಆದರೆ ನಾವು ಬೇಗನೆ ಹಿಂತಿರುಗಿ ಹೋಗಬೇಕಾಗಿದ್ದುದ್ದರಿಂದ ಪೈ ರುಚಿಯನ್ನು ನೋಡುವುದಕ್ಕೆ ಸಮಯವಿರಲಿಲ್ಲ. ನಾವು ಇಂಡಿಯನ್ ಆರ್ಮಿ ಟೆಂಟನ್ನು ಕಂಡುಹಿಡಿದು, ಅದರೊಳಗೆ ಇಣುಕಿದರೆ, ಅಲ್ಲಿ ಜ್ಞಾನಿ ಕಮಾಂಡರ್ ರಾಹುಲ್ ಮಹಾಜನ್ ಅವರೊಡನೆ ಟೀ ಕುಡಿಯುತ್ತಾ ಮಾತಾಡುತ್ತಿದಾನೆ! ವಸುಮತಿಯವರಿಗೆ ಸ್ವಲ್ಪ ಕಸಿವಿಸಿಯಾದಂತೆ ಕಾಣಿಸಿತು. ಜ್ಞಾನಿ ವಸುಮತಿಯವರನ್ನು ಮಹಾಜನ್ ಅವರಿಗೆ ಪರಿಚಯಿಸಿ ಹೊರನಡೆದ.

ಇಂಡಿಯನ್ ಆರ್ಮಿ ಟೆಂಟ್


ವಸುಮತಿಯವರ ಕುಟುಂಬದ ಸ್ನೇಹಿತರು (ಕಮಾಂಡರ್) ಅಲ್ಲಿ ಇರಲಿಲ್ಲ. ಅವರು ಎವೆರೆಸ್ಟ್ ಮೇಲಿನ ನಾಲ್ಕನೇ ಕ್ಯಾಂಪಿನಲ್ಲಿ ಇದ್ದಾರೆಂದು, ಇಂದೋ ನಾಳೆಯೋ ಎವೆರೆಸ್ಟ್ ತುದಿ ತಲುಪಲಿದ್ದಾರೆಂದು ಮಹಾಜನ್ ಅವರು ಹೇಳಿದರು. ನಮಗೆ ಇಂಡಿಯನ್ ಆರ್ಮಿ ಟೀಮಿನವರು ಆದರದಿಂದ ಅವರ ದೊಡ್ಡದಾದ ಊಟದ ಟೆಂಟಿನಲ್ಲಿ ಟೀ, ಬಿಸ್ಕೆಟ್ಟುಗಳು ಮತ್ತಿತರ ತಿನಿಸುಗಳನ್ನು ಕೊಟ್ಟರು. ಅಲ್ಲಿ ಒಂದು ಟಿವಿ ಸಹ ಇತ್ತು ! ಪರ್ವತಾ ರೋಹಿಗಳು ಯಾವ ಜಾಗದಿಂದ ಪರ್ವತ ಹತ್ತಲು ಶುರು ಮಾಡುತ್ತಾರೆಂದು ತೋರಿಸಿದರು. ಆಗ ಮೋಡ ಕವಿದ್ದಿದ್ದುದ್ದರಿಂದ ನಮಗೆ ಅಪಾಯಕಾರಿಯಾದ ಖುಂಬು ಗ್ಲೇಶಿಯರ್ (ಪರ್ವತದಿಂದ ಹಿಮ ಪ್ರಪಾತವಾಗಿ ಗ್ಲೇಶಿಯರ್ ಶುರುವಾಗುವ ಜಾಗ) ಬಿಟ್ಟು ಬೇರೇನೂ ಕಾಣಲಿಲ್ಲ. ಅದನ್ನೇ ಫೋಟೋ ತೆಗೆದುಕೊಂಡೆವು. ಅಲ್ಲಿ ಶರ್ಪಾ ಜನರು ಹಿಮವನ್ನು ಗಟ್ಟಿ ಮಾಡಿ ದಾರಿ ಕಟ್ಟುತ್ತಾರಂತೆ. ಅದಕ್ಕೆ ಟೋಲ್ ಕಟ್ಟಿ ಅಡ್ವಾನ್ಸ್ ಬೇಸ್ ಕ್ಯಾಂಪಿಗೆ ಪರ್ವತಾರೋಹಿಗಳು ಹೋಗುತ್ತಾರಂತೆ. ಹೀಗೆ ಅಲ್ಲೂ ದುಡ್ಡು ಮಾಡುವ ಅವಕಾಶಗಳಿವೆ. ಅಲ್ಲೊಂದು ಅರ್ಧ ಬಿದ್ದು ಹೋಗಿದ್ದ ಹೆಲಿಕಾಪ್ಟರ್ ಇತ್ತು. ಅಲ್ಲಿ ಸರಿಯಾಗಿ ಗಾಳಿ ಇಲ್ಲದಿರುವುದರಿಂದ ಹೆಲಿಕಾಪ್ಟರ್ ಗಳಿಗೆ ಹಾರಲು ಕಷ್ಟ. ಅಲ್ಲಿಂದ ನಾವು ನಾಲ್ಕು ಗಂಟೆಗೆ ಹೊರಡಲು ಶುರುಮಾಡಿದೆವು.

ಇಬಿಸಿ ದಾರಿ

ಇಬಿಸಿ ದಾರಿ

ಹಿಂತಿರುಗಿ ಬರುವಾಗ ದಾರಿ ಸಾಗುತ್ತಲೇ ಇಲ್ಲ ! ಎಷ್ಟು ನಡೆದರೂ ನಮ್ಮ ಲಾಡ್ಜ್ ಕಾಣಿಸುತ್ತಿಲ್ಲ. ಅರೆ ಹೋಗುತ್ತಾ ಇದೆಲ್ಲಾ ದಾಟಿದೆವಾ ? ಎಂದು ಕೊಳ್ಳುವ ಹಾಗೆ ಆಯಿತು. ದಾರಿಯ ಮದ್ಯದಲ್ಲಿ ನಮಗೆ ಖಾಜಿ ಸಿಕ್ಕ. ಅವನು ಮೋಹನನನ್ನು ಸುರಕ್ಷಿತವಾಗಿ ಖಟ್ಮಂಡುವಿಗೆ ತಲುಪಿಸಲಾಯಿತು ಎಂದು ಹೇಳಿದ. ಅವನನ್ನು ಒಂದೊಂದೇ ಕ್ಯಾಂಪ್ ಕೆಳಗಿಳಿಸಲಾಯಿತೆಂದು, ಆದರೆ ಅವನಿಗೆ ಗುಣವಾಗುತ್ತಿರಲಿಲ್ಲವಾದ್ದರಿಂದ, ಫೆರಿಚೆಯಲ್ಲಿ ಹೆಲಿಕಾಪ್ಟರಿನಲ್ಲಿ ಖಟ್ಮಂಡುಗೆ ಆಸ್ಪತ್ರೆಗೆ ದಾಖಲು ಮಾಡಲು ಕಳುಹಿಸಲಾಯಿತೆಂದ. ನಾವು ಗೊರಕ್ ಶೆಪ್ ತಲುಪಿದಾಗ ಕತ್ತಲೆಯಾಗಿತ್ತು. ಒಟ್ಟಿನಲ್ಲಿ ೭ ಗಂಟೆಗಳ ಕಾಲ ಟ್ರೆಕ್ ಮಾಡಿದ್ದೆವು ಅಲ್ಲದೆ ಎಲ್ಲರೂ ಇಬಿಸಿ ತಲುಪಿ ಸುರಕ್ಷಿತವಾಗಿ ಹಿಂತಿರುಗಿದ್ದೆವು.

ಹಿಂತಿರುಗಿ ಬರುವಾಗ ಕಂಡ ಇಬಿಸಿ

ನಾವೆಲ್ಲಾ, ೨ ಕಾಲ್ಚೀಲಗಳು, ಥರ್ಮಲ್ ಬೆಚ್ಚನೆಯ ಪ್ಯಾಂಟುಗಳು, ಎರಡೆರಡು ಜಾಕೆಟ್ಟುಗಳು, ಟೋಪಿ, ಮಫ್ಲರ್ ಮುಂತಾದುವುಗಳನ್ನೆಲ್ಲಾ ಹಾಕಿಕೊಂಡು ಊಟಕ್ಕೆ ಕುಳಿತುಕೊಂಡೆವು. ಉಷ್ಣತೆ ೧೫ ಡಿಗ್ರಿಗಿಂತ ಕೆಳಗಿದ್ದು, ಇನ್ನೂ ಕೆಳಗೆ ಹೋಗುತ್ತಿತ್ತು. ಎಲ್ಲರಿಗೂ ಬಹಳ ಸುಸ್ತಾಗಿತ್ತು ಆದರೂ ಬಹಳ ಸಂತೋಷದಲ್ಲಿದ್ದೆವು. ನಾಳೆ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕಾಲಾಪತ್ತರ್ ಗೆ ಹೋಗಬೇಕಿತ್ತು. ವಸುಮತಿಯವರು ’ಯಾರೆಲ್ಲಾ ಹೋಗುವವರಿದ್ದೀರ’ ಎಂದು ಕೇಳಿದಾಗ ಕೇವಲ ೧೦ ಜನ ಹೊರಡಲು ತಯಾರಿದ್ದರು. ನಾನು, ಸೆಂತಿಲ್, ಸ್ವಪ್ನ, ಸಂದೀಪ್, ನಂದಿನಿ, ನಂದು, ನರೇಶ್, ಡಾ.ಮಾಂಜ, ರೋಶಿನ್, ಪ್ರಿಯ ಮತ್ತು ಲಖನ್. ಮಿಕ್ಕವರೆಲ್ಲಾ ಬಹಳ ಸುಸ್ತಾಗಿದ್ದುದ್ದರಿಂದ ತಾವು ಮಲಗಿ ಸುಧಾರಿಸಿಕೊಳ್ಳುವುದಾಗಿ ಯೋಚಿಸಿದ್ದರು. ಅಲ್ಲದೆ, ಕಾಲಾಪತ್ತರ್ ನಂತರ ಅದೇದಿನ ನಾವು ಹಿಂತಿರುಗಿ ಹೊರಡುವವರಿದ್ದೆವು. ಯಾರಿಗೂ ಸರಿಯಾಗಿ ಹೊದಿಯಲು ಕಂಬಳಿ ಇಲ್ಲದೆ ಪರದಾಟಕ್ಕೆ ಇಟ್ಟುಕೊಂಡಿತು. ಆ ಚಳಿಯಲ್ಲಿ ನಿದ್ದೆಯೇ ಬರುತ್ತಿಲ್ಲ. ಕಿಟಕಿಯಿಂದ ಹೊರಗೆ ಆಕಾಶ ಕಾಣಿಸುತ್ತಿತ್ತು. ಸ್ಪಷ್ಟವಾದ ಆಕಾಶದಲ್ಲಿ ನಕ್ಷತ್ರಗಳು ಮಿನುಗುತಿದ್ದವು. ಓ ಈ ರೀತಿಯೇ ಇದ್ದರೆ ನಾವು ಕಾಲಾಪತ್ತರ್ ಗೆ ಹೋಗುವುದು ನಿಶ್ಚಿತ. ಇದ್ದಕ್ಕಿದ್ದ ಹಾಗೆ ’ಯಾಕಾದರೂ ವಾತಾವರಣ ಚೆನ್ನಾಗಿಯ್ದೆಯೋ, ಇಲ್ಲದ್ದಿದ್ದಲ್ಲಿ ಆ ನೆಪದಿಂದಾಗಿಯಾದರೂ ಹೋಗದೆ ಇರಬಹುದಿತ್ತಲ್ಲವೇ’ ಅಂದುಕೊಂಡೆ. ಆದರೆ ’ಇದೊಂದೇ ಚಾನ್ಸ್, ಆದ್ದರಿಂದ ಅವಕಾಶವನ್ನು ಬಿಡಬಾರದು’ ಎಂದು ಮನ್ನಸ್ಸು ಮಾಡಿ ಮಲಗಲು ಪ್ರಯತ್ನಿಸಿದೆ.

Sunday, March 29, 2009

ಎಂದೂ ಮರೆಯಲಾಗದ ದುಗ್ಲಾ ಏರು ! ಉಸ್ಸಪ್ಪಾ...

ಒಂಬತ್ತನೆಯ ದಿನ (ಮೇ ೧೧, ೨೦೦೮)
ದಿಂಗ್ ಬೋಚೆ (4410 ಮೀ/14464 ಅಡಿ) - ಲೊಬು ಚೆ (4930 ಮೀ/16170 ಅಡಿ)

ನಾವು ಬೆಳಿಗ್ಗೆ ಸುಮಾರು ೭:೦೦ ಗಂಟೆಗೆ ಓಟ್ಸ್ ಗಂಜಿಯನ್ನು ಕುಡಿದು, ಕೊನೆಯ ಬಾರಿಗೆ ಆ ಕುಪ್ರಸಿದ್ದ ಚಾರ್ಪಿಗಳಿಗೆ (ಮೊದಲೇ ವಿವರಿಸಿದ ಟಾಯ್ಲೆಟ್ಟುಗಳಿಗೆ ಚಾರ್ಪಿಗಳೆನ್ನುತ್ತಾರೆ.) ಭೇಟಿ ಕೊಟ್ಟು, ಮುಖ ಕೈಗಳಿಗೆಲ್ಲಾ ಸನ್ ಸ್ಕ್ರ್ರೀನ್ ಲೋಶನ್ ಬಳಿದು ಹೊರಡಲು ಅನುವಾದೆವು.

ದೂರದಲ್ಲಿ, ಹಿಂದೆ ಬಿಟ್ಟ ದಿಂಗ್ ಬೋ ಚೆ

ದುಗ್ಲಾಗೆ ನಮ್ಮ ಪಯಣ

ದಿಂಗ್ ಬೋ ಚೆಯಿಂದ ದುಗ್ಲಾಗೆ ಹೋಗುವ ದಾರಿಯಲ್ಲಿ ಉದ್ದಕ್ಕೂ ದೂರದಲ್ಲಿ ಫೆರಿಚೆ ಊರು ಹಾಗು ಅದಕ್ಕೆ ಹೋಗುವ ದಾರಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಿ ಓಡಾಡುತ್ತಿದ್ದ ಜನಗಳೂ ಸಹ ಇರುವೆಗಳಂತೆ ಕಾಣಿಸುತ್ತಿದ್ದರು. ನಾನು ಹಿಂದೆಯೇ ಹೇಳಿದಂತೆ ಪರ್ವತಗಳ ಹತ್ತಿರ distance is deceptive. ಫೆರಿಚೆ ನಾವು ಹಿಂತಿರುಗಿ ಬರು ದಾರಿಯಲ್ಲಿ ಇತ್ತು. ನಾನು ಹಿಂದೆ ತೋರಿಸಿದ್ದ ನಕ್ಷೆಯಲ್ಲಿ ನೋಡಿ.

ನರೇಶ್ ಬಗ್ಗಿ ಫೆರಿಚೆಯನ್ನು ಗಮನಿಸುತ್ತಿರುವುದು

ಇಲ್ಲಿಯ ನಂತರದ ನೆನೆಪಿಟ್ಟುಕೊಳ್ಳುವಂತಹ ಜಾಗವೆಂದರೆ ದುಗ್ಲಾ ಏರು. ನಾವು ೧:೩೦ ಕ್ಕೆ ದುಗ್ಲಾ ತಲುಪಿದೆವು. ಇದರ ಪ್ರಾರಂಭದಲ್ಲಿ ಒಂದು ಟಿ ಅಂಗಡಿ ಇದೆ. ಅದರ ಹೆಸರು ಯಾಕ್ ಲಾಡ್ಜ್. ಅಲ್ಲಿ ನಾವು ಒಂದು ಅತಿ ದೊಡ್ಡ ತಾಲಿಯಲ್ಲಿ ನೂಡಲ್ಸ್ ಸೂಪು, ಹಾಗೂ ಬಿಸಿ ನಿಂಬೆ ರಸವನ್ನು ಕುಡಿದೆವು. ಸೂಪಿಗೆ ಎಷ್ಟು ಬೆಳ್ಳುಳ್ಳಿ ಹಾಕಿದ್ದರೆಂದರೆ, ನಕ್ಕಿದರೆ, ತೇಗಿದರೆ, ಬಾಯಿಬಿಟ್ಟರೆ ಬೆಳ್ಳುಳ್ಳಿ ! ಸಾಕಾಗಿ ಹೋಯಿತು. ಆದರೆ ಆಲ್ಟಿಟ್ಯುಡ್ ಸಿಕ್ನೆಸ್ ಗೆ ಇದು ಬಹಳ ಒಳ್ಳೆಯದೆಂದು ಹೇಳಿಕೊಂಡು ಅನುಸರಿಸಿಕೊಂಡೆವು. ಆ ಲಾಡ್ಜ್ ನ ಮೇಜುಗಳು ದುಗ್ಲಾ ಏರಿಗೆ ಮುಖಮಾಡಿ ಇವೆ. ಹಾಗಾಗಿ ಯಾರು ಎಲ್ಲಿ ಹತ್ತುತ್ತಾ ಇದ್ದಾರೆ, ಯಾರು ಬೇಗ ಬೇಗ ಹತ್ತುತ್ತಾ ಇದ್ದಾರೆ, ಯಾರಿಗೆ ತ್ರಾಣ ಇಲ್ಲದೆ ಲಾಟ್ರಿ ಹೊಡೆಯುತ್ತ ಇದ್ದಾರೆ ಎಂದು ಚೆನ್ನಾಗಿ ಕಾಣುತ್ತಿತ್ತು. ನಾವು ನಮ್ಮ ಮುಂದಿರುವ ಕಷ್ಟದ ಕೆಲಸವನ್ನು ಯೋಚಿಸಿಕೊಳ್ಳುತ್ತಾ, ಇನ್ನೊಂದು ಚೂರು ಹೊತ್ತು ಇಲ್ಲೇ ಕುಳಿತುಕೊಳ್ಳುವ ಎಂದು ಸೋಮಾರಿಗಳಂತೆ ಇದ್ದು ವಸುಮತಿಯವರಿಂದ ಬೈಸಿಕೊಂಡು ಎದ್ದು ಹೊರಟೆವು.

ದೂರದಲ್ಲಿರುವ ನೀಲಿ ಹೆಂಚಿನ ಮನೆ ಯಾಕ್ ಲಾಡ್ಜ್


ಮತ್ತೂ ದೂರದಿಂದ ಯಾಕ್ ಲಾಡ್ಜ್ (ನೀಲಿ ಚುಕ್ಕೆ!)

ದುಗ್ಲಾದಲ್ಲಿ ಕೇವಲ ಎರಡು ಲಾಡ್ಜ್ ಇವೆ. ಖುಂಬು ಗ್ಲೇಶಿಯರ್ ದುಗ್ಲಾ ಹತ್ತಿರಲ್ಲಿ ಕೊನೆಗೊಳ್ಳುತ್ತದೆ.ಇಲ್ಲಿ ಸುತ್ತಾ ಮುತ್ತಾ ಯಾರೂ ಕಾಣಿಸುವುದ್ದಿಲ್ಲ. ದಿಂಗ್ ಬೋ ಚೆಯಿಂದ ಮುಂದಕ್ಕೆ ಮರಗಳು ಗಿಡಗಳು ಕಾಣಸಿಗುವುದಿಲ್ಲ. ಬರೀ ತಣ್ಣಗೆ ಕಲ್ಲು ಬಂಡೆಗಳಿರುವ ಬರಡು ಭೂಮಿ. ದುಗ್ಲ ಹತ್ತಿರದಿಂದಲೇ ಚೊ ಲಾ ಪಾಸ್ ಮುಖಾಂತ ಗೋಕಿಯೊ ಸರೋವರಕ್ಕೆ ದಾರಿ ಶುರುವಾಗುತ್ತದೆ. ಏವೆರೆಸ್ಟ್ ಗೆ ಹೀಗೂ ಹೋಗಬಹುದು. ಆದರೆ ಅದು ಬಹಳ ಸುತ್ತು ಬಳಸು ಹಾಗು ಕಷ್ಟಕರವಾದ ದಾರಿ. ದುಗ್ಲಾ ಏರು ಹತ್ತಿದ ನಂತರ ಸಿಗುವುದು ಎವೆರೆಸ್ಟ್ ಗಾಗಿ ಪ್ರಾಣ ಕೊಟ್ಟವರಿಗಾಗಿ (ಶರ್ಪಾಗಳು ಮತ್ತಿತರು) ಮಾಡಿರುವ ಸ್ಮಾರಕಗಳು. ಕೆಲವಕ್ಕೆ ಹೆಸರಿನ ಫಲಕಗಳನ್ನು ಹಾಕಿರುವುದರಿಂದ ನಾವು ಕೇಳಿದ್ದ ಕೆಲವು ಸುಪ್ರಸಿದ್ದ ಪರ್ವತಾರೋಹಿಗಳನ್ನು ನೆನಪಿಸಿಕೊಂಡೆವು. ಅವುಗಳಲ್ಲಿ ಬಹಳಷ್ಟು, ಕಲ್ಲುಗಳನ್ನು ಲಗೋರಿ ಆಟಕ್ಕೆ ಜೋಡಿಸುವಂತೆ ಜೋಡಿಸಿರುತ್ತಾರೆ. ಅಲ್ಲಿ ಲಖನ್ ತನಗಾಗಿ ಒಂದು ಸಣ್ಣ ಸ್ಮಾರಕ ಮಾಡಿಕೊಂಡ. ಸ್ಮಾರಕವೇನೋ ಮಾಡಿಕೊಂಡಾಯಿತು ಇನ್ನು ಎವೆರೆಸ್ಟ್ ಹತ್ತಬೇಕಷ್ಟೆ ಅಂತ ಅವನ ಅನಿಸಿಕೆ !

ಪ್ರಾಣ ಕೊಟ್ಟವರಿಗಾಗಿ ಸ್ಮಾರಕಗಳು

ನಾವು ಖುಂಬು ಗ್ಲೇಶಿಯರ್ ಕೊನೆಯ ಭಾಗದಗುಂಟ (terminal moraine) ನಡೆಯುತ್ತಾ ಹೋಗುತ್ತಿದ್ದಂತೆ ನಮಗೆ ಹಿಮಾಲಯದ ಹಲವಾರು ಪ್ರಸಿದ್ದ ಪರ್ವತಗಳು ಕಾಣಸಿಗುತ್ತವೆ. ಆಗ ಈಗ ತಿರುವಿನಲ್ಲಿ ಮೌಂಟ್ ಎವೆರೆಸ್ಟ್ ಕೂಡ ಕಾಣಿಸಿಕೊಳ್ಳುತ್ತಿತ್ತು. ಅದೆಷ್ಟು ಎತ್ತರದಲ್ಲಿ ಇದೆಯೆಂದರೆ ಅದರ ತುಟ್ತತುದಿಯ ಸುತ್ತ ಯಾವಾಗಲೂ ಹಿಮ (plume) ಮುಚ್ಚಿರುತ್ತಿತ್ತು. ನಮಗೆ ಮೊದಲ ಸಲ ಕಾಲಾ ಪತ್ತರ್ ಕಾಣಿಸಿಕೊಂಡಾಗ ಬಹಳ ಬೇಸರವಾಯಿತು. ಅದೊಂದು ಕರಿಯ ದಿಬ್ಬ ಅಥವಾ ಗುಬಟೆ ಅಷ್ಟೆ. ಅದರ ಹಿಂದೆ ಮುಂದೆ ಸುಂದರವಾದ ಅಷ್ಟೇನು ಎತ್ತರ ಇಲ್ಲದಂತಹ ಪರ್ವತಗಳು ಇದ್ದುವು.

ಎಡಗಡೆಯಲ್ಲಿ ಕಾಣುವ ಕರಿ ದಿಬ್ಬವೇ ಕಾಲಾಪತ್ತರ್ !

ಅದರ ಹಿಂದೆ ಪುಮೊರಿ ’ಓ ಅದನ್ನೇ ಹತ್ತಬಹುದಿತ್ತಲ್ಲವೇ’ ಎಂಬಂತೆ ಕಾಣುತ್ತಿತ್ತು. ಆದರೆ ನಾವು ಕಾಲಾ ಪತ್ತರ್ ಹತ್ತುವಾಗ ಸತ್ತೇಹೋದೆವೆನ್ನಿಸಿ, ’ಇದೇ ಇಷ್ಟು ಅಸಾಧ್ಯಾವಾದರೆ ಇನ್ನು ಪುಮೋರಿ ಹೇಗಿರಬಹುದು’ ಎಂದುಕೊಂಡೆವು. ಇನ್ನು ಮೌಂಟ್ ಎವೆರೆಸ್ಟ್ ಹೇಗಿರಬಹುದು !

ನಾವು ಲೋಬುಚೆ ತಲುಪಿದಾಗ ೧:೩೦ ಮಧ್ಯಾನ. ಕೊರೆಯುವ ಚಳಿ. ಊಟವೆಲ್ಲಾ ಆದ ಮೇಲೆ, ನಾವು ಆಟವಾಡುತ್ತಾ ಕುಳಿತಿರಬೇಕಾದರೆ, ನೋಡ ನೋಡುತ್ತಿದ್ದಂತೆ ಹೊರಗೆ ಹಿಮ ಬೀಳಲು ಶುರುವಾಯಿತು. ಎಲ್ಲೆಲ್ಲೂ ಬಿಳಿ ಮರಳಿನಂತೆ.


ಎಲ್ಲೆಲ್ಲೂ ಹಿಮ


ನಾವೆಲ್ಲಾ ನಮ್ಮ ಬೆಚ್ಚನೆಯ ಕೈ ಚೀಲಗಳು ಹಾಗು ಬಾಲಕ್ಲಾವ (ಕಿವಿ ಮುಚ್ಚುವ ಬೆಚ್ಚನೆಯ ಟೋಪಿ) ಮತ್ತಿತರೆ ಬಟ್ಟೆಗಳನ್ನು ಹಾಕಿಕೊಂಡು ಹೊರ ನಡೆದೆವು. ಹೊರಗೆ ಹಿಮದ ಚೆಂಡುಗಳನ್ನು ಒಬ್ಬರಿಗೆ ಒಬ್ಬರು ಹೊಡೆದುಕೋಂಡು ಆಟವಾಡಿದೆವು. ನಾನೊಂದು ಚಿಕ್ಕ ಹಿಮಮಾನವನನ್ನು ಮಾಡಿದೆ. ನನ್ನ ಜೀವಮಾನದಲ್ಲಿ ಮೊದಲನೆಯಸಲ ಹೀಗೆ ಹಿಮದಲ್ಲಿ ಆಟವಾಡಿದ್ದು ! ಅದು ಹಿಮಾಲಯದ ತುದಿಯಲ್ಲಿ (almost)! ಇಲ್ಲಿ ಬರಿ ಮೋಂಬತ್ತಿ ಬೆಳಕು. ಹಾಗು ಕುಡಿಯುವ ನೀರಿಗೆ ಲೀಟರ್ ಗೆ ೩೫೦/- ನೇಪಾಲಿಯನ್ ರೂಪಾಯಿಗಳು. ಚಳಿ ಜಾಸ್ತಿಯಾಯಿತು. ನಾವೆಲ್ಲಾ ನಮ್ಮ ಎಲ್ಲಾ ಬೆಚ್ಚನೆಯ ಬಟ್ಟೆಗಳನ್ನು ತೊಟ್ಟೆವು. ನಮ್ಮ ಹೋಟೆಲ್ ಮಾಲೀಕನಿಗೆ ನಮಗೆಲ್ಲಾ ನೀರನ್ನು ಬಿಟ್ಟಿಯಾಗಿ ಕೊಡಬೇಕೆಂದು ವಸುಮತಿಯವರು ಪರಿಪರಿಯಾಗಿ ಕೇಳಿಕೊಂಡರು. ಅವನು ಹಾಗೂ ಹೀಗೂ ಎನೇನೊ ಪ್ರಯತ್ನಿಸಿ, ನಂತರ, ನಾವೆಲ್ಲರೂ ಕುಣಿದರೆ ನಮಗೆ niirusiqqabahudend. ಅವನು ದೊಡ್ಡ ತಪ್ಪು ಮಾಡಿದ್ದ. ನಾವೆಲ್ಲರೂ ಆಮಂತ್ರಣವಿಲ್ಲದೇ ಕುಣಿಯುವವರು, ಇನ್ನು ನೀರಿಗಾಗಿ ಇದೂ ಒಂದು ಹೋರಾಟವೇ ? ನಿಲ್ಲಿಸಿ ಎನ್ನುವವರೆಗೆ ಕುಣಿದೆವು.


೧೬,೧೭೦ ಅಡಿ ಎತ್ತರದಲ್ಲಿ ಬುಖಾರಿ ಎದುರಿಗೆ ನಮ್ಮ ಕುಣಿತ !

ಬಗೆ ಬಗೆಯಾದ ಹಾಡುಗಳಿಗೆ ತರತರವಾದ ನೃತ್ಯಗಳನ್ನು ಮಾಡಿದೆವು. ಆಗ ಅಲ್ಲಿಗೆ ಇಬ್ಬರು ಗಂಡ ಹೆಂಡತಿ ಹಾಗು ಅವರ ಪೊರ್ಟರ್ ಬಂದರು. ಪೊರ್ಟರ್ ಗೆ ಹುಶಾರು ಇರಲಿಲ್ಲ. ಆಲ್ಟಿಟ್ಯುಡ್ ಸಿಕ್ನೆಸ್ ಇಂದ ತೊಳಲುತ್ತಿದ್ದ. ಬಹಳ ಜ್ವರ ಇತ್ತು. ಆಗ ಹೋಟಲಿನ ಮಾಲೀಕ ನಮಕೆ ಬಿಟ್ಟಿ ನೀರು ಕೊಡುವುದಾಗಿಯೂ, ನಾವು ಹಾಡುವುದನ್ನು ನಿಲ್ಲಿಸಿ ಸುಮ್ಮನಾಗಬೇಕೆಂದು ಹೇಳಿದ. ಆ ಎರಡು ದಂಪತಿಗಳಿಗೆ ಹಿಂದಿ ಬರುತ್ತಿರಲ್ಲಿಲ್ಲವಾದ್ದರಿಂದ ಅವರು ವಸುಮತಿಯವರಿಗೆ ಮಾಲೀಕನಿಗೆ ಪೊರ್ಟರ್ ನ ಎಲ್ಲ ಕರ್ಚು ವೆಚ್ಚಗಳನ್ನು ಅವರೆ ಭರಿಸುವುದಾಗಿಯೂ, ಅವನನ್ನು ಕುದುರೆಯ ಮೇಲೆ ಕೆಳಗೆ ಸಾಗಿಸಬೇಕೆಂದು ತಿಳಿಸುವಂತೆ ಕೇಳಿಕೊಂಡರು. ಇದು ನಮಗೆ ಆಲ್ಟಿಟ್ಯುಡ್ ಸಿಕ್ನೆಸ್ ಅನ್ನು ಮತ್ತೂ ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.ನಾವು ನಾಳೆ ಗೋರಕ್ ಶೆಪ್ ತಲುಪಿ ನಂತರ ಅದೇ ಮಧ್ಯಾನ ಬೇಸ್ ಕ್ಯಾಂಪಿಗೂ ಹೋಗಬೇಕಿತ್ತು. ಎಲ್ಲರಿಗೂ ಏನೋ ಒಂದು ತರದ ದಿಗಿಲು, ಆತುರ, ಕಳವಳ, ಕಾತರತೆ. ಎಲ್ಲರ ಮನದಲ್ಲೂ ಅವರವರದ ಬಗ್ಗೆ ಮಾತ್ರ ಚಿಂತೆ. ಎಲ್ಲರಲ್ಲೂ ತಾನು ಮಾಡೇತೀರುತ್ತೇನೆಂಬ ಛಲ. ಆ ರಾತ್ರಿ ಯಾರಿಗೂ ಸರಿಯಾಗಿ ನಿದ್ದೆ ಇಲ್ಲ.