Monday, July 20, 2009

ನಾವಲ್ಲಿ ! ಎವೆರೆಸ್ಟ್ ಒಡನಾಟದಲ್ಲಿ !

ಹತ್ತನೆಯ ದಿನ (ಮೇ ೧೨, ೨೦೦೮)
ಲೊಬು ಚೆ (4930 ಮೀ/16170 ಅಡಿ) - ಗೊರಕ್ ಶೆಪ್ (5160ಮೀ/16924 ಅಡಿ)

ಬರೆಯದೆ ನಾಲ್ಕು ತಿಂಗಳಾಗುತ್ತಾ ಬರುತ್ತಿದೆ. ಈ ನಾಲ್ಕು ತಿಂಗಳಲ್ಲಿ ಏನೇನೋ ನಡೆದು ಹೋಗಿದೆಯಲ್ಲದೆ, ಈ ಮೇನಲ್ಲಿ ನಾನು ಮತ್ತೊಂದು ಹಿಮಾಲ ಟ್ರೆಕ್ಕಿಂಗೆ ಹೋಗಿಬಂದೆ. ಒಂದು ಸಲ ಹಿಮಾಲಯವನ್ನು ಕಂಡವರಿಗೆ ಅದು ಮತ್ತೆ ಮತ್ತೆ ಕರೆಯುತ್ತದೆ. ಅದೆಂತದೋ ಆಕರ್ಷಣೆ. ಮೇ ಹತ್ತಿರವಾದಂತೆ, ಇನ್ಯಾವ ಪರ್ವತದ ತಡಿಗೆ ಎಂದು ಚಡಪಡಿಸುವಂತಾಗುತ್ತದೆ. ಈ ಸಲ ನಾವು ಹರ್-ಕಿ-ದೂನ್ ಪರ್ವತ ಬುಡಕ್ಕೆ, ಸ್ವರ್ಗರೋಹಿಣಿ ಹತ್ತಿರಕ್ಕೆ ಹೋಗಿಬಂದೆವು. ಅವುಗಳ ಬಗ್ಗೆ ಆಮೇಲೆ. ಎವೆರೆಸ್ಟ್ ನೆನಪು ಸ್ವಲ್ಪ ಮಸುಕಾಗಲು ಶುರುವಾಗಿದೆ. ಜೇವನವೇ ಹೀಗೆ. ಎವೆರೆಸ್ಟ್ ಹೋಯ್ತು ಹರ್-ಕಿ-ದೂನ್ ಬಂತು ಡುಂ ಡುಂ ಡುಂ... ಆದರೆ ನೆನಪುಗಳೆಂದೂ ಕಹಿಯಲ್ಲ ! ವರ್ಷಗಳು ಉರುಳಿದಂತೆ ಅವುಗಳ ಸಿಹಿಯೂ ಹೆಚ್ಚುತ್ತದೆ.

ಸರಿ, ಮತ್ತೆ ಈಗ ಎವೆರೆಸ್ಟ್ ಕಡೆಗೆ....

ನಾವು ಲೋಬು ಚೆಯನ್ನು ಬೆಳಿಗ್ಗೆ ೭:೦೦ ಗಂಟೆಗೆ ಬಿಟ್ಟು ಹೊರಟೆವು. ಇಲ್ಲಿ ಬಿಸಿ ನೀರು ಇಲ್ಲ. ಪ್ರತಿ ಕೋಣೆಗೂ ಒಂದೊಂದೇ ಮೋಂಬತ್ತಿ. ಎಲ್ಲವೂ ದುಬಾರಿ. ಬೇಗ ಬೇಗನೆ ಗಂಜಿಯನ್ನು ತಿಂದು, ಹಿಮದಲ್ಲೇ ನಡುಯುತ್ತಾ ಹೊರಟೆವು. ತುಂಬ ಥಂಡಿ ಇದ್ದುದ್ದರಿಂದ ವಸುಮತಿಯವರು ನಮ್ಮ ದಪ್ಪನಾದ ಜಾಕೆಟ್ಟುಗಳನ್ನು ಹಾಕಿಕೊಳ್ಳಲು ಅನುಮತಿ ಕೊಟ್ಟಿದ್ದರು. ನಮ್ಮ ಮಫ್ಲರುಗಳಿಂದ ನಮ್ಮ ಮೂಗು ಕಿವಿಗಳನ್ನೆಲ್ಲಾ ಬಿಗಿಯಾಗಿ ಮುಚ್ಚಿಕೊಂಡಿದ್ದೆವು. ಆದರೆ ಸ್ವಲ್ಪ ದೂರ ಹೋದಂತೆ, ಹಿಮ ಸುರಿಯುವುದು ನಿಂತಿತಲ್ಲದೆ, ಶೆಖೆಯಿಂದ ಎಲ್ಲವನ್ನು ಕಿತ್ತೆಸೆದು ನಮ್ಮ ಎಂದಿನ ಉಡುಗೆಗೆ ಬಂದೆವು. ದಾರಿ ನಿಧಾನವಾದ ಏರು. ಖುಂಬು ಗ್ಲೆಶಿಯರ್ ಪಕ್ಕದಲ್ಲೇ ನಡೆದೆವು. ಒಂದು ಮನಸ್ಸು ’ನನಗೇನಾದರು ಆಗುತ್ತಿದೆಯೇನು” ಅಂತ ಗುಮಾನಿ ಪಡುತ್ತಿದ್ದರೆ, ಇನ್ನೊಂದು ’ಇದೆಲ್ಲ ನಿನ್ನ ಭ್ರಮೆ ಅಷ್ಟೆ” ಅನ್ನುತ್ತಿತ್ತು. ಒಂದು ತಿರುವಿನಲ್ಲಿ ದೂರದ ಎವೆರೆಸ್ಟ್ ಬೇಸ್ ಕ್ಯಾಂಪಿನ ಹಳದಿ, ಕೆಂಪು ಗುಡಾರಗಳು ಕಂಡವು. ಗೊರಕ್ ಶೆಪ್ ತೀರಹತ್ತಿರದಲ್ಲಿದ್ದಾಗ, ಒಂದು ಇಳಿಜಾರನ್ನು ಇಳಿಯಬೇಕು. ಅಲ್ಲಿ, ನಂದಿನಿಯವರು "ಈಶಾ, are you okey ?" ಎಂದ ಹಾಗಾಯಿತು. ’ಅರೆ, ಇದೇನಿದು, ತಲೆಯೊಳಗೆ ಧ್ವನಿಗಳೂ ಕೇಳಲು ಶುರುವಾಗಿದೆಯಲ್ಲ” ಅಂದು ಕೊಳ್ಳುತ್ತಾ ಅವರೆಡೆಗೆ ನೋಡಿದೆ. ಸಧ್ಯಕ್ಕೆ ಅವರು ನಿಜವಾಗಿಯೂ ಕೇಳಿದ್ದರು. ನಾನು ಸ್ವಲ್ಪ ಕುಡಿದವರಂತೆ ನೆಡೆಯುತ್ತಿದ್ದನೆಂದೂ, ಹಾಗಾಗಿ ಏನು ಸಮಾಚಾರವೆಂದು ಕೇಳಿದ್ದರು. ನನಗೂ ನನ್ನ ಸುತ್ತ ಇದ್ದ ಪರ್ವತಗಳು ಅಲುಗಿದ್ದಂತೆ ಆಗಿದ್ದು ನಿಜ. ಸರಿ, ಇನ್ನು ಇವಕ್ಕೆಲ್ಲಾ ಸಮಯವಿಲ್ಲ, ಗುರಿ ಮುಟ್ಟುವವರೆಗೂ ಬಾಯಿ ಮುಚ್ಚಿಕೊಂಡು ಸರಿಯಿರುವುದು ವಾಸಿ ಅಂದುಕೊಂಡೆ.

ಅಂತೂ ಹತ್ತಿರದಲ್ಲಿ ಗೋರಕ್ ಶೆಪ್

ನಾವು ೧:೩೦ ಮಧ್ಯಾನಕ್ಕೆ ಗೊರಕ್ ಶೆಪ್ ತಲುಪಿದೆವು. ಅದು ಬಹಳ ಸುಂದರವಾದ ಲಾಡ್ಜ್. ಆದರಲ್ಲಿ ಬಹಳ ಕೋಣೆಗಳಿದ್ದವು. ಬಹಳ ಜನ ವಿದೇಶಿಯರಿದ್ದರು. ಇಬ್ಬಿಬ್ಬರಿಗೆ ಒಂದರಂತೆ ಕೋಣೆಗಳನ್ನು ಕೊಟ್ಟರು. ನಮಗೆ ಕೇವಲ ಒಂದು ಗಂಟೆಗಳ ಕಾಲ ಬಿಡುವು ಇತ್ತು. ನಾವು ಹುರಿದ ಆಲೂಗೆಡ್ಡೆಗಳನ್ನು, ಚೌಮೆನ್ ಹಾಗು ಹಾಟ್ ಚಾಕೊಲೇಟ್ ಕುಡಿದು ಇಬಿಸಿ ಕಡೆಗೆ ಹೊರಟೆವು. ವಸುಮತಿಯವರು ಯಾಕೊ ಬಹಳ ಅವಸರದಲ್ಲಿ ಇದ್ದುದ್ದಲ್ಲದೆ ವ್ಯಾಕುಲಗೊಂಡಿದ್ದರು. ಮಾತುಮಾತಿಗೆ ಸಿಡುಕುತ್ತಿದ್ದರು. ಇಂತಹ ಸಮಯದಲ್ಲಿ ಲೀಡರ್ ಗಳಿಗೆ ಹೇಗಾಗುತ್ತದೆಯೊ ನನಗೆ ಗೊತ್ತಿಲ್ಲ. ಆದರೆ ಇಂತಹ ಸಮಯದಲ್ಲೇ ಲೀಡರ್ ಗಳ ಸಾಮರ್ಥ್ಯ ಕಾಣಿಸಿಕೊಳ್ಳುವುದು. ವಸುಮತಿಯವರಿಗೆ ಎಲ್ಲರ ಮೇಲೆ ಸಿಟ್ಟಾಗಿತ್ತು. ನಾನು, ಜ್ಞಾನಿ ಹಾಗು ದೀಪಿಕಾ ಬಿಟ್ಟರೆ ಬೇರೆ ಯಾರೂ ಇನ್ನೂ ವಸುಮತಿಯವರ ಸಾಲಿನಲ್ಲಿ ಹಾಜರಿರಲಿಲ್ಲ. ಲಾಡ್ಜ್ ಪಕ್ಕದಲ್ಲೇ ಇದ್ದ ಎರಡು ಫುಟ್ ಬಾಲ್ ಮೈದಾನದಷ್ಟು ಅಗಲವಾದ ಜಾಗನ್ನು ದಾಟಿ ಕಾಲಾಪತ್ತರ್ ಪರ್ವತದ ಪಕ್ಕದಿಂದ ಹಾದು ಮುಂದೆ ಹೋಗಬೇಕಿತ್ತು. ನಾವು ನಮ್ಮ ಚೀಲಗಳನ್ನು ಲಾಡ್ಜಿನಲ್ಲೇ ಬಿಟ್ಟು ಬರಿ ಕೈಯಲ್ಲಿ ಹೊರಟಿದ್ದೆವು. ನಮ್ಮ ಗೈಡ್ ಖಾಜಿ ನಮ್ಮ ಜೊತೆ ಇರಲ್ಲಿಲ್ಲ. ಅವನು ಮೋಹನನ್ನು ಕ್ಷೇಮವಾಗಿ ಕೆಳಗಿಳಿಸಲು ಹೋಗಿದ್ದ.ಹಾಗಾಗಿ ವಸುಮತಿಯವರೇ ತಮಗೆ ತಿಳಿದ ಮಟ್ಟಿಗಿನ ದಾರಿಯಲ್ಲಿ ನಮ್ಮ ಪೋರ್ಟರ್ ಗಳ ಸಹಾಯದಿಂದ ಮುಂದುವರಿಯುತ್ತಿದ್ದರು.

ಬೇಸ್ ಕ್ಯಾಂಪ್ ದಾರಿ
ಬೇಸ್ ಕ್ಯಾಂಪ್ ದಾರಿ
ಬೇಸ್ ಕ್ಯಾಂಪ್ ದಾರಿ

ಅಲ್ಲಿಂದ ಬೇಸ್ ಕ್ಯಾಂಪ್ ವರೆಗೂ ಬರಿ ಕಲ್ಲುಬಂಡೆಗಳ ದಾರಿ, ಎಲ್ಲಿ ಹೋಗಬೇಕೆಂದೇ ತಿಳಿಯುವುದಿಲ್ಲ. ನಾವು ಬೇಗನೆ, ಸಂಜೆಯಾಗುವುದರೊಳಗೆ ಹಿಂತಿರುಗಬೇಕಿತ್ತು. ನಮ್ಮ ಟಾರ್ಚ್ ಗಳನ್ನೂ ತೆಗೆದುಕೊಂಡಿದ್ದೆವು. ಹಿಮ ಬಿದ್ದರೊಂತೂ ಇದ್ದ ದಾರಿಯೂ ಕಾಣದೆ ಕೆಲಸ ಕೆಟ್ಟಂತೆಯೇ. ಎಲ್ಲರೂ ಬೇಗ ಬೇಗನೆ ನೆಡೆಯುತ್ತಿದ್ದರು. ಜ್ಞಾನಿಗೆ ಮಧ್ಯದಲ್ಲಿ ಬಹಳ ಬಳಲಿಕೆಯಾಗಿ, ನಾವು ಒಂದು ಚಿಕ್ಕ ಬಿಡುವು ತೆಗೆದುಕೊಳ್ಳಬಹುದೇ ಎಂದು ವಸುಮತಿಯವರನ್ನು ಕೇಳಿದ. ಆಗ ವಸುಮತಿಯವರು, ಕೂಗಾಡಿ, ಸಾಲಿನಲ್ಲಿ ಯಾರು ಸ್ವಲ್ಪ ಜಾಸ್ತಿನೇ ಸುಸ್ತಾಗಿದ್ದರೋ ಅವರನ್ನೆಲ್ಲಾ ಒಂದು ಪ್ರತ್ಯೇಕವಾದ ಸಾಲಿನಲ್ಲಿ ಹಾಕಿ, ’ನನಗೆ ಸಾಧ್ಯವಾದಷ್ಟು ಜನರನ್ನು ಇಬಿಸಿ ತಲುಪಿಸಬೇಕಾಗಿರುವುದು ನನ್ನ ಕರ್ತವ್ಯ. ಆದ್ದರಿಂದ ನಿಮಗೆ ಆದರೆ ಬರುತ್ತಾಯಿರಿ. ಈಲ್ಲದಿದ್ದಲ್ಲಿ, ಎಂತಿದ್ದರೂ ನಾವು ಉಳಿದವರು ಇದೇ ದಾರಿಯಲ್ಲಿ ಹಿಂತಿರುಗಿ ಬರಬೇಕು, ಆಗ ನಮ್ಮೊಡನೆ ನೀವು ಹಿಂತಿರುಗ ಬಹುದು’ ಎಂದರು. ಈ ವಿಶಿಷ್ಟವಾದ ಸಾಲಿನಲ್ಲಿ ಜ್ಞಾನಿ, ಲಖನ್, ಶೀಲಾ ಮತ್ತೆ ಕೆಲವರಿದ್ದರು. ಇದರಿಂದಾಗಿ ಎಲ್ಲರಿಗೂ ಬಹಳ ಬೇಜಾರಾಯಿತು. ಇಲ್ಲಿಯವರೆಗೂ ಎಲ್ಲರೂ ಒಂದೇ ಗುಂಪಿನವರಾಗಿದ್ದೆವು. ಈಗ ಒಂದು Achievers ಮತ್ತೊಂದು Failures ತರಹದ ಗುಂಪುಗಳನ್ನು ಪ್ರಾರಂಭಿಸಿದಂತಾಯಿತು. ಇಷ್ಟಾಗಿ ಇದು ಕೇವಲ ಇಬಿಸಿ ಟ್ರೆಕ್ ಅಷ್ಟೆ, ನಾವೇನೂ ಎವೆರೆಸ್ಟ್ ಪರ್ವತ ಹತ್ತುತ್ತಿಲ್ಲವಲ್ಲ. ಯಾರೂ ಏನೂ ಮಾತನಾಡಲಿಲ್ಲ. ಹಾಗೆ ಮುಂದುವರೆದೆವು. ದಾರಿಯಲ್ಲಿ ನಮಗೆ ಇಬಿಸಿಗೆ ಹೋಗಿ ಹಿಂತಿರುಗಿ ಬರುತ್ತಿದ್ದ ಕೆಲವು ಗುಂಪುಗಳು ಸಿಕ್ಕವು. ಅವರೆಲ್ಲಾ, ಕ್ಯಾಂಪಿನಲ್ಲಿ ಒಂದು ಬೇಕರಿಯ ಟೆಂಟ್ ಇದೆಯೆಂದು ಅದರಲ್ಲಿ ಸೊಗಸಾದ ಸೇಬಿನ ಪೈಗಳು ಸಿಗುತ್ತವೆಂದೂ, ನಾವು ಅವುಗಳನ್ನು ರುಚಿ ನೋಡದೆ ಹಿಂತಿರುಗಬಾರದೆಂದು ಹೇಳಿದರು.

ಇಬಿಸಿಯಲ್ಲಿ ಬೇಕರಿ !

ಖುಂಬು ಗ್ಲೇಶಿಯರ್

ಈಗ ನಾವು ಗಟ್ಟಿಯಾದ ಖುಂಬು ಗ್ಲೇಶಿಯರ್ ಮೇಲೇ ನಡೆಯುತಿದ್ದೆವು. ಅದರ ಮೇಲೆ ದೊಡ್ಡದಾದ ಕಲ್ಲು ಬಂಡೆಗಳು ಬಿದ್ದಿದ್ದುದ್ದರಿಂದ ಹಾಗೆ ಅನ್ನಿಸುತ್ತಿರಲಿಲ್ಲ. ಆಗ ಈಗ, ದೂರದಲ್ಲೆಲ್ಲೋ ಗುಡು ಗುಡು ಗುಡುಗು, ಹಾಗು ಠಳಾರ್ ಅಂತ ಶಬ್ದ. ಅದು ಗ್ಲೇಶಿಯರ್ ಐಸ್ ಒಡೆಯುವ ಶಬ್ದವೆಂದು ವಸುಮತಿಯವರು ಹೇಳಿದರು. ನಾವು ಅಲ್ಲಿ ಇಂಡಿಯನ್ ಆರ್ಮಿ ಅವರ ಟೆಂಟಿಗೆ ಹೋಗುವವರಿದ್ದೆವು. ಇಂಡಿಯನ್ ಆರ್ಮಿಯ ಒಂದು ಗುಂಪು ಎವೆರೆಸ್ಟ್ ಹತ್ತಲು ಪ್ರಯತ್ನಿಸುತ್ತಿದ್ದರು. ಅವರ ನಾಯಕರು ವಸುಮತಿಯವರ ಕುಟುಂಬದ ಸ್ನೇಹಿತರು. ಹೀಗೆ ನಾವು ನಡೆಯುತ್ತಿರಬೇಕಾದರೆ (ನಾನು ವಸುಮತಿಯವರ ಸಾಲಿನಲ್ಲಿ ಮುಂದಿಂದ ಮೂರನೆಯವಳಾಗಿದ್ದೆ), ಯಾರೋ ಸರಸರನೆ ಒಂದೇ ಕ್ಷಣದಲ್ಲಿ ನಮ್ಮನ್ನು ಹಾದು ಹೋದರು. ಅದು ಜ್ಞಾನಿ ! ವಸುಮತಿಯವರು ’ನಿಲ್ಲು’ ಎಂದು ಹೇಳಿದ್ದುದ್ದನ್ನೂ ಅವನು ಕೇಳಿಸಿಕೊಳ್ಳದೆ ಕ್ಷಣ ಮಾತ್ರದಲ್ಲಿ ಮಾಯವಾದ. ನನ್ನ ಮುಖದಲ್ಲಿ ಒಂದು ಸಣ್ಣ ನಗೆ. ಇನ್ನೂ ಸ್ವಲ್ಪ ಸಮಯದಲ್ಲಿ ನಾವು ಬೇಸ್ ಕ್ಯಾಂಪ್ ತಲುಪಿದೆವು.

ಇಬಿಸಿಯ ಮೊದಲ ನೋಟ

ಇದೇ ಇಬಿಸಿ
ಅಡ್ವಾನ್ಸ್ ಬೇಸ್ ಕ್ಯಾಂಪಿಗೆ ಖುಂಬು ಗ್ಲೇಶಿಯರ್ ದಾಟುವ ದಾರಿ

ಎಲ್ಲರಲ್ಲೂ ಉತ್ಸಾಹ ತುಂಳುಕುತ್ತಿತ್ತು. ಸಂದೀಪನ ಮುಖದಲ್ಲಿ ಕಣ್ಣೀರು. ಅದೊಂದು ಮಹದಾನಂದ. ನಾನು ಪ್ರಿಯ ಒಟ್ಟಿಗೆ ಒಂದು ಫೋಟೋ ತೆಗೆಸಿಕೊಂದೆವು, ಅಂತೂ ಇಲ್ಲಿಗೂ ಬಂದೆವು. ಎವೆರೆಸ್ಟ್ ನಮ್ಮ ಜೀವನದಲ್ಲಿ ಬರುತ್ತದೆಂದು ನೆನಸಿರಲಿಲ್ಲ. ವಸುಮತಿಯವರು, ಅವರ ಕುಟುಂಬದೊಡನೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ’ಈಗ ನಮ್ಮ ಆರ್ಮಿ ಟೆಂಟ್ ಹುಡುಕಬೇಕಲ್ಲ” ಅಂತ ವಸುಮತಿಯವರು ಹೇಳಿಕೊಳ್ಳುತ್ತಿದ್ದರು. ನಾನು ’ಅಯ್ಯೊ, ಈಗ ಜ್ಞಾನಿಯನ್ನು ಹುಡುಕಬೇಕಲ್ಲ’ ಎಂದು ಕೊಂಡೆ. ಅವನನ್ನು ಹುಡುಕಲು ಕಂಡಿತವಾಗಿಯೂ ವಸುಮತಿಯವರ ಸಹಾಯ ನಿರೀಕ್ಷಿಸುವಂತಿರಲಿಲ್ಲ. ನಾವು ಬೇಗ ಹೊರಡುವರಿದ್ದು, ಸಂಜೆಯಾದರೆ ಇವನನ್ನು ಎಲ್ಲಿ ಹುಡುಕುವುದು ? ಅಯ್ಯೊ, ರಾಮ. ಅಲ್ಲೆಲಾ ಬರೀ ಪರ್ವತಾರೋಹಿಗಳ ಟೆಂಟುಗಳು. ಬೇರೆ ಬೇರೆ ದೇಶದವರದು. ಬಹು ಪಾಲು ಸೈನ್ಯದವರದ್ದು. ಅಲ್ಲಿ ನಾವು ಎಲ್ಲರೂ ಹೇಳಿದ್ದ ಬೇಕರಿಯನ್ನು ನೋಡಿದೆವು. ಆದರೆ ನಾವು ಬೇಗನೆ ಹಿಂತಿರುಗಿ ಹೋಗಬೇಕಾಗಿದ್ದುದ್ದರಿಂದ ಪೈ ರುಚಿಯನ್ನು ನೋಡುವುದಕ್ಕೆ ಸಮಯವಿರಲಿಲ್ಲ. ನಾವು ಇಂಡಿಯನ್ ಆರ್ಮಿ ಟೆಂಟನ್ನು ಕಂಡುಹಿಡಿದು, ಅದರೊಳಗೆ ಇಣುಕಿದರೆ, ಅಲ್ಲಿ ಜ್ಞಾನಿ ಕಮಾಂಡರ್ ರಾಹುಲ್ ಮಹಾಜನ್ ಅವರೊಡನೆ ಟೀ ಕುಡಿಯುತ್ತಾ ಮಾತಾಡುತ್ತಿದಾನೆ! ವಸುಮತಿಯವರಿಗೆ ಸ್ವಲ್ಪ ಕಸಿವಿಸಿಯಾದಂತೆ ಕಾಣಿಸಿತು. ಜ್ಞಾನಿ ವಸುಮತಿಯವರನ್ನು ಮಹಾಜನ್ ಅವರಿಗೆ ಪರಿಚಯಿಸಿ ಹೊರನಡೆದ.

ಇಂಡಿಯನ್ ಆರ್ಮಿ ಟೆಂಟ್


ವಸುಮತಿಯವರ ಕುಟುಂಬದ ಸ್ನೇಹಿತರು (ಕಮಾಂಡರ್) ಅಲ್ಲಿ ಇರಲಿಲ್ಲ. ಅವರು ಎವೆರೆಸ್ಟ್ ಮೇಲಿನ ನಾಲ್ಕನೇ ಕ್ಯಾಂಪಿನಲ್ಲಿ ಇದ್ದಾರೆಂದು, ಇಂದೋ ನಾಳೆಯೋ ಎವೆರೆಸ್ಟ್ ತುದಿ ತಲುಪಲಿದ್ದಾರೆಂದು ಮಹಾಜನ್ ಅವರು ಹೇಳಿದರು. ನಮಗೆ ಇಂಡಿಯನ್ ಆರ್ಮಿ ಟೀಮಿನವರು ಆದರದಿಂದ ಅವರ ದೊಡ್ಡದಾದ ಊಟದ ಟೆಂಟಿನಲ್ಲಿ ಟೀ, ಬಿಸ್ಕೆಟ್ಟುಗಳು ಮತ್ತಿತರ ತಿನಿಸುಗಳನ್ನು ಕೊಟ್ಟರು. ಅಲ್ಲಿ ಒಂದು ಟಿವಿ ಸಹ ಇತ್ತು ! ಪರ್ವತಾ ರೋಹಿಗಳು ಯಾವ ಜಾಗದಿಂದ ಪರ್ವತ ಹತ್ತಲು ಶುರು ಮಾಡುತ್ತಾರೆಂದು ತೋರಿಸಿದರು. ಆಗ ಮೋಡ ಕವಿದ್ದಿದ್ದುದ್ದರಿಂದ ನಮಗೆ ಅಪಾಯಕಾರಿಯಾದ ಖುಂಬು ಗ್ಲೇಶಿಯರ್ (ಪರ್ವತದಿಂದ ಹಿಮ ಪ್ರಪಾತವಾಗಿ ಗ್ಲೇಶಿಯರ್ ಶುರುವಾಗುವ ಜಾಗ) ಬಿಟ್ಟು ಬೇರೇನೂ ಕಾಣಲಿಲ್ಲ. ಅದನ್ನೇ ಫೋಟೋ ತೆಗೆದುಕೊಂಡೆವು. ಅಲ್ಲಿ ಶರ್ಪಾ ಜನರು ಹಿಮವನ್ನು ಗಟ್ಟಿ ಮಾಡಿ ದಾರಿ ಕಟ್ಟುತ್ತಾರಂತೆ. ಅದಕ್ಕೆ ಟೋಲ್ ಕಟ್ಟಿ ಅಡ್ವಾನ್ಸ್ ಬೇಸ್ ಕ್ಯಾಂಪಿಗೆ ಪರ್ವತಾರೋಹಿಗಳು ಹೋಗುತ್ತಾರಂತೆ. ಹೀಗೆ ಅಲ್ಲೂ ದುಡ್ಡು ಮಾಡುವ ಅವಕಾಶಗಳಿವೆ. ಅಲ್ಲೊಂದು ಅರ್ಧ ಬಿದ್ದು ಹೋಗಿದ್ದ ಹೆಲಿಕಾಪ್ಟರ್ ಇತ್ತು. ಅಲ್ಲಿ ಸರಿಯಾಗಿ ಗಾಳಿ ಇಲ್ಲದಿರುವುದರಿಂದ ಹೆಲಿಕಾಪ್ಟರ್ ಗಳಿಗೆ ಹಾರಲು ಕಷ್ಟ. ಅಲ್ಲಿಂದ ನಾವು ನಾಲ್ಕು ಗಂಟೆಗೆ ಹೊರಡಲು ಶುರುಮಾಡಿದೆವು.

ಇಬಿಸಿ ದಾರಿ

ಇಬಿಸಿ ದಾರಿ

ಹಿಂತಿರುಗಿ ಬರುವಾಗ ದಾರಿ ಸಾಗುತ್ತಲೇ ಇಲ್ಲ ! ಎಷ್ಟು ನಡೆದರೂ ನಮ್ಮ ಲಾಡ್ಜ್ ಕಾಣಿಸುತ್ತಿಲ್ಲ. ಅರೆ ಹೋಗುತ್ತಾ ಇದೆಲ್ಲಾ ದಾಟಿದೆವಾ ? ಎಂದು ಕೊಳ್ಳುವ ಹಾಗೆ ಆಯಿತು. ದಾರಿಯ ಮದ್ಯದಲ್ಲಿ ನಮಗೆ ಖಾಜಿ ಸಿಕ್ಕ. ಅವನು ಮೋಹನನನ್ನು ಸುರಕ್ಷಿತವಾಗಿ ಖಟ್ಮಂಡುವಿಗೆ ತಲುಪಿಸಲಾಯಿತು ಎಂದು ಹೇಳಿದ. ಅವನನ್ನು ಒಂದೊಂದೇ ಕ್ಯಾಂಪ್ ಕೆಳಗಿಳಿಸಲಾಯಿತೆಂದು, ಆದರೆ ಅವನಿಗೆ ಗುಣವಾಗುತ್ತಿರಲಿಲ್ಲವಾದ್ದರಿಂದ, ಫೆರಿಚೆಯಲ್ಲಿ ಹೆಲಿಕಾಪ್ಟರಿನಲ್ಲಿ ಖಟ್ಮಂಡುಗೆ ಆಸ್ಪತ್ರೆಗೆ ದಾಖಲು ಮಾಡಲು ಕಳುಹಿಸಲಾಯಿತೆಂದ. ನಾವು ಗೊರಕ್ ಶೆಪ್ ತಲುಪಿದಾಗ ಕತ್ತಲೆಯಾಗಿತ್ತು. ಒಟ್ಟಿನಲ್ಲಿ ೭ ಗಂಟೆಗಳ ಕಾಲ ಟ್ರೆಕ್ ಮಾಡಿದ್ದೆವು ಅಲ್ಲದೆ ಎಲ್ಲರೂ ಇಬಿಸಿ ತಲುಪಿ ಸುರಕ್ಷಿತವಾಗಿ ಹಿಂತಿರುಗಿದ್ದೆವು.

ಹಿಂತಿರುಗಿ ಬರುವಾಗ ಕಂಡ ಇಬಿಸಿ

ನಾವೆಲ್ಲಾ, ೨ ಕಾಲ್ಚೀಲಗಳು, ಥರ್ಮಲ್ ಬೆಚ್ಚನೆಯ ಪ್ಯಾಂಟುಗಳು, ಎರಡೆರಡು ಜಾಕೆಟ್ಟುಗಳು, ಟೋಪಿ, ಮಫ್ಲರ್ ಮುಂತಾದುವುಗಳನ್ನೆಲ್ಲಾ ಹಾಕಿಕೊಂಡು ಊಟಕ್ಕೆ ಕುಳಿತುಕೊಂಡೆವು. ಉಷ್ಣತೆ ೧೫ ಡಿಗ್ರಿಗಿಂತ ಕೆಳಗಿದ್ದು, ಇನ್ನೂ ಕೆಳಗೆ ಹೋಗುತ್ತಿತ್ತು. ಎಲ್ಲರಿಗೂ ಬಹಳ ಸುಸ್ತಾಗಿತ್ತು ಆದರೂ ಬಹಳ ಸಂತೋಷದಲ್ಲಿದ್ದೆವು. ನಾಳೆ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕಾಲಾಪತ್ತರ್ ಗೆ ಹೋಗಬೇಕಿತ್ತು. ವಸುಮತಿಯವರು ’ಯಾರೆಲ್ಲಾ ಹೋಗುವವರಿದ್ದೀರ’ ಎಂದು ಕೇಳಿದಾಗ ಕೇವಲ ೧೦ ಜನ ಹೊರಡಲು ತಯಾರಿದ್ದರು. ನಾನು, ಸೆಂತಿಲ್, ಸ್ವಪ್ನ, ಸಂದೀಪ್, ನಂದಿನಿ, ನಂದು, ನರೇಶ್, ಡಾ.ಮಾಂಜ, ರೋಶಿನ್, ಪ್ರಿಯ ಮತ್ತು ಲಖನ್. ಮಿಕ್ಕವರೆಲ್ಲಾ ಬಹಳ ಸುಸ್ತಾಗಿದ್ದುದ್ದರಿಂದ ತಾವು ಮಲಗಿ ಸುಧಾರಿಸಿಕೊಳ್ಳುವುದಾಗಿ ಯೋಚಿಸಿದ್ದರು. ಅಲ್ಲದೆ, ಕಾಲಾಪತ್ತರ್ ನಂತರ ಅದೇದಿನ ನಾವು ಹಿಂತಿರುಗಿ ಹೊರಡುವವರಿದ್ದೆವು. ಯಾರಿಗೂ ಸರಿಯಾಗಿ ಹೊದಿಯಲು ಕಂಬಳಿ ಇಲ್ಲದೆ ಪರದಾಟಕ್ಕೆ ಇಟ್ಟುಕೊಂಡಿತು. ಆ ಚಳಿಯಲ್ಲಿ ನಿದ್ದೆಯೇ ಬರುತ್ತಿಲ್ಲ. ಕಿಟಕಿಯಿಂದ ಹೊರಗೆ ಆಕಾಶ ಕಾಣಿಸುತ್ತಿತ್ತು. ಸ್ಪಷ್ಟವಾದ ಆಕಾಶದಲ್ಲಿ ನಕ್ಷತ್ರಗಳು ಮಿನುಗುತಿದ್ದವು. ಓ ಈ ರೀತಿಯೇ ಇದ್ದರೆ ನಾವು ಕಾಲಾಪತ್ತರ್ ಗೆ ಹೋಗುವುದು ನಿಶ್ಚಿತ. ಇದ್ದಕ್ಕಿದ್ದ ಹಾಗೆ ’ಯಾಕಾದರೂ ವಾತಾವರಣ ಚೆನ್ನಾಗಿಯ್ದೆಯೋ, ಇಲ್ಲದ್ದಿದ್ದಲ್ಲಿ ಆ ನೆಪದಿಂದಾಗಿಯಾದರೂ ಹೋಗದೆ ಇರಬಹುದಿತ್ತಲ್ಲವೇ’ ಅಂದುಕೊಂಡೆ. ಆದರೆ ’ಇದೊಂದೇ ಚಾನ್ಸ್, ಆದ್ದರಿಂದ ಅವಕಾಶವನ್ನು ಬಿಡಬಾರದು’ ಎಂದು ಮನ್ನಸ್ಸು ಮಾಡಿ ಮಲಗಲು ಪ್ರಯತ್ನಿಸಿದೆ.

Sunday, March 29, 2009

ಎಂದೂ ಮರೆಯಲಾಗದ ದುಗ್ಲಾ ಏರು ! ಉಸ್ಸಪ್ಪಾ...

ಒಂಬತ್ತನೆಯ ದಿನ (ಮೇ ೧೧, ೨೦೦೮)
ದಿಂಗ್ ಬೋಚೆ (4410 ಮೀ/14464 ಅಡಿ) - ಲೊಬು ಚೆ (4930 ಮೀ/16170 ಅಡಿ)

ನಾವು ಬೆಳಿಗ್ಗೆ ಸುಮಾರು ೭:೦೦ ಗಂಟೆಗೆ ಓಟ್ಸ್ ಗಂಜಿಯನ್ನು ಕುಡಿದು, ಕೊನೆಯ ಬಾರಿಗೆ ಆ ಕುಪ್ರಸಿದ್ದ ಚಾರ್ಪಿಗಳಿಗೆ (ಮೊದಲೇ ವಿವರಿಸಿದ ಟಾಯ್ಲೆಟ್ಟುಗಳಿಗೆ ಚಾರ್ಪಿಗಳೆನ್ನುತ್ತಾರೆ.) ಭೇಟಿ ಕೊಟ್ಟು, ಮುಖ ಕೈಗಳಿಗೆಲ್ಲಾ ಸನ್ ಸ್ಕ್ರ್ರೀನ್ ಲೋಶನ್ ಬಳಿದು ಹೊರಡಲು ಅನುವಾದೆವು.

ದೂರದಲ್ಲಿ, ಹಿಂದೆ ಬಿಟ್ಟ ದಿಂಗ್ ಬೋ ಚೆ

ದುಗ್ಲಾಗೆ ನಮ್ಮ ಪಯಣ

ದಿಂಗ್ ಬೋ ಚೆಯಿಂದ ದುಗ್ಲಾಗೆ ಹೋಗುವ ದಾರಿಯಲ್ಲಿ ಉದ್ದಕ್ಕೂ ದೂರದಲ್ಲಿ ಫೆರಿಚೆ ಊರು ಹಾಗು ಅದಕ್ಕೆ ಹೋಗುವ ದಾರಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಿ ಓಡಾಡುತ್ತಿದ್ದ ಜನಗಳೂ ಸಹ ಇರುವೆಗಳಂತೆ ಕಾಣಿಸುತ್ತಿದ್ದರು. ನಾನು ಹಿಂದೆಯೇ ಹೇಳಿದಂತೆ ಪರ್ವತಗಳ ಹತ್ತಿರ distance is deceptive. ಫೆರಿಚೆ ನಾವು ಹಿಂತಿರುಗಿ ಬರು ದಾರಿಯಲ್ಲಿ ಇತ್ತು. ನಾನು ಹಿಂದೆ ತೋರಿಸಿದ್ದ ನಕ್ಷೆಯಲ್ಲಿ ನೋಡಿ.

ನರೇಶ್ ಬಗ್ಗಿ ಫೆರಿಚೆಯನ್ನು ಗಮನಿಸುತ್ತಿರುವುದು

ಇಲ್ಲಿಯ ನಂತರದ ನೆನೆಪಿಟ್ಟುಕೊಳ್ಳುವಂತಹ ಜಾಗವೆಂದರೆ ದುಗ್ಲಾ ಏರು. ನಾವು ೧:೩೦ ಕ್ಕೆ ದುಗ್ಲಾ ತಲುಪಿದೆವು. ಇದರ ಪ್ರಾರಂಭದಲ್ಲಿ ಒಂದು ಟಿ ಅಂಗಡಿ ಇದೆ. ಅದರ ಹೆಸರು ಯಾಕ್ ಲಾಡ್ಜ್. ಅಲ್ಲಿ ನಾವು ಒಂದು ಅತಿ ದೊಡ್ಡ ತಾಲಿಯಲ್ಲಿ ನೂಡಲ್ಸ್ ಸೂಪು, ಹಾಗೂ ಬಿಸಿ ನಿಂಬೆ ರಸವನ್ನು ಕುಡಿದೆವು. ಸೂಪಿಗೆ ಎಷ್ಟು ಬೆಳ್ಳುಳ್ಳಿ ಹಾಕಿದ್ದರೆಂದರೆ, ನಕ್ಕಿದರೆ, ತೇಗಿದರೆ, ಬಾಯಿಬಿಟ್ಟರೆ ಬೆಳ್ಳುಳ್ಳಿ ! ಸಾಕಾಗಿ ಹೋಯಿತು. ಆದರೆ ಆಲ್ಟಿಟ್ಯುಡ್ ಸಿಕ್ನೆಸ್ ಗೆ ಇದು ಬಹಳ ಒಳ್ಳೆಯದೆಂದು ಹೇಳಿಕೊಂಡು ಅನುಸರಿಸಿಕೊಂಡೆವು. ಆ ಲಾಡ್ಜ್ ನ ಮೇಜುಗಳು ದುಗ್ಲಾ ಏರಿಗೆ ಮುಖಮಾಡಿ ಇವೆ. ಹಾಗಾಗಿ ಯಾರು ಎಲ್ಲಿ ಹತ್ತುತ್ತಾ ಇದ್ದಾರೆ, ಯಾರು ಬೇಗ ಬೇಗ ಹತ್ತುತ್ತಾ ಇದ್ದಾರೆ, ಯಾರಿಗೆ ತ್ರಾಣ ಇಲ್ಲದೆ ಲಾಟ್ರಿ ಹೊಡೆಯುತ್ತ ಇದ್ದಾರೆ ಎಂದು ಚೆನ್ನಾಗಿ ಕಾಣುತ್ತಿತ್ತು. ನಾವು ನಮ್ಮ ಮುಂದಿರುವ ಕಷ್ಟದ ಕೆಲಸವನ್ನು ಯೋಚಿಸಿಕೊಳ್ಳುತ್ತಾ, ಇನ್ನೊಂದು ಚೂರು ಹೊತ್ತು ಇಲ್ಲೇ ಕುಳಿತುಕೊಳ್ಳುವ ಎಂದು ಸೋಮಾರಿಗಳಂತೆ ಇದ್ದು ವಸುಮತಿಯವರಿಂದ ಬೈಸಿಕೊಂಡು ಎದ್ದು ಹೊರಟೆವು.

ದೂರದಲ್ಲಿರುವ ನೀಲಿ ಹೆಂಚಿನ ಮನೆ ಯಾಕ್ ಲಾಡ್ಜ್


ಮತ್ತೂ ದೂರದಿಂದ ಯಾಕ್ ಲಾಡ್ಜ್ (ನೀಲಿ ಚುಕ್ಕೆ!)

ದುಗ್ಲಾದಲ್ಲಿ ಕೇವಲ ಎರಡು ಲಾಡ್ಜ್ ಇವೆ. ಖುಂಬು ಗ್ಲೇಶಿಯರ್ ದುಗ್ಲಾ ಹತ್ತಿರಲ್ಲಿ ಕೊನೆಗೊಳ್ಳುತ್ತದೆ.ಇಲ್ಲಿ ಸುತ್ತಾ ಮುತ್ತಾ ಯಾರೂ ಕಾಣಿಸುವುದ್ದಿಲ್ಲ. ದಿಂಗ್ ಬೋ ಚೆಯಿಂದ ಮುಂದಕ್ಕೆ ಮರಗಳು ಗಿಡಗಳು ಕಾಣಸಿಗುವುದಿಲ್ಲ. ಬರೀ ತಣ್ಣಗೆ ಕಲ್ಲು ಬಂಡೆಗಳಿರುವ ಬರಡು ಭೂಮಿ. ದುಗ್ಲ ಹತ್ತಿರದಿಂದಲೇ ಚೊ ಲಾ ಪಾಸ್ ಮುಖಾಂತ ಗೋಕಿಯೊ ಸರೋವರಕ್ಕೆ ದಾರಿ ಶುರುವಾಗುತ್ತದೆ. ಏವೆರೆಸ್ಟ್ ಗೆ ಹೀಗೂ ಹೋಗಬಹುದು. ಆದರೆ ಅದು ಬಹಳ ಸುತ್ತು ಬಳಸು ಹಾಗು ಕಷ್ಟಕರವಾದ ದಾರಿ. ದುಗ್ಲಾ ಏರು ಹತ್ತಿದ ನಂತರ ಸಿಗುವುದು ಎವೆರೆಸ್ಟ್ ಗಾಗಿ ಪ್ರಾಣ ಕೊಟ್ಟವರಿಗಾಗಿ (ಶರ್ಪಾಗಳು ಮತ್ತಿತರು) ಮಾಡಿರುವ ಸ್ಮಾರಕಗಳು. ಕೆಲವಕ್ಕೆ ಹೆಸರಿನ ಫಲಕಗಳನ್ನು ಹಾಕಿರುವುದರಿಂದ ನಾವು ಕೇಳಿದ್ದ ಕೆಲವು ಸುಪ್ರಸಿದ್ದ ಪರ್ವತಾರೋಹಿಗಳನ್ನು ನೆನಪಿಸಿಕೊಂಡೆವು. ಅವುಗಳಲ್ಲಿ ಬಹಳಷ್ಟು, ಕಲ್ಲುಗಳನ್ನು ಲಗೋರಿ ಆಟಕ್ಕೆ ಜೋಡಿಸುವಂತೆ ಜೋಡಿಸಿರುತ್ತಾರೆ. ಅಲ್ಲಿ ಲಖನ್ ತನಗಾಗಿ ಒಂದು ಸಣ್ಣ ಸ್ಮಾರಕ ಮಾಡಿಕೊಂಡ. ಸ್ಮಾರಕವೇನೋ ಮಾಡಿಕೊಂಡಾಯಿತು ಇನ್ನು ಎವೆರೆಸ್ಟ್ ಹತ್ತಬೇಕಷ್ಟೆ ಅಂತ ಅವನ ಅನಿಸಿಕೆ !

ಪ್ರಾಣ ಕೊಟ್ಟವರಿಗಾಗಿ ಸ್ಮಾರಕಗಳು

ನಾವು ಖುಂಬು ಗ್ಲೇಶಿಯರ್ ಕೊನೆಯ ಭಾಗದಗುಂಟ (terminal moraine) ನಡೆಯುತ್ತಾ ಹೋಗುತ್ತಿದ್ದಂತೆ ನಮಗೆ ಹಿಮಾಲಯದ ಹಲವಾರು ಪ್ರಸಿದ್ದ ಪರ್ವತಗಳು ಕಾಣಸಿಗುತ್ತವೆ. ಆಗ ಈಗ ತಿರುವಿನಲ್ಲಿ ಮೌಂಟ್ ಎವೆರೆಸ್ಟ್ ಕೂಡ ಕಾಣಿಸಿಕೊಳ್ಳುತ್ತಿತ್ತು. ಅದೆಷ್ಟು ಎತ್ತರದಲ್ಲಿ ಇದೆಯೆಂದರೆ ಅದರ ತುಟ್ತತುದಿಯ ಸುತ್ತ ಯಾವಾಗಲೂ ಹಿಮ (plume) ಮುಚ್ಚಿರುತ್ತಿತ್ತು. ನಮಗೆ ಮೊದಲ ಸಲ ಕಾಲಾ ಪತ್ತರ್ ಕಾಣಿಸಿಕೊಂಡಾಗ ಬಹಳ ಬೇಸರವಾಯಿತು. ಅದೊಂದು ಕರಿಯ ದಿಬ್ಬ ಅಥವಾ ಗುಬಟೆ ಅಷ್ಟೆ. ಅದರ ಹಿಂದೆ ಮುಂದೆ ಸುಂದರವಾದ ಅಷ್ಟೇನು ಎತ್ತರ ಇಲ್ಲದಂತಹ ಪರ್ವತಗಳು ಇದ್ದುವು.

ಎಡಗಡೆಯಲ್ಲಿ ಕಾಣುವ ಕರಿ ದಿಬ್ಬವೇ ಕಾಲಾಪತ್ತರ್ !

ಅದರ ಹಿಂದೆ ಪುಮೊರಿ ’ಓ ಅದನ್ನೇ ಹತ್ತಬಹುದಿತ್ತಲ್ಲವೇ’ ಎಂಬಂತೆ ಕಾಣುತ್ತಿತ್ತು. ಆದರೆ ನಾವು ಕಾಲಾ ಪತ್ತರ್ ಹತ್ತುವಾಗ ಸತ್ತೇಹೋದೆವೆನ್ನಿಸಿ, ’ಇದೇ ಇಷ್ಟು ಅಸಾಧ್ಯಾವಾದರೆ ಇನ್ನು ಪುಮೋರಿ ಹೇಗಿರಬಹುದು’ ಎಂದುಕೊಂಡೆವು. ಇನ್ನು ಮೌಂಟ್ ಎವೆರೆಸ್ಟ್ ಹೇಗಿರಬಹುದು !

ನಾವು ಲೋಬುಚೆ ತಲುಪಿದಾಗ ೧:೩೦ ಮಧ್ಯಾನ. ಕೊರೆಯುವ ಚಳಿ. ಊಟವೆಲ್ಲಾ ಆದ ಮೇಲೆ, ನಾವು ಆಟವಾಡುತ್ತಾ ಕುಳಿತಿರಬೇಕಾದರೆ, ನೋಡ ನೋಡುತ್ತಿದ್ದಂತೆ ಹೊರಗೆ ಹಿಮ ಬೀಳಲು ಶುರುವಾಯಿತು. ಎಲ್ಲೆಲ್ಲೂ ಬಿಳಿ ಮರಳಿನಂತೆ.


ಎಲ್ಲೆಲ್ಲೂ ಹಿಮ


ನಾವೆಲ್ಲಾ ನಮ್ಮ ಬೆಚ್ಚನೆಯ ಕೈ ಚೀಲಗಳು ಹಾಗು ಬಾಲಕ್ಲಾವ (ಕಿವಿ ಮುಚ್ಚುವ ಬೆಚ್ಚನೆಯ ಟೋಪಿ) ಮತ್ತಿತರೆ ಬಟ್ಟೆಗಳನ್ನು ಹಾಕಿಕೊಂಡು ಹೊರ ನಡೆದೆವು. ಹೊರಗೆ ಹಿಮದ ಚೆಂಡುಗಳನ್ನು ಒಬ್ಬರಿಗೆ ಒಬ್ಬರು ಹೊಡೆದುಕೋಂಡು ಆಟವಾಡಿದೆವು. ನಾನೊಂದು ಚಿಕ್ಕ ಹಿಮಮಾನವನನ್ನು ಮಾಡಿದೆ. ನನ್ನ ಜೀವಮಾನದಲ್ಲಿ ಮೊದಲನೆಯಸಲ ಹೀಗೆ ಹಿಮದಲ್ಲಿ ಆಟವಾಡಿದ್ದು ! ಅದು ಹಿಮಾಲಯದ ತುದಿಯಲ್ಲಿ (almost)! ಇಲ್ಲಿ ಬರಿ ಮೋಂಬತ್ತಿ ಬೆಳಕು. ಹಾಗು ಕುಡಿಯುವ ನೀರಿಗೆ ಲೀಟರ್ ಗೆ ೩೫೦/- ನೇಪಾಲಿಯನ್ ರೂಪಾಯಿಗಳು. ಚಳಿ ಜಾಸ್ತಿಯಾಯಿತು. ನಾವೆಲ್ಲಾ ನಮ್ಮ ಎಲ್ಲಾ ಬೆಚ್ಚನೆಯ ಬಟ್ಟೆಗಳನ್ನು ತೊಟ್ಟೆವು. ನಮ್ಮ ಹೋಟೆಲ್ ಮಾಲೀಕನಿಗೆ ನಮಗೆಲ್ಲಾ ನೀರನ್ನು ಬಿಟ್ಟಿಯಾಗಿ ಕೊಡಬೇಕೆಂದು ವಸುಮತಿಯವರು ಪರಿಪರಿಯಾಗಿ ಕೇಳಿಕೊಂಡರು. ಅವನು ಹಾಗೂ ಹೀಗೂ ಎನೇನೊ ಪ್ರಯತ್ನಿಸಿ, ನಂತರ, ನಾವೆಲ್ಲರೂ ಕುಣಿದರೆ ನಮಗೆ niirusiqqabahudend. ಅವನು ದೊಡ್ಡ ತಪ್ಪು ಮಾಡಿದ್ದ. ನಾವೆಲ್ಲರೂ ಆಮಂತ್ರಣವಿಲ್ಲದೇ ಕುಣಿಯುವವರು, ಇನ್ನು ನೀರಿಗಾಗಿ ಇದೂ ಒಂದು ಹೋರಾಟವೇ ? ನಿಲ್ಲಿಸಿ ಎನ್ನುವವರೆಗೆ ಕುಣಿದೆವು.


೧೬,೧೭೦ ಅಡಿ ಎತ್ತರದಲ್ಲಿ ಬುಖಾರಿ ಎದುರಿಗೆ ನಮ್ಮ ಕುಣಿತ !

ಬಗೆ ಬಗೆಯಾದ ಹಾಡುಗಳಿಗೆ ತರತರವಾದ ನೃತ್ಯಗಳನ್ನು ಮಾಡಿದೆವು. ಆಗ ಅಲ್ಲಿಗೆ ಇಬ್ಬರು ಗಂಡ ಹೆಂಡತಿ ಹಾಗು ಅವರ ಪೊರ್ಟರ್ ಬಂದರು. ಪೊರ್ಟರ್ ಗೆ ಹುಶಾರು ಇರಲಿಲ್ಲ. ಆಲ್ಟಿಟ್ಯುಡ್ ಸಿಕ್ನೆಸ್ ಇಂದ ತೊಳಲುತ್ತಿದ್ದ. ಬಹಳ ಜ್ವರ ಇತ್ತು. ಆಗ ಹೋಟಲಿನ ಮಾಲೀಕ ನಮಕೆ ಬಿಟ್ಟಿ ನೀರು ಕೊಡುವುದಾಗಿಯೂ, ನಾವು ಹಾಡುವುದನ್ನು ನಿಲ್ಲಿಸಿ ಸುಮ್ಮನಾಗಬೇಕೆಂದು ಹೇಳಿದ. ಆ ಎರಡು ದಂಪತಿಗಳಿಗೆ ಹಿಂದಿ ಬರುತ್ತಿರಲ್ಲಿಲ್ಲವಾದ್ದರಿಂದ ಅವರು ವಸುಮತಿಯವರಿಗೆ ಮಾಲೀಕನಿಗೆ ಪೊರ್ಟರ್ ನ ಎಲ್ಲ ಕರ್ಚು ವೆಚ್ಚಗಳನ್ನು ಅವರೆ ಭರಿಸುವುದಾಗಿಯೂ, ಅವನನ್ನು ಕುದುರೆಯ ಮೇಲೆ ಕೆಳಗೆ ಸಾಗಿಸಬೇಕೆಂದು ತಿಳಿಸುವಂತೆ ಕೇಳಿಕೊಂಡರು. ಇದು ನಮಗೆ ಆಲ್ಟಿಟ್ಯುಡ್ ಸಿಕ್ನೆಸ್ ಅನ್ನು ಮತ್ತೂ ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.ನಾವು ನಾಳೆ ಗೋರಕ್ ಶೆಪ್ ತಲುಪಿ ನಂತರ ಅದೇ ಮಧ್ಯಾನ ಬೇಸ್ ಕ್ಯಾಂಪಿಗೂ ಹೋಗಬೇಕಿತ್ತು. ಎಲ್ಲರಿಗೂ ಏನೋ ಒಂದು ತರದ ದಿಗಿಲು, ಆತುರ, ಕಳವಳ, ಕಾತರತೆ. ಎಲ್ಲರ ಮನದಲ್ಲೂ ಅವರವರದ ಬಗ್ಗೆ ಮಾತ್ರ ಚಿಂತೆ. ಎಲ್ಲರಲ್ಲೂ ತಾನು ಮಾಡೇತೀರುತ್ತೇನೆಂಬ ಛಲ. ಆ ರಾತ್ರಿ ಯಾರಿಗೂ ಸರಿಯಾಗಿ ನಿದ್ದೆ ಇಲ್ಲ.

ಆ ಸೊಬಗಿನ ಐಲೆಂಡ್ ಪೀಕ್ !

ಎಂಟನೆಯ ದಿನ (ಮೆ ೧೦, ೨೦೦೮)
ದಿಂಗ್ ಬೋಚೆ (4410 ಮೀ/14464 ಅಡಿ) - ಚುಕುಂಗ್ ( 4750 ಮೀ/15,583 ಅಡಿ)

ನಾನು ಎದ್ದಾಗ ಬೆಳಿಗ್ಗೆ ೬:೦೦ ಗಂಟೆ, ಜ್ಞಾನಿ ಆಗಲೆ ಎದ್ದು ಹೊರನಡೆದಾಗಿತ್ತು. ಹೊರಗಡೆ ವಿಪರೀತ ಚಳಿ. ಸ್ವಲ್ಪ ಬಿಸಿ ನೀರನ್ನು ಮುಖತೊಳೆಯಲು ಇಟ್ಟಿದ್ದರು. ನಾನು ಮುಖತೊಳೆಯುವಾಗ ನನ್ನ ಸುತ್ತ ಇದ್ದ ಪರ್ವತಗಳ ಸುಂದರವಾದ ದೃಷ್ಯವನ್ನು ದಿಟ್ಟಿಸಿದೆ. ಬೆಳಗಿನ ಜಾವ ಹಿಮಾಲಯ ಎಷ್ಟು ಶುಭ್ರವಾಗಿರುತ್ತದೆ ! ಮತ್ತೆ ಅದೇ ಅಮ-ದಬ್ಲಮ್. ಅಬ್ಬಾ, ಅದೆಷ್ಟು ಹತ್ತಿರದಲ್ಲೇ ಇದೆ. ನಾವು ಚುಕುಂಗ್ ಗೆ ಅಕ್ಲ್ಮಟೈಸೇಶನ್ ಹೋಗುವ ಬದಲು, ಅಮ-ದಬ್ಲಮ್ ಬುಡಕ್ಕಾದರೂ ಹೋಗಬಹುದಲ್ಲ ಎಂದು ಯೋಚಿಸುತ್ತಿದ್ದೆ. ಆದರೆ ನಾನು ಹಿಂದೆ ಹೇಳಿದಂತೆ ಹಿಮಾಲಯದಲ್ಲಿ ದೂರದಲ್ಲಿರುವುದು ಹತ್ತಿರದಲ್ಲಿರುವಂತೆ ಕಾಣಿಸುವುದರಿಂದ ಅದು ಆಗು ಹೋಗುವ ಕೆಲಸವಲ್ಲ ಎಂದೆನಿಸಿ ಸುಮ್ಮನಾದೆ. ಇಲ್ಲಿನ ನಮ್ಮ ಹೋಟಲಿನ ಹೆಸರು ’ಸೋನಾಸ್ ಫ್ರೆಂಡ್ ಶಿಪ್ ಹೋಟೆಲ್’. ಅದರಲ್ಲಿ ನಮ್ಮನ್ನು ಬಿಟ್ಟು ಇನ್ನು ಕೆಲವು ವಿದೇಶಿಯರಿದ್ದರು. ಇಬ್ಬರು ಜರ್ಮನ್ ದಂಪತಿಗಳು, ಸ್ವಲ್ಪ ವಯಸ್ಸಾದವರು, ಹತ್ತಿರದಲ್ಲಿದ್ದ ಐಲೆಂಡ್ ಪೀಕ್ ಹತ್ತಲು ಯೋಚಿಸಿದ್ದರು. ಅದೊಂದು ಸುಂದರವಾದ ಪರ್ವತ.


ಐಲೆಂಡ್ ಪೀಕ್

ಆದರೆ ಅದು ಚುಕುಂಗ್ ಗಿಂತ ದೂರದಲ್ಲಿತ್ತು. ವಸುಮತಿಯವರು ಅದನ್ನು ಹತ್ತಲು ಲುಕ್ಲಾ ಇಂದ ಅದರ ಬೇಸ್ ಕ್ಯಾಂಪ್ ತಲುಪಲು ೧೦ ದಿನ ತೆಗೆದುಕೋಂದಿದ್ದರಂತೆ. ಕೆಯೆಮ್ಎ ಮೊದಲು ಈ ಪರ್ವತ ಹತ್ತಲು ಯೋಚಿಸಿದ್ದರಂತೆ ಆದರೆ ಎಲ್ಲರೂ ಅಷ್ಟು ರಜೆ ಹಾಕಲು ತಯ್ಯಾರಿರಲಿಲ್ಲವಾದ್ದರಿಂದ ಎವೆರೆಸ್ಟ್ ಬೇಸ್ ಕ್ಯಾಂಪ್ ಎಂದು ನಿರ್ಧರಿಸಿದರಂತೆ.

ನಾನು ಹಲ್ಲುಜ್ಜುತ್ತಾ ನಿಂತಿದ್ದಾಗ, ಜರ್ಮನ್ ದಂಪತಿಗಳು ಹೊರಟರು, ಆದರೆ ಅವರು ತಮ್ಮ ಪ್ಲಾನ್ ಬದಲಿಸಿ ಕಾಲಾ ಪತ್ತರ್ ಗೆ ಹೋಗುವರಿದ್ದರು, ನಮ್ಮಂತೆ. ’ಐಲೆಂಡ್ ಪೀಕಿನಲ್ಲಿ ತುದಿಯ ಕೆಳಗಡೆ ಒಂದು ದಿನ ಹಿಮದಲ್ಲಿ ಟೆಂಟ್ ಹಾಕಿ ಉಳಿಯಬೇಕೆಂದು, ನಂತರ ಒಂದು ಹಿಮದ ಏರಿಯ ಗುಂಟ ನಡೆದು ತುದಿ ಹತ್ತಲು ಶುರುಮಾಡಬೇಕು. ಈ ಹಿಮದ ಏರಿ ಪ್ರತೀದಿನ ಸ್ವಲ್ಪ ಜಾಗ ಬದಲಿಸುವುದರಿಂದ ಹಿಮ ಬಹಳ ಸಡಿಲ ಇರುತ್ತದೆ. ಆದ್ದರಿಂದ ಅದು ಅಪಾಯಕಾರಿ. ಹೀಗಾಗಿ ಈ ಸಲ ನಾವು ಕಾಲಾ ಪತ್ತರಿಗೇ ಹೋಗುವ ಎಂದು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ನಾವು ಚುಕುಂಗ್ ಗೆ ಅಕ್ಲಮಟೈಸೇಶನ್ ಗೆ ಹೋಗುವವರಿದ್ದೆವು. ಅದು ಕೊನೆಯ ಹಳ್ಳಿ. ಮುಂದಕ್ಕೆ ಕೇವಲ ಚಾರಣಿಗರಿಗಾಗಿ ಲಾಡ್ಜ್ ಇದ್ದುವೇ ವಿನಃ ಹಳ್ಳಿಗಳಿರಲಿಲ್ಲ. ಚುಕುಂಗೆ ಹೋಗುವದಾರಿ ನಿಧಾನವಾಗಿ ಏರುಮುಖವಾಗಿದ್ದು, ಹತ್ತುವುದು ಗೊತ್ತಾಗುತ್ತಿರಲ್ಲಿಲ್ಲ. ನಾವು ೧೧:೪೫ ಕ್ಕೆ ಒಂದು ಚಿಕ್ಕ ಮನೆಯ/ಗೊಂಪ ಹತ್ತಿರ ಬಂದೆವು ಅಲ್ಲಿಂದ ಚುಕುಂಗ್ ದೂರದಲ್ಲಿ ಕಾಣಿಸುತ್ತಿತು. ಚುಕುಂಗ್ ಹಿಂದೆ ಐಲೆಂಡ್ ಪೀಕ್ ಸುಂದರವಾಗಿ ನಿಂತಿತ್ತು. ಈಗಾಗಲೇ ಸಮಯ ಮೀರಿ ಹೋಗಿದ್ದುದ್ದರಿಂದ, ವಸುಮತಿಯವರು ಹಿಂತಿರುಗಲು ನಿರ್ಧರಿಸಿದರು. ಅದರಂತೆ ನಾವು ಹಿಂತಿರುಗಿ ಬಂದೆವು. ನಂತರ ಚೌಮೆನ್, ಫ್ರೈಡ್ ರೈಸ್ ಹಾಗು ವೆಜ್ ಮೊಮೊ ಗಳನ್ನು ಸರಿಯಾಗಿ ತಿಂದು ಅಲ್ಲಿದ್ದ ವಿದೇಶಿಯರೊಡಗೂಡಿ ಆಟವಾಡುತ್ತಾ ಕಾಲ ಕಳೆದೆವು. ಹೊರಗೆ ಬಹುಶಃ ಸೊನ್ನೆ ಡಿಗ್ರಿ ಉಷ್ಣಾಂಶ ಇದ್ದು, ನಾವು ನಡೆಯುವಾಗ ೫ ರಿಂದ ೧೫ ಡಿಗ್ರಿ ಇರುತ್ತಿತ್ತು. ಬಹುಶಃ ಮುಂದೆ ಹೋದಂತೆ ನಮಗೆ ಹಿಮ ಸಿಗುವ ಸಾಧ್ಯತೆ ಇತ್ತು ಹಾಗು ನಾಳೆಯಿಂದ ನಾವು ನಮ್ಮ ಬೆಚ್ಚನೆಯ ಫ್ಲೀಸ್ ಜಾಕೆಟ್ (ಇಲ್ಲಿ ಉಲ್ಲನ್ ಜಾಕೆಟ್ಟುಗಳು ಉಪಯೋಗಕ್ಕೆ ಬರುವುದಿಲ್ಲ) ಹಾಗು ಗಾಳಿಯನ್ನು ತಡೆಯುವ ವಿಂಡ್ ಚೀಟರುಗಳನ್ನು ಧರಿಸುವವರಿದ್ದೆವು. ಆದರೆ ಒಂದುಸಲ ನಡೆಯಲು ಶುರುಮಾಡಿದ ಮೇಲೆ, ಎಲ್ಲವನ್ನೂ ಕಿತ್ತೆಸೆದು ಬರಿ ಟಿ-ಶರ್ಟ್ ನಲ್ಲಿ ಇರುತ್ತಿದ್ದೆವು. ನಾಳೆಯಿಂದ ಬಹುಶಃ ನಾವು ಒಳಗೆ ಥರ್ಮಲ್ಸ್ ಹಾಕಿಕೊಂಡು ಮೇಲೆ ಎರಡು ಪ್ಯಾಂಟುಗಳನ್ನು ಹಾಕಿಕೊಳ್ಳಬೇಕಾಗಬಹುದೆಂದು ಸ್ಮಿತ ಹೇಳುತ್ತಿದ್ದಳು.

ಚುಕುಂಗ್ ಸುಮಾರಾಗಿ ೧೫,೬೦೦ ಅಡಿ ಎತ್ತರದಲ್ಲಿದ್ದರೂ ಅದು ನಿಧಾನವಾದ ಏರು, ಲೋಬುಚೆಯೂ ಸಹ ಸುಮಾರಾಗಿ ೧೬,೦೦೦ ಅಡಿಗಳ ಎತ್ತರದಲ್ಲಿದ್ದರೂ ಅದು ಬಹಳ ಕಡಿದಾದ ಏರು. ಆದರೂ ನಾಮಗೆಲ್ಲಾ ಈಗಾಗಲೆ ಎತ್ತೆತ್ತರಕ್ಕೆ ಹತ್ತಲು ಅಭ್ಯಾಸವಾಗಿದ್ದುದ್ದರಿಂದ ಇದೂ ಹತ್ತಲು ಸಾಧ್ಯವೆಂಬ ನಂಬಿಕೆ ಇತ್ತು. ಮೋಹನ್ ಇಬಿಸಿಗೆ ಬರುದಿಲ್ಲವೆಂದು ನಿರ್ಧರಿಸಿದ್ದ. ಅವನಿಗೆ High altitude pulmonary edema (HAPE - ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು) ಆಗಿತ್ತು. ಹಾಗಾಗಿ ಅವನನ್ನು ಕೆಳಗಿನ ಕ್ಯಾಂಪ್ ಗೆ ಇಳಿಸಿ ಸುಧಾರಿಸುವುದೆಂದು ವಸುಮತಿಯವರು ನಿರ್ಧರಿಸಿದ್ದರು. ಅದರಂತೆ ಅವನು ಕುದುರೆಯ ಮೇಲೆ ಕುಳಿತು ಒಂದೊಂದೇ ಕ್ಯಾಂಪ್ ಇಳಿಯುವವನಿದ್ದ. ಪ್ರತಿ ಕ್ಯಾಂಪ್ ತಲುಪಲು ೬೦೦ ಭಾರತೀಯ ರುಪಾಯಿಗಳು. ವಸುಮತಿಯವರು ಖಾಜಿ ಹತ್ತಿರ ದುಡ್ಡು ಕೊಟ್ಟು ಮೋಹನನ್ನು ಕ್ಷೇಮವಾಗಿ ಕೆಳಗಿಳಿಸುವಂತೆ ತಿಳಿಸಿದರು. ನಾವೆಲ್ಲಾ ಮುಂದೆ ನಮಗೇನೂ ಆಗಕೂಡದೆಂದು ಬಯಸಿದೆವು. ಅದಕ್ಕಾಗಿ ಎಲ್ಲರೂ ಅವರವರದೇ ಆದ ತಯಾರಿಗಳನ್ನು ನೆಡೆಸುತ್ತಿದ್ದರು. ಸಂದೀಪ್, ಸ್ವಪ್ನ ಹಾಗು ಅಶೋಕ್ ನಾಳೆ ಒಬ್ಬ ಪೋರ್ಟರನ್ನು ಗೊತ್ತುಮಾಡಿಕೊಳ್ಳಲು ನಿರ್ಧರಿಸಿದರು. ನಾಳೆ ಮರೆಯದೆ ಬಟ್ಟೆ ಬದಲಾಯಿಸುವ ದಿನ !

Monday, January 26, 2009

ಅಮ-ದಬ್ಲಮ್ ಬುಡದಲ್ಲಿ

ಏಳನೇ ದಿನ (ಮೇ ೯, ೨೦೦೮)
ತೆಂಗ್ ಬೊಚೆ (3870 ಮೀ/12693 ಅಡಿ) - ದಿಂಗ್ ಬೋಚೆ (4410 ಮೀ/14464 ಅಡಿ)

ಬೆಳಿಗ್ಗೆ ಬೇಗನೆ ಗಂಜಿ ಕುಡಿದು ಹೊರಟಾಗ ೭ ಗಂಟೆ. ಹಲ್ಲು ಕಟಕಟ ಅನ್ನುವಂತಹ ಥಂಡಿ. ಯಾರಿಗೂ ಬೆಚ್ಚನೆಯ ಜಾಕೆಟ್ಟುಗಳನ್ನು ಬಿಚ್ಚಿಡುವ ಮನ್ನಸ್ಸೇ ಇಲ್ಲದ್ದಿದ್ದರೂ, ವಸುಮತಿಯವ ಆಜ್ಞೆಯಂತೆ ಬಿಚ್ಚಿದೆವು. ಒಂದು ಸಲ ನೆಡೆಯಲು ಶುರುಮಾಡಿದರೆ ಮೈ ಇಂದ ಬೆವರು ಇಳಿಯಲು ಪ್ರಾರಂಭವಾಗುತ್ತದೆ. ಆಗ ಜಾಕೆಟ್ಟುಗಳನ್ನು ಬಿಚ್ಚಿ ಓಳಗಿಡುವಷ್ಟು ಸಮಯ ಯಾರೂ ನಮಗೆ ಕಾಯುವುದಿಲ್ಲ. ಹೀಗಾಗಿ ಈ ವ್ಯವಸ್ಥೆ. ದಿಂಗ್ ಬೋಚೆಗೆ ದಾರಿ ಬಹಳ ಕಡಿದಾದುದ್ದೇಲ್ಲ. ಆಗ ಈಗ ತಿರುವಿನಲ್ಲಿ ಮೋಡಗಳೂಡನೆ ಮುಚ್ಚು ಮರೆಯಾಡುತ್ತ ಅಮ-ದಬ್ಲಮ್ ಕಾಣಿಸಿಕೊಳ್ಳುತ್ತಿತ್ತು.

ಅಮ-ದಬ್ಲಮ್

ದಾರಿಯಲ್ಲಿ ನಮಗೆ ಬೇಸ್ ಕ್ಯಾಂಪ್ ಗೆ ಹೋಗುತ್ತಿದ್ದಾತ ಒಬ್ಬ ಸಿಕ್ಕಿದ. ಅವನ ಕೈಯಲ್ಲಿ ಚಿಕ್ಕ ಐಸ್ ಕೊಡಲಿ ಇತ್ತು. ಅವನು ಎವೆರೆಸ್ಟ್ ಹತ್ತಲು ಬಂದ್ದಿದ್ದ, ಆದರೆ ಚೀನಿಯವರು ಒಲಂಪಿಕ್ಸ್ ಜ್ಯೋತಿಯಿಂದಾಗಿ ಎಲ್ಲರನ್ನೂ ಕೆಳಗೆ ಕಳುಹಿಸಿದ್ದರಿಂದ ಇವನೂ ಬಂದಿದ್ದನಂತೆ. ಈಗ ಹಿಂತಿರುಗಿ ಹೋಗುತ್ತಿದ್ದ. ಆಗಷ್ಟೆ ಹಿಂತಿರುಗಿ ಬರುತಿದ್ದ ಬಸವಳಿದಿದ್ದ ವಿದೇಶೀಯರ ಗುಂಪೊಂದನ್ನು ಅವನು "ಬಹಳ ಕಡಿದಾಗಿತ್ತೇನೋ ?" ಎಂದು ಕೇಳಿದ, ಅದಕ್ಕೆ ಅವರು "ನಿನ್ನದರಷ್ಟೊಂತು ಕಡಿದಾಗಿಲ್ಲ ಬಿಡು" ಎಂದು ನಕ್ಕರು. ಪಂಗ್ ಬೋಚೆಯಲ್ಲಿ ಬಿಸಿ ನಿಂಬೆ ರಸವನ್ನು ಹಾಗೂ ಬೆಂದ ಆಲೂಗಡ್ಡೆಗಳನ್ನು ತಿಂದೆವು. ಆಲ್ಲಿ ಕೆಂಪು ಮೆಣಸಿನ ಕಾಯಿ ಸಾಸ್ ಇಟ್ಟಿತ್ತು. ಅದೆಷ್ಟು ಕಾರವಾಗಿತ್ತೆಂದರೆ, ಒಂದು ತೊಟ್ಟು ಬಾಯಲ್ಲಿ ಬಿಟ್ಟರೆ, ನಿಮಿಷ ಕುಣಿಯುವಂತಾಗುತ್ತಿತ್ತು. ಅಲ್ಲಿ ಒಬ್ಬಳು ಚಿಕ್ಕ ಹುಡುಗಿ. ಅವಳ ತಂದೆಯೊಡನೆ ಆಟವಾಡುತ್ತಿದ್ದಳು. ಅವಳ ತಂದೆಯೋ, ತಾತನಂತೆ ಕಾಣುತ್ತಿದ್ದ. ಸಮಿತ್ ಪುಟ್ಟ ಹುಡುಗಿಗೆ ಲೂನಿನ ನಾಯಿಮರಿ ಮತ್ತಿತರ ಆಟಿಕೆಗಳನ್ನು ಮಾಡಿಕೊಟ್ಟ. ಸಮಿತ್ ಹತ್ತಿರ ವಿದೇಶದಿಂದ ತಂದಿದ್ದ ಉದ್ದನೆಯ ತೆಳ್ಳಗಿನ ಬಲೂನುಗಳಿದ್ದವು. ಅದರಲ್ಲಿ ಎನೆನೋ ಮಾಡುವುದು ಅವನ ಹವ್ಯಾಸ.


ಅಮ-ದಬ್ಲಮ್ ಎದುರಿಗಿನ ಪರ್ವತಗಳು

ಅಷ್ಟರಲ್ಲಿ ಅಲ್ಲಿಗೆ ಬಂದ ಒಂದು ವಿದೇಶಿಯರ ತಂಡ, ಹುಡಿಗಿಯ ತಂದೆಯೊಡನೆ ಫೊಟೋ ತೆಗೆಸಿಕೊಳ್ಳಲು ಶುರುಮಾಡಿದರು ! ಎಲಾ ಇವನ.. ಇದೇನಿದು ನಡೆಯುತ್ತಿದೆ ಎಂದರೆ, ಈತ ಎವೆರೆಸ್ಟ್ ತುದಿಯನ್ನು ನಾಲ್ಕು ಸಲ ಮುಟ್ಟಿದ್ದಾನಂತೆ ! ನಾವೂ ಅವನೊಡನೆ ಫೋಟೊ ತೆಗೆಸಿಕೊಳ್ಳೋಣ ಎಂದುಕೊಳ್ಳುವಷ್ಟರಲ್ಲಿ, ಆತ ಜಾಗದಿಂದ ಮಾಯ. ಹಿಂತಿರುಗಿ ಬರುವಾಗಲಾದರೂ ಅವನೊಡನೆ ಒಂದು ಫೊಟೋ ತೆಗಿಸಿಕೊಳ್ಳುವುದು ಎಂದು ನಿರ್ಧರಿಸಿದೆವು.


ನಾವು ಸುಮಾರು ೬ ಗಂಟೆಗಳ ಕಾಲ ನೆಡೆದಿರಬಹುದು. ದಾರಿ ಉದ್ದಕ್ಕೂ ಎಲ್ಲೆಲ್ಲೂ ರೊಡೊ ಡೆಂಡ್ರಾನುಗಳು.

ರೋಡೊ ಡೆಂಡ್ರಾನ್

ನಾವು ದಿಂಗ್ ಬೋಚೆ ತಲುಪಿದಾಗ ಮಧ್ಯಾನ :೩೦. ಕೊರೆಯುವ ಥಂಡಿ. ಎರಡು ಅಂತಸ್ತಿನ ಹೋಟೆಲ್. ನೋಡಲು ಚೊಕ್ಕವಾಗಿತ್ತು. ಅದರಲ್ಲಿ ಟಾಯ್ಲೆಟುಗಳಿವೆಯೆಂದು ಅದರ ಯಜಮಾನ ಹೆಮ್ಮೆಯಿಂದ ಹೇಳಿಕೊಂಡ. ಈಗಾಗಲೆ ನಮಗೆ ಟಾಯ್ಲೆಟ್ ಗಳ ಪರಿಚಯವಿದ್ದುದ್ದರಿಂದ ನಾವೇನು ಪುಳಕಿತರಾಗಲ್ಲಿಲ್ಲ. ಆದರೆ ಇಲ್ಲಿ ಅವು ನಿಜವಾಗಿಯೂ ದೊಡ್ಡ ಕೊಣೆಯಾಗಿದ್ದು, ಎರಡೆರಡು ಗುಂಡಿಗಳಿದ್ದವು. ಇಲ್ಲೆಲ್ಲಾ ನೀರು ಉಪಯೂಗಿಸುವುದಿಲ್ಲ. ಹಾಗಂತ ವಿದೇಶೀಯರಂತೆ ಪೇಪರನ್ನೂ ಉಪಯೋಗಿಸುವುದಿಲ್ಲ. ಇಲ್ಲೆಲ್ಲಾ ಟಾಯ್ಲೆಟ್ಟು ಯಾವಾಗಲೂ ನೆಲದಿಂದ - ಅಡಿ ಎತ್ತರದಲ್ಲಿ ಕಟ್ಟಿರುತ್ತಾರೆ. ಟಾಯ್ಲೆಟ್ಟುಗಳಲ್ಲಿ ಮರದ ನೆಲದಲ್ಲಿ ಒಂದು ದೊಡ್ಡ ತೂತಮಾಡಿರುತ್ತಾರೆ. ತೂತದ ಪಕ್ಕಕ್ಕೆ ಒಂದು ಗುಡ್ಡೆ ಮರದ ಹೊಟ್ಟು ಅಥವಾ ಮರಳು ಹಾಕಿರುತ್ತಾರೆ. ಒಂದು ಹಾರೆಯೂ ಇಟ್ಟಿರುತ್ತಾರೆ. ಕೆಲಸ ಮುಗಿದನಂತರ ಮರದ ಹೊಟ್ಟನ್ನು ತೂತದ ಮೂಲಕ ಹಾರೆಯಿಂದ ಎಳೆದು ಮುಚ್ಚಬೇಕು. ಇದು ಎರಡು ಅಂತಸ್ತಿನ ಹೋಟಲಾಗಿದ್ದು, ಮೆಲಂತಸ್ತಿನಲ್ಲೂ ಒಂದು ಟಾಯ್ಲೆಟ್ ಇತ್ತು. ಅದು, ಒಂದು ಬಿಳಿ ಬಕೆಟ್ಟನ್ನು ಮರದ ತೂತದ ಮೇಲೆ ಮಗುಚಿ ಹಾಕಿ, ತಳ ತೆಗೆದು ಅದರ ಮೇಲೆ ಒಂದು ಹೊಲೆದ ಕರಿ ಸೀಟ್ ಹಾಕಿದಂತಿತ್ತು. ಅಲ್ಲಿ ಮರದ ಹೊಟ್ಟು ಮತ್ತಿತರ ಸಾಮಾನುಗಳು ಇರಲಿಲ್ಲ. ಯಾಕೆಂದರೆ, ಅಲ್ಲಿ ಕೂತು ೧೫ ಅಡಿ ಆಳದ ನೆಲಕ್ಕೆ
ಗುರಿಹಿಡಿದು
ಮಾಡಬೇಕಿತ್ತು, ಇನ್ನು ಮರದ ಹೊಟ್ಟನ್ನು ಮುಚ್ಚುವ ವಿಷಯ ಹಾಗಿರಲಿ.

ಮೋಹನ್ ಬಹಳ ತೊಂದರೆ ಪಡುತ್ತಿದ್ದ. ಅವನಿಗೆ ಶ್ಯಾಸಕೋಶದಲ್ಲಿ ನಿಧಾನವಾಗಿ ನೀರು ತುಂಬಿಕೊಳ್ಳಲು ಶುರುವಾಗಿತ್ತು. ಎರಡು ಹೆಜ್ಜೆ ನಡೆದರೆ ಸುಸ್ತಾಗಿ ಎದುಸಿರು ಬಿಡುತ್ತಾ ನಿಲ್ಲುತ್ತಿದ್ದ. ಡಾ.ಮಂಜ ಹಾಗು ಅಶೋಕ್ ಅವನೊಡನೆ ಪೆಂಗ್ ಬೋಚೆಯವರೆಗೆ ಬಂದರು. ಡಾ.ಮಂಜ ಅವನೂಡನೆ ಒಂದು ದಿನ ಅಲ್ಲೆ ಉಳಿದುಕೊಂಡರು. ಹೇಗಿದ್ದರೂ ನಾವು ಮರುದಿನ ದಿಂಗ್ ಬೋಚೆಯ ಹತ್ತಿರಲ್ಲಿ ಅಕ್ಲಿಮಟೈಸೇಶನ್ ಗೆ ಹೋಗುವವರಿದ್ದೆವು. ಮರುದಿನ ಖಾಜಿ ಅವನನ್ನು ಸಮಸೆ ಎಂಬ ಜಾಗದಲ್ಲಿ ಹೋಟಲಿನಲ್ಲಿ ಇಳಿಸಿ, ನಂತರ ಸ್ವಲ್ಪ ಚೇತರಿಸಿಕೊಂಡಲ್ಲಿ ಅವನನ್ನು ದಿಂಗ್ ಬೋಚೆಗೆ ಕರೆತರಬೇಕೆಂದು ವಸುಮತಿಯವರು ನಿರ್ಧರಿಸಿದರು. "ಮೊದಲನೆ casualty" ವಸುಮತಿಯವರು ಹೇಳಿತ್ತಿದ್ದರು. "ಎಲ್ಲರೂ ತಮಗೆ ಹೈ ಅಲ್ಟಿಟ್ಯುಡ್ ಸಿಕ್ ನೆಸ್ ಬಂದಿದೆಯೆಂದು ಒಪ್ಪಿಕೊಳ್ಳಲು ತಯಾರಾಗಿರಬೇಕು. ಜೀವ ಮುಖ್ಯ. ಅವನು ಮುಂದಿನ ಸಲ ಬೇಸ್ ಕ್ಯಾಂಪ್ ಗೆ ಬರಬಹುದು. ಎವೆರೆಸ್ಟ್ ಹತ್ತುವಾಗ ಹಿಂತಿರುಗಿ ಹೋಗುವ ಸಮಯ ಮಧ್ಯಾನ್ ೧೨ ಗಂಟೆ. ಎವೆರೆಸ್ಟ್ ತುದಿ ಕೆವಲ ೧೫ ಅಡಿ ದೂರ ಇದ್ದರೂ, ೧೨ ಗಂಟೆಯಾದರೆ, ನಮ್ಮ ಜೀವ ಉಳಿಸಿಕೊಳ್ಳಲು ಹಿಂತಿರುಗಲೇ ಬೇಕು."

ಎವೆರೆಸ್ಟ್ ಸುತ್ತಾಮುತ್ತ ಒಂದು ವಿಚಿತ್ರವಾದ ಕೆಮ್ಮು ಇದೆ. ಅದನ್ನು ಖುಂಬು ಕೆಮ್ಮು ಎನ್ನುತ್ತಾರೆ. ಬೇಸ್ ಕ್ಯಾಂಪ್ ದಾರಿ ಬಹಳ ಧೂಳು. ಹಾಗಾಗಿ ಎಲ್ಲರೂ ಮೂಗಿಗೆ ದುಪ್ಪಟ್ತವನ್ನೊ, ಸ್ಕಾರ್ಫ್ ಅನ್ನೊ ಕಟ್ಟಿಕೊಂದಿದ್ದೆವು. ನನಾಗಲೇ ಸಣ್ಣಗೆ ಕೆಮ್ಮುತ್ತಿದ್ದೆ. ಇಂತಹ ಎತ್ತರದಲ್ಲಿ ಸ್ವಲ್ಪ ತಲೆ ನೋವಾದ ಹಾಗೆ ಅನ್ನಿಸುತ್ತಿತ್ತು. ಜಾಸ್ತಿ ನೀರು ಕುಡಿಯ ಬೇಕು ಎಂದು ಕೊಂಡೆ.

ಮರುದಿನದ ಅಕ್ಲಮಟೈಸೇಶನ್ ಆದನಂತರ, ನಮ್ಮ ಮುಂದಿನ ಗುರಿ ಲೊಬುಚೆ. ಅಲ್ಲಿ ಇನ್ನೂ ಛಳಿ.ಅಲ್ಲಿಯ ದಾರಿಯಲ್ಲಿ ನಾವು ಒಂದು ಗ್ಲೆಶಿಯರ್ ದಾಟಬೇಕಾಗುತ್ತದೆಂದು, ಅಲ್ಲಿ ಹಿಮವಿದ್ದರೆ, ನಾವೆಲ್ಲಾ ಒಂದೇ ಸಾಲಿನಲ್ಲಿ ಒಬ್ಬರು ಕಾಲು ಇಟ್ಟಕಡೆ ಇನ್ನೊಬ್ಬರು ಇಟ್ಟು ನಡೆಯಬೇಕೆಂದು ವಸುಮತಿಯವರು ಸಲಹಿದರು. ನಾಳೆ ಬರಿಯ ಅಕ್ಲ್ಮಟೈಸೇಶನ್. ಹಾಗಾಗಿ ೭-೮-೯ ಎಂದು ನಿರ್ಧರಿಸಿದೆವು.

Sunday, January 4, 2009

ಅಂತೂ ಇಂತೂ ಎವೆರೆಸ್ಟ್ ಕಾಣ್ತು

ಆರನೇ ದಿನ (ಮೇ , ೨೦೦೮)
ನಾಮ್ ಚೆ ಬಜಾರ್ (3489 ಮೀ/11443 ಅಡಿ) - ತೆಂಗ್ ಬೊಚೆ (3870 ಮೀ/12693 ಅಡಿ)

ಇಂದಿನಿಂದ ಎಲ್ಲರ ಏಕಾಗ್ರತೆಯೂ ಬೇಸ್ ಕ್ಯಾಂಪ್ ತಲುಪು ಕಡೆಗೇ. ಅದಕ್ಕಾಗಿ ಎಲ್ಲಾರೂ ಅವರವರಿಗೆ ಯಾವುದು ಸರಿಹೋಗುತ್ತೊ ಅದನ್ನು ಮಾಡಿಕೊಳ್ಳುತ್ತಿದ್ದರು. ನಾಮ್ ಚೆ ಬಜಾರಿಗೆ ಬರುವ ದಾರಿಯಲ್ಲಿ ಎಲ್ಲರಿಗೂ ಅವರವರ ಯೋಗ್ಯತೆ ಏನೆಂದು ಗೊತ್ತಾಗಿತ್ತು. ಹಾಗಾಗಿ, ಶೀಲಾ ಕ್ಯಾಸ್ಟಿಲಿನೊರವರು ಒಬ್ಬ ಪೋರ್ಟರನ್ನು ಅವರ ಚೀಲ ಹೊತ್ತುತರಲು ಗೊತ್ತು ಮಾಡಿಕೊಂಡರು. ಆದರೆ ಅವನು ಚೀಲ ಹೊತ್ತು ಕೊಳ್ಳುತ್ತಿರುವಾಗ, ಯಾಕೋ, ಚೀಲ ಅವರ ಹಿಂದಿದ್ದ ಚೀಲಕ್ಕಿಂ ತೀರ ದೊಡ್ಡದಾಗಿ ಬೆಳೆದಂತೆ ಕಾಣುತ್ತಿತ್ತು ! ಅಲ್ಲದೆ ಶೀಲಾ ಜೊತೆಗಿದ್ದ ಆರತಿ ಯಾದವ್ ಅವರ ಚೀಲ ಸಣ್ಣದಾದಂತೆಯೂ ಹಾಗು ಆರತಿ ಬಹಳ ಉಲ್ಲಾಸದಿಂದ ಕುಣಿಕುಣಿದು ನಡೆದಂತೆಯೂ ಕಾಣುತ್ತಿತ್ತು. ಏನೋ, ನಮಗೇನಂತೆ, ನಾನೇ ನನ್ನ ರ್ಧ ಚೀಲವನ್ನು ಜ್ಞಾನಿಯ ಚೀಲದಲ್ಲಿ ಹಾಕಲು ನಿರ್ಧರಿಸಿದ್ದೆ. ಜ್ಞಾನಿ ಹಾಗೂ ಸಂದೀಪ್ ಒಬ್ಬ ಪೋರ್ಟರನ್ನು ಗೊತ್ತುಮಾಡಿಕೊಂಡಿದ್ದರು. ವಸುಮತಿಯವರು, ನಮ್ಮ ಲಾಡ್ಜಿನವನೊಡನೆ ಮಾತಾಡಿ, ನಮಗೆ ಸಧ್ಯಕ್ಕೆ ಬೇಡದಿರುವ ಬಟ್ಟೆಗಳನ್ನು ಸಾಮಾನುಗಳನ್ನು ಲಾಡ್ಜಿನಲ್ಲೇ ಬಿಟ್ಟು ಹೋಗುವ ವ್ಯವಸ್ಥೆಮಾಡಿದರು. ನಮಗೆ ನಮ್ಮ ಕೋಣೆಯ ಸಂಗಾತಿ ಜೊತೆ ಪೇಸ್ಟ್ ಮತ್ತಿತರ ಸಾಮಾನುಗಳನ್ನು ಹಂಚಿಕೊಳ್ಳುವಂತೆ ಸಲಹೆ ಕೊಟ್ಟರು. ಇವುಗಳನ್ನೆಲ್ಲಾ ತೆಗೆದಿಟ್ಟಾದಮೇಲೆ, ಉಳಿದ ಚೀಲದಲ್ಲರ್ಧ ನಾನು ಜ್ಞಾನಿಯ ಚೀಲದಲ್ಲಿ ಹಾಕಿದೆ. ಪ್ರಿಯಾ ಸಹ ಕೆಲವು ಬಟ್ಟೆಗಳನ್ನು (ಬೆಚ್ಚನೆಯ ಜಾಕೆಟ್ - ಅದು ಬಹಳ ದಪ್ಪದಾಗಿದ್ದು, ಅವಳಿಗೆ ಯಾವಾಗಲೂ ತೊಂದರೆ ಕೊಡುತ್ತಿತ್ತು.) ಜ್ಞಾನಿಯ ಚೀಲದಲ್ಲಿ ತುರುಕಿಳು. ಇದೆ ರೀತಿಯಾಗಿ ಸಪ್ನ ಸಹ ಸಂದೀಪನ ಚೀಲದಲ್ಲಿ ತುರುಕಿದ್ದಳು. ಇನ್ನೂ ಯಾರ್ಯಾರು ಯೆಲ್ಲೆಲ್ಲಿ ಏನೇನು ತುಂಬಿದ್ದರೆಂದು ನನಗೆ ಸರಿಯಾಗಿ ಗೊತ್ತಿಲ್ಲ, ಆದರೆ ಮರುದಿನ ಎಲ್ಲರ ಚೀಲಗಳು ಸ್ವಲ್ಪ ಇಳಿದು ಹೋಗಿದ್ದವು. ವಸುಮತಿ ಮತ್ತು ಸ್ಮಿತರ ಚೀಲಗಳು ಮಾತ್ರ ಇದ್ದ ಹಾಗೇ ಇದ್ದವು. ಆದರೆ ಅವರಿಗೆ ಇದೆಲ್ಲಾ ಅಭ್ಯಾಸವಿದ್ದುದ್ದರಿಂದ ಎಷ್ಟು ಬೇಕೋ ಅಷ್ಟು ಮಾತ್ರ ಅವರು ತಂದಿದ್ದುರಿಂದಲೋ ಏನೊ ಅವರು ಯಾವ ದಣಿವು ಇಲ್ಲದೆ ನಡೆಯುತ್ತಿದ್ದರು.

ವಸುಮತಿಯವರು
, ನಮಗೆ ಹೊರಡುವ ಮೊದಲು ದಿನದ ದಿನಚರಿಯನ್ನು ಹೇಳುವ ವಾಡಿಕೆ ಇತ್ತು. ನಮ್ಮ ಮುಂದಿ ಜಾಗ ತೆಂಗ್ ಬೊಚೆ. ಅದರ ನಂತರದ ದಿನ ನಾವು ಫೆರಿಚೆ ಗೆ ಹೋಗುವವರಿದ್ದೆವು. ಆದರೆ ಅದು ತೆರೆದ ಜಾಗದಲ್ಲಿದ್ದುದ್ದರಿಂದ ಅಲ್ಲಿ ತುಂಬಾ ಗಾಳಿ ಹಾಗು ಥಂಡಿ. ಅದನ್ನು ರೂಢಿಸಿಕೊಳ್ಳಲು ಅಲ್ಲಿ ಬೆರೆಲ್ಲರೂ ಒಂದು ದಿನ ಇದ್ದು ಅಕ್ಲಿಮಟೈಸೇಶನ್ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಪ್ರಯಾಣದಲ್ಲಿ ಅಲ್ಲಿ ಒಂದುದಿನ ನಿಲ್ಲುವ ಉದ್ದೇಶ ಇರಲ್ಲಿಲ್ಲ. ಹಾಗಾಗಿ ನಮಗೆಲ್ಲಾ ಸರಿಹೋಗುವುದೋ ಇಲ್ಲವೂ ಎಂದು ಅವರಿಗೆ ಸ್ವಲ್ಪ ಕಸಿವಿಸಿಯಾಗಿತ್ತು. ಆದರೆ, ನಮ್ಮ ಲಾಡ್ಜಿನ ಮಾಲೀಕನ ಹತ್ತಿರ ಮಾತನಾಡಿ ಅವನ ಸಲಹೆಯಂತೆ ನಮ್ಮ ದಾರಿಯನ್ನು ಫೆರಿ ಚೆಗೆ ಹೋಗುವ ಬದಲು ದಿಂಗ್ ಬೋ ಚೆ ಗೆ ತಿರುಗಿಸಿದರು. ಹಾಗೂ ಪುನಃ ಹಿಂತಿರುಗಿ ಬರುವಾಗ ನಾವು ಫೆರಿ ಚೆ ಮೂಲಕ ಬರುವವರಿದ್ದೆವು. ವಸುಮತಿಯವರು ನಮಗೆ ದಾರಿಯನ್ನು ವಿವರಿಸುವಾಗ, ’ ನೀವೆಲ್ಲಾ ನಿಮ್ಮ ಜೀವಮಾನದಲ್ಲಿ ನೆನಪಿಟ್ಟುಕೊಳ್ಳುವಂತಹ ಕಡಿದಾದ ದಾರಿ ಹತ್ತುವವರಿದ್ದೀರ, ಎಲ್ಲರಿಗೂ ಆಗುವಂತಹ ನಡಿಗೆಯಲ್ಲಿ ನಾವು ಮುಂದುವರಿಯುತ್ತೇವೆ. ಯಾರಿಗೆ ಯೇನೇ ಆದರೂ ಅದನ್ನು ಗೌಣವಾಗಿ ಭಾವಿಸದೆ ನನಗೆ ಹೇಳಬೇಕು. ಅಲ್ಲದೆ ಎಲ್ಲರೂ ನಿಮ್ಮ ನಿಮ್ಮ ಜೊತೆಯವರೊಡನೆ ನಡೆಯಿರಿ (ಇದಕ್ಕೆ ಬಡಿ (buddy) ಸಿಸ್ಟಮ್ ಅನ್ನುತ್ತಾರೆ. ಪರ್ವತಾರೋಹಣದಲ್ಲಿ ಇಬ್ಬಿಬ್ಬರು ಒಟ್ಟೊಟ್ಟಿಗಿರುತ್ತಾರೆ, ಒಬ್ಬರು ಐಸ್ ಒಡೆದಲ್ಲಿ ಇನ್ನೊಬ್ಬರು ಕಾಲಿಡುತ್ತಾರೆ, ಇಬ್ಬರೂ ಒಂದೇ ಹಗ್ಗ ಉಪಯೋಗಿಸುತ್ತಾರೆ, ಒಂದೇ ಗುಡಾರಲ್ಲಿರುತ್ತಾರೆ. ಒಬ್ಬರ ಯೋಗಕ್ಷೇಮ ಇನ್ನೊಬ್ಬರು ನೋಡಿಕೊಳ್ಳುತ್ತಾರೆ). ನಮ್ಮದು ಪರ್ವತಾರೋಹಣವಲ್ಲದಿದ್ದರೂ ವಸುಮತಿಯವರಿಗೆ ಇವನ್ನೆಲ್ಲಾ ಅನುಸರಿಸಲು ಬಹಳ ಇಷ್ಟವಿದ್ದಂತೆ ತೋರುತ್ತಿತ್ತು. ಅವರು ಬೇಕಾದಷ್ಟು ಸಲ ನಮ್ಮ ಟ್ರೆಕ್ ಅನ್ನು expedition ಎಂದು ಪ್ರಸ್ತಾಪಿಸಿ, ಕೆಲವು ನಿಯಮಗಳನ್ನು ಹಾಕುತ್ತಿದ್ದುದು, ನಮ್ಮಲ್ಲಿ ಹಲವರಿಗೆ ಸಿಟ್ಟುಬರಿಸಿತ್ತು. ವಸುಮತಿಯವರನ್ನು, ’ನಾವೇಕೆ ಜೋಡಿಯಾಗಿ ಜೊತೆಯಲ್ಲಿರಬೇಕು ? ಎಂತಿದ್ದರೂ ಎಲ್ಲರೂ ನಿಧಾನವಾಗಿ ನಡೆಯುತ್ತಿದ್ದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆಯಲ್ಲವೇ ? ಅಷ್ಟೆ ಅಲ್ಲದೆ, ಇದು ಹೈವೆ ಅಂತಹ ದಾರಿ, ಯಾರಾದರೂ ಪರ್ವತಾರೋಹಿ ಅಥವಾ ಪೋರ್ಟರ್ ಸಿಕ್ಕೇಸಿಗುತ್ತಾರಲ್ಲಎಂದು ಕೇಳಿದಾಗ, ’ಪರ್ವತಗಳಲ್ಲಿ ಯಾವಾಗಲೂ ಹೀಗೆ ಹೋಗೋದು. ಒಬ್ಬರು ಸತ್ತರೆ, ಅವರ ಜೋಡಿ ಅದನ್ನು ಸಮರ್ಥಿಸಲು ರಬೇಕುಅಂತ ಹೇಳುವುದೆ !

ಎಂದಿನಂತೆ, ತಿಂಡಿಗೆ ನಾನು ಓಟ್ಸ್ ಗಂಜಿ ತೆಗೆದುಕೊಳ್ಳುವ ಬದಲು, ಮ್ಯುಸಿಲಿ ತೆಗೆದು ಕೊಂಡು ತಪ್ಪುಮಾಡಿದೆ, ಅದರಲ್ಲಿ ಇದ್ದ ಬಾದಾಮಿಗಳು ಹಳೆಯದಾಗಿ ಎಣ್ಣೆ ವಾಸನೆ ಬರುತ್ತಿದ್ದವು. ಅಲ್ಲದೆ, ಮ್ಯುಸಿಲಿ ಗಟ್ಟಿಯಾಗಿದ್ದು, ನುಂಗಲು ಕಷ್ಟವಾಗುತ್ತಿತ್ತು. ಇನ್ನೆಂದೂ ಅದನ್ನು ಆರಿಸಿಕೊಳ್ಳಬಾರದೆಂದು ನಿರ್ಧರಿಸಿದೆ. ಅಂತು ನಾವು ಹೊರಟಾ :೩೦ ಬೆಳಿಗ್ಗೆ. ವಸುಮತಿಯವರು ಹೇಳಿದಂತೆ, ನಾವು ನಾಮ್ ಚೆ ಇದ್ದ ಪರ್ವತವನ್ನು ಪೂರ್ತೀ ಇಳಿಯಲು ಶುರುಮಾಡಿದೆವು. ಬೆಟ್ಟ ಳಿಯುವುದು ಸುಲಭ ಎಂದು ಎಲ್ಲರೂ ತಿಳಿದು ಕೊಳ್ಳುತ್ತೇವೆ, ಆದರೆ ಆಗಲೇ ನಮ್ಮ ಮಂಡಿ, ಪಾದದ ಮಣಿಗಂಟು, ಮತ್ತು ನಮ್ಮ ಪಾದದ ಬೆರಳುಗಳು ಏಟು ತಿನ್ನುವುದು. ಕೆಲವು ಸಲ ಮುಂದೆ ನಡೆಯಲಾರದಂತಾಗುತ್ತದೆ. ಆದ್ದರಿಂದ ಮೊದಲೇ ಸ್ವಲ್ಪ ಇದರ ಕಡೆ ಗಮನ ಇಟ್ಟು ಹುಶಾರಾಗಿ ನಡೆದು, ಮಂಡಿಗಳನ್ನು ಉಳಿಸಿಕೊಳ್ಳಬೇಕು. ಪಾದಗಳನ್ನು ದಾರಿಯ ಮೇಲೆ ನೇರವಾಗಿ ಇಡದೆ, ಅಡ್ಡಗಾಲು ಹಾಕಬೇಕು. ನಾವೆಲ್ಲರೂ (ಬಹುಪಾಲು ಜನಕ್ಕೆ ಮಂಡಿನೋವಿನ ತೊಂದರೆ ಇತ್ತು) ನೀ ಪ್ಯಾಡ್, ankle ಪ್ಯಾಡ್ ಧರಿಸಿದ್ದೆವು. ಇಷ್ಟಲ್ಲದೆ, ಯಾವಾಗ ಬೆಟ್ಟ ಇಳಿಯುತ್ತದೋ ಅದರರ್ಥ ಮುಂದೆ ಅಷ್ಟೇ ಹತ್ತಲಿಕ್ಕೆ ಇದೆ ಎಂದು. ಅದನ್ನು ಯೋಚಿಸಿಕೊಂಡೆ ನಮಗೆ ಯಾಕಾದರೂ ತಗ್ಗು ಬರುತ್ತದೂ ಎನ್ನಿಸುತ್ತಿತ್ತು.

ದಾರಿಯಲ್ಲಿ ಎಲ್ಲೆಲ್ಲಿ ನೋಡಿದರೂ ನೀಲಿ ಆರ್ಕಿಡ್ ಗಳು. ಹಿಂತಿರುಗಿ ಹೋಗುವದಾರಿಯಲ್ಲಿ ಅದನ್ನು ಮೂಡಿಗೆರೆಗೆ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿದೆ. ಮೂಡಿಗೆರೆಯಲ್ಲಿ ನಾನು ಅಣ್ಣನೊಡನೆ ಸಂಗ್ರಹಿಸಿದ ಅನೇಕ ಆರ್ಕಿಡ್ ಗಳು ಇವೆ. ನೆನಪಿಗೆ, ನನ್ನದೊಂದು ಸಣ್ಣ ಕೂಡಿಕೆ. ಲುಕ್ಲ ಎಂದರೆಆಡು ಮೇಕೆಗಳ ಊರುಅಂತೆ. ಲುಕ್ಲ ಇಂದ ಮುಂದಕ್ಕೆ ಎಲ್ಲೆಲ್ಲೂ ಯಾಕ್ ಗಳು. ಜನ ಕುದುರೆಯ ಮೇಲೆ ಅಥವಾ ಯಾಕ್ ಮೇಲೆ ಹೋಗುವುದನ್ನು ನಾವು ನೋಡಲಿಲ್ಲ. ಎಲ್ಲಾ ಯಾಕ್ ಗಳ ಮೇಲೂ ಹೊರೆ ಸಾಮಾನು ಸರಂಜಾಮುಗಳು. ವಸುಮತಿಯವರು ನಮಗೆ ಹಿಮಾಲಯದಲ್ಲಿನ ಟ್ರೆಕ್ಕಿಂಗ್ ನಡವಳಿಕೆಗಳನ್ನು ಹೇಳಿಕೊಟ್ಟಿದ್ದರು. ಯಾವಾಗಲೂ ಯಾಕ್ ಗಳು ಮತ್ತು ಸಾಮಾನು ಹೊರುವ ಪೋರ್ಟರ್ಗಳಿಗೆ ಬೆಟ್ಟದ ಅಂಚಿ ಪಕ್ಕಕ್ಕೆ ಅಂದರೆ, ನಾವು ಬೆಟ್ಟದ ಪಕ್ಕಕ್ಕೆ ಬಂದು, ಅವರಿಗೆ ಪ್ರಪಾತದ ಅಂಚಿಗೆ ಜಾಗ ಬಿಡಬೇಕು. ಅವರಿಗಾದರೋ ಅಭ್ಯಾಸವಿರುತ್ತದೆ, ನಾವು ಪಕ್ಕಕ್ಕೆ ಹೋದರೆ ಯಾಕ್ ಗಳು ನಮಗೆ ಜಾಗ ಬಿಡದೆ ನಾವು ಪ್ರಪಾತಕ್ಕೆ ಬೀಳುವುದೇ ಸೈ. ಯಾಕ್ ಗಳ ಬಗ್ಗೆ ನನಗೆ ನನ್ನದೇ ಅಭಿಪ್ರಾಯವಿದೆ. ಅವಕ್ಕೆ ಜನರನ್ನು ಕಂಡರೆ ಯವೆನ್ನಿಸುತ್ತದೆ. ಅವುಗಳ ಪುಟ್ಟ ಕಣ್ಣುಗಳು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಆಳವಾಗಿ ಗಮನಿಸುತ್ತಿರುತ್ತವೆ. ಅವು ನಮ್ಮನ್ನು ದಾಟಿಹೋಗುವಾಗ, ನಾವು ಅಷ್ಟೊಂದು ಗಮನ ಕೊಡದೆ ಸುಮ್ಮನೆ ಜಾಗ ಬಿಟ್ಟರೆ ಸರಿ, ಇಲ್ಲ ಅವುಗಳನ್ನು ದಿಟ್ಟಿಸಿದರೆ ಅವು ಮುಂದೆ ಹೋಗುವುದನ್ನು ಬಿಟ್ಟು ನಮ್ಮ ಚಲನವಲನಗಳನ್ನು ಗಮನಿಸುತ್ತಾ ನಿಲ್ಲುತ್ತವೆ. ಅವುಗಳಿಗೆ ನೀವು ನಿರುಪದ್ರವಿ ಎನಿಸುವವರೆಗೆ ಹೀಗೆ ನಿಲ್ಲುತ್ತವೆ.

ಯಾಕ್ ಗೆ ಜಾಗ ಬಿಡುತ್ತಿರುವುದು

ಹೀಗೆ ನಡೆಯುತ್ತಿರಬೇಕಾದರೆ, ಒಂದು ತಿರುವಿನಲ್ಲಿ ಎಡಗಡೆ ಮೌಂಟ್ ಎವೆರೆಸ್ಟ್, ಹಾಗು ಅದರ ಪಕ್ಕದಲ್ಲಿ ನುಪ್ಸೆ, ಅದರ ಬಲಗಡೆಗೆ ಅಮ-ದಬ್ಲಮ್ ಕಂಡೆವು. ನಾವು ಮೊದಲಸಲ ಎವೆರೆಸ್ಟ್ ನೋಡಿದಾಗ ನಂಬಲೇ ಇಲ್ಲ. ಅದು ಅಂಥದೇನೂ ದೊಡ್ಡದಾಗಿ ಅದ್ಭುತವಾಗಿ ಕಾಣುತ್ತಲಿರಲ್ಲಿಲ್ಲ. ಅಮ-ದಬ್ಲಮ್ ಆದರೊ ಎಂದಿನಂತೆ ಸುಂದರವಾಗಿ ಕಾಣುತ್ತಿತ್ತು. ಹಿಂದೆಲ್ಲ ನಾನು ಅದರ ಫೋಟೊ ನೋಡಿದಾಗ, ಅದನ್ನು ಎಷ್ಟು ನೋಡಿದರೂ ಬೇಜಾರಾಗುವುದಿಲ್ಲ ಅಂದುಕೊಳ್ಳುತ್ತಿದ್ದೆ. ಅದರ ಬುಡಕ್ಕೆ ಹೋಗುವವರಿದ್ದೇವೆ ಎಂದು ಯೋಚಿಸುವುದು ರೋಮಾಂಚನಕಾರಿಯಾಗಿತ್ತು. ಈಗ ದೂರದಿಂದ ನೋಡಿದ ಅಮ-ದಬ್ಲಮ್ ಮುಂಬರುವ ದಿನಗಳ ರೋಮಾಂಚನದ ಒಂದು ಝಲಕ್ ಆಗಿತ್ತು. ಅಮ-ದಬ್ಲಮ್ ಗೂ ಮೌಂಟ್ ಎವೆರೆಸ್ಟ್ ಗೂ ಮಧ್ಯೆ ಬಹಳ ದೂರವಿದೆ. ಆದರೆ ಹಿಮಾಲಯದಲ್ಲಿ distance is deceptive. ನಾಚೆ ಹತ್ತಿರದಿಂದ ೫೦ ಕಿಲೋಮೀಟರ್ ಗೂ ಮೀರಿ ಇರುವ ಮೌಂಟ್ ಎವೆರೆಸ್ಟ್ ಕಾಣುವುದರಿಂದ ಅದು ಇಲ್ಲೆ ಹೆಚ್ಚು ಅಂದರೆ ೧೫-೨೦ ಕಿಮಿ ಒಳಗೆ ಇರಬಹುದು ಎಂದುಕೊಳ್ಳುತ್ತೀರ ಆದರೆ ಎಷ್ಟು ನಡೆದರೂ ತಲುಪುವುದಿಲ್ಲ!
ತಿರುವಿನಲ್ಲಿ ಕಂಡ ಎವೆರೆಸ್ಟ್, ಎಡಗಡೆಯ ತುದಿಯಲ್ಲಿ ಕಾಣುವ ಗುಪ್ಪೆ, ಮಧ್ಯದಲ್ಲಿ ಚೂಪು ಚೂಪಾಗಿ ನೂಪ್ಸೆ, ಬಲಗಡೆಯ ತುದಿಯಲ್ಲಿ ಹೆಡೆಯಂತೆ ನಿಂತ ಜೋಡಿ ಪರ್ವತ ಅಮ-ದಬ್ಲಮ್

ಮೇ ೧೦ ಹತ್ತಿರ ಬರುತ್ತಿದ್ದರಿಂದ ಯಾವ ಸಮಯದಲ್ಲಿ ಬೇಕಾದರೂ ಒಲಂಪಿಕ್ಸ್ ಜ್ಯೋತಿ ಎವೆರೆಸ್ಟ್ ತುದಿ ಮುಟ್ಟುವುದಿತ್ತು. ನಾವು ದಾರಿಯಲ್ಲಿ ಹಿಂತಿರುಗಿ ಬರುವರನ್ನು ಒಲಂಪಿಕ್ಸ್ ಜ್ಯೋತಿಯ ಬಗ್ಗೆ ವಿಚಾರಿಸುತ್ತಿದ್ದೆವು. ನಮಗೆ ದಾರಿಯಲ್ಲಿ ಓರ್ವ ಮಹಿಳೆ ಸಿಕ್ಕಳು. ಅವಳು ಇಬಿಸಿ (ಎವೆರೆಸ್ಟ್ ಬೇಸ್ ಕ್ಯಾಂಪ್) ಯಲ್ಲಿ ಇದ್ದು ಬಂದವಳು. ಮೇ ರಂದು ಅದು ತುದಿ ಮುಟ್ಟಿತೆಂದು, ಅಲ್ಲಿ ಪೂರ್ತಿ ’media blackout’ ಮಾಡಿದ್ದಲ್ಲದೆ, ಕೇವಲ ಎವೆರೆಸ್ಟ್ ಹತ್ತುವ ಪರ್ಮಿಟ್ ಇರುವವರನ್ನು ಬಿಟ್ಟು ಮಿಕ್ಕೆಲ್ಲದವರನ್ನು (ವೈದ್ಯರು, ಸಪೋರ್ಟಿಂಗ್ ಸ್ಟಾಫುಗಳು) ಎಬಿಸಿಯಿಂದ ಕೆಳಗೆ ಕಳುಹಿಸಿದ್ದರಂತೆ. ಆದ್ದರಿಂದಲೇ ಬಹುಶಃ ಎಲ್ಲಾ ಲಾಡ್ಜುಗಳಲ್ಲಿ ಬರೀ ಪರ್ವತಾರೋಹಿಗಳು ತುಂಬಿದ್ದರು ! 'It was a very special event' ಅಂತ ಹೇಳಿದಳು. ನಾವು ನಾಮ್ ಚೆ ಇದ್ದ ಪರ್ವತವನ್ನು ಪೂರ್ತಿ ಇಳಿದು ಇನ್ನೊಂದು ಪರ್ವತ ಹತ್ತಲು ಶುರುಮಾಡಿದೆವು. ನಿಧಾನವಾಗಿ ಹತ್ತುತ್ತಿದ್ದೆವು. ನಮಗೆ ಯಾವ ಅವಸರವೂ ಇರಲಿಲ್ಲ. ಮನಸ್ಸಿನಲ್ಲಿ ಇಬಿಸಿ ತಲುಪುವುದೊಂದೆ. ನಾನು ಶೀಲಾ ಅವರಿಗೆ "ನೀವು ಪೋರ್ಟರ್ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದಿರಿ" ಎಂದೆ. ಅದಕ್ಕವರು "ಹೌದು, ನನಗಾಗಲೆ ವಯಸ್ಸಾಗಿದೆ. ಇದು ಬಹುಶಃ ಒಂದೇ ಅವಕಾಶ. ಅದಕ್ಕಾಗಿ ನಾನು ಎಲ್ಲವೂ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು, ಈಗ ನಾನು ಚೀಲ ಹೊತ್ತರೆ, ನಾಳೆ ನೆಡೆಯಲಾಗದಿದ್ದರೆ ? ". ಹತ್ತುತ್ತಾಯಿರುವಾಗ ನಮಗೆ ಬೆಂಗಳೂರಿ ಇಬ್ಬರು ಸಿಕ್ಕರು. ವಸುಮತಿಯವರಿಗೆ ಅವರು ಗೊತ್ತಿದ್ದರು. ’ ನೀವಿಲ್ಲಿ !’ ಅಂತ ಇಬ್ಬರೂ ಹೇಳಿಕೊಂಡರು. ಅವರು ವಸುಮತಿಯವರಿಗೆನಿಧಾನವಾಗಿ ಮುಂದುವರಿಯಿರಿ. ತುಂಬಾ ನೀರು ಕುಡಿಯಿರಿ. ಎಷ್ಟು ಸಾಧ್ಯವೋ ಅಷ್ಟು ಬೆಳ್ಳುಳ್ಳಿ ತಿನ್ನಿರಿಎಂದು ಸಲಹಿದರು. ಆಲ್ಟಿಟ್ಯುಡ್ ಸಿಕ್ನೆಸ್ ಇಂದಾಗಿ ಕೆಲವರನ್ನು ಸ್ಟ್ರೆಚರ್ ನಲ್ಲಿ ತೆಗೆದು ಕೊಂಡು ಹೋದದ್ದನ್ನು ಅವರು ನೋಡಿದರಂತೆ. ಅದರಲ್ಲಿ ಒಬ್ಬನ ಸ್ಥಿತಿಯೊಂತು ಚಿಂತಾಜನಕವಾಗಿದ್ದು ಬದುಕುವ ಹಾಗೆ ಕಾಣುವುದಿಲ್ಲ ಎಂದರು. ನಾವು ದಿನಾಗಲು ಜನಗಳನ್ನು ರಕ್ಷಿಸುವ ಹೆಲಿಕಾಪ್ಟರ್ ಹೀಗಿಂದ ಹಾಗೆ ಹೋಗುವುದನ್ನು ನೋಡುತ್ತಿದ್ದೆವು. ಇಬಿಸಿವರೆಗೂ ಹೆಲಿಕಾಪ್ಟರ್ ಹೋಗುವುದಿಲ್ಲ. ಅಲ್ಲಿನ ಗಾಳಿಯಲ್ಲಿ ಅದು ಮೇಲೇರುವುದಿಲ್ಲ. ವಸುಮತಿಯವರು ಸ್ಮಿತ ಹಾಗು ರೋಶಿನ್ ಲಾಲ್ ಅವರನ್ನು ಖಾಜಿ ಜೊತೆ ಮುಂದೆ ಹೋಗಲು ಕಳುಹಿಸಿದರು. ಅವರು ಅಲ್ಲಿ ಹೋಗಿ ಲಾಡ್ಜ್ ಹಿಡಿದು, ಅದಕ್ಕೆ ತಗಲುವ ವೆಚ್ಚವನ್ನು ನಿರ್ದರಿಸಬೇಕಿತ್ತು.

ನಾವು ಮಧ್ಯಾನ್ಹದ ಹೊತ್ತಿಗೆ ತೆಂಗ್ ಬೋ ಚೆಗೆ ಬಂದು ತಲುಪಿದೆವು. ಅದು ೧೨,೬೯೩ ಅಡಿ ಎತ್ತರದಲ್ಲಿದೆ. ಬಹಳ ಚಳಿ. ಹಲ್ಲು ಕಟ ಕಟ ಎನ್ನುತ್ತಿದ್ದರೆ, ಕಿವಿ ನೋಯುತ್ತಿತ್ತು. ಅಲ್ಲಿ ಒಂದು ಬಹಳ ಸುಂದರವಾದ ಬೌದ್ದ ದೇಗುಲ (Monastery) ಇದೆ.

ಮೊನಾಸ್ಟ್ರಿಯ ಹೊರಗಡೆಯ ಡ್ರಾಗನ್

ಅದು ಬಹಳ ಹಳೆಯದಾದ ಹಾಗು ಅತಿ ಎತ್ತರದಲ್ಲಿರುವ ದೇಗುಲ. ಮೌಂಟ್ ಎವೆರೆಸ್ಟ್ ಹತ್ತುವವರು, ಲುಕ್ಲಾ ಯಿಂದ ಎಬಿಸಿಯವರೆಗೆ ನಡೆದೇ ಹೋಗುತ್ತಾರೆ. ಇದರಿಂದ ಅವರಿಗೆ ಬೇಕಾದ ಅಕ್ಲಿಮಟೈಸೇಶನ್ ಸಿಗುತ್ತದೆ. ದಾರಿಯಲ್ಲಿ ಸಿಗುವ ದೇಗುಲದಲ್ಲಿ ಪರ್ವತಾರೋಹಿಗಳ ಜೊತೆಯ ಪೋರ್ಟರುಗಳು ತಾಯಿ ಚೋಮೋಲುಂಗ್ಮಗೆ ಹತ್ತುವ ಮೊದಲು ಪ್ರಾರ್ಥಿಸುತ್ತಾರೆ. ದೇಗುಲದ ಹಿಂದೆ ಮೌಂಟ್ ಎವೆರೆಸ್ಟ್ ಕಾಣುತ್ತದೆ. ತೇನ್ ಸಿಂಗ್ ಎವೆರೆಸ್ಟ್ ತುದಿ ಮುಟ್ಟಾದ ತಕ್ಷಣ ದೇಗುಲದ ದಿಕ್ಕಿನಲ್ಲಿ ನೋಡಿದನಂತೆ, ಆದರೆ ಮೋಡ ಮುಚ್ಚಿದ್ದರಿಂದ ಅದು ಕಾಣದೇ ಅವನು ಮಸ್ಸಿನಲ್ಲೇ ವಂದಿಸಿದನಂತೆ. ಅಲ್ಲಿ ಕೆಲವೇ ಲಾಡ್ಜ್ಗಳಿದ್ದವು. ನಮ್ಮ್ ಲಾಡ್ಜ್ ಹೆಸರು ಗೊಂಬು ಲಾಡ್ಜ್.
ಬಲಗಡೆ ಅಂಚಿನಲ್ಲಿರುವುದು ಗೊಂಬು ಲಾಡ್ಜ್, ಹಿಂದೆ ಎವೆರೆಸ್ಟ್

ಅಲ್ಲಿ ಬಹಳ ಕೋಣೆಗಳಿದ್ದವು. ಅವು ತೀರ ಕಿರಿದಾಗಿದ್ದು, ಎರಡೆರಡು ಹಾಸಿಗೆಗಳಿದ್ದವು. ಲಾಡ್ಜ್ ನವರ ಹತ್ತಿರ ಇಂಟರ್ ನೆಟ್ ಸಹ ಇತ್ತು. ಆದರೆ ಅದು ದುಬಾರಿಯಾಗಿದ್ದುದ್ದರಿಂದ ಅಷ್ಟಲ್ಲದೆ ನಾವು ನಮ್ಮ ಪ್ರಪಂಚದಿಂದ ಬಹಳ ದೂರ ಬಂದು ಅದರೊಡನೆಯ ಭಾವನಾತ್ಮಕ ಸಂಭಂದ ಸ್ವಲ್ಪ ಮಟ್ಟಿಗೆ ಕಡಿದುಹೋದಂತಾಗಿದ್ದುದ್ದರಿಂದ ಯಾರಿಗೂ ಅದರ ಬಗ್ಗೆ ಗಮನ ಹರಿಯಲಿಲ್ಲ. ಲಾಡ್ಜಿನ ಹಿಂದೆ ಒಂದು ಫ್ರೆಂಚ್ ಬೇಕರಿ ಇತ್ತು. ಅಲ್ಲಿಂದ ಘಮ ಘಮ ಪರಿಮಳ. ನಾವು ಊಟಕ್ಕೆ ಮೊದಲು ದೇಗುಲಕ್ಕೆ ಹೊರಟೆವು. ಅದು ಬಹಳ ಸುಂದರವಾದ ದೇಗುಲ. ನಾವು ಅಲ್ಲಿಯ ಪ್ರಾರ್ಥನಾ ಚಕ್ರಗಳನ್ನು ತಿರುಗಿಸಿದೆವು.

ಪ್ರಾರ್ಥನಾ ಚಕ್ರಗಳ ಮೇಲೆಓಂ ಮೆ ಪೈ ಮೆ ಹೊಂ

ಅಲ್ಲಿಯ ಲೋಕಲ್ ಪೂಜಾರಿ (Monk) ಬಂದು ನಮಗಾಗಿ ಬಾಗಿಲುತೆರೆದು, ದೀಗುಲದ ಬಗ್ಗೆ, ಅಲ್ಲಿ ಇರುವ ಗ್ರಂಥಗಳ ಬಗ್ಗೆ, ಇಡೀ ವಿಶ್ವ ಯಾವ ಕಾಲ ಘಟ್ಟದಲ್ಲಿ ಇದೆ. ಮುಂದೆ ಏನಾಗುತ್ತದೆ ಎಂದು ವಿವರಿಸಿದ. ಅವನ ಹೆಸರು ನಿಂಗ್ಮ. ಅವನ ಇಂಗ್ಲಿಷ್ ಎಷ್ಟು ತಮಾಷಿಯಾಗಿತ್ತೆಂದರೆ ನನಗೆ ಇಡಿ ವಿಶ್ವ ಒಂದು ಕಾಮಿಡಿ ಸಿನೆಮಾ ಒಳಗೆ ಸಿಕ್ಕಿಹಾಕಿಕೊಂಡು ಗಿರಿ ಗಿರಿ ಸುತ್ತುತ್ತಾ ಇದೆ ಅನ್ನಿಸಲು ಶುರುವಾಯಿತು. ಅಂತು ನಾವು ಅವನೊಡನೆ ಫೋಟೊ ಹೊಡೆಸಿಕೊಂಡು ಹೊರನಡೆದೆವು.

ನಿಂಗ್ಮ ಜೊತೆ ನಾನು, ಪ್ರಿಯ

ಸಂದೀಪವರ ಗ್ಯಾಂಗಿಗೆ ದಿನಾಗಲೂ ದಾಲ್ ರೈಸ್ ಮತ್ತು ಅದೆಂಥದೊ ಸೊಪ್ಪಿನ ಪಲ್ಯ ತಿಂದು ತಿಂದು ಸಾಕಾಗಿ, ತಮಗೆ ಬೇಕಾದ ಚಿಕನ್ ಫ್ರ್ಯನ್ನು ಆರ್ಡರ್ ಮಾಡಲು ಶುರುಮಾಡಿದರು. ಅವರೇ ದುಡ್ಡು ಕೊಡಬೇಕಾಗಿದ್ದರಿಂದ ವಸುಮತಿಯವರಿಗೆ ಅದರಲ್ಲಿ ಯಾವ ತೊಡಕೂ ಕಾಣಲಿಲ್ಲ. ಚಿಕನ್ ತಿಂದಾದ ಮೇಲೆ, ’ಥೂ ಸುಡುಗಾಡು, ಇವರಿಗೆಲ್ಲಾ ಸರಿಯಾಗಿ ಮಾಡಲು ಬರುವುದೇ ಇಲ್ಲಎಂದು ಬೈಗುಳಗಳು ಇದ್ದಿದ್ದೇ. ನಮಗೆ ಏನು ತಿನ್ನಲೂ ಮನಸ್ಸಿರಲಿಲ್ಲ. ಹಾಗಾಗಿ ತಟ್ಟೆಯಲ್ಲಿ ಏನು ಹಾಕಿದರೂ ಒಂದೇ ಅನಿಸುತ್ತಿತ್ತು. ನಾವೆಲ್ಲಾ ಅಲ್ಲಿ ಡಂಬ್ ಶೆರಾಡ್ಸ್ ಆಟವನ್ನು ನಮ್ಮ ಹತ್ತಿರವಿದ್ದ ಎಲ್ಲಾ ಬೆಚ್ಚನೆಯ ಬಟ್ಟೆಗಳನ್ನು ಹಾಕಿಕೊಂಡು ಆಡಿದೆವು. ನಾಳೆ ಮರೆಯದೆ ನನ್ನ ಟೀ ಶರ್ಟ್ ಬದಲಾಯಿಸಬೇಕೆಂದು ನೆನಪಿಸಿಕೊಂಡೆ. ನಾವು ಎರಡುದಿನಕ್ಕೊಂದು ಟೀ ಶರ್ಟ್ ಎಂದು ತಂದಿದ್ದರೂ ಚಳಿಯಲ್ಲಿ ಬದಲಾಯಿಸದೆ ಎಲ್ಲರಿಂದಲೂ ಕಮಟು ವಾಸನೆ ಬರುತ್ತಿತ್ತು. ಮತ್ತೊಂದು ಥಂಡಿ ರಾತ್ರಿ ಕಳೆಯಿತು.