Sunday, March 29, 2009

ಆ ಸೊಬಗಿನ ಐಲೆಂಡ್ ಪೀಕ್ !

ಎಂಟನೆಯ ದಿನ (ಮೆ ೧೦, ೨೦೦೮)
ದಿಂಗ್ ಬೋಚೆ (4410 ಮೀ/14464 ಅಡಿ) - ಚುಕುಂಗ್ ( 4750 ಮೀ/15,583 ಅಡಿ)

ನಾನು ಎದ್ದಾಗ ಬೆಳಿಗ್ಗೆ ೬:೦೦ ಗಂಟೆ, ಜ್ಞಾನಿ ಆಗಲೆ ಎದ್ದು ಹೊರನಡೆದಾಗಿತ್ತು. ಹೊರಗಡೆ ವಿಪರೀತ ಚಳಿ. ಸ್ವಲ್ಪ ಬಿಸಿ ನೀರನ್ನು ಮುಖತೊಳೆಯಲು ಇಟ್ಟಿದ್ದರು. ನಾನು ಮುಖತೊಳೆಯುವಾಗ ನನ್ನ ಸುತ್ತ ಇದ್ದ ಪರ್ವತಗಳ ಸುಂದರವಾದ ದೃಷ್ಯವನ್ನು ದಿಟ್ಟಿಸಿದೆ. ಬೆಳಗಿನ ಜಾವ ಹಿಮಾಲಯ ಎಷ್ಟು ಶುಭ್ರವಾಗಿರುತ್ತದೆ ! ಮತ್ತೆ ಅದೇ ಅಮ-ದಬ್ಲಮ್. ಅಬ್ಬಾ, ಅದೆಷ್ಟು ಹತ್ತಿರದಲ್ಲೇ ಇದೆ. ನಾವು ಚುಕುಂಗ್ ಗೆ ಅಕ್ಲ್ಮಟೈಸೇಶನ್ ಹೋಗುವ ಬದಲು, ಅಮ-ದಬ್ಲಮ್ ಬುಡಕ್ಕಾದರೂ ಹೋಗಬಹುದಲ್ಲ ಎಂದು ಯೋಚಿಸುತ್ತಿದ್ದೆ. ಆದರೆ ನಾನು ಹಿಂದೆ ಹೇಳಿದಂತೆ ಹಿಮಾಲಯದಲ್ಲಿ ದೂರದಲ್ಲಿರುವುದು ಹತ್ತಿರದಲ್ಲಿರುವಂತೆ ಕಾಣಿಸುವುದರಿಂದ ಅದು ಆಗು ಹೋಗುವ ಕೆಲಸವಲ್ಲ ಎಂದೆನಿಸಿ ಸುಮ್ಮನಾದೆ. ಇಲ್ಲಿನ ನಮ್ಮ ಹೋಟಲಿನ ಹೆಸರು ’ಸೋನಾಸ್ ಫ್ರೆಂಡ್ ಶಿಪ್ ಹೋಟೆಲ್’. ಅದರಲ್ಲಿ ನಮ್ಮನ್ನು ಬಿಟ್ಟು ಇನ್ನು ಕೆಲವು ವಿದೇಶಿಯರಿದ್ದರು. ಇಬ್ಬರು ಜರ್ಮನ್ ದಂಪತಿಗಳು, ಸ್ವಲ್ಪ ವಯಸ್ಸಾದವರು, ಹತ್ತಿರದಲ್ಲಿದ್ದ ಐಲೆಂಡ್ ಪೀಕ್ ಹತ್ತಲು ಯೋಚಿಸಿದ್ದರು. ಅದೊಂದು ಸುಂದರವಾದ ಪರ್ವತ.


ಐಲೆಂಡ್ ಪೀಕ್

ಆದರೆ ಅದು ಚುಕುಂಗ್ ಗಿಂತ ದೂರದಲ್ಲಿತ್ತು. ವಸುಮತಿಯವರು ಅದನ್ನು ಹತ್ತಲು ಲುಕ್ಲಾ ಇಂದ ಅದರ ಬೇಸ್ ಕ್ಯಾಂಪ್ ತಲುಪಲು ೧೦ ದಿನ ತೆಗೆದುಕೋಂದಿದ್ದರಂತೆ. ಕೆಯೆಮ್ಎ ಮೊದಲು ಈ ಪರ್ವತ ಹತ್ತಲು ಯೋಚಿಸಿದ್ದರಂತೆ ಆದರೆ ಎಲ್ಲರೂ ಅಷ್ಟು ರಜೆ ಹಾಕಲು ತಯ್ಯಾರಿರಲಿಲ್ಲವಾದ್ದರಿಂದ ಎವೆರೆಸ್ಟ್ ಬೇಸ್ ಕ್ಯಾಂಪ್ ಎಂದು ನಿರ್ಧರಿಸಿದರಂತೆ.

ನಾನು ಹಲ್ಲುಜ್ಜುತ್ತಾ ನಿಂತಿದ್ದಾಗ, ಜರ್ಮನ್ ದಂಪತಿಗಳು ಹೊರಟರು, ಆದರೆ ಅವರು ತಮ್ಮ ಪ್ಲಾನ್ ಬದಲಿಸಿ ಕಾಲಾ ಪತ್ತರ್ ಗೆ ಹೋಗುವರಿದ್ದರು, ನಮ್ಮಂತೆ. ’ಐಲೆಂಡ್ ಪೀಕಿನಲ್ಲಿ ತುದಿಯ ಕೆಳಗಡೆ ಒಂದು ದಿನ ಹಿಮದಲ್ಲಿ ಟೆಂಟ್ ಹಾಕಿ ಉಳಿಯಬೇಕೆಂದು, ನಂತರ ಒಂದು ಹಿಮದ ಏರಿಯ ಗುಂಟ ನಡೆದು ತುದಿ ಹತ್ತಲು ಶುರುಮಾಡಬೇಕು. ಈ ಹಿಮದ ಏರಿ ಪ್ರತೀದಿನ ಸ್ವಲ್ಪ ಜಾಗ ಬದಲಿಸುವುದರಿಂದ ಹಿಮ ಬಹಳ ಸಡಿಲ ಇರುತ್ತದೆ. ಆದ್ದರಿಂದ ಅದು ಅಪಾಯಕಾರಿ. ಹೀಗಾಗಿ ಈ ಸಲ ನಾವು ಕಾಲಾ ಪತ್ತರಿಗೇ ಹೋಗುವ ಎಂದು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ನಾವು ಚುಕುಂಗ್ ಗೆ ಅಕ್ಲಮಟೈಸೇಶನ್ ಗೆ ಹೋಗುವವರಿದ್ದೆವು. ಅದು ಕೊನೆಯ ಹಳ್ಳಿ. ಮುಂದಕ್ಕೆ ಕೇವಲ ಚಾರಣಿಗರಿಗಾಗಿ ಲಾಡ್ಜ್ ಇದ್ದುವೇ ವಿನಃ ಹಳ್ಳಿಗಳಿರಲಿಲ್ಲ. ಚುಕುಂಗೆ ಹೋಗುವದಾರಿ ನಿಧಾನವಾಗಿ ಏರುಮುಖವಾಗಿದ್ದು, ಹತ್ತುವುದು ಗೊತ್ತಾಗುತ್ತಿರಲ್ಲಿಲ್ಲ. ನಾವು ೧೧:೪೫ ಕ್ಕೆ ಒಂದು ಚಿಕ್ಕ ಮನೆಯ/ಗೊಂಪ ಹತ್ತಿರ ಬಂದೆವು ಅಲ್ಲಿಂದ ಚುಕುಂಗ್ ದೂರದಲ್ಲಿ ಕಾಣಿಸುತ್ತಿತು. ಚುಕುಂಗ್ ಹಿಂದೆ ಐಲೆಂಡ್ ಪೀಕ್ ಸುಂದರವಾಗಿ ನಿಂತಿತ್ತು. ಈಗಾಗಲೇ ಸಮಯ ಮೀರಿ ಹೋಗಿದ್ದುದ್ದರಿಂದ, ವಸುಮತಿಯವರು ಹಿಂತಿರುಗಲು ನಿರ್ಧರಿಸಿದರು. ಅದರಂತೆ ನಾವು ಹಿಂತಿರುಗಿ ಬಂದೆವು. ನಂತರ ಚೌಮೆನ್, ಫ್ರೈಡ್ ರೈಸ್ ಹಾಗು ವೆಜ್ ಮೊಮೊ ಗಳನ್ನು ಸರಿಯಾಗಿ ತಿಂದು ಅಲ್ಲಿದ್ದ ವಿದೇಶಿಯರೊಡಗೂಡಿ ಆಟವಾಡುತ್ತಾ ಕಾಲ ಕಳೆದೆವು. ಹೊರಗೆ ಬಹುಶಃ ಸೊನ್ನೆ ಡಿಗ್ರಿ ಉಷ್ಣಾಂಶ ಇದ್ದು, ನಾವು ನಡೆಯುವಾಗ ೫ ರಿಂದ ೧೫ ಡಿಗ್ರಿ ಇರುತ್ತಿತ್ತು. ಬಹುಶಃ ಮುಂದೆ ಹೋದಂತೆ ನಮಗೆ ಹಿಮ ಸಿಗುವ ಸಾಧ್ಯತೆ ಇತ್ತು ಹಾಗು ನಾಳೆಯಿಂದ ನಾವು ನಮ್ಮ ಬೆಚ್ಚನೆಯ ಫ್ಲೀಸ್ ಜಾಕೆಟ್ (ಇಲ್ಲಿ ಉಲ್ಲನ್ ಜಾಕೆಟ್ಟುಗಳು ಉಪಯೋಗಕ್ಕೆ ಬರುವುದಿಲ್ಲ) ಹಾಗು ಗಾಳಿಯನ್ನು ತಡೆಯುವ ವಿಂಡ್ ಚೀಟರುಗಳನ್ನು ಧರಿಸುವವರಿದ್ದೆವು. ಆದರೆ ಒಂದುಸಲ ನಡೆಯಲು ಶುರುಮಾಡಿದ ಮೇಲೆ, ಎಲ್ಲವನ್ನೂ ಕಿತ್ತೆಸೆದು ಬರಿ ಟಿ-ಶರ್ಟ್ ನಲ್ಲಿ ಇರುತ್ತಿದ್ದೆವು. ನಾಳೆಯಿಂದ ಬಹುಶಃ ನಾವು ಒಳಗೆ ಥರ್ಮಲ್ಸ್ ಹಾಕಿಕೊಂಡು ಮೇಲೆ ಎರಡು ಪ್ಯಾಂಟುಗಳನ್ನು ಹಾಕಿಕೊಳ್ಳಬೇಕಾಗಬಹುದೆಂದು ಸ್ಮಿತ ಹೇಳುತ್ತಿದ್ದಳು.

ಚುಕುಂಗ್ ಸುಮಾರಾಗಿ ೧೫,೬೦೦ ಅಡಿ ಎತ್ತರದಲ್ಲಿದ್ದರೂ ಅದು ನಿಧಾನವಾದ ಏರು, ಲೋಬುಚೆಯೂ ಸಹ ಸುಮಾರಾಗಿ ೧೬,೦೦೦ ಅಡಿಗಳ ಎತ್ತರದಲ್ಲಿದ್ದರೂ ಅದು ಬಹಳ ಕಡಿದಾದ ಏರು. ಆದರೂ ನಾಮಗೆಲ್ಲಾ ಈಗಾಗಲೆ ಎತ್ತೆತ್ತರಕ್ಕೆ ಹತ್ತಲು ಅಭ್ಯಾಸವಾಗಿದ್ದುದ್ದರಿಂದ ಇದೂ ಹತ್ತಲು ಸಾಧ್ಯವೆಂಬ ನಂಬಿಕೆ ಇತ್ತು. ಮೋಹನ್ ಇಬಿಸಿಗೆ ಬರುದಿಲ್ಲವೆಂದು ನಿರ್ಧರಿಸಿದ್ದ. ಅವನಿಗೆ High altitude pulmonary edema (HAPE - ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು) ಆಗಿತ್ತು. ಹಾಗಾಗಿ ಅವನನ್ನು ಕೆಳಗಿನ ಕ್ಯಾಂಪ್ ಗೆ ಇಳಿಸಿ ಸುಧಾರಿಸುವುದೆಂದು ವಸುಮತಿಯವರು ನಿರ್ಧರಿಸಿದ್ದರು. ಅದರಂತೆ ಅವನು ಕುದುರೆಯ ಮೇಲೆ ಕುಳಿತು ಒಂದೊಂದೇ ಕ್ಯಾಂಪ್ ಇಳಿಯುವವನಿದ್ದ. ಪ್ರತಿ ಕ್ಯಾಂಪ್ ತಲುಪಲು ೬೦೦ ಭಾರತೀಯ ರುಪಾಯಿಗಳು. ವಸುಮತಿಯವರು ಖಾಜಿ ಹತ್ತಿರ ದುಡ್ಡು ಕೊಟ್ಟು ಮೋಹನನ್ನು ಕ್ಷೇಮವಾಗಿ ಕೆಳಗಿಳಿಸುವಂತೆ ತಿಳಿಸಿದರು. ನಾವೆಲ್ಲಾ ಮುಂದೆ ನಮಗೇನೂ ಆಗಕೂಡದೆಂದು ಬಯಸಿದೆವು. ಅದಕ್ಕಾಗಿ ಎಲ್ಲರೂ ಅವರವರದೇ ಆದ ತಯಾರಿಗಳನ್ನು ನೆಡೆಸುತ್ತಿದ್ದರು. ಸಂದೀಪ್, ಸ್ವಪ್ನ ಹಾಗು ಅಶೋಕ್ ನಾಳೆ ಒಬ್ಬ ಪೋರ್ಟರನ್ನು ಗೊತ್ತುಮಾಡಿಕೊಳ್ಳಲು ನಿರ್ಧರಿಸಿದರು. ನಾಳೆ ಮರೆಯದೆ ಬಟ್ಟೆ ಬದಲಾಯಿಸುವ ದಿನ !

3 comments:

Unknown said...

ಮೇಡಂ ಒಂದರ ಹಿಂದೆ ಒಂದರಂತೆ ಎರಡು ಪೋಸ್ಟ್ ಗಳನ್ನು ಒಟ್ಟಿಗೆ ನೋಡಿ ಖುಷಿಯಾಯಿತು. ಅಂದ ಹಾಗೆ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷದಲ್ಲಿ ಹೊಸ ಹುಮ್ಮಸ್ಸಿನಿಂದ ಬರೆಯಲು ಹೊರಟಿದ್ದಕ್ಕೆ ಅಭಿನಂದನೆಗಳು.ಐಲೆಂಡ್ ಪೀಕ್ ನೋಡಿ ಆಯಿತು. ಈಗ ದುಗ್ಲಾಕ್ಕೆ ಹೋಗುತ್ತಿದ್ದೇನೆ.

ಸಾಗರದಾಚೆಯ ಇಂಚರ said...

wonderful artcile, tumba khushiyayitu odutta hodante

ಸಾಗರದಾಚೆಯ ಇಂಚರ said...

wonderful artcile, tumba khushiyayitu odutta hodante