Sunday, March 29, 2009

ಎಂದೂ ಮರೆಯಲಾಗದ ದುಗ್ಲಾ ಏರು ! ಉಸ್ಸಪ್ಪಾ...

ಒಂಬತ್ತನೆಯ ದಿನ (ಮೇ ೧೧, ೨೦೦೮)
ದಿಂಗ್ ಬೋಚೆ (4410 ಮೀ/14464 ಅಡಿ) - ಲೊಬು ಚೆ (4930 ಮೀ/16170 ಅಡಿ)

ನಾವು ಬೆಳಿಗ್ಗೆ ಸುಮಾರು ೭:೦೦ ಗಂಟೆಗೆ ಓಟ್ಸ್ ಗಂಜಿಯನ್ನು ಕುಡಿದು, ಕೊನೆಯ ಬಾರಿಗೆ ಆ ಕುಪ್ರಸಿದ್ದ ಚಾರ್ಪಿಗಳಿಗೆ (ಮೊದಲೇ ವಿವರಿಸಿದ ಟಾಯ್ಲೆಟ್ಟುಗಳಿಗೆ ಚಾರ್ಪಿಗಳೆನ್ನುತ್ತಾರೆ.) ಭೇಟಿ ಕೊಟ್ಟು, ಮುಖ ಕೈಗಳಿಗೆಲ್ಲಾ ಸನ್ ಸ್ಕ್ರ್ರೀನ್ ಲೋಶನ್ ಬಳಿದು ಹೊರಡಲು ಅನುವಾದೆವು.

ದೂರದಲ್ಲಿ, ಹಿಂದೆ ಬಿಟ್ಟ ದಿಂಗ್ ಬೋ ಚೆ

ದುಗ್ಲಾಗೆ ನಮ್ಮ ಪಯಣ

ದಿಂಗ್ ಬೋ ಚೆಯಿಂದ ದುಗ್ಲಾಗೆ ಹೋಗುವ ದಾರಿಯಲ್ಲಿ ಉದ್ದಕ್ಕೂ ದೂರದಲ್ಲಿ ಫೆರಿಚೆ ಊರು ಹಾಗು ಅದಕ್ಕೆ ಹೋಗುವ ದಾರಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಿ ಓಡಾಡುತ್ತಿದ್ದ ಜನಗಳೂ ಸಹ ಇರುವೆಗಳಂತೆ ಕಾಣಿಸುತ್ತಿದ್ದರು. ನಾನು ಹಿಂದೆಯೇ ಹೇಳಿದಂತೆ ಪರ್ವತಗಳ ಹತ್ತಿರ distance is deceptive. ಫೆರಿಚೆ ನಾವು ಹಿಂತಿರುಗಿ ಬರು ದಾರಿಯಲ್ಲಿ ಇತ್ತು. ನಾನು ಹಿಂದೆ ತೋರಿಸಿದ್ದ ನಕ್ಷೆಯಲ್ಲಿ ನೋಡಿ.

ನರೇಶ್ ಬಗ್ಗಿ ಫೆರಿಚೆಯನ್ನು ಗಮನಿಸುತ್ತಿರುವುದು

ಇಲ್ಲಿಯ ನಂತರದ ನೆನೆಪಿಟ್ಟುಕೊಳ್ಳುವಂತಹ ಜಾಗವೆಂದರೆ ದುಗ್ಲಾ ಏರು. ನಾವು ೧:೩೦ ಕ್ಕೆ ದುಗ್ಲಾ ತಲುಪಿದೆವು. ಇದರ ಪ್ರಾರಂಭದಲ್ಲಿ ಒಂದು ಟಿ ಅಂಗಡಿ ಇದೆ. ಅದರ ಹೆಸರು ಯಾಕ್ ಲಾಡ್ಜ್. ಅಲ್ಲಿ ನಾವು ಒಂದು ಅತಿ ದೊಡ್ಡ ತಾಲಿಯಲ್ಲಿ ನೂಡಲ್ಸ್ ಸೂಪು, ಹಾಗೂ ಬಿಸಿ ನಿಂಬೆ ರಸವನ್ನು ಕುಡಿದೆವು. ಸೂಪಿಗೆ ಎಷ್ಟು ಬೆಳ್ಳುಳ್ಳಿ ಹಾಕಿದ್ದರೆಂದರೆ, ನಕ್ಕಿದರೆ, ತೇಗಿದರೆ, ಬಾಯಿಬಿಟ್ಟರೆ ಬೆಳ್ಳುಳ್ಳಿ ! ಸಾಕಾಗಿ ಹೋಯಿತು. ಆದರೆ ಆಲ್ಟಿಟ್ಯುಡ್ ಸಿಕ್ನೆಸ್ ಗೆ ಇದು ಬಹಳ ಒಳ್ಳೆಯದೆಂದು ಹೇಳಿಕೊಂಡು ಅನುಸರಿಸಿಕೊಂಡೆವು. ಆ ಲಾಡ್ಜ್ ನ ಮೇಜುಗಳು ದುಗ್ಲಾ ಏರಿಗೆ ಮುಖಮಾಡಿ ಇವೆ. ಹಾಗಾಗಿ ಯಾರು ಎಲ್ಲಿ ಹತ್ತುತ್ತಾ ಇದ್ದಾರೆ, ಯಾರು ಬೇಗ ಬೇಗ ಹತ್ತುತ್ತಾ ಇದ್ದಾರೆ, ಯಾರಿಗೆ ತ್ರಾಣ ಇಲ್ಲದೆ ಲಾಟ್ರಿ ಹೊಡೆಯುತ್ತ ಇದ್ದಾರೆ ಎಂದು ಚೆನ್ನಾಗಿ ಕಾಣುತ್ತಿತ್ತು. ನಾವು ನಮ್ಮ ಮುಂದಿರುವ ಕಷ್ಟದ ಕೆಲಸವನ್ನು ಯೋಚಿಸಿಕೊಳ್ಳುತ್ತಾ, ಇನ್ನೊಂದು ಚೂರು ಹೊತ್ತು ಇಲ್ಲೇ ಕುಳಿತುಕೊಳ್ಳುವ ಎಂದು ಸೋಮಾರಿಗಳಂತೆ ಇದ್ದು ವಸುಮತಿಯವರಿಂದ ಬೈಸಿಕೊಂಡು ಎದ್ದು ಹೊರಟೆವು.

ದೂರದಲ್ಲಿರುವ ನೀಲಿ ಹೆಂಚಿನ ಮನೆ ಯಾಕ್ ಲಾಡ್ಜ್


ಮತ್ತೂ ದೂರದಿಂದ ಯಾಕ್ ಲಾಡ್ಜ್ (ನೀಲಿ ಚುಕ್ಕೆ!)

ದುಗ್ಲಾದಲ್ಲಿ ಕೇವಲ ಎರಡು ಲಾಡ್ಜ್ ಇವೆ. ಖುಂಬು ಗ್ಲೇಶಿಯರ್ ದುಗ್ಲಾ ಹತ್ತಿರಲ್ಲಿ ಕೊನೆಗೊಳ್ಳುತ್ತದೆ.ಇಲ್ಲಿ ಸುತ್ತಾ ಮುತ್ತಾ ಯಾರೂ ಕಾಣಿಸುವುದ್ದಿಲ್ಲ. ದಿಂಗ್ ಬೋ ಚೆಯಿಂದ ಮುಂದಕ್ಕೆ ಮರಗಳು ಗಿಡಗಳು ಕಾಣಸಿಗುವುದಿಲ್ಲ. ಬರೀ ತಣ್ಣಗೆ ಕಲ್ಲು ಬಂಡೆಗಳಿರುವ ಬರಡು ಭೂಮಿ. ದುಗ್ಲ ಹತ್ತಿರದಿಂದಲೇ ಚೊ ಲಾ ಪಾಸ್ ಮುಖಾಂತ ಗೋಕಿಯೊ ಸರೋವರಕ್ಕೆ ದಾರಿ ಶುರುವಾಗುತ್ತದೆ. ಏವೆರೆಸ್ಟ್ ಗೆ ಹೀಗೂ ಹೋಗಬಹುದು. ಆದರೆ ಅದು ಬಹಳ ಸುತ್ತು ಬಳಸು ಹಾಗು ಕಷ್ಟಕರವಾದ ದಾರಿ. ದುಗ್ಲಾ ಏರು ಹತ್ತಿದ ನಂತರ ಸಿಗುವುದು ಎವೆರೆಸ್ಟ್ ಗಾಗಿ ಪ್ರಾಣ ಕೊಟ್ಟವರಿಗಾಗಿ (ಶರ್ಪಾಗಳು ಮತ್ತಿತರು) ಮಾಡಿರುವ ಸ್ಮಾರಕಗಳು. ಕೆಲವಕ್ಕೆ ಹೆಸರಿನ ಫಲಕಗಳನ್ನು ಹಾಕಿರುವುದರಿಂದ ನಾವು ಕೇಳಿದ್ದ ಕೆಲವು ಸುಪ್ರಸಿದ್ದ ಪರ್ವತಾರೋಹಿಗಳನ್ನು ನೆನಪಿಸಿಕೊಂಡೆವು. ಅವುಗಳಲ್ಲಿ ಬಹಳಷ್ಟು, ಕಲ್ಲುಗಳನ್ನು ಲಗೋರಿ ಆಟಕ್ಕೆ ಜೋಡಿಸುವಂತೆ ಜೋಡಿಸಿರುತ್ತಾರೆ. ಅಲ್ಲಿ ಲಖನ್ ತನಗಾಗಿ ಒಂದು ಸಣ್ಣ ಸ್ಮಾರಕ ಮಾಡಿಕೊಂಡ. ಸ್ಮಾರಕವೇನೋ ಮಾಡಿಕೊಂಡಾಯಿತು ಇನ್ನು ಎವೆರೆಸ್ಟ್ ಹತ್ತಬೇಕಷ್ಟೆ ಅಂತ ಅವನ ಅನಿಸಿಕೆ !

ಪ್ರಾಣ ಕೊಟ್ಟವರಿಗಾಗಿ ಸ್ಮಾರಕಗಳು

ನಾವು ಖುಂಬು ಗ್ಲೇಶಿಯರ್ ಕೊನೆಯ ಭಾಗದಗುಂಟ (terminal moraine) ನಡೆಯುತ್ತಾ ಹೋಗುತ್ತಿದ್ದಂತೆ ನಮಗೆ ಹಿಮಾಲಯದ ಹಲವಾರು ಪ್ರಸಿದ್ದ ಪರ್ವತಗಳು ಕಾಣಸಿಗುತ್ತವೆ. ಆಗ ಈಗ ತಿರುವಿನಲ್ಲಿ ಮೌಂಟ್ ಎವೆರೆಸ್ಟ್ ಕೂಡ ಕಾಣಿಸಿಕೊಳ್ಳುತ್ತಿತ್ತು. ಅದೆಷ್ಟು ಎತ್ತರದಲ್ಲಿ ಇದೆಯೆಂದರೆ ಅದರ ತುಟ್ತತುದಿಯ ಸುತ್ತ ಯಾವಾಗಲೂ ಹಿಮ (plume) ಮುಚ್ಚಿರುತ್ತಿತ್ತು. ನಮಗೆ ಮೊದಲ ಸಲ ಕಾಲಾ ಪತ್ತರ್ ಕಾಣಿಸಿಕೊಂಡಾಗ ಬಹಳ ಬೇಸರವಾಯಿತು. ಅದೊಂದು ಕರಿಯ ದಿಬ್ಬ ಅಥವಾ ಗುಬಟೆ ಅಷ್ಟೆ. ಅದರ ಹಿಂದೆ ಮುಂದೆ ಸುಂದರವಾದ ಅಷ್ಟೇನು ಎತ್ತರ ಇಲ್ಲದಂತಹ ಪರ್ವತಗಳು ಇದ್ದುವು.

ಎಡಗಡೆಯಲ್ಲಿ ಕಾಣುವ ಕರಿ ದಿಬ್ಬವೇ ಕಾಲಾಪತ್ತರ್ !

ಅದರ ಹಿಂದೆ ಪುಮೊರಿ ’ಓ ಅದನ್ನೇ ಹತ್ತಬಹುದಿತ್ತಲ್ಲವೇ’ ಎಂಬಂತೆ ಕಾಣುತ್ತಿತ್ತು. ಆದರೆ ನಾವು ಕಾಲಾ ಪತ್ತರ್ ಹತ್ತುವಾಗ ಸತ್ತೇಹೋದೆವೆನ್ನಿಸಿ, ’ಇದೇ ಇಷ್ಟು ಅಸಾಧ್ಯಾವಾದರೆ ಇನ್ನು ಪುಮೋರಿ ಹೇಗಿರಬಹುದು’ ಎಂದುಕೊಂಡೆವು. ಇನ್ನು ಮೌಂಟ್ ಎವೆರೆಸ್ಟ್ ಹೇಗಿರಬಹುದು !

ನಾವು ಲೋಬುಚೆ ತಲುಪಿದಾಗ ೧:೩೦ ಮಧ್ಯಾನ. ಕೊರೆಯುವ ಚಳಿ. ಊಟವೆಲ್ಲಾ ಆದ ಮೇಲೆ, ನಾವು ಆಟವಾಡುತ್ತಾ ಕುಳಿತಿರಬೇಕಾದರೆ, ನೋಡ ನೋಡುತ್ತಿದ್ದಂತೆ ಹೊರಗೆ ಹಿಮ ಬೀಳಲು ಶುರುವಾಯಿತು. ಎಲ್ಲೆಲ್ಲೂ ಬಿಳಿ ಮರಳಿನಂತೆ.


ಎಲ್ಲೆಲ್ಲೂ ಹಿಮ


ನಾವೆಲ್ಲಾ ನಮ್ಮ ಬೆಚ್ಚನೆಯ ಕೈ ಚೀಲಗಳು ಹಾಗು ಬಾಲಕ್ಲಾವ (ಕಿವಿ ಮುಚ್ಚುವ ಬೆಚ್ಚನೆಯ ಟೋಪಿ) ಮತ್ತಿತರೆ ಬಟ್ಟೆಗಳನ್ನು ಹಾಕಿಕೊಂಡು ಹೊರ ನಡೆದೆವು. ಹೊರಗೆ ಹಿಮದ ಚೆಂಡುಗಳನ್ನು ಒಬ್ಬರಿಗೆ ಒಬ್ಬರು ಹೊಡೆದುಕೋಂಡು ಆಟವಾಡಿದೆವು. ನಾನೊಂದು ಚಿಕ್ಕ ಹಿಮಮಾನವನನ್ನು ಮಾಡಿದೆ. ನನ್ನ ಜೀವಮಾನದಲ್ಲಿ ಮೊದಲನೆಯಸಲ ಹೀಗೆ ಹಿಮದಲ್ಲಿ ಆಟವಾಡಿದ್ದು ! ಅದು ಹಿಮಾಲಯದ ತುದಿಯಲ್ಲಿ (almost)! ಇಲ್ಲಿ ಬರಿ ಮೋಂಬತ್ತಿ ಬೆಳಕು. ಹಾಗು ಕುಡಿಯುವ ನೀರಿಗೆ ಲೀಟರ್ ಗೆ ೩೫೦/- ನೇಪಾಲಿಯನ್ ರೂಪಾಯಿಗಳು. ಚಳಿ ಜಾಸ್ತಿಯಾಯಿತು. ನಾವೆಲ್ಲಾ ನಮ್ಮ ಎಲ್ಲಾ ಬೆಚ್ಚನೆಯ ಬಟ್ಟೆಗಳನ್ನು ತೊಟ್ಟೆವು. ನಮ್ಮ ಹೋಟೆಲ್ ಮಾಲೀಕನಿಗೆ ನಮಗೆಲ್ಲಾ ನೀರನ್ನು ಬಿಟ್ಟಿಯಾಗಿ ಕೊಡಬೇಕೆಂದು ವಸುಮತಿಯವರು ಪರಿಪರಿಯಾಗಿ ಕೇಳಿಕೊಂಡರು. ಅವನು ಹಾಗೂ ಹೀಗೂ ಎನೇನೊ ಪ್ರಯತ್ನಿಸಿ, ನಂತರ, ನಾವೆಲ್ಲರೂ ಕುಣಿದರೆ ನಮಗೆ niirusiqqabahudend. ಅವನು ದೊಡ್ಡ ತಪ್ಪು ಮಾಡಿದ್ದ. ನಾವೆಲ್ಲರೂ ಆಮಂತ್ರಣವಿಲ್ಲದೇ ಕುಣಿಯುವವರು, ಇನ್ನು ನೀರಿಗಾಗಿ ಇದೂ ಒಂದು ಹೋರಾಟವೇ ? ನಿಲ್ಲಿಸಿ ಎನ್ನುವವರೆಗೆ ಕುಣಿದೆವು.


೧೬,೧೭೦ ಅಡಿ ಎತ್ತರದಲ್ಲಿ ಬುಖಾರಿ ಎದುರಿಗೆ ನಮ್ಮ ಕುಣಿತ !

ಬಗೆ ಬಗೆಯಾದ ಹಾಡುಗಳಿಗೆ ತರತರವಾದ ನೃತ್ಯಗಳನ್ನು ಮಾಡಿದೆವು. ಆಗ ಅಲ್ಲಿಗೆ ಇಬ್ಬರು ಗಂಡ ಹೆಂಡತಿ ಹಾಗು ಅವರ ಪೊರ್ಟರ್ ಬಂದರು. ಪೊರ್ಟರ್ ಗೆ ಹುಶಾರು ಇರಲಿಲ್ಲ. ಆಲ್ಟಿಟ್ಯುಡ್ ಸಿಕ್ನೆಸ್ ಇಂದ ತೊಳಲುತ್ತಿದ್ದ. ಬಹಳ ಜ್ವರ ಇತ್ತು. ಆಗ ಹೋಟಲಿನ ಮಾಲೀಕ ನಮಕೆ ಬಿಟ್ಟಿ ನೀರು ಕೊಡುವುದಾಗಿಯೂ, ನಾವು ಹಾಡುವುದನ್ನು ನಿಲ್ಲಿಸಿ ಸುಮ್ಮನಾಗಬೇಕೆಂದು ಹೇಳಿದ. ಆ ಎರಡು ದಂಪತಿಗಳಿಗೆ ಹಿಂದಿ ಬರುತ್ತಿರಲ್ಲಿಲ್ಲವಾದ್ದರಿಂದ ಅವರು ವಸುಮತಿಯವರಿಗೆ ಮಾಲೀಕನಿಗೆ ಪೊರ್ಟರ್ ನ ಎಲ್ಲ ಕರ್ಚು ವೆಚ್ಚಗಳನ್ನು ಅವರೆ ಭರಿಸುವುದಾಗಿಯೂ, ಅವನನ್ನು ಕುದುರೆಯ ಮೇಲೆ ಕೆಳಗೆ ಸಾಗಿಸಬೇಕೆಂದು ತಿಳಿಸುವಂತೆ ಕೇಳಿಕೊಂಡರು. ಇದು ನಮಗೆ ಆಲ್ಟಿಟ್ಯುಡ್ ಸಿಕ್ನೆಸ್ ಅನ್ನು ಮತ್ತೂ ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.ನಾವು ನಾಳೆ ಗೋರಕ್ ಶೆಪ್ ತಲುಪಿ ನಂತರ ಅದೇ ಮಧ್ಯಾನ ಬೇಸ್ ಕ್ಯಾಂಪಿಗೂ ಹೋಗಬೇಕಿತ್ತು. ಎಲ್ಲರಿಗೂ ಏನೋ ಒಂದು ತರದ ದಿಗಿಲು, ಆತುರ, ಕಳವಳ, ಕಾತರತೆ. ಎಲ್ಲರ ಮನದಲ್ಲೂ ಅವರವರದ ಬಗ್ಗೆ ಮಾತ್ರ ಚಿಂತೆ. ಎಲ್ಲರಲ್ಲೂ ತಾನು ಮಾಡೇತೀರುತ್ತೇನೆಂಬ ಛಲ. ಆ ರಾತ್ರಿ ಯಾರಿಗೂ ಸರಿಯಾಗಿ ನಿದ್ದೆ ಇಲ್ಲ.

7 comments:

Dr. B.R. Satynarayana said...

ಮೇಡಂ
ಈ ಪೋಸ್ಟಿನಲ್ಲಿರುವ ಚಿತ್ರಗಳೇ ಎಲ್ಲಾ ಕಥೆ ಹೇಳುತ್ತಿವೆ! ಚಿತ್ರಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. 'ದುಗ್ಲಾಗೆ ನಮ್ಮ ಪಯಣ' ಎಂಬ ಅಡಿಟಿಪ್ಪಣಿ ಹೊಂದಿರುವ ಚಿತ್ರದ ಮೋಡದ ಮುಸುಕು ನನಗೆ ಬಹಳ ಇಷ್ಟವಾಯಿತು. ಪ್ರಕೃತಿಯ ಅಗಾದತೆಯ ಹಿನ್ನೆಲೆಯಲ್ಲಿ ಅದನ್ನು ಅನಾವರಣಗೊಳಿಸಲು ಹೊರ ಮಾನವ ಸಾಹಸಿಗಳ ಸಾಲು ಸಾಲು...
ಮುಂದಿನ ಭಾಗಗಳಿಗಾಗಿ ಕಾಯುತ್ತಿರುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ನನಗೆ ಕನಸಿತ್ತು. ನಾನೂ ಹಿಮಾಲಯ ಚಾರಣ ಮಾಡಬೇಕೆಂದು. ನಿಮ್ಮ ಲೇಖನಗಳನ್ನು ಓದುತ್ತಿದ್ದಂತೆ ಈಗ ನನ್ನ ಬಗ್ಗೆಯೇ ಅನುಮಾನಗಳು, ಭಯ ಶುರುವಾಗಿದೆ! ಚಿತ್ರಗಳನ್ನು ನೋಡಿ ಅದ್ಭುತ ಅಂದುಬಿಡುತ್ತೇವೆ. ನಿಮ್ಮ ಲೇಖನದಿಂದ ಚಾರಣದ ಸುಖ ದುಃಖ ಗೊತ್ತಾಗುತ್ತಿದೆ. ಒಟ್ಟಿನಲ್ಲಿ ಜೀವನದಲ್ಲಿ ಒಮ್ಮೆ ನೋಡಲೇಬೇಕು.

Shyam Sajankila said...

Hi,
As every one commented... very nice narration of the experience. While reading ... along with the photo... it feels we being there.

I always wanted to trek at Himalayas. But after reading your article... it has become like "MUST".

I have one request. Can you please send information regarding who conducts the trekking, their contact information, approximate total expenses you had and how many days did it require for your TOTAL return journey.

Eshanye K P said...

Dear Shyam,

If you can give me your personal mail ID then probably i can reply you.

Regards
Eshanye.K.P

Dr.Gurumurthy Hegde said...

ಮೇಡಂ,
ಜಾಗ ತುಂಬಾ ಸುಂದರವಾಗಿದೆ. ದಯವಿಟ್ಟು ಹೋಗುವ ನಕ್ಷೆ ತಿಳಿಸಿ. ನನಗೆ ಇ-ಮೇಲ್ ಮಾಡಿ.
murthyhegde@gmail.com

agniprapancha said...

ಇಂಥ ಪರಿಸರದಲ್ಲಿ ಸುತ್ತಿಬರುವ ನನ್ನ ಕನಸು ಇನ್ನೂ ಕನಸಾಗೆ ಉಳಿದಿದೆ. ದೇಶದ ನೆತ್ತಿಯಲ್ಲಿ ಮಾತ್ರ ಸುತ್ತಲಾಗಿಲ್ಲ. ಉಳಿದಂತೆ ಬಹುತೇಕ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿದ್ದೇನೆ. ನನ್ನ ಕಲಿಕೆಯ ಸಂದರ್ಭದಲ್ಲೇ...
... ಮಾಹಿತಿ ಚೆನ್ನಾಗಿದೆ.

ಹರೀಶ ಮಾಂಬಾಡಿ said...

Informative