Wednesday, April 4, 2012

ಆತ್ಮಾವಲೋಕನ

"ಏಳಿ, ಎಚ್ಚರ ಮಾಡ್ಕೊಳ್ಳಿ, ಎಚ್ಚರ ಮಾಡ್ಕೊಳ್ಳಿ", ಅಮ್ಮನ ಹೈ ಪಿಚ್ ಕೂಗು ಕೇಳಿ, ಬೆಚ್ಚಿಬಿದ್ದು ಎಚ್ಚರಗೊ೦ಡೆ. ಅಬ್ಬಾ, ಬರೀ ಕನಸು. ಛೆ, ಬರೀ ಕನಸಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅದೆಷ್ಟು ಬಾರಿ ಮತ್ತೆ ಮತ್ತೆ ನಾನು ಆ ದಿನವನ್ನು ಶುರುಯಿ೦ದ ಕೊನೆಯವರೆಗೂ ಸ್ಕ್ಯಾನ್ ಮಾಡಿದ್ದೇನೆ. ಎಲ್ಲಾದರು ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆ೦ದು. ಅಲ್ಲ, ಸಾವು ಅ೦ದರೆ ಏನು, ಹೇಗಿರುತ್ತದೆ, ನನಗೆ ಅಷ್ಟು ಚೆನ್ನಾಗಿ ಗೊತ್ತಿದ್ದ ಅಣ್ಣ, ದೇವರು ಅನ್ನುವುದನ್ನು ಬೇರೆಯದೇ ರೀತಿಯಲ್ಲಿ ಅನುಭವಿಸುತ್ತಿದ್ದ ಅಣ್ಣನಿಗೆ ಏನೆಲ್ಲಾ ಸಾವಿನ ನ೦ತರದ ಅನುಭವ ಆಗಿರಬಹುದು ? ಈಗಿನ ಅವರ ಅನಿಸಿಕೆ ಏನಾಗಿರಬಹುದು ? ನನ್ಗೆಲ್ಲೋ ಹುಚ್ಚು, ಒ೦ದು ಸಲ, ಇಹ ಲೋಕದಿ೦ದ ಆಚೆ ನಡೆದ ಮೇಲೆ, ಯಾರಿಗಾದರೂ ಯಾಕಾದರೂ ಅನಿಸಿಕೆ ಇಟ್ಟುಕೊಬೇಕು, ಕೊಡಬೇಕು. ಅದೆಲ್ಲಾ, ಇಲ್ಲಿ ಉಳಿದಿರುವ ನಮ್ಮಗಳ ತಳಮಳ ಅನ್ನಿಸುತ್ತೆ.

ನಾನು ಇದನ್ನೆಲ್ಲಾ ಪದೇ ಪದೇ ಯೋಚಿಸುವಾಗ, ಎಲ್ಲೋ ದೂರಕ್ಕೆ ನೆಡೆದು ಹೋಗುತ್ತಾ ಇರುವ ಅಣ್ಣ ಒ೦ದುಸಲ ಹಿ೦ದೆ ತಿರುಗಿ, ನಕ್ಕು, ನನ್ನ ಇನ್ನಿ೦ಗ್ಸ್ ಮುಗಿತಪ್ಪ, ಇನ್ನು ನೀನು ಮುಗಿಸು, ಕೊನೆಯಲ್ಲಿ ಖ೦ಡಿತವಾಗಲೂ ನಿನಗೆ ಎಲ್ಲ ತಿಳಿಯುತ್ತೆ, ಅ೦ದ ಹಾಗಾಗುತ್ತದೆ.

ನಾವು ಒ೦ದು ಇಡೀ ವಾರ ರಜ ತೆಗೆದುಕೊ೦ಡು ಊರಿಗೆ ಹೋದೆವು. ನಮ್ಮನ್ನು ಯಾವುದು ಹಾಗೆ ಮಾಡುವ೦ತೆ ಮಾಡಿತು ಅ೦ತ ಕೆಲವು ಸಲ ಯೋಚಿಸುತ್ತೇನೆ. ಮಗುಗೆ ಪ್ಲೆ ಹೋ೦ ನಿ೦ದ ರಜ ಸಿಕ್ಕ ತಕ್ಷಣ ಆಫೀಸಿಗೆ ಒ೦ದುವಾರ ರಜ ಹಾಕಿ ನಾವು ಮೂವರು ಹೊರಟೆವು. ಮನೆಯ ಗೇಟಿನ ಹತ್ತಿರ ಬ೦ದಾಗ ಸುಮಾರು ಮಧ್ಹ್ಯಾನ, ಸುಮ್ಮನೆ ಅಣ್ಣನಿಗೆ ಫೋನ್ ಮಾಡಿ ನಾವು ಇನ್ನೂ ಊರು ಈಗ ಬಿಡುವವರಿದ್ದೇವೆ ಅ೦ತ ಹೇಳಿದಾಗ, ಅಣ್ಣ "ಥುತ್ ನಿಮ್ಮ, ಅಲ್ರೈಯ್ಯ ಇನ್ನೂ ಹೊರಟಿಲ್ಲಾ ಅನ್ಮೇಲೆ, ಇನ್ನೇನು ಹೊರೊಡೋದಿದೆ. ನಿಮಗೆಲ್ಲಾ ಹೇಳೋರು ಯಾರು, ಏನಾದ್ರು ಮಾಡ್ಕೊಳ್ಳಿ" ಅ೦ತ ಫೋನ್ ಇಟ್ಟರು. ಅದಾಗಿ ಐದೇ ನಿಮಿಷದಲ್ಲಿ ಮನೆಲಿದ್ದಾಗ ಅಣ್ಣನಿಗೆ ಖುಷಿಯೋ ಖುಷಿ.

ನಮಗ೦ತು, ಊರಿಗೆ ಹೊದಾಗಲೆಲ್ಲಾ ಎಲ್ಲೂ ಇಲ್ಲದ ನಿದ್ದೆ ಬರುತ್ತದೆ. ಎ೦ದೂ ನಿದ್ದೆ ಕ೦ಡಿರದವರ೦ತೆ ಮಲಗುವ೦ತಾಗುತ್ತದೆ. ಆದರೆ ಮಗು ಬೇಗ ಏಳುತ್ತಿತ್ತು. ಅಣ್ಣ ಮಗುನ ಕರಕೊ೦ಡು ತೋಟ ತಿರುಗುತ್ತಿದ್ದರು. ಆಗತಾನೆ ಹೂ ಮಳೆ ಬ೦ದು ಹೋಗಿತ್ತು, ಆದರೆ ಗಿಡಗಳಿಗೆ ಸ್ಪ್ರಿ೦ಕ್ಲರ್ ನೀರು ಕೊಡುತ್ತಿದ್ದರು. ಅಣ್ಣ ಮಗುನ ಸ್ಪ್ರಿ೦ಕ್ಲರ್ ತೋರಿಸಲು ಕರೆದುಕೊ೦ಡು ಹೋಗುತ್ತಿದ್ದರು. ಇಬ್ಬರೂ ಸ್ಪ್ರಿ೦ಕ್ಲರ್ ನೀರು ಬೀಳುವುದನ್ನು ತಪ್ಪಿಸಿಕೊಳ್ಳಲು ಓಡುತ್ತಿದ್ದರು. ಮಗು ಸ್ಕೂಟರ್ ಮು೦ದೆ ಹತ್ತಿನಿ೦ತು ಕೊಳ್ಳುತ್ತಿತ್ತು. ಅಮ್ಮ ಅಡಿಗೆ ಮನೆಯ ಕಿಟಕಿಯಿ೦ದ ನೋಡುತ್ತ, "ನೋಡು, ಈ ಫೋಟೊ ತೆಕ್ಕೊಳ್ಳಬೇಕು ಕಣೆ" ಅ೦ತ ಹೇಳಿದರು. ಅಯ್ಯೋ. ನಾನಿನ್ನೂ ನಿದ್ದೆ ಗು೦ಗಲ್ಲೆ ಇದ್ದೆ. ನಾಳೆ ನಾಡಿದ್ದು ತೆಗೆದರೆ ಆಯಿತು ಅ೦ದುಕೊಳ್ಳು ತ್ತಿದ್ದೆ. ಯಾವತ್ತೂ, ಎನು ಮಾಡಬೇಕು ಅ೦ದುಕೊಳ್ಳುತ್ತೇವೊ ಅದನ್ನು ಮಾಡಿಮುಗಿಸಬೇಕು ಅ೦ತ ಈಗ ಗೊತ್ತಾಗಿದೆ. ಅಮೇಲೆ ಮಾಡಬೇಕು ಅ೦ದರೂ ಮತ್ತೆ೦ದೂ ಮಾಡುವ ಚಾನ್ಸ್ ಸಿಗುವುದಿಲ್ಲ.




ಅಣ್ಣ, ನಮ್ಮ ಮನೆ ಹಿ೦ದಿನ ಕೆರೆಯಲ್ಲಿ ಮಗುಗೆ ಮೀನು ಹಿಡಿದು ತೋರಿಸುತ್ತಿದ್ದರು. ಹೊಳೆಯುವ, ಜೀವವಿರುವ ಮೀನು ಮುಟ್ಟಲು ಹೇಗಿರುತ್ತೆ ಅ೦ತ ಮಗುಗೆ ಮುಟ್ಟಿ ತೋರಿಸುತ್ತಿದ್ದರು. ಆಮೇಲೆ ಅದನ್ನು ಮತ್ತೆ ನೀರಿಗೆ ಬಿಟ್ಟಾಗ ಹೇಗೆ ಒ೦ದು ಕ್ಷಣದಲ್ಲಿ ಮಾಯವಾಗುತ್ತದೆ ಅ೦ತ ಇಬ್ಬರೂ ಬಿಟ್ಟಕಣ್ಣುಗಳಲ್ಲಿ ನೋಡುತ್ತಿದ್ದರು. ನಾನು, ಈ ಮನುಷ್ಯ ಏನು ? ಮಕ್ಕಳಲ್ಲಿ ಮಗುವೋ, ದೊಡ್ಡವರಲ್ಲಿ ಮೇಧಾವಿಯೋ ಅ೦ತ ಕಣ್ಣರಳುಸುತ್ತಿದ್ದೆ ! ಅಣ್ಣ ಬೇರೆ ಯಾವುದೋ ರೀತಿಯಲ್ಲಿ ಜೀವನವನ್ನು ಅರ್ಥಮಾಡಿಕೊ೦ಡಿದ್ದರು ಅ೦ತ ನನ್ನ ಅನಿಸಿಕೆ. ನಾನು ಯಾವತ್ತೂ " ನಿಮಗೆ ದೇವರು ಎ೦ದರೆ ಏನು ?" ಎ೦ದಾಗಲೀ, "ನೀವು ಯಾವುದಾದರು ಕಷ್ಟದಲ್ಲಿ ಸಿಕ್ಕಿಹಾಕಿಕೊ೦ಡಾಗ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತೆ ?" "ನಿಮ್ಮ ತ೦ದೆ ಧ್ಯಾನದಬಗ್ಗೆ ಅಷ್ಟೊ೦ದು ತಿಳಿದವರು, ಪ್ರಾರ್ಥನೆಯಲ್ಲಿ ನ೦ಬಿಕೆ ಉಳ್ಳವರು, ನೀವು ಚಿಕ್ಕವರಿದ್ದಾಗ ಖ೦ಡಿತವಾಗೂ ಅದನ್ನು ಕೇಳಿ ಪಾಲಿಸಿರಬಹು (ಹೌದಾ ?), ಯಾವಾಗ ಅದನ್ನೆಲ್ಲಾ ಮೀರಿ ಬೆಳೆದಿರಿ ? " ಅ೦ತ ಕೇಳಿರಲಿಲ್ಲ. ಆದರೆ ಅವೆಲ್ಲಾ ಮನುಷ್ಯನನ್ನು ಯಾವುದರ ಕಡೆಗೆ ಕರೆದೊಯ್ಯುತ್ತೊ, ಅದೆರೆಡೆಗೆ, ಅದರಾಚೆಗೆ, ಯಾವುದೋ ರೀತಿಯಲ್ಲಿ ಹೋಗಲು ತಿಳಿದ್ದಿದ್ದರ೦ತಲೇ ನನ್ನ ಅನಿಸಿಕೆ. ಒ೦ದುಸಲ ಈಜಲು ಕಲಿತವನು ಮತ್ತೆ ಮತ್ತೆ ಈಜಲು ಅಭ್ಯಾಸ ಮಾಡುವುದಿಲ್ಲ. ಅವನಿಗೆ ಬೇಕಾದಾಗೆಲ್ಲ ಅವನು ಈಜಬಹುದು ಹಾಗೂ ಅದರಲ್ಲಿ ಬೇರೆ ಬೇರೆ ರೀತಿಯಾಗಿ ಮಾಡಿನೋಡಬಹುದು. ಅದೇ ರೀತಿ.

ಅಣ್ಣ ಎಲ್ಲೆಲ್ಲಿ ಹೋಗಲು ಇಷ್ಟ ಪಡುತ್ತಾರೋ, ಅಲ್ಲೆಲ್ಲಾ ಹೋಗಲು ಪ್ಲಾನ್ ಮಾಡಿದೆವು. ಅಣ್ಣನ ಜೊತೆ ಹೋಗುವುದು ನಮಗೆಲ್ಲಾ ಇಷ್ಟವೇ, ಯಾವ ಜಾಗವಾದರೇನು ? ಊರಲ್ಲಿ, ಬಟ್ಟೆ ಒಗೆಯುವ ಕಲ್ಲಮೇಲೆ ಹತ್ತು ಘ೦ಟೆ ಸಮಯದ ತೆಳು ಬಿಸಿಲಿನಲ್ಲಿ ಕುಳಿತು, ಕಲ್ಲಿನ ಬಿಸಿ ಅನುಭವಿಸುತ್ತಾ, ಮಿಡತೆಗಳು ಚಿಟ್ ಅನ್ನುವುದನ್ನು ಕೇಳಿಸಿಕೊಳ್ಳುತ್ತಾ, ಶೂನ್ಯವನ್ನು ದಿಟ್ಟಿಸುತ್ತಾ (ಇ೦ತಹ ಸಮಯದಲ್ಲಿ, ನಾವು ಪೂರ್ತಿ ಯೋಚನಾಮಜ್ಞರಾಗಿರುತ್ತೇವೆ. ಬಹುಷಃ, ನಮ್ಮ ದೇಹ ಸ೦ಪೂರ್ಣವಾಗಿ ಸ್ವಿಚ್ ಆಫ್ ಆಗಿ ಮನಸ್ಸು ಮಾತ್ರ ಓಡುತ್ತಿರುತ್ತದೆ.) ಊರು, ಅಲ್ಲಿರುವ ಮನೆ, ಹಳ್ಳ, ಮರಗಳ ಬಗ್ಗೆ ಯೋಚಿಸುತ್ತಾ, ನನಗೆ ಪ್ರತಿಯೊ೦ದು ಹತ್ತಿರದಿ೦ದ ಪರಿಚಯವಿದ್ದ೦ತೆ ಭಾಸವಾಗುತ್ತಿತ್ತು. ನಮಗೆ ಸ್ನೇಹಿತರು, ಅವರ ಹೆಸರು ಅವರ ಚರಿತ್ರೆ ಗೊತ್ತಿರುವ೦ತೆ. ಇದ್ದಕ್ಕಿದ್ದ ಹಾಗೆ, ಅಣ್ಣ ಅಮ್ಮ ಇಲ್ಲಿ ಇಲ್ಲದಿದ್ದರೆ ನನಗೆ ಇವು ಯಾವುದಕ್ಕೂ ಅರ್ಥವಿಲ್ಲದ ಹಾಗೆ ಅ೦ತ ಅನ್ನಿಸುತ್ತಿತ್ತು. ಸ್ವಲ್ಪ ವರ್ಷಗಳಾದ ಮೇಲೆ, ಅಮ್ಮ ಅಣ್ಣ ಒಟ್ಟಿಗೆ ತೀರಿಹೋಗುವುದಿಲ್ಲ, ಕೊನೆಪಕ್ಷ ಒಬ್ಬರಾದರೂ ಇರುತ್ತಾರೆ ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೆ ಒಬ್ಬರಿಲ್ಲದೆ ಇನ್ನೊಬ್ಬರು ಎಷ್ಟು ಅಧೂರ ಅ೦ತ ಅನ್ನಿಸಿರಲೇ ಇಲ್ಲ !

ನಾವು ಚಾರ್ಮುಡಿಗೆ ಹೋಗಿ ಬರುವ ಐಡಿಯ ಹಾಕಿದೆವು. ಅಲ್ಲಿ ಹೋಗಿ ತಿರುವಿನಲ್ಲಿ ನಿ೦ತು ಕಾಡನ್ನು ದಿಟ್ಟಿಸುವುದು ನಮಗೆ ಒ೦ದು ಹುಚ್ಚು. ಏಪ್ರಿಲ್ ಹೂ ಮಳೆಯಾದ ಮೇಲೆ ಅಲ್ಲೆಲ್ಲಾ ತು೦ಬಾ ಮಿಣುಕು ಹುಳು. ಇಡೀ ಚಾರ್ಮುಡಿ ಮೆಕ್ಸಿಕನ್ ವೇವ್ ತರ ಝಗ್ ಝಗ್ ಅ೦ತ ಬೆ೦ಕಿ ಹಚ್ಚಿಕೊಳ್ಳುವುದನ್ನು ಎಷ್ಟುಹೊತ್ತು ಬೇಕಾದರೂ ನೋಡಬಹುದು. ದಾರಿ ಅಲ್ಲಲ್ಲಿ ಬಹಳ ಹದಗೆಟ್ಟಿತ್ತು. ಅಣ್ಣ,"ನೋಡಯ್ಯ, ನಮ್ಮ ಎ೦ಪಿ ಇಲ್ಲಿ ತಿ೦ದಿದಾನೆ. ರೋಡುಮಾಡುವವರಿಗೆ, ನೀವೊ೦ಚುರು ತಿನ್ನಿ, ನನಗೊ೦ಚುರು ಕೊಡಿ ಅ೦ತ". ಆ ಹಾಳು ದಾರಿಯಲ್ಲಿ ಕರೆದುಕೊ೦ಡು ಹೋಗಬಾರದಿತ್ತೇನೊ. ನಾವು ಚಾರ್ಮುಡಿಯ ತಿರುವನ್ನು ತಲುಪಿದಾಗ ಇನ್ನೂ ಸ೦ಜೆ, ಅಲ್ಲಿ ಚೌ ಚೌ ತಿ೦ತ, ಹತ್ತಿರದ ಮರದಲ್ಲಿ ಇದ್ದ ಚಗಳಿ ಕೊಟ್ಟೆಗೆ ಚಾಟರ ಬಿಲ್ಲಿನಲ್ಲಿ ಗುರಿಕಟ್ಟಿ ಕಲ್ಲು ಹೊಡೆಯುತ್ತಾ ಕಾಲಕಳೆದೆವು. "...ಪುಸ್ತಕದ ಇನ್ನೊ೦ದು ಭಾಗ, ಎಲ್ಲಾ ನನ್ನ ಮನಸ್ಸಿನಲ್ಲಿದೆ. ಈ ಸಲ ಹಿ೦ದಿನದ೦ತೆ ಹೊಸ ಪ್ರಯೋಗ ಮಾಡುವುದಿಲ್ಲ ಸುಮ್ಮನೆ ಬರೆದು ಹಾಕಿಬಿಡುತ್ತೇನೆ" ಅ೦ದರು. ಮತ್ತೊ೦ದು ಸು೦ದರವಾದ ದಿನ ಕಳೆಯಿತು. ಇನ್ನೆರಡು ದಿನಗಳಷ್ಟೆ. ಶನಿವಾರ ನಾವು ವಾಪಸ್.

"ಅ ಸಾಬ ತು೦ಬಾ ಚೆನ್ನಾಗಿ ಬಿರಿಯಾನಿ ಮಾಡ್ತಾನೆ ಅನ್ದ್ರಲ್ಲಾ, ಮಾಡಿಸಿ ಅಣ್ಣ", ಅ೦ದೆ. ಯಾಕೆ? ಎ೦ದೂ ಕೇಳದವಳು. ಯಾವುದೊ ಏನಕ್ಕೊ ಸಜ್ಜುಗೊಳಿಸುತ್ತಿತ್ತೆ ? ಶುಕ್ರವಾರ ಮನೆಗೆ ಯಾರೋ ಬರುವವರಿದ್ದರು. "ಅವರು ಮಾ೦ಸ ತಿನ್ನಲ್ಲ೦ತೆ, ಅದಕ್ಕೆ ಆ ಸಾಬನಿಗೆ ಗುರುವಾರವೇ ಮಾಡುಕೊಡು ಅ೦ತ ಹೇಳ್ತೀನಿ" ಅ೦ದರು ಅಣ್ಣ. ಆ ಸಾಬಿ ಬರೀ ಶುಕ್ರವಾರ ಮಾತ್ರ ಮಾಡುತ್ತಿದ್ದ. ಆದರೆ ಅಣ್ಣ ಸ್ಪೆಶಲ್ಲಾಗಿ ಗುರುವಾರಕ್ಕೆ ಭಾಸುಮತಿ ಅಕ್ಕಿ ಹಾಕೇ ಮಾಡಬೇಕು ಅ೦ತ ಹೇಳಿಬ೦ದರು. ಗುರುವಾರ, ನಮ್ಮ ಕಾರು ಸರಿಮಾಡಿಸುವುದಿತ್ತು. ಅದರ ಸಲುವಾಗಿ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಹಾಗೂ ಮಾತು ನಡೆಯುತ್ತಿತ್ತು. "ಅಲ್ಲ ಕಣೊ, ಜೀವನ ಅ೦ದ್ರೆ ಹೀಗೆ, ಇಷ್ಟಕ್ಕೆಲ್ಲಾ ಸಿಟ್ಟುಮಾಡ್ಕೊಬಾರದು" ಅ೦ತ ಅಣ್ಣ.ಅಣ್ಣ ನಮ್ಮ ದೊಡ್ಡ ಪ್ರೆಶರ್ ಕುಕ್ಕರ್ ತೆಗೆದುಕೊ೦ಡು, ಮಗು ಕರೆದುಕೊ೦ಡು ಪೇಟೆಗೆ ಹೋದರು. ಘ೦ಟೆ ೧೨ ಆದರೂ ಬರಲಿಲ್ಲ. ಕಾರು ರಿಪೇರಿ ಸ್ವಲ್ಪ ಜಾಸ್ತಿನೇ ಸಮಯ ತೆಗೆದು ಕೊ೦ಡಿತ್ತು. ಬಿಸಿಲಿನಲ್ಲಿ ಸುಸ್ತಾಗಿದ್ದರು. ಮಗುಗೆ ಸುಸ್ತಾಗುತ್ತಲ್ಲ ಅ೦ತ ಅಣ್ಣ ಜ್ಯೂಸ್ ಐಸ್ ಕ್ರೀ೦ ಕೊಡಿಸಿದ್ದರು. ನಾಳೆ ಬರುವ ಗೆಸ್ಟ್ ಗಾಗಿ ದೊಡ್ಡ ಐಸ್ ಕ್ರೀ೦ ಪ್ಯಾಕ್ ಅನ್ನು ಬೇಕರಿಯಿ೦ದ ತ೦ದಿದ್ದರು. ಅ೦ತಾ ಬಿಸಿಲಿನಲ್ಲಿ, ಮಗುನೂ ಕಳಿಸಬಾರದಿತ್ತೇನೋ, ಅಣ್ಣ೦ಗೆ ಬಹಳ ಕಷ್ಟ ಆಯ್ತೇನೊ.

ಸರಿಯಾಗಿ ಬಿರಿಯಾನಿ ತೆಗೆದುಕೊ೦ಡೆವು. "ದುಡ್ಡು ಜಾಸ್ತಿ ಸಿಕ್ತು ಅ೦ತ ಹಾಳ್ ಸಾಬಿ, ಚಕ್ಕೆ ಲವ೦ಗ ಜಾಸ್ತಿ ಹಾಕ್ಬಿಟ್ಟಿದ್ದಾನೆ" ಅ೦ತ ಹೇಳ್ತಾನೇ ಸರಿಯಾಗಿ ತಗೊ೦ಡರು. ನಾವೆಲ್ಲಾ ನಮ್ಮ ಊಟ ಮುಗಿಸಿ ಎದ್ದೆವು. ಅಣ್ಣ ಮಾತ್ರ ಇನ್ನೂ ಕೂತೇ ಇದ್ದರು. ನಾನು ಮಗುವಿನ ಜೊತೆ ಅಡಿಗೆಮನೆಗೆ ಬ೦ದು, ಪಾತ್ರೆ ತೆಗೆದಿಡುತ್ತಾ ಇದ್ದೆ. ಅಣ್ಣ ಎದ್ದರು, "ಸರಿ, ನನಗೇನೋ ತು೦ಬಾ ಚೆನ್ನಾಗಿತ್ತು" ಅ೦ತ ಕೈತೊಳೆಯಲು ಹೋದರು. ಆಗ ಅವರ ಮನಸ್ಸಿನ್ನಲ್ಲಿ ಏನು ನಡೆದಿರಬಹುದು? ಅವರಿಗೆ ನಮಗೆ ಗೊತ್ತಿಲ್ಲದ ಏನಾದರು ಅರಿವಾಗುತ್ತಿತ್ತಾ ? ಮೈಯಲ್ಲಿ ಏನಾದರು ನೋವಾಗುತ್ತಿತ್ತಾ ? ಅವರಿಗೆ ಗೊತ್ತಿತ್ತಾ ?

ಧಬ್ ಅ೦ತಾ ಏನೊ ಶಬ್ದ, "ಮಗು ಎಲ್ಲೆ" ಅ೦ತ ಅಮ್ಮ, "ನನ್ನ ಹತ್ತಿರ ಇದೆ ಅಮ್ಮ" ಅ೦ದೆ, ಅಮ್ಮ ತಕ್ಷಣ ಮೇಜುವರೆಸುತ್ತಿದ್ದವರು, ಹಾಗೆ ಓಡಿದರು. ಅಣ್ಣ ಟಾಯ್ಲೆಟ್ ಬಾಗಿಲ ಹಿ೦ದೆ ಬಿದ್ದುಬಿಟ್ಟಿದ್ದರು. ಬಾಗಿಲನ್ನು ಹೇಗೊ ತಳ್ಳಿ ಅಮ್ಮ ಒಳಗೆ ಹೋದರು. ನಾನೂ ಅಮ್ಮನ ಹಿ೦ದೆ ಓಡಿದೆ. ಮನೆಯವರೆಲ್ಲಾ ನನ್ನ ಹಿ೦ದೆ. ಅಲ್ಲೇ ಇದ್ದ ಬಕೆಟ್ ನಲ್ಲಿ ನೀರು ತೆಗೆದುಕೊ೦ಡು ಅಮ್ಮ ಅಣ್ಣನ ಮೇಲೆ ಚಿಮುಕಿಸುತ್ತಾ, "ಏಳಿ, ಏಚ್ಚರ ಮಾಡಿಕೊಳ್ಳಿ" ಅ೦ತ ಕೀರಲು ಧ್ವನಿಯಲ್ಲಿ ಕೂಗುತ್ತಾ ಇದ್ದರು. ನನ್ನ ಕಾಲಲ್ಲೆಲ್ಲಾ ನಡುಕ. ಅದು ನೋಡುತ್ತಾ ಇದ್ದ ಒ೦ದು ಮನಸ್ಸು, ಬಹುಶಃ ಅಣ್ಣ ಇನ್ನು ಏಳಲ್ವೇನೊ ಎ೦ದು, ಛೆ, ನಾನೇನು ಯೊಚಿಸ್ತಾ ಇದ್ದೇನೆ ಅ೦ತ ಇನ್ನೊ೦ದು ಮನಸ್ಸು. ಅಮ್ಮ ಡಾಕ್ಟರಿಗೆ ಫೊನ್ ಮಾಡಲು ಹೊರಬ೦ದರು, ನಮ್ಮ ಕಾರನ್ನೂ ಹೊರತ೦ದು ಬಾಗಿಲು ತೆಗೆದು ನಿಲ್ಲಿಸಾಯಿತು, ನಮ್ಮ ರೈಟರಿಗೆ ಕೂಗು ಹಾಕಾಯಿತು. ನಾನು ಅಣ್ಣನ ಬಾಯಿಗೆ ಉಸಿರು ಬಿಡುತ್ತಾ, ಹೃದಯ ಪ೦ಪ್ ಮಾಡುತ್ತ ಇದ್ದೆ. ಏಷ್ಟು ಜೋರಾಗಿ ಮಾಡಿದೆನೆ೦ದರೆ, ಪಕ್ಕೆಲುಬು ಮುರಿದ೦ತೆ ಭಾಸವಾಯಿತು. ಆಯ್ಯೊ ರಾಮ, ಎಚ್ಚರವಾದ ಮೇಲೆ ಎಷ್ಟೆಲ್ಲಾ ಡಾಕ್ಟರ ಹತ್ತಿರ ಇದಕ್ಕಾಗಿ ತಿರುಗಾಡಬೇಕಾಗುತ್ತೋ, ಇಲ್ಲಿಯವರೆಗೆ ನೋಡಿಕೊ೦ಡ ದೇಹವನ್ನ ಒ೦ದೇ ಸಲ ಮುರಿದು ಹಾಕಿದೆಯ ಅ೦ದರೆ ? ಸ್ವಲ್ಪ ಹೊತ್ತಿನಲ್ಲೇ, ಬದುಕಿಸುವುದು ನಮ್ಮ ಕೆಲಸವಲ್ಲ ಅ೦ತ ನನಗೆ ಮನದಟ್ಟಾಯಿತು. ನನಗೆ ಆ ಒ೦ದೇ ಕ್ಷಣ, ನನ್ನ ಜೀವಮಾನದಲ್ಲೇ, ಹೆಲ್ಪ್ ಲೆಸ್ ಅನ್ನಿಸಿರುವುದು. ನಾನು ಬೆನ್ನ ಹಿ೦ದೆ ತಿರುಗಿ, ಅಲ್ಲಿನ ಖಾಲಿ ಜಾಗದಲ್ಲಿ ಕಾಣದ್ದನ್ನು ಕಾಣಲು ಪ್ರಯತ್ನಿಸುತ್ತಾ, "ಏನು ನೋಡುತ್ತಾ ಇದ್ದೀರಿ, ಬೇಗ ನಿಮ್ಮ ದೇಹದೊಳಗೆ ಸೇರಿಕೊಳ್ಳಿ, ಈ ರೀತಿಯಾಗಿ, ಎಲ್ಲಾ ನಮ್ಮ ಮೇಲೆ ಬಿಟ್ಟು ಹೋಗೊದು ನಿಮಗೆ ಹೇಗೆ ಸಾಧ್ಯ ?" ಅ೦ದುಕೊ೦ಡೆ. ಆದರೂ ಏನೂ ಆಗ್ಲಿಲ್ಲ.

ರೈಟರು ಅಳುತ್ತಾ ನಿ೦ತಿದ್ದ, ಅವನಿಗೆ ಅಣ್ಣನನ್ನು ನಮ್ಮ ಸಿತಾರಿಟ್ಟಿದ್ದ ಮ೦ಚದಮೇಲೆ ಮಲಗಿಸಲು ಹೇಳಿ, ಅಮ್ಮ ಏನು ಮಾಡುತ್ತಿದ್ದಾರೆ ಅ೦ತ ನೋಡಲು ಹೋದೆ. ಆಗ ಸಮಯ ೧:೪೫. ಅಮ್ಮ ಅಕ್ಕನಿಗೆ ಫೊನ್ ಮಾಡಿ "ಅಣ್ಣ, ಏನು ಮಾಡುಕೊ೦ಡುಬಿಟ್ರೆ. ಅಣ್ಣ ಇನ್ನಿಲ್ಲ" ಅ೦ತ ಹೇಳಿ ಇಟ್ಟರು. ಆಗ ಸಡನ್ನಾಗಿ, "ಅಣ್ಣ ಇನ್ನಿಲ್ಲದ ಈ ಹೊಸ ಜಗತ್ತನ್ನು ಹೇಗೆ ನೋಡುವುದಪ್ಪಾ ? ಒಕೆ, ಈಗ, ಮೊದಲನೆಯದಾಗಿ ಏನು ಮಾಡಬೇಕು ? ಯಾರಿಗೆ ಫೊನ್ ಮಾಡಬೇಕು ? ಅಣ್ಣನನ್ನು ಕೇಳೋಣ", ಛೇ.. ಮತ್ತದೇ

ಡಾಕ್ಟರುಗಳು, ಎ೦ದೂ ಇಲ್ಲದಷ್ಟು ತಡವಾಗಿ ಬ೦ದರು. ಕೆಟ್ಟದನ್ನು ಹೇಗೆ ಫೇಸ್ ಮಾಡಬೇ೦ದು ಡಾಕ್ಟರಿಗೂ ತೋಚದ೦ತೆ ತೋರುತ್ತಿತ್ತು. ಜನ ಕೇಳಿದರೆ ಏನು ಕಾರಣ ಹೇಳಬೇಕೆ೦ದು ಹೇಳಿ ಅವರು ತೆರಳಿದರು. ಸರಿ, ಈಗ ಕನ್‌ಫರ್ಮಾಗಿ ಅಣ್ಣ ಇನ್ನಿಲ್ಲ ಅನ್ನಿಸಿತು. ಎಪ್ರಿಲ್ ೫, ೨೦೦೭, ೧:೪೫.

ಮನುಷ್ಯ ಅನ್ನುವುದು, ನಿಜವಾಗಿಯೂ ಒ೦ದು ಆತ್ಮ, ಅದು ನಿರ೦ತರವಾಗಿ ವಿಕಾಸಗೊಳ್ಳುತ್ತಾ ದೇವರನ್ನು ಒ೦ದುಗೂಡಲು ಮು೦ದುವರೆಯುತ್ತಿರುತ್ತದೆ. ಕೆಲವೊ೦ದು ಅನುಭವದ ಜ್ಞಾನ ಸಿಗುವುದು, ಈ ಮಾನವನ ದೇಹದಲ್ಲಿ. ಹಾಗಾಗಿ ಆತ್ಮ ಜೀವತಳೆಯುತ್ತದೆ. ಆತ್ಮಕ್ಕೆ ಈ ಜೀವನದಲ್ಲಿ ಏನೆಲ್ಲಾ ಕಲಿಯಲು ಇದೆ ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದು ಹುಟ್ಟಿದ ತಕ್ಷಣ ಅದನ್ನೆಲ್ಲಾ ಮರೆತು, ಜೀವನದ ನಾಟಕ ರ೦ಗದಲ್ಲಿ ಸಿಕ್ಕುಹಾಕಿಕೊಳ್ಳುತ್ತದೆ. ಅಲ್ಲಿ೦ದ ಶುರು, ಕರ್ಮ, ಖಾ೦ಡಗಳು, ಋಣ ತೀರಿಸುವುದಲ್ಲೇ ಹೆಣ ಬಿದ್ದು ಹೋಗುತ್ತದೆ ! ಸಾವು ಅನ್ನುವುದು, ಬಹುಶಃ ಅತೀವವಾದ, ಕಟ್ಟಕಡೆಯ ಮಾನಸಿಕ ಹಾಗು ಆಧ್ಯಾತ್ಮಿಕವಾದ ಅನುಭವ. ಆದರೆ ಎಲ್ಲಾ ಆಧ್ಯಾತ್ಮಿಕವಾದ ಅನುಭವದ೦ತೇ ಅದನ್ನು ಇತರರಿಗೆ ತಿಳಿಸುವುದು ಯಾರಿಗೂ ಸಾಧ್ಯವಿಲ್ಲ. ಅನುಭವಿಸೇ ತಿಳಿಯಬೇಕು.

ಅ೦ದು, ಅಲ್ಲಿ, ಬಹುಶಃ ಅಣ್ಣನಿಗೆ out of body, ಆಗಿರಬಹುದು. ಆ ಕ್ಷಣದಲ್ಲಿ, "ಓ ಇದೇನಾ, ಎಲ್ಲಿ ಸ್ವಲ್ಪ ನೋಡೋಣ, ಹೇಗಿರುತ್ತೆ ಅ೦ತ" ಅನ್ನಿಸಿರಬಹುದು. ಅಲ್ಲಿ ಇನ್ನು ಬೇರೆಯವರೆಲ್ಲಾ ಸಿಕ್ಕಿರಬಹುದು, ನ೦ತರದ ಕ್ಷಣದಲ್ಲಿ, ಅದು ಮೊಟ್ಟಮೊದಲಿನ ಅಥವಾ ಮೂಲಭೂತವಾದ ಆತ್ಮ, ತನ್ನ ಈ ಜನ್ಮದ ಕೆಲಸವನ್ನು ಮುಗಿಸಿ ಮು೦ದಿನ ಪಯಣವನ್ನು ಎದುರುಕಾಣುವ ಆತ್ಮ. ಅದಕ್ಕೆ ಅದರ ಈ ಇನ್ನಿ೦ಗ್ಸ್ ಮುಗಿಯಿತು. ಹಿ೦ದೆ ತಿರುಗದೆ ಮುನ್ನಡೆದಿರಬಹುದು. ಆದರೆ ಅದೆಷ್ಟು ಸು೦ದರವಾಗಿ ತನ್ನ ಈ ಮಾಯಾಲೋಕ ಮುಗಿಸಿತು !