Friday, December 11, 2020

ಸೋಲರಿಯದ ಕರಿ ದಿಬ್ಬದ ಮೇಲೆ ಸೋಲು !


 

ರಾತ್ರಿ ಉಷ್ಣಾ೦ಶ ಬಹುಶಃ ಮೈನೆಸ್ ಡಿಗ್ರೀ ಆಗಿತ್ತೇನೋ, ಟಾಯ್ಲೆಟಲ್ಲಿನ ಬಕೆಟ್ ನೀರೊಂತೂ ಹಿಮಗಟ್ಟಿತ್ತು. ನಿದ್ದೆಯೂ ಬರುತ್ತಿರಲಿಲ್ಲ, ಅಲ್ಲದೆ ನಾಲ್ಕು ಗಂಟೆಗೆ ಜನ ಹೋಗುವಾಗ ನಮ್ಮನ್ನು ಬಿಟ್ಟು ಹೋದರೆ, ಎಂಬ ಹೆದರಿಕೆಯೊಂದು ಹೃದಯದಲ್ಲಿ ಅಡಗಿಕೊಂಡಿದ್ದರೂ ಹೊರಬಂದು ಇಣುಕುತ್ತಿತ್ತು. ಜ್ಞಾನಿ ತಾನು ಬರುವುದಿಲ್ಲವೆಂದು, ಅದು ಒಂದು ಬರಿಯ ಕರಿ ದಿಬ್ಬ, ಮೌಂಟ್ ಎವರೆಸ್ಟ್ ನೋಡಿದ ಮೇಲೆ ಅದು ಪ್ರಯೋಜನ ವಿಲ್ಲ, ಬೇಕಿದ್ದರೆ ನಾನು ಹೋಗಬಹುದು, ಆದರೆ ಅವನನ್ನು ಯಾವ ಕಾರಣಕ್ಕೂ ಏಳಿಸಬಾರದೆಂದು ಹೇಳಿದ್ದ. ನಾನು ಹೊರ ಹೋದಾಗ ಎಲ್ಲರೂ ಅವರ ಪಾಡಿಗೆ ಎದುರಿಗಿದ್ದ ಬಹು ದೊಡ್ಡ ಮೈದಾನವನ್ನು ದಾಟುತ್ತಾ ಇದ್ದರು. ವಸುಮತಿ ಹಾಗೂ ನಮ್ಮ ಲೀಡರ್ ಗ್ಯಾಂಗಳಂತ ದೊಡ್ಡವರುಗಳು ಅಲ್ಲೆಲ್ಲೂ ಕಾಣುತ್ತಿರಲ್ಲಿಲ್ಲ . ಬಹುಶಃ ಇದೊಂದು ನಮ್ಮ ಮನೆಯ ಹಿಂದಿರುವಂತಹ ಒಂದು ಸಣ್ಣ ಗುಡ್ಡ ಇರಬಹುದು, ಆದ್ದರಿಂದ ಅದು ಬಹಳ ದೊಡ್ಡದೇನಲ್ಲವೇನೋ ಅವರಿಗೆ, ಎಂದೆಣಿಸಿದೆ. ನಾನು ಲಘುಬಗೆಯಿಂದ ಬೇಗ ಹೀಗೆ ಹೋಗಿ, ಹಾಗೆ ಹತ್ತಿ, ಬೆಳಗಿನ ಮೂಡುವ ಸೂರ್ಯನ ಕಿರಣದಲ್ಲಿ ಹೊಳೆಯುವ ಎವರೆಸ್ಟ್ ತುದಿಯನ್ನು ನೋಡಿಕೊಂಡು ಇಳಿದು  ಬಂದು ಬಿಡುವುದು ಎಂದು ಲೆಕ್ಕ ಹಾಕಿದ್ದೆ. ಆ ದಿಬ್ಬ ಅಲ್ಲೇ ಕಾಣುತ್ತಿತ್ತು. ಪಾರ್ವತನಾಡಿನಲ್ಲಿ ದೂರ ಒಂದು ಮರೀಚಿಕೆ ಎಂದರೆ ತಪ್ಪಾಗಲಾರದು. ಎಂಷ್ಟೋ ಕಿಲೋಮೀಟರ್ ದೂರ ಇದ್ದರೂ ಇಲ್ಲೇ ಹತ್ತಿರದಲ್ಲೇ ಇರುವಂತೆ ಕಾಣುತ್ತದೆ. ಇದು ಅದೇ ಕಥೆ ಎಂದು ನನಗೆ ಬೇಗನೆ ಹೊಳೆಯಿತು. ಅಂತೂ ಅ ಬಯಲಿನ ಕೊನೆ ತಲುಪಿ ಕಾಲಾ ಪತ್ತರ್  ಹತ್ತಲು ಶುರು ಮಾಡಿದೆ. ಈ ಬಯಲು ಹಿಂದೆ ಒಂದು ಸರೋವರ ಆಗಿತ್ತ೦ತೆ.೨೦೦೯ ರಲ್ಲಿ ಇಲ್ಲಿ ಬ್ರಿಟಿಷರ ಎರಡು ಕ್ರಿಕೆಟ್ ಟೀಮುಗಳು ರಾಣಿಯ ಹುಟ್ಟಿದ ಹಬ್ಬದಂದು ಇಲ್ಲಿ ೨೦-೨೦ ಮ್ಯಾಚ್ ಆಡಿದರು.

ದೂರದಲ್ಲಿ ಗೊರಕ್ ಷೇಪ್ (ಸತ್ತ ಕಪ್ಪು ಕಾಗೆ ಎಂಬರ್ಥ ಬರುವಂಥದು), ಸರೋವರದ ಅವಶೇಷದಲ್ಲಿ  

ಈ ಕಲಾ ಪತ್ತರ್ ತುದಿ 18,209 ft ಎತ್ತರದಲ್ಲಿದೆ, ಇದು ಪುಮೋರಿಯ ದಕ್ಷಿಣಕ್ಕೆ ಇದೆ. ಕಾಲಾ ಪತ್ತರ್ ಒಂದೇ, ಯಾವ ಪರಮೀಟ್ ಇಲ್ಲದೆ ಹತ್ತಬಹುದಾಯದಂತಹ ಬೆಟ್ಟ ಹಾಗಾಗಿ ಚಾರಣರಿಗೆ ಪ್ರಿಯವಾದ ಬೆಟ್ಟ. ಅಷ್ಟೇ ಅಲ್ಲದೆ ಇಲ್ಲಿಂದ ಮಾತ್ರ ಮೌಂಟ್ ಎವರೆಸ್ಟ್ ನ ತುದಿ ಕಾಣುತ್ತದೆ. ಹಾಗಾಗಿ ಇದು ತಲೆ ಎತ್ತಿ ತನಗೊಬ್ಬನಿಗೇ ಎವರೆಸ್ಟ್ ನೋಟ ಎಂಬಂತೆ ನಿಂತಿದೆ. ಇಲ್ಲಿ ಮುಂದೆ ೨೦೧೧ ರಲ್ಲಿ ಇಟಲಿಯವರು ಒಂದು ವೆಬ್ ಕ್ಯಾಮ ಸ್ತಾಪಿಸುತ್ತಾರೆ. ಅದು ಮೌಂಟ್ಎವರೆಸ್ಟ್ ಮೇಲಿನ ಹವಾಮಾನದ ಫೋಟೋ ತೆಗೆದು ಪರ್ವತಾರೋಹಿಗಳಿಗೆ ಸಹಾಯವಾಗುವಂತೆ ಮಾಡುತ್ತಾರೆ.  ಇದು ಪ್ರಪಂಚದಲ್ಲೇ ಅತಿ ಎತ್ತರದಲ್ಲಿ ಇರುವ ವೆಬ್ ಕ್ಯಾಮರ ಎಂಬ ಖ್ಯಾತಿ ಇದಕ್ಕೆ ದಕ್ಕುತ್ತದೆ.


ಕಾಲಾ ಪತ್ತರ್ – ಕರಿ ದಿಣ್ಣೆ , ಪುಮೋರಿ ಹಿಂದೆ ಇರುವ ಹಿಮಪರ್ವತ 




ಕಾಲಾ ಪತ್ತರ್ ಇಂದ ಮೌಂಟ್ ಎವರೆಸ್ಟ್ ತುದಿ


ಯಾವುದೋ ಋತುವಿನಲ್ಲಿ ಹವಾಮಾನ ಚೆನ್ನಾಗಿದ್ದಾಗ ಬೆಳಗಿನ ಸೂರ್ಯ ರಶ್ಮಿಯಲ್ಲಿ ಮೌಂಟ್ ಎವರೆಸ್ಟ್ ತುದಿ ಚಿನ್ನದ ಬಣ್ಣದಲ್ಲಿ ಹೊಳೆಯುತ್ತದೆ. ಅದನ್ನೂ ಕಾಲಾ ಪತ್ತರ್ ದಾರಿಯಿಂದಲೇ ನೋಡಲು ಸಾಧ್ಯ. ನಾನು ಅರ್ಧ ಹತ್ತಿದಾಗಲೇ ನನಗಾಗಲೇ ಸ್ವಲ್ಪ ತಲೆ ಭಾರವಾಗುತ್ತಿತ್ತು. ಅಲ್ಲದೆ ನಾನು, ಇದೇನು ಮಹಾ ಎಂದು ಒಂದೇ ಕಾಲ್ಚೀಲ ಹಾಕಿದ್ದರಿಂದ ನನ್ನ ಕಾಲು ಬೆರಳುಗಳು ಸೆಟೆದುಕೊಳ್ಳುತ್ತಿದ್ದವು. ಅದೇ ಹಿಮ ಕಡಿತ ಇರಬಹುದೇ ಎಂದು ಯೋಚಿಸುತ್ತಾ ಈಗೇನು ಮಾಡುವುದು ಎಂದು ನಿಂತಿದ್ದಾಗ, ಅಲ್ಲಿಗೆ ಪ್ರಿಯ ಬಂದಳು. ಇಬ್ಬರೂ ಮತ್ತಷ್ಟು ದೂರ ಹತ್ತಿದೆವು ಹಾಗೂ ಬೆಳಗಿನ ಸೂರ್ಯನ ಬೆಳಕಿನಲ್ಲಿ ಕಾಣುತ್ತಿದ್ದ ಎವರೆಸ್ಟ್ ನ ತುದಿಯನ್ನು ನೋಡಿ, ಸಾಕಷ್ಟು ಫೋಟೋ ತೆಗೆದುಕೊಂಡೆವು, ಬಹುಶಃ ಮುಂದು ವರೆಯುವ ಬಗ್ಗೆ ನಮ್ಮ ಮೇಲೆ ನಮಗೇ ನಂಬಿಕೆ ಇರಲಿಲ್ಲ ! ಆಗ ಪ್ರಿಯಾಳ BP ಕೆಳಗೆ ಹೋಗಲು ಶುರುವಾಯಿತು ಅವಳು ತನಗೆ ಮುಂದುವರೆಯಲ್ಲಾಗುತ್ತಿಲ್ಲ, ನಾನು ಇಲ್ಲೇ ಕೂರುತ್ತೇನೆ ಎಂದು ಹೇಳಿದಳು. ನಾನು ಅವಿವೇಕಿಯ ತರ ಅವಳ ಬಾಯಿಗೆ ಒಂದು ಪೆಪ್ಪರ್ಮೆಂಟ್ ತುರುಕಿ ಮುಂದೆ ನಡೆದೆ. ಇನ್ನೂ ಸ್ವಲ್ಪ ಮುಂದೆ ನಡೆದ ಮೇಲೆ ಇನ್ನು ಸಾಧ್ಯವಿಲ್ಲ ಎಂದೆನಿಸಿತು. ಕಾಲುಗಳು ಗೂಟದ ತರಹ ನಿಂತುಕೊಡು, ಬೆರಳಿರುವ ಯಾವುದೇ ಸೂಚನೆ ಇಲ್ಲದ ಹಾಗೆ ಭಾಸವಾಗ ತೊಡಗಿತು. ಹಾಗೂ ಏದುಸಿರು ಬಿಡದಿದ್ದರೂ ಎದೆಯು ಭಾರವಾಗಿ, ಉಸಿರು ಕಷ್ಟವಾಗಿ ನಂಗೇನಾಗುತ್ತಿದೆ ಎಂದೇ ತಿಳಿಯುತ್ತಿರಲಿಲ್ಲ . ಇವೇ ಪರ್ವತಗಳಲ್ಲಿನ high altitude  ಅನುಭವಗಳು . ಅಷ್ಟರಲ್ಲಿ, ಅಲ್ಲಿಗೆ  ಜ್ಞಾನಿ ಓಡೋಡಿ ಬಂದ !! ಬೆಳಿಗ್ಗೆ ಎದ್ದಾಗ ತಾನು ಬಹುಶಃ ಒಂದು ಒಳ್ಳೆಯ ಅವಕಾಶ ಕಳೆದು ಕೊಳ್ಳುತ್ತಿರಬಹುದೆಂದು ಊಹಿಸಿ, ಹಾಗೆ ಓಡಿ ಬಂದನಂತೆ ಭೂಪ. ನಾನು ನೋಡಿದರೆ ನಡೆಯಲಾರದೆ ನಿಂತಿದ್ದೆ. ಆಗಲೆ ಕೆಲವರು ಅಲ್ಲೇ ಕಾಣುತ್ತಿದ್ದದಿಬ್ಬದ ತುದಿಯನ್ನು ಹತ್ತಿದ್ದರು. 


ಕಾಲಾ ಪತ್ತರ್ ತುದಿಯಲ್ಲಿ

ನಾವಿಬ್ಬರು ಮತ್ತೆ ಸ್ವಲ್ಪ ಫೋಟೋ ತೆಗೆದುಕೊಂಡು ಹಿಂತಿರುಗಿ ಹೋಗಲು ನಿರ್ಧರಿಸಿದೆವು. ವಾಪಾಸಾದಮೇಲೆ, ಅಯ್ಯೋ ಹೋಗಿಬಿಡಬೇಕಿತ್ತಲ್ಲಾ ಎಂದು ಮರುಗಿದೆ. ವಾಸುಮತಿಯವರಾದರೋ, ಕಾಲಾ ಪತ್ತರ್ ಹತ್ತುವುದು ಇನ್ನೊಂದು ಸಲ ಇಲ್ಲಿಗೆ ಬರಲು ಕಾರಣವಾಗಲಿ ಬಿಡಿ ಎಂದರು. ನಾನು ೨೦೨೦ ಡಿಸೆಂಬರ್ ನಲ್ಲಿ, ಹನ್ನೊಂದು ವರ್ಷಗಳಾದ ಮೇಲೆ, ಈ ಕೊನೆಯ ಅಧ್ಯಾಯವನ್ನು ಬರೆದು ಮುಗಿಸುತ್ತಾ ಇದ್ದೇನೆ. ಈಗಲೂ ನನಗೆ, ಛೇ! ಹತ್ತಬೇಕಿತ್ತು, ಎಂದೆನಿಸುತ್ತಿದೆ. ಹಾಗೂ ಇನ್ನೆಂದೂ ಅಲ್ಲಿಗೆ ಬಹುಶಃ ನಾನು ಹೋಗುವುದಿಲ್ಲ ಎಂದೂ ಅನ್ನಿಸುತ್ತಿದೆ. ನನಸಾದ ಆ ಸುಂದರ ಎವರೆಸ್ಟ್ ಕನಸಿನಲ್ಲಿ, ಈ ಒಂದು ಕರಿಯ ಚುಕ್ಕೆ ಉಳಿದೇ ಹೋಯಿತು.

No comments: