Saturday, November 1, 2008

ರಿಂಗ್ ರೋಡಿನಲ್ಲಿ ಪೂರ್ವಸಿದ್ಧತೆ

ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್, ಸುಮಾರು ೧೨೦ಕಿಮೀ ಗಳಿಗಿಂತ (ಅಲ್ಲಿ ಹಲವು ದಾರಿಗಳಿವೆ. ನಾವು ಹೋದ ದಾರಿಯಲ್ಲಿ ೧೨೦ಕಿಮೀ ಆಗುವುದು) ಜಾಸ್ತಿಯಿರುವ ಕಾಲ್ನಡಿಗೆಯಲ್ಲಿ ಹೋಗಿ ಬರಬಹುದಾದಂತಹದ ಒಂದು ಸುತ್ತಾಟ. ಆದರೆ ಉದ್ದಕ್ಕೂ ಸಿಗುವ ಹಿಮಾಲಯದ ಪರ್ವತಗಳು, ಬೆಟ್ಟ ಗುಡ್ಡಗಳೊಡನೆಯ ಒಡನಾಟ ಹಾಗೂ ಅನುಭವ, ಇದನ್ನು ನಿರ್ವಿವಾದವಾಗಿ, ಪ್ರಪಂಚದಲ್ಲಿನ ಪ್ರಖ್ಯಾತ ಟ್ರೆಕ್ ಗಳಲ್ಲಿ ಒಂದನ್ನಾಗಿ ಮಾಡಿದೆ. ಯೋಚಿಸಲಸಾಧ್ಯವಾದಷ್ಟು ಸುಂದರವಾದ ಪರ್ವತಗಳ ದ್ರುಶ್ಯಗಳನ್ನು ನೋಡುವ ಜೀವನದಲ್ಲಿನ ಒಂದು ಮಹತ್ತರವಾದ ಸದಾವಕಾಶ ಇದು. ಈ ಟ್ರೆಕ್ ಬಹಳ ಸುಲಭವಾದದ್ದೇನಲ್ಲ. ಕೊನೆಯನ್ನು ತಲುಪಲು ಶ್ರಮ, ಏಕಾಗ್ರತೆ ಮತ್ತು ಛಲ ಬೇಕು. ಕೆಲವು ಜಾಗಗಳಲ್ಲಿ ನಾವು ನಮ್ಮ ಎಲ್ಲೆ ಮೀರಿ ಪ್ರಯತ್ನ ಪಡಬೇಕಾಗುತ್ತದೆ. ಖುಂಬು ಗ್ಲೇಷಿಯರ್ (ನೀರ್ಗಲ್ಲಿನ ನದಿ) ಸುತ್ತಮುತ್ತಲಿನ ದಾರಿಯಲ್ಲಿ ಕೆಲವೆಡೆ ಬಹಳ ಕಡಿದಾದ ದಾರಿಗಳಿದ್ದು, ಕೇವಲ ಶಕ್ತಿಯೊಂದಲ್ಲದೆ, ಮನಸ್ಸು ದೃಢವಾಗಿದ್ದರೆ ಮಾತ್ರ ಮುಂದುವರಿಯಲು ಸಾಧ್ಯ. ಇದಲ್ಲದೆ, ೧೦,೦೦೦ ಅಡಿಗಳನ್ನು ದಾಟಿದನಂತರ ಒಬ್ಬೊಬ್ಬರಿಗೆ ಒಂದೊಂದು ಅನುಭವ ಆಗಲು ಶುರುವಾಗುತ್ತದೆ. ಆದು ’ಹೈ ಆಲ್ಟಿಟ್ಯುಡ್ ಸಿಕ್ನೆಸ್’ ನ ಮಹಿಮೆ. ಇದು ಯಾಕೆ ಆಗುತ್ತದೆ? ಹೇಗೆ ಆಗುತ್ತದೆ? ಇನ್ನೂ ಅರಿಯದ ವಿಷಯ. ಅದಕ್ಕಾಗಿ ಅಲ್ಲಲ್ಲಿ ಅನ್ವೇಷಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೆಲವರಿಗೆ ಮೇಲಿಂದ ಮೇಲೆ ವಾಂತಿಯಾಗುತ್ತದೆ. ತಲೆ ತಿರುಗಲು ಶುರುವಾಗುತ್ತದೆ. ಕಾಲಿಡಲು ನೆಲ ನೋಡಿದರೆ, ನೆಲ ಅಲುಗಿದಂತೆ ತೋರುತ್ತದೆ. ಪರ್ವತಗಳು ಸ್ಥಳಾಂತರಗೊಂಡಂತೆ ಕಾಣುತ್ತವೆ. ಎರಡು ಹೆಜ್ಜೆಯಿಟ್ಟರೆ ಸುಸ್ತಾಗುತ್ತದೆ. ಶ್ವಾಸಕೋಶದಲ್ಲಿ ನೀರು ತುಂಬಿ ಏದುಸಿರು ಹಾಗು ಕೆಮ್ಮು ಬರಬಹುದು. ಜ್ವರ ಬರಬಹುದು. ಸಾಯಲೂಬಹುದು. ಈ ತರಹ ಶುರುವಾದೊಡನೆ ಅವರನ್ನು ಸ್ವಲ್ಪ ಕೆಳಗಿನ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಹಾಗೂ ಗುಣವಾಗದಿದ್ದರೆ, ಅವರನ್ನು ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಸೌಲಭ್ಯವೂ ಇದೆ. ಈ ’ಹೈ ಆಲ್ಟಿಟ್ಯುಡ್ ಸಿಕ್ನೆಸ್’ ಯಾರಿಬೇಕಾದರೂ ಬರಬಹುದು. ನೀವು ಎಷ್ಟೇ ಪರ್ವತಗಳನ್ನು ಹತ್ತಿರಬಹುದು, ಇದೇ ದಾರಿಯಲ್ಲಿ ಬಹಳಷ್ಟು ಸಾರಿ ಯಾವುದೇ ತೊಂದರೆ ಇಲ್ಲದೆ ಓಡಾಡಿರಬಹುದು. ಯಾರಿಗೆ ಯಾವ ಸಮಯದಲ್ಲಿ ಇದು ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಲ ಅಲ್ಲೇ ಹುಟ್ಟಿ ಬೆಳೆದು ಬದುಕುತ್ತಿರುವ ಶರ್ಪಾಗಳಿಗೇ ಇದು ಆಗಬಹುದು. ಇವೆಲ್ಲದರಿಂದಾಗಿ, ಯಾರು ಸಾಹಸಪ್ರಿಯರೋ ಅವರಿಗೆ ಈ ದಾರಿಯೊಂದು ಸ್ವರ್ಗ.

ಕೆಏಮ್ಎ ನಮ್ಮೆಲ್ಲರನ್ನೂ ಒಂದೆರಡು ಸಲ ಗುಂಪುಗೂಡಿಸಿ, ಎಲ್ಲರಿಗೂ ಪರಿಚಯಿಸಿ ಹಾಗೂ ಎಲ್ಲರಿಗೂ ವ್ಯಾಯಾಮದ ಮಹತ್ವವನ್ನು ವಿವರಿಸಿದರು. ಗುಂಪಿನಲ್ಲಿ, ಹದಿನಾರು ವರ್ಷದಿಂದ ಹಿಡಿದು ಅರವತ್ತೆರಡು ವರ್ಷದವರೆಗಿನವರೂ ಇದ್ದರು. ಮುಕ್ಕಾಲು ಜನರು ಸಾಫ್ಟ್ವೇರ್ ಜನರೇ, ಮಿಕ್ಕವರಲ್ಲಿ ಕಾಲೇಜ್ ಹುಡುಗರು, ವೈದ್ಯರೂ, ದಂತವೈದ್ಯರೂ, ನೃತ್ಯ ಉಪಾಧ್ಯಾಯರೂ, ಟ್ರಾವಲ್ ಎಜೆಂಟರೂ ಇದ್ದರು. ಎಲ್ಲಿ ಸಾಫ್ಟ್ ವೇರ್ ಜನರಿರುತ್ತಾರೋ ಅಲ್ಲಿ ಪೂರ್ತೀ ಗುಂಪುಗೂಡಿಸಲು ಕೊನೆಯ ದಿನದವರೆಗೂ ಸಾಧ್ಯವಾಗುವುದಿಲ್ಲ. ನನಗೂ ಎಲ್ಲರ ಪರಿಚಯ ಕೇವಲ ಪಟ್ಟಿಯನ್ನು ನೋಡಿ ಆಯಿತೇ ವಿನಹ, ಎಲ್ಲರನ್ನೂ ನೋಡಿದ್ದು ಹೊರಡುವ ದಿನ ವಿಮಾನ ನಿಲ್ದಾಣದಲ್ಲೇ.

ಇನ್ನು ಕೇವಲ ಹದಿನೈದೇ ದಿನಗಳಿತ್ತು. ನಾನೇನೋ ಬಹಳ ಸೀರಿಯಸ್ ಆಗೇ ಜಿಮ್ ಗೆ ಹೋಗುವುದು, ಬಸ್ಸಿಗೆ ನೆಡೆದೇ ಹೋಗುವುದೂ, ದಿನಾಗಲೂ ಲಾಪ್ ಟಾಪ್ ಭಾರ ಹೊತ್ತು ಮನೆಗೆ ಬರುವುದು ಮಾಡುತ್ತಾ ಇದ್ದೆ. ಪ್ರತೀ ಶನಿವಾರವೂ ನಾವು ನಮ್ಮ ಹೊಸ ಲಫೂಮ ಶೂ ಗಳನ್ನು ಪಳಗಿಸಲು ಭಾರವಾದ ಟ್ರೆಕ್ಕಿಂಗ್ ಚೀಲಗಳನ್ನು ಹೊತ್ತು ರಿಂಗ್ ರೋಡಿನ ಫುಟ್ ಪಾತಿನ ಮೇಲೆ ೧೦ರಿಂದ ೧೫ಕಿಮೀ ಬಿರ ಬಿರನೆ ಓಡಾಡುತ್ತಿದ್ದೆವು. (ಜನ ನಮ್ಮನ್ನು ಹುಚ್ಚು ಹಿಡಿದ ದೇಸಿಗಳೆಂದು ಭಾವಿಸಿದ್ದರೇನೋ!) ಇದರಿಂದ ವ್ಯಾಯಾಮ, ಮನಃಶಕ್ತಿ ಹಾಗು ಹತ್ತುವೆನೆಂಬ ಭರವಸೆ ಬಂತೆಂದು ಹೇಳಬಹುದು. ಎಲ್ಲರಲ್ಲಿ ತೀರ ಕಡಿಮೆ ಕಸರತ್ತು ಮಾಡಿದ್ದು ಎಂದರೆ ಜ್ಞಾನಿಯೇ. ಕೊನೆಪಕ್ಷ ಅವನು ಹಾಗೆ ಹೇಳಿಕೊಳ್ಳುತ್ತಿದ್ದ. ಅವನು ಒಂದು ವಾರ ಯೋಗಾ ತರಗತಿಗಳಿಗೆ ಹೋಗುವುದು, ರಿಂಗ್ ರೋಡಿನ ಹುಚ್ಚಾಟ ಬೆಟ್ಟರೆ ಬೇರೇನೂ ಮಾಡಲಿಲ್ಲ. ಆಗ ಮಾಡುತ್ತೇನೆ, ಈಗ ಮಾಡುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಅಂತ ಮಾತ್ರ ಹೇಳುತ್ತಲೇ ಇದ್ದ. ಎವೆರೆಸ್ಟ್ ಹತ್ತಿರ ಹೋದಾಗಲೇ ಬುದ್ಧಿ ಬರುತ್ತದೆ ಅಂದುಕೊಂಡು ಸುಮ್ಮನಾದೆ. ನಾವು ಹದಿನೆಂಟು ದಿನಗಳಿಗೆ ಬೇಕಾದ ಸಾಮಾನುಗಳನ್ನೂ, ಬಟ್ಟೆಗಳನ್ನೂ ಪಟ್ಟಿ ಮಾಡಿದ್ದೇ ಮಾಡಿದ್ದು, ತಜ್ಞರ ಅಭಿಪ್ರಾಯಗಳನ್ನು ಕೇಳಿದ್ದೇ ಕೇಳಿದ್ದು. ಆದರೆ ಮುಕ್ಕಾಲು ಬಟ್ಟೆಗಳನ್ನು ಕಟ್ಮಂಡುವಿನಲ್ಲಿ ಕೊಂಡಿದ್ದಿದ್ದರೆ ಖರ್ಚು ಕಡಿಮೆ ಆಗುತಿದ್ದುದ್ದಲ್ಲದೇ, ಯೋಗ್ಯವಾಗಿಯೂ ಇರುತ್ತಿದ್ದವೆಂದು ನಂತರ ಹೊಳೆಯಿತು.

4 comments:

ಚಂದ್ರಕಾಂತ ಎಸ್ said...

ತುಂಬ ಕಾತರದಿಂದ ನಿಮ್ಮ ಮುಂದಿನ ಬರವಣಿಗೆಗೆ ಕಾಯುತ್ತಿದ್ದೆ.ನಿಧಾನವಾಗಿ ಎಲ್ಲವನ್ನೂ ವಿವರಿಸುವ ಶೈಲಿ ಇಷ್ಟವಾಯಿತು. High Altitude sickness ಬಗ್ಗೆ ಕೇಲಿದ್ದೆ. ಅದು ಯಾರಿಗೆ ಯಾವಾಗ ಬೇಕಾದರೂ ಬರಬಹುದೆಂದು ತಿಳಿದಿರಲಿಲ್ಲ.
ಒಂದು ಪುಟ್ಟ ಸೂಚನೆ.: ಅಲ್ಲಲ್ಲಿ ಕೆಲವು ಚಿಕ್ಕ ಪುಟ್ಟ ತಪ್ಪುಗಳಾಗಿವೆ. (spelling )ಆದರೆ ಒಂದು ಕಡೆ ಮಾತ್ರ ವಿರುದ್ಧಾರ್ಥಬಂದಿದೆ. ಹಾಗೆಂದುಕೊಂಡಿರುವೆ." ...ಯೋಚಿಸಲಸಾಧ್ಯವಾಗದಷ್ಟು"

Dr. B.R. Satynarayana said...

ಶ್ರೀಮತಿ ಈಶಾನ್ಯೆ ಅವರೇ,...
ಇದು ನಿಜಕ್ಕೂ ಕನ್ನಡಿಗರೆಲ್ಲಾ ಸಂತೋಷ ಪಡುಬೇಕಾದ ವಿಚಾರ. ಕನ್ನಡದಲ್ಲಿ ಈಬಗೆಯ ಸಾಹಿತ್ಯ ರಚನೆಯಾಗಿರಲೇ ಇಲ್ಲ. ಹಿಂದಿನ ತಲೆಮಾರಿನವರಲ್ಲಿ ಹೆಚ್ಚು ವೈವಿಧ್ಯತೆ ಕಾಯ್ದುಕೊಂಡವರು ತೇಜಸ್ವಿಯೊಬ್ಬರೇ ಎನ್ನಬಹುದು. ಈಗ ಕೆಂಡ ಸಂಪಿಗೆಯ ದೆಸೆಯಿಂದ ಎಲ್ಲರ ಅನುಭವವೂ ಸಾಹಿತ್ಯಕವಾಗಿ ದಾಕಲಾಗುತ್ತಿರುವುದು ಪ್ರಶಂಸನೀಯ. ನಿಮ್ಮ ಎರಡೂ ಕಂತುಗಳನ್ನು ಒಂದೇ ಉಸಿರಿನಲ್ಲಿ ಓದಿ ಮುಗಿಸಿದೆ. ಚೆನ್ನಾಗಿ ಓದಿಸಿಕೊಂಡು ಹೋಗುವ ರಹದ ಶೈಲಿ ನಿಮ್ಮದಾಗಿದೆ. ಅಭಿನಂದನೆಗಳು..

ಗಿರೀಶ್ ರಾವ್, ಎಚ್ (ಜೋಗಿ) said...

ಎಷ್ಟು ಚೆನ್ನಾಗಿ ಬರೀತೀರ್ರೀ ಅಂದರೆ ಏನೂ ಹೇಳಿದಂತಾಗಲಿಲ್ಲ ಅಂತ ಗೊತ್ತು. ಆದರೆ ಅದನ್ನು ಬಿಟ್ರೆ ಬೇರೇನೂ ಹೇಳೋಕ್ಕಾಗಲ್ಲ. ಅಮ್ಮ ಮಗಳು ಫುಲ್ ಕಾಂಪಿಟಿಷನ್ನಾ. ನಡೀಲಿ, ಸಂತೋಷಪಡೋರು ನಾವು.

DCM said...

ಹಿಹಿ.. ರಿಂಗ್ ರೋಡಿನಲ್ಲಿ ಏನಪ್ಪಾ ತಯಾರಿ ಮಾಡಿದ್ರು ಅಂಥ ಯೋಚಿಸ್ತಾಯಿದ್ದೆ! ಮುಂದಿನ ಸರ್ತಿ ನಾನು ಇದೇ ಥರಾ ತಯಾರಿ ಮಾಡಿಸ್ತೀನಿ :)