Showing posts with label Trekking. Show all posts
Showing posts with label Trekking. Show all posts

Monday, October 27, 2008

ಹತ್ತು ಹಲವು ಹುಚ್ಚುಗಳಲ್ಲಿ ಒಂದು

ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್
ಇದು ಮೇ ೨೦೦೮ರಲ್ಲಿ ಕೈಗೊಂಡ ೧೮ ದಿನಗಳ ಕಾಲ್ನಡಿಗೆ ಪ್ರವಾಸ. ಎಂದೂ ಮರೆಯಲಾಗದ ಅನುಭವಗಳಲ್ಲಿ ಒಂದು. ಕೆಲವು ಅನುಭವಗಳನ್ನು ಮಾತಿನಲ್ಲಿ ವಿವರಿಸಲಸಾಧ್ಯ ಅಥವಾ ಅಂತಹದೇ ಅನುಭವ ಓದುವವರಿಗೆ ಸಿಗುವಂತಾಗಲು ತುಂಬಾ ಬರೆಯಬೇಕಾಗುತ್ತೇನೊ, ಅಂತೂ ಅಮ್ಮ ನನ್ನ ಹಿಂದೆ ಬಿದ್ದು, ತಾನು ಓದುವ ಆಸೆಯಲ್ಲಿ ಇದನ್ನು ಬರೆಯಲು ಪ್ರೊತ್ಸಾಹಿಸಿದರು. ಆದರೂ ಇದನ್ನು ಬರೆದು ಮುಗಿಸಲು ಸಮಯ ಬೇಕು. ಈ ಬಿಸಿಲಿನಲ್ಲಿ ಕುಳಿತುಕೊಂಡು ಆ ಥಂಡಿಯನ್ನು ಅನುಭವಿಸಿಕೊಂಡು ಬರೆಯುವುದು ಕಷ್ಟವೇ ಸರಿ.

ನಾನು ಪ್ರಿಯ ಮಾತನಾಡುತ್ತಿದ್ದ ಬಹುತೇಕ ವಿಷಯಗಳಲ್ಲಿ, ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪು ಕೂಡ ಒಂದು. ಒಂದಲ್ಲಾ ಒದು ದಿನ ಅಲ್ಲಿಗೆ ಹೋಗೇ ಹೋಗುತ್ತೇವೆ ಎಂಬ ಹುಚ್ಚು ಹಿಡಿದಿತ್ತು. ಮೌಂಟ್ ಎವೆರೆಸ್ಟ್ ಹತ್ತಲು ಈಗ ವಯಸ್ಸಲ್ಲ, ಆದರೆ ಅಲ್ಲಿಯವರೆಗೂ ನಡೆದು, ಒಂದುಸಲ, ಮೂರ್ಚೆ ಹೋಗುವಷ್ಟು ಸುಂದರವಾದ ದೃಷ್ಯವನ್ನು ನೋಡಬೇಕೆಂಬುದು ನ್ನನ್ನಾಸೆಯಾಗಿತ್ತು. ನಾನು ಒಂದು ಸಣ್ಣ ಪುಸ್ತಕದಲ್ಲಿ ನನ್ನಾಸೆಗಳನ್ನೆಲ್ಲಾ ಬರೆಯುತ್ತಿದ್ದೆ. ಅವು ನೆರವೇರಿದಂತೆ ಅವುಗಳನ್ನು ಹೊಡೆದು ಹಾಕುತ್ತಿದ್ದೆ. ಈ ಆಸೆಗಳು ಹೇಗೆ ಯಾವಾಗ ನೆರವೇರುತ್ತವೆ ಎಂದು ಹೇಳಲಾಗುವುದಿಲ್ಲ. ಹೀಗೆ ಇರುವಾಗ ಒಂದು ದಿನ, ಎಲ್ಲಿಂದಲೋ ಪ್ರಿಯಳ ಫೋನ್. ಕರ್ನಾಟಕ ಮೌಂಟನೇರಿಂಗ್ ಕ್ಲಬ್ ಅಸ್ಸೋಸ್ಸಿಯೇಷನ್ (ಕೆ ಏಮ್ ಎ)ನವರು ಎಷ್ಟೋ ವರ್ಷಗಳ ನಂತರ ಬೇಸ್ ಕ್ಯಾಂಪಿಗೆ ಹೊರಟಿದ್ದಾರೆ, ಕೇವಲ ಕೆಲವೇ ಜನರಿಗೆ ಜಾಗ ಇದೆಯಂತೆ, ಬರುವ ಹಾಗಿದ್ದರೆ ಇನ್ನೆರಡು ದಿನಗಳಲ್ಲಿ ದುಡ್ಡು ಕೊಡಬೇಕಂತೆ. ನಾನು ಹೋಗುತ್ತಾ ಇದ್ದೇನೆ. ಈಗಲೇ ಅರ್ಧ ಕೊಟ್ಟಿದ್ದೇನೆ. ನಿನಗೆ ಯೋಚಿಸಲು ಎರಡು ದಿನ ಸಮಯವಿದೆ. ಎಂದು ಹೇಳಿ ಫೊನ್ ಇಟ್ಟಳು. ಅಯ್ಯೋ, ಇವಳು ಯಾಕಾದರೂ ಫೊನ್ ಮಾಡಿದಳೋ. ಹೋಗಲು ಬಹಳ ಆಸೆ, ಆದರೆ ಅಷ್ಟೊಂದು ದುಡ್ಡು ಕೊಡಬೇಕು. ಅಲ್ಲದೆ, ನನ್ನ ಬಾಸ್ ಮುಖ ನೆನೆಸಿಕೊಂಡು ರಜ ಕೇಳುವ ನನ್ನ ಪಾಡು ಯೋಚಿಸಿಕೊಂಡು, ಏನಪ್ಪಾ ಮಾಡುವುದು. ನನ್ನ ಪಾಡು ಯಾವಾಗಲೂ ಹೇಗೇಕೆ ? ಎಂದು ಯೋಚಿಸುವಂತಾಯಿತು. ಜೀವನದಲ್ಲಿನ ಇದೊಂದೇ ಅವಕಾಶವೂ, ಈ ಕ್ಶುಲ್ಲಕ ಕಾರಣಗಳಿಂದಾಗಿ ದೂರ ಸರಿಯುವಂತೆ ಕಾಣಲು ಶುರುವಾಯಿತು. ಬಹಳ ಬೇಜಾರಿನಿಂದ, ನಾನು ಜ್ನಾನಿಗೆ ಫೊನ್ ಮಾಡಿ ಹೀಗೆ ಹೀಗೆ ನಡೆಯಿತು ಅಂತ ಹೇಳಿದೆ. ಆಗ ಅವನು "ನಾನೂ ಬರಬಹುದೇ ಅಂತ ಪ್ರಿಯಳಿಗೆ ಕೇಳಲು ಹೇಳು. ಅಲ್ಲದೆ, ನಿನ್ನ ಬಾಸ್ ಗೆ ಒಂದು ಮೇಲ್ ಕಳುಹಿಸಿ, ಉತ್ತರಕ್ಕೆ ತಡೆದು, ನಾಳೆಹೋಗಿ ಮಾತನಾಡು. Dont assume". ಅಂತೆಲ್ಲ ಹೇಳಿದ. ಪ್ರಿಯಳಿಗೆ ಫೋನ್ ಮಾಡಿ ವಿಚರಿಸಲು ಹೇಳಿದೆ. ಅವಳು ಅಲ್ಲೇ ಇದ್ದುದ್ದರಿಂದ, ಅವಳು ನನಗೆ ಫೋನ್ ನಲ್ಲೇ ಇರಲು ಹೇಳಿ ಅವರ ಹತ್ತಿರ ವಿಚಾರಿಸಿದಳು. ಅವರು "ಅಯ್ಯೊ, ಇದೇನು ನಿನ್ನ ಬಾಲ ಬಹಳ ಬೇಗ ಬೆಳೆಯುತ್ತಿದೆಯಲ್ಲ ? ಈಗಾಗಲೆ ದೊಂಬಿಯಾಗಿದೆ, ಇನ್ನು ಮದುವೆ ದಿಬ್ಬಣವೇ ಸರಿ. ಆದರೆ since your fate is very good, ಆಗಬಹುದು ಆದರೆ ನನಗೆ ಅರ್ಧ ಹಣ ನಾಳೆಯೇ ಬೇಕು. ನಾನು ನೇಪಾಲ್ ಸರ್ಕಾರಕ್ಕೆ ಪರ್ಮಿಷನ್ ಗಾಗಿ ನಾಳೆ ಹೆಸರಿನ ಪಟ್ಟಿ ಕಳಿಸುತ್ತಿದ್ದೇನೆ. ಈಗಾಗಲೇ ಇಪ್ಪತ್ತು ಜನ ಆಗಿದ್ದಾರೆ, ಇನ್ನು ಯಾರನ್ನೂ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದು ಕೇಳಿಸಿತು.

ಸರಿ, ಅಲ್ಲಿಗೆ ಮೌಂಟ್ ಎವೆರೆಸ್ಟ್ ಒಂದು ಅಡಿ ಹತ್ತಿರವಾದಂತಾಯಿತು. ಆದರೆ, ನನ್ನ ಬಾಸ್, ಕಣ್ಣ ಮುಂದೆ ಬಂದಾಗ, ’ಇದು ಕೇವಲ ಒಂದು ಆಸೆ, ಆಸೆಯೇ ದುಃಖಕ್ಕೆ ಮೂಲ ಆದ್ದರಿಂದ ಮಾಡುವುದನ್ನು ಮಾಡೋಣ ಆದರೆ ಮುಕ್ಕಾಲು ಪಾಲು ಮೌಂಟ್ ಎವೆರೆಸ್ಟ್ ದೂರದಲ್ಲೇ ಉಳಿಯಬಹುದು’ ಅಂದುಕೊಡೆ. ಇದೆಲ್ಲ ನಡೆದದ್ದು ಕೇವಲ ಹತ್ತೇನಿಮಿಷದಲ್ಲಿ. ನಾನು ಬಾಸ್ ಗೆ ಮೇಲ್ ಕಳುಹಿಸಿ ಮನೆಗೆ ಹೋದೆ. ಮರುದಿನ ಕೆ ಏಮ್ ಎ ಗೆ ಹೋಗಿ ಹಣವನ್ನೂ ಕೊಟ್ಟು ಬಂದೆ. ಎರಡು ದಿನ ಕಳೆದರೂ ನನ್ನ ಬಾಸ್ ಇಂದ ಉತ್ತರವಿಲ್ಲ, ಅವರು ಆಫೀಸಿನಲ್ಲೂ ಕಾಣಲಿಲ್ಲ. ಬಹುಶ ರಜದಲ್ಲಿದ್ದರು ಅನ್ನಿಸುತ್ತದೆ. ಒಳ್ಳೆಯದೇ ಆಯಿತು ಅಂದುಕೊಂಡೆ. ಈ ಮನುಷ್ಯನ ಹತ್ತಿರ ಮುಖಾಮುಖಿ ರಜದ ಬಗ್ಗೆ ಮಾತಾಡುವುದು ಅಪರಾಧಿ ಭಾವನೆ ಬರಿಸುತ್ತಿತ್ತು. ಬಹಳ ವಿಚಿತ್ರವೆಂದರೆ ನಮ್ಮ ಆಫೀಸ್ ನಲ್ಲಿ ರಜಕ್ಕೆ ಅನುಮತಿ ಇಲ್ಲದಿದ್ದಾಗ ಮಾತ್ರ ಉತ್ತರ ಬರುತ್ತದೆ. ಹಾಗಾಗಿ ಅದು ರಜಕ್ಕೆ ಅನುಮತಿ ಎಂದೇ ಎಣಿಸಿ ಸುಮ್ಮನಾದೆ. ಅಲ್ಲಿಗೆ ನನ್ನ ಹದಿನೆಂಟು ದಿನಗಳ ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್ ಖಚಿತವಾಯಿತು.