ತೆಂಗ್ ಬೊಚೆ (3870 ಮೀ/12693 ಅಡಿ) - ದಿಂಗ್ ಬೋಚೆ (4410 ಮೀ/14464 ಅಡಿ)
ಬೆಳಿಗ್ಗೆ ಬೇಗನೆ ಗಂಜಿ ಕುಡಿದು ಹೊರಟಾಗ ೭ ಗಂಟೆ. ಹಲ್ಲು ಕಟಕಟ ಅನ್ನುವಂತಹ ಥಂಡಿ. ಯಾರಿಗೂ ಬೆಚ್ಚನೆಯ ಜಾಕೆಟ್ಟುಗಳನ್ನು ಬಿಚ್ಚಿಡುವ ಮನ್ನಸ್ಸೇ ಇಲ್ಲದ್ದಿದ್ದರೂ, ವಸುಮತಿಯವ ಆಜ್ಞೆಯಂತೆ ಬಿಚ್ಚಿದೆವು. ಒಂದು ಸಲ ನೆಡೆಯಲು ಶುರುಮಾಡಿದರೆ ಮೈ ಇಂದ ಬೆವರು ಇಳಿಯಲು ಪ್ರಾರಂಭವಾಗುತ್ತದೆ. ಆಗ ಜಾಕೆಟ್ಟುಗಳನ್ನು ಬಿಚ್ಚಿ ಓಳಗಿಡುವಷ್ಟು ಸಮಯ ಯಾರೂ ನಮಗೆ ಕಾಯುವುದಿಲ್ಲ. ಹೀಗಾಗಿ ಈ ವ್ಯವಸ್ಥೆ. ದಿಂಗ್ ಬೋಚೆಗೆ ದಾರಿ ಬಹಳ ಕಡಿದಾದುದ್ದೇನಲ್ಲ. ಆಗ ಈಗ ತಿರುವಿನಲ್ಲಿ ಮೋಡಗಳೂಡನೆ ಮುಚ್ಚು ಮರೆಯಾಡುತ್ತ ಅಮ-ದಬ್ಲಮ್ ಕಾಣಿಸಿಕೊಳ್ಳುತ್ತಿತ್ತು.
ಅಮ-ದಬ್ಲಮ್
ಅಮ-ದಬ್ಲಮ್ ಎದುರಿಗಿನ ಪರ್ವತಗಳು
ದಾರಿಯಲ್ಲಿ ನಮಗೆ ಬೇಸ್ ಕ್ಯಾಂಪ್ ಗೆ ಹೋಗುತ್ತಿದ್ದಾತ ಒಬ್ಬ ಸಿಕ್ಕಿದ. ಅವನ ಕೈಯಲ್ಲಿ ಚಿಕ್ಕ ಐಸ್ ಕೊಡಲಿ ಇತ್ತು. ಅವನು ಎವೆರೆಸ್ಟ್ ಹತ್ತಲು ಬಂದ್ದಿದ್ದ, ಆದರೆ ಚೀನಿಯವರು ಒಲಂಪಿಕ್ಸ್ ಜ್ಯೋತಿಯಿಂದಾಗಿ ಎಲ್ಲರನ್ನೂ ಕೆಳಗೆ ಕಳುಹಿಸಿದ್ದರಿಂದ ಇವನೂ ಬಂದಿದ್ದನಂತೆ. ಈಗ ಹಿಂತಿರುಗಿ ಹೋಗುತ್ತಿದ್ದ. ಆಗಷ್ಟೆ ಹಿಂತಿರುಗಿ ಬರುತಿದ್ದ ಬಸವಳಿದಿದ್ದ ವಿದೇಶೀಯರ ಗುಂಪೊಂದನ್ನು ಅವನು "ಬಹಳ ಕಡಿದಾಗಿತ್ತೇನೋ ?" ಎಂದು ಕೇಳಿದ, ಅದಕ್ಕೆ ಅವರು "ನಿನ್ನದರಷ್ಟೊಂತು ಕಡಿದಾಗಿಲ್ಲ ಬಿಡು" ಎಂದು ನಕ್ಕರು. ಪಂಗ್ ಬೋಚೆಯಲ್ಲಿ ಬಿಸಿ ನಿಂಬೆ ರಸವನ್ನು ಹಾಗೂ ಬೆಂದ ಆಲೂಗಡ್ಡೆಗಳನ್ನು ತಿಂದೆವು. ಆಲ್ಲಿ ಕೆಂಪು ಮೆಣಸಿನ ಕಾಯಿ ಸಾಸ್ ಇಟ್ಟಿತ್ತು. ಅದೆಷ್ಟು ಕಾರವಾಗಿತ್ತೆಂದರೆ, ಒಂದು ತೊಟ್ಟು ಬಾಯಲ್ಲಿ ಬಿಟ್ಟರೆ, ೨ ನಿಮಿಷ ಕುಣಿಯುವಂತಾಗುತ್ತಿತ್ತು. ಅಲ್ಲಿ ಒಬ್ಬಳು ಚಿಕ್ಕ ಹುಡುಗಿ. ಅವಳ ತಂದೆಯೊಡನೆ ಆಟವಾಡುತ್ತಿದ್ದಳು. ಅವಳ ತಂದೆಯೋ, ತಾತನಂತೆ ಕಾಣುತ್ತಿದ್ದ. ಸಮಿತ್ ಆ ಪುಟ್ಟ ಹುಡುಗಿಗೆ ಬಲೂನಿನ ನಾಯಿಮರಿ ಮತ್ತಿತರ ಆಟಿಕೆಗಳನ್ನು ಮಾಡಿಕೊಟ್ಟ. ಸಮಿತ್ ಹತ್ತಿರ ವಿದೇಶದಿಂದ ತಂದಿದ್ದ ಉದ್ದನೆಯ ತೆಳ್ಳಗಿನ ಬಲೂನುಗಳಿದ್ದವು. ಅದರಲ್ಲಿ ಎನೆನೋ ಮಾಡುವುದು ಅವನ ಹವ್ಯಾಸ.
ಅಮ-ದಬ್ಲಮ್ ಎದುರಿಗಿನ ಪರ್ವತಗಳು
ಅಷ್ಟರಲ್ಲಿ ಅಲ್ಲಿಗೆ ಬಂದ ಒಂದು ವಿದೇಶಿಯರ ತಂಡ, ಆ ಹುಡಿಗಿಯ ತಂದೆಯೊಡನೆ ಫೊಟೋ ತೆಗೆಸಿಕೊಳ್ಳಲು ಶುರುಮಾಡಿದರು ! ಎಲಾ ಇವನ.. ಇದೇನಿದು ನಡೆಯುತ್ತಿದೆ ಎಂದರೆ, ಈತ ಎವೆರೆಸ್ಟ್ ತುದಿಯನ್ನು ನಾಲ್ಕು ಸಲ ಮುಟ್ಟಿದ್ದಾನಂತೆ ! ನಾವೂ ಅವನೊಡನೆ ಫೋಟೊ ತೆಗೆಸಿಕೊಳ್ಳೋಣ ಎಂದುಕೊಳ್ಳುವಷ್ಟರಲ್ಲಿ, ಆತ ಆ ಜಾಗದಿಂದ ಮಾಯ. ಹಿಂತಿರುಗಿ ಬರುವಾಗಲಾದರೂ ಅವನೊಡನೆ ಒಂದು ಫೊಟೋ ತೆಗಿಸಿಕೊಳ್ಳುವುದು ಎಂದು ನಿರ್ಧರಿಸಿದೆವು.
ನಾವು ಸುಮಾರು ೬ ಗಂಟೆಗಳ ಕಾಲ ನೆಡೆದಿರಬಹುದು. ದಾರಿ ಉದ್ದಕ್ಕೂ ಎಲ್ಲೆಲ್ಲೂ ರೊಡೊ ಡೆಂಡ್ರಾನುಗಳು.
ರೋಡೊ ಡೆಂಡ್ರಾನ್
ನಾವು ದಿಂಗ್ ಬೋಚೆ ತಲುಪಿದಾಗ ಮಧ್ಯಾನ ೩:೩೦. ಕೊರೆಯುವ ಥಂಡಿ. ಎರಡು ಅಂತಸ್ತಿನ ಹೋಟೆಲ್. ನೋಡಲು ಚೊಕ್ಕವಾಗಿತ್ತು. ಅದರಲ್ಲಿ ೪ ಟಾಯ್ಲೆಟುಗಳಿವೆಯೆಂದು ಅದರ ಯಜಮಾನ ಹೆಮ್ಮೆಯಿಂದ ಹೇಳಿಕೊಂಡ. ಈಗಾಗಲೆ ನಮಗೆ ಈ ಟಾಯ್ಲೆಟ್ ಗಳ ಪರಿಚಯವಿದ್ದುದ್ದರಿಂದ ನಾವೇನು ಪುಳಕಿತರಾಗಲ್ಲಿಲ್ಲ. ಆದರೆ ಇಲ್ಲಿ ಅವು ನಿಜವಾಗಿಯೂ ದೊಡ್ಡ ಕೊಣೆಯಾಗಿದ್ದು, ಎರಡೆರಡು ಗುಂಡಿಗಳಿದ್ದವು. ಇಲ್ಲೆಲ್ಲಾ ನೀರು ಉಪಯೂಗಿಸುವುದಿಲ್ಲ. ಹಾಗಂತ ವಿದೇಶೀಯರಂತೆ ಪೇಪರನ್ನೂ ಉಪಯೋಗಿಸುವುದಿಲ್ಲ. ಇಲ್ಲೆಲ್ಲಾ ಟಾಯ್ಲೆಟ್ಟು ಯಾವಾಗಲೂ ನೆಲದಿಂದ ೩-೪ ಅಡಿ ಎತ್ತರದಲ್ಲಿ ಕಟ್ಟಿರುತ್ತಾರೆ. ಟಾಯ್ಲೆಟ್ಟುಗಳಲ್ಲಿ ಮರದ ನೆಲದಲ್ಲಿ ಒಂದು ದೊಡ್ಡ ತೂತಮಾಡಿರುತ್ತಾರೆ. ತೂತದ ಪಕ್ಕಕ್ಕೆ ಒಂದು ಗುಡ್ಡೆ ಮರದ ಹೊಟ್ಟು ಅಥವಾ ಮರಳು ಹಾಕಿರುತ್ತಾರೆ. ಒಂದು ಹಾರೆಯೂ ಇಟ್ಟಿರುತ್ತಾರೆ. ಕೆಲಸ ಮುಗಿದನಂತರ ಮರದ ಹೊಟ್ಟನ್ನು ಆ ತೂತದ ಮೂಲಕ ಹಾರೆಯಿಂದ ಎಳೆದು ಮುಚ್ಚಬೇಕು. ಇದು ಎರಡು ಅಂತಸ್ತಿನ ಹೋಟಲಾಗಿದ್ದು, ಮೆಲಂತಸ್ತಿನಲ್ಲೂ ಒಂದು ಟಾಯ್ಲೆಟ್ ಇತ್ತು. ಅದು, ಒಂದು ಬಿಳಿ ಬಕೆಟ್ಟನ್ನು ಮರದ ತೂತದ ಮೇಲೆ ಮಗುಚಿ ಹಾಕಿ, ತಳ ತೆಗೆದು ಅದರ ಮೇಲೆ ಒಂದು ಹೊಲೆದ ಕರಿ ಸೀಟ್ ಹಾಕಿದಂತಿತ್ತು. ಅಲ್ಲಿ ಮರದ ಹೊಟ್ಟು ಮತ್ತಿತರ ಸಾಮಾನುಗಳು ಇರಲಿಲ್ಲ. ಯಾಕೆಂದರೆ, ಅಲ್ಲಿ ಕೂತು ೧೫ ಅಡಿ ಆಳದ ನೆಲಕ್ಕೆ
ಗುರಿಹಿಡಿದು ಮಾಡಬೇಕಿತ್ತು, ಇನ್ನು ಮರದ ಹೊಟ್ಟನ್ನು ಮುಚ್ಚುವ ವಿಷಯ ಹಾಗಿರಲಿ.
ಗುರಿಹಿಡಿದು ಮಾಡಬೇಕಿತ್ತು, ಇನ್ನು ಮರದ ಹೊಟ್ಟನ್ನು ಮುಚ್ಚುವ ವಿಷಯ ಹಾಗಿರಲಿ.
ಮೋಹನ್ ಬಹಳ ತೊಂದರೆ ಪಡುತ್ತಿದ್ದ. ಅವನಿಗೆ ಶ್ಯಾಸಕೋಶದಲ್ಲಿ ನಿಧಾನವಾಗಿ ನೀರು ತುಂಬಿಕೊಳ್ಳಲು ಶುರುವಾಗಿತ್ತು. ಎರಡು ಹೆಜ್ಜೆ ನಡೆದರೆ ಸುಸ್ತಾಗಿ ಎದುಸಿರು ಬಿಡುತ್ತಾ ನಿಲ್ಲುತ್ತಿದ್ದ. ಡಾ.ಮಂಜ ಹಾಗು ಅಶೋಕ್ ಅವನೊಡನೆ ಪೆಂಗ್ ಬೋಚೆಯವರೆಗೆ ಬಂದರು. ಡಾ.ಮಂಜ ಅವನೂಡನೆ ಒಂದು ದಿನ ಅಲ್ಲೆ ಉಳಿದುಕೊಂಡರು. ಹೇಗಿದ್ದರೂ ನಾವು ಮರುದಿನ ದಿಂಗ್ ಬೋಚೆಯ ಹತ್ತಿರಲ್ಲಿ ಅಕ್ಲಿಮಟೈಸೇಶನ್ ಗೆ ಹೋಗುವವರಿದ್ದೆವು. ಮರುದಿನ ಖಾಜಿ ಅವನನ್ನು ಸಮಸೆ ಎಂಬ ಜಾಗದಲ್ಲಿ ಹೋಟಲಿನಲ್ಲಿ ಇಳಿಸಿ, ನಂತರ ಸ್ವಲ್ಪ ಚೇತರಿಸಿಕೊಂಡಲ್ಲಿ ಅವನನ್ನು ದಿಂಗ್ ಬೋಚೆಗೆ ಕರೆತರಬೇಕೆಂದು ವಸುಮತಿಯವರು ನಿರ್ಧರಿಸಿದರು. "ಮೊದಲನೆ casualty" ವಸುಮತಿಯವರು ಹೇಳಿತ್ತಿದ್ದರು. "ಎಲ್ಲರೂ ತಮಗೆ ಹೈ ಅಲ್ಟಿಟ್ಯುಡ್ ಸಿಕ್ ನೆಸ್ ಬಂದಿದೆಯೆಂದು ಒಪ್ಪಿಕೊಳ್ಳಲು ತಯಾರಾಗಿರಬೇಕು. ಜೀವ ಮುಖ್ಯ. ಅವನು ಮುಂದಿನ ಸಲ ಬೇಸ್ ಕ್ಯಾಂಪ್ ಗೆ ಬರಬಹುದು. ಎವೆರೆಸ್ಟ್ ಹತ್ತುವಾಗ ಹಿಂತಿರುಗಿ ಹೋಗುವ ಸಮಯ ಮಧ್ಯಾನ್ ೧೨ ಗಂಟೆ. ಎವೆರೆಸ್ಟ್ ತುದಿ ಕೆವಲ ೧೫ ಅಡಿ ದೂರ ಇದ್ದರೂ, ೧೨ ಗಂಟೆಯಾದರೆ, ನಮ್ಮ ಜೀವ ಉಳಿಸಿಕೊಳ್ಳಲು ಹಿಂತಿರುಗಲೇ ಬೇಕು."
ಎವೆರೆಸ್ಟ್ ಸುತ್ತಾಮುತ್ತ ಒಂದು ವಿಚಿತ್ರವಾದ ಕೆಮ್ಮು ಇದೆ. ಅದನ್ನು ಖುಂಬು ಕೆಮ್ಮು ಎನ್ನುತ್ತಾರೆ. ಬೇಸ್ ಕ್ಯಾಂಪ್ ದಾರಿ ಬಹಳ ಧೂಳು. ಹಾಗಾಗಿ ಎಲ್ಲರೂ ಮೂಗಿಗೆ ದುಪ್ಪಟ್ತವನ್ನೊ, ಸ್ಕಾರ್ಫ್ ಅನ್ನೊ ಕಟ್ಟಿಕೊಂದಿದ್ದೆವು. ನನಾಗಲೇ ಸಣ್ಣಗೆ ಕೆಮ್ಮುತ್ತಿದ್ದೆ. ಇಂತಹ ಎತ್ತರದಲ್ಲಿ ಸ್ವಲ್ಪ ತಲೆ ನೋವಾದ ಹಾಗೆ ಅನ್ನಿಸುತ್ತಿತ್ತು. ಜಾಸ್ತಿ ನೀರು ಕುಡಿಯ ಬೇಕು ಎಂದು ಕೊಂಡೆ.
ಮರುದಿನದ ಅಕ್ಲಮಟೈಸೇಶನ್ ಆದನಂತರ, ನಮ್ಮ ಮುಂದಿನ ಗುರಿ ಲೊಬುಚೆ. ಅಲ್ಲಿ ಇನ್ನೂ ಛಳಿ.ಅಲ್ಲಿಯ ದಾರಿಯಲ್ಲಿ ನಾವು ಒಂದು ಗ್ಲೆಶಿಯರ್ ದಾಟಬೇಕಾಗುತ್ತದೆಂದು, ಅಲ್ಲಿ ಹಿಮವಿದ್ದರೆ, ನಾವೆಲ್ಲಾ ಒಂದೇ ಸಾಲಿನಲ್ಲಿ ಒಬ್ಬರು ಕಾಲು ಇಟ್ಟಕಡೆ ಇನ್ನೊಬ್ಬರು ಇಟ್ಟು ನಡೆಯಬೇಕೆಂದು ವಸುಮತಿಯವರು ಸಲಹಿದರು. ನಾಳೆ ಬರಿಯ ಅಕ್ಲ್ಮಟೈಸೇಶನ್. ಹಾಗಾಗಿ ೭-೮-೯ ಎಂದು ನಿರ್ಧರಿಸಿದೆವು.