Friday, December 12, 2008

ನಾಲ್ಕನೇ ದಿನ - ನಾಮ್ ಚೆ ಹತ್ತಿರ ಹೈ ಆಲ್ಟಿಟ್ಯುಡ್ ಪ್ರವೇಶ

ನಾಲ್ಕನೇ ದಿನ (ಮೇ ೬, ೨೦೦೮)
ಫಕ್ದಿಂಗ್ (2652mt/8698ft) - ನಾಮ್ ಚೆ ಬಜಾರ್ (3489mt/11443ft)

ಈಗಾಗಲೇ ನಮ್ಮ ಗುಂಪು ಚದುರಿಹೋಗಿತ್ತು. ವಸುಮತಿಯವರು ಎಷ್ಟೋ ಮುಂದೆ ಹೋಗಿದ್ದರು. ನಾನು ಜ್ಞಾನಿಯ ಜೊತೆ ಬರುತ್ತಾ ಇದ್ದೆ. ಅವನಿಗೆ ತಾನು ವ್ಯಾಯಾಮ ಮಾಡಿಲ್ಲ ಎನಾಗುತ್ತೋ ಅಂತ ದಿಗಿಲು ಶುರುವಾಗಿತ್ತು. ಆದರೆ ಅದು ಈ ರೀತಿ ಯೋಚಿಸುವ ಸಮಯವಲ್ಲ. ನಾನು ಅವನಿಗೆ ಹೇಗೆ ಕಾಲುಗಳನ್ನು ಇಡಬೇಕು, ಹೇಗೆ ಲಯಬದ್ಧವಾಗಿ ಉಸಿರಾಡಬೇಕು ಅಂತ ಹೇಳಿಕೊಡುವಷ್ಟರಲ್ಲಿ ನಾಮ್ ಚೆ ಬಜಾರ್ ಹತ್ತಿರದ ಕೊನೆಯ ತೂಗು ಸೇತುವೆ ಬಂತು. ಅದು ಸುಮಾರು ಎಂಟು ಅಂತಸ್ತಿನ ಕಟ್ಟಡದಷ್ಟು ಎತ್ತರದಲ್ಲಿದ್ದ ಸೇತುವೆ. ಅದನ್ನು ’ಹಿಲರಿ ಸಸ್ಪೆನ್ಶನ್ ಬ್ರಿಡ್ಜ್’ ಅಂತ ಕರೆಯುತ್ತಾರೆ. ಅದರ ಮೇಲೆ ಇರುವೆಗಳಂತೆ ಪ್ರಿಯ ಹಾಗು ವಸುಮತಿಯವರ ಗುಂಪು ದಾಟುವುದನ್ನು ದೂರದಿಂದ ಕಂಡೆವು. ಅದರ ಹತ್ತಿರ ಹೋಗಲು ಒಂದು ಕಡಿದಾದ ಗುಡ್ಡ ಹತ್ತಬೇಕಿತ್ತು. ಅದರ ಎತ್ತರ ನೋಡೇ ಜ್ಞಾನಿ ಹಿಂದೆ ಬಿದ್ದಿದ್ದ ಕೊನೆಯ ಗುಂಪಿನೊಡನೆ ತಾನು ಬರುವುದಾಗಿ, ಅಲ್ಲಿಯವರೆಗೆ ಅಲ್ಲೇ ಕಲ್ಲಿನ ಮೇಲೆ ಕುಳಿತುಕೊಂಡು ಸುಧಾರಿಸಿಕೊಳ್ಳುವುದಾಗಿ ಹೇಳಿದ. ಅದು ನಿಜವಾಗಿಯೂ ಎರಡು ಪರ್ವತಗಳ ನಡುವೆ ನೇತುಹಾಗಿದ್ದ ತೂಗು ಸೇತುವೆ. ಒಂದು ಗುಡ್ಡದ ತುದಿಯಿಂದ ಇನ್ನೊಂದು ಬೆಟ್ಟದ ಮಧ್ಯಕ್ಕೆ ಕೋಸಿ ನದಿಗೆ ಕಟ್ಟಿದ್ದ ಸುಮಾರು ೫೦ ಮೀಟರ್ ಉದ್ದದ ಸೇತುವೆ. ಅದನ್ನು ದಾಟಿದ ತಕ್ಷಣ ಮೇಲಕ್ಕೆ ಕಡಿದಾದ ದಾರಿ ಹತ್ತಬೇಕು. ನಾನು ಸೇತುವೆಯ ಬಲಗಡೆಯ ಗುಡ್ಡ ಹತ್ತಲು ಶುರುಮಾಡಿದೆ. ನೆಡೆಯುವುದು ನಿಧಾನವಾಗಲು ಶುರುವಾಯಿತು. ನಂತರ ಶರತ್ ಹಾಗು ತನ್ವಿ ಸಿಕ್ಕರು. ತನ್ವಿ ಮುಂದೆ ನಡೆಯಲಾರದೆ ಹೆಜ್ಜೆ ಹೆಜ್ಜೆಗೂ ಪರದಾಡುತ್ತಿದ್ದಳು. ಅವಳ ಶೂ ಸಹ ತೊಂದರೆ ಕೊಡುತ್ತಿತ್ತು. ಬಹಳ ಸುಸ್ತಾದಂತೆ ಕಾಣುತ್ತಿದ್ದಳು.

ಶರತ್ ಹಾಗು ತನ್ವಿ, ಹಿಂದೆ ದೂರದಲ್ಲಿ ಹಿಲರಿ ಸಸ್ಪೆನ್ಶನ್ ಬ್ರಿಡ್ಜ್

ನಾನು ಅವರನ್ನು ದಾಟಿ ಸೇತುವೆ ದಾಟಲು ಶುರುಮಾಡಿದಾಗ ಒಬ್ಬೊಂಟಿಯಾದೆ. ಒಬ್ಬೊಂಟಿಯಾಗಿ ಇಂತ ಸಮಯದಲ್ಲಿ ಎಂದೂ ನಡೆಯಬಾರದು. ಯಾರಾದರು ಪ್ರೊತ್ಸಾಹಕ್ಕೆ ಇದ್ದರೆ ಬಚಾವ್. ಸೇತುವೆ ದಾಟಿದ ಮೇಲೆ ವಿಮಲ್ ಹಾಗು ಸೆಂತಿಲ್ ಸಿಕ್ಕರು. ಅವರು ನನಗೆ ಟ್ಯಾಂಗ್ (Tang) ಅನ್ನು ನೀರಿನೊಡನೆ ಬೆರೆಸಿಕೊಂಡು ಹತ್ತು ಹೆಜ್ಜೆಗೆ ಒಂದುಸಲ ಒಂದು ಗುಟುಕು ಕುಡಿಯಲು ಸಲಹಿದರು. ಈ ಇಬ್ಬರಿಗೆ ಬಹಳ ಸ್ಟ್ಯಾಮಿನಾ. ಅವರೂ ಮುಂದೆ ನಡೆದು ಸ್ವಲ್ಪ ಹೊತ್ತಿನಲ್ಲಿ ಮಾಯವಾದರು. ನಾನು ಸ್ವಲ್ಪ ದೂರ ಹೋದ ನಂತರ ಖಾಜಿ ಸಿಕ್ಕಿದ. ಅವನು ನನ್ನ ಜೊತೆ ಮಾತಾಡುತ್ತಾ ಹತ್ತಲು ಶುರುಮಾಡಿದ.

ಹಿಲರಿ ಸಸ್ಪೆನ್ಶನ್ ಬ್ರಿಡ್ಜ್ ಹತ್ತಿರದಿಂದ

ಅವನು ಕೇವಲ ೨೦ ವರ್ಷದವನು. ಅವನಿಗೆ ೨೪ ವರ್ಷವಾದಾಗ ಮೌಂಟ್ ಎವೆರೆಸ್ಟ್ ಹತ್ತಲು ಹೋಗುತ್ತಾನಂತೆ. ಅಲ್ಲಿಯ ಎಲ್ಲಾ ಶರ್ಪಾ ಜನರಿಗೆ ಮೌಂಟ್ ಎವೆರೆಸ್ಟ್ ಹತ್ತುವುದೊಂದೆ ಕನಸು ಹಾಗು ಸಾಧನೆಯ ಗುರಿ. ಈ ಸಲ ೫೦ನೇ ವರ್ಷದ ವಾರ್ಷಿಕೋತ್ಸವದ ಪರ್ಯಂತ ಎವೆರೆಸ್ಟ್ ಬೇಸ್ ಕ್ಯಾಂಪಿನಿಂದ ನಾಮ್ ಚೆ ವರೆಗೆ (೫೨ ಕಿಮಿ) ಮ್ಯಾರಥಾನ್ ಇಟ್ಟಿದ್ದಾರಂತೆ. ಜಗತ್ತಿನ ಎಲ್ಲಾಕಡೆಯಿಂದ ಜನ ಓಡಲು ಬರುತ್ತಿದ್ದಾರಂತೆ. ಅದರಲ್ಲಿ ಅವನೂ ಪಾಲ್ಗೊಳ್ಳುತ್ತಿರುವವನೆಂದು ಹೇಳಿದ. ಎಲ್ಲರಿಗೂ ಹುಚ್ಚು ಹಿಡಿದಿದೆ ಅನ್ನಿಸಿತು. ನಂತರ ನಾನು ತುಂಬಾ ನಿಧಾನವಾಗಿ ನಡೆಯುತ್ತಿದ್ದೇನೆಂದು ಹೇಳಿ ಅವನು ಮುಂದೆ ಹೊರಟು ಹೋದ. ಮತ್ತೆ ನಾನು ಒಂಟಿ.

ಪೋರ್ಟರುಗಳ ಬುಟ್ಟಿಗಳು

ಅಲ್ಲಿ ಬರಿ ಪೋರ್ಟರುಗಳು. ಬಾಗಿಲುಗಳು, ಮಾಂಸ, ಊಟದ ಪದಾರ್ಥಗಳು, ಮರದ ಹಲಗೆಗಳು ಇತರೆ ಸಾಮಾನುಗಳನ್ನು ಬೆನ್ನ ಮೇಲೆ ಹೊತ್ತು ಹೋಗುತ್ತಿದ್ದರು. ಆವರು ೪೦ ರಿಂದ ೬೦ ಕೆಜಿ ಹೊರಬಲ್ಲರು. ಅವರೂ ಸಹ ಮೂರು ನಿಮಿಷಕ್ಕೊಮ್ಮೆ ನಿಂತು ಸುಧಾರಿಸಿ ಕೊಳ್ಳುತ್ತಿದ್ದರು. ಇನ್ನೂ ಸ್ವಲ್ಪ ಮೇಲೆ ಹತ್ತಿದ ನಂತರ ನನಗೆ ಒಂದು ಹೆಜ್ಜೆ ಇಟ್ಟರೆ ಸುಧಾರಿಸಿ ಕೊಳ್ಳುವಂತಾಗುತ್ತಿತ್ತು. ಆಗ ಯಾರೊ ಅಮೆರಿಕನ್ ಮುದುಕ ದಂಪತಿಗಳು ನನ್ನ ಹಿಂದೆ ಬರುತ್ತಿದ್ದುದ್ದು ಕಾಣಿಸಿತು. ಹೆಂಡತಿ ಎರಡು ಹೆಜ್ಜೆಗೊಮ್ಮೆ ನಿಂತು ವಾಂತಿ ಮಾಡುತ್ತಿದ್ದಳು. ಅವಳ ಗಂಡ ಹಾಗು ಪೋರ್ಟರ್, ಅವಳಿಗಾಗಿ ನಿಲ್ಲುವುದು, ಅವಳು ವ್ಯಾಕ್ ವ್ಯಾಕ್ ಮಾಡುವುದು, ಅವರು ಅವಳಿಗೆ ನೀರು ಕೊಡುವುದು ನಂತರ ಮತ್ತೈದು ಹೆಜ್ಜೆ ಮುಂದುವರಿಯುವುದು. ಹೀಗೆ ಮುಂದುವರಿಯ್ತ್ತಿದ್ದರು. ಅವರು ನನ್ನ ಹತ್ತಿರ ಬಂದಾಗ, ಅವಳು ನಕ್ಕು, "Altitude sickness, we have crossed 10,000ft you see, drink lots of water and walk for few steps, take deep breadth and walk" ಅಂತ ಹೇಳಿ ಮುಂದೆ ಹೋದಳು. "ಇದ್ಯಾವ ಶನಿ ವಕ್ಕರಿಸಿತಪ್ಪಾ !" ಎಂದು, ನಾನು ಅವಳು ಹೇಳಿದಂತೆ ಮಾಡುತ್ತಾ ಮುಂದುವರಿದೆ. ನನಗೆ ಇನ್ನು ಮುಂದುವರಿಯಲು ಸಾಧ್ಯವೇ ಇಲ್ಲ ಅನ್ನಿಸಲು ಶುರುವಾಯಿತು. ಬೆವರೇನೂ ಇಳಿಯುತ್ತಿರಲಿಲ್ಲ, ಆದರೆ ನೆಡೆಯಲು ಶಕ್ತಿಯೇ ಇಲ್ಲವೆನಿಸಲು ಶುರುವಾಯಿತು. ಇದು ಮೇಲೆ ಮೇಲೆ ಹೋದಂತೆ, ಆಮ್ಲಜನಕ ರಕ್ತದಲ್ಲಿ ಕಡಿಮೆಯಾಗಲು ಶುರುವಾಗುತ್ತದೆ, ಆದ್ದರಿಂದ ಈ ರೀತಿ ಎಂದು ನಂತದ ತಿಳಿಯಿತು. ಪರ್ವತಾರೋಹಿಗಳು ವಯಾಗ್ರ ಮಾತ್ರೆಗಳನ್ನೂ ತೆಗೆದುಕೊಳ್ಳುತ್ತಾರಂತೆ! (ಇದರ ಸತ್ಯಾಸತ್ಯೆಯ ಮೇಲೆ ಸ್ವಲ್ಪ ಅನುಮಾನ ಇದೆ). ವಯಾಗ್ರ ಮಾತ್ರೆಗಳು ರಕ್ತ ನಾಳಗಳನ್ನು ಅಗಲಿಸಿ ಜಾಸ್ತಿ ಆಮ್ಲಜನಕ ದೇಹದಲ್ಲಿ ಓಡಾದುವಂತೆ ಮಾಡುವುದರಿಂದ ಎತ್ತರದ ಆಲ್ಟಿಟ್ಯುಡಿನಲ್ಲೂ ಸಮುದ್ರ ಮಟ್ಟದಲ್ಲಿದ್ದಂತೆ ಶಕ್ತಿ ಹಾಗು ತ್ರಾಣ ಬರುತ್ತದಂತೆ.

ಜ್ಞಾನಿ ಬರುವವರೆಗೂ ಹೇಗೋ ನಡೆಯುವುದೆಂದು ನಂತರ ಏನು ಮಾಡುವುದೆಂದು ತೀರ್ಮಾನಿಸುವುದೆಂದುಕೊಂಡೆ. ಒಂದು ಹೆಜ್ಜೆ ಇಡುವುದು, ಎರಡು ನಿಮಿಷ ನಿಲ್ಲುವುದು, ಮಾಡುತ್ತಾ ಮುಂದುವರಿಯುತ್ತಿದ್ದೆ. ಆಗ ಮುಂದಿನಿಂದ ಎಬ್ಬ ಪುಣ್ಯಾತ್ಮ ಬಂದ. ಆತನ ಹೆಸರು ಭಂಡಾರಿ. ಹಿಂದಿ ಮಾತನಾಡುತ್ತಿದ್ದರು. ಅಲ್ಲಿಯ ಸೈನ್ಯದಲ್ಲಿ ಇರುವ ಒಬ್ಬನೇ ಹಿಂದುಸ್ಥಾನಿಯಂತೆ. ಭಂಡಾರಿ ಎಂದು ಯಾರನ್ನೇ ಕೇಳಿದರೂ ತೋರಿಸುತ್ತಾರಂತೆ. (ಆದರೆ ನಂತರ ಕೇಳಿದಾಗ ಯಾರಿಗೂ ಗೊತ್ತಿರಲ್ಲಿಲ್ಲ !). ಆತ, ನಾನು ಕಷ್ಟಕರವಾದ ದಾರಿಯನ್ನು ಪೂರ್ತಿಯಾಗಿ ಮುಗಿಸಿದ್ದೇನೆಂದು, ಇನ್ನು ಕೆವಲ ಸುಲಭವಾದ ದಾರಿ, ಸ್ವಲ್ಪ ದೂರ ಮಾತ್ರ ಇರುವುದೆಂದು ಹೇಳಿದರು. ಎಲ್ಲಿಂದಲೋ ಜೀವ ಬಂತು. ಮುಂದೆ ಒಂದು ತಿರುವಿನಲ್ಲಿ ನಾಮ್ ಚೆ ಬಜಾರಿನ ಮನೆಗಳು ಚುಕ್ಕೆ ಚುಕ್ಕೆಯಾಗಿ ಕಂಡಾಗ, ನಿಂತು ಫೊಟೊ ತೆಗೆದುಕೊಂಡು ನಾಮ್ ಚೆ ಕಂಡಿದ್ದು ಖಾತರಿ ಮಾಡಿಕೊಂಡೆ. ಅದು ನಾನು ಬೆಂಗಳೂರಿನಲ್ಲಿ, ಫೋಟೊನಲ್ಲಿ ನೋಡಿದ್ದ ನಾಮ್ಚೆ ಬಜಾರೇ ಆಗಿತ್ತು! ಕೆಂಪು ಮತ್ತು ನೀಲಿ ಹೆಂಚುಗಳಿದ್ದ ಸಣ್ಣ ಮನೆಗಳು ಬೆಟ್ಟದುದ್ದಕ್ಕೂ ಕಾಣುತ್ತಿದ್ದವು.

ತಿರುವಿನಲ್ಲಿ ಕಂಡ ನಾಮ್ ಚೆ ಬಜಾರ್

’ಹಿಮಾಲಯ ಪರ್ವತ, ಸಾಕಪ್ಪಾ ನಿನ್ನ ಸಹವಾಸ’ ಎಂದು ಮೊದಲ ಸಲ ಅಂದುಕೊಂಡೆ (ಮುಂದೆ ಇದನ್ನು ಲೆಕ್ಕವಿಲ್ಲದಷ್ಟುಸಲ ಅಂದುಕೊಂಡಿರುವೆ !). ಅಲ್ಲಿಂದ ನಾನು ನಮ್ಮ ’ಹಿಮಾಲಯನ್ ಲಾಡ್ಜ್’ ಸೇರಲು ಇನ್ನೂ ಒಂದು ಗಂಟೆ ಬೇಕಾಯಿತು. ಅಲ್ಲಿ ಎಲ್ಲಾ ಖೊಠಡಿಗಳೂ ಐಸ್ ಕೋಲ್ಡ್. ಬಿಸಿ ನಿಂಬೆ ಶರಭತ್ತು ಕುಡಿದಾಗಲೇ ಸಮಾಧಾನ, ಸ್ವಲ್ಪ ಶಕ್ತಿ ಬಂತು.ಎಲ್ಲರಿಗೂ ಬಿಸಿ ಅನ್ನ ಹಾಗು ದಾಲ್, ಅದರ ಜೊತೆಗೆ ಅದೆಂಥದೋ ಸೊಪ್ಪಿನ ಪಲ್ಯ ಊಟಕ್ಕೆ.

ಜ್ಞಾನಿ ಮತ್ತೆ ಕೆಲವರು ಇನ್ನೂ ಬಂದಿರಲಿಲ್ಲ, ನನಗೆ ಸ್ವಲ್ಪ ಯೋಚನೆಯಾಗಲು ಶುರುವಾಯ್ತು. ಒಂದು ಗಂಟೆಯ ನಂತರ ನಮ್ಮ ಗುಂಪಿನಲ್ಲಿದ್ದ ಒಬ್ಬ ವೈದ್ಯ ಡಾ.ಮಂಜುನಾಥ್ ಬಂದರು, ಅವರು ನಮಗೆ ಹೇಳಿದ್ದು - "ಜ್ಞಾನಿ ಮತ್ತು ಸಂದೀಪರಿಗೆ ಮೇಲೆ ಬರಲಾಗುತ್ತಿಲ್ಲ, ಇನ್ನೂ ಬಹಳ ದೂರದಲ್ಲಿದ್ದಾರೆ. ಜ್ಞಾನಿಗೆ ಮಂಡಿನೋವಾಗಿದೆ, ಎರಡು ಹೆಜ್ಜೆಗೆ ನಿಲ್ಲುತ್ತಾಯಿದ್ದಾನೆ. ಸಂದೀಪನಿಗೆ ತುಂಬಾ ಸುಸ್ತಾಗಿದೆ." ಆಗ ವಸುಮತಿ ಅವರ ಮಗಳೊಡನೆ (ಡೆಪ್ಯುಟಿ ಲೀಡರ್) ಮಾತಾಡಿ, ಖಾಜಿಗೆ ಅವರ ಚೀಲಗಳನ್ನು ಹೊತ್ತು ತರಲು ಹೇಳಿದರು. ನಂತರ ನನ್ನ ಕಡೆ ತಿರುಗಿ "ಎನು ಮಾಡುತ್ತೀಯಮ್ಮ ಈಗ ? ನಾಳೆ ಹಿಂದೆ ಹೋಗುತ್ತೀರ ?" ಅಂತ ಕೇಳಿದರು. ನನ್ನ ಹೃದಯವೇ ಹೊರಬಂತು. ’ಅಯ್ಯೊ ಗ್ರಹಚಾರವೆ, ಸಂಕಷ್ಟವನ್ನು ಹೇಗೆ ಬಗೆಹರಿಸಬಹುದು ?’ ಎಂದು ನನ್ನ ಮನಸ್ಸು ನನಗೆ ಎಲ್ಲಾಬಗೆಯ ಐಡಿಯ ಕೊಡಲು ಶುರುಮಾಡಿತು. ಇಲ್ಲೆಲ್ಲಾ ಎಂಥಾ ಸೌಲಭ್ಯವಿತ್ತೆಂದರೆ ಜ್ಞಾನಿ ಸುಲಭವಾಗಿ ನಿಭಾಯಿಸಿಕೊಳ್ಳಬಲ್ಲ, ಅಲ್ಲದೆ, ಅವನೇನು ಸಾಯುತ್ತಿಲ್ಲವಲ್ಲ, ನಾನು ಈ ಒಂದು ಅವಕಾಶಕ್ಕಾಗಿ ನನ್ನ ಅರ್ಧ ಜೀವನ ಪೂರ್ತೀ ಕಾದಿದ್ದನ್ನು ನೋಡಿರುವ ಜ್ಞಾನಿ ಬಹುಶಃ ಎಂದಿಗೂ ಆ ರೀತಿ ಮಾಡಲು ಬಿಡುವುದಿಲ್ಲ ! ಆದರೆ ಅದನ್ನೆಲ್ಲಾ ಹೇಳದೆ "ಅವರೆಲ್ಲಾ ಬರಲಿ, ಆನಂತರ ನೋಡೋಣ" ಎಂದೆ. ಅವರಿಬ್ಬರೂ ಇನ್ನೆರಡು ಗಂಟೆ ತಡವಾಗಿ ಬಂದು ತಲುಪಿದಾಗ ೪ ಘಂಟೆ. ಕೂರಲೂ ಆಗುದಷ್ಟು ಸುಸ್ತಾಗಿದ್ದರು. ಜ್ಞಾನಿ ಹೇಳಿದ, ’ಎಲ್ಲರೂ ಮುಂದೆ ಹೋದನಂತರ ಇಬ್ಬರೂ ಈಗೇನು ಮಾಡುವುದಪ್ಪಾ ಹೇಗೆ ಮುಂದೆ ಹೆಜ್ಜೆ ಹಾಕುವುದು ಎಂದು ಯೋಚಿಸುತ್ತಿರುವಾಗ, ಜ್ಞಾನಿ, ಇದು ತನ್ನ ಕಟ್ಟಕಡೆಯ ಟ್ರೆಕ್ ಆದರೂ ಸರಿ, ನಾನು ಮಾತ್ರ ಹಿಂದೆ ಹೋಗಲಾರೆ, ಬರಿ ಮನಶ್ಶಕ್ತಿಯಿಂದಲೇ ಹೇಗಾದರು ಮಾಡಿ ಮುಂದುವರಿಯುತ್ತೇನೆ, ಅಂದು ಕೊಂಡನಂತೆ. ನಂತರ ಅಲ್ಲಿ ಹೋಗುತ್ತಿದ್ದ ಯಾವ ಪೋರ್ಟರನ್ನು ಕೇಳಿದರೂ ’ನಮಗೆ ತುಂಬಾ ಬಾರ ಈಗಾಗಲೇ ಆಗಿದೆ, ನಿಮ್ಮ ಚೀಲ ತೆಗೆದು ಕೊಳ್ಳಲಾಗುವುದಿಲ್ಲ’ ಎಂದರಂತೆ. ನಂತರ ಒಬ್ಬನೆ ಒಬ್ಬ ಬಾಗಿಲು ತೆಗೆದುಕೊಂಡು ಹೋಗುತ್ತಿದ್ದವನು ೨೦೦ ಭಾರತೀಯ ರುಪಾಯಿಗಳಿಗೆ ಬರಲು ಒಪ್ಪಿಕೊಂಡನಂತೆ. ಆದರೂ ಸಂದೀಪ್ ಚೀಲ ಕೊಡಲು ಒಪ್ಪಲ್ಲಿಲ್ಲ. ತಾನೇ ಹೊತ್ತುಕೊಂಡು ನಡೆದು ಬರುವುದಾಗಿ ಹೇಳಿ (Not carrying the bag is against the spirit of trekking !) ನಂತರ ನಿಧಾನವಾಗಿ ಇಬ್ಬರೂ ಬಂದರಂತೆ. ಅಂದು ರಾತ್ರಿ ಮಲಗುವವರೆಗೂ, ಜ್ನ್ಯಾನಿ ತಾನು ಕೇವಲ ದೃಢವಾದ ನಿಲುವಿನಿಂದಲೇ ಮೇಲೆಬಂದುದ್ದಾಗಿಯೂ, ಇಲ್ಲದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಹೇಳುತ್ತಾ ಇದ್ದಾಗ, ಮುಂದೇನಪ್ಪಾ ಗತಿ ಕಾದಿದೆ ಎಂದು ಚಿಂತಿಸುವಂತಾಯಿತು. ನಾವು ಬೆಂಗಳೂರಿನಿಂದ ಹೊರಡುವ ಮೊದಲು, ವಸುಮತಿಯವರೊಡನೆ ಮಾತನಾಡುತ್ತಿರುವಾಗ ನಾನು ಅವರನ್ನು "ಈ ಹೈ ಆಲ್ಟಿಟ್ಯುಡ್ ಟ್ರೆಕ್ಕನ್ನು ಏನಕ್ಕೆ ಹೋಲಿಸಿ ಹೇಳಬಹುದು ? ಕುಮಾರಪರ್ವತದ ಆರೋಹಣಕ್ಕಾ?" ಎಂದು ಕೇಳಿದ್ದಕ್ಕೆ ಅವರು "ಇದು ಕುಮಾರಪರ್ವತದಕ್ಕಿಂತ ನೂರು ಪಟ್ಟು ಕಷ್ಟ, ನೀವು ಸುಮ್ಮನೆ ವ್ಯಾಯಾಮ ಮಾಡುತ್ತಾ, ನಿಮ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳುತ್ತಿರಿ, ತುದಿ ಮುಟ್ಟಿಸುವುದು ನನ್ನ ಕರ್ತವ್ಯ" ಎಂದಿದ್ದು ನೆನಪಿಗೆ ಬಂತು. ಇದು ನಮ್ಮ ಕಥೆ. ಬೆರೆಯವರ ಕಥೆ ಇನ್ನು ಏನೆನೋ, ಅವು ನಮಗೆ ನಿಧಾನವಾಗಿ ದಿನಕಳೆದಂತೆ ತಿಳಿಯಲು ಶುರುವಾಯಿತು. ನಾಳೆ ಹೈ ಆಲ್ಟಿಟ್ಯುಡ್ ಅಕ್ಲಿಮಟೈಸೇಶನ್ (acclimatization.). ಅಂದರೆ ಇದ್ದ ಎತ್ತರದ ಜಾಗದಿಂದ ಅಲ್ಲೆ ಸ್ವಲ್ಪ ಹತ್ತಿರದ ಇನ್ನೂ ಎತ್ತರದ ಜಾಗಕ್ಕೆ ಹೊಗಿ ಬರುವುದರಿಂದ ಹವೆ ಮತ್ತು ಎತ್ತರಕ್ಕೆ ದೇಹ ಒಗ್ಗಿಕೊಳ್ಳುವುದು.

2 comments:

Unknown said...

ಮೇಡಂ,
ಈಗ ನಿಮ್ಮ ಟ್ರೆಕ್ಕಿಂಗ್ ಪರಿಭಾಷೆ ಒಂದೊಂದಾಗಿ ಅರ್ಥವಾಗುತ್ತಿವೆ. ಹಾಗೂ ಇಷ್ಟು ಬೇಗ ಇನ್ನೊಮದು ಎಪಿಸೋಡ್ ಪೋಸ್ಟ್ ಮಾಡಿದ್ದಕ್ಕೆ ಧನ್ಯವಾದಗಳು. ಪೋಸ್ಟ್ ಮಾಡುವುದರಲ್ಲಿ ಬೇಕಾದರೆ ವೇಗವಿರಲಿ. ಆದರೆ ವಿವರಗಳನ್ನು ಕೊಡುವಾಗ ಸ್ವಲ್ಪ ನಿಧಾನವಾಗಿಯೇ ವಿವರಿಸಿ. ಅಮೇರಿಕನ್ ದಂಪತಿಗಳಲ್ಲಿ ಹೆಂಡತಿ ಎರೆಡೆರಡು ಹೆಜ್ಜೆಗೆ ವಾಂತಿ ಮಾಡಿಕೊಳ್ಳುತ್ತಿದ್ದಳು ಮೊದಲಾದ ವಿವರಗಳನ್ನು ಕೊಡುವಾಗ ತೇಜಸ್ವಿ ನೆನಪಾದರು. ತೇಜಸ್ವಿಯವರನ್ನು ಮರೆಯುವದಂತೂ ಸಾಧ್ಯವಿಲ್ಲದ ಮಾತು. ಶ್ರೀಮತಿ ರಾಜೇಶ್ವರಿ ಮತ್ತು ನಿಮ್ಮ ಬರಹಗಳನ್ನು ಓದುವಾಗ ನಮಗರಿವಿಲ್ಲದೇ ತೇಜಸ್ವಿಯವರ ಬರಹದೊಂದಿಗೆ ಹೋಲಿಕೆ ಶುರುಮಾಡಿಬಿಟ್ಟಿರುತ್ತೇವೆ. ಕ್ಷಮಿಸಿ. ಅಷ್ಟರಮಟ್ಟಿಗೆ ತೇಜಸ್ವಿ ನನ್ನನ್ನಾವರಿಸಿದಾರೆ.
ಇಲ್ಲಿ ನಾನು ಬಳಸಿಕೊಂಡಿರುವುದು ನಿರುತ್ತರದ ಕೆರೆಯಲ್ಲಿದ್ದ ಪಕ್ಷಿಯದು. ಮೊನ್ನೆ ಮಂಗಳವಾರ ನಾನೇ ತೆಗೆದಿದ್ದು. ತೇಜಸ್ವಿಯವರಿಗೆ ಪೋಸು ಕೊಟ್ಟಿದ್ದ ಪಕ್ಷಿ ಇದೇ ಇರಬಹುದೇ ಎಂಬ ನೆನಪಿನಲ್ಲೇ ಕ್ಲಿಕ್ಕಿಸಿದ್ದೆ.

ಚಂದ್ರಕಾಂತ ಎಸ್ said...

ಈಶಾನ್ಯೆ
ನಿಮ್ಮ ಬರವಣಿಗೆ ಇತ್ತೀಚೆಗೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ.
ನಿಮ್ಮ ಈ ಲೇಖನ ಓದುತ್ತಿದ್ದಂತೆ ತೇಜಸ್ವಿ ನೆನಪಿಗೆ ಬಂದರು.( ನಾನೀಗ ನಿಮ್ಮನ್ನು ತೇಜಸ್ವಿಯವರನ್ನು ಪಕ್ಕಕ್ಕಿಟ್ಟೇ ಓದುತ್ತೇನೆ ) ಅವರ ಮಿಲೆನಿಯಮ್ ಸರಣಿಯಲ್ಲಿ ಹಿಲರಿಯ ಬಗ್ಗೆ ಬರೆದಿರುವ ಲೇಖನದಲ್ಲಿ ಸ್ವಲ್ಪ ದೂರ ನಡೆದು ಕ್ಯಾಂಪಿಗೆ ಹಿಂತಿರುಗುವುದರ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಆಶ್ಚರ್ಯವೆಂದರೆ ನೀವೂ ಸಹ ಸರಾಗವಾಗಿ ಈ ಎಲ್ಲಾ ವಿವರಗಳನ್ನೂ ವರ್ಣಿಸುತ್ತಿರುವಿರಿ.
ಹಿಲರಿ ಸಸ್ಪೆನ್ಶನ್ ಬ್ರಿಡ್ಜ್ ಚಿತ್ರ zoomನಲ್ಲಿ ನೋಡಿದಾಗ ಅದರ ತುಂಬಾ ಹಾರಾಡುವ ಬಟ್ಟೆ ತುಂಡುಗಳು, ಕಸ, ಎಲ್ಲಾ ಕಾಣಿಸಿತು. ಆ ಸ್ಥಳವನ್ನು ಅಷ್ಟೊಂದು ಕೊಳಕು ಮಾಡಿದ್ದಾರೆಯೇ ?