Sunday, November 23, 2008

ಮೂರನೆಯ ದಿನ - ಫಕ್ದಿಂಗ್ ವರೆಗೆ

ಮೂರನೆಯ ದಿನ (ಮೇ , ೨೦೦೮)
ಕಟ್ಮಂಡು(1000 ಮೀ/3280 ಅಡಿ) - ಲುಕ್ಲ (2800 ಮೀ / 9184 ಅಡಿ) - ಫಕ್ದಿಂಗ್ (2652 ಮೀ / 8698 ಅಡಿ)

ನಮ್ಮ ಲೀಡರ್ ವಸುಮತಿ. ಅವರ ಬಗ್ಗೆ ಬರೆಯದೆ ಇರುವುದು ಅನ್ಯಾಯ. ನಮ್ಮ ಗುಂಪಿನಲ್ಲಿ ಅವರ ಮಗಳು ಸ್ಮಿತ, ಮಗ ಶರತ್ ಮತ್ತು ಅವರ ಸೋದರನ ಮಗಳು ತನ್ವಿ, ಮೂರೂ ಜನರಿದ್ದರು. ಎಲ್ಲರೂ ಮಜಾ ಮಾಡುವವರು ಹಾಗೂ ಒಳ್ಳೆಯ ಜನರು. ಆದರೆ ವಸುಮತಿಯವರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಇದರಿಂದಾಗಿಯೇ ಅವರಿಗೆ ತುಂಬ ಹಗೆಗಳು. ಸೈನ್ಯದಲ್ಲಿದ್ದ ಅವರ ಗಂಡ ಹೇಳುವಂತೆ ’ನನಗೇ ಒಂದೊಂದು ಸಲ, ನಾನಲ್ಲ ಇವಳೇ ಸೈನ್ಯದಲ್ಲಿ ಇದ್ದಿದ್ದು ಅನ್ನಿಸುತ್ತದೆ’ ಎಂಬಂತಹ ಶಿಸ್ತಿನ ಸಿಪಾಯಿ. ಇದರಿಂದ ಬಹಳ ಸಲ ಗುಂಪಿನಲ್ಲಿ ಕಸಿವಿಸಿ ನಡೆಯುತ್ತಿತ್ತು. ಆದರೆ, ಅಂತಹದವರೊಬ್ಬರಿದ್ದರೆ, ಈ ರೀತಿ ಒಂದು ಟ್ರೆಕ್ ಸುಲಭಸಾಧ್ಯ. ವಸುಮತಿಯವರು ನಮಗೆ ಸಮಯಪಾಲನೆ ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತಿದ್ದರು. ಯಾರಾದರೂ ತಡ ಮಾಡಿದರೆ ನಾನು ಅವರನ್ನು ಹಿಂತಿರುಗಿ ಕಳುಹಿಸುತ್ತೇನೆ ಎಂದೇ ಹೇಳುತ್ತಿದ್ದರು. ಆವರು ಹೀಗೆ ಹೇಳಿದಾಗಲೆಲ್ಲಾ, ’ಅದು ನನಗಲ್ಲ’ ಎಂದೇ ಎಣಿಸುತ್ತಿದ್ದೆ.

ಕೆಲವು ಸಲ, ನಾವು ಅಂದು ಕೋಳ್ಳುವುದೇ ಒಂದು ನಡೆಯುವುದೇ ಒಂದು. ನಾನು ಯಾವುದೇಕಾರಣಕ್ಕೂ ಗುಂಪಿನಲ್ಲಿ ಪ್ರಸಿದ್ದಳಾಗಬಾರದೆಂದು ನಿರ್ಧರಿಸಿದ್ದರೆ, ಅಲ್ಲಿ ಮೊದಲ ದಿನವೇ ಖುಖ್ಯಾತಿಗೊಳಗಾದೆವು. ನಾವೆಲ್ಲಾ ನಮ್ಮ ಹೆಚ್ಚಾದ ಸಾಮಾನುಗಳನ್ನು ಹೋಟಲ್ ಲಿಲ್ಲಿಯಲ್ಲೇ ಬಿಟ್ಟು ಬರಬಹುದೆಂದು ವಸುಮತಿಯವರು ಹೇಳಿದ್ದರು. ಜ್ಞಾನಿ ಯಾವುದೋ ಕಾರಣಕ್ಕೆ ಹಿಂದಿನ ರಾತ್ರೆ ಬ್ಯಾಗ್ ತುಂಬಿಕೊಳ್ಳದೆ ಬೆಳಿಗ್ಗೆ ತುಂಬಿಕೊಳ್ಳಲು ಶುರುಮಾಡಿದ. ನಮ್ಮ ಲಿಲ್ಲಿಯವನು ಬಿಸಿ ನೀರು ಬೆಳಿಗ್ಗೆ ಬರುತ್ತದೆ ಎಂದು ಬೇರೆ ಹೇಳಿದ್ದ. ನಾವು ಇನ್ನೂ ನಾಗರೀಕ ಜಗತ್ತಿನಲ್ಲೇ ಇದ್ದುದ್ದರಿಂದ, ಜ್ಞಾನಿ ಬಿಸಿನೀರು ಬರುತ್ತೆ ಅಂತ ಹೇಳಿದಮೇಲೆ ಬರಲೇಬೇಕು, ಮಾಡೇ ಹೋಗುವ ಎಂದು ತಡೆದ. ಅಲ್ಲದೆ ನಮ್ಮ ಹತ್ತಿರ ಗಡಿಯಾರ ಬೇರೆ ಇರಲ್ಲಿಲ್ಲ. ಹಾಗಾಗಿ ಬೇರೆಯವರು ನಮ್ಮನ್ನು ಕರೆದು ಹೋದಮೇಲೆ ’ಕೇವಲ ಹತ್ತು ನಿಮಿಷವಾಗಿರಬಹುದಷ್ಟೆ, ಅವರು ಕಾಯುತ್ತಾರೆ’ ಅಂತ ಅವನು ತಯ್ಯಾರಾಗುತ್ತಲೇ ಇದ್ದ. ನಮಗೆ ಹಿಮಾಲಯದ ಹವಾಮಾನದ ರೀತಿ ನೀತಿಯಾಗಲಿ ಅದನ್ನನುಸರಿಸಿ ಹಾರುವ ವಿಮಾನದ ವೇಳಾಪಟ್ಟಿಯ ಅರಿವಾಗಲೀ ಇರಲ್ಲಿಲ್ಲ. ಹಾಗಾಗಿ ನಾವು ಎಲ್ಲಾ ಮುಗಿಸಿ ಬಸ್ಸಿಗೆ ಹೋದಾಗ ೧೫ ರಿಂದ ೨೦ ನಿಮಿಷ ತಡವಾಗಿರಬಹುದು. ಅಶೋಕನನ್ನು ಬಿಟ್ಟು, ಎಲ್ಲರೂ ಬಸ್ಸು ಹತ್ತಿ ಕುಳಿತಾಗಿತ್ತು. ಆಗಲೇ ಸ್ಕ್ವಡ್ರನ್ ಲೀಡರ್ ವಸುಮತಿಯವರು ಹಾರಾಡುತ್ತಿದ್ದರು. ಮೊದಲೇ ನಮ್ಮ ಬಗ್ಗೆ ಕೂಗಾಡಿ ತಾಲೀಮು ನಡೆಸಿದ್ದರು. ನಾವು ಕಂಡ ಕ್ಷಣ ಅವರ ರಂಗಾಯಣ ಶುರುವಾಯಿತು.

ವಿಮಾನ ಮತ್ತು ನಮ್ಮ ಗುಂಪು

"ಕೋಣೆಯಲ್ಲಿ ಏನು ಮಾಡುತ್ತಾ ಇದ್ದಿರಿ ? ಬೇಗ ಮಲಗಿ ಬೇಗ ಏಳಬೇಕು. ನಿಮ್ಮಿಂದಾಗಿ ಲುಕ್ಲಾಗೆ ಹೋಗುವ ವಿಮಾನ ತಪ್ಪಿದರೆ ಸುಮ್ಮನೆ ಬಿಡುವುದಿಲ್ಲ" ಎಂದರು. "We are very sorry for this" ಅಂತ ಜ್ಞಾನಿ ಉಸುರಿದ. ನಾನು ಏನೂ ಹೇಳದೆ ಅವರನ್ನೇ ನೋಡುತ್ತಿದ್ದೆ. ನನ್ನದೇನೂ ತಪ್ಪಿರಲಿಲ್ಲವಲ್ಲ, ತಡ ಮಾಡಿದ್ದು ಜ್ಞಾನಿ ತಾನೆ, ಅಂತ ನಾನು. ಇನ್ನೊಂದು ಏನು ಅರ್ಥವಾಗಲಿಲ್ಲವೆಂದರೆ, ಅಷ್ಟು ತಡವಾಗುತ್ತಿದ್ದರೆ ಯಾರೂ ಯಾಕೆ ಬಂದು ಕರೆಯಲಿಲ್ಲ? ಪ್ರಿಯ ಹೋಗಿ ಕರೆಯುತ್ತೇನೆ ಎಂದು ಹೇಳಿದಾಗ, ”ಆಮಲೆ ನಿನ್ನನ್ನು ಕರೆಯಲು ಜನ ಕಳಿಸಬೇಕಷ್ಟೆ, ಹಾಗಾಗಿ ಇಲ್ಲೇ ಕುಳಿತಿರು. ಅವರು ಬರಲಿ, ಸರಿಯಾಗಿ ಶಾಸ್ತಿ ಮಾಡುತ್ತೇನೆ” ಅಂತ ಹೇಳಿದರಂತೆ. ನಾನು ಏನೂ ಹೇಳದೆ ಇದ್ದುದ್ದರಿಂದ ಅವರ ಸಿಟ್ಟು ಇನ್ನೂ ಏರಿತು. "ನೋಡು ಹೇಗೆ ಸುಮ್ಮನೆ regret ಇಲ್ಲದೆ ಕುಳಿತಿದ್ದೀಯ. You should be crying when i'm telling you all this." ಅಂದರು. ಅದಕ್ಕೂ ಸುಮ್ಮನೆ ಇದ್ದೆ. ಇದರ ಮಧ್ಯೆ ತಡವಾಗಿ ಬಂದ ಅಶೋಕನಿಗೆ ಯಾವ ಬಯ್ಗುಳವೂ ಬೀಳಲಿಲ್ಲ. ನಮಗೆ "ಕೋಣೆಯಲ್ಲೇನು ಜಗಳ ಕಾಯುತ್ತಾ ಇದ್ದಿರ ?’ ಅಂತ ಬಯ್ದಾಗ ಹಿಂದೆ ಕೂತಿದ್ದ ಜನ ಕಿಸಿ ಕಿಸಿ ಅಂತ ನಗುತ್ತಾ ಇದ್ದರು. "ಹ್ಞು ಹ್ಞು ನಗ್ರಿ ಮಕ್ಳಾ.. ನಿಮ್ಮ ಸರದಿಯೂ ಬರುತ್ತದೆ" ಎಂದುಕೊಂಡೆ. ಆದರೆ, ಇನ್ನು ಮುಂದಕ್ಕೆ ನನ್ನಿಂದ ಮಾತ್ರ ಯಾವುದೇ ರೀತಿಯಿಂದ ತಡವಾಗಬಾರದೆಂದು ಯೋಚಿಸಿದೆ, ಹಾಗೆ ಮಾಡಿದೆ ಕೂಡ. ನಂತರದ ದಿನಗಳಲ್ಲಿ ಅಶೋಕ್ ಮತ್ತು ನರೇಶ್ ಬಹಳ ಸಲ ತಡಮಾಡಿದರು. ಆದರೆ ಮೇಡಮ್ ಕೂಗಾಡಿ ಕೂಗಾಡಿ ಸಾಕಾಗಿದ್ದುದ್ದರಿಂದ, ಸಿಟ್ಟು ಈ ರೀತಿ ಮೇಲೇರುತ್ತಲಿರಲಿಲ್ಲ. ಇಂದು ಮೊದಲ ದಿನವಾದ್ದರಿಂದ, ನಮ್ಮನ್ನು ಗುರಿಯಾಗಿ ಇಟ್ಟುಕೊಂಡು, ಬೇರೆಯವರಿಗೆ- ವಸುಮತಿಯವರೊಡನೆ, ತಡಮಾಡಿ ಆಟವಾಡಿದರೆ ಈ ರೀತಿ ಪರಿತಪಿಸಬೇಕಾಗುತ್ತದೆಂದು ಪಾಠ ಕಲಿಸಲು ಇಷ್ಟೆಲ್ಲಾಮಾಡಿದರಂತೆ.

ಕಟ್ಮಂಡು ಇಂದ ಬುದ್ಧ ಏರ್ ಎಂಬ ವಿಮಾನದಲ್ಲಿ ಹೊರಟೆವು. ನಾವು ೧೩ ಜನ ಒಂದು ವಿಮಾನದಲ್ಲಿ ಹಾಗು ಉಳಿದ ೮ ಜನ ಇನ್ನೊಂದು ವಿಮಾನದಲ್ಲಿ ಕುಳಿತೆವು. ನಾವು ಯಾವುದನ್ನೂ ಮಿಸ್ ಮಾಡಬಾರದೆಂದು, ವಿಮಾನದ ಸಣ್ಣ ಕಿಟಕಿಗೆ ಮುಖ

ಹೊಳೆಯುವ ಹಿಮಾವೃತ ಶಿಖರಗಳು
ಅಂಟಿಸಿಕೊಂಡು, ಎವರೆಸ್ಟ್ ಯಾವ ದಿಕ್ಕಿನಲ್ಲಿ ಬರುತ್ತದೆಂದು ಕೇಳಿಕೊಂಡು ಆ ಕಡೆ ನೋಡುತ್ತಾ ಕುಳಿತಿದ್ದೆವು. ದಾರಿಯಲ್ಲಿ,”ಇದ್ಯಾಕೆ ಮೋಡ ಈ ರೀತಿ ಹೊಳೆಯುತ್ತಿದೆ’ ಅಂತ ಅಂದುಕೊಳ್ಳುತ್ತಾ ಇದ್ದೆ, ಆದರೆ ಅದು ಹಿಮಾವೃತ ಪರ್ವತ ಅಂತ ತಿಳಿದಾಗ, ಅಂತೂ ಇಂತಹದೊಂದು ಕಡೆ ಬಂದೆನಲ್ಲಾ ಅಂತ ಉಸಿರು ಬಿಟ್ಟೆ. ನಮಗೆನೂ ಎವರೆಸ್ಟ್ ಕಾಣಸಿಗಲಿಲ್ಲ.

ಲುಕ್ಲಾ ಒಂದು ತುಂಬ ಸಣ್ಣೂರು. ಅಲ್ಲಿ ಬೆಟ್ಟದ ತುದಿಯಲ್ಲಿ ಒಂದು ಸಣ್ಣ ವಿಮಾನ ನಿಲ್ದಾಣವಿದೆ. ಪ್ರಪಂಚದಲ್ಲೇ ಅತೀ ಎತ್ತರದಲ್ಲಿರುವ ವಿಮಾನ ನಿಲ್ದಾಣ ಇದು. ನಾಲ್ಕು ಚಿಕ್ಕ ವಿಮಾನಗಳು ಇಲ್ಲಿ ನಿಲ್ಲುವ ಅನುಕೂಲ ಇದೆ.

ಲುಕ್ಲ ವಿಮಾನ ನಿಲ್ದಾಣ
ಇಲ್ಲಿ ಬೆಟ್ಟದ ಅಂಚಿನವರೆಗೂ ಓಡುವ ಬಹಳ ಕಿರಿದಾದ (೨೦ ಮೀ ಅಗಲ ಇದ್ದು, ಅಂಚಿನಲ್ಲಿ ೭೦೦ ಮೀ ವರೆಗೆ ಬೆಟ್ಟದ ಇಳಿಜಾರಿರುವ) ರನ್ವೆ ಇದೆ. ಹೋಗುವವರು ಮತ್ತು ಬರುವವರು ಎಷ್ಟು ಜನ ಇದ್ದಾರೆ ಅಂತ ನೋಡಿಕೊಂಡು, ಬೆಳಿಗ್ಗೆ ಮಾತ್ರ ವಿಮಾನಗಳನ್ನು ಹಾರಿಸುತ್ತಾರೆ. ಅಲ್ಲಿ ಪೈಲೆಟ್ ಕಿಟಕಿಯಿಂದ ಹೊರ ನೋಡಿಕೊಂಡೆ ವಿಮಾನ ಹಾರಿಸಬೇಕು, ಬೇರೆ ಯಂತ್ರಗಳು ಪರ್ವತಗಳ ನಡುವೆ ಕೆಲಸ ಮಾಡುವುದಿಲ್ಲವಂತೆ. ಹೀಗಾಗಿ ಸ್ವಲ್ಪ ಮೋಡ ಮುಚ್ಚಿದರೂ ವಿಮಾನ ಹಾರಾಟ ರದ್ದು ಮಾಡುತ್ತಾರೆ. ನಾವು ಲುಕ್ಲಾ ತಲುಪಿದಾಗ ಅಲ್ಲಿ, ಹಿಂತಿರುಗಿ ಹೋಗುವ ಕೆಲವು ಪರ್ವತಾರೋಹಿಗಳನ್ನು ಬಿಟ್ಟರೆ ಬರೀ ಪೋರ್ಟರುಗಳೇ ಎಲ್ಲೆಲ್ಲೂ. ಅಲ್ಲಿ ನಾವು ನಮ್ಮ ಕೆಲವು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಅಲ್ಲಿಂದ ’ಫಕ್ದಿಂಗ್’ ಎಂಬ ಜಾಗಕ್ಕೆ ನಡೆಯಲು ಶುರುಮಾಡಿದೆವು. ೩ ಘಂಟೆ ಕಾಲ ನಡೆದೆವು .ಅದು ಬಹಳ ಸುಲಭವಾದ ಇಳಿಜಾರು ದಾರಿ. ಎರಡು ತೂಗು ಸೇತುವೆಗಳನ್ನು ದಾಟಿದೆವು. ಮೊದಲನೆಯದನ್ನು ನೋಡಿದಾಗ, ಎಲ್ಲರೂ ಫೊಟೊ ತೆಗೆದದ್ದೇ ತೆಗೆದದ್ದು. ನಂತರದ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಇಂತಹ ತೂಗು ಸೇತುವೆಗಳನ್ನು ದಾಟಿದೆವು. ಅವು ಎಷ್ಟು ಸುಂದರವಾಗಿದ್ದುವೆಂದರೆ ಅವುಗಳ ಫೋಟೊಗಳನ್ನು ತೆಗೆಯುವುದು ಮಾತ್ರಾ ಕಡಿಮೆಯಾಗಲೇ ಇಲ್ಲ.

ಮೊದಲ ತೂಗು ಸೇತುವೆ
ನಮ್ಮ ಟ್ರೆಕ್ ಶುರುವಾದಾಗ ವಸುಮತಿಯವರು ಗುಂಪಿನಲ್ಲಿ ತುಂಬಾ ಶಿಸ್ತನ್ನು ಕಾಪಾಡಿದ್ದರು. ನಮ್ಮ ಸಾಲಿನಲ್ಲಿ, ಮುಂದೆ ವಸುಮತಿಯವರು, ಅವರ ಹಿಂದೆ ತುಂಬಾ ನಿಧಾನವಾಗಿ ಬರುವವರು, ನಂತರ ಸ್ವಲ್ಪ ಅಭ್ಯಾಸ ಇರುವವರು, ಕೊನೆಯಲ್ಲಿ ನಿಪುಣರು. ಬಹುಪಾಲು ಹುಡುಗಿಯರೆಲ್ಲ ಸಾಲಿನ ಮುಂದೇ ಇದ್ದರು. ನಂತರ ಜ್ಞಾನಿ, ಲಖನ್, ಸಂದೀಪ್ ಮತ್ತಿತರು. ಕೊನೆಯಲ್ಲಿ ಉಳಿದೆಲ್ಲ ತಾಕತ್ತಿದ್ದ ಹುಡುಗರು ಮತ್ತು ಸ್ಮಿತಾ. ನಾವು ಕೆಲವರು ಒಂದೊಂದು ಸ್ಕಿ ಕೋಲುಗಳನ್ನು ಹಿಡಿತಕ್ಕಾಗಿ ಹಿಡಿದು ನಡೆಯುತ್ತಿದ್ದೆವು. ಇವುಗಳು ನಮಗೆ ಕೊನೆಯವರೆಗೂ ಸಾಹಾಯಕ್ಕೆ ಬಂದವು. ನಮ್ಮ ದಾರಿ ದೂದ್ ಕೋಸಿ ನದಿ ಪಕ್ಕದಲ್ಲೇ ಹೋಗುತ್ತಿತ್ತು. ಇದು ನೋಡಲು ಬಿಳಿ ಬಿಳಿಯಾಗಿ ನೊರೆನೊರೆಯಾಗಿದ್ದ ಒಂದು ದೊಡ್ಡ ಹಳ್ಳ, ಕೆಲವು ಕಡೆ ಸಣ್ಣ ನದಿ ಎಂದು ಹೇಳಬಹುದು. ಕೊನೆಯವರೆಗೂ ನಾವು ದೂದ್ ಕೋಸಿಯೊಡನೆಯೇ ನಡೆಯುತ್ತಿದ್ದೆವು. ಅದು ಪರ್ವತಗಳ ಮಧ್ಯೆ ಸುತ್ತಿ, ತಿರುಗಿ, ಬಳಸಿ ಮುಂದೆ ಹೋಗುವಂತೆ ನಾವೂ ಹೋಗುತ್ತಿದ್ದೆವು.

ಫಕ್ದಿಂಗ್ (2652 ಮೀ/8698 ಅಡಿ) ತಲುಪಿದಾಗ ೨:೦೦ ಗಂಟೆ. ನಾವು ಊಟ ಮಾಡಿದಾಗ ೩:೦೦ ಗಂಟೆ. ದಿನವೂ ನಾವು ಇದೇ ರೀತಿಯಾಗಿ ೩:೦೦ ಗಂಟೆಯೊಳಗೆ ನಮ್ಮ ಟ್ರೆಕ್ ಮುಗಿಸುತ್ತಿದ್ದೆವು. ಯಾಕೆಂದರೆ ಹಿಮಾಲಯದಲ್ಲಿ ಮಧ್ಯಾನದಷ್ಟೊತ್ತಿಗೆ ವಾತಾವರಣ ಹದಗೆಡುತ್ತದೆ. ಮಂಜು ಕವಿಯುತ್ತದೆ. ನಾವು ತೊಟ್ಟ ಬಟ್ಟೆಗಳೆಲ್ಲವೂ ಬೆವರು ಹಾಗೂ ಥಂಡಿಯಿಂದ ಒದ್ದೆಯಾಗಿರುತ್ತಿದ್ದವು. ಟ್ರೆಕ್ ಮುಗಿದ ತಕ್ಷಣ ನಾವು ಮಮ್ಮೆಲ್ಲ ಬಟ್ಟೆಗಳನ್ನೂ ಬದಲಾಯಿಸಿಕೊಳ್ಳುತ್ತಿದ್ದೆವು. ಹೀಗೆ ಮಾಡದಿದ್ದರೆ ಮುಂದೆ ಕಾಲು, ಮಂಡಿ ಹಾಗೂ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಎಂದು ವಸುಮತಿಯವರು ಹೇಳುತ್ತಿದ್ದರು. ನಂತರ ನಾವೆಲ್ಲಾ ಇಸ್ಪೀಟ್ ಮತ್ತಿತರ ಕುಳಿತು ಆಡುವ ಆಟಗಳಲ್ಲಿ ತೊಡಗಿಕೊಂಡೆವು. ಕೆಲವರು ಹತ್ತಿರದಲ್ಲಿದ್ದ ಕೋಸಿ ನದಿಗೆ ಕಟ್ಟಿದ್ದ ಸೇತುವೆಯ ಹತ್ತಿರ ಹೋಗಿ ಬಂದರು. "ಟ್ರೆಕ್ ಆದ ಮೇಲೆ ಸುಸ್ತಾಗಿದೆ ಅಂತ ಹಾಸಿಗೆ ಕಂಡ ತಕ್ಷಣ ಬಿದ್ದುಕೋಬೇಡಿ. ನಿದ್ದೆಯನ್ನು ಮಾಡದೆ ಹೊರಗಿನ ಹವಾಗೆ ಮೈ, ಕೈ, ಕಿವಿ ಒಡ್ಡುವುದರಿಂದ ’ಆಲ್ಟಿಟ್ಯುಡ್ ಸಿಕ್ನೆಸ್’ ಕಡೆಮೆ ಮಾಡಬಹುದು" ಎಂದು ವಸುಮತಿಯವರು ನಮಗೆ ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ ನಮಗೆ ಎಷ್ಟೇ ಸಾಕಾಗಿದ್ದರೂ ಮಲಗುತ್ತಾ ಇದ್ದದು ರಾತ್ರಿ ೮ ರಿಂದ ೯ರ ಒಳಗೆ. ಮಲಗುವ ಮೊದಲು, ಬೆಳಿಗ್ಗೆ ಏಳುವುದು, ತಿಂಡಿ ತಿನ್ನುವುದು ಹಾಗು ಹೋರಡುವುದನ್ನು ನಿರ್ಧರಿಸಲಾಗುತ್ತಿತ್ತು. ೫-೬-೭ ಅಥವಾ ೬-೭-೮. ಇದಕ್ಕಿಂತ ತಡವಾಗಿ ಎಂದೂ ಹೊರಟಿದ್ದಿಲ್ಲ. ಮುಂದಿನ ನಮ್ಮ ಪಯಣ ನಾಮ್ಚೆ ಬಜಾರ್ ಕಡೆಗೆ.

Sunday, November 16, 2008

ಮೊದಲೆರಡು ದಿನಗಳು

ಮೊದಲೆರಡು ದಿನಗಳು (ಮೇ ೩, ೨೦೦೮, ಮೇ ೪, ೨೦೦೮)
ಬೆಂಗಳೂರು - ಕಟ್ಮಂಡು(1000ಮೀ/3280 ಅಡಿ)

ಅಂತೂ ಮೇ ೩ ಬಂದೇ ಬಿಟ್ಟಿತು.ನಮಗೆ ಕೆಏಮ್ಎ ಕೊಟ್ಟ ಚಾರಣಿಗರ ಚೀಲದಲ್ಲಿ ಎಲ್ಲಾ ತುರುಕಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟೇ ಬಿಟ್ಟೆವು. ನಾವು ಡೆಲ್ಲಿ ತಲುಪಿದಾಗ ೧೦ ಗಂಟೆ, ಉರಿಬಿಸಿಲು. ಅಲ್ಲಿಂದ ನೇರವಾಗಿ ಅಂತರ ರಾಷ್ರ್ಟೀಯ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನ ಹತ್ತಿದೆವು. ೨:೪೫ ಗಂಟೆಯಲ್ಲಿ ನಾವು ಕಟ್ಮಂಡುವಿನಲ್ಲಿ ಇದ್ದೆವು. ಅಲ್ಲಿ ಹಿಮಾಲಯನ್ ಅಡ್ವೆನ್ಚರ್ (himalayan adventure company) ಕಂಪನಿಯವರು ನಮಗಾಗಿ ಬಸ್ಸು ತಂದು ಕಾಯುತ್ತಾ ಇದ್ದರು. ಅಲ್ಲಿಂದ ನೇರವಾಗಿ ನಾವು ತಮೇಲ್ ಎಂಬ ಜಾಗಕ್ಕೆ ಹೋದೆವು. ಆಲ್ಲಿ ’ಜೆಡ್ ಸ್ಟ್ರೀಟ್’ ನಲ್ಲಿನ ನಮ್ಮ ಹೋಟೆಲ್ ’ಲಿಲ್ಲಿ’ ತಲುಪಿದೆವು. ತಮೇಲ್ ನಲ್ಲಿ ನಿಮಗೆ ಎಲ್ಲೆಲ್ಲೂ ಪರ್ವತಾರೋಹಿಗಳು, ಚಾರಣ ಮತ್ತು ಪರ್ವತಾರೋಹಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ನೆನಪಿನ ಕಾಣಿಕೆಗಳನ್ನು ಮಾರುವ ಅಂಗಡಿಗಳು ಹಾಗೂ ಲೈವ್ ಮ್ಯುಜಿಕ್ (live music) ಬಾರ್ ಗಳು ಮಾತ್ರಾ ಕಾಣಸಿಗುತ್ತವೆ. ನಾವು ಅಲ್ಲಿಂದ ಲುಕ್ಲ ಎಂಬ ಜಾಗಕ್ಕೆ ಒಂದು ದಿನ ಬಿಟ್ಟು ಅಂದರೆ, ಮೇ ೫ ರಂದು ಹೋಗುವವರಿದ್ದೆವು. ಹಾಗಾಗಿ ಎಲ್ಲರೂ ತಾವು ಏನೇನು ವಸ್ತುಗಳನ್ನು ಮರೆತಿದ್ದರೋ, ತಂದಿರಲ್ಲಿಲ್ಲವೋ ಅವುಗಳನ್ನು ಕೊಳ್ಳುವುದರಲ್ಲಿ ಅಥವಾ ಪ್ರವಾಸ ಮುಗಿದ ನಂತರ ಹಿಂತಿರುಗಿ ಹೋಗುವಾಗ ಎನೇನು ಉಡುಗೊರೆಗಳನ್ನು ಕೊಳ್ಳಬಹುದೆಂದು ನೋಡಿಕೊಳ್ಳುವುದರಲ್ಲಿ ಮತ್ತು ಚೌಕಾಸಿ ಮಾಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ರೂಢಿ ಮಾಡಿಕೊಳ್ಳುವುದರಲ್ಲಿ ಸಮಯ ಕಳೆದೆವು. ಮರುದಿನ ಎಲ್ಲರ ಬೇಡಿಕೆಯಂತೆ ನಾವು ಬಸ್ಸಿನಲ್ಲಿ ಪಶುಪತಿನಾಥ ದೇವಸ್ಥಾನವನ್ನು ನೋಡಲು ಹೋದೆವು. ಅಲ್ಲಿಯ ಶವ ಸುಡುವ ದೃಶ್ಯ ಹಾಗು ಅಲ್ಲಿಯ ಪೂಜಾರಿಗಳು ಜನರಿಂದ ಭಕ್ತಿಯ ನೆವದಲ್ಲಿ ದುಡ್ಡು ಹೆರೆಯುವ ಕೌಶಲ್ಯ ನೋಡಿ, ಸಾಕಪ್ಪಾ ಇದೆಲ್ಲಾ ನಾವು ಎಂದು ನಮ್ಮ ಟ್ರೆಕ್ ಶುರುಮಾಡುತ್ತೇವೋ ಅನ್ನಿಸಲು ಶುರುವಾಯಿತು. ಬಹುಷಃ ಇಡೀ ಕಟ್ಮಂಡುವಿನಲ್ಲಿ ಜಾಸ್ತಿ ಇರುವುದು ಋಷಿಗಳು ಮಾತ್ರ. ನಾವು ’ಅಮರ ಚಿತ್ರ ಕಥೆ’ ಗಳಲ್ಲಿ ನೋಡಿರುವಂತಹ ಕಾವೀಧಾರಿಗಳು. ಅವರಿಗೆ ದುಡ್ಡು ಕೊಟ್ಟರೆ ಫೊಟೊ ತೆಗೆಯಲು ಅವಕಾಶ ಕೊಡುತ್ತಾರೆ.

ಕ್ಯಾಮರ ಕಂಡಾಕ್ಷಣ

ಹಣ ಕಂಡಾಕ್ಷಣ

ಅಲ್ಲಿಯ ಸಜೀವ ದೇವತೆಗಳನ್ನೂ (living godess) ನೋಡಲು ಹೋದೆವು ಆದರೆ ಅವರ ಮನೆಯನ್ನು ಮಾತ್ರ ನೋಡಲು ಸಾಧ್ಯವಿದೆ. ಆಲ್ಲಿಯ ರಾಜನಿಗೆ ಮಾತ್ರ ಅವರನ್ನು ನೋಡಲು ಮತ್ತು ಮಾತಾಡಿಸಲು ಅನುಮತಿ ಇದೆ. ಆದರೆ ಬಹುಷಃ ದುಡ್ಡು ಕೊಟ್ಟರೆ ಯಾರುಬೇಕಾದರೂ ನೋಡಬಹುದೇನೋ. ನಾವು ಸ್ವಯಂಭುನಾಥ ಸ್ತೂಪವನ್ನೂ ನೋಡಿದೆವು. ಈದ್ದಿದ್ದರಲ್ಲಿ ಇಲ್ಲಿ ಸ್ವಲ್ಪ ಶಾಂತ ವಾತಾವರಣ ಇತ್ತು. ಆಗ ಇನ್ನೂ ಜ್ನಾನೇಂದ್ರ ರಾಜ ಇದ್ದ ದಿನಗಳು. ಆಗತಾನೆ ಮಾವೊಗಳ ಆಡಳಿತ ಬಂದಿತ್ತು. ಎಲ್ಲೆಲ್ಲೂ ಮಿಶ್ರ ಪ್ರತಿಕ್ರಿಯೆ ಇತ್ತು. ಆದರೆ ಜನರು ಈ ಆಡಳಿತಕ್ಕೆ ಒಲವು ತೋರಿಸುತ್ತಿದ್ದರು. ಅದು ಪರ್ವತಾರೋಹಿಗಳಿಗೆ ಮತ್ತು ಚಾರಣಿಗರಿಗೆ ಒಳ್ಳೆಯ ಹವಾಮಾನದ ದಿನಗಳು. ಆಗ ಈಗ ಮಳೆಬರುತ್ತಿತ್ತು. ಹೀಗೇ ಮಳೆ ಬಂದರೆ ನಮ್ಮ ಕಾರ್ಯಕ್ರಮದ ಗತಿ ಹೇಗಿರುವುದಪ್ಪಾ ಅಂದು ಕೊಳ್ಳುತ್ತಿದ್ದೆವು. ೬೫ ವರ್ಷಗಳ ನಂತರ ಹೋದ ವರ್ಷ ಕಟ್ಮಂಡುವಿನಲ್ಲಿ ಹಿಮ ಬಿತ್ತಂತೆ, ನಮ್ಮ ದಾರಿಯಲ್ಲೂ ಹಿಮ ಬೀಳಲೆಂದು ನಮಗೆಲ್ಲಾ ಒಳಗೊಳಗೇ ಆಸೆ! ನಮಗೆ, ಹಿಂದಿನ ರಾತ್ರಿ, ನಮ್ಮ ಮುಂಬರುವ ದಿನಗಳು ಹೇಗೆ ಇರುತ್ತವೆಂದು, ಹಾಗು ನಮ್ಮ ಆಚಾರ ವಿಚಾರಗಳು ಹೇಗೆ ಇರಬೇಕು, ಇದರೊಟ್ಟಿಗೆ ’ಆಲ್ಟಿಟ್ಯುಡ್ ಸಿಕ್ನೆಸ್’ಗೆ ಏನು ಮಾಡಲಾಗುತ್ತದೆ ಎಂದೂ ಹೇಳಿದರು. ನಮ್ಮಲ್ಲಿ ಯಾರಿಗಾದರೂ ಇಷ್ಟವಿದ್ದಲ್ಲಿ ೫೦೦೦ ರೂ ಗಳಿಗೆ ಜೀವವಿಮೆ ತೆಗೆದುಕೊಳ್ಳಬಹುದೆಂದು, ಅದರಲ್ಲಿ ಅವಶ್ಯವಿದ್ದಲ್ಲಿ ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಅನುಕೂಲವೂ ಒಳಗೊಂಡಿರುವುದೆಂದು ತಿಳಿಸಿದರು. ನಾವೆಲ್ಲಾ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆಗಿನ ಸ್ಥಿತಿಯಲ್ಲಿ ನಾವೆಲ್ಲಾ ಅಚೀವರ್ಸ್. ೫೦೦೦/- ರೂಗಳು ಬಹಳ ಜಾಸ್ತಿಯಾದಂತೆಯೂ, ಅದು ಹೇಗೂ ಉಪಯೋಗಕ್ಕೆ ಬರುವುದಿಲ್ಲವಾದ್ದರಿಂದ ಯಾರೂ ತೆಗೆದುಕೊಳ್ಳುವ ವಿವೇಚನೆಯನ್ನೇ ಮಾಡಲಿಲ್ಲ. ನಂತರದ ದಿನಗಳಲ್ಲಿ ಯೋಚಿಸಿದಾಗ ನಾವೆಂಥಾ ಅವಿವೇಕಿಗಳು ಎಂದೆನಿಸದೆ ಇರಲಿಲ್ಲ.

Saturday, November 1, 2008

ರಿಂಗ್ ರೋಡಿನಲ್ಲಿ ಪೂರ್ವಸಿದ್ಧತೆ

ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್, ಸುಮಾರು ೧೨೦ಕಿಮೀ ಗಳಿಗಿಂತ (ಅಲ್ಲಿ ಹಲವು ದಾರಿಗಳಿವೆ. ನಾವು ಹೋದ ದಾರಿಯಲ್ಲಿ ೧೨೦ಕಿಮೀ ಆಗುವುದು) ಜಾಸ್ತಿಯಿರುವ ಕಾಲ್ನಡಿಗೆಯಲ್ಲಿ ಹೋಗಿ ಬರಬಹುದಾದಂತಹದ ಒಂದು ಸುತ್ತಾಟ. ಆದರೆ ಉದ್ದಕ್ಕೂ ಸಿಗುವ ಹಿಮಾಲಯದ ಪರ್ವತಗಳು, ಬೆಟ್ಟ ಗುಡ್ಡಗಳೊಡನೆಯ ಒಡನಾಟ ಹಾಗೂ ಅನುಭವ, ಇದನ್ನು ನಿರ್ವಿವಾದವಾಗಿ, ಪ್ರಪಂಚದಲ್ಲಿನ ಪ್ರಖ್ಯಾತ ಟ್ರೆಕ್ ಗಳಲ್ಲಿ ಒಂದನ್ನಾಗಿ ಮಾಡಿದೆ. ಯೋಚಿಸಲಸಾಧ್ಯವಾದಷ್ಟು ಸುಂದರವಾದ ಪರ್ವತಗಳ ದ್ರುಶ್ಯಗಳನ್ನು ನೋಡುವ ಜೀವನದಲ್ಲಿನ ಒಂದು ಮಹತ್ತರವಾದ ಸದಾವಕಾಶ ಇದು. ಈ ಟ್ರೆಕ್ ಬಹಳ ಸುಲಭವಾದದ್ದೇನಲ್ಲ. ಕೊನೆಯನ್ನು ತಲುಪಲು ಶ್ರಮ, ಏಕಾಗ್ರತೆ ಮತ್ತು ಛಲ ಬೇಕು. ಕೆಲವು ಜಾಗಗಳಲ್ಲಿ ನಾವು ನಮ್ಮ ಎಲ್ಲೆ ಮೀರಿ ಪ್ರಯತ್ನ ಪಡಬೇಕಾಗುತ್ತದೆ. ಖುಂಬು ಗ್ಲೇಷಿಯರ್ (ನೀರ್ಗಲ್ಲಿನ ನದಿ) ಸುತ್ತಮುತ್ತಲಿನ ದಾರಿಯಲ್ಲಿ ಕೆಲವೆಡೆ ಬಹಳ ಕಡಿದಾದ ದಾರಿಗಳಿದ್ದು, ಕೇವಲ ಶಕ್ತಿಯೊಂದಲ್ಲದೆ, ಮನಸ್ಸು ದೃಢವಾಗಿದ್ದರೆ ಮಾತ್ರ ಮುಂದುವರಿಯಲು ಸಾಧ್ಯ. ಇದಲ್ಲದೆ, ೧೦,೦೦೦ ಅಡಿಗಳನ್ನು ದಾಟಿದನಂತರ ಒಬ್ಬೊಬ್ಬರಿಗೆ ಒಂದೊಂದು ಅನುಭವ ಆಗಲು ಶುರುವಾಗುತ್ತದೆ. ಆದು ’ಹೈ ಆಲ್ಟಿಟ್ಯುಡ್ ಸಿಕ್ನೆಸ್’ ನ ಮಹಿಮೆ. ಇದು ಯಾಕೆ ಆಗುತ್ತದೆ? ಹೇಗೆ ಆಗುತ್ತದೆ? ಇನ್ನೂ ಅರಿಯದ ವಿಷಯ. ಅದಕ್ಕಾಗಿ ಅಲ್ಲಲ್ಲಿ ಅನ್ವೇಷಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೆಲವರಿಗೆ ಮೇಲಿಂದ ಮೇಲೆ ವಾಂತಿಯಾಗುತ್ತದೆ. ತಲೆ ತಿರುಗಲು ಶುರುವಾಗುತ್ತದೆ. ಕಾಲಿಡಲು ನೆಲ ನೋಡಿದರೆ, ನೆಲ ಅಲುಗಿದಂತೆ ತೋರುತ್ತದೆ. ಪರ್ವತಗಳು ಸ್ಥಳಾಂತರಗೊಂಡಂತೆ ಕಾಣುತ್ತವೆ. ಎರಡು ಹೆಜ್ಜೆಯಿಟ್ಟರೆ ಸುಸ್ತಾಗುತ್ತದೆ. ಶ್ವಾಸಕೋಶದಲ್ಲಿ ನೀರು ತುಂಬಿ ಏದುಸಿರು ಹಾಗು ಕೆಮ್ಮು ಬರಬಹುದು. ಜ್ವರ ಬರಬಹುದು. ಸಾಯಲೂಬಹುದು. ಈ ತರಹ ಶುರುವಾದೊಡನೆ ಅವರನ್ನು ಸ್ವಲ್ಪ ಕೆಳಗಿನ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಹಾಗೂ ಗುಣವಾಗದಿದ್ದರೆ, ಅವರನ್ನು ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಸೌಲಭ್ಯವೂ ಇದೆ. ಈ ’ಹೈ ಆಲ್ಟಿಟ್ಯುಡ್ ಸಿಕ್ನೆಸ್’ ಯಾರಿಬೇಕಾದರೂ ಬರಬಹುದು. ನೀವು ಎಷ್ಟೇ ಪರ್ವತಗಳನ್ನು ಹತ್ತಿರಬಹುದು, ಇದೇ ದಾರಿಯಲ್ಲಿ ಬಹಳಷ್ಟು ಸಾರಿ ಯಾವುದೇ ತೊಂದರೆ ಇಲ್ಲದೆ ಓಡಾಡಿರಬಹುದು. ಯಾರಿಗೆ ಯಾವ ಸಮಯದಲ್ಲಿ ಇದು ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಲ ಅಲ್ಲೇ ಹುಟ್ಟಿ ಬೆಳೆದು ಬದುಕುತ್ತಿರುವ ಶರ್ಪಾಗಳಿಗೇ ಇದು ಆಗಬಹುದು. ಇವೆಲ್ಲದರಿಂದಾಗಿ, ಯಾರು ಸಾಹಸಪ್ರಿಯರೋ ಅವರಿಗೆ ಈ ದಾರಿಯೊಂದು ಸ್ವರ್ಗ.

ಕೆಏಮ್ಎ ನಮ್ಮೆಲ್ಲರನ್ನೂ ಒಂದೆರಡು ಸಲ ಗುಂಪುಗೂಡಿಸಿ, ಎಲ್ಲರಿಗೂ ಪರಿಚಯಿಸಿ ಹಾಗೂ ಎಲ್ಲರಿಗೂ ವ್ಯಾಯಾಮದ ಮಹತ್ವವನ್ನು ವಿವರಿಸಿದರು. ಗುಂಪಿನಲ್ಲಿ, ಹದಿನಾರು ವರ್ಷದಿಂದ ಹಿಡಿದು ಅರವತ್ತೆರಡು ವರ್ಷದವರೆಗಿನವರೂ ಇದ್ದರು. ಮುಕ್ಕಾಲು ಜನರು ಸಾಫ್ಟ್ವೇರ್ ಜನರೇ, ಮಿಕ್ಕವರಲ್ಲಿ ಕಾಲೇಜ್ ಹುಡುಗರು, ವೈದ್ಯರೂ, ದಂತವೈದ್ಯರೂ, ನೃತ್ಯ ಉಪಾಧ್ಯಾಯರೂ, ಟ್ರಾವಲ್ ಎಜೆಂಟರೂ ಇದ್ದರು. ಎಲ್ಲಿ ಸಾಫ್ಟ್ ವೇರ್ ಜನರಿರುತ್ತಾರೋ ಅಲ್ಲಿ ಪೂರ್ತೀ ಗುಂಪುಗೂಡಿಸಲು ಕೊನೆಯ ದಿನದವರೆಗೂ ಸಾಧ್ಯವಾಗುವುದಿಲ್ಲ. ನನಗೂ ಎಲ್ಲರ ಪರಿಚಯ ಕೇವಲ ಪಟ್ಟಿಯನ್ನು ನೋಡಿ ಆಯಿತೇ ವಿನಹ, ಎಲ್ಲರನ್ನೂ ನೋಡಿದ್ದು ಹೊರಡುವ ದಿನ ವಿಮಾನ ನಿಲ್ದಾಣದಲ್ಲೇ.

ಇನ್ನು ಕೇವಲ ಹದಿನೈದೇ ದಿನಗಳಿತ್ತು. ನಾನೇನೋ ಬಹಳ ಸೀರಿಯಸ್ ಆಗೇ ಜಿಮ್ ಗೆ ಹೋಗುವುದು, ಬಸ್ಸಿಗೆ ನೆಡೆದೇ ಹೋಗುವುದೂ, ದಿನಾಗಲೂ ಲಾಪ್ ಟಾಪ್ ಭಾರ ಹೊತ್ತು ಮನೆಗೆ ಬರುವುದು ಮಾಡುತ್ತಾ ಇದ್ದೆ. ಪ್ರತೀ ಶನಿವಾರವೂ ನಾವು ನಮ್ಮ ಹೊಸ ಲಫೂಮ ಶೂ ಗಳನ್ನು ಪಳಗಿಸಲು ಭಾರವಾದ ಟ್ರೆಕ್ಕಿಂಗ್ ಚೀಲಗಳನ್ನು ಹೊತ್ತು ರಿಂಗ್ ರೋಡಿನ ಫುಟ್ ಪಾತಿನ ಮೇಲೆ ೧೦ರಿಂದ ೧೫ಕಿಮೀ ಬಿರ ಬಿರನೆ ಓಡಾಡುತ್ತಿದ್ದೆವು. (ಜನ ನಮ್ಮನ್ನು ಹುಚ್ಚು ಹಿಡಿದ ದೇಸಿಗಳೆಂದು ಭಾವಿಸಿದ್ದರೇನೋ!) ಇದರಿಂದ ವ್ಯಾಯಾಮ, ಮನಃಶಕ್ತಿ ಹಾಗು ಹತ್ತುವೆನೆಂಬ ಭರವಸೆ ಬಂತೆಂದು ಹೇಳಬಹುದು. ಎಲ್ಲರಲ್ಲಿ ತೀರ ಕಡಿಮೆ ಕಸರತ್ತು ಮಾಡಿದ್ದು ಎಂದರೆ ಜ್ಞಾನಿಯೇ. ಕೊನೆಪಕ್ಷ ಅವನು ಹಾಗೆ ಹೇಳಿಕೊಳ್ಳುತ್ತಿದ್ದ. ಅವನು ಒಂದು ವಾರ ಯೋಗಾ ತರಗತಿಗಳಿಗೆ ಹೋಗುವುದು, ರಿಂಗ್ ರೋಡಿನ ಹುಚ್ಚಾಟ ಬೆಟ್ಟರೆ ಬೇರೇನೂ ಮಾಡಲಿಲ್ಲ. ಆಗ ಮಾಡುತ್ತೇನೆ, ಈಗ ಮಾಡುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಅಂತ ಮಾತ್ರ ಹೇಳುತ್ತಲೇ ಇದ್ದ. ಎವೆರೆಸ್ಟ್ ಹತ್ತಿರ ಹೋದಾಗಲೇ ಬುದ್ಧಿ ಬರುತ್ತದೆ ಅಂದುಕೊಂಡು ಸುಮ್ಮನಾದೆ. ನಾವು ಹದಿನೆಂಟು ದಿನಗಳಿಗೆ ಬೇಕಾದ ಸಾಮಾನುಗಳನ್ನೂ, ಬಟ್ಟೆಗಳನ್ನೂ ಪಟ್ಟಿ ಮಾಡಿದ್ದೇ ಮಾಡಿದ್ದು, ತಜ್ಞರ ಅಭಿಪ್ರಾಯಗಳನ್ನು ಕೇಳಿದ್ದೇ ಕೇಳಿದ್ದು. ಆದರೆ ಮುಕ್ಕಾಲು ಬಟ್ಟೆಗಳನ್ನು ಕಟ್ಮಂಡುವಿನಲ್ಲಿ ಕೊಂಡಿದ್ದಿದ್ದರೆ ಖರ್ಚು ಕಡಿಮೆ ಆಗುತಿದ್ದುದ್ದಲ್ಲದೇ, ಯೋಗ್ಯವಾಗಿಯೂ ಇರುತ್ತಿದ್ದವೆಂದು ನಂತರ ಹೊಳೆಯಿತು.